ನಿಲ್ಲು ನಿಲ್ಲೆಲೆ ಹೆಣ್ಣೆ,
ನಿಲ್ಲು ಚೆಲ್ವಿನ ಕಣ್ಣೆ,
ನಿನ್ನ ಸೊಬಗನು ನೋಡಿ
ಕೈಬಿಡುವೆನು!
ಬಗೆ ತಣಿಯೆ ಹೀರಾಡಿ
ಕೈಬಿಡುವೆನು!

ರವಿಯುದಯದಂತಿರುವೆ
ನೀನೆನಗೆ, ಎಲೆ ಚೆಲುವೆ!
ಅದಕಿಂತ ಕೀಳಲ್ಲ
ನೀನು ನನಗೆ!
ಅದಕಿಂತ ಮೇಲಲ್ಲ
ನೀನು ನನಗೆ!

ಸೌಂದರ್ಯ ಯೋಗಿಯೌ,
ಎಲೆ ಸುಂದರಿಯೆ, ನಾನು:
ನೀನು ಬರಿ ರವಿಯುದಯ,
ಸೊಬಗು ನನಗೆ!
ಸೊಬಗಿರುವ ತಾವೆಲ್ಲ
ಗುಡಿಯ ನನಗೆ!