58

 

ಕರದ ಕರಚೀಕಾಯಿ ಬಿದರ ಬುಟ್ಟಿಯ ತುಂಬಿ
ಚದರನಿದ್ದಲ್ಲಿ ಕಳುವ್ಯಾಳೊ  ಆ ಬಾಲಿ
ಸದರ ನೋಡಿ ನೆದರ ಇಟ್ಟಾಳೊ

 

59

 

ಕರದಂಟ ಬೇಕಂತ ಕಿರಿಕಿರಿ ಮಾಡ್ಯಾಳೊ
ಗೋಕಾಕದಂಟ ಕರದಂಟ  ಕೊಟ್ಟರ
ಮದವೀ ಗಂಡನ್ನ ಮರತಾಳೊ

 

60

 

ಕರದ ಕರಚೀಕಾಯಿ ಕರಿ ಅರಬ್ಯಾಗ ಕಟಗೊಂಡ
ಎರಿಯ ತುಳದಾಳೊ ಯಮನೂರ  ಜಾತ್ರ್ಯಾಗ
ಸೆರಗ ಮರಿಮಾಡಿ ಉಣಸ್ಯಾಳೋ

 

61

 

ಕರ್ರನ್ನ ಮಾರೆವಳ ಗಲ್ಲ ಗುಳಿ ಬೀಳವಳ
ಒಗಿಯಾಕ ಹ್ಬಾದಹುಡಗಿ ಬರಲಿಲ್ಲೊ  ಹಳದಾಗ
ಕಾಲೆತ್ತಿ ಕೀಲ ಜಡದಾರೊ

 

62

 

ಕರ್ರನ್ನ ಹೆಣ್ಣಂತ ಕಿರಿಕಿರಿ ಕೊಡಬ್ಯಾಡೊ
ಹರಕ್ಪಾರೊ ನಿನ್ನ ಗುಳದಾಳಿ  ನಾ ಇನ್ನ
ಊರ ಮಗಳಾಗಿ ಇರತೀನೊ

 

63

 

ಕರ್ರಾನ ಹುಡಗ್ಯಾರು ಕಾಯ್ಕುಳ್ಳ ತುಡಗ್ಯಾರು
ಕಾಯ್ಕುಳ್ಳ ಗಂಟ ತೆಲಿಮ್ಯಾಲ  ಇಟಗೊಂಡ
ಹೊಯ್ಕೋತ ಊರ ಹೊಕ್ಕಾರೊ

 

64

 

ಕರಿಹೆಂಟೆ ಬರಿಗಾಲ ತುಳಿದ ಇಂಗಳ ಮುಳ್ಳ
ಗೆಣಿಯಾ ನಿನ ಕಡಿಗಿ ಬರುವಾಗ  ಕಣ್ಣೀರ
ಕೆನ್ನೆ ತೋಯಿಸಿ ಹರದಾವೊ

 

65

 

ಕರಿಹೆಂಟಿ ಬರಿಗಾಲ ನಡುವ ನೆಗ್ಗಿನಮುಳ್ಳ
ಗೆಣಿಯಾ ನಿನ ಕಳುವಿ ಬರುವಾಗ  ಕಣ್ಣೀರ
ಸಣ್ಣ ಮುತ್ತಾಗಿ ಸುರದಾವೊ

 

66

 

ಕರಿಯ ಕಂಬಳಿ ಹೊತ್ತು ಜಿರಿಕಿ ಜೋಡನು ಮೆಟ್ಟು
ಕತ್ತಲದಾಗ ನಡದ ಬರಬ್ಯಾಡೊ  ನನಗೆಣಿಯ
ಕಳ್ಳಂತ ತಿಳಿದ ಕಡದಾರೊ

 

67

 

ಕಲ್ಲ ಕಟಿಸಿದ ಬಾವಿ ಮಲ್ಲೀಗಿ ಸೋಪಾನ
ಗಲ್ಲಗಲ್ಲಂಬು ಗಜನಿಂಬಿ  ಬನದಾಗ
ಗೊಲ್ಲನಾಗ್ಯಾನೊ ಕರಿಹಣಮೂ

 

68

 

ಕಳ್ಳ ಬರತನಂತ ಗುಲ್ಲ ಮಾಡಲಿ ಬ್ಯಾಡ
ಕಳ್ಳಲ್ಲ ನಾನು ನಿನಗೆಣೆಯ  ನಿನ ಮನಿಗಿ
ಕತ್ತಲಾದಾಗ ಬರತೀನ

 

69

 

ಕಾಗವ್ವ ಕರಿಯಲಿ ಕುಳಬಾನ ಉರಿಯಲಿ
ಕರಿ ಹುಡಗಿ ನನಗ ಒಲಿಯಲಿ  ಎಲ್ಲವ್ವ
ಇಲ್ಲಿಂದ ಕೈಯ ಮುಗದೇನ

 

70

 

ಕಾಡಬ್ಯಾಡ ಎಲ್ಲವ್ವ ಕಾರ್ಹುಣ್ಣಿಗಿ ಬರತೀನು
ಕಲ್ಯ್-ಮಲ್ಯ್ ಎನುವ ಎರಡ್ಹೋರಿ  ಹೂಡಕೊಂಡ
ನಿಲ್ಲದ ನಿನಗಿರಿಗಿ ಬರತೀನಿ

 

71

 

ಕಾಮಕಸ್ತೂರಿ ನಿನ್ನ ಕಾಣದಲೆ ಇಲಾರೆ
ಮಲ್ಲಿಗೆಂತವಳನ್ನ ಮರಿಲಾರೆ  ನೆಗ್ಗಿನ
ಮುಳ್ಳಿನಂತವಳನ್ನು ಬೆರಿಲಾರೆ

 

72

 

ಕಾಮ ಸತ್ತಾನಂತ ಭೀಮ ಬೋರ್ಯಾಡತಾನ
ಮನಿಗೈದು ಕುಳ್ಳ ಕೊಡರೆವ್ವ  ಕಾಮಣ್ಣನ
ಮನ ಮೆಚ್ಚಿ ಕಿಚ್ಚ ಕೊಡವೂನ

 

73

 

ಕಾಮಣ್ಣನ ಹೆಂಡತಿ ಕಾಡಿಗ್ಗಣ್ಣಿನವಳ
ನೀರ ಕಂಡಲ್ಲಿ ನಗುವಳೊ  ಕಾಮಣ್ಣನ
ಬೂದಿ ಕಂಡಲ್ಲಿ ಅಳುವಳೊ

 

74

 

ಕಾಮಣ್ಣ ನಿಮ್ಮವ್ವ ಏನಂತ ಕರದಾಳೊ
ಬಾರೊ ನನ ಮಗನ ಪರದೇಶಿ  ಶಿವರಾಯನ
ಸಿಟ್ಟಿಗಿ ಸಿರವ ಕೊಡಬಾರೊ

 

75

 

ಕಾಮನಮಂಡಲ ಸುತ್ತ ಕಾರ್ಜೋಳನು ಬಿತ್ತಿ
ಹಾಲ ತುಂಬೊಟಿಗೆ ಗಿಣಿ ಬಡದೊ  ಕಾಮಣ್ಣನ
ಮಾನ ತುಂಬೊಟಿಗೆ ಶಿವನೋದೊ

 

76

 

ಕಾಮ ಕಲ್ಲಿಗಿ ಸೋತ ಭೀಮ ಬಿಲ್ಲಿಗಿ ಸೋತ
ರಾವಣ ಸೋತ ರಣದಾಗ  ನಮ್ಮೂರ
ತಳವಾರ ಸೋತ ತಳದಾಗೊ

 

77

 

ಕಾಮಣ್ಣನಂಥಾ ಚೆಲುವ ಬಸವಣ್ಣನಂಥಾ ಛಲವ
ಭೂಮಿತಾಯಂಥ ಸಹನೆಯ  ಪಡದರ
ಸಾರ್ಥಕಾದೇನ ಶಿವನಲ್ಲಿ

 

78

 

ಕಾಮಣ್ಣ ನಿನ್ನಂಥ ಚೆಲುವ ರ್ಯಾರ್ಯಾರಿಲ್ಲ
ಭೀಮಸೇನನಂಥ ದುರಳಿಲ್ಲ  ದೇಶದಾಗ
ಸೀತಾ ದೇವಿಯಂಥ ಗರತಿಲ್ಲೊ

 

79

 

ಕಾಮಣ್ಣನಂಥವರು ಚೆಲುವ ರ್ಯಾರ್ಯಾರಿಲ್ಲ
ರಥಿದೇವಿಯಂಥ ಚೆಲುವಿಲ್ಲ  ದೇಶದ ಮ್ಯಾಲ
ಧರ್ಮರಾಜನಂಥ ದೊರಿಯಿಲ್ಲೊ

 

80

 

ಕಾಲಾಗ ಪೈಜಾಣ ನಡುವಿನ್ಯಾಗೊಡ್ಡ್ಯಾಣ
ರಡ್ಡ್ಯಾರ ಹುಡಗೀಯ ಗೆಣೆತನಾ  ಮಾಡಿದರ
ಎಡ್ಡೆಮ್ಮಿ ಹೈನ ಉಣಿಸ್ಯಾಳೊ

 

81

 

ಕಾಸಿಯ ಕಟ್ಟ್ಯಾನ ರೇಶಿಮೀ ಉಟ್ಟಾನ
ಮೀಸಿಯ ಮ್ಯಾಲ ಕೈಯ ತಿರುವ್ಯಾನ  ಈ ಚದರ
ಖಾಸ ದೇಸಾಯರ ಮಗನೇನ

 

82

 

ಕ್ವಾರಮೀಸಿಯ ಹುಡುಗ ವಾರಿನೋಟಕ ಸೋತ
ಗಾರಗಾಣ್ಣೀನ ಬಿಳಿ ಹುಡಗೀಯ  ನೋಡುತ
ತೇರ ಎಳಿಯೂದು ಮರತಾನೊ

 

83

 

ಕುಡ್ಡ ಕೂರಿಗಿ ಹೂಡಿ ರೊಡ್ಡ ಬಳಸಾಲ ಹೂಡಿ
ಯಾಸಿಗಾಲಾಂವ ಎಡಿಹೂಡಿ  ಅವರವ್ವ
ತುದಿಗಾಲಲಿ ರೊಟ್ಟಿ ತರತಾಳೊ

 

84

 

ಕುದರೀಗಿ ಕೊಂಬಿಲ್ಲ ಕ್ವಾಣೀಗಿ ಢರಿ ಇಲ್ಲ
ಟೆಂಗಿನ ಗಿಡಕ ಟಿಸಲಿಲ್ಲ  ನನಗೂಡ
ವಾದ ಹಾಕವಗ ಉಸಲಿಲ್ಲೊ

 

85

 

ಕುಂಟಲಗಿತ್ತೀಗಿ ಕುಸಬಿ ಹೂವಿನ ದಂಡಿ
ಎಂಟ್ಹುರಿಹಗ್ಗ ಗುಂಡಬಡಿಗಿಲೆ  ಬಡದರ
ಕುಂಟಲತನಾ ಬಿಡಲಿಲ್ಲೊ

 

86

 

ಕುಂಬಳ ದಡಿ ಸೀರಿ ಕುಣಕುಣದ ಉಡತಾಳೊ
ಗಂಡನಿಲ್ಲೇನೊ ಇವಳೀಗಿ  ಈಗೀಗ
ಗಂಡೆರಳಿ ಬಣ್ಣ ತಿರಗ್ಯಾವೊ

 

87

 

ಕುಂಬಳ ದಡಿ ಸೀರಿ ಕುಣಕುಣದ ಉಟ್ಟಾಳೊ
ಮಗ್ಗಿ ತೆಗಿಸ್ಯಾಳೊ ಮಲಿಮ್ಯಾಲ  ಈ ಚೆಲುವಿ
ಚಂದ್ರಾಮನ ಬರಸ್ಯಾಳೊ ಬೆನ್ನಾಗ

 

88

 

ಕುಂಬಾರ ಕುಡಕಿ ಬಡದೊ ಕಂಬಾರ ಕಬ್ಬಿಣಾ ಬಡದೊ
ಪತ್ತಾರ ಬಡದ ಬಂಗಾರ  ಹಾರೂರ
ಕಿಟ್ಟಪ್ಪ ಬಡದ ದಸಮಿಯ

 

89

 

ಕುರಬರ ಹುಡಗೀಯ ತುರಬ್ಯಾಕ ನಿಗರೇತಿ
ತುರಬೀನ ತುಂಬ ಕುರಿ ಉಣ್ಣಿ  ಕಟಗೊಂಡ
ಟ್ರರಂತ ಕುರಿಯ ಹೊಡದಾಳೊ

 

90

 

ಕುಲು ಕುಲು ನಗುವೂಳು ಕುಲಕಣ್ಣಿಗಿ ಹೋಗೂಳು
ಕುಲಕಣ್ಣಿ ನಿನಗೇನ ಕೊಡತಾನ  ಬಾಳಾದರ
ಬಿರಾಡದಾಗ ರೊಕ್ಕ ಬಿಡತಾನ

 

91

 

ಕುಸಬೀಯ ಹೂ ಚೆಂದ ಕೋಗಿಲದ ದನಿ ಚೆಂದ
ನಸುಗೆಂಪಿನಾಕಿ ನಗಿ ಚೆಂದ  ಚೊಚ್ಚಿಲ
ಬಸರಾದರ ಹೆಣ್ಣ ಬಲುಚೆಂದ

 

92

 

ಕೂಡೀದ ಕುಡಿಹುಬ್ಬ ತೀಡೀದ ಬೇತಾಲಿ
ಕಾಡೀಗಿ – ಗಣ್ಣ ನಡಸಣ್ಣ  ನಡದರ
ಮಿಡಿನಾಗರಾಡಿ ಹರದಂಗ

 

93

 

ಕೂಡೂ ಮನಸಿದ್ದರ ಗ್ವಾಡಿ ಜಿನದರ ಬಾರೊ
ದಡ್ಡೀ ಬಾಗೀಲ ತೆರಿತೀನೊ  ಆವಾಗ
ಅಡ್ಡ ಬಂದವರನ ಇರಿತೀನೊ

 

94

 

ಕೂಸಿನ್ನ ಕೊಲಿಮಾಡಿ ಘಾಸಿ ಗಂಡಗ ಮಾಡಿ
ಹಾಸಿಗಿ ಮಾಡ್ಯಾಳೊ ಗೆಣಿಯಾಗ  ಆ ಗೆಣಿಯ
ಪಾಸಿ ಮಾಡ್ಯಾನೋ ಬರಲಿಲ್ಲ

 

95

 

ಕೂಸಿನ್ನ ಕರಕೊಂಡ ಮಾಸೆತ್ತ ಏರ್ಯಾಳೊ
ತಾಸೊತ್ತಿನ ಹಾದಿ ಯಮನೂರ  ತೇರಿಗಿ
ಕೂಸೆತ್ತಿ ಕೈಯ ಮುಗದಾಳೊ

 

96

 

ಕೂಲಿಕಾರ ಹುಡಗಗ ಹಾಲ ಸಕ್ಕರಿ ಹಾಕಿ
ಮ್ಯಾಲ ಕೊಟ್ಟೀನ ಎಲಿ ಅಡಕಿ  ಹುಡಗಗ
ಕಾಲ್ಹಿಡಿದರ ಕರುಣಿ ಬರಲಿಲ್ಲೊ

 

97

 

ಕೆಂಪ-ಜ್ವಾಳದ ರೊಟ್ಟಿ ಗಿಂಜ ಬದನೀಕಾಯಿ
ದುಂದೀಲಿರುವೂದು ಹೊಳಸಾಲ  ಹುಡಗ್ಯಾರು
ಸಂಜೀಕ ದೀಪ ಹೊಡದಾರೊ

 

98

 

ಕೆಂಪ ಸೀರಿಯನುಟ್ಟು ಬಾಳಿ ನಿರಗೀ ಮಾಡಿ
ತಂಪೊತ್ತಿನ್ಯಾಗ ಬರತಾಳೊ  ಕೊರವಂಜಿ
ಜುಂಪ ಜ್ಯಾಲ್ಯಾಗ ನೆನದಾಳೊ

 

99

 

ಕೆಂಪಾನ ಹೆಣ್ಣಂತ ಸಂತೋಷ ಪಡಬ್ಯಾಡ
ಸಂತ್ಯಾಗಿರತೈತಿ ಸವಳುಪ್ಪ  ಆ ಹೆಣ್ಣ
ನಿಂತಲ್ಲಿ ನೀರ ಬರಸೂಳ

 

100

 

ಕೆಲಸಂಗ ಕ್ಯಾದೀಗಿ ಹೊನವಾಡ ಮಲ್ಲೀಗಿ
ಕಡೆಯ ಬಿಜ್ಜರಗಿ ಕಣಗೀಲ  ದಾಸ್ಯಾಳ ಹೂವ
ಮಡ್ಡೀ ಎಲ್ಲವನ ತುರಬೀಗಿ

 

101

 

ಕೆಸರ್ಹಾಳ ಹಳದಾಗ ಉಸರ್ಹಿಡದ ಅಳತಾಳ
ಹೆಸರ ಕೇಳಿದರ ನಗತಾಳ  ಹುಡಗೀಯ
ಕುಸಮೋಜಿನ ಬಯಕೆ ತಿಳಿಯವೊ

 

102

 

ಕೈಯ್ಯಲಾಗದ ಸೂಳಿ ಅಯ್ಯಗ ಹೋಗ್ಯಾಳೊ
ಅಯ್ಯ ಬೇಡ್ಯಾನೊ ಮನಿ ಮನಿ  ಸೂಳೀಗಿ
ಮ್ಯಯ್ಯ ಬೇಡ್ಯಾನ ಮಲಗಾಗ

 

103

 

ಕೊಳ್ಳಾಗ ಕಟ್ಟಾಣಿ ಉಡಿಯಾಗ ಪುಠಾಣಿ
ನೀ ಎಲ್ಹೋಗಿದ್ದೆ ಚಿಟ್ಟಾನಿ  ನಿನಗಂಡ
ಹುಡಕ್ಯಾಡಿ ಹುಟ್ಟ ಮುರದಾನ

 

104

 

ಖಂಡ ಇರೂತಾನ ರಂಡ್ಯಾರ ಸಹವಾಸ
ಪುಂಡತನಾ ತೋರೂರ ಊರಾಗ  ಹುಡಗೂರು
ಜೊಂಡಗಾಗುವರು ಮದಿವ್ಯಾಗಿ ॥

 

105

 

ಗಂಡನ ಮನಿಯಾಗ ಉಂಡ ತಿರಗುವ ಹೆಣ್ಣ
ಕಂಡವರ ಗೂಡ ನಗಬ್ಯಾಡ  ಅದ ಕಂಡು
ಕಂಡಕ ಕಾಗಿ ಮುಕರ್ಯಾವ

 

106

 

ಗುಂಡ ಗುಂಡ್ಯಾರ ಕೂಡಿ ಗುಂಡದ ನೀರಿಗಿ ಹೋಗಿ
ಗುದ್ದ್ಯಾಡಿ ಗುಂಡ ಕೆದರ್ಯಾರೊ  ರಾತ್ರ್ಯಾಗ
ಒದ್ದ್ಯಾಡಿ ಕೌದಿ ಹರದಾರೊ

 

107

 

ಗಂಡ ಬಡವನಂತ ಕಂಡಂಗ ನಡೀಬ್ಯಾಡ
ಉಂಡೀನಂತ ಇರು ಉಪವಾಸ  ಹುಡಗೀ
ಗಂಡನ ಹೊರತು ಗತಿ ಇಲ್ಲೊ

 

108

 

ಗಂಡನ ಮನಯಾಗ ಹೆಂಡಿ ಹಿಡದರು ಲೇಸ
ಗಂಡಿಲ್ಲದವಳ ದೌಲತ್ತ  ಎಟ್ಟಿದ್ದರೂ
ಕುಂಡಿಮ್ಯಾಲ ಸೀರಿ ಹರದಂಗೊ

 

109

 

ಗಾರಗಣ್ಣಿನ ಹುಡಗಿ ಯಾರ ಮಗಳಪ್ಪ ಈಕಿ
ಸೀರಿ ನೋಡದರ ಸಿರಿವಂತಿ  ಇರ್ವಪ್ಪ
ಯಾರೀಗಿ ಧಾರಿ ಎರದಾನೊ

 

110

 

ಗಾರಿಗಿ ಕಟಗೊಂಡ ತೇರಿಗಿ ಬಂದಾಳೊ
ಮಾರುದ್ಧ ಜಡಿಯ ಬಿಟಗೊಂಡ  ಹುಡಗಿನ್ನ
ಊರಿನ ಗೌಡ ಇಟಗೊಂಡೊ

 

111

 

ಗಿಡದಾಗ ಗಿಡ ಚೆಂದ ಮಾವೀನಮರ ಚೆಂದ
ಹಕ್ಕಿ ಪಕ್ಯಾಗ ಗಿಣಿಚೆಂದ  ಎಲೆ ಹುಡಗ
ಚಿಕ್ಕ್ಯಾಗ ಚೆಂದ ಚಂದ್ರಾಮ

 

112

 

ಗಿಡದಾಗ ಗಿಡ ಹುಟ್ಟಿ ಗಿಡಕ ತೊಟ್ಟಿಲ ಕಟ್ಟಿ
ಅಡಿವೆಪ್ಪ ಹುಟ್ಟಿ ಗುಡಿ ಕಟ್ಟಿ  ಕಡೇಮನಿ
ಬಸಗೊಂಡಪ್ಪ ಹುಟ್ಟಿ ಮಠ ಕಟ್ಟೊ

 

113

 

ಗಿಡ್ಡ ಇದ್ದರು ಹೆಣ್ಣ ತಿದ್ದೀ ಮಾಡಿದಂಗ
ಕಡ್ಡೀ-ಬುಗಡೀಯ ಬಡದಂಗ  ಇದ್ಹೆಣ್ಣ
ಇದ್ದರೆ ಚೆಂದ ಇದರೀಗಿ

 

114

 

ಗಿಡ್ಡ ಹುಡಗಿಯ ಹೂಂಸ ಗುಂಡಕಲ್ಲಿಗಿ ಬಡದ
ವಾಡೇಕ ಬಡದ ಗಿಮದರಿಗಿ  ಗೌಡರ
ಕ್ವಾಣೀಗಿ ಬಡದ ಹಣಿ ಒಡದ