ಪತಿವ್ರತಾ ಧರ್ಮದ ಮ್ಯಾಲ ಪ್ರೀತಿ ಇಟ್ಟ ತಾಯಿಗಳು
ಗಳಿಸಬೇಕ ಸದ್ಗತಿಯೆಂಬೋ ಮುಕ್ತಿಯನಾ
ಪತಿಸೇವಾ ಮಾಡಿ ಹೊಂದಿರೆವ್ವಾ ಸ್ವರ್ಗ ಸದನಾ
ನೀತಿವಂತರೆಂದು ಉಳಿಸಿಕೊಳ್ರಿ ನಿಮ್ಮ ಕೀರ್ತಿಯನಾ ||
ಕಾಶಿಬಾಯಿ ಸತ್ಯಧರ್ಮ ಚಿತ್ತಗೊಟ್ಟು ಕೇಳಿರಮ್ಮಾ
ಕಡ್ಲಿಮಟ್ಟಿ ಸ್ಟೇಷನ್‌ದೊಳು ಆದಂತಾ ಕಥನಾ
ಅತಿ ಶಾಂತದಿಂದ ಕುಂತ ಕೇಳ್ರಿ ಸರ್ವ ಜನಾ ||

ಕಾಶಿಬಾಯಿ ರೂಪವಂತಿ ಗುಣದಿಂದ ಶಾಂತವೃತ್ತಿ
ಪತಿಹೊರತ ಇದ್ದಿಲ್ಲ ಆಕಿಗಿ ಅನ್ಯ ವ್ಯಸನಾ
ಅತ್ತಿ ಮಾವಗಳಿಗೆ ಅನುಕೂಲ ಒಳ್ಳೆ ಗುಣಾ
ತವರೀಗ್ಹೋಗಿ ಹೆತ್ತಿದಾಳ ಗಂಡ ಮಗನ್ನಾ ||
ಹುಣ್ಣಿವಿ ಚಂದ್ರಾಮನಂಥ ಕೂಸ ಕುಲಕುಲ ನಗತಿತ್ತ
ಚೆಂದದಿಂದ ಬೆಳಿತೆತ್ತ ದಿನಾದಿನಾ
ಆಕಿ ಭಾವಕ್ಕ ಮೆಚ್ಚಿಕೊಟ್ಟಿದಾನ ಭಗವಾನಾ ||

ಮೂರ ತಿಂಗಳ ಆಗೂತ ಬಂತ ಗಂಡನ ಮನ್ಯಾವರು ಬರಲಿಲ್ಲ
ಕುಂತ ಮಾಡತಾಳ ತನ್ನ ಗಂಡನ ಧ್ಯಾನಾ
ಅತ್ತಿ ಮಾವ ಕಳವಿ ಕೊಟ್ರ ತಮ್ಮ ಮಗನ್ನಾ
ಕರಕೊಂಡ ಬಾರೋ ನಿನ್ನ ಹೇಣತಿನ್ನಾ ||
ತಂದಿ ತಾಯಿ ಮಾತ ಕೇಳಿ ಮನಸಿನೊಳು ಗಟ್ಟಿಮಾಡಿ
ಮಗಾ ಹೋದ ಕರಿಲಿಕ್ಕೆ ಕಾಶಿಬಾಯಿನ್ನಾ
ಅಕ್ಕರತೀಲೆ ಮುದ್ದಾಡತಾನ ತನ್ನ ಮಗನ್ನಾ ||

ಹೇಣತಿ ಮನಿಯೊಳಗ ವಂದ ದಿನ ವಸ್ತಿಮಾಡಿ
ಮರುದಿನ ಮುಂಜಾನೆದ್ದು ಅತ್ತಿಮಾವನ್ನಾ
ಕೇಳತಾನ ಕಳಿಸಿಕೊಡರಿ ಸತಿಯಳನಾ
ಗಟ್ಟಿಮಾತ ನಿಷ್ಠುರ ಹೇಳಿ ನಿಂತ ಸುಮ್ಮನಾ ||
ಹಿಂಗ್ಯಾಕ ಅಂತಿಯೋ ಅಳಿಯಾ ಹಿಂದ ಮುಂದ ಯಾರ ನಮಗ
ಸೀರಿ ಕುಬಸಾ ತಂದಿಲ್ಲಪ್ಪಾ ದಾಗೀನಾ
ಹಂಗs ಹೆಂಗ ಕಳಸೂನಪ್ಪ ಮೊಮ್ಮಗನ್ನಾ ||

ಚಿಂತಿ ಬಂತ ಅಳಿಯಾಗ ತನ್ನ ಹೇಣತಿನ್ನ ಕರದ ಅಂತಾನ ಹಿಂಗ
ಕೂಡಿಕೊಂಡ ಇರ ನಿನ್ನ ತಂದಿ ತಾಯಿನ್ನಾ
ಹ್ವಾದಮ್ಯಾಲ ಹೊಳ್ಳಿ ಬರಾಂವ ಅಲ್ಲ ನಾನಾ
ನನ್ನ ತಂದಿ ತಾಯಿ ಕೇಳಿದರ ಹೇಳಲಿನ್ನೇನಾ ||
ಮಗನ್ನ ಎತ್ತಿ ಮುದ್ದಾಡುತ ಮಕಾ ನೋಡಿ ಅಂತಾನ
ಬಾಳ ಜೋಕಿಂದ ಜೋಪಾನ ಮಾಡ ಕಂದನ್ನಾ
ಕೋಪ ಮಾಡಿ ಕೂಸನ್ನ ಕೊಟ್ಟ ಹೊಂಟ ಸುಮ್ಮನಾ ||

೧ನೇ ಚಾಲ

ಹೇಣತಿ ಮುಂದ ಹೇಳುವಂತ ಮಾತ ಅತ್ತಿಮಾವ ಕೇಳ್ಯಾರನಿಂತ
ಅಂತಾರು ಅಳಿಯಾಗ
ವಿಪರೀತ ತಿಳದ್ಯೋ ಮನದಾಗ ||

ನಮ್ಮ ಮ್ಯಾಗ ಮಾಡಬ್ಯಾಡ ಸಿಟ್ಟ ಮಾಡೋ ನೀ ಊಟ
ಕರಕೊಂಡ ಹೋಗೋ ನೀನೀಗ
ಹಟಾ ಮಾಡಿ ಹೋಗೋದು ಅಲ್ಲ ಹಿಂಗ ||

ಕಾಶಿಬಾಯಿ ಮುಗಿಯತಾಳ ಕೈಯ್ಯಾ ಬರಲಿಲ್ಲವಗ ದಯಾ
ಸೆಟಗೊಂಡ ಹ್ವಾದ ಲಗುಬೇಗಾ
ಅವಸರಲೆ ಹೊಂಟ ಅಡಿವ್ಯಾಗಾ ||

೨ನೇ ಚಾಲ

ಕಡ್ಲಿ ಮಟ್ಟಿಗಿ ಬಂದಾನು ಸ್ಟೇಶನಕ
ಗಾಡಿ ಸಿಕ್ಕಿತ ಅವನ ವ್ಯಾಳ್ಳೇಕ ||
ತಿಕೀಟ ತಗಸಿ ಹತ್ತಿದೋ ಆ ಕ್ಷಣಕ
ತನ್ನ ಊರ ಮುಟ್ಟಿದ ಸಂಜೀಕ ||
ಕಾಶಿಬಾಯಿ ಮಾಡತಾಳ ದುಃಖ
ಚೈನ ಇಲ್ಲ ಆಕಿ ಜೀವಕ ||

||ಏರ||

ತಂದಿ ತಾಯಿನ್ನ ಕರದ ಕಾಶಿಬಾಯಿ ಹೇಳತಾಳ
ಗಂಡ ಸಿಟ್ಟ ಮಾಡಿ ಬಿಟ್ಟ ಹ್ವಾದಾನು ನನ್ನಾ
ಇಲ್ಲೆ ಕುಂತ್ರ ಮುಂದ ನನ್ನ ಗತಿ ಏನಾ
ಸದ್ದೇ ಹೋಗದಿದ್ದರ ಹರದೀತ ವಗತಾನಾ ||
ಕಾಶಿಬಾಯಿ ಸತ್ಯಧರ್ಮ ಚಿತ್ತಗೊಟ್ಟಕೇಳಿರಮ್ಮಾ
ಕಡ್ಲಿಮಟ್ಟಿ ಸ್ಟೇಶನ್‌ದೊಳು ಆದಂತಾ ಕಥನಾ
ಅತಿ ಶಾಂತದಿಂದ ಕುಂತಕೇಳ್ರಿ ಸರ್ವ ಜನಾ||೧||
ಕಾಶಿಬಾಯಿ ಹೊಂಟಾಳ ಆಗ ಕೂಸ ತನ್ನ ಬಗಲಾಗ
ಅಬಸುಬಾ ಅದು ತೊಡಕ ಹಾದಿಮ್ಯಾಗ
ಅಡ್ಡಹ್ವಾದ ಹೋತ ಬೆಕ್ಕ ಹಾಲ್ವಕ್ಕಿ ನುಡದೀತ
ತರಲಿಲ್ಲ ದ್ಯಾಸಕ್ಕ ||
ಕಂದನ ಕಡೆ ಕರುಣ ಇಲ್ಲ ಗಂಡನ ಮ್ಯಾಲೆ ಹಂಬಲ
ಅವಸರದಿಂದ ಹ್ವಾದ್ಲ ಗಂಡನ ಕೂಡೋದಕ್ಕ
ಮಗಾ ಮರಗತಿತ್ತ ಬಿಸಲಿನ ತಾಪಕ್ಕ ||
ಅವಸರಾ ಮಾಡಿ ಅಡವಿಯೊಳಗ ಅಡಬಡಿಸುತ್ತ ಓಡಿಹೋಗಿ
ಮುಟ್ಟಿದಾಳು ಕಡ್ಲಿಮಟ್ಟಿ ಸ್ಟೇಶನಕ
ಒಂದು ತಾಸ ಹೊತ್ತ ಉಳೀತ ಇಷ್ಟ ಆಗೋದಕ
ಗಂಡನ್ನ ಹುಡಿಕಿದಾಳ ದುಕ್ಕ ಆತಿ ಮನಕ ||
ಚಿಂತಿ ಮಾಡತಾಳ ಕುಂತ ಸದ್ದೆ ಮುಳಗೀತ ಹೊತ್ತ
ಮೂರ ತಾಸ ಉಳದೀತ ಗಾಡಿ ಬರೋದಕ
ಅಳತಿ ಹಾಕತಾಳ ಸೊಗಸಿಲ್ಲಾ ಜೀವಕ್ಕ ||
ಮಂದಿ ಉಲವ ಇಲ್ಲದಾಂಗಾತಿ ಎಲ್ಲಿ ಮಾಡಬೇಕು ವಸ್ತಿ
ಸುತ್ತ ಮುತ್ತ ಯಾರೂ ಇಲ್ಲ ಆಕಿ ಸಾಯಕ್ಕ
ತಿಕೀಟ ಮಾಸ್ತರ ಕಂಡಾನ ಆಕಿನ ಆ ಕ್ಷಣಕ
ಯಾರೂ ಸರಿ ಇಲ್ಲ ಅಂತಾನ ಈಕಿ ರೂಪಕ್ಕ ||
ಏರಿತವಗ ಕಾಮಾತುರ ಮಾಡಿದಾನ ವಿಚಿಯಾರ
ಯಾರ ನೀನು ಯಾಕ ಬಂದಿ ಇಲ್ಲಿತನಕ
ರಾತ್ರಿವ್ಯಾಳ್ಳೆ ಹೋಗವಾಕಿ ಎಲ್ಲಿತನಕ ||
ಈಕಿ ಕೂಡ ಸಹವಾಸ ಮಾಡಬೇಕ ಈ ದಿವಸ
ಮಾಸ್ತರ ಅಂತಾನ ಹಿಂಗ ತನ್ನ ಮನಕ
ಇಲ್ಲೆ ಒಬ್ಬಾಕಿ ಕುಂಡ್ರೋದಲ್ಲಾ ನೀ ಸುಮ್ಮಕ
ಇನ್ನ ನಾಲ್ಕ ತಾಸ ಬೇಕ ಗಾಡಿ ಬರೋದಕ ||
ಬೇಕಾದಷ್ಟು ಬ್ಯಾಳಿ ಬೆಲ್ಲಾ ಯಾತಕೇನೂ ಕಡಿಮಿಲ್ಲಾ
ಕೊಡತೇನ ಅಡಿಗಿ ಮಾಡಿ ಉಣ್ಣೋದಕ
ಗಾದಿ ಲೋಡ ಪಟ್ಟೆಮಂಚ ಮಲಗೋದಕ ||

೧ನೇ ಚಾಲ

ಸಿಂಹ ಶಾರ್ದೂಲ ಹುಲಿ ಕರಡಿ ಕಾಟ ಮಾಡತಾವ ಅರ್ಬಾಟ
ಕುಂಡ್ರುದಲ್ಲಾ ನೀನು ಹಿಂಗ ಹೊರಗ
ಕಾಶಿಬಾಯಿ ಅಂಜ್ಯಾಳು ಮನದಾಗ ||
ಹಿಂಗ ಹೇಳಿದಾನು ಸುಳ್ಳ ಪಂಟ ಕರಕೊಂಡ ಹೊಂಟ
ಬಂದ ಹೊಕ್ಕಾಳವನ ಕ್ವಾಣ್ಯಾಗ
ಕೀಲಿ ಹಾಕಿ ನಡದ ಅಂವ ಹೊರಗ ||
ತಿಕೀಟ ಆಫೀಸಕ ಬಂದ ಹಿಂತಾ ಹೆಣ್ಣಾ ಸಿಗಾಕಿಲ್ಲ ಮುಂದ
ಅಂತಾನು ಮನದಾಗ
ಅನಾಯಾಸ ಸಿಕ್ಕಾಳೊ ಕೈಯ್ಯಾಗ ||

೨ನೇ ಚಾಲ

ಕಾಶಿಬಾಯಿ ಹಾಕತಾಳು ಉಸರಾ
ಇಷ್ಟ್ಯಾಕ ಇವನ ಉಪಕಾರಾ ||
ಮನಸ ಇಟ್ಟಾನು ನನ್ನ ಮ್ಯಾಲ ಮಾಸ್ತರಾ
ಬಲಿಯೊಳಗ ಸಿಕ್ಕೇನು ಈಗ ಪೂರಾ ||
ವ್ರತಾ ಭಂಗ ಆಗೋದು ಇಂದ ಪೂರಾ
ಹೆಂಗ ಮಾಡಲಿ ದಾಟುವ ವಿಚಿಯಾರಾ ||

||ಏರ||

ಪತಿವ್ರತಾ ಧರ್ಮ ನಂದ ಕುಂದ ಬಂದೀತ ಇಂದ
ನೀನೆನ್ನ ಪಾರಮಾಡೋ ಭಗವಾನಾ
ಏಕ ನಿಷ್ಠಾದಿಂದ ಮಾಡತಾಳ ಗಂಡನ ಧ್ಯಾನಾ
ಕೂಸನ್ನ ಎತ್ತಿಕೊಂಡ ಕುಂತಾಳ ಹಾರಿ ಹೌಸಾನಾ ||
ಕಾಶಿಬಾಯಿ ಸತ್ಯಧರ್ಮ ಚಿತ್ತಗೊಟ್ಟ ಕೇಳಿರೆಮ್ಮ
ಕಡ್ಲಿಮಟ್ಟಿ ಸ್ಟೇಶನ್‌ದೊಳು ಆದಂತಾ ಕಥನಾ
ಅತಿ ಶಾಂತದಿಂದ ಕುಂತ ಕೇಳ್ರಿ ಸರ್ವ ಜನಾ||೨||
ಬಂದ ಹೋತ ಗಾಡಿ ತಿಕೀಟ ಆಫೀಸ ಬಂದ ಮಾಡಿ ಮಾಸ್ತರ
ಅವಸರದಿಂದ ತಗದ ಕೋಲಿ ಬಾಗಿಲಾ
ಕಾಶಿಬಾಯಿ ಮ್ಯಾಲ ಅವನ ಹಂಬಲಾ
ಆಕಿ ಮಾರಿನೋಡಿ ನಕ್ಕಾನ ಒಳ್ಳೆ ಕುಸಿಯಾಲಾ |
ಏರಿತೊಳ್ಳಿ ಕಾಮಾತುರ ಮಾಡಲಿಲ್ಲ ವಿಚಿಯಾರ
ಅವಸರ ಮಾಡಿ ಹ್ವಾದ ಆಕಿ ಮೈಮ್ಯಾಲಾ
ಕಾಶಿಬಾಯಿ ತಗದಾಳ ಆಗ ದಾಟೋ ಅಕಲಾ ||
ಇಷ್ಟ್ಯಾಕ ನಿಮ್ಮ ಗಡಬಡ ಸ್ವಲ್ಪ ಸಮಾಧಾನ ಮಾಡ್ರಿ
ಸೊಗಸ ಇಲ್ಲ ಸದ್ದೆ ನನಗ ನಿದ್ದಿ ಅಮಲಾ
ಕಾಳಜಿ ಮಾಡಬ್ಯಾಡ್ರಿ ಕಾಲಮಾಡದ ಬರತೇನ ಮೊದಲಾ
ಕೂಸ ಎಚ್ಚರಾದೀತ ಎಳದ ಹೊಚ್ಚರಿ ಶಾಲಾ ||
ಸುಳ್ಳ ಹೇಳಿ ಮಳ್ಳ ಮಾಡಿ ಮೆಲ್ಲನೆ ಹೊರಗ ಬಂದ
ಅವಸರಾ ಮಾಡಿ ಜಗ್ಗಿ ಕೋಲಿ ಬಾಗಿಲಾ
ಚಿಲಕಾ ಹಾಕಿ ನಿಂತ್ಲ ಹೊರಗ ಅಂಜಲಿಲ್ಲಾ ||
ಮಾಸ್ತರ ಆಗ ಎದ್ದನಿಂತ ಇನ್ನು ಯಾಕ ಬರಲಿಲ್ಲಂತ
ಜಗ್ಗಿ ನೋಡಿದಾನ ಕೋಲಿ ಬಾಗಿಲಾ
ಎದಿ ತಣ್ಣಗಾಗಿ ನಿಂತ ಹಚಿಕೊಂಡ ಜಲ್ಲಾ
ಕಿಡಿಕ್ಯಾಗ ನಿಂತ ಅಂತಾನ ತಗಿ ಕೋಲಿ ಬಾಗಿಲಾ ||
ಏನಬೇಕ ಬೇಡ ನಿನಗ ಇಲ್ಲ ಅನ್ನುದಿಲ್ಲ ನಾನು
ರೋಖ ರೂಪಾಯಿ ವಸ್ತಾ ವಡವಿ ಕಡಿಮಿಲ್ಲಾ
ಒಳಗ ಬಂದ ನೋಡ ಕೊಟ್ಟ ವಚನ ತಪ್ಪೋದಿಲ್ಲಾ ||
ಕಾಶಿಬಾಯಿ ಅಂತಾಳಾಗ ಹಸಗೇಡಿ ಮಾಸ್ತರ ನಿನಗ
ಮುಂದಾಗೊ ನರಕದ ಗತಿ ತಿಳದಿಲ್ಲಾ
ನಾನು ಗಂಡನ ಮ್ಯಾಲ ಅನ್ಯೆ ಕೆಲಸ ಮಾಡಾವಳಲ್ಲಾ
ನೀನು ಹಿಂತಾ ಹೇಸಿ ಮಾತ ಆಡೋದು ತರವಲ್ಲಾ ||
ದ್ರವ್ಯ ಇದ್ದರ ದಾನ ಮಾಡ ದೊರದೀತ ಪುಣ್ಯೇದ ಪಾಲಾ
ಮುಂದ ಅನ್ಯಾಯ ಮಾಡಿ ಆಗಬ್ಯಾಡೊ ಅಳಿಗಾಲಾ
ನಾನು ಪತಿವ್ರತಾ ಧರ್ಮ ಎಂದೂ ಬಿಡೋದಿಲ್ಲಾ ||

೧ನ ಚಾಲ

ಮಾಡಿಕೋತಾನ ಮಸಾರ ವಿನಂತಿ ಎನ್ನ ಮನಪೂರ್ತಿ
ನಿನ್ನ ಮ್ಯಾಲ ನನ್ನ ಹಂಬಲಾ
ತೋಡಿಕೋತಾನ ಹೊಟ್ಟ್ಯಾಂದು ಎಲ್ಲಾ ||
ಮಾರಿ ನೋಡತಿದ್ದ ಕಿಡಿಕ್ಯಾಗ ನಿಂತ ಏರಿತ ಮನ್ಮಥ
ನಿಸೆದೊಳಗ ಆದಂಗ ಅಮಲಾ
ಕಾಮನ ಜ್ವಾಲಿ ಸಂದು ಸಂದೆಲ್ಲಾ ||
ಹೌಹಾರಿ ಮಾಸ್ತರ ಆಗ ಹಾರಿಕೋಲ ಹುಡುಕುವಾಗ
ಕೂಸ ಮಂಚದ ಮ್ಯಾಲ ಮಲಗಿದ್ದನ್ನ ದ್ಯಾಸಕ ತಂದಾನು
ಕುತಿಗಿ ಹಿಡದ ಸಿಸುವನ್ನ ಮ್ಯಾಲಕ್ಕೆತ್ತ್ಯಾನು
ಒಳಗ ಬಾರದಿದ್ರ ನಿನ್ನ ಮಗನ್ನ ಕೊಲ್ಲುವೆನು ||
ಕಾಶಿಬಾಯಿ ಅಂತಾಳಾಗ ಧರ್ಮ ಉಳದರ ಸಾಕ
ನನ್ನ ಗಂಡಗ ಆಶೆ ಆಗಲೆಂತ ಬೇಡಿಕೊಳ್ಳುವೆನು
ಮುಂದ ಮಗನ್ನ ಕೊಡಾವ ದೇವರದಾನು ||
ಕಳ್ಳಗೇಡಿ ಮಾಸ್ತರಗ ಕೂಸಿನ ಕರುಣ ಹುಟ್ಟಲಿಲ್ಲ
ಚಾಕು ಹಿರದ ಚರ್ರಂತ ಹಸ್ತ ಕೋದಾನು
ರಟ್ಟಿ ಹಿಡದ ಬೀಸಾಡಿ ಗಾಸಿ ಮಾಡ್ಯಾನು
ಹಸ್ತ ಒಂದ ಕಿಡಿಕ್ಯಾಗ್ಹಾಸಿ ಬೀಸಿ ವಗದಾನು ||
ಚೆಂಡ ಹೂವಿನಂತಾ ಪಿಂಡ ತುಂಡ ತುಂಡ ಮಾಡಿ ಅವನು
ತಗೋ ಅಂತ ದಿಮಾಕೀಲೆ ಹೊರಗ ಚೆಲ್ಲ್ಯಾನು
ಕಾಶಿಬಾಯಿ ನೋಡತಿದ್ದಳ ಪ್ರಾಣ ಹಾನಿಯನು ||
ಕನಕದಂತಾ ಕೂಸಿನ ತುಂಡಗಳನ್ನು ಉಡ್ಯಾಗ ಕಟ್ಟಿಕೊಂಡ
ಏಕ ನಿಷ್ಠಾದಿಂದ ಗಂಡನ ಧ್ಯಾನವನ್ನು
ಭಕ್ತಿಪೂರ್ವಕ ನೆನಿಸಿದಾಳ ಸಾಂಬ ಶಿವನನ್ನು
ಮಹಾದೇವಾ ಕಣ್ಣ ತೆರದ ನೋಡೋ ನನ್ನ ಸಂಕಟವನ್ನು ||
ಹೊತ್ತ ಏರೋ ತನಕಾ ಮಸ್ತ ಕಾಡ್ಯಾನ ಮಾಸ್ತರ
ಗಾಡಿ ಬಂತ ಅದರಾಗಿಂದ ಸಾಹೇಬ ಇಳದಾನು
ತನ್ನ ಉಡಿಯ ಬಿಚ್ಚಿ ತೋರಿಸ್ಯಾಳ ಮಗನ ತುಂಡಗಳನ್ನು ||

೨ನೇ ಚಾಲ

ನೋಡಿ ಸಾಹೇಬಗ ಬಂದಿತೊಳೆ ಸಿಟ್ಟ ಹಲ್ಲಕಡದ ಕಟಕಟ
ಸಾಹೇಬಂದು ಹಾರಿ ಖಬರಾ
ಕೇಳ್ಯಾನು ಎಲ್ಲ ಮಜಕೂರಾ ||
ಒಳಗ ನಿಂತ ಮುಗಿಯತಾನು ಕೈಯಾ ತೆರದಾನು ಬಾಯಾ
ತಗಿಯ ಬಾಗೀಲ
ವಲ್ಲಿನಂದ್ರು ನಿನ್ನ ಬಿಡೋದಿಲ್ಲಾ

೨ನೇ ಚಾಲ

ಕಾಶಿಬಾಯಿ ಅಂತಾಳು ಸಿಟ್ಟಿಗೆದ್ದಾ
ಹಿಂತಾ ಕೆಲಸ ಆಗದ್ದೊ ನಿನ್ನಿಂದಾ ||
ಜೀವ ಹೋದ್ರು ಚಿಂತಿ ಇಲ್ಲೊ ನಂದಾ
ಪತಿವ್ರತಾ ಧರ್ಮಕ್ಕ ತರಲಾರೆ ಕುಂದಾ ||
ಧ್ಯಾನ ಮಾಡ್ಯಾಳು ತನ್ನ ಗಂಡಂದಾ
ಮಾನಾ ಕಾಯೋ ಮಹದೇವ ಈಗ ನಂದಾ ||

||ಏರ||

ನಾಚಿಕಿಲ್ಲದ ಮೂಳಾ ನೀನು ನಾಯಿಹಂಗ ಬಗಳಬ್ಯಾಡ
ಪರಸ್ತ್ರೀಯಳ ಮ್ಯಾಲೆ ಮನಸ ಮಾಡೋ ರೀತಿ ಹೌದೇನಾ
ನಾಳೆ ಯಮನ ಮುಂದ ಜಡತಿ ಕೊಡತಿ ಏನಾ
ನಿನ್ನ ವಸ್ತಾವಡವಿಗೆ ಆಸೆ ಮಾಡುವಳಲ್ಲ ನಾನಾ ||
ಕಾಶಿಬಾಯಿ ಸತ್ಯಧರ್ಮ ಚಿತ್ತಗೊಟ್ಟ ಕೇಳಿರೆಮ್ಮ
ಕಡ್ಲಿಮಟ್ಟಿ ಸ್ಟೇಶನ್‌ದೊಳು ಆದಂಥಾ ಕಥನಾ
ಅತಿ ಶಾಂತದಿಂದ ಕುಂತಕೇಳ್ರಿ ಸರ್ವಜನಾ||೩||
ದುಷ್ಟ ಮಾಸ್ತರಗ ಸಿಟ್ಟ ಬಂದೀತೊಳೆ
ಕೆಟ್ಟಗಣ್ಣಿನಿಂದ ಮತ್ತ ಮಾರಿ ನೋಡ್ಯಾನು
ಇಂದ ನಿನ್ನ ಬಿಡಾಕಿಲ್ಲಂತ ಪಣಾ ತೊಟ್ಟಾನು
ಕಿಡಕಿ ಕಿತ್ತ ಹೊರಗ ಬರೋ ಯೋಚನಾ ಮಾಡ್ಯಾನು ||
ಸಿಟ್ಟಿನಿಂದ ಕಿಡಕಿ ಜಗ್ಗಿ ಬಾಳ ಗೋರ ಬಿಡತಾನ
ಕದಾ ಮುರಿಯಲಿಕ್ಕೆ ಕಟಪಟ ಮಾಡ್ಯಾನು
ನೀಗಲಿಲ್ಲ ಮೈ ಬೇಂವತ ಉಸರ ಹಾಕ್ಯಾನು ||
ಸಾಹೇಬ ಮಾಸ್ತರನ ಕರೆಸಿ ನಡೆಸಿ ಚೌಕಾಶಿ
ಗಲ್ಲಿನ ಠರಾವ ಹೇಳ್ಯಾರಾ
ಮಾಸ್ತರನ ಗಲ್ಲಿಗಿ ಏರಿಸ್ಯಾರಾ ||
ಕಾಶಿಬಾಯಿ ಗಂಡಗ ಹೋತ ಸುದ್ದಿ ಬಂದಾನ ಜಲದಿ
ಕೂಡ್ಯಾರು ಗಂಡ ಹೆಂಡಿರಾ
ನಾಡ ತುಂಬ ಆತಿ ಜಾಹೀರಾ ||

೨ನೇ ಚಾಲ

ಕಾಶಿಬಾಯಿ ದುಡದಾಳು ಧರ್ಮಕ್ಕ
ದುಷ್ಟಮಾಸ್ತರ ಗುರಿಯಾದ ಕರ್ಮಕ್ಕ
ಗಂಡನ ಮ್ಯಾಲ ಭಕ್ತಿ ಇರಲಿ ಕಡಿತನಕ
ದೊರಕುವದು ನಿಮಗ ಸ್ವರ್ಗಸುಖ ||
ನುಡಿದಂತೆ ನಡಿ ಇರಬೇಕ
ದಾನಧರ್ಮಾ ಮಾಡೋದು ಕಲಿಬೇಕ ||

||ಏರ||

ಗಂಡನಿಂದ ಗತಿ ಅಂತ ಹೇಳತಾರ ಗಾದಿಮಾತ
ಗಂಡನ ಸೇವಾ ಮಾಡರೆಲ್ಲಾ ಪ್ರತಿದಿನಾ
ತಿಗಡೊಳ್ಳಿ ಮರಿಕಲ್ಲ ಮಾಡಿದ ಈ ಕವಿ ರಚನಾ
ಸದಾ ಮಾಡುವನು ಬಲಭೀಮನ ಭಜನಾ ||
ಕಾಶಿಬಾಯಿ ಸತ್ಯಧರ್ಮ ಚಿತ್ತಗೊಟ್ಟ ಕೇಳಿರಮ್ಮಾ
ಕಡ್ಲಿಮಟ್ಟಿ ಸ್ಟೇಶನ್‌ದೊಳು ಆದಂತಾ ಕಥನಾ
ಅತಿ ಶಾಂತದಿಂದ ಕುಂತಕೇಳ್ರಿ ಸರ್ವಜನಾ||೪||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು