ಕೂಡಿದ ಜನಕ್ಕೆ ವಿನಂತಿ ಪದ :
ಕೂಡೈತಿ ಜನಾ ಕಲಕಲ ಮಾಡಬ್ಯಾಡ್ರಿ ಗುಲ್ಲಾ ಮಾಡಬ್ಯಾಡ್ರಿ ಗುಲ್ಲಾ ॥
ನಾವು ನಾಚೀ ನಾವು ನಾಚಿ ಸುಮ್ಮನ ನಿಂತೇವಲ್ಲೇನ ॥
ಗಂಡು ಹೆಣ್ಣು ಜನಾ ಕೂಡೈತಿ ಸಭಾ ವಳ್ಳಿ ಭರತಿ ಸಭಾ ಏಳ್ಗೆ ಭರತಿ ॥
ನಮ್ಮ ಮ್ಯಾಲೆ ನಮ್ಮ ಮ್ಯಾಲೆ ಇರಬೇಕೊ ನಿಮ್ಮ ಪ್ರೀತಿಯನಾ ॥ಕೂಡೈತಿ ॥
ನಮ್ಮ ತಂದಿ ಶಂಕರ ಮೂರುತಿ ಲೋಕಕ್ಕೆ ಅದಿಪತಿ ಲೋಕಕ್ಕೆ ಅಧಿಪತಿ
ಮುತ್ತಿನ ಮುತ್ತಿನ ತುರಾಯಿ ಒಳ್ಳೇ ಭರತಿಯನಾ ॥ಕೂಡೈತಿ ॥
ಪ್ಯಾಟಿ ರಸ್ತೆದಾಗ ಬಾಳ್ಯಾ ಮತ್ತು ಗಂಗವ್ವನ ಭೇಟಿ ಸಂವಾದದ ಪದ :
ಬ್ಯಾಳ : ಯ್ಯಕ ? ತಂಗಿ ಎಲ್ಲಿಗ್ಹೊಂವ ಅವಸರಾ ಆಗಿದೊಳ್ಳೆ ಶೃಂಗಾರಾ
ಬಡವರು ನಾವು ನಿಮಗೆಲ್ಲಿ ದರಕಾಲ ॥ಪಲ್ಲವಿ ॥
ಮಾರಿ ಎತ್ತಿ ನೋಡವಲ್ಲಿ ಒಂದ ಚೂರಾ ಯಷ್ಟ ? ನಿನ್ನ ಬಡಿವಾರಾ
ಲಗೂ ಮಾಡಿ ಹೇಳಿಕೂಡ ನಿನ್ನ ಹೆಸರಾ
ದ್ವಾಡ ಮಾಡಿ ಹಿಡದ ಹೊಂಟಿ ನೀ ಬಾಜಾರಾ ವಸ್ತು ವಡವಿ ಅಲಂಕಾರಾ
ಶೀಲವಂತಿ ಹಣೆ ಮ್ಯಾಲೆ ಚಂದಿರಾ ಗಂಡ ಮೆಟ್ಟ ಗದುಗಿನ ಶಾಪುರಾ
ಬಸವಣ್ಣ ದೇವರಾ ಆತನ ಪಾದಕ ಮಾಡುವೆ ನಮಸ್ಕಾರಾ ॥
ಗಂಗವ್ವ :ಬಿಡೊ ದಾರಿ ಬಿಡೊ ದಾರಿ ಹುಡುಗಾಟ ತರವಲ್ಲಾ
ನಿನ್ನ ಗುರುತಾ ಖುನಾ ನಮಗಿಲ್ಲಾ ನಮಗೆಲ್ಲಾ ॥ಬಿಡೋದಾರಿ ॥
ಕಾಡಬ್ಯಾಡಾ ಕಾಡಬ್ಯಾಡಾ ಬೀಳುವೆ ನಿನ್ನ ಕಾಲಾ ಹೊತ್ತು ಏರಿ
ಬಂದೈತೊ ನೆತ್ತಿಮ್ಯಾಲಾ ನೆತ್ತಿಮ್ಯಾಲಾ ಬಿಡೋ ದಾರಿ ॥
ರೂಢಿಗೊಡೆಯಾ ರೂಢಿಗೊಡೆಯಾ ಶಾಪೂರ ಬಾಲಾ ಆಗತ ಕಂಡು
ಹೇಳ್ಯಾರೋ ಹೊಸ ಬ್ಯಾಲಾ ಹೊಸ ಖ್ಯಾಲಾ ಬಿಡೋ ದಾರಿ ॥
ಗಂಡಮೆಟ್ಟ ಶಾಪೂರ ಪುಂಡ ನನ್ನ ಗಂಡ ಭಾದ್ದೂರಾ
ನನಗ ಕೊಟ್ಟೆಲೆ ಹೊಂಗಲ ಶಾಲೇನಾ ನನ್ನ ತವರ ಮನಿಯ ಬೈಲವಾಡನಾ
ದೇಶದೊಳು ಶಾಪೂರ ಮೂರುತೇನಾ ಅಲ್ಲಿ ನೆಲೆಸ್ಯಾನೊ ಬಸವಣ್ಣ ದೇವರೇನಾ
ಆತನ ಪಾದಕ್ಕ ಮಾಡುವೆ ನಮಸ್ಕಾರೆನಾ ಗಂಡ ಮೆಟ್ಟ……..॥
(ರಸ್ತಾ ಪಡೆದು ಸಂಗಣ್ಣ ಬಾಳಣ್ಣ ಬರುವರು)
ಸಂಗ್ಯಾ : ಸೀಸಾ ಹೊಯ್ದಂಗಾತೋ ದೇಹದಲ್ಲಿ ಕಾಸೀ ಆಕಿನ ಇದ್ದಲ್ಲೆ ತರಬೇಕೊ
ಬಾಳಾ : ಮನ ವಡಸಿ ಉಂಗುರಗೂದಲ ಬೈತಲ ವಳ್ಳೆ ತರಳಾ ಹೊಟ್ಯಾಗಿನ ಕರುಳ ಆಗೈತೈತೋ ಕಸವಿಸಿ ॥ಆಕಿನ ಇದ್ದಲ್ಲಿ ತರಬೇಕೊ ಮನವಡಸಿ ॥ಸೀಸಾ ॥
ಪದ್ಮಿನಿ ಜಾತಿ ಹೆಣ್ಣ ನಿವಳ ತುಟಿ ಕೆಂಪು ಹವಳ ಕಂಡೆನೋ ಪುರಮಾಸಿ
ಆಕಿನ ಇದ್ದಲ್ಲಿ ತರಬೇಕೊ ಮನವಡಸಿ ॥ಸೀಸಾ…॥
ಶಾಪೂರ ಶಂಕರಸ ಹರಸೀತಗದಾರೊ ಧರತಿ ಆಗತೈತೊ ಕಸವೀಸಿ ॥ಆಕೀನ….॥
ಸಂಗ್ಯಾ :ಬಾಳ್ಯಾ ಕೇಳೋ ಮಾತೈತಿ ನನ್ನೊಂದಾ
ಆಕಿ ಬಾಗಿಲ ಮುಂದ ಖೂನಾ ಹಿಡಿಯೊ ಮರವೈತಿ ಟೆಂಗಿನ
ನೆಟ್ಟಗ್ಹೋಗೋ ಪ್ಯಾಟಿಯ ರಸ್ತೆ ಹಿಡದಾ ಮಾರ್ಕೆಟೀನ ಮುಂದ
ಮನಿ ಪ್ರಿತೋ ಮೂರ ಮಜಲಿಂದ ॥
ಬತ್ತಿ ಕಟ್ಟೋ ಬೆಂಕಿಯ ನೆವದಿಂದ ಬತ್ತಿ ಕಟ್ಟೋ ಬೆಂಕಿಯ ನೆವದಿಂದಾ
ಆಕಿ ಬರತಾಳೋ ವಳಗಿಂದ ಗಪ್ಪನೆ ಕುಂದ್ರಪ್ಪಾ ನೆಲ ಹಿಡದಾ ॥
ಮೆಲ್ಲಕ-ಎಳಿ ತಗಿ ಮಾತಿಂದ ಮೆಲ್ಲಕ ಏಳಿ ತಗಿ ಮಾತಿಂದ
ಬಿಳಬೆಳಸ್ಹೇಳೋ ನಂದ – ಊರಾಗ ಹಿರೇತಾನ ಸಂಗ್ಯಾಂದ ನಾ
ಗಂಗವ್ವಾ : ಯಾರಪ್ಪಾ ಯಣ್ಣಾ ನೀನೂ ಇಲ್ಲಿಗೆ ಬಂದ ಕಾರಣವೇನು ?
ಬಂದ ಕಾರಣವೇನು ? ಗುರುತು ನಮಗೇನು ?
ಬಂದ ಬಗಿ ಬಲ್ಲೆ ನಾನೂ ಪ್ಯಾಚ್ಯಾಗ ಭೇಟಿಯಾಗಿದ್ಯೋ ನೀನೂ
ಭೇಟಿಯಾಗಿದ್ಯೊ ನೀನೂ ಬಾಳಣ್ಣ ಹೌದೇನು ?
ಬಾರಪ್ಪ ವಳಗ ನೀನೂ ಯಾರ್ಯಾರಿಲ್ಲಾ ಅಂಜಬೇಡಪ್ಪಾ ನೀನು ॥
ಅಂಜಬ್ಯಾಡಪ್ಪಾ ನೀನು ? ಭಯವು ನಮಗೇನು ? ॥
ಶಾಪುರ ಶಂಕರನೂ ಇಂದು ನಮಗ ಕೂಡಿಸಿ ಕೊಟ್ಟಾನು
ಕೂಡಿಸಿ ಕೊಟ್ಟಾನು ? ಹೇಳಲೆ ಇನ್ನೇನು ? ॥ಬಾರಪ್ಪ ವಳಗ ॥
ಉತ್ತರ ಕರ್ನಾಟಕದ ಬಯಲಾಟದ ಪ್ರಕಾರಗಳಲ್ಲಿ ಸಂಗ್ಯಾ ಬಾಳ್ಯ ನಾಟಕವು ಸಣ್ಣಾಟ ಎಂದು ಪ್ರಸಿದ್ಧಿ ಪಡೆದಿದೆ. ಇದರ ವಸ್ತು ಸಮಾಜದಲ್ಲಿ ಗಂಡು ಹೆಣ್ಣಿನ ಪರಸ್ಪರ ಕುಟುಂಬ ಸಮಾಜ ಹಾಗೂ ಊರಿಗೆ ವಿರೋಧವಾಗುವ ರೀತಿಯಲ್ಲಿ ಪರಸ್ಪರ ಪ್ರೀತಿಸುವ ಹಾಗೂ ಕೊನೆಗೆ ಕೊಲೆಯಾಗಿ ಕೊನೆಗೊಳ್ಳುವ ಸ್ಥಿತಿಯಲ್ಲಿ ಇರುವುದರಿಂದ ಇದರಲ್ಲಿ ಬರುವ ಗಂಡು ಹೆಣ್ಣುಗಳ ಮಾತುಗಳು ಅಶ್ಲೀಲವಾಗಿರುವುದರಿಂದ ಅವುಗಳನ್ನು ಕಾಮನಹಬ್ಬದಲ್ಲಿ ಕಾಮರತಿಯರ ಸಂಕೇತವಾಗಿ ಸಂವಾದದ ರೂಪದಲ್ಲಿ ಹಾಡುವರು. ಅವುಗಳಲ್ಲಿ ಕೆಲವು ಮಾದರಿಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ. ಅಶ್ಲೀಲವಾದ ಇನ್ನು ಅನೇಕ ಹಾಡುಗಳನ್ನು ಕೈಬಿಡಲಾಗಿದೆ.
ಕಥನ ಕವನಗಳು :
ಕಾಮ ಕ್ರೋಧ ಎಂಬವ ಕಾಮ ಆಯಿತು
ಬಳಲಿಕವ್ವನ ಹೊಟ್ಟೆಲೇ ಹುಟ್ಟಿ ಬಂದ ಕಾಮ
ಹುಣ್ಣಿಮೆದಿನ ಹುಟ್ಟಿ ಬಂದನು ಕಾಮ
ಬಳಲಿಕೆವ್ವನ ಹೊಟ್ಟೆಲೀ ಹುಟ್ಟಿ ಬಂದನು ಕಾಮಣ್ಣ
ಸುಗ್ನನಾಮ ಸಂವತ್ಸರ ದಶಮಿ ಮೀ
ರಿ ಎಳೆವುದು ತೇರ
ಹನ್ನೆರಡು ವರ್ಷದ ಹುಡುಗನು ಬಾರ
ಶಿವ ಮುನಿದನು ಶಂಕರ
ಬಾಳಿ ಸುಳಿಯಂಗ ಬೆಳೆದಿದ್ದನವ
ಬಿಂಡಕ ಜ್ವರ ತಿನ್ನುತಿದ್ದವ
ಹೋಳಿ ಕಾಮನಾಕಾರ
ಕಿವಿಯ್ಯಗ ಇಟ್ಟಿದ್ದನು ಮೇಲ್ಮುರುವ
ಧಡಿತೋರ ಬ್ಯೂಟಿನ್ನಂಗಿ
ರುಮಾಲ ಸುತ್ತಿದ್ದನು ಜರತಾರಿ
ಹೋಳಿ ಕಾಮವನಾಕಾರ
ಬಳಲಿಕೆವ್ವೆನ ಹುಟ್ಟಿ ಬಂದ ನಮಕಾಮ
ಇಟಗಿ ಬಿಟ್ಟು ಹೊಂಟನ ಊರ ಹೊರಗ
ಕಟಗಿ ಹೊರಿ ಬಂದಾವೋ ಇದರೀಗೆ
ಗುದ್ದಲಿ ಶಲಕಿ ಹೊತ್ತಾರೋ ಹೆಗಲಮ್ಯಾಲೆ
ಬರೆ ಬುಟ್ಟಿ ಹಿಡಿದಾರೋ ಬರೆ ಕೈಯಾಗ
ತಾಯಿ ಹೇಳತಾಳ ಮಗನಿಗೆ
ಅಪಶಕುನ ಆದೀತು ನಮಗ
ಹಿಂದಿನ ರಾತ್ರಿಯಲ್ಲಿ ಸ್ವಪ್ನ ಬಿದ್ದಿತ್ತು
ಮದುವೆಯಾಗುತ್ತಿತ್ತು ಮಗನಿಗೆ
ಚಂದ್ರ ಪೂಜೆ ಕಟ್ಟಿಸ್ಯಾಳೋ ದೇವರಿಗೆ
ದಾಸೋಗ ಮಾಡ್ಯಾಳೋ ದೇವರಿಗೆ
ಮುದ್ರಿ ಹಾಕ್ಸಿ ಬಿಟ್ಟಾಳೊ ಮಗನಿಗೆ
ಕಂಚಾಣ ಕೊಟ್ಟಾಳೋ ದಾಸರಿಗೆ
ಆಗ ಬಿಟ್ಟರೋ ಹಗಣ್ಯಾರ
ಗುಮಗೋಳಕ ಹೋಗುದು ಒತ್ತರ
ನಿಂತು ಬಾಳ ಅವ್ರ ಚಿಂತಿ ಮಾಡತಾರ
ಅಂತಃಕರಣವಿಲ್ಲ ದೇವರಿಗೆ
ಹೊಳಿಯಾಗ ಹೋಗಿ ಊಟಕ್ಕಕುಂತಾರ
ಸವಿ ಹತ್ತವಲು ಚೂರ
ರೊಟ್ಟಿ ಕೊಟ್ಟಾರು ಹುಡುಗನ ಕೈಯಾಗ
ಪಟ್ಟಂತ ಕಡಿಲಿಲ್ಲ ಬಾಯೊಳಗೆ
ತೇರ ಸಾಗಿತೇನು ಸುದ್ದಿಕೇಳಿ
ರೊಟ್ಟಿ ಜಿಲ್ಲೆದನು ನೀರಾಗ
ಅಬ್ಬರದಿಂದ ಪರಿಸ್ಯಾಗ
ಕಬ್ಬಿಣ ಚೂರ ಅವನ ಕೈಯಾಗ
ಸಿಕ್ಕಿ ತಂದ ಬಾಳ ಪ್ರೇಮದಿಂದ
ತಿನ್ನುತ ನಿಂತನು ಜಾತ್ರ್ಯಾಗ
ಬಡಬಡ ಹೋದನು ಊರಾಗ
ತಡ ಮಾಡದ ಬಿದ್ದಾನೋ ಗಾಲ್ಯಾಗ
ಕುಳ್ಳುಪುಟ್ಟಿ ಬಿದ್ದವರ್ರಿ ಭೂಮಿ ಮ್ಯಾಲ
ರಕ್ತ ಹರಿದಿತ್ತು ಧರಣಿಗೆ
ತಾಯಿ ತಂದೆಗೆ ಮುಟ್ಟಿತು ಮಗನ ಸುದ್ದಿ
ಮುಗಿಲ ಹರದ ಬಿದ್ದಾಂಗಾತು ತಾಯಿ ತಂದೆ ಮ್ಯಾಗ
ಅವಾಗ ಬಂದಾಳೋ ಅವನೆಂಡ್ತಿ
ಮಾರಿ ನೋಡತೇನಿ ಅಂತಾಳ
ಅತ್ತು ಕೊರಳಿಗೆ ದುಃಖ ಮಾಡತಾಳ
ಹೆಂಗತಗಿಬೇಕೋ ರಂಡತನ
ಚಮತ್ತ ಬಂದರು ಜನರು
ಪಂಚರ್ನ ಕರಿಸ್ಯಾರೋ ಸಭಿದಾಗೆ
ಹೆಣ ಬಾತಿತಂತ ಅಪ್ಪಣಿ ಕೊಟ್ಟಿದ್ದಾರೋ
ನಮಗ ಬಂದಿತೋ ಬಾಳ ಗೋರ
ಕಾಳಿ ಸನಾದಿ ನಗಾರಿ ನಂಬತ್ಯ ನೋಡದಾಂಗ
ಪಲ್ಲಕಿ ಹೊರಗೆ ಹೊಂಟಳು
ಗುಮಗೋಳ ತೇರಿನ ವಿಸ್ತಾರ
ಪಟ ಹಚ್ತಿದ್ದೆನೋ ಸಾವಿರ
ಅರುಗಾಲಿ ಹದಿನೆಂಟುಸೇರಿ
ಹಾವಹಾವ ಅಂದರ ಹರನೆಲ್ಲೆ ನಡುಗ್ಯಾಗ
ಹಾಯ ಅಲ್ಲಿ ಹಂಪಿ ವಿರೂಪಾಕ್ಷ ಗುಡಿಮುಂದ
ಹಾವಾಗಿ ಹರಿದಾಳ ಗಂಗಿ
ಮುಳಗುಂದ ಹಾರುತ್ತಿತ್ತು
ಓರಿಗಿ ಗೆಳತ್ಯಾರು ಜತ್ತು
ಕರುಣದಿಂದಲಿ ಕೈ ಮಾಡುವರು
ಇಲ್ಲಿ ರಾಮಾಯಣ, ಮಹಾಭಾರತ ಇನ್ನು ಅನೇಕ ಮುಂತಾದ ಆಧ್ಯಾತ್ಮದ ಗೀತೆಗಳನ್ನು ಅವುಗಳ ಒಂದೊಂದು ಭಾಗವನ್ನು ಆರಿಸಿಕೊಂಡು ಕಥನ ಕಾವ್ಯಗಳ ಹಾಗೆ ಹಾಡುವರು. ಅಲ್ಲದೇ ಸಮಾಜದ ಚಿಂತನೆಯನ್ನು ಹಿಡಿದು ಕೂಡ ಇಲ್ಲಿ ಅನೇಕ ಬಗೆಯಾಗಿ ಕಥೆಗಳ ಮೂಲಕ ಹೆಣೆಯುತ್ತಾ ಹೋಗುವರು.
Leave A Comment