ಈ ಮರದಡಿಯಲ್ಲಿ
ಗಾಳಿಯ ತಂಪಿನಲಿ
ನಲಿಯುವ ಹಸುರಿನಲಿ
ಜೀವವ ಮರೆಯುವ ಕೊಳಲೂದಿ!
ಬಾ ರಮಣಿ
ಬಾ ರಮಣಿ
ಬಾ, ಬಾ; ಬಾ, ಬಾ; ಬಾ ರಮಣಿ!

ತೊರೆಯುತೆ ಬೀಡುಗಳ
ಹಾಡುತ ಹಾಡುಗಳ
ಆಡುತ ಆಟಗಳ
ಕರ್ಮವ ಕರಗಿಸಿ ಲೀಲೆಯಲಿ,
ನಲಿ ರಮಣಿ
ಒಲಿ ರಮಣಿ
ನಲಿ ಬಾ, ಒಲಿ ಬಾ, ಬಾ ರಮಣಿ!

ಹಾಡಲಿ ಹಕ್ಕಿಗಳು
ಮೆರೆಯಲಿ ಕಾಡುಗಳು
ನಲಿಯಲಿ ಹೂವುಗಳು-
ದುಂದನು ಮಾಡುವ ಜೀವವನು!
ಬಾ ರಮಣಿ
ಬಾ ರಮಣಿ
ಬಾ, ಬಾ; ಬಾ, ಬಾ; ಬಾ ರಮಣಿ!

ಹುಚ್ಚರು ನಾವುಗಳು,
ಕೆಚ್ಚೆದೆಯಾಳುಗಳು;
ಪೆಚ್ಚರು ನೀವುಗಳು
ನೆಚ್ಚಿನ ಮೆಚ್ಚಿಕೆಯಾಳುಗಳು!
ನಲಿ ರಮಣಿ
ಒಲಿ ರಮಣಿ

ನಲಿ ಬಾ, ಒಲಿ ಬಾ, ಬಾ ರಮಣಿ!
ಬಹು ಸೋಮಾರಿಗಳು,
ಸುಖಿಗಳು ನಾವುಗಳು!
ಇಹಪರವಾಳುವೆವು!
ಭಾರವ ಬಿಸುಡುತ ಬಾಳುವೆವು!
ಬಾ ರಮಣಿ
ಬಾ ರಮಣಿ
ಬಾ, ಬಾ; ಬಾ, ಬಾ; ಬಾ ರಮಣಿ!