1)      ಹಳ್ಳದ ದಂಡೀಲೆ ಹಸಿರು ಬಣ್ಣದ ಹಕ್ಕಿ
ಬಸಲಂಗಿ ಬಾಯಿ ಬಿಡತೈತಿ
ಆ ಹಕ್ಕಿ ಕುಶಲದ ನಗಿ ನಗತೈತಿ

2)      ಕಡಪಟ್ಟಿಯ ಮನೆಯವಳ
ಕಡಗದ ಕೈಯವಳ ಹುಡುಗ
ಬರತಾನ ಕರಕೂಳ ಎಲೆ ಹುಡುಗಿ
ಕಣದನ್ನ ಗೋಧಿ ಅಳಕೋರ

3)      ಬೇಲಿ ಮ್ಯಾಗಿನ ಹೂವು ಬೆಳ್ಳಗಿದ್ದರೇನ
ಮಲ್ಲಿಗಿ ಹೂವಿನಂತೆ ಮನಿಗಂಡನ ಬಿಟಗೊಂಡು
ಹುಲ್ಲ ಕೊಯ್ಯುವನ ಹುಡಿಕ್ಯಾಳ

4)      ಕಾಮಕಲ್ಲಿಗಿ ಸೋತ ಭೀಮ ಬಿಲ್ಲಿಗೆ
ಸೋತ ಅರ್ಜುನನ ಸೋತ ಕಣದಾಗ ಧರ್ಮರಾಜ
ತಾ ಸೋತ ತನ್ನ ಮಡದಿಗೆ

5)      ಕಾಮಣ್ಣನ ಹೆಂಡರು ಕಾಡಿಗೆಗಣ್ಣರು
ಯ್ಯರ ಕೂರಿದರು ತಿರುಗಲಾರರು ಅವರು
ಹದ್ದಿನ ಕ್ಷೇತ್ರ ಕಂಡು ತೀರಿಗ್ಯಾರು

6)      ಹತ್ತು ಸಾವಿರ ಮರೆಗುದುರಿಯ ಕೊಟ್ಟರ
ರಕ್ತದ ಕಾವಲಿ ಹರಿಸ್ಯಾಳ
ಮತ್ತೇನ ಬೀಡ್ಯಾಳ ಕಿತ್ತೂರ ಚೆನ್ನಮ್ಮ
ಬ್ರಿಟಿಶರ ಶಿರವ ಬೇಕ ಎಂದಾಳ

7)      ಕಾಮ ಕಲ್ಲಿಗೆ ಸೋತ
ಭೀಮ ಬಿಲ್ಲಿಗೆ ಸೋತ
ರಾವಣ ಸೋತೋ ರಣದಾಗೋ

8)      ನೀ ಎಂದು ಹಾಡಿದ್ದೇ ನಿಮ್ಮಪ್ಪಾ ಎಂದ
ಹಾಡಿದ್ದ ಬೀಲ್ಯಾಗ ಲೆಕ್ಕ ಹಿಡಿತ್ತದ್ದ  ನಿಮ್ಮಪ್ಪಗ ನಾನಾ
ಕಲ್ಲು ಒಗೆದು ಬಿಡಿಸೇನೋ

9)      ಯಾಕಪ್ಪ ನನಗೆಣೆಯ ಮಾರಿಸಣ್ಣದೈತಿ
ವಾಚ್ಯಾಡಿಯೇನ ಮನಿಯಾಗ  ನಿಮ್ಮವ್ವ
ಹೋಳಿಗೆ ಮಾಡ್ಯಾಳ ಉಣಹೋಗ

10)      ಚಂದುಳ್ಳ ನಮಕಾಮ ದುಂದು ಎದ್ದು ಸುಡುವಾಗ
ತಂಗಿದ್ದರ ಎಷ್ಟು ಮರುಗುವಳು
ತಾಯಿದ್ದರ ಎಷ್ಟು ಅಳುವಳು

11)      ಕುಡಗುಂಟೆ ದಾರ್ಯಾಗ ಗಿಡ ಸಣ್ಣಮಲ್ಲಿಗೆ ಕಿಡಗೇಡಿ
ನಮ್ಮ ಕಾಮಣ್ಣ  ಕಂಡರ
ಗಿಡಕ ಐದ ಮಲ್ಲಿಗಿ ಮೂಡಿಶ್ಯಾನ

ಹೋಳಿ ಹಬ್ಬದ ಹಾಡುಗಳಲ್ಲಿ ಶೃಂಗಾರದ ಹಾಡುಗಳನ್ನು ಒಂದು ಮುಖ್ಯ ಪ್ರಕಾರವಾಗಿ ವಿವರಿಸಬಹುದು. ಕಾಮರತಿಯರ ಶೃಂಗಾರವನ್ನು ಜನಪದರು ತಮ್ಮ ಆಡುನುಡಿಯ ಭಾಷೆಯಲ್ಲಿ ಶೃಂಗಾರದ ವಸ್ತುಗಳಿಗೆ ಕಾಮರತಿಯರನ್ನು ಪ್ರತ್ಯಕ್ಷವಾಗಿ ಹೋಲಿಕೆ ಕೊಡುವುದರಿಂದ ಅನೇಕ ಅಶ್ಲೀಲ ಶಬ್ದಗಳನ್ನು ಬಳಸಿ ಶೃಂಗಾರದ ಪದಗಳನ್ನು ಹಾಡಿ ಸಂತೋಷಪಡುವರು. ಇಲ್ಲಿ ಮಾಮೂಲಾಗಿ ಕೆಲವು ಅಶ್ಲೀಲವಲ್ಲದ ಹಾಡುಗಳನ್ನು ಮಾತ್ರ ಆರಿಸಿಕೊಂಡು ಅಶ್ಲೀಲವಾದ ಅನೇಕ ಶೃಂಗಾರದ ಹೋಳಿ ಹಾಡುಗಳನ್ನು ಕೈಬಿಡಲಾಗಿದೆ.

ಹಂತಿ ಪದಗಳು :

             1)      ತುಂಬಿದ ಹೊಳಿಯಾಗ ಕೊಂಬ ಕಾಣಿಸುತಾವ
ಬಂಗಾರದ ಇಣಿಯ ಬಸವಣ್ಣ ಬರುವಾಗ
ಕಂದವ್ವ ಕೈ ಮುಗಿದಾಳ

2)      ಬಸವಣ್ಣ ಹುಟ್ಟಲಿ ಹೊಸಪೇಟೆ
ಕಟ್ಟಲಿ ರಸಬಾಳಿ ಕಬ್ಬ ಜಿಗಿಯಲಿ ನಮ್ಮೂರ
ಬಸವಣ್ಣನ ತೇರ ಎಳೆಯಲ್ಲಿ

3)      ಬಸವಣ್ಣನ ಹಣೆಯ ಮ್ಯಾಲೆ ಹಸನುಳ್ಳ
ವಿಭೂತಿ ಹಸರ ಶಲ್ಯವ ಮೈಮ್ಯಾಲೆ ಹಾಕಿಕೊಂಡ
ಹಸನಾಗಿ ಹಂತಿ ತಿರುಗ್ಯಾನ

4)      ಬಸವ ಬಂಡಿಯ ನೇರಿ ಶಿವನು ನಂದಯನೇರಿ
ಪಾರ್ವತಿ ರಥವೇರಿ ಬರುವಾಗ
ಬಂದಂತ ಮೂಡ ಬಯಲಾಗಿ

5)      ತಳಕಲ್ಲಿ ಹಾರೇಗ ತಳಕನಾಗರ
ಕಂಡೆ ಬಳಕುತ ಬರುವ ಇವನ್ಯಾರ ನಮ್ಮ ಬಸವ
ಸರಪಣಿ ಗುರುತ ಹಿಡಿದಾನ

6)      ಸಂಗಮದ ದಾರ್ಯಾಗ ಸಾಲ ತೆಂಗಿನಮರ
ಟೊಂಗಿ ಟೊಂಗಿಗೆ ಎಳಿಗಾಯಿ ನಮ ಕಾಮ
ಬಲ್ಲಲ್ಲೇ ಹೊಡರ ಬಿಳಿಕಾಯಿ

7)      ಬೆಳ್ಳನ್ನ ಎರಡೆತ್ತ ಬೆಳ್ಳಿಯ ಬಾರಕೋಲು
ಬಂಗಾರದ ಸಡ್ಡಿ ಬಲಗೈಯಾಗ ನಮ್ಮ ಬಸವ
ಹೊನ್ನ ಬಿತ್ತೇವೋ ಹೊಲಕೆಲ್ಲ

8)      ಹಂಡ ಹೋರಿಯ ಮ್ಯಾಲ
ಮಂಡ ಮೂಗಿನ ಹೆಣ್ಣ
ಉಂಡಿ ಕೊಡತೇನಿ ಉಡಿ ಒಡ್ಡ
ಬೆಂಡಕೊಡತೇನಿ ಬಿನ್ನಹತ್ತ

9)      ತಂಗಿನ ಕರಕೊಂಡ ಕರಿದತ್ತ ಹೊಡಕೊಂಡ
ತಂಗಿ ಮಕ್ಕಳಿಗೆ ಬಿಡಿಲೆಂದೋ ಅಣ್ಣಯ್ಯ
ವಲ್ಲಿ ಮರಿಮಾಡಿ ಹಿಡಿದಾನೋ

10)      ಮುತ್ತಿನ ಮೂಗುತಿ ಮುತ್ತ ಮಾಡಿಸಿಕೊಟ್ಟ ಮುತೈದಿ
ತಾನ ಶಿವಕೊಟ್ಟ  ಶಿವರಾಯ
ಮಾದೇವ ಕೊಟ್ಟ ಫಲಗೋಳ

11)      ಆ ಕಲ್ಲು ಈ ಕಲ್ಲು ಹಸರ ಹಳದಿಯ
ಕಲ್ಲು ಮುತ್ತಿನ ಕಲ್ಲ ಮುದಿಗಲ್ಲ  ಮುಂದಿರುವ
ರತ್ನದ ಕಲ್ಲ ತಳಕಲ್ಲ

ಹೋಳಿ ಹಬ್ಬದಲ್ಲಿ ಈ ಹಂತಿಯ ಹಾಡುಗಳನ್ನು ಕೂಡ ಹಾಡುವರು. ಇಲ್ಲಿಯೂ ಕೂಡ ಶೃಂಗಾರದ ಹಾಡುಗಳೇ ಸಾಮಾನ್ಯವಾಗಿ ಇರುವವು.

ಒಗಟಿನ ಹಾಡುಗಳು :

             1)      ಕಾಗಿಯ ಕಾರಿಯಲಿ ಕುಳಬಾನ ಸುರಿಮಲಿ
ಕರಿಹುಡಿಗಿ ನನಗ ಒಲಿಮಲೋ  ನಂದೇಶ್ವರ ಕರಿ
ಹನಮಗ ಕಾಯಿವಡಿದೆನೋ

2)      ಒಂಟಿ ಗೊಂದಿನ ಎತ್ತು ಗಂಟಲ ಮುರು ಇತ್ತು
ಗಂಟಲ ದಾವಳ ಮೇಯುತ್ತಿತ್ತು ನಮ್ಮ ಊರ
ನಮ್ಮ ಹಾರ ಹಾಡ ಬಲ್ಲಣ್ಣ ಹೊಡದೇಳ

3)      ಬಾಳಿ ಪಟ್ಟದ ಸೀರಿ ಬಾಯಾಗ ಎಳದ
ಬಾಲಾಗ ಮಲಿನ ಕೊಡತಾಳ ದ್ಯಾಮವ್ವ
ಬಜಾರ ಹಿಡಿದ ಬರತಾಳ

ಈ ಒಗಟುಗಳಲ್ಲದೆ ಇನ್ನು ಅನೇಕ ಒಗಟುಗಳನ್ನು ಹೇಳಿ, ಹಾಡಿ ಒಗಟುಗಳನ್ನು ಒಡೆದು ಸಂತೋಷದಿಂದ ಹೋಳಿಹಬ್ಬದಲ್ಲಿ ಜನಪದರು ಸಂತೋಷಪಡುವುದು.

ಈ ಒಗಟುಗಳಲ್ಲದೇ ಇನ್ನು ಅನೇಕ ಒಗಟುಗಳನ್ನು ಹೇಳುವರು. ಅವು ಬಹಶಃ ಎಲ್ಲವೂ ಅಶ್ಲೀಲ ಇರುವುದರಿಂದ ಅವುಗಳನ್ನು ಇಲ್ಲಿ ಕೈಬಿಡಲಾಗಿದೆ. ಮೇಲೆ ವಿವರಸಿದ ಒಗಟುಗಳ ಮಾದರಿಗಾಗಿ ಆರಿಸಿಕೊಳ್ಳಲಾಗಿದೆ.

ನೀತಿ ಹಾಡುಗಳು :

             1)      ಇರುವಾಗ ಇದ್ದಿನ ಹೋಗುವಾಗ ಹೋದಿನ
ನಿನ್ನ ಸಂಗ ಮಾಡಿ ಕೆಟ್ಟೆನೊ  ಶರಣರ
ಹಾದಿಯ ಬಿಟ್ಟು ಸಂಪೂರ್ಣ ಕೆಟ್ಟೆನೋ

2)      ಓಡಿ ಹೋಗಲಿಬ್ಯಾಡ ಹಾರಿ ಬೀಳಲಿಬ್ಯಾಡ
ಎಂಡಿಯ ತೆಳಗ ತಿಳಿನೀರ  ಮನದಾಗ
ತಿಳಿನೀರ ಕುಡಿಸಿ ನಿಚ್ಚಳಾಗ

3)      ಒಳ್ಳೆಯ ಒಳಗಿಟ್ಟು ಜೊಳ್ಳು ದಾನವ ಮಾಡಿ
ಕೊಳ್ಳಿ ಬೆಳಕೀಲಿ ಶಿವಪೂಜೆ  ಮಾಡಿದರೆ
ಶಿವನೆಂದು ಒಲಿಲಾರ ತಿಳಿ ಹುಡುಗಿ

4)      ಗುರುಕೊಟ್ಟ ಗುಳದಾಳಿ ಮನಿಯಾಗ ಇಟಗೊಂಡು
ಬರಿಗೊಳ್ಳಿಲೆವಳು ತಿರುಗಿದ  ಹೆಣ್ಣಿಗೆ
ಕಡಿ ತನಕಾ ನರಕಾ ತಪ್ಪದೋ

* * *