ತೆನೆಯ ಕಂಪುಗಾಳಿ ಬೀಸಿ ಬರುತಲಿರುವುದು;
ಗದ್ದೆಗಳಲಿ ಪೈರು ತಲೆಯ ತೂಗುತಿರುವುದು;
ಗಿರಿಜೆ, ಬಾರೆ, ವನಗಳಲ್ಲಿ ತಿರುಗಿ ನಲಿಯುವ,
ಒಲಿದ ಎದೆಯ ಮುದ್ದಿಸುತ್ತ ಮತ್ತೆ ಒಲಿಯುವ!

ಸಗ್ಗದಮಲ ಸೊಬಗು ತಿರೆಯ ಚುಂಬಿಸಿರುವುದು;
ಮೊಗ್ಗು ಹೂವು ಮರಗಳಿಂದ ಉದುರುತಿರುವುವು;
ಆಯ್ದು ಆಯ್ದು ನೆಯ್ದು ನೆಯ್ದು ಮನೆಯ ಮರೆಯುವ
ಹಾಡಿ ಹಾಡಿ ಮಾತನಾಡಿ ಮನವ ಮರೆಯುವ.

ಕೊಕ್ಕುಗಳಲಿ ತೆನೆಯ ತೊಟ್ಟು ಹಾರಿಹೋಗುವ
ಹಸುರುಗಿಳಿಯ ಹಿಂಡುಗಳನು ಅಟ್ಟಿ ನಲಿಯುವ,
ಎಲ್ಲಿ ನೋಡಲ್ಲಿ ಬುವಿಯು ಸರಸದಿಂದೆ,
ಗಿರಿಜೆ, ಬಾರೆ, ಸರಸದಿಂದ ತಿರುಗಿ ನಲಿಯುವ!

ಗಳಗಳೆಂದು ಹರಿವ ತೊರೆಯ ನೀರೊಳಾಡುವ;
ಸೃಷ್ಟಿಯಲ್ಲಿ ಶಿವನ ಸವಿದು ಪೂಜೆಮಾಡುವ!
ಗಿರಿಜೆ, ಬಾರೆ, ವನಗಳಲ್ಲಿ ತಿರುಗಿ ನಲಿಯುವ,
ಒಲಿದ ಎದೆಯ ಮುದ್ದಿಸುತ್ತ ಮತ್ತೆ ಒಲಿಯುವ!