ಸುಗ್ಗಿಯ ಬಣ್ಣದ ಮೊಗ್ಗಿನ ತೆರೆದಲಿ,
ತರಳೇ, ನೀನಿರುವೆ;
ಚುಂಬಿಸಲೆಳಸುವ ದುಂಬಿಯ ತೆರದಲಿ,
ಬಾಲೇ, ನಾನಿರುವೆ.
ಹೂವಾದರೆ ನೀ ಬಾಡುವೆ, ಬಾಲೆ.
ಮುಗುಳಾಗಿರೆ ನೀನೆನಗದೆ ಲೀಲೆ!

ಮಕರಂದವನೀಂಟುವ ಚಲವಿಲ್ಲ:
ಸೊಬಗನೆ ನೋಡುವೆನು.
ಪಡೆಯುವೆನೆಂಬಾ ಸ್ವಾರ್ಥತೆಯಿಲ್ಲ;
ಸರಸಕೆ ಕಾಡುವೆನು.
ಕನಸಿನ ತೆರದಲಿ ನೀನಿರು ನನಗೆ:
ದೂರದ ದೊರಕದ ಗುರಿ ಸವಿಯೆನಗೆ!

ಸಿದ್ಧಿಯು ಸುಖತರವಾದರು, ನಲ್ಲೆ,
ಕಡಲಿನ ರನ್ನವದು!
ಸಾಧನೆ ಸುಖತಮವೆಂಬುದ ಬಲ್ಲೆ;
ಕೈಲಿಹ ಚಿನ್ನವಿದು!
ಬಾಳಿನ ಹೊಸ ರಸವಣಕಿಪ ನೆಚ್ಚು;
ಬಾಲೆಯೆ, ಬೆಳೆವುದು ಬಳಲಿದ ನಚ್ಚು!