ಹುಲ್ಲಿನ ಹೊರೆಯನು ತಲೆಯೊಳು ಹೊತ್ತು
ಹುಡುಗಿಯು ಬಂದಳು ಹಾದಿಯಲಿ.
ಮಲೆನಾಡಿನ ಗಿರಿಗಳ ತುದಿ ಹೊತ್ತು
ಮುಳುಗುತಲಿದ್ದಿತು ಬೈಗಿನಲಿ.
ಹುಡುಗಿಯ ಕಂಗಳಲೆಸೆದುದು ಸಂಜೆ
ಮೇಣವಳೆದೆಯೊಳು ಹಕ್ಕಿಗಳೆಲ್ಲಾ
ಬೈಗಿನ ಹಾಡನು ಹಾಡಿದುವು,
ಕಬ್ಬದ ಹಬ್ಬವ ಮಾಡಿದುವು.

ತಂಗಿಯು ಬಡತನದುಡೆಯನು ಉಟ್ಟು
ರತಿಯಂತೆಸೆದಳು ಕಂಗಳಿಗೆ;
ತಾಯಿಯು ಬಡತನದೊಡವೆಯ ತೊಟ್ಟು
ಮಂಗಳವಾದಳು ಎನ್ನೆದೆಗೆ;
ಯಾವುದೊ ಹಳ್ಳಯ ಲಾವಣಿ ಹಾಡುತ
ಬಾಲೆಯು ಬಂದಳು ನನ್ನೆದುರಾಡುತ :
ಏಕೆಂದರೆ ನಾನವಳಲ್ಲಿ
ಕರ್ಮವ ಕಂಡೆನು ಲೀಲೆಯಲಿ.

ನೋಡಿದಳೆನ್ನನು ತಲೆಯನು ಎತ್ತಿ
ನುಡಿದಳು ನಾಚಿಕೆಯಿಲ್ಲದಲೆ.
ದನಿಯಲಿ ಮುಗ್ಧತೆ ಮೈದೋರಿತ್ತು,
ಮಿಂಚಿತು ಮೊಗವಾನಂದದಲಿ.
ಅರಳಿದ ಹೂವುಗಳಿದ್ದವು ಸುತ್ತ;
ಆದರು ಹಳ್ಳಿಯ ಹುಡುಗಿಯ ಚಿತ್ತ
ಹೂವುಗಳೆಲ್ಲವನೇಳಿಸಿತು
ಮೇಣವರಿಂಪನು ಚಾಳಿಸಿತು.

ಹಳ್ಳಿಯ ಹುಡುಗಿಯು ಹೊರಟಳು ಮುಂದೆ
ಹಸುರಿಂದೆಸೆದಾ ಹಾದಿಯಲಿ;
ದೇವಿಯ ಭಕ್ತನು, ಕುರಿಮರಿ, ಹಿಂದೆ
ಮಲ್ಲನೆ ನಡೆದುದು ಮೌನದಲಿ.
ನೋಡಿದೆವರನು ಹಿಂದಕೆ ತಿರುಗಿ
ತನು ಮನ ಎದೆ ಬಾಳೆಲ್ಲಾ ಕರಗಿ.
ವರವನು ಸಲ್ಲಿಸಿದೀಶನನು
ಎಂದೂ ನಾನಂತೀಕ್ಷಿಸೆನು!