ಶ್ರೀಯುತ ಹೆಚ್. ಮುಜುಂದಾರರ “In Expectation” ಎಂಬ ಚಿತ್ರವನ್ನು ನೋಡಿ ಬರೆದುದು

ಪಡುವಣ ದೆಸೆಯಲಿ ಇನ ತಾನಿಳಿದನು;
ಮಬ್ಬೆಲ್ಲೆಲ್ಲಿಯು ಹಬ್ಬಿದುದು!
ಬಯಕೆಯ ನೋಟವ ದೂರಕೆ ಕಳುಹಿ
ಬಾಗಿಲೆಯು ಗುಡಿಸಿಲ ಬಾಗಿಲೊಳು
ಇನಿಯನ ಬರವನೆ ಹಾರೈಸುತ್ತ
ನಿಂತಳು ತನ್ನಿರವನೆ ಮರೆಯುತ್ತ!

ಗೂಡಿಗೆ ಹೋದುವು ಹಕ್ಕಿಗಳೆಲ್ಲ,
ಗೋಗಳು ಬಂದುವು ಕೊಟ್ಟಿಗೆಗೆ;
ಮೆರೆದವು ನಭದೊಳು ತಾರೆಗಳೆಲ್ಲ,
ತುಂಬಿತು ಇಳೆಯನು ನೀರವತೆ:
ಬಾಲೆಯ ಬಯಕೆಯ ನೋಟಕೆ ಮಾತ್ರ
ಬತ್ತಲ್ ಗತ್ತಲೆಯಾದುದು ಪಾತ್ರ!