167

 

ಪಿಲ್ಲೇನ ಇಟ್ಟಾಳ ಗಲ್ಲೀಸಿ ನಡದಾಳೊ
ಕಲ್ಲದರಿ ದಾವಣಿ ದನ ಬೆದರಿ  ಮನಿಯಾನ
ನಲ್ಲಯ್ಯ ಹೆದರಿ ಉಣಲಿಲ್ಲೊ

 

168

 

ಬಟ್ಟಲದಂಥಾ ಕಣ್ಣ ಇಟ್ಟಾಳ ಹುಡಗನ ಮ್ಯಾಲ
ಗಟ್ಟಿ ಮಾಡ್ಯಾಳ ಹೊಲ-ಮನಿಯ  ಆ ಹುಡಗಿ
ಕೊಟ್ಟ ಕಳುವ್ಯಾಳೊ ಕರಿಗಡಬ

 

169

 

ಬಡವನ ಹೆಂಡತಿ ನಡಿಗೀಲಿ ಬಲುಚೆಲುವಿ
ನಡವೂರಾಗೊಬ್ಬ ಮನಸಿಟ್ಟ  ಕೇಳ್ಯಾನ
ಕಡಾ ಕೊಡ ನಿನ್ನ ಕುಡಿ ಹುಬ್ಬ

 

170

 

ಬಣಜಿಗರ ಹುಡಗೀಯ ಬಡಿವಾರೇನ ಹೇಳಲೆ
ಸಣ್ಣೆಳಿ ಚೈನ ಕೊಳ್ಳಾಗ  ಹಾಕ್ಕೊಂಡ
ಸಣ್ಣ ಹುಡುಗರನ ಎಳದಾಳೊ

 

171

 

ಬಣ್ಣದ ಗುಬ್ಯಾರು ಎಣ್ಣಿ ಹೋಳಿಗಿಯಂಗ
ನುಣ್ಣಗಿರತಾರ ನೋಡುದಕ  ಕೂಡಿದರ
ಸುಣ್ಣ ಸುಟ್ಟಂಗ ಸುಡತಾರ

 

172

 

ಬದಕೀನ ಆಸೇಕ ಮುದಗ ಕೊಡೋದಕಿನ್ನ
ಚಿದಕನ ಗವಿಯಾಗ ಬಿಡಬೇಕ  ಹಡದವ್ವ
ಮಿಡಕದ ಜೀವ ಕೊಡತೇನ

 

173

 

ಬಬಲೇಶ್ವರದ ಸಂತಿ ಬ್ಯಾಡಪ್ಪ ನನ ಮಗನ
ಬಟ್ಟ ಕುಂಕುಮದ ಬಸವ್ಯಾರ  ಕಂಡರ
ಹುಟ್ಟೀದ ಮನಿಯ ಮರಸ್ಯಾರ

 

174

 

ಬಲ್ಲಿದ ಶ್ಯಾಣ್ಯಾನಂತ ಬೆಲ್ಲಾ ಮಾಡಲು ಬಂದ

ಇಲ್ಲದ ಹರಲಿ ಕಬ್ಬಿಗೆ  ಕೊಟ್ಟರ
ಒಲ್ಲಿ ಕಳಿ ಕಳಿಸಿ ಒದಿತಾರೊ

 

175

 

ಬಸವಣ್ಣ ನಿನಪಾದ ಹಸನಾಗಿ ತೊಳದೀನ
ಹೆಸರ ಗಲ್ಲೀಪ ಹೊಲಸೀನ  ಹಾಡಾಕ
ಹಸನಾದ ದನಿಯ ಕೊಡ ನನಗ

 

176

 

ಬಸವಣ್ಣನ ಹೆಂಡತಿ ಹಸೆಮಗಳು ನೀಲವ್ವ
ಬಸರಾದರ್ಹೆಂಗ ನಡದಾಳೊ  ಆ ತಾಯಿ
ಸಸಿಯೊಳಗ ನವಲ ಕುಣದಂಗ

 

177

 

ಬಸವನ ಪತ್ತೂರಿ ಬಿಸಿಲಿಗಿ ಬಾಡ್ಯಾವ
ದುಸಮಾನದಾಂವ ಮಳಿರಾಜ  ತ-ಡದರ
ಬಸವಾ ನಿನ್ಹೆಂಗ ಸಲುವಲೇ

 

178

 

ಬಾಗೋಡಿ ಬಸವಣ್ಣ ಭಾಳ ದೊಡ್ಡವನಂತ
ಮಾಡೀಸಿಟ್ಟೆನೋ ಮಗಡವ  ಬಸವಣ್ಣಗ
ಪೋಣಿಸಿಟ್ಟೆನೊ ಸರಜಂಗ

 

179

 

ಬಾಗೋಡಿ ಎಂಬೂದು ಬಾಲ್ಯಾರ ಪಟ್ಟಣ
ಮ್ಯಾಲ ಚೆನ್ನವ್ವನ ಅರಮನಿ  ಬಾಗಲದಾಗ
ಬಾಗಿ ನಿಂತಾನ ಬಸವಣ್ಣ

 

180

 

ಬಾದಾಮಿ ಬಣ್ಣದ ಕುಬಸ ಬಲುಚೆಂದ ತೋಲಿಗೆ
ಬಾಗಿದರ ಬೆನ್ನ ಬಿಗದಾವೊ  ನಮ್ಮೂರ
ಶ್ಯಾಣ್ಯಾ ಸಿಂಪಿಗ ಹೊಲದಾನೊ

 

181

 

ಬಾಳೀಪಟ್ಟಿ ಸೀರಿ ಬಾಯಾಗ ಬಿಳಿ ಎಲಿಯ
ಬಾಜಾರ ಹಿಡದ ಬರತಾಳೊ  ಅವಳನ ಕಂಡ
ಬಾಯಾನ ಚುಟ್ಟ ಬಿಟ್ಟಾರೊ

 

182

 

ಬಿದ್ದ ಕಬ್ಬಿನ ಬೆಲ್ಲ ಬಿದ್ದೋಡಿ ಗೆಣಿತನ
ಗದ್ದ್ಯಾಗಿನ ರಾಡಿ ಗಟ್ಟೆಲ್ಲೊ  ಹೆಣ್ಣನಗೂಡ
ನಿದ್ದಿಗಣ್ಣಾಗ ಇರಬ್ಯಾಡೊ

 

183

 

ಬಿದ್ದಾನೊ ಕಾಮಣ್ಣ ಬಿಳಿ ಅಂಗ ಮೇಲಾಗಿ
ಒದ್ದ್ಯಾಡತಾನೊ ಶಿವನೆದರ  ಕಾಮಣ್ಣ
ಬಿದ್ದಲ್ಲೇ ಬೂದಿಯಾದಾನೊ

 

184

 

ಬಿದ್ದೋಡಿ ಅವರವ್ವ ಬುದ್ದೀಯ ಹೇಳ್ಯಾಳೊ
ಗುದ್ದಿ ಬ್ಯಾಡನ್ನ ಗುಳದಾಳಿ  ಇಲ್ಲದೆ
ಕದ್ದ ಗಂಡಸರ ಕೂಡೂನ

 

185

 

ಬೇಲಿ ಮ್ಯಾಲಿನ ಹೂವ ಬೆಳ್ಳಗಿದ್ದರ ಚಂದ
ಮಲ್ಲಿಗಿ ಹೂವಿನಂಥ ಮದಿವಿಂಡನ  ಬಿಟಗೊಟ್ಟ
ಹುಲ್ಲಕೊಯ್ಯವನ ಹುಡಕ್ಯಾಳೊ

 

186

 

ಬಿಳಿಯ ಗಲ್ಲದ ಮ್ಯಾಲ ಇಳದೆಳಿಕೂದಲ
ತೆರದ ದಾಳಿಂಬರ ತುಟಿಯವಳ  ಕಂಡರ
ಹರದ್ಯಾಡು ಮನಾ ಹಾಂವಾತ

 

187

 

ಬಳ್ಳಾನ ಹುಡಿಗ್ಯಾರು ಬಳ್ಳೊಳ್ಳಿ ತುಡಿಗ್ಯಾರು
ಬಳ್ಳೊಳ್ಳಿ ಗಂಟ ಬಗಲಾಗ  ಹಿಡಕೊಂಡ
ಗುಳ್ಳವ್ವನಾಣಿ ಕೊಡತಾರೊ

 

188

 

ಬೆಳ್ಳಾನ ಮಾರೆಕ್ಕಿ ನೀಯೇನ ಒಳ್ಳೆಕ್ಕಿ
ಕಳ್ಳಿ ಸಾಲಾಗ ಕರಿಯಕ್ಕಿ  ಬಂದರ
ಮುಳ್ಳಾಗ ನುಗಿಸಿ ಬರುವಾಕಿ

 

189

 

ಮಕ್ಕಳ ಬೇಡವರು ಪಟ್ಟಣಕ ಹೋಗರೆವ್ವ
ಪಟ್ಟಣದ ತೆಳಗ ಅರಕೇರಿ  ಅಮೋಗಸಿದ್ದ
ತೊಟ್ಟೀಲ ಹೊರಿಸಿ ಕಳುವ್ಯಾನ

 

190

 

ಮಕ್ಕಳು ನಕ್ಕರ ಮಲ್ಲೀಗರಳೀದಂಗ
ಬಕ್ಕಡಬಾಯಿ ಮುತ್ತಜ್ಜ  ನಕ್ಕರ
ರೊಕ್ಕಿಲ್ಲದ ಬೊಕ್ಕಸೊಡದಂಗ

 

191

 

ಮಗ್ಗಿ-ಕುಬಸಾ ತೊಟ್ಟ ಮಗಿದುರಬ ಕಟ್ಟಾಳೊ
ಮಗ್ಗಿ ಮಲ್ಲೀಗಿ ಮುಡದಾಳೊ  ಆ ಚೆಲವಿ
ಹಿಗ್ಗಿನ ನಗಿಯ ನಗತಾಳೊ

 

192

 

ಮಟ ಮಟಾ ಮಧ್ಯಾಣ ತಿಟಿ-ತಿಟಿ ಕುಪ್ಪಸ
ಸೇದೂವಹಗ್ಗ ಬಲಗೈಯಾಗ ಹಿಡಕೊಂಡ
ಸೇದೂತ ಶಿವನ ನೆನದಾಳೊ

 

193

 

ಮಠವೆಲ್ಲೊ ಮಠವೆಲ್ಲೊ ಮಠದ ಬಾಗಿಲನೆಲ್ಲೊ
ಕಟದ ರುದ್ರಾಕ್ಷಿ ಕದನೆಲ್ಲೊ  ಶಾಂತ್ವೀರಸ್ವಾಮಿ
ಮಠವೈತೊ ಬಾಳಿಬನದಾಗ

 

194

 

ಮಠದ ಬಾಗಿಲ ಮುಂದ ಕಟದ ಕಲ್ಲಿನ ಭಾಂವಿ
ಮೆಟ್ಟಲೇರಿ ನೀರ ತರುವಂಥ ಹುಡಿಗಿಯ ಕಂಡ
ಮಟ-ಮಟಾ ಮಧ್ಯಾಣ ಕಳದೀನೊ

 

195

 

ಮಡಸ ಹೆಣ್ಣಿನ ಮನಸೇನ ದೊಡ್ಡದ
ಕುದಿಸೀದ ಗೆಣಸ ಪುಡಿಬೆಲ್ಲ  ತಂದಾಳೊ
ಮನಸಿಗಿ ಬಂದಂಗ ತಿನಿಸ್ಯಾಳೊ

 

196

 

ಮಣಕೆಮ್ಮಿಯಂಥಾಕಿ ಹಣಿ-ಹಣಿಕಿ ನೋಡ್ಯಾಳೊ
ಕೆಣಕಿದರ ಸಾಕು ಕರದಾಳೊ  ಆ ಹೆಣ್ಣೀಗಿ
ಹಣದಾಸೆಗೇನು ಮಿತಿಯಿಲ್ಲೊ

 

197

 

ಮದ್ದ್ಯಾಣ ಮಳಿ ಬಂದ ಬಿದ್ದಾವ ನೀಲದಹಣ್ಣ
ಗೆದ್ದೀನನ ಬ್ಯಾಡ ಪತಿವರತಾ  ಸೀತಾದೇವಿ
ಬಿದ್ದಾಳ ರಾವಣನ ರಥದಾಗ

 

198

 

ಮಂಗ ಮುಸಲರ ಹುಡಗಿ ಚ್ಪಾಂಗೇವ ಮಾಡ್ಯಾಳ
ಲಿಂಗವಂತರ ಹುಡಗ ಉಣಲಿಲ್ಲೊ  ಆ ಹುಡಗಿ
ಅಂಗಳಕ ಚೆಲ್ಲಿ ಅಳತಾಳೊ

 

199

 

ಮಂಡಮೂಗಿನ ಹೆಣ್ಣ ಗಂಡ ಕರಿಯಲು ಬಂದ
ಪುಂಡೀಯ ಬೀಜ ಉಡಿಯಕ್ಕಿ  ಹಾಕ್ಕೊಂಡು
ಮಿಂಡನ ಕಡಿ ನೋಡಿ ಅಳತಾಳೊ

 

200

 

ಮಲ್ಲೀಗಿ ಮಗಿದುರಬ ಮಕ ಮಲ್ಲ ಮಲಿಕಟ್ಟು
ಹಲ್ಲ ನಕ್ಕರ ದಾಳಿಂಬ  ಇಂಥಾಕ್ಕಿ
ಎಲ್ಲಿ ಸಿಕ್ಕಾಳೊ ಎಲ್ಲಾರಿಗಿ

 

201

 

ಮಲ್ಲಾಡದ ಹುಡಗಿಯ ಮಲಿ ಕಿನ್ನೂರಿ ಕಾಯಂಗ
ಹೆಡಕೀನ ಮ್ಯಾಲ ಗಡದುರಗಿ  ಇಟಗೊಂಡ
ಖಡಕೀಲಿ ನೀರ ತರತಾಳೊ

 

202

 

ಮಸರ ಮಾರುವ ಹುಡಗಿ ಹೆಸರ ಕೇಳಿದರಾತ
ಬಸರಾದರ್ಹೆಂಗಂತ ಅಳತಾಳೊ  ಅವರವ್ವ
ಹೆಸರ ಬಳಿ ಇಡಿಸಿ ನಗತಾಳೊ

 

203

 

ಮಳ್ಳ ಮೈನರದ ಹುಡಗಿ ಹಳ್ಳದ ನೀರಿಗಿ ಹೋಗಿ
ಬಳ್ಳ ತಿರುವೂತ ನಿಂತಾಳೊ  ಆ ಹುಡಗಿ
ನೀರ ತುಂಬೂದ ಮರತಾಳೊ

 

204

 

ಮಳಿಬಂದ ಮರುದಿನ ಹೊಳಿತುಂಬಿ ಹರದಂಗ
ತಿಳಿಬಂದ ಮ್ಯಾಲ ತವರೂರ  ಬಿಡುವಾಗ
ಹೊಳಿಯಾಗಿ ಹರದಾವ ಕಣ್ಣೀರ

 

205

 

ಮಾಗಿಯ ಮಳಿಗಾಲ ಹೆಂಗಿದ್ಯೊ ಕೋಗೀಲ
ಆಗರ ಭಾಳ ಅಡಕೀಯ  ಬನದಾಗ
ಕೂಗ್ಯಾಡಿ ಹೊತ್ತಗಳದೀನೊ

 

206

 

ಮಾದರ ಮನಿಮುಂದ ಮಾವೀನ ಗಿಡಹುಟ್ಟಿ
ಮಾದರ ಪೋರಿ ಗೆಣೆತನಾ  ಕಟ್ಟಿದರ
ಗೊಂಡೆದ ಕೆರುವ ಮಾಡಿಸ್ಯಾಳೊ

 

207

 

ಮಾನೇಪುರದ ಹುಡಗಿ ಮನಿಹೊರಗ ಬಂದಾಗ
ಜಮಖಂಡಿ ಹುಡಗ ಜಡಹಿಡ  ಎಳಿವಾಗ
ಕಡಪಟ್ಟಿ ಪರಸ [ಖ್ಯಾತ ಕುಸ್ತಿಪಟು] ಬಿಡಿಸ್ಯಾನೊ

 

208

 

ಮಾರೋಳಿ ಹುಲ್ಲಂಗ ಮಾರುದ್ದ ಕೂದಲ
ಜಡಿಯ ಹೆಣದಾಳೊ ಹೆಡಿಹಾಂವೊ  ನೋಡಂವಗ
ಕಡಿಲಾರದ ನಂಜ ಏರೈತೊ

 

209

 

ಮ್ಯಾಳಿಗಿ ಮ್ಯಾಲಿನ ರವದಿ ಗಾಳಿಗ್ಹಾರಿದಂಗ
ಗಾಲ-ಮೇಲಾತ ಕಿತ್ತೂರ  ಚೆನ್ನಮ್ಮ
ಗಾಳೀಗಿ ಬಾಯಿ ಬಿಡತಾಳೊ

 

210

 

ಮಿಂಡನ ಸವಿಹತ್ತಿ ಗಂಡನ ಬೈಬ್ಯಾಡ
ಗುಂಡದನೀರ ನಿಜವಲ್ಲ  ತಿರಮಿಂಡಿ
ಕುಂಡಿ ಒಣಗಿತ್ತ ಬಿಸಲಾಗ

 

211

 

ಮೂರ ಹೋಳಿಗಿ ಮಾಡಿ ನೂರ ಮಂದಿಗಿ ಉಣಸಿ
ಮೂರೂ ಹೋಳೀಗಿ ಉಳದಾವೊ  ಶ್ಯಾಣ್ಯಾ
ಮಾಸ್ತರ ಒಡದ್ಹೆಳೋ

 

212

 

ಯಮನೂರ ಜಾತ್ರಿಗಿ ಕರದರು ಬರವೊಲ್ಲ
ಸರಿ ಇಲ್ಲದವನ ಗೆಣಿತನ  ಮಾಡಿದರ
ಬರಿಗಾಲು ಹಾದಿ ತುಳದಂಗ