115
ಗುಡ್ಡದವಾರ್ಯಾಗ ಕಡ್ಡ ಕೊಯ್ಯವನ್ಯಾರೊ
ಗಡ್ಡ ಇಲ್ಲದ ಎಳಿಹುಡಗ ನ ಜತಿಗೂಡಿ
ಗುದ್ದ್ಯಾಡಿ ಬಳಿಯ ಒಡಕೊಂಡ್ಯೊ
116
ಗುಡ್ಡದವಾರ್ಯಾಗ ಗುಗ್ಗಳ ಹೊಗಿ ಎದ್ದ
ಅಪ್ಪ ಶಿವರಾಮನ ಶಿವಪೂಜಿ ನಡದಾಗ
ಆಕಾಶದ ಗಂಟೆ ಗಣಲೆಂದೊ
117
ಗುಡ್ಡದ ಎಲ್ಲವ್ವನ ಗುಡಿಯೆಲ್ಲಾ ಬಂಗಾರ
ಹಾಸುಗಲ್ಲೆಲ್ಲ ಹವಳವ ಎಲ್ಲವ್ವನ
ಬೀಸಣಿಕಿಗೆಲ್ಲ ಬಿಳಿಮುತ್ತ
118
ಗುಂಡಕಡಬನು ಮಾಡಿ ಗುಂಡ್ಯಾನ ಮ್ಯಾಲ ಹೇರಕೊಂಡು
ಗಂಡ ಹೋಗೂನ ಪರವುತಕ ಪವಳ್ಯಾಗ
ಕೂಡುಂಡು ಬ್ಯಾರೆ ಮನಗೂನ
119
ಗುಳ್ಳವ್ವನ ಗುಡಿಯಿಲ್ಲ ಜೋಕಮಾರಗ ಮನಿಯಿಲ್ಲ
ಇಬ್ಬರಿಗೂ ಕಾಯಿ ಒಡೂದಿಲ್ಲ ಇವರನ್ನ
ಭಾಳ ದಿನಾ ಇರ್ಲಾಕ ಬಿಡೂದಿಲ್ಲ
120
ಗೆಣಿಯಾ ಬರತಾನಂತ ಹರವಿ ನೀರನು ಕಾಸಿ
ಹರದಾರಿ ಗೆಣಿಯ ಬರಲೊಲ್ಲೊ ಆ ಹುಡುಗಿ
ತಿರಿಗಿ ಸುರುಸುರಿವಿ ಅಳತಾಳೊ
121
ಗೊಂಜಾಳ ಬಿಸಿರೊಟ್ಟಿ ಗಿಂಜ ಬದನಿಕಾಯಿ
ಪಿಂಜಾರ ಹುಡಗಿ ಗೆಣೆತಾನ ಮಾಡಿದರ
ಪಿಂಜಾಳಿ ಅಂಗಿ ಹೊಲಿಸ್ಯಾಳೊ
122
ಗೋಕಾಕದ ಕುಪ್ಪಸ ಬೇಕಂತ ತರಿಸ್ಯಾಳೊ
ಮಗ್ಗಿ ತಗಿಸ್ಯಾಳೊ ಮಲಿಮ್ಯಾಲ ಆ ಹುಡುಗಿ
ಗೆಣಿಯನ ಬರಸ್ಯಾಳೊ ಎದಿಮ್ಯಗೊ
123
ಚಹಾದ ಅಂಗಡ್ಯಾನ ಹೆಣ್ಣ ಚೆಲವಿ ಇದ್ದರೇನ
ಚಂಚಲ ಗುಣದ ಛೀಮಾರಿ ಗೆಣಿತನ
ಮುಂಚೆ – ಬ್ಯಾಡನ್ನೊ ಮೈದುನಗ
124
ಚಪ್ಪರ ಮನಿಯವಳ ಜುಪ್ಪರ ತೆಲಿಯವಳ
ದುಡ್ಡ ಕೊಡತೀನ ಎರಕೋರ ಎಲೆ ಹುಡಗಿ
ಚೆಂಜಿಕ ಬರತೀನ ಕರಕೋರ
125
ಚಂದಕ ನಮ್ಮವರು ಚೆಂಡ್ಹೂವ ಬಿತ್ತ್ಯಾರ
ಉಂಡ್ಹೋಗೊ ರಾಯ ಮುಡದ್ಹೋಗೊ ನಿನಗೂಡ
ಕೆಂಡ್ಹೋಗೊ ನಿನ್ನ ಗೆಳೆಯರಿಗೆ
126
ಚಿಕ್ಕ ನನ ಕಾಮಣ್ಣ ಚಿಣಿಯನಾಡುತ ಬಂದ
ಉಕ್ಕಲಿ ತೆಳಗ ಮನಗೂಳಿ ಅಗಸ್ಯಾನ
ಚಿತ್ತರದ ಕೊಡಕ ಚಿಣಿ ಬಡದೊ
127
ಚಿಕ್ಕ್ಯಾಗ ಚಂದ್ರಮ ಹಕ್ಕ್ಯಾಗ ಗಿಣಿರಾಮ
ಸೊಕ್ಕಿ ಬಂದರ ಬಲರಾಮ ಹೆಣ್ಣೀಗಿ
ಮಿಕ್ಕೀದ ಮಾರ ಮಗರಾಮೊ
128
ಚಿಗರಿ ಬಣ್ಣದ ಕುಬಸ ಚೆಲುವಿತಾ ಹೊಲಿಸ್ಯಾಳೊ
ಮಂಗ್ಯಾನ ತಗಿಸ್ಯಾಳೊ ಮಲಿಮ್ಯಾಲ ಆ ಬಾಲಿ
ಗೆಣಿಯನ ಬರಸ್ಯಾಳೊ ಎದಿಯಾಗೊ
129
ಜಂಗಮರ ಹುಡಗನ ಹೆಂಗಾರೆ ಸಲುವಲೆ
ಜಂಗ ಬೇಕವನ ಕಾಲೀಗಿ ದುಡ್ಡೀನ
ನಿಂಗ ಬೇಕವನ ಕೊರಳಿಗಿ
130
ಜಾತರಿಗಿಹ್ವಾದ ರಾಯ ರಾತೂರಿ ಬರಲಿಲ್ಲ
ಖಾತರ್ಯಾದಾವ ಮನದಾಗ ಆ ಊರ
ಪಾತರದ ಹೆಣ್ಣ ಬಿಡಲಲ್ಲೊ
131
ಜಾಲಗಾರನ ಮಗಳು ಜ್ಯಾಲ್ಯಾಗ ಮನಿಕಟ್ಟೆ
ಮೇಲಮದ್ದ್ಯೊಳಗ ತೊಲಿ ಹೊರಗ ಹಾಡೀನ
ಭೇದ ಬಲ್ಲಂವ ಒಡದ್ಹೇಳೊ (ಜೇನು)
132
ಟಿಕ್ಕೇಸರ ಕಟ್ಟ್ಯಾಳ ಠೀಕಾಗಿ ನಿಂತಾಳ
ಸಿಕ್ಕವರನ ಕಂಡ ನಗತಾಳ ಈ ಹೆಣ್ಣ
ಈಕೇನ ಅವನೀಗಿ ಇರತಾಳೊ
133
ತಂಬಾಕ ಸೇದವನ ತಾರೀಫೇನ ಹೇಳಲೆ
ರೇಶಿಮಿ ಅಂಗ್ಯಾಗ ಕಿಡಿಬಿದ್ದ ಮನಿಯಾನ
ಮಡದಿ ಕೇಳಿದರ ಮುನಿದಾಳೊ
134
ತಳವಾರ ಹುಡಗಗ ತಾಕೀತ ಮಾಡೀನ
ತವರಿಗಿ ಹ್ಪಾದರ ಬರಬೇಕು ಅದ ಬಿಟ್ಟು
ಹಿಂಬಾಲ ಹತ್ಯಾನ ಹಗಲಿರುಳ
135
ತಾಂಬರ ಕೊಡದಾಕಿ ತಾರೀಫೇನ ಹೇಳಲಿ
ಖಾರಿಕ ಹಾಕ್ಯಾಳೊ ಕೊಡದಾಗ ಗೆಣಿಯಾಗ
ತಾರೀಖ ತಿಳಿಸ್ಯಾಳೊ ಬರಲಾಕೊ
136
ತುಂಬಿದ ತೋಳಿಗಿ ಸಿಂಬಿಸುತ್ತಿದ ವೆಂಕಿ
ರಂಭಿ ನಿನತಕ್ಕ ಒಗತಾನ ಇರದೀರ
ಬಂಗಾರ ಇದ್ದೇನ ಸುಡುವೂದ
137
ತುಂಬಿದ ಹೊಳಿಯಾಗ ಕೊಂಬ ಕಾಣಸತಾವ
ಬಂಗಾರದ ಇಣಿಯ ಬಸವಣ್ಣ ಕಡಪಟ್ಟಿ
ಇಂಬ ಬಯಲಾಗ ನೆನದಾನೊ
138
ತೆಗ್ಗಿಲ್ಲ ತೆವರಿಲ್ಲ ಮುಗ್ಗ್ಯಾವ ಎರಡಾನಿ
ತೆಗ್ಗಿನ್ಯಾಗೈತಿ ಹಲಗಣಿ ಹಣಮಪ್ಪನ
ಹುಬ್ಬಿನ್ಯಾಗೈತಿ ಸಿರಿಗಂಧ
139
ತೊಗರಿಯ ಸಾಲಾಗ ಬಗರಿ ಆಡವನ್ಯಾರೊ
ಮದರಿ ರುಂಬಾಲದ ಕಾಮಣ್ಣ ಆಡಿದರ
ಬಂದಂಥ ಮಾಡ ಬಯಲಾಗೆ
140
ಥಂಡಿ ಹತ್ತೈತಂತ ರಂಭಾಟ ಮಾಡ್ಯಾಳೊ
ಕುಂಡಿ ಮೇಲಾಗಿ ಮಲಗ್ಯಾಳೊ ಅಕಿಗಂಡ
ರಂಡ್ಯಾರ ಹಂತ್ಯಾಕ ನಗತಾನೊ
141
ಥಾಟಗಿತ್ತಿ ನಿನ್ನ ತಾರೀಫೇನ ಹೇಳಲೆ
ಉಳ್ಳಾಕೇನಿಲ್ಲೊ ಚೆಂಜೀಕ ಮುದುಕಾದ
ಗಂಡ ಸತ್ತರ ಗತಿ ಇಲ್ಲೊ
142
ಥಾಟಗಿತ್ತಿ ಹೆಣ್ಣ ತ್ವಾಟಕ ಬರಬ್ಯಾಡ
ತ್ವಾಟದಾನ ಹುಡುಗ ಬಲಬೆರಿಕೆ ಎಲೆ ಹುಡಗಿ
ಈಟೀಟ ಮಲಿಯ ಹಿಡದಾನೊ
143
ದನ್ಯಾಳ ದಾಶಾಳ ಎಣ್ಣಿಕಣಮುಚನಾಳ
ಬಣ್ಣ ಆಡೂದು ಬಬಲೇಶ್ವರ ಅಗಸ್ಯಾನ
ಹೆಣ್ಣ ಬಂದಾವ ಅಪರೂಪ
144
ದಾರೂ ಕುಡಿಯಲಿ ಬ್ಯಾಡೊ ದಾರ್ಯಾಗ ನಿಲಬ್ಯಾಡೊ
ನಾರ್ಯಾರ ನೋಡಿ ನಗಬ್ಯಾಡೊ ಎಲೆ ಹುಡಗ
ಮಾರಿಕೊಳ್ಳಬ್ಯಾಡೊ ನಿನ ಮಾನ
145
ದಾರೂದ ಧಣಗೀಗ ದೈತ್ಯರು ಉಳಿಲಿಲ್ಲೊ
ದೇಶಗತಿ ಎಲ್ಲಾ ನಾಶಾದು ಎಲೆ ಹುಡಗ
ಹೇಸಿ ನೀನ್ಯಾವ ಲೆಕ್ಕಕ್ಕೊ
146
ದಿಂಡಧಿಗಮಾಲಿ ಹೆಣ್ಣ ಕಂಡನಾ ಹೆದರೀನ
ಥಂಡಿ-ಉರಿ ಬಂದ ಮನಗೀನ ಆ ಹೆಣ್ಣ
ಭಂಡ ಮಾಡ್ಯಾಳೊ ಬೆಳಗಾನ
147
ದುಂಡ ಮಾರಿಯ ಹೆಣ್ಣ ಚೆಂಡು ಹೂವಿನ ಬಣ್ಣ
ಕಂಡಲ್ಲಿ ನಿಂತು ನಗಬ್ಯಾಡ ಹುಡಗೂರು
ಕೆಂಡ ಕಾರ್ಯಾರ ಹೊಟ್ಟುರದ
148
ದುಂಡ ಮಾರಿಯ ಹೆಣ್ಣ ಚೆಂಡು ಹೂವಿನ ಬಣ್ಣ
ಕಂಡ ಕಂಡಲ್ಲಿ ನಗಬ್ಯಾಡ ಎಲೆ ಹುಡಗಿ
ಕಂಡಕ ಕಾಗಿ ಮುಕರ್ಯಾವ
149
ಧನ್ಯಾಳ ದಾಶಾಳ ಗೋದೀಯ ಬೀಸ್ಯಾಳ
ಹಂತಿ ಹೊಡೆಂವಗ ಉಣಸ್ಯಾಳೊ ಹುಡುಗಿ
ಕಂಕಿ ತುಗಿಯಂವಗ ಮನಗ್ಯಾಳ
150
ನತ್ತಿನ್ಯಾನೊಂದಂದ ಮುತ್ತ ಉದರಿದಂಗ
ಹತ್ತ ಮಕ್ಕಳ ಹಡದಾಳೊ ನಮ್ಮವ್ವ
ಉತ್ತತ್ತಿ ಹಾಂಗ ಬದಕ್ಯಾಳೊ
151
ನಮ್ಮೂರ ಗೌಡರ ರತ್ನದ ಸುಣ್ಣದಕಾಯಿ
ಪೀತ-ಪಿಂಜರದ ಎಲಿಚೆಂಚಿ ಬಿಚ್ಚಿದರ
ಪತಿವರತ್ಯಾರ ಬಾಯಿ ತೆರದಾರೊ
152
ನಲ್ಲನ ಬಾವಲಿ ಗಲ್ಲದ ಬಡಿತಾವೊ
ಹೂಡೇದ ಮುಂದ ಹುಡದೀಯ ಆಡುದ ನೋಡಿ
ಹೂರಣಕ ಬೆಲ್ಲ ಮರತಾಳೊ
153
ನಲ್ಲ ಬರತಾನಂತ ಒಲ್ಲೀಯ ನೇಶಾಳೊ
ನಲ್ಲ ನೆನದಂಗ ಬರಲಿಲ್ಲೊ ಆ ಒಲ್ಲಿ
ನೆಲ್ಲಿ ಗಿಡಕ್ಹಾಕಿ ಹರದಾಳೊ
154
ನಾನು ವಡ್ಡರ ಹುಡುಗ ನೀನು ವಡ್ಡರ ಹುಡಗಿ
ಎಕ್ಕಡ ಪೋದ ಎಮರುಂಡ ನನ ಗೆಣತಿ
ತಿಕ್ಕಡ ಪೋದ ತಿಮರುಂಡ
155
ನಾಯೀಯ ಕೊಳ್ಳಾಗ ನಾಕೆಳಿ ಸರಪಳಿ
ನಾಳಿಗಿ ಕಾಮಣ್ಣನ ಹುಲಿಬ್ಯಾಟಿ ಆಡಾಗ
ನಾನೂರ ನವಲ ಕುಣದಾವ
156
ನೀ ಎಂದ ಹಾಡಿದ್ದ್ಯೊ ನಿಮ್ಮಪ್ಪೆಂದ ಹಾಡಿದ್ದೊ
ಬೇಲ್ಯಾನ ಬೆಕ್ಕ ಅತ್ತಂಗೊ ನೀ ಹಾಡಿದರ
ಹೆಂಡರ ಮಕ್ಕಳು ಸತ್ತಂಗೊ
157
ನೀ ಎಂದ ಹಾಡಿದ್ದೊ ನಾ ಎಂದ ಕೇಳಿದ್ನೊ
ಕೌದಿ ಮಾರೆವನ ಕಲಕ್ಪಾರೊ ಹೊತ್ತಿದ
ಹೋಳಿಗಿ ಮಾರೆವ್ನ ಹೊಯ್ಕೋರೊ
158
ನೀರಾಗ ಹುಟ್ಟೂದು ನೀರಾಗ ಬೆಳೆವೂದು
ನೀರ ಕಂಡರ ಕರಗೂದು ಹಾಡೀನ
ಭೇದ ಬಲ್ಲಂವ ಒಡದ್ಹೇಳೊ (ಉಪ್ಪು)
159
ನೀರಿಗ್ಹೋಗು ಹುಡಗಿ ನಿಲ್ಲ ನಾ ಬರತೀನಿ
ನೀರಾಣಿ ನಿನ್ನ ಕೊಡದಾಣಿ ಕೈಯ್ಯನ
ಬಳಿಯಾಣಿ ನೀರ ಹೊಳಿಯಾಣಿ
160
ನುಚ್ಚ ಅಡತೀನಂತ ಹುಚ್ಚೆದ್ದ ಕುಣದಾಳೊ
ಕಿಪ್ಪೊಟ್ಟಿ ಕೆಳಗ ಕಿಡಿ ಸಿಡದೊ ಮರ ದಿನ
ಚಿಕ್ಕ ಗುಡ್ಡದಟ್ಟು ಗುಳ್ಳೇದ್ದೊ
161
ನೆರಿ ಊರ ಹುಡಗನ್ನ ಪುರಮಾನಿಸಿ ಕರಸ್ಯಾರೊ
ಹರೇದ ಹಾಡ ಹಾಡಾಕ ಊರಿನ
ನೆರದ ಹೆಣ್ಣವನ ನೋಡಾಕ
162
ಪತ್ತಾರ ಮನಿ ಮುಂದ ಅತ್ತತ್ತ ಹೇಳ್ಯಾಳೊ
ನತ್ತ ಮಾಡಿಸೋ ನನಗೊಂದ ನನ ಗೆಣೆಯಾ
ಅತ್ತೀಮನಿಗ್ಹೋಗಿ ಬರತೀನೊ
163
ಪರ್ಪತ ಮಲ್ಲಯ್ಯನ ಪರಸಿ ಬರತಾವಂತ
ಬೆರಿಸಿಟ್ಟಾಳ ಬೆಲ್ಲ ನೆನೆಗಡಲಿ ಆ ಬಾಲಿ
ತರಿಸಿಟ್ಟಾಳೆಲ್ಲ ಪನಿವಾರ
164
ಪರ್ವತವೆಂಬೂದ ಅರವತ್ತ ಗಾವೂದ
ಬರಲಾರೆನಯ್ಯ ಗಿರಿದೂರ ಮಲ್ಲಯ್ಯ
ಇಲ್ಲಿಂದ ಕೈಯ್ಯ ಮುಗದೀನೊ
165
ಪರಿಯ ಉಚ್ಚಿದ ಹಾಂವ ಸರಸರ ಹರದಂಗ
ಎರಕೊಂಡ ಎದಿಯ ತೆರಕೊಂಡ ಹುಡಗಿನ್ನ
ಕರಕೊಂಡ್ಹೊಲಮನಿ ಮಾರ್ಕೊಂಡೊ
166
ಪಲ್ಲಕ್ಕಿ ಹೊತ್ತವರು ಮೆಲ್ಲಕ ನಡಿರೆಪ್ಪ
ಕಲ್ಲಾಗ ಕಾಲ ಅದರ್ಯಾವ ಕಾಮಣ್ಣನ
ಪಲ್ಲಕ್ಕಿ ಮುತ್ತ ಉದರ್ಯಾವೊ
Leave A Comment