ಪಲ್ಲಾ

 ಬಡತನ ಅಂಬುದು ಬಾsಳಕೆಟ್ಟ
ಬಡವಗ ಬಂತು ಬಹು ಶಿಟ್ಟ
ಸಾವಕಾರ ಸಾಲಾ ಕೊಡಬೇಕಾದರ
ಸಂಗ್ಯಾಗ ಆದಿತೊ ಸಂಕಷ್ಟ

೧ನೆ ನುಡಿ

 ಶಹರ್ ಹೊಂಗಲದಾಗ ಸಾವಕಾರ
ದೂರವಜಂತಿ ಅವನ ಹೆಸರ
ಬೆಳ್ಳಿ ಬಂಗಾರ ರೊಕ್ಕ ರುಪಾಯಿ
ಅಳ್ಳಿಯ ವಹಿವಟ ವ್ಯಾಪಾರ
ಚಿನಾಯ ಕುರೇದ ಚಾಕತರ
ರುಪಾಯಿ ವೋಯುತ್ತಾರ ಪತ್ತಾರ
ವಾರವಾರ ಚಲತಿ ಚಾಕಲೆಕ್ಖ ಮಾಡೊದು ಶನಿವಾರ
ಅಂದಾದುಂದಿ ಅವನ ಕಾರ್ಭಾರ
ಹತ್ತೆಂಟು ಮಂದಿ ಅವನ ಮನುಷ್ಯರ
ಮಗಿ ಮಳಿಗಾಲ ಹತ್ತಿ ಅರವುತಾರ ಗೊತ್ತ ಇಲ್ಲದ ಹೆಂಗಸರ||ಚ್ಯೇ||

 ಯೇನ ಹೇಳಲವನ ಕಾರ್ಬಾರಕಿ
ಅವ ಮಾಡುತ್ತಿದ್ದನೊ ಚಿನವಾರಕಿ
ಅಣ್ಣತಮ್ಮರಿಬ್ಬರು ತಿಳವಳಿಕಿ
ಅವರ ಮಾಡುದಕ ಕಡಿಮಿಲ್ಲ ಗಳಿಕಿ
ಊರಾಗ ಯಾರಿಗಾಗಿಲ್ಲ ಬೇಸರಿಕಿ
ಬಹಳ ಸಾಚೆ ಇಟ್ಟರ ಸಾವಕಾರಿಕಿ||ಇಳವ||

 ಅವನ ಪೋಷಾಕ ಹೇಳತೇನ ನಿಮಗ
ಕೇಳ ಈಗ
ಅವ ಹಿಡಿದ ತಿರಗತಿದ್ದ ವೋಣಿ
ಚೌಕ ಶಿಖಾಮಣಿ
ಹಾಕಿದ್ದ ಕೊರಳಾಗ
ಜೆರಕಾಟಿ ರುಮಾಲ ತಲಿಮೇಗ
ನೋಡ ಅವಗ
ಹೊತ್ತಿರು ದೋತರ ನಾಕ್ಪುರಿ
ಕೆಮಲಟ ಬೇರೆ
ಅಂಗಿ ಮೈಯಾಗ
ಚಂದ್ರಹಾರ ಗೋಪ ಚಂದ ಹ್ಯಾಂಗ
ಯೆದಿಮೇಗ
ತಳತಳ ಹೊಳುದು ಬಂಗಾರ
ಪವಿತ್ರದುಂಗರಾ
ಇಟ್ಟಿದ್ದ ಬೆರಳಾಗ||ಯೇರ||

 ಮಾತಿಲಿ ಇದ್ದನ ಬಹುದಿಟ್ಟ
ಸುಳ್ಳ ಮಾತ ಇಲ್ಲ ಯಳ್ಳಷ್ಟ

೨ನೇ ನುಡಿ

ಮೊದಲ ಕೇಳ ಮಾತಿನ ಜರಿ
ಖಾತೆದ ಹೊಲ ನೋಡ ಜಾತ ಯೆರಿ
ಐದ ವರಷದ ದಿನ ಮುದ್ದತ ಮಾಡಿದನ ಬರಕೊಟ್ಟ ಕಾಗದ ಬರಾಬರಿ
ನ್ಯಾಯ ಬಂದಿತೊ ಹೋದಬರಿ
ಜೋರಿ ಮಾಡಲಿಲ್ಲ ಕಾಯದೆ ಮೀರಿ
ಮಾಸೀಲಿ ಪ್ರಕಾರ ಫಿರ‍್ಯಾದಿ ಮಾಡಿದನ ಸವದತ್ತಿ ಕೋರ್ಟಿನ್ಯಾಗ ಬಿತ್ತಮುರಿ
ಬಸಲಿಂಗಣ್ಣನ ಮಾತ ಸರಿ
ಶ್ಟಾಪ ಚೆಲ್ಲಿ ಮಾಡಿದ ಮಂಜರಿ
ಮುನ್ಸುಫ ಅಂತನ ಅಫಿಲರ್ಜಿ ಧಾರ್ವಾಡಕೆ ಹೋಗಿ ಮಾಡರಿ  ||ಚ್ಯೇ||

ಅಲ್ಲಿಂದ ಬಂದನ ಹೊಂಗಲಕ
ಮಲಸತ್ತ ಮಾಡಿದ ಹೋಗುದಕರಿ
ನೂರ ರೂಪಾಯಿ ತೊಗೊಂಡ ಹಂತೇಕ
ಇಲ್ಲಿಂದ ಹೊಂಟನ ಧಾರ್ವಾಡಕ
ಅಫಿಲರ್ಜಿ ಕೊಟ್ಟನ ಸರಕಾರಕ
ವಕಿಲನಿಟ್ಟನೊ ಆಗಿನ ಕ್ಷಣಕ||ಇಳವ||

ಅರ್ಜಿ ಅಂತ ಮಾಡಿ ಕೊಡ ನಮಗ ನೀ ಈಗರ
ನೂರ ರುಪಾಯಿ ತೊಗೊ ಮಾರಿ ಗಾಡಿ
ಹೇಳ ಲಗು ಮಾಡಿ
ಯೇನಂತಿ ನಮಗ
ವಕೀಲ ತಿಳದ ಮನದಾಗ
ನೋಡ ಆಗ
ಹೀಗಂತ ಕೊಟ್ಟ ವಚನ
ಕಟ್ಲೇದ ಸಂದನ
ಚಿಂತಿ ಯಾಕೊ ನಿನಗ
ನೂರ ರೂಪಾಯಿ ಕೊಟ್ಟ ವಕೀಲಗೆ
ಕೈಯಾಗ
ಪಹಿಲಾ ತಾರೀಖ ಮುದ್ದತ ಆದಿತ್ಯವಾರ
ಮುಂದ ಸೋಮವಾರ
ಜಬತಿ ಬಂತ ಬೇಗ||ಯೇರ||

ಕಾರ್ಕೂನ ತಂದ ಜಬತಿ ಇಟ್ಟ
ಬಸಲಿಂಗ ನಡಿಸಿದ ತನ್ನ ಹಟ

೩ನೆ ನುಡಿ

ಮುನ್ನೂರ ರುಪಾಯಿದ ಮಾಸೀಲಾ
ನಿನ ಮೇಲಾಯಿತೊ ಫೈಸಲಾ
ಕಾರ್ಕೂನ ಅಂತಹ ಸಂಗೆಣ್ಣ ಕರಸು ನೀ ಯೇನ ಮಾಡತಿ ಸವಾಲಾ
ಸಂಗ್ಯಾಗ ಬಿತ್ತೊ ಮಹಜಾಲಾ
ಹೇಳಿಕೊಂಡ ತನ ಅನಕೂಲಾ
ಫೈಸಲ ಪ್ರಕಾರ ರುಪಾಯಿ ಕೊಡತೆನ ಹೊಲದ ವಳಗ ಬಿಡಸರಿ ಪಾಲಾ
ಸರ್ವ ತಪ್ಪು ನಂದ ಆಯಿತಲ್ಲಾ
ನಿನ್ನಿಂದ ಹೊರತ ಗತಿಯಿಲ್ಲ
ಬಸಲಿಂಗಣ್ಣನ ಮಾತ ಮೀರುದಿಲ್ಲ
ಕೈ ಮುಗದ ಹಿಡಿದನ ಕಾಲಾ||ಚ್ಯೇ||

ಜಪ್ತಿ ಬಂದ ಬಳಿಕ ಯೇನ ಹೇಳಲಿ
ಇಂದಿಗೆ ನಿನ್ನ ಹೊಲ ಹೋಯಿತಿ
ಬಸಲಿಂಗಣ್ಣ ಮಾಡಿದನ ಜಾತಿ
ಫಕಿರಣ್ಣನ ಜುಮೆಕ ಹೊಲ ಆತಿ
ಸಂಗ್ಯಾ ಮನಿಗೆ ಹೋಗಿ ಮಾಡ್ಯಾನ ಚಿಂತಿ
ಖಾತೆದ ಹೊಲಾ ಇಂದಿಗೆ ಯಾರವಾತಿ||ಇಳವ||

ಮತ್ತೊಂದ ಮಾಡ್ಯಾರ ಮಸಲತ್ತ
ನೋಡ ಬೇತ
ಸಂಗ್ಯಾ ಪರಿಷ್ಯಾ ಇಬ್ಬರು ಕೂಡಿ
ನಗತ ಮಾತಾಡಿ
ಯಾರಿಗಿಲ್ಲ ಗೊತ್ತ
ನಮ್ಮ ನಿಮ್ಮರ ವೊಳಗಿನ ಮಾತಾ
ಹೀಂಗಂತಾ
ಯಾರ್‌ಯಾರಿಗೆ ತಿಳಿಯಬಾರದ ಹೀಂಗ ಮಾಡಂನು ಬಲ್ಲಾಂಗ
ಹೋಗುನು ಹರ‍್ಯಾನ ಹೊತ್ತ
ಅವರ ಮಸದರ ಕುಡಗೋಲ ಕುಂತ
ಕಡುನ ಅಂತ
ಇಂದಿಗೆ ಹೋಗಲಿ ನಮ್ಮ ತಲಿ
ಆಗುವದು ಆಗಲಿ
ಜೀವದಂದ ಹೊರತಾ||ಯೇರ||

ವಕ್ಕುಂದ ಊರ ಬಸಲಿಂಗ ಬಿಟ್ಟ
ನಾಳೆ ಹಾಕುದು ಮಹನೌಮಿಗಟ್ಟ

೪ನೆ ನುಡಿ

ಮಂಗಳಾರ ಉದಯಕ ತಾ ಯದ್ದ
ತಾಯಿ ಪಾದಕ ಹೋಗಿ ಬಿದ್ದ
ಸಂಗ್ಯಾ ಪರಿಷ್ಯಾ ಇಬ್ಬರು ಅಂತರ ಬಸವಣ್ಣ ನಡಸು ನಮ ಜಿದ್ದ
ಕುಡಗೊಲ ಮಸದ ಅವ ಹಿಡಿದ ಬಗಲಗ ಮುಚ್ಚಿಕೊಂಡ ತಾ ನಡದ
ಮೂರ ತಾಸ ಹೊತ್ತೇರಿತ ಆಗ ಫಕೀರ‍್ಣನ ಮನಿಗಿ ಬಂದ
ಮನಿಯಾಗ ಕೇಳತಾರ ಯೆಲ್ಲಿ ಹೋದ
ಬಹಳ ಕೆಲಸ ಇತ್ತ ಅವನಿಂದ
ತುಕ್ಕಣ್ಣ ಅಂತನ ಯಾತಕ ಬಂದಿ ಯೇನ ಕೆಲಸ ನನ ಮುಂದ||ಚ್ಯೇ||

ಇಷ್ಟ ಕೇಳಿ ಹಿಂದಕ ತಿರಿಗಿ ಹೋದ
ಹೊಲದಾಗ ಹೊಳಿಯಾಗ ಹುಡಿಕಿದಾ
ಅವ ಶಿಕ್ಕರ ಪ್ರಾಣ ಹೋಗುದಾ
ಫಕೀರಣ್ಣನ ಪರಮೇಶ್ವರ ಕಾದ
ಹುಡಿಕಿಯಾಡಿ ಅಂಗಡಿಗೆ ಬಂದ ಕಪ್ಪುರ ಕಾಯ ತೊಗೊಂಡವೊಂದ|| ಇಳವ||

ಬಸವಣ್ಣ ದೇವರಿಗೆ ನಡದ ಮಾಡಿ ಜಲದ
ಕಾಯಿ ವಡದ ಬೆಳಿಗಿ ಕಪ್ಪರ ಮಾಡಿ ನಮಸ್ಕಾರ ಹೊಂಗಲ ದಾರಿ ಹಿಡಿದ
ಸಂಗಣ್ಣ ಬಂದ ಮುಂದ ಮುಂದ
ಅಲ್ಲಿಂದ
ಮೆಗುಟಿ ಪರಸ ಯೇನಂದ
ಮುಂಚೆ ಕುಡುನಂದ
ರಾಚಪ್ಪನ ಹಿಡಿದಾ
ಹೀಂಗ ಮಾತಾಡಿ ಪರಿಪರಿದಿಂದ
ವೊಂಡ್-ಖಂಡಾ
ರಾಚಪ್ಪನ ಮನಿಗೆ ಹೋಗಿ ಕೇಳ್ಯಾರ ಮುದಿಕಿಗಿ ಅಣ್ಣಪಯೆಲ್ಲಿ ಹೋದಾ||ಯೇರ||

ಕೊಲ್ಲವನಕಿಂತ ಕಾಯುವ ಶ್ರೇಷ್ಠ
ಬಹಳ ಚಲೊ ಅವರ ಅದರುಷ್ಟ

೫ನೆ ನುಡಿ

ಬಂದದ್ದಾತಿ ಅಂತಾರ ಕಾಲಿ
ಶಿಟ್ಟ ಅದರ ತಮ್ಮ ಮನದಲ್ಲಿ
ಬಸಲಿಂಗಣ್ಣನ ಮನಿಗೆ ಹೋದರೊ ತಿಳಿಯಲಿಲ್ಲ ಇಬ್ಬರ ನೆಲಿ
ವೊಂಬತ್-ತಾಸ ವೇಳೆದ ಮೇಲೆ ಪೂರ್ವಲಿಖಿತ ವದಗಿತ ಅಲ್ಲಿ
ಸಂಗ್ಯಾ ಪರಿಷ್ಯಾ ಮುಜರಿ ಮಾಡಿಕ್ಯಾರ ಹೋಗಿ ನಿಂತರೊ ಅವನ ಬದಿಯಲಿ
ಬಸಲಿಂಗಣ್ಣನ ಚಿತ್ತ ರುಪಾಯಿ ಮೇಲೆ
ಮೂರು ನಾಕು ಮಂದಿ ಅವನ ಬದಿಯಲ್ಲಿ
ಕಡದಾರು ಅಂಬುದು ಅವಗ ತಿಳಿಯಲಿಲ್ಲ
ಶಿವ ತಂದ ಹಾಕಿದ ಮಾಲಿ||ಚ್ಯೇ||

ಸಂಗ್ಯಾ ಮುಂಗೈಯಂಗಿಯ ತೇಡಿಕೊಂಡ ಬಗಲನ್ನು ಕುಡಗೋಲ ತಕ್ಕೊಂಡ
ನಿಂತ ನೋಡಿ ಕಡದನೊ ಅವನ ಚಂಡ
ಅದರಂತ ಕುಡಗೋಲ ಯಳಕೊಂಡ
ಕಡದವನ ಹಿಂದಕ ಸರಕೊಂಡ
ವೋಡಿ ಹೋದನ ಪರಿಷ್ಯಾನ್ನ ಕರಕೊಂಡ||ಇಳವ||

ಬಸಲಿಂಗಣ್ಣ ಯೆದ್ದ ಸಂಗಟಾಗಿ
ಶಿರ ಬಾಗಿ
ಬಾಯಿಲಿ ಸುರಿತ ನೆತ್ತರಾ
ಹಾರಿತ ಕಬರಾ
ಬಿದ್ದನ ಜೀವ ಹೋಗಿ
ಕುಂತಿರು ಮಂದಿ ಗಾಬ ಆಗಿ ಹೊರಗ ಹೋಗಿ
ಯೆಲ್ಲರು ಅಂತರ ಹಿಡಿ ಹಿಡಿ ವೋಡತನ ವೋಡಿ
ಕೋದ ಕುತ್ತಿಗಿ
ಬರುಹಂತ ಮಂದಿ ಇದಿರಿಗಿ ಬದಿಗಾಗಿ
ಅವನ ಹಿಡಿಯಲಿಲ್ಲ ಯಾರ್‌ಯಾರಾ
ಬಂದರ ಹಳಬರಾ ಆಗ ಸುದ್ದಿ ಆಗಿ||ಯೇರ||

ಊರಾಗ ಆದಿತ ಬಬ್ಬಾಟ
ದಾಟಲಿಲ್ಲ ಹೊಂಗಲ ಗೇಟ

೬ನೆ ನುಡಿ

ಶಿಟ್ಟ ತೀರಿತ ಅವರ ಮನದಂದಾ
ಮಂದಿ ಕೂಡಿತೊ ಸುತ್ವರದಾ
ಕೈಯಾನ ಕುಡಗೋಲ ಬಿಸಾಟಿ ವೊಗೆದಾನ ಪಾಪ ಹೋಗಗೊಡಲಿಲ್ಲ ಮುಂದಾ
ಬಿಕ್ಕಟ್ಟ ಹಾದಿ ವೋಣಿಯ ಸಂದಾ
ಹಳಬರ ಹಿಡಿದರ ಮಾಡಿ ಜಲದಾ
ಹೊಡಕೊಂತ ಚಾವಡಿಗೋದರ ಮರ‍್ಯಾದೆ ಉಳಿಯಲಿಲ್ಲ ಸಂಗ್ಯಾಂದಾ
ಕುಲಕರ್ಣಿ ಬಂದ ನೋಡಿದಾ
ಪೋಲಿಸಗವಡ ಹೊಡಿ ಅಂದಾ
ಇದರ-ಬದರ ಸಂಗ್ಯಾನ ಪರಿಷ್ಯಾನ ಕಂಬಕೆ ಕಟ್ಯಾರೊ ಬಿಗಬಿಗದ||ಚ್ಯೇ||

ಸುಳ್ಳ ಬಡಿಯಬೇಡರಿ ನಿವ ನಮಗ
ಕಡದಾಂಗ ಕಬೂಲ್ ಅದೇವ್ ಈಗ
ನಮ್ಮನ ಹಿಡದ ಕಳವರಿ ಸಂಪಗಾಂವ್ಯಾಗ
ಚೌಕಾಸಿ ಆದಿತ ಕಚೇರ‍್ಯಾಗ
ಹೂವಿನ ರಾಮಾ ಇದ್ದನ ಇದರಾಗ
ಅವ ಅಯಿದಾನ ವಕ್ಕುಂದ ಊರಾಗ||ಇಳವ||

ಕ್ಕುಂದ ಊರಿಗೆ ಹೊಂಟರೊ ಹಳಬರಾ ತಯಾರಾ
ಅವ ಶಿಕ್ಕ ಹೂವಿನಾ ರಾಮಾ
ಆಗಿ ಬೇಪಾಮ ಜೀವಕ ಬಂತ ಗೋರಾ
ಅದವತಿಗೆ ಹೇಳತಾರ ಅವರ ಇಬ್ಬರಾ
ಅಂಜಿ ನಡಗತಾನ ತರತರಾ
ಇದ್ ಎನ ಆಕಾರ ಕಣ್ಣಿಗೆ ತಂದ ನೀರಾ
ಊರಾಗ ಹೇಳತಾರ ದೀರಾ
ಎಲ್ಲಾರಾ
ಈ ಪಾಪದಾಗ ಜರ್ ಇಲ್ಲ ಯೇನನಾಗುದಿಲ್ಲ ಅಂತಾರ ಗೆಣಿಯರಾ||ಯೇರ||

ರಾತ್ರೊರಾತ್ರಿಲಿ ಅವ ಹೊಂಟ
ಉಣಗೊಡಲಿಲ್ಲ ವಂದೀಟ

೭ನೆ ನುಡಿ

ಪೋಲಿಸ ಕುಲಕರ್ಣಿ ಯೇನಂದ
ಬಹಳ ಹುಷಾರಿ ಇರಬೇಕಂದ
ವೊಳೆ ಸಾವಕಾರನ ಕಡದ ಹಾಕಿದಾರ ಹಿಂತ್ ಆದ ಆಗಕಿಲ್ಲ ಯೆಂದ್ ಎಂದ
ರಿಪೋರ್ಟ ಮಾಡೆರ ಕಾಗದ ಬರದ
ಹಳಬ ತೊಗೊಂಡ ಸಂಪಗಾಂವಿಗೆ ಹೋದ
ಕಚೇರಿವೊಳಗ ರಿಪೋರ್ಟ ಚೆಲ್ಯಾನ ಸುಭೇದಾರ ವೋದಿ ನೋಡಿದ
ಘೌಜ್‌ದಾರ ಲಗುಬೇಗ ತಯಾರ ಆದ
ಕುದುರಿಗಿ ತಡಿ ಬೇಗ ಹಾಕಂದ
ಬಿಲ್ಲಿ ಮನುಷ್ಯನ ತೊಗೊಂಡ ಬುಧವಾರ ಚೆಂಜಿವೇಳೆದಲಿ ಅವಬಂದ||ಚ್ಯೇ||

ಬಂದ ನಿಂತ ನೋಡಿದ ಫೌಜ್‌ದಾರ
ಕಣ್ಣಿಲಿ ಕಂಡನ ನೆತ್ತರಾ
ಹೆಣ ನೋಡಿ ಮರಗಿದ ಮರಮರಾ
ಯೇನ ಮುನಿದಾನ ಹರಿಬ್ರಹ್ಮ ದೇವರಾ
ಇವನ ಕಡದಾಗ ಇದ್ದರ ಯಾರ್‌ಯಾರ
ಮಂಟೂರ ಅಯ್ಯಗೋಳ ಪಂಚಪ್ಪ ಮೂವರ||ಇವಳ||

ಇಷ್ಟ ಕೇಳಿ ಮಣ್ಣ ಕೊಡರೆಂದಾ
ಅರತಿಂದಾ
ತಾಯಿತಂದಿ ಅಳತಾರೊ ಬೋರ‍್ಯಾಡಿ
ಬಿದ್ದ ಹೊರಳ್ಯಾಡಿ
ಅದರುಷ್ಟಕವರ್ ನಮದಾ
ಯೇನ ಕಡಿಮಿಯಿಲ್ಲ ಆನಂದಾ ದಯದಿಂದಾ
ಯೇನ ಬೇಡಿ ಬಂದನ ಶಿವನಲ್ಲಿ ನಮ್ಮ ಹೊಟ್ಟಿಲಿ ಮಗ ಬಿಟ್ಟ ಹೋದಾ
ನಾನಾಪರಿ ದುಕ್ಖ ಸ್ತ್ರೀಯಳದಾ
ಹಾಕಿದಾ ಗುಂಡ-ಗುಳದಾಳಿ ವೊಗದಾಳ ಹರದ
ಇನ್ನೇನ ಅತಿ ನಂದ
ಮಣ್ಣಿಗೆ ಮರಿ ಆದ||ಯೇರ||

ದುರ್-ಮಣ ಆದಿತೊ ವೈಕುಂಠ
ಯಾರಿಗೆ ತಿಳಿಯದೊ ಶಿವನಾಟ

೮ನೆ ನುಡಿ

ಮಹನೌಮಿ ಅಮಾಸಿ ಸೋಮವಾರ
ಆಶ್ವೀಜ ಶುದ್ಧ ಪಾಡ್ಯ ಮಂಗಳಾರ
ಸಕೆ ಸತ್ತರಾಸೆ ಪಂಚಾ-ಐಂಶಿ ರುದ್ರೋದ್ಗಾರಿನಾಮ ಸಂವತ್ಸರಾ
ಹೀಂಗ ಮಾಡಿದರ ವಿಚಾರ
ಪೋಲಿಸ ಕುಲಕರ್ಣಿ ಫೌಜ್‌ದಾರಾ
ಸಂಗ್ಯಾನ ಪರಿಷ್ಯಾನ ಕೈದ-ವೊಳಗ ಸಂಗಟ ಹೊಂಟರ ಹಳಬರಾ
ಇದ ಮೇಗ ಬಲ-ಹುಷಾರ
ಕಚೇರಿವೊಳಗ ಹಾಜರಾ
ಯಚ್ಚರ ತಪ್ಪಿ ಯತ್ತರ ಹೋದಿರಿ ಹುಕುಮ ಮಾಡಿದಾನ ಮಾಮ್ಲೆದಾರ||ಚ್ಯೇ||
ಇಲ್ಲಿ ತಾಲೂಕ ಬಿಟ್ಟರ ಸಂಪಗಾಂವಿ
ವೋದ ಹಾಕ್ಯಾರ ಜಿಲ್ಲೆ ಬೆಳಗಾಂವಿ
ಕರಸಿ ಸಾಹೇಬ ಮಾಡಿದ ನಿರ್ಣಾಯಿ
ಸಂಗ್ಯಾಗ ಬಿದ್ದಾಂಗ ಆದೀತ ಕೆರಿ ಬಾಂವಿ
ಕಟ್ಟ ಬರಹ ಕಳಿವ್ಯಾರ ಮಮ್ಯಾಗಿ
ಹುವ್ವಿನ ರಾಮನ ತಂದದ್ದ ಅನ್ಯಾಯಿ
ಮೂರ ತಿಂಗಳಿಗೆ ಬಂದ ಉತ್ತರಾ ಮಜಕೂರಾ
ವೋದಿ ನೋಡಿದಾನ ಸರದಾರಾ
ಪರಿಷ್ಯಾನ ಕರಿ-ನೀರಾ
ಬಿಡುದು ಅತಿ ಪೂರಾ
ಸಂಗಣ್ಣ ಅವಲ ಕೈದಿದಾರ
ಕರಾರ
ಧಾರ್ವಾಡಕ ಸಾಹೇಬ ಹೋಗಂದ ಸಜಾ ಗಲ್ಲಿಂದ ಆತಿ ಜಾಹಿರಾ
ಸುತ್ತಮುತ್ತ ಅವನ ಮೇಲಿ ಪಾರಾ
ಚೆಟಿಗಾರಾ
ಧಾರ್ವಾಡಕ ಹಾಕಿದರ ತಂದ ಹೊನ್ನಾರ ಮುಂದಿಂದ ತಿಳಿಯಲಿಲ್ಲ ಜರಾ||ಯೇರ||
ಇಂಗ್ರೆಜಿ ಕಾಯಿದೆ ಬಿಕ್ಕಟ್ಟ
ನಡುವದಿಲ್ಲ ಯಾರ್‌ಯಾರ ಆಟ

೯ನೆ ನುಡಿ

ಧಾರ್ವಾಡ ವೂರ ಬಿಟ್ಟ ಬಂದಾ
ಉಳಸಣ ಆಗಲಿಲ್ಲ ಯಾರಿಂದಾ
ಸಾಹೇಬ ಸುಭೇದಾರ ಫೌಜ್‌ದಾರ ಕಾರ್ಕೂನ ಹೊಂಗಲಕ ತೊಕೊಂಡ ನಡಿರೆಂದಾ
ಯಚ್ಚರಿಕೆ ಇರಬೇಕ ಯಚ್ಚರದಿಂದ
ಹಿರದ ಕಟಟಿ ಪಾರಾ ಹಿಂದ ಮುಂದಾ
ಗಲ್ಲಿಗ್ ಹಾಕುದು ಸಾಮಾನ ಯೆಲ್ಲಾ
ಸಂಗ್ಯ ಚೆಕ್ಕಡಿ ಮೇಗ ಕುಂತಿದ್ದ
ಮಾಡಿ ತಂದರೊ ಬಲಿ-ಬಂದ
ಮಾತಾಡತಾನ ದರಜಿಲ್ಲದ
ಬೆಸ್ತಾರ ದಿವಸಾ ಅಣ್ಣತಮ್ಮರನಾ ತನ್ನ ತಾಯಿನಾ ಕರಸಿದಾ||ಚ್ಯೇ||

ಹಡೆದ ತಾಯವ್ವಗಂತಾನೊ ಯಾಕಳತಿ
ಆಗುಹಂತಾದೆಲ್ಲಾ ಆಗಿ ಹೋತಿ
ರಣ-ಮಂಡಲ ಅಭಿಮಾನ್ಯ ನನಗ್-ಅತಿ
ನನಗ ಯಾರ್‌ಯಾರ ಇಲ್ಲದಾಂಗ ಆತೊ ಸಾರತಿ
ಇಂದಿಗೆ ರಿಣ ಹರದ ಹೋತಿ
ಇನ್ನ ಬಿಟ್ಟ-ಕೊಡ ನನ್ನ ಕಕಲಾತಿ||ಇಳವ||

ಇಷ್ಟ ಹೇಳಿ ಮಾಡಿದ ಅಲಾಪ
ವಂದ ಸ್ವಲ್ಪ
ನಂದ ಹೀಂಗ ಇತ್ತ-ಪ್ರಮಾಣ ಕೆಟ್ಟ ದಿವಾಣಾ
ಕೇಳಲಿಲ್ಲ ತಪ್ಪ
ಮಾಡಿ ಬಿಟ್ಟಾರಂತಿನಿ ಮಾಪಾ ವರಷ ಟೇಪಾ
ಶಿಕ್ಕಾಂಗ ಆತೊ ಕೈಶೆರಿ ಬ್ರಹ್ಮ ಬರೆದ ಬರಿ ಮಾಡಿದಂತಾ ತಪ್ಪಾ
ಯೆಣ್ಣಿರತ ಹೋದಾಂಗ ದೀಪಾ ಆಕಲ್ಪಾ
ಹಿಂತ್-ಆದ ನನ್ನ ಅದರುಷ್ಟ
ಜಿದ್ದ ಬಲಿ-ಕೆಟ್ಟ ಇರಬಾರದೊ ಕೋಪಾ||ಯೇರ||

ಮಾತಮಾತಿಗೆ ಮಥನ ಕೆಟ್ಟ
ಚೆಲೋ ಮನುಷ್ಯಗ ಮಾತಿನ ಪೆಟ್ಟಾ

೧೦ನೆ ನುಡಿ

ಸಂತಿ ಶುಕ್ರವಾರಾ ಅದ ದಿನ ಸುತ್ತಿನ ಮಂದಿ ಕೂಡಿತ ಜನಾ
ಹವ್ವ ಹಾರಿ ಕಬರಿಲ್ಲದ ಮಾತಾಡತಾನ ವೊರ ಹೊರಗ ತಂದಾರೊ ಅವನಾ
ಸಾಹೇಬಗ ಹೇಳಿಕೊಂಡ ಯೇನೇನ ಕೈಮುಗದ ಮಾಡಿದ ಶರಣ
ಐದ ರೂಪಾಯಿ ಖರ್ಚು ಮಾಡಿಕ್ಯಾರ ಮಠದ ವೊಳಗ ಕೊಡಸರಿ ಮಣ್ಣ
ಮಾರಿ ಬಾಡಿ ಆದಿತ ಸಣ್ಣ ಕಳೆ ಗುಂದಿ ಹಾರಿತ ಬಣ್ಣಾ
ಹರಹರಾ ಅಂತ ಹಾದಿ ಹಿಡದನೊ ಹತ್ತಿ ನಿಂತ ತನ್ನ ಟಿಕಾಣ||ಚ್ಯೇ||

ಗಲ್ಲಿಗೆ ಹಾಕ್ಯಾರ ಕೊರಳಿಗೆ ಸರಕಾ
ಸ್ವರ್ಗದ ದಾರಿ ಹಿಡಿದಾನೊ ಕೈಲಾಸಕಾ
ಅಕ್ಕತಂಗೆರ ಅಣ್ಣತಮ್ಮರ ತಾಯಿ ದುಕ್ಖ
ಸುತ್ತಗಟ್ಟಿ ನಿಂತಿತ ಜನಲೋಕಾ
ನಾಕ ತಿಂಗಳ ಹನ್ನೆರಡ ದಿನಕ
ಅವರಾತ್ರಿ ಅಮಾಸಿ ತಾರೀಖಾ||ಇಳವ||

ಊರ ಬೈಲ್-ಹೊಂಗಲ ದೊಡ್ಡ ಶಹರ
ಜಾಹೀರಾ
ಸುತ್ತ ರಾಜ್ಯದ ವಳಗ ಹೆಸರಾ
ಹನುಮಂತ-ದೇವರಾ ಅವಗ ನಮಸ್ಕಾರಾ
ತುಕಾರಾಮ ನಮ್ಮ ವಸ್ತದರಾ
ಶಾಯಿರಾ-ಕವಿ ಆಪು ಮಾಡಿದ ತಯಾರ
ದೇವಂಣ್ಣನಕ್ಷರ ಇಲ್ಲದಾಂಗ ಕಸರ
ಅವರ ಡಬ್ಬಿನ ಮೇಗ ಮುತ್ತಿನ ತೂರಾ
ಜರ್ತರಾ
ಸಂತು ಬಸಣ್ಣ ಜೀವದ ಗೆಣೆಯರಾ
ವೈರಿಗೆ ಮಾಡ್ಯಾರ ಜೇರ
ಇಳಿತ ಕಲಿಗಿಗಿ ನೀರಾ||ಯೇರ||

ಮಾದುರಾವ ಕಲಿಗಿಗೆ ಬಿದ್ದಾನೆ ಗಂಟಾ
ಹಾಡಿನ ವಳಗ ಮುಕಪಾಟ

ರಚನೆ : ದೇಮಣ್ಣ
ಕೃತಿ :
ಪ್ಲೀಟರು ಸಂಗ್ರಹಿಸಿದ ಲಾವಣಿಗಳು