ಭಾಗ – 4

1

 

ಅಡಕೀ ಬಣ್ಣದ ಸೀರಿ ಅವರಿ ಹೂವಿನ ಕುಬಸ
ಹೆಡಕೀನ ಮ್ಯಾಲ ಮಗಿದುರಬ  ಕಟಗೊಂಡ
ಖಡಕೀಲಿ ನೀರ ತರತಾಳೋ

 

2

 

ಅಡಕೀ ಏಣಿಯ ಮ್ಯಾಲ ಆಡ್ಯಾಳ ಡೊಂಬತಿ
ನೋಡಿ ಬಂದ್ಹುಡಗ ಉಣಲಿಲ್ಲೋ  ಬೆಳತಾನ
ಕಾಡಿ ಬೇಡ್ಯಾನೋ ಅವಳನ್ನ

 

3

 

ಅಡವ್ಯಾಗ ಆಕಳಬಿಟ್ಟು ಗಿಡದಾಗ ಕುಂತಾನ
ಹಿಡದಾನ ಕೊಳಲ ಊದ್ಯಾನ  ಶ್ರೀಕೃಷ್ಣ
ಮಿಡಿನಾಗರ ಹೆಡಿಯ ತಗದಾವೊ

 

4

 

ಅಡವಿ ಗಿಡ-ಮರ ಏರಿ ಹೂ ಹರಿದು ತಂದಾನ
ರಾಮನ ತಮ್ಮ ಲಕ್ಷ್ಮಣ  ತಂದ ಹೂ
ಹರಿದಿ ಸೀತವ್ವನ ತುರಬೀಗಿ

 

5

 

ಅಣಕದ ಮಾತಾಡಬ್ಯಾಡ ಮಣಕೆಮ್ಮಿಯಂಥವಳ
ಒಣಕಿ ತುಂಡಾಗ್ಯಾನ ನಿನ ಗಂಡ  ಕೇಳಿದರ
ತುಣತುಣಕ ಮಾಡಿ ಚೆಲ್ಯ್ನೊ

 

6

 

ಅತ್ತರ ಕಣ್ಣಿಂದ ಮುತ್ತ ಉದರಿದಂಗ
ಚಿತ್ತಿಮಳಿ ಸುರದ ಹರದಂಗ  ಹುಡಗೀಯ
ಚಿತ್ತ ಹೊಳಿಯಾಗಿ ಮಹಾಪೂರ

 

7

 

ಅತ್ತಳೊ ಕರದಾಳೊ ಮತ್ತೇನ ಕೇಳ್ಯಾಳೊ
ಮುತ್ತಿನ ಮೂಗೂತಿ ಮಣಿಸರ  ಮ್ಯಾಲೊಂದು
ಕುತ್ತೀಗಿ ಬೀಳುವ ಕಂದನ

 

8

 

ಅತ್ತಿಯ ಅಂಜಿಕಿ ಇಲ್ಲ ಮಾವನ ಹೆದರಕಿ ಇಲ್ಲ
ಆದ ಗಂಡನ ಆಳಕಿಲ್ಲ  ಈ ಹೆಣ್ಣ
ಹ್ವಾದಲ್ಲಿ ಗೆಣಿಯಾನ ಬಿಟ್ಟಿಲ್ಲ

 

9

 

ಅತ್ತಿಗಿ ಜೌಡಲ ಬೀಜ ಮಾವಗ ಮಾವಿನ ಗೊಟ್ಟಿ
ಗಂಡನ ಕಂಡರ ಗಜನಿಂಬಿ  ಈ ಹೆಣ್ಣ
ಗೆಣಿಯನ ಕಂಡರ ಮೋಸಂಬಿ

 

10

 

ಅತ್ತಿ ಹೂವಿನ ಸೀರಿ ಅಚ್ಚೇರ ತೋಳಬಂದ್ಗಿ
ಹೊತ್ತೇರಿ ಹೊಳಿಗಿ ಹೊಂಟಾಳ  ನನಗೆಣತಿ
ಚಿತ್ತಾರದ ತೇರ ನಡದಂಗ

 

11

 

ಅತ್ತು-ಕರದು ನೀ ಅಕ್ಕನಮನಿಗಿ ಹ್ವಾದರ
ಅಕ್ಕನ ಗಂಡ ಅವಕೊಂಡ  ಹುಡಗಿ ನಿನ್ನ
ಅಕ್ಕನ ಸೆರಗ ಹರಕೊಂಡ

 

12

 

ಅಂತರ ಪಂತರ ಸಿಬಿಕಿಯ ಜಂತರ
ಜಂತರ ಮಾರೂದು ಜಮಖಂಡಿ  ಸೂಳ್ಯಾರು
ಅಂತರಲೆ ಲಾಗ ಒಗದಾರೊ

 

13

 

ಅಂಬಲಿ ಮುತ್ತಪ್ಪಗ ಒಂಬತ್ತ ಬಾಗಿಲ
ತುಂಬ ಕುತ್ತಾರ ರೈತರ  ನಡಬರಕ
ತಂದಿ ಕುತ್ತಾನ ಸಿದರಾಯ

 

14

 

ಅಂಬಿಗ್ಯಾರ ಹುಡಗನ್ನ ನಂಬೀನ ಗೆಳತೆವ್ವ
ತುಂಬಿದ ಹೊಳಿಯಾಗ ಕೈ ಬಿಟ್ಟ  ಆ ಹುಡುಗ
ರಂಭೀನ ತಂದಿಟ್ಟ ನನಮ್ಯಾಲ

 

15

 

ಅಯ್ಯಯ್ಯ ಅನ್ನೂಳ ಅಯ್ಯಗ ಹೋಗೂಳ
ಅಯ್ಯ ನಿನಗೇನ ಕೊಡತಾನ  ಎಲೆ ಹುಡಗಿ
ಸೈಪಾಕದಾಗ ಸರಿಹಿಟ್ಟ

 

16

 

ಅಲ್ಯ್ಕ ನಿಂತಿಯೋ ಹಲ್ಯ್ಕ ಕಿಸದೀಯೋ
ಹಲ್ಲ ಮ್ಯಾಲೆರಡ ನೊಣಕುತ್ತ  ಎಲೆ ಹುಡಗ
ಲಾವಂಗ ಮಾಡಿ ಕಡದೀಯೊ

 

17

 

ಅವಳೀಗಿ ಬೇದರ ಇವಳ್ಯಾಕ ಅಳತಾಳೊ
ನಾ ಬಿತ್ತಿ ಬೆಳದ ಕುಸಬೀಯ  ಬಡದಂಗ
ಬಡದ ಬಿಡಲೇನೊ ಇವಳನ್ನ

 

18

 

ಆಚೀಚೆ ನೋಡಿದರ ಸಾಚೆ ಸಣ್ಣದೈತಿ
ನಾಚೀಕಿ ಐತಿ ಮಾರ್ಯಾಗ  ಅವರವ್ವ
ಆಚೀಗಿ ಬಿದ್ದ ಕಳಸ್ಯಾಳೊ

 

19

 

ಆಜೂರ ಭೂಮ್ಯಾಗ ಆಡ್ಯಾಡಿ ಮೇದಾನೊ
ಅಗರಾಣಿ ನೀರ ಕುಡದಾನೊ  ಬಸವಣ್ಣ
ಆರಂಭ ಮಾಡಿ ಮಲಗ್ಯಾನೊ

 

20

 

ಆ ದಂಟ ಈ ದಂಟ ಹಸರ ಹಳದೀ ದಂಟ
ಸೂಳ್ಯಾರ ಕೇಳೂದು ಕರದಂಟ  ಕೊಟ್ಟರ
ಜಿಗದ್ಯಾಡಿ ಮುದ್ದ ಕೊಡತಾರೊ

 

21

 

ಆರಸಾವಿರ ಜಂಗ ಮೂರಸಾವಿರ ಗಂಟಿ
ದೂರ ಕೇಳ್ಯಾವೊ ದುರ್ಗಕ  ನಮ್ಮೆತ್ತ
ಧೂಳ ಚಿಮ್ಮ್ಯಾವೊ ಗಗನಕೊ

 

22

 

ಆಲೂರ ಕೆರಿಯಾಗ ಕಾಲೂರಿ ನಿಂತಾಳೊ
ಜಾಲಗಾರ ಹುಡಗ ಜಗಮಿಂಡ  ಅವರಪ್ಪನ
ದೌಲತ್ತ ನೋಡಿ ಜಿಗದಾಳೊ

 

23

 

ಆಲೂರ ಹೊಳಿ ಮುಂದ ಪೂಲ ಕಟಿಸ್ಯಾರ ಚಂದ
ಕೀಲ ಬಡದಾರ ವಿಪರೀತ  ಇಂಗ್ರೇಜವರು
ಗಂಗಿ ಮ್ಯಾಲ ಗಾಡಿ ನಡಸ್ಯಾರೊ

 

24

 

ಆ ವರುಷ ಹಂಗಾತು ಈ ವರುಷ ಹಿಂಗಾತು
ಲೆಂಡ್ಯಾನ ಹಳದಾಗ ಕೆಲಸಾತು  ಹುಡಗೀಯ
ಬಣ್ಣದ ಸೀರಿ ಹೊಲಸಾತೊ

 

25

 

ಇದ್ದ ಹೆಂಡತಿ ಬಿಟ್ಟು ಕದ್ದಸೂಳಿಯ ಮಾಡಿ
ಬಿದ್ದ ಮಣಕಾಲ ಮುರಕೊಂಡ  ಸಾವಕಾರ
ಇದ್ದಟ್ಟ ಬುದ್ಧಿ ಕಳಕೊಂಡೊ

 

26

 

ಇದ್ದರ ಇರಬೇಕ ಬುದ್ದುಳ್ಳವಳ ಗೆಣೆತಾನ
ಕುದ್ದಲಗೇಡಿ ಕುಲಗೇಡಿ  ಗೆಣೆತನ ಮಾಡಿ
ಇದ್ದಟ್ಯ ಬುದ್ದಿ ಕಳಕೊಂಡೊ

 

27

 

ಇರಬಿ ಈಯಿಸಿಕೊಂಡು ಹರಬಿ ಗಿಣ್ಣವ ಕಾಸಿ
ಹರದಾರಿ ಗೆಣಿಯಾಗ ಕಾದಾಳೊ  ಅಂವ ಬರಲಿಲ್ಲ
ನೆರಿಕ್ಯಾಗ ಚೆಲ್ಲಿ ಅಳತಾಳೊ

 

28

 

ಈಟೀಟ ಮಲಿಯಾಕಿ ಚೀಟಿನ ಕುಪ್ಪಸದಾಕಿ
ಸೋಟ ಅವರಪ್ಪ, ಕಾದಾನೊ  ಆ ಹುಡಗಿ
ನೋಟ ಬೀರ್ಯಾಳೊ ನನಮ್ಯಾಲೊ

 

29

 

ಈಟೀಟ ಮಲಿಯವಳು ಚೀಟಿನ ಕುಪ್ಪಸದವಳು
ಬಂದಿದ್ದಳೇನ ತ್ವಾಟಕ್ಕ  ಆ ಹುಡಗಿ
ತಂದಿದ್ದಳೇನ ಕರಿಗಡಬು

 

30

 

ಈಟೀಟ ಮಲಿಯಾಕೆ ಥಾಟಿನ ನಡಗ್ಯಾಕಿ
ಬ್ಯಾಟಿಗಿ ಹೊಕ್ಕೀನ ಕೈಬಿಡ  ಎಲೆ ಹುಡಗಿ
ಚಿಟಜೇನ ತರತೀನಿ ಸೀ ನೋಡ

 

31

 

ಈಟೀಟ ಇರುವಾಗ ಗಂಡ ಕರಿಯಲು ಬಂದ
ಪುಂಡೀಯ ಬೀಜ ಉಡಿಯಕ್ಕಿ  ಹಾಕ್ಕೊಂಡು
ಕಂಡವರ ಕಾಲ ಹಿಡದಾಳೊ

 

32

 

ಉತ್ತತ್ತಿ ಬಣ್ಣದ ಸೀರಿ ಉಡಿಯಾಗ ಟೆಂಗಿನಕಾಯಿ
ಎಡಗೈಯಾಗ ಎಡಿಯ ಹಿಡದಾಳೋ  ಆ ಬಾಲಿ
ನಗತಾಳೊ ಗುಡಿಯ ಹೊಗತಾಳೊ

 

33

 

ಊರ ಮುಂದಿನ ಹೊಲವ ಹರಗಿ ಹತ್ತಿಯ ಬಿತ್ತಿ
ತಿರತಿರಗಿ ಹೋಗಿ ನೋಡ್ಯಾನೊ  ಆ ಹುಡುಗ
ಕೊರವರ ಕತ್ತಿ ಕಾದಾನೊ

 

34

 

ಊರ ಮುಂದಿನ ಹಳ್ಳ ಕುಸಬಿ ಬಡದರ ಜೊಳ್ಳು
ಗಲ್ಲದ ಮ್ಯಾಲ ಕಿರಬಳ್ಳಿ  ಇಟಗೊಂಡ
ನಲ್ಲನಗೂಡ ನಗತಾಳೊ

 

35

 

ಊರ ಮುಂದಿನ ತ್ವಾಟ ನೀರುಂಡ ಬಳ್ಳೊಳ್ಳಿ
ಸಾಲ ಮೂಲಂಗಿ ಗಜನಿಂಬಿ  ಬನದಾಗ
ಗೊಲ್ಲನಾಗ್ಯಾನೊ ಕರಿಹಣಮ

 

36

 

ಊರ ಮುಂದಿನ ತ್ವಾಟಾ ನೀ ಮಾಡೊ ನನ ಗೆಣೆಯ
ನೀರ ತರಲಾಕ ಬರತೀನಿ  ನಿನ ಗೂಡ
ಯಾರಿಲ್ಲದಾಗ ಇರತೀನಿ

 

37

 

ಊರ ಮುಂದಿನ ಗಂಗಿ ನಾಟೀಕಾರಣ ತಂಗಿ
ಏನ ಬೇಡ್ಯಾಳೊ ಚದರಂಗಿ  ಗೆಣಿಯಾನ
ತೋಳ ಬೇಡಾಳೊ ತೆಲಗುಂಬೊ

 

38

 

ಊರೀಗಿ ಹೊಕ್ಕೀನಿ ಹೋರಿಯ ತರತೀನಿ
ಊರ ಕಾಯವ್ವ ದುರಗವ್ವ  ನನ ಗೂಡ
ವಾದ ಹಾಕವನ ಒಯ್ಯವ್ವ

 

39

 

ಎಂಟ ಹಾಡನು ಹಾಡಿ ಗಂಟಲ ಹರಕೊಂಡ್ಯೊ
ಸುಂಠಿಯ ಹಿಡಿಯೊ ಬಾಯಾಗ  ನನ್ಹಾಡ
ಒಂಟಿ ಮಾಲ್ಹೇರಿ ಬರತಾವೊ

 

40

 

ಎರಿಯ ಹೊಲದಾಗಿನ ಎಳಿಯ ಸಂವತಿಕಾಯಿ
ಹರಿಯಂದರ ಹೆಂಗ ಹರಿಯಲೆ  ನನಗೆಣಿಯಾ
ಮರಿಯಂದರ ಹೆಂಗ ಮರಿಯಲೊ

 

41

 

ಎರಿಯ ಹೊಲದ ಬಂಡಿ ಎಳ ಎಳದ ತರುವಾಗ
ಹೊಲಗೇರಿ ಮುಂದ ನಗಾ ಮುರದ  ಮನಿಯಾನ
ಹುಡಿಗಿ ಅತ್ತಾಳೊ ನಡಮುರದ

 

42

 

ಎರಿಹೊಲ ಕರಿಹೆಂಟೆ ನರಿನಡಗಿ ನಡಕೊಂಡ
ಹರದಾರ್ಹರದಾರಿ ಬಂದೀನೊ  ನನಗೆಣಿಯಾ
ಕರಿಗಡಬ ಹೆರತುಪ್ಪ, ತಂದೀನೋ

 

43

 

ಎಲ್ಲವ್ವಗ ಹೋಗುದಕ ಎರವೀನ ತೋಳಬಂದಿ
ಮಗ್ಗಿಯ ಕುಬಸ ಮಂದೀದ  ತೊಟಗೊಂಡ
ಹಿಗ್ಯಾಡಿ ಹಾದಿ ನಡದಾಳೊ

 

44

 

ಎಲ್ಲವ್ವಗ ಹೋಗುವರು ಬೆಲ್ಲವ ಒಯ್ಯುವರು
ಮಲ್ಲಿಗಿ ಒಯ್ಯುವರು ತುರಬೀಗೆ  ಪರಶುರಾಮನ
ಬಿಲ್ಲಿಗಿ ಒಯ್ಯುವರು ಬಿಳಿಮುತ್ತ

 

45

 

ಏಳೇಳೂ ಕಾಮಣ್ಣ ಎಟ್ಟೊತ್ತ ಮಲಗೀದಿ
ಆನಿ ಬಂದಗಸಿ ತಗದಾವೊ  ನಮ್ಮೂರ
ಗೂಳಿ ಬಂದ ಧೂಳ ಚಿಮ್ಮ್ಯಾವೊ

 

46

 

ಒಂಕ ಮಾರಿಯ ಹಣಮ ತೆಂಕಣಕ ಮುಖಮಾಡಿ
ಟೊಂಕದ ಮ್ಯಾಲ ಕೈಯ್ಯ ಇಟ್ಟಾನೊ  ಹಣಮಂತ
ಲಂಕಾಕ ಲಾಗ ಹೊಡದಾನೊ

 

47

 

ಒಂದ ಜಿಟ್ಟಿಯ ಕೊಂದ ಒಂಬತ್ತ ನಗಾರಿ ಬಿಗಿಸಿ
ಅಂಗೈಯಗಲದ ತೊಗಲುಳದ  ಹಾಡೀನ
ಭೇದ ಬಲ್ಲಂವ ಒಡದ್ಹೇಳೋ

 

48

 

ಓಡಿ ಹೋಗಲಿ ಬ್ಯಾಡೊ ಗ್ವಾಡಿ ಜಿಗಿಯಲಿ ಬ್ಯಾಡೊ
ಗ್ವಾಡಿಯ ತೆಳಗ ತಿಳಿನೀರ  ಇದ್ದಂಗ
ತಿಳದ್ಹಾಡೋ ನಿನ್ನ ಮನದಾಗ

 

49

 

ಕಟ್ಟಾಣಿ ಗುಂಡಲ್ಲ ಕೈಗಂಟು ಬದಕಲ್ಲ
ಇಟ್ಟಂಥಾ ಸೂಳಿ ಮಡದಲ್ಲೊ  ಗಂಡನ್ನ
ಬಿಟ್ಟ ಬಾಳಕ್ಕಿ ಗರತೆಲ್ಲೊ

 

50

 

ಕಟ್ಟಿರಿಬಿ ಕಂದಾಹಾಕಿ ಎಂಟ ಮಗಿ ಹಾಲ್ಹಿಂಡಿ
ನೆಂಟರು ಉಂಡು ನೆಲನುಂಡು  ಹಟ್ಟ್ಯಾನ
ಕುರಿ ಹಿಂಡ ಕುಡದ ಒದರ್ಯಾವೊ

 

51

 

ಕಡಿಮ್ಯಾಲ ಕಡಿಬಿದ್ದ ಉಡದಾರ ತಿಡಿಬಿದ್ದ
ಬಡಿಗ್ಯಾರ ಓಣ್ಯಾಗ ಬರುವಾಗ  ಹುಡಗನ
ಬೆಡಗ ಕೇಳ್ಯಾಳೊ ಹೊಯಮಾಲಿ

 

52

 

ಕಣ್ಣೀಗಿ ಕಸ ಹೀನ ಹೆಣ್ಣೀಗಿ ನಗಿ ಹೀನ
ಹಣ್ಣಿದ್ದ ಗಿಡಕ ಗಿಣಿ ಹೀನ  ಹೆರವರ
ಹೆಣ್ಣ ಬಯಸಾಂವ ಮತಿ ಹೀನೊ

 

53

 

ಕತ್ತಲ ಮನಿಯಾಗ ಬತ್ತಲೆ ನಿಂತಾಳೊ
ಕತ್ತಿವರಿಯಂಥ ಕರಿಹುಡಗಿ  ಕಾಲಾಗ
ಒತ್ತಿ ಬಿದ್ದಾವೊ ಹೊಲಮನಿ

 

54

 

ಕಪಲೀಯ ಮಾರೆವಳ ತಿಪಲೇನ ಹೇಳಲೆ
ಚಪಲಬಾಳವಳು ಮಾತೀಲೆ  ಹುಡಗರನ
ಸುಪಲ್ಯಾಗ ಹಾಕಿ ಕೇರ್ಯಾಳೊ

 

55

 

ಕಬ್ಬಲಗ್ಯಾರ ಹುಡಗನ ನಬ್ಬಾಗಿ ಬರ ಹೇಳ
ಒಬ್ಬರಿಲ್ಲವ್ವ ಮನಿಯಾಗ  ಅಂವಗಾಗಿ
ಹಬ್ಬದ ಶ್ಯಾಂವಿಗಿ ಬಸದೀನ

 

56

 

ಕಬ್ಬೂರ ಕಸಿ ಅಂಗಿ ಹುಬ್ಬಳ್ಳಿ ಧೋತರ
ಕಮತುಗಿ ಊರೀನ ಗರಿಪಟಕಾ  ನನಗಾಗಿ
ಇಳಕಲ್ಲ ಹುಡಗಿ ಕಳಿಸ್ಯಾಳೊ

 

57

 

ಕರದ ಕರಚೀಕಾಯಿ ಮುರದ ಗಂಗಾಳಕ ಹಾಕಿ
ಹರದಾರಿ ಗೆಣೆಯ ಬರಲಿಲ್ಲೊ  ಮನಿಯಾನ
ನೀವಾಳಿ ಗಂಡ ತಿಂದಾನೊ