252

 

ಹಡಸೂ ಹೆಣ್ಣಿನ ಧರ್ಮ ಕೆಡಸೂಳ ಸಂಸಾರ
ಬಿಡಸೂಳ ಮನಿಯ ಮಡದೀನ  ಆ ಹೆಣ್ಣ
ಹೊಡಸೂಳ ರುಂಡ ಹೊತ್ತಿರತ

 

253

 

ಹಂಡಬಂಡದ ಕೌದಿ ಹಾಸಂದರ ಹಾಸ್ಯಾಳ
ದುಂಡ ಮಲೀಗಿ ಮುಡದಾಳ  ಎದಿಮ್ಯಾಲ
ಚೆಂಡ ಆಡಿದಂಗ ಆಡ್ಯಾಳೊ

 

254

 

ಹೆಂಡ ಹೋರೀ ಮ್ಯಾಲ ಮಂಡ ಮೂಗಿನ ಹುಡಗಿ
ಉಂಡಿ ಕೊಡತೀನ ಉಡಿ ಒಡ್ಡ  ಎಲೆ ಹುಡಗಿ
ಬೆಂಡ ಕೊಂಡತೀನಿ ಬೆನ್ಹತ್ತ

 

255

 

ಹೆಂಡಾಕಾಳ ಕಾಯೂತ ಮಂಡಮೂಗಿನ ಹುಡಗಿ
ಕಂಡ ಕಂಡಲ್ಲಿ ತಿರಗ್ಯಾಳೊ  ಅವಳನ್ನ
ಹಿಂಡಿ ಬಿಟ್ಟಾನೊ ಹಂಡ್ಹುಡಗ

 

256

 

ಹಣಮಂತ ಹಾರ್ಯಾನ ಹನ್ನೆರಡು ಗಾವೂದ
ಸಣ್ಣ ಸೂರ್ಯಾನ ಕಿರಣಕ್ಕ  ಹಾರಿದರ
ಕಣ್ಣ ಕಳಕೊಂಡ ತಿರಗ್ಯಾನೊ

 

257

 

ಹತ್ತ ಹಾಡನು ಹಾಡಿ ಹಲ್ಲನು ಮುರಕೊಂಡ್ಯೊ
ಹತ್ತೀಯ ಹಿಡಿಯೊ ಬಾಯಾಗ  ನನ್ಹಾಡ
ಕತ್ತೀ ಮ್ಯಾಲ್ಹೇರಿ ಬರತಾವೊ

 

258

 

ಹತ್ತಿ ಹಾಸಿಗೆ ಮಾರಿ ಬಿಸೂಕಲ್ಲನು ಮಾರಿ
ಕೂಸಿನ ಕೈಯಾನ ಕಡೆ ಮಾರಿ  ಗೆಣಿಯಾಗ
ಜೋಡಬಾವಲಿ ಇಡಿಸ್ಯಾಳೊ

 

259

 

ಹತ್ತೀಯ ಹೊಲದಾಗ ಅತ್ತತ್ತ ಹೇಳ್ಯಾಳೊ
ಒತ್ತೀ ಬಿದ್ದಾವ ಒಡಿವೆಲ್ಲ  ನನಗೆಣೆಯ
ಹತ್ತೀಯ ಮಾರಿ ಹಣ ಕೊಡೊ

 

260

 

ಹತ್ತೀಯ ಕಾಯಂಗ ಒತ್ತಿ ರುಂಬಾಲ ಸುತ್ತಿ
ಹತ್ತ ಮಂದ್ಯಾಗ ಬರತಾನ  ಕಾಮಣ್ಣನ
ಕತ್ತೀಯ ಗುರತ ಹಿಡದೀನ

 

261

 

ಹತ್ತೀರ ಕುತ್ತರ ಅತ್ತರ ನಾರಕ್ಕಿ
ಚಿತ್ತರದ ಗೊಂಬಿಯಂಥಾಕಿ  ಹುಡಗೀಯ
ಚಿತ್ತೆಲ್ಲಿ ಅವಳ ಬಗಿ ಎಲ್ಲೊ

 

262

 

ಹತ್ತೂರ ಹಲಕಡ್ಡಿ ಒಬ್ಬನ ತಲೆ ಭಾರ
ಸತ್ತವರೇನ್ಹೊತ್ತ ಒಯ್ತರೊ  ಕೆಲಸಿಲ್ದ
ಕುತ್ತವರೇನ ಖಂಡಾ ಬೆಳಿಸ್ಯಾರೊ

 

263

 

ಹರಕ ಹಾಡಲಿ ಬ್ಯಾಡೊ ತಿರಕ ರಂಡೀಮಗನ
ನೆರಕ್ಯಾಗ ಓದ ತುರಕೀನೊ  ಎಲೆ ಹುಡಗ
ಹರಕ ಮುಚ್ಚೀಲೆ ಹೊಡದೀನೊ

 

264

 

ಹಲಗಣಿ ಹಣಮಪ್ಪ ಮಕ್ಕಳ ಕೊಡಪ್ಪ
ನನಗಲ್ಲ ನನ್ನ ಸೂಳೀಗಿ  ಕೊಟ್ಟರ
ಬಲಕ ಬಂಗಾರ ಜಢಿಸೀನೊ

 

265

 

ಹಲ್ಲೀಗಿ ಜಾಚೇಲಿ ಗಲ್ಲಕ ಅರಿಸಿಣ ಹಚ್ಚಿ
ಎಲ್ಲಿಗಿ ನಡದಾಳೊ ಹೊಯ್ಮಲ್ಲಿ  ಅಕಿ ಗಂಡ
ಕಲ್ಲೀಗಿ ಕುತ್ತ ಅಳ ತಾನೊ

 

266

 

ಹಲ್ಲೀಗಿ ಜಾಚೇಲಿ ಗಲ್ಲಕ ಹಂಚೀ ಬಟ್ಟ
ಬಲ್ಲಂಗ ನಗತ ಬರತಾಳೊ  ಆ ಹುಡಗಿ
ಒಲ್ಲೆಂತ ಇಲ್ಲೆ ಇರತಾಳೊ

 

267

 

ಹಸರ ಕುಬಸದ ಮ್ಯಾಲ ಎಸಳ ಕೂದಲ ಬಿಟ್ಟ
ಕುಸ ಮೋಜಿನ ನಗಿಯ ನಗತಾಳೊ  ನಿನ್ನಂಥಾ
ಕಸಬರಿಗ್ಹೆಂಗ ಒಲತಾಳೊ

 

268

 

ಹಸರ ಕುಬಸದ ಮ್ಯಾಲ ಎಳಸ ಕೂದಲ ಬಿಟ್ಟ
ಬಿಡಲಿಗ್ಯಾತಕ ಕುಂತಾಳೊ  ಹುಡಗೀಗ
ಕುಸಮೋಜಿನ ಬಯಕಿ ಕಾಡ್ಯಾವೊ

 

269

 

ಹಸರಂಗಿ ತೊಟ್ಟಾನ ಬಿಸಲಾಗ ನಿಂತಾನ
ಶಶಿ ಮುಖದವನೊ ನಮಕಾಮ  ನೆರಳೂತ
ಚಂದ್ರಸಾಲ್ಯಾಗ ಸತ್ತನೊ

 

270

 

ಹಳದೀಯ ದಡಿ ಸೀರಿ ಬಳದಿನಮ್ಯಾಲ ಉಟ್ಟಾಳೊ
ಹಳಿ ಭಾಂವಿ ನೀರ ತರತಾಳೊ  ಹಾದ್ಯಾಗ
ಹಳಿಗೆಣಿಯಾಗ ಹಣಿಕಿ ಹಾಕ್ಯಾಳೊ

 

271

 

ಹಳ್ಳದ ಹೊಲಮಾಡಿ ಹವಳ ಮುತ್ತನು ಬಿತ್ತಿ
ಕವಣಿಗಿ ಕಟ್ಟ್ಯಾಳೊ ಹುಲಿಗೆಜ್ಜಿ  ಹೋ ಅಂತ
ಗಿಡ್ಡಿ ಹಾರಸ್ಯಾಳೊ ಗಿಣಿ ಹಿಂಡ

 

272

 

ಹಳ್ಳ ಹರಿಯೂದ ಕಂಡೆ ಗುಳ್ಳಿ ತೇಲೂದ ಕಂಡೆ
ಗುಳ್ಳವನ ಕಂಡೆ ಗುಡಿಶ್ಯಾಗ  ನಮ ಕಾಮ
ಉಳ್ಳ್ಯಾಡುದ ಕಂಡೆ ಬೂದ್ಯಾಗ

 

273

 

ಹಾಡ ಬರತಾವಂತ ಏರೇರಿ ಬರಬ್ಯಾಡೊ
ಹಾಡೀನ ದಿಮ್ಮ ಇಳಿಸೀನೊ  ಎಲೆ ಹುಡಗ
ಅಗಸ್ಯಾಗ ನಿನ್ನ ಹುಗಿಸೀನೊ

 

274

 

ಹಾಡ ಬರತಾವಂತ ಹಾರ್ಯಾಡಿ ಬರಬ್ಯಾಡೊ
ಹಗ್ಗದ ಬಲಿಯ ಒಗದೀನೊ  ಎಲೆ ಹುಡಗ
ಮಗ್ಗಲ ಎಲುವ ಮುರದೀನೊ

 

275

 

ಹಾಡಿದ್ದರ ಹಾಡ್ಬೇಕ ಚೆಲಿವಿದ್ದರ ನೋಡ್ಬೇಕ
ತುರಬ ಇದ್ದರ ಸೆರಗ ತಗಿಬೇಕ  ಹೆಣ್ಣಿನ್ನ
ಗರತಿ ಇದ್ದರ ಮರತ ಬಿಡಬೇಕೊ

 

276

 

ಹಾಡ ಹಾಡಂದರ ನಾಯೇನ ಹಾಡಲೊ
ಹಾಡೀನ ತಕ್ಕ ಹಲಗಿಲ್ಲೊ  ಎದರೀಗಿ
ಹುಡಗನ ತಕ್ಕ ಹುಡಿಗಿಲ್ಲೊ

 

277

 

ಹಾಡ ಹಾಡಂದರ ನಾಯೋನ ಹಾಡಲೊ
ಹಾಡ ನನ್ನಲ್ಲಿ ಹಗೆ ಹಾಕಿ  ವಿಜಾಪೂರ
ಹಳಿ ಮಾಪ ತಂದ ಅಳದೊಯ್ಯ

 

278

 

ಹಾಡೀಗಿ ಹಾಡಿಲ್ಲ ಏಡೀಗಿ ತೆಲಿ ಇಲ್ಲೊ
ಮಾಡ ಬಂದಲ್ಲಿ ಬಿಸಲಿಲ್ಲೊ  ಹೆಣ್ಣೀಗಿ
ಓಡಿ ಹ್ವಾದಲ್ಲಿ ಸುಖವಿಲ್ಲೊ

 

279

 

ಹಾದರಗಿತ್ತಿ ಗುಣ ಹಾಲಿನಂಗನಬ್ಯಾಡೊ
ಹಂಬಲಿಬ್ಯಾಡೊ ಹಗಲಿರುಳ  ಈ ಮಾತ
ತುಂಬಿದ ಹೊಳಿಯಾಗ ಹರಗೋಲೊ

 

280

 

ಹಾದರಗಿತ್ತೀಗಿ ಹಾಂವ ಕಡದರೇನೊ
ಊರ ತುಂಬೆಲ್ಲ ಗೆಣಿಯಾರೊ  ಅವಳೀಗಿ
ಕರಿಕೆ ಬೇರೆಲ್ಲ ಅಗಸುದ್ದಿ

 

281

 

ಹಾದೀಯ ಹೊಲ ನೋಡ ಗೋದಿಯ ತೆನಿ ನೋಡ
ಹೋರೀ ಮೇಸೀನಿ ಇಣಿನೋಡ  ಎಲೆ ಹುಡಗಿ
ಕ್ವಾರಿ ಮೀಸೀಯ ಹುರಿ ನೋಡ

 

282

 

ಹಾರೂರ ಓಣ್ಯಾಗ ಮಾರುದ್ದ ಶ್ಯಾಂವಿಗಿ
ಡೊಣ್ಣಿ ಮ್ಯಾಲ ಡೊಣ್ಣಿ ತಿಳಿತುಪ್ಪ  ಹೊಡದರ
ಹಾರೂನ ಜುಟ್ಲ ನಿಗರ್ಯಾವೊ

 

283

 

ಹಾರೂರ ಓಣ್ಯಾಗ ಆರ್ಯಾರ ಹುಡಗನ್ನ
ಹಾರ್ಯಾರಿ ಒದ್ದರ ಖಬರಿಲ್ಲೊ  ಆ ಹುಡಗ
ಹಾರೂರ ಹುಡಗಿನ್ನ ಬಿಡಲಿಲ್ಲೊ

 

284

 

ಹಾಂವ ಹಗ್ಗವ ಮಾಡಿ ಚೇಳ ಸಿಂಪನು ಮಾಡಿ
ಊದೀನ ಕಡ್ಡಿ ನಗ ಮಾಡಿ  ಹುಡಗೂರು
ಜಾಲಿ ಗಿಡಕೆಡಿಯ ಹೊಡದಾರೊ

 

285

 

ಹಾಸಗಲ್ಲಿನ ಮ್ಯಾಲ ಹಾದ ಹ್ವಾದವರ್ಯಾರ
ಪಾದ ಮೂಡ್ಯಾವ ಪರಿಪರಿ  ಗುರುಪಾದೇಶ
ಹಾದ ಹೋಗ್ಯಾನ ಜಳಕಕ್ಕ

 

286

 

ಹಾಸಗಲ್ಲಿನ ಮ್ಯಾಲ ಹಾದ ಹ್ವಾದವನ್ಯಾರೊ
ಮಾಸ ಮರಿಗುದರಿ ರಾಯಣ್ಣ ನಿನ ಕುದರಿ
ಈಸ ಬಿದ್ದಾದೊ ರಣದಾಗ

 

287

 

ಹುಚ್ಹುಡಗ ಕಾಮಣ್ಣ ಉಚ್ಚೀಯ ಹೊಯ್ದನ
ಬಚ್ಚಲ ತುಂಬಿ ಕುಣಿ ತುಂಬಿ  ನೆರಮನಿಯ
ನಿಚ್ಚಣಿಕೆ ತಂದ ನೆಲಿನೋಡ

 

288

 

ಹುಚ್ಚ ಹಿಡಿಸ್ಯಾಳ ಹುಲಿಗಿಣ್ಣ ತರು ಹುಡಗಗ
ಅಚ್ಛೆ ಮಾಡಿ ಅವಳಪ್ಪ ಬೆಳಿಸ್ಯಾನೊ  ಗಂಡನ
ಇಚ್ಚೇದಾಗಿಲ್ಲದ ನಡದಾಳೊ

 

289

 

ಹುಟ್ಟೀದ ಮನಿಯಿಂದ ಮೆಟ್ಟಲಿಳಿಯುವಾಗ
ಹೊಟ್ಟೀಗಿ ಸಿಡಲ ಬಡದಂಗ  ಕಣ್ಣೀರ
ಕಟ್ಟೊಡದ ಹೊಳಿನೀರ ಹರದಂಗ

 

290

 

ಹುಡಗೀಯ ಬೆನ್ಹತ್ತಿ ಹುಡಗ್ಯಾಕ ಸೊರಗ್ಯಾನೊ
ಹುಡದಿ ಅಡ್ಯಾಡಿ ಹಸದಾನೊ  ಮನಿಮಾಗ
ಮಡದಿ ಇಲ್ಲದಕ ಮರಗ್ಯಾನೊ

 

291

 

ಹುಬಳ್ಳಿ ಹೊಳಿ ಮ್ಯಾಲ ಹುಬ್ಬೀಯ ಮಳಿಯಾತೊ
ಗುಬ್ಬೀಯ ಕಾಲ ಕೆಸರಾತೊ  ಆ ದಿನಾ
ನಿಬ್ಬಣಕ ಬಂದ್ಹುಡಗಿ ಬಸರಾತೊ

 

292

 

ಹೂಸ ಬಿಟ್ಟಾಳಾಕಿ ಕೂಸಿನ ಮ್ಯಾಲ್ಹಾಕ್ಯಾಳೊ
ಹಾಸಿಗಿ ಸುಟ್ಟ ಉರಿ ಎದ್ದ  ಗಂಡನ
ಮೀಸೆಲ್ಲಾ ಸುಟ್ಟ ಕಮರೆದ್ದ

 

293

 

ಹುರಕಡ್ಡಿ ಹುರಿಯೂಳ ಚುರಮೂರಿ ಬೆರಸೂಳ
ಹೊರಕಡಗಿ ಹ್ವಾದಲ್ಲಿ ತಿನಸೂಳ  ಆ ಬಾಲಿ
ಹೊರ ಬಳಕಿ ನೀರ ಕುಡಸೂಳ

 

294

 

ಹೂನೂರ ಹೂಗಾರ ಜಮಖಂಡಿ ಪತ್ತಾರ
ಬಾಗಲಕೋಟ್ಯಾಂವ ಬಳಗಾರ  ಇಡಿಸಿದ ಬಳಿ
ಬಾಗಲಕ ಬಡದ ಬಡದಾಳೊ

 

295

 

ಹೆಚ್ಚೀಗಿ ಹಾಡಿದರ ಮೆಚ್ಚೀಲೆ ಬಡದೀನೊ
ಮುಚ್ಚಳದಾಗದ್ದಿ ತಗದೀನೊ  ಎಲೆ ಹುಡಗಿ
ಉಚ್ಯೀಲೆ ಬಾಯಿ ತೊಳದೀನೊ

 

296

 

ಹೆಂಡಾ ಕುಡದ ಮ್ಯಾಲ ಖಂಡದಡಗಿ ಬೇಕೊ
ರಂಡ್ಯಾರು ಬೇಕೊ ಮಲಗಾಕ  ಬಡದಾಡಿ
ದಂಡಾ ಕೊಡಲಾಕ ಹಣಾಬೇಕೊ

 

297

 

ಹೆರವರ ಹೆಣ್ಣನು ಕಂಡು ಹಿರಿಹಿರಿ ಹಿಗ್ಗೀಯೊ
ತೆರವಾಯಿ ನಿನಗ್ಯಾರು ಗತಿಇಲ್ಲೊ  ಕಮಲದ ಹೂ
ಕೆರಿಯಾಗರಳಿದರ ನಿನಗೇನೊ

 

298

 

ಹೆಸರೀಗಿ ಸಾರ್ಪಾಡ ಮಸರೀಗಿ ನೀರಿಲ್ಲ
ಕುಸಿಲಾದ ಸಿಂಬಿ ಬರಿ ಗೊಡ  ಹೊತಗೊಂಡ
ಉಸಿರ್ಹಾಕಿ ಡೋಣಿ ಏರ್ಯಾಳೊ

 

299

 

ಹೊನ್ನಿಯ ಹುಳದಂಗ ಮುನ್ನೂರ ದೀವಟಿಗಿ
ಹೊನ್ನಹಿಪ್ಪರಗಿ ಬಯಲಾಗೊ  ರಾವತರಾಯ
ಬನ್ನಿಯ ಮುಡದ ಬರತಾನೊ

 

300

 

ಹೊಳೆಯ ಆಚೀನ ಹೆಣ್ಣ ಮಳಿಯ ಸುದ್ದಿಯ ಹೇಳ
ಮಳಿಬಾಳ ಇಲ್ಲಿ ಛಳಿ ಬಾಳ  ಬೆಳದಾವ
ಬಿಳಿಮುತ್ತಿನಂಥ ಬಿಳಿಜ್ವಾಳ

 

301

 

ಹೋಗವನ ಕೈಯಾಗ ಹೊಳೆವ ಉಂಗರ ಛಾಯಾ
ಹೋಗೋ ನಿನ ದಾರಿ ಬಲು ದೂರ  ಸಂಗಮದ
ತೇರ ರತಬ್ಯಾವೊ ನಿನಗಾಗಿ

 

302

 

ಹೋಗೂತ ಹೊಸಕೋಟೆ ಬರತ ಬಾಗಲಕೋಟೆ
ಬಂಗಾರದ ಕೋಟೆ ಬಬಲಾದಿ  ಕೆಳಗಿನ
ಸಿಂಗಾರದ ಕೋಟೆ ಸೀತೀಮನಿ

 

303

 

ಹೊಳ್ಳೊಳ್ಳಿ ಹಾಡಿದರು ಹುಳ್ಳಾನುಚ್ಚಿನ ಹಾಡ
ಎಳ್ಳಟ್ಟು ಗಂಧ ಅವಕಿಲ್ಲೊ  ಎಲೆ ಹುಡಗ
ಕಳ್ಳಿಸಾಲಾಗ ಅಳ ಹೋಗೋ

 

304

 

ಹೋಳಿಗಿ ಹಂಚಿಟ್ಟು ಮ್ಯಾಳೀಗಿ ಏರ್ಯಾಳೊ
ಯಾಕೇನೊ ಗೆಣೆಯ ಬರಲಿಲ್ಲೊ  ಮನಿ ಮೂಳ
ಸಾಕಾದ ಗಂಡ ಉಣ ಏಳೊ

 

305

 

ಹೋಳೀ ಹಾಡಂದರ ಸೂಳ್ಯಾರ ಹಾಡಂತ
ಬಾಳುಳ್ಳವರೆಲ್ಲ ತಿಳದಾರೊ  ಹೊಲಿಯರ
ಹೋಳ್ಯಾಗಿ ಹುಟ್ಟಾಳೊ ರತಿದೇವಿ

 

306

 

ಹೋಳೀ ಹುಣ್ಪಿಗಿ ಹುಡಗಿ ಹೋಳೀಗಿ ಮಾಡ್ಯಾಳೊ
ಬೋಳೆಮ್ಮಿ ತುಪ್ಪ ಕಾಸ್ಯಾಳೊ  ಆ ಹುಡಗಿ
ಹೋಳಬಾಯ್ಹಿಡಿದು ತುರಕ್ಯಾಳೊ

 

307

 

ಹೋಳೀ ಹುಣ್ಣಿವಿ ಬಂತು ಹೋಳಿಗಿ ಮಾಡುದಬಂತು
ಸೂಳ್ಯಾರಿಗಿ ಬಂತೊ ಪಡಿಪಾಟೊ  ಹುಡುಗರಿಗೆ
ಹೊಯ್ಕಳ್ಳುದು ಬಂತೊ ಮನಿಮನಿಗೆ

 

308

 

ಹೋಳೀ ಹುಣ್ಣೀಗಿ ಮೇಳಾಗಿ ಹಾಡೂನ
ವಾಳಿತನ ಬ್ಯಾಡ ನನ ಗೆಣತಿ  ಊರೆಲ್ಲ
ಕೇಳಾಕ ಬರತೈತಿ ನಮ್ಹಾಡ

 

309

 

ಹೋಳಿ ಹಾಡುದಕಂತ ಹೇಳಿಕಳಿಸಿದರೂನು
ಸಾಳ್ಯಾರ ಹುಡಗಿ ಬರಲಿಲ್ಲ  ನಮ್ಮೂರ
ಸೂಳ್ಯಾರಿಗಂಜಿ ಅಳತಾಳೊ

 

310

 

ಹೋಳೀ ಹಾಡುಗಳನ್ನು ಹೇಳಿಕೊಟ್ಟವರ್ಯಾರೊ
ಸೂಳೀಯ ಮಗ ಶಿವರಾಯ  ಆ ಶ್ಯಾಣ್ಯಾ
ಹಾಳಾಗಿ ಹ್ವಾದ ಹಾಡ್ಯಾಡಿ

 

* * *