ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ.

ಕಲುಷಿತವಾದೀ ನದೀ ಜಲಗಳಿಗೆ
ಮುಂಗಾರಿನ ಮಳೆಯಾಗೋಣ
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ.

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ.

ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬೆಳೆಯೋಣ.