ಹುಂಬ ಮನಿಸ್ಯಾ ಹೊಂದಿಸಿದ ಪದಾ ಒಂದ
ಚೆಂದದಿಂದ ಕುಂತ ಕೇಳರಿ ನೀವು ಈಗ
ಸಂದಿಗೊಂದಿ ಎಲ್ಲಾ ಮುಳಿಗಿಹೋತ ನೀರಾಗ
ಇನ್ನ ಮುಂದ ತಿಳಿಸುವೆನು ನಾ ನಿಮಗ ||
ಸನ್ನ ಹತ್ತೊಂಭತ್ತನೂರಾ ಐವತ್ತಮೂರನೆ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ ||

ಕಿತ್ತೂರ ನಾಡಾನ ಸುದ್ದಿ ಚಿತ್ತಿಟ್ಟ ಕೇಳರಿನ್ನ
ಸತ್ತಾನ ಕಕ್ಕೇರಿ ಮುದಕ ಹಳ್ಳದಾಗ ಮುಳಗಿ
ಅವನ ಸತಿಸುತರು ಅಳತಾರ ಮನದಲಿ ಮರಗಿ
ದುಕ್ಕ ಮಾಡತಾರ ಕಣ್ಣೀರ ಚೆಲ್ಲಿ ಧರಣಿಗಿ ||
ಮೀರಿದ ಮಳಿಯಾಗಿ ಬಾಳ ಸೂರಿಯಾತ್ರಿ
ಕೆರಿ ಬಾಂವಿ ಎಲ್ಲಾ ತುಂಬಿ ಏಕಾಗಿ
ನೀರ ಹರಿತಿತ್ತ ವಂದಸವನ ಹೆಚ್ಚಾಗಿ ||

ಆದ್ರಿಮಳಿ ಅರ್ದಗಳದ ಹೊಳವ ಬಿತ್ತ ಅಂತಿದ್ರ
ಮಳಿ ಚಾಲು ಆತ ಮಂಗಳಾರ ಸಂಜಿಕ ಹೊತ್ತಮುಣಗಿ
ತಾರೀಕ ಮೂವತ್ತ ಇತ್ತ ಆರನೇ ತಿಂಗಳಿಗಿ
ಹಿಂಗ ರಭಸ ಮಾಡತಿತ್ತ ಒಳ್ಳೆ ಸುರುವಾಗಿ ||
ಬುಧವಾರ ದಿವಸ ಮುಂಜಾನೆ ಬೆಳಕಾಗಿ
ಅಷ್ಟರೊಳಗ ಗದ್ದಿಹಾಳ ಬಿದ್ದ ಎಲ್ಲಾ ಸಾಪಾಗಿ
ಇದ್ದ ಉದ್ದನ್ನ ಬತ್ತ ಕಾಣಲಿಲ್ಲ ನೀರಾಗಿ ಮುಳಗಿ ||

ಮಂದಿಗೆಲ್ಲಾ ದಿಂಗ ಬಡಿತ ಸುಂದ ಬಡದ ಸುತ್ತಹಾದ
ಬಂದ ಬಂದ ಕೂಡ್ಯಾರ ಚಾವಡಿ ಕಟ್ಟಿಗಿ
ನಾವು ಎಂದೆಂದು ಸಿಕ್ಕಿದಿದ್ದಲ್ಲ ಹಿಂತಾ ಮಳಿಗಿ
ಹಾಳಿ ಹಾಕಬೇಕಂತಾರ ನಾಳಿ ಹೊಲಕ್ಹೋಗಿ ||
ಇಂದ ಆದಂತಾ ಮಳಿ ಹಿಂದ ಎಂದೂ ಆಗಿದ್ದಿಲ್ಲ
ಸಂದ ಹಿಡದ ಬರತೆತ್ತ ನೀರ ಭೂಮಿಗಿ
ಹುಚ್ಚ ಹಚ್ಚಿಬಿಟ್ಟಿತೆಲ್ಲ ರೈತರಿಗಿ ||

೧ನೇ ಚಾಲ

ಒಡದ ಹ್ವಾದುವ ಎಲ್ಲಾ ಕೆರಿ ಕಟ್ಟಿ
ಕಟ್ಟಾಕ ಹ್ವಾದ್ರ ತಗೊಂಡ ಸಲಿಕಿ ಬುಟ್ಟಿ ||

ಭತ್ತ ಸತ್ತ ಆತ ಉಪರಾಟಿ
ಇನ್ನ ಹಚ್ಚೋನ ಅಂತಾರ ಎಲ್ಲಾ ನಟ್ಟಿ||

ಹಿಂಗ ಎಲ್ಲಾರು ಮಾಡೋಣ ಕಟಪಟಿ
ಮಲ್ಲಾಡ ಮಂದೀದು ಆತ ಮೂರಾಬಟ್ಟಿ ||

೨ನೇ ಚಾಲ

ಹಾದಿ ಬೀದಿಗಿ ನೀರ ಹೆಚ್ಚಾಗಿ
ಓಣಿ ಊರ ಎಲ್ಲಾ ಕೆಸರಾಗಿ ||

ಆದ್ರಿ ಮಳಿ ಆತಂತ ಹೆಸರಾಗಿ
ಹಾಳಿ ಬದುವ ಹ್ವಾದು ಹಾಳಾಗಿ ||

||ಏರ||

ಗದ್ದಿನೀರ ಗದ್ದಿಗಿ ಬಿದ್ದ ಸದ್ದಾ ಮುದ್ದಾ ಏಕಾಗಿ
ಆಗ ಜನರೆಲ್ಲಾ ನೋಡುತ ನಿಂತಾರ ಮನದಲ್ಲಿ ಮರಗಿ
ನೀರ ವಟ್ಟಗೂಡಿ ಹೋಗತಿತ್ತ ಮಲಪ್ರಭಾ ನದಿಗಿ
ನೋಡಿ ಆಗತಿತ್ತ ಆಗ ತಗಬಗಿ ||
ಸನ್ನ ಹತ್ತೊಂಭತ್ತನೂರಾ ಐವತ್ತ ಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ ||||೧||

ಇಳೆಯೊಳು ವಂದಸವನ ಕಾಳಗವನ ಮಳಿಯಾಗಿ
ಭಾಳ ಆತ್ರಿ ನೀರಿನ ಪ್ರಬಲ್ಲಾ
ಎಲ್ಲಾ ಹೇಳಬೇಕಂದ್ರ ಅದಕ ಗಣಿತಿಲ್ಲಾ
ಕುಂತ ಕೇಳರಿ ಹೇಳತೇನ ಇನ್ನಮ್ಯಾಲಾ ||
ಗುಡಗುಡಸಿ ಆದೀತ ಮಳಿ ಆಡಬಡಿಸಿ ಕುಂತಾರ ಕೇಳಿ
ತಡಪಡಿಸಿ ಅಂತಾರ ಇದು ಏನಕಾಲಾ
ಬಾಯಲಿ ಬಡಬಡಿಸಿ ಅಂತಾರ ನಾವು ಉಳಿಯೋದಿಲ್ಲಾ ||

ಗುಡ್ಡದ ಮ್ಯಾಲಿನ ನೀರ ಬಂದ ಮಡ್ಡಿಮಾಳಾ ಏಕಾಗಿ
ಹಾವಕಪ್ಪಿ ಗುದ್ದಾ ಬಿಟ್ಟ ಓಡ್ಯಾವ ದಿಕ್ಕಾಪಾಲಾ
ಗಿಡದ ಬಡ್ಡಿಗಳು ಹೋದುವ ನೀರಿನ ಹಿಂಬಾಲಾ
ಬಿದರಗಡ್ಡಿ ಕಿತ್ತ ಆದುವರಿ ಬುಡಮೇಲಾ ||
ಊರಕೇರಿಗಿ ಹೋದ ಜನಾ ಮೂರು ದಿವಸ ಇನ್ನೂ ಇಲ್ಲಾ
ನೀರ ಮುಳಗಿ ಹೋದರೇನೋ ಬರಲಿಲ್ಲಾ
ಹಿಂಗ ತೋರತೈತಿ ಅಂತಾರ ಜನರೆಲ್ಲಾ ||

ಬಿದ್ದನೀರ ಬಿದ್ದಬಿದ್ದ ಗದ್ದಿತುಂಬಿ ಹೆಚ್ಚಾಗಿ
ಇದ್ದ ಭತ್ತ ಸತ್ತ ಹೋದುವರಿ ಎಲ್ಲಾ
ನೀರ ವದ್ದ ನಿಂತ ಮಾಡೇತ್ರಿ ಗಾಲ ಮೇಲಾ
ಜನಾ ಸುಮ್ಮನ ಕುಂತಾರ ತಿಳಿವಲ್ತು ಅಕಲಾ ||
ಬೆಂಡಿ ಬೀಜ ಪುಂಡಿಕಾಳ ಕಂಡೆನಂದ್ರ ಉಳಿಯಲಿಲ್ಲ
ಹೆಂಡಿ ಬುಡಕ ಸಿಕ್ಕ ಹೋದುವರಿ ಎಲ್ಲಾ
ಜೋಳಾ ಅಕ್ಕಡಿಕಾಳ ಅಲಸಂದಿ ಹುಟ್ಟಲಿಲ್ಲಾ ||

ಹಕ್ಕಲಾ ಬಿತ್ತೀವಂದ್ರ ಹತ್ತಿದ ಮಳಿ ಬಿಡವಲ್ತು
ಸುತ್ತ ಹಾಕಿ ಹೊಡೀತೈತಿ ಅಕಲಿಲ್ಲಾ
ಹಿತ್ಲಾಗಿನ ಹೀರಿಬಳ್ಳಿ ಗೊಂಜಾಳ ಏನೂ ಹುಟ್ಟಲಿಲ್ಲ
ಬದನಿ ಬೀಜ ಬೈಮಂಗ ಏನೂ ನಾಟಲಿಲ್ಲಾ ||

ಹೊಳವ ಬಿದ್ದದ್ದ ನೋಡಿ ಹುಳ್ಳಿ ನವಣಿ ಬಿತ್ತೋಣಂದ್ರ
ಸಾಂವಿ ಬೆಳಿ ಸರಿಯಾಗಿ ಬರಲಿಲ್ಲಾ
ಕಬ್ಬಿನ ಬೆಳಿ ಆ ವರ್ಷ ಹೆಚ್ಚಾಗಿಲ್ಲಾ ||

೧ನೇ ಚಾಲ

ಹರಿದ ಮುರದ ನೀರಿನ ಗೂಡ ತರದ ಹೋದುವ ಬೆಳಿ
ಈಗ ಮುರದ ಬಿತ್ತೋದಕಿಲ್ಲ ದಿನಾ
ಹಿಂತಾದ ತರಬಾರದಿತ್ತ ತಂದ್ಯೊ ಭಗವಾನಾ ||
ಮರಮರಾ ಎಲ್ಲರು ಮರಗಿ ತರಾತರಾ ನಡಗಿ
ಅಂತಾರ ಇದು ಏನಾ
ನೋಡ್ರಿ ಸರ್ವರಿಗೆ ಇಲ್ಲ ಸಮಾಧಾನಾ ||

೨ನೇ ಚಾಲ

ಮಳಿ ಹಿಡಿದೀತ ಬಿಡವಲ್ತ ತಳಾ
ಸತ್ತಹೋದುವ ಭೂಮ್ಯಾಗಿನ ಹುಳಾ ||
ಗುಬ್ಬಿ ಪಕ್ಷಿ ನವಲ ಪಾರಿವಾಳಾ
ಜೀವಕಂಜಿ ಬಿಟ್ಟಾವ ಗಿಡಗಳಾ ||

||ಏರ||

ಚಿತ್ತವಿಟ್ಟ ಕೇಳರಿನ್ನು ಸುತ್ತೊರದ ಮಳಿ ಹೊಡದ
ಸತ್ತಾರ ಬಲು ಮಂದಿ ನೀರಾಗ ಮುಳುಗಿ
ತುತ್ತ ಆಗಿ ಹೋದ್ರ ಮಲಪ್ರಭಾ ನದಿಗಿ
ಮುಪ್ಪಾನ ಮುದುಕರು ಕುಂತಾರ ಗಡಗಡ ನಡುಗಿ ||

ಸನ್ನ ಹತ್ತೊಂಭತ್ತನೂರಾ ಐವತ್ತಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ||೨||

ಲೆಕ್ಕವಿಲ್ಲದ ಹಕ್ಕಿ ಪಕ್ಷಿ ದಿಕ್ಕತಪ್ಪಿ ಹಾರೋದ ಬಿಟ್ಟ
ಪಕ್ಷಿ ಸೋತ ಬಿದ್ದು ಕಾಲ್ಹೋಗಿ
ಲಾವಕಿ ಗಿಣಿ ಗೂಡ ತುಂಬ ನೀರಾಗಿ
ಮಳಿಗಿ ಸಿಕ್ಕ ಸತ್ತ ಹ್ಯಾದುವರಿ ಹದ್ದಕಾಗಿ ||
ಅಡಕುರಿ ಟಗರ ಹೋತ ಆಡಿ ಮೇಯೋ ಪ್ರಾಣಿಗಳು
ಜಟಾಪಟಾ ಸತ್ತು ಗಾಳಿ ಸಲುವಾಗಿ
ಮಳಿ ಸಾಕಸಾಕ ಅಂತಾರ ಜನಾ ಹೊರಗ್ಹೋಗಿ ||

ಪೊಡವಿಯೊಳು ಇರುವಂಥಾ ಅಡವಿ ಹಂದಿ ಕಾಡಕೋಣ
ತಡವಿಲ್ಲದೆ ನಡಿಗ್ಯಾವ ತಂಡಿ ಸಲುವಾಗಿ
ಗುಡಗ ಹೊಡಿವಂತಾ ಹುಲಿಕರಡಿ ಓಡಿದಾವ ತಮ್ಮ ಗವಿಗಳಿಗಿ
ಸುತ್ತ ಹಾಕಿಕೊಂಡ ಬಿಟ್ಟಾವರಿ ಸಲ್ಲ ಅಡಗಿ ||
ಎತ್ತು ಎಮ್ಮಿ ಕತ್ತಿ ಕುದರಿ ನಿತ್ಯ ನಿತ್ಯ ದುಬ್ಬತೋ
ಕಾಲಕೊಳತ ಸತ್ತಾವ ಮಳಿ ಹೆಚ್ಚಾಗಿ
ಎಂಥಾ ಹೊತ್ತ ಬಂದೀತಂತ ಮನದಾಗ ಮರಗಿ ||

ಹಿಂಗ್ಯಾಕ ಮಾಡಿದ ಶಿವ ಹಂಗಮ ಹದಿಗೆಟ್ಟಹ್ವಾದು ಅಂತ
ಹಟಗಂತ ಬೈತಾರ ಸೃಷ್ಟಿಕರ್ತನಿಗಿ
ಒಣಾಹುಲ್ಲ ಹೊಟ್ಟ ತೋದ ಹೋತ ಮಳಿಗಿ
ಕೋದ ಹಾಕೋಣಂದ್ರ ಹುಲ್ಲ ಇಲ್ಲ ದನದ ಹೊಟ್ಟಿಗಿ ||
ಚಿಂತಿ ಮಾಡತಿದ್ರ ಜನಾ ಕೈಮುಗಿದ ಬೇಡಿಕೋತಾರ
ಕುತ್ತ ಬಂದsತಿ ಅಂತಾರ ದೇವರಿಗಿ
ಇನ್ನ ಹ್ಯಾಂಗ ಹೇಳ್ರಿ ಪಾರೊಗೊ ಬಗಿ ||

ಮಲಪ್ರಭಾ ನದಿ ತುಂಬಿ ಚೆಲ್ಲವರದ ಹೋಗುವಾಗ
ಎಲ್ಲಾ ಪೂಲಮ್ಯಾಲ ದಾರಿ ಇಲ್ಲ ಮೋಟಾರಿಗಿ
ಮೇಲೆ ನೀರ ಬರತಿತ್ತ ಇನ್ನು ಹೆಚ್ಚಾಗಿ
ಎಲ್ಲಾ ಎಸ್ಟಿ ಗಾಡಿ ಬರತಿದ್ದುವ ಹಿಂದುಗಿ ||
ಖಾನಾಪುರ ಕಾರಖಾನೆದಾನ ಕಪಾಟ ಕಾಗದ ಪತ್ರಾ
ರಪಾಟ ಬರತಿದ್ದುವ ತೇಲುತ ಮುಳುಗಿ
ಅವನ್ನ ಹಿಡಕೊಂಡಾರ ಹಿರೆ ಮುನವಳ್ಳಿಗಿ ||

೧ನೇ ಚಾಲ

ಸೃಷ್ಟಿನೇಮ ಬಿಟ್ಟಹೋತ ಹಟ್ಟಿಹೊಳಿ ಊರಾಗ
ಒಟ್ಟರಸಿ ಹೊಕ್ಕಿತ್ಹೊಳಿ ನೀರಾ
ಊರನ ಮಂದಿ ನಿಲ್ಲದೆ ಓಡ್ಯಾರ ||

ಮಧ್ಯಾಹ್ನದ್ಹೊತ್ತ ಆಗಿತ್ತ ಭರಪೂರ /
ಹೊರಗೆ ಹೋಗಿದ್ದುವ ದನಾಕರಾ
ಕಾಯಾವರಿಲ್ಲ ಆಗ ಯಾರ‍್ಯಾರಾ ||

೨ನೇ ಚಾಲ

ಬುಧವಾರ ದಿವಸ ಆಯ್ತ ಆರತಾಸಾ
ಹಡಿಯಾಕ ಕುಂತ ಹೆಣ್ಣಿಗಿ ಬಾಳ ತ್ರಾಸಾ ||

ಹೊರಗ ಓದ ಹಾಕ್ಯಾರ ಆಗ ಹೊರಸಾ
ಹಡದ ಕುಂತಾಳ ಅಡಿವ್ಯಾಗ ಉಪವಾಸಾ ||

ಬೆಕ್ಕ ಕುಂತಿತ್ತು ಬಣವಿಮ್ಯಾಗ ಇಲ್ಲ ದ್ಯಾಸಾ
ಎರಡ ನರಿ ಏರ‍್ಯಾವ ಬಣವಿ ಮಾಡಿ ಸಾಸಾ ||
ಬಣವಿ ನಡದೀತ ನೀರಾಗ ಸಾವಕಾಶಾ
ಮೂರೂ ಮುಟ್ಟ್ಯಾವ ಆಗ ಕೈಲಾಸಾ ||

||ಏರ||

ಅಡಬಡಿಸಿ ಹೊಕ್ಕಿತ ನೀರ ಅರವತ್ತಮನಿಗಳ ಗ್ವಾಡಿ
ತಡವಿಲ್ಲದ ಬಿದ್ದಾವ ಒಂದಗಳಿಗ್ಯಾಗ
ಕಾಳಕಡಿ ಏನು ಉಳಿಯಲಿಲ್ಲ ಮನಿಯಾಗ
ಅಂಜಿ ಓಡಿ ಹೋಗಿ ಕೂತಾರ ಅಡಿವ್ಯಾಗ ||
ಸನ್ನ ಹತ್ತೊಂಭತ್ತನೂರಾ ಐವತ್ತಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ||೩||

ಲೆಕ್ಕವಿಲ್ಲದಷ್ಟ ನೀರ ಚಿಕ್ಕ ಹಟ್ಟಿಹೊಳಿಗಿ ಬಂದ
ದಿಕ್ಕ ತಪ್ಪಿಸಿ ಬಿಟ್ಟಿತ ಒಂದ ಗಳಿಗ್ಯಾಗ
ಐವತ್ತ ಮನಿಗಳು ನಿಂತಾವ್ರಿ ನೀರಾಗ
ಮಂದಿ ಗಡಬಡದಿಂದ ಓಡ್ಯಾಡತಾರ ಒಳಹೊರಗ ||
ಜೀಕನೂರ ಒಳಗ ಹೊಳಿ ನೂಕತಿತ್ತ ಒಂದ ಸವನ
ಮೂಡ್ಲಹೋರಿ ಹೋಗಿದ್ದುವ ಹೊಳಿಯಾಗ
ಎರಡೂ ಕೂಡೆ ಉಳದ ಬಂದುವ ಈಸಿ ಹೊರಗ ||

ಜೋರಾವರಿ ನೀರಬಂದ ಈರಾಪುರ ಹೊಕ್ಕಿತ
ಸರಾಸರಿ ಆರತಾಸ ಮಧ್ಯಾಹ್ನದಾಗ
ಹಾಲಉಕ್ಕೇರಿ ಒಮ್ಮಿಗಿಲೆ ಬಂದಾಂಗ
ದನಾಕರಾ ಮರಿ ಹೋಗಿದ್ದುವ ಭೂಮ್ಯಾಗ ||
ಗ್ವಾಡಿ ಬಿದ್ದ ಕೇಡನಾಗಿ ಊರಾನ ಮಂದಿ ನೋಡಿಕೊಂತ
ಓಡತಾರ ಸುತ್ತಹಾದ ಊರ ಹೊರಗ
ಇನ್ನ ಎತ್ತ ಹೋಗಬೇಕ ತಿಳಿವಲ್ತ ನಮಗ ||

ಮಸ್ತ ರೊಕ್ಕಾ ಖರ್ಚಮಾಡಿ ಸಿಸ್ತ ಮನಿ ಹಾಕಿಸಿದ್ರ ಒಂದ
ದಿಕ್ಕಿಲ್ಲದೆ ನಿಂತೀತ ನೀರಾಗ
ಕೊಪ್ಪರಿಗಿ ಹಾಕಿ ದಾಟ್ಯಾಡತಾರ ಓಣ್ಯಾಗ
ಮತ್ತಿಕೊಪ್ಪದಿಂದ ಬಂದಿತ್ತ ಉಡಿಕಿ ನಿಬ್ಬಣಾಗ ||
ಇಂದ ಇದ್ದ ಕಾರೆ ಈಗ ಬಂದ ಮಾಡಿ ಬಿಡೋಣಂದ್ರ
ನೀರ ಬಂದ ಹೊಕ್ಕsತಿ ಮನಿಯಾಗ
ಅಡಿಗಿ ಹ್ಯಾಂಗ ಮಾಡೋಣಂತಾರ ಇದರಾಗ ||

ಹೆಂಗಸೂರ ಅಂತಾರ ಹಿಂಗ ಸುತ್ತ ಹಾಕೇತಿ ಹೊಳಿ
ಕತ್ಲ ಕವಿದಂಗಾಗಿ ಹೋತ ಈಗ ನಮಗ
ಎಂಥಾ ಹೊತ್ತ ತಂದ್ಯೋ ಸ್ವಾಮಿ ಶಂಕರ ನಮಗ
ಗದ್ಲಾ ಮಾಡತೈತಿ ಹೊಳಿಹೊಕ್ಕ ಹೊಲಿಗೇರ‍್ಯಾಗ ||
ಹೊಟ್ಟ ಹುಲ್ಲಿನಬಣವಿ ಕಟಿಗಿ ಕುಳಬಾನ
ಒಟ್ಟಿಗೆ ನಿಂದರಲಿಲ್ಲ ನೆಲದಮ್ಯಾಗ
ಅಷ್ಟೂ ತಟ್ಟನೆ ಎದ್ದ ಹ್ವಾದು ಹೊಳಿಯಾಗ ||

೧ನೇ ಚಾಲ

ದನದ ಮೇವು ಏನ ಉಳಿಯಲಿಲ್ಲ ಆತ ದಿಕ್ಕಾಪಾಲ
ತೇಲಿಹೋತ ಮದಲಾ
ಉಪವಾಸ ದನಾಕರಾ ಎಲ್ಲಾ ||

ಹೆಣ್ಣುಗಂಡು ಹುಡಗೋರು ಹವ್ವಹಾರಿ ಆದಾರ ಗಾಬರಿ
ನಿಂತಾರ ಕಬರಿಲ್ಲಾ
ಕಾಳಕಡಿ ತುಸಾ ಉಳೀಲಿಲ್ಲಾ ||

೨ನೇ ಚಾಲ

ಬಡವರಿಗೆ ಬಂದೀತೊ ಬಾಳಗೋರ
ಮಿಡಕೂತ ಕುಂತಾರೋ ಎಲ್ಲಾರಾ ||
ಊರ ತುಂಬ ನಿಂತಿತ್ತರಿ ನೀರಾ
ಮನಿ ಬಿದ್ದುವ ವಂದ ಐದಾರಾ ||

||ಏರ||

ಕಂಡದ್ದನ್ನು ಬೇಡುವಂತಾ ಉಂಡಾಆಡೊ ಹಿಂಡ ಮಕ್ಕಳ
ತಂಡಿ ಹತ್ತಿ ನಡಗತಾವ ತಂಬಲ ಅರಿವ್ಯಾಗ
ಹಸದ ಹಲಬತಾವ ಕೂಳಿಲ್ಲ ಹೊಟ್ಟ್ಯಾಗ
ತಾಯಿತಂದಿ ನೋಡಿ ನೀರತಂದ್ರ ಕಣ್ಣಾಗ ||

ಸನ್ನ ಹತ್ತೊಂಭತ್ತನೂರಾ ಐವತ್ತಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ||೪||
ಅಬ್ಬರಲೆ ಬಂದಿತ ಹೊಳಿ ಹುಬ್ಬಳ್ಳಿ ಮಂದಿಕೇಳಿ
ಅಬ್ಬಬ್ಬಾ ಅಂತಾರ ಇದು ಏನುಕಾಲಾ
ಎತ್ತ ನೋಡಿದರು ನೀರ ಕಾಣತೈತಿ ನಾಡಮ್ಯಾಲಾ
ದಿಬ್ಬದ ಮ್ಯಾಲ ನಿಂತ ನೋಡತಾರ ಜನರೆಲ್ಲಾ ||
ಗೋರಬಿಟ್ಟ ಹಚ್ಚಿದಂತಾ ಪ್ಯಾರಲ ತೋಟದಾಗ ಹೊಕ್ಕ
ಸಾಲಹಿಡದ ಬೀಳತಿದ್ದುವರಿ ಗಿಡ ಎಲ್ಲಾ
ನೀರ ಬಂದಿತ್ತ ಏರಿ ಪೂಲಿನಮ್ಯಾಲಾ ||

ಹೊಟ್ಟ ಹುಲ್ಲಿನ ಬಣವಿ ಬಂದ ತಟ್ಟನೆ ಬಡದ ತಾರಕಂಬ
ಲಟ್ಟನೆ ಮುರದ ಹ್ವಾದುವರಿ ಉಳಿಲಿಲ್ಲಾ |
ತಾರ ತಂತಿಗಳು ಹರದ ಹೊಂಟು ನೀರಿನ ಹಿಂಬಾಲಾ
ಹಿಂಗ ನಡದಿತ್ತ ಹುಬ್ಬಳ್ಳಿ ಮುಂದ ಗಾಲಮೇಲಾ ||
ಹೊಳಿ ನೋಡಾಕ ಹ್ವಾದ ಜನಾ ಹೊಳ್ಳಿ ಇನ್ನು ಬರಲಿಲ್ಲ
ಕಾಗಳವದ ಆಗೇತ್ರಿ ಕತ್ತಲಾ
ಮಳಿ ಹತ್ತೀತ ಬಿಡಲಿಲ್ಲ ಸಡಿಲಾ ||

ಹೆಚ್ಚಾಗಿ ಬಂದಿತ ನೀರ ಅಚ್ಚುತರಾಯನ ಕಟ್ಟಿಮುಚ್ಚಿತ
ಹೆಚ್ಚಾಗಿ ಆಗ ಒಳಗ ಹೊರಗೆಲ್ಲಾ
ಒಡದ ಬಿಚ್ಚೀತ ಸುತ್ತಿನ ಗ್ವಾಡಿ ತಳದಾನಕಲ್ಲಾ
ಅಲ್ಲಿ ಮುಂಜಿಗಿ ಬಂದಿದ್ರ ಬ್ರಾಹ್ಮಣರೆಲ್ಲಾ ||
ತಡಪಡಿಸಿ ಕುಂತಾರ ಅವರು ಅಡಬಡಿಸಿ ಹತ್ತ್ಯಾರಗುಡಿ
ಸಣ್ಣ ಹುಡುಗೋರನ್ನ ಕುಂಡ್ರಿಸಿ ತೊಲಿಮ್ಯಾಲಾ
ಬಡಬಡಿಸಿ ಅಂತಾರ ನಾವು ಉಳಿಯೋದಿಲ್ಲಾ ||

ಹೆಂಗ ಮಾಡೋಣ ನಾವಿನ್ನ ಸಣ್ಣ ಮಕ್ಕಳ ಹಿಂಬಾಲೆಂತ
ಹಿಂಗ ಕುಂತಗೊಂಡ ಅಳತಿದ್ರ ಹೆಂಗಸರೆಲ್ಲಾ
ಅನ್ನದ ಬಾಂಡೆಗಳು ಆದಾವ ನೀರಪಾಲಾ
ಉಂಡಿ ಅವಲಕ್ಕಿ ಹ್ವಾದುವ ನೀರಿನ ಹಿಂಬಾಲಾ ||
ಹಾಲಮಸರ ಬೆಣ್ಣಿ ಎಲ್ಲಾ ಉಂಡೇನಂದ್ರ ಉಳಿಯಲಿಲ್ಲ
ಸುತ್ತಕಡೆ ನೀರ ಬಂದ ಹಾಕಿತ ಜಾಲಾ
ತಂಡಿಹತ್ತಿ ನಡಗತಿದ್ರ ಖಬರಿಲ್ಲಾ ||

ಗುಲ್ಲ ಮಾಡಿ ಕರದೇವಂತಾರ ಸಲ್ಲ ಅಡಗಿಹೋತ ಎಲ್ಲಾ
ಬಾಯಾನ ಹಲ್ಲಿಗಿಹಲ್ಲ ಹಚ್ಚಿಕೊಂಡ ಜಲ್ಲಾ
ಕಾಲಮ್ಯಾಲ ಹಾಂವ ಚೋಳ ಹರದಾಡತಾವ ಅಳತಿಲ್ಲಾ
ಸುತ್ತುಕಡೆ ನೀರ ತುಂಬಿ ಮುಳಗೀತ ಹೊಳಿಸಾಲಾ ||
ದುಡಕೀಲೆ ನೀರಬಂದ ದಡಕಿ ಹೊಡಿತಿತ್ತ ಬಾಳ
ಮಿಡಮಿಡಕಿ ಅಂತಾರ ನಾವು ಉಳಿಯೋದಿಲ್ಲಾ
ಅಲ್ಲೆ ಕುಂತ ಹೊತ್ತ ಹಾಕಿದಾರ ರಾತ್ರೆಲ್ಲಾ ||

೧ನೇ ಚಾಲ

ಹೊತ್ತ ಮುಳುಗಿ ಆತ ರಾತsರಿ ನಿಂತಿದ್ರ ಗುಡಿ ಏರಿ
ಗಾಳಿ ಬಡದ ನಡಗ್ಯಾರ ಕಟಾಕಟಾ
ವಳ್ಳೆ ಮಾಡತಿದ್ರೊ ಬಬ್ಬಾಟಾ ||

ಶ್ರೀಹರಿ ಕೃಷ್ಣಮುರಾರಿ ಗೌರಿಶಂಕರ
ಸ್ವಾಮಿ ಎಂಕಟಾ
ಜೀವ ಹೋಗತಾವ ಕಾಯೊ ಮುಕ್ಕನ್ನ ||

೨ನೇ ಚಾಲ

ಮರುದಿವಸ ಮುಂಜಾನಿ ಬೆಳಗಾಗಿ
ಕರದ ಹೇಳತಾರ ಮಂದೀಗಿ ||

ತಾರ ಮಾಡಿ ಕರಸರಿ ನಮ್ಮ ಜನರಿಗಿ
ತಾರ ಹೋತ ತಡವಿಲ್ಲದ ಬೆಳಗಾಂವಿಗಿ ||

ತಾರ ಬಂದದ್ದ ನೋಡಿ ಅವರು ತಡಾ ಮಾಡಲಿಲ್ಲ
ಆಗಿ ಗಡಾ ಓಡಿಹ್ವಾದ್ರ ಕ್ಯಾಂಪಿಗಿ
ಲಾಂಚ್ ಮಶಿನ್ ಈಗ ಒಯ್ಯಬೇಕಂದ್ರ ಹುಬ್ಬಳ್ಳಿಗಿ
ನೀವು ಹೆದರೋ ಕಾರಣಿಲ್ಲಾ ಖರ್ಚಿಗಿ ||

ಸನ್ನ ಹತ್ತೊಂಭತ್ತನೂರಾ ಐವತ್ತಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ||೫||

ಮಿಶೆನ್ ಬಂದದ್ದನೋಡಿ ಇವರು ಹುಶ್ಯಾರಾಗಿ ಕುಂತಾರ
ಅಗದಿ ಕುಶ್ಯಾಲದಿಂದ ನಗತಿದ್ರ ತಮ್ಮೊಳಗ
ನೀರಾನ ಮೋಟೋರ ತಂದ ಚಾಲೂ ಮಾಡಿದಾರ ಹಕ್ಕಲದಾಗ
ಉಸರ ಎಳದ ನಿಂತೈತಿ ಅಲ್ಲಲ್ಲಿ ಬಲ್ಲಂಗ ||
ಹುರಪೀಲಿ ಹೋಗತಿತ್ತಗಾಡಿ ದರಪಿಲೆ ಬಿಟ್ಟಿದ್ದ ವೇಗ
ಬರಾಟ ಬರಪೂರ ಸರಪ ಹ್ವಾದಾಂಗ
ಗಾಡಿ ಬಂದ ಆಗಿ ನಿಂತೀತ ನಿರಾಗ ||

ಮೂರು ಮಂದಿ ಕೂಡಿಕೊಂಡ ಗೋರಬಾಳ ಬಿಡತಾರು
ಸೆಳವ ಬಲಿಯ ಹತ್ತಿತರಿ ಬಲ್ಲಂಗ
ಮಿಶೆನ್ ತೇಲುತ ತೇಲುತ ನಡದೀತ ಹೊಳಿಯಾಗ
ಇನ್ನ ಉಳಿಯೋ ಹಂಚಿಕಿ ಮಾಡೋಣ ಹ್ಯಾಂಗ ||
ಪ್ಯಾರಲ ತ್ವಾಟದಾಗ ಹೊಕ್ಕೀತ ಲಾಂಚಗಾಡಿ
ಗಟ್ಟಿಮುಟ್ಟಿ ಸಿಕ್ಕೀತ ವಂದ ಗಿಡದಾಗ
ಹಗ್ಗಹಚ್ಚಿ ಬಿಗದ ನಿಂತಾರ ಗಿಡದ ತುದಿಮ್ಯಾಗ ||

ಪಾರಮಾಡೊ ಪರಮೇಶ್ವರಾ ಘೋರ ಬಂದತಿ ಅಂತಾರ
ನಮ್ಮನ್ನ ಸೋದಮಾಡಿ ತಂದ ಹಾಕಿದಾರ ಇದರಾಗ
ಫೌಜದಾರ ಅರೆ ಇಸಕಾ ಮಾಕಾ ಅಂತಾನ ಆಗ
ನಮನ್ನ ಪಾರಮಾಡಿದವರಿಗೆ ರೊಕ್ಕಾ ಕೊಡತವಂದ್ರ ಬಲ್ಲಂಗ ||
ಅಷ್ಟರೊಳಗ ಒಟ್ಟಗೂಡಿ ಹುಬ್ಬಳ್ಳಿ ಹುಡಗೋರು ಅಂದ್ರ
ಬರಾಬರಿ ಇಪ್ಪತ್ತೈದ ರೂಪಾಯಿ ಒಬ್ಬಬ್ಬಗ
ಆಡಿದಂತ ಕೊಟ್ಟ ದಾಟಿದಾರ ಹೊರಗ ||

ದಪಮಾಡತಿತ್ತ ಹೊಳಿ ದುಡಕೀಲೆ ಹೊಕ್ಕೈತಿ ನೋಡ್ರಿ
ಹುರಪಿಲಿಂದ ಹುಣಸಿಕಟ್ಟಿ ಊರಾಗ
ಜನರು ಹವ್ವಹಾರಿ ಬಡದ ನಿಂತಾರ ದಿಂಗ
ಇನ್ನೂ ವತ್ತಿ ಬಂದರ ನಾವು ಮಾಡೋದ್ಯಾಂಗ ||
ಆರತಾಸ ಮೀರಿತ್ತ ಆಗ ಜೋರಿನಿಂದ ಏರತಿತ್ತ
ಅರಮನಿ ಬಿದ್ದಾವ ಒಂದs ಓಣ್ಯಾಗ
ಇಷ್ಟಕ್ಕ ಬಿಟ್ಟಿತ ನಮನ ಅಂದಾರ ಆಗ ||

೧ನೇ ಚಾಲ

ಸಯಿಲ ಬಿಡದೆ ಸಾಗಿಹೋತ ಹತ್ತಲಿಲ್ಲ ಗಳಿಗಿಹೊತ್ತ
ಮುಟ್ಟೀತ ಸಂಗೊಳ್ಳಿಗಿ
ಒಂದ ಬಾರಕ ಮೂರಸರತಿ ಕೂಗಿ ||
ಎಲ್ಲಾ ಮಂದಿಗಿ ಹೊಕ್ಕಿತ ತಗಿಬಗಿ ಓಡೋಣಂದ್ರ ಮಡ್ಡಿಗಿ
ನೀರಿನ ಬಗೀ
ಊರಾಗ ಬಂತ್ರಿ ಸಾಗಿ ||

೨ನೇ ಚಾಲ

ಸಂಗೊಳ್ಳಿ ಮುಂದ ಐತಿ ನಾವಿ ದೋಣಿ
ಕಟ್ಟಿ ಓಡ್ಯಾರ ಹಚ್ಚಿ ಸರಪಣಿ ||

ಸುರು ಆದೂರಿ ಬೀಳಲಿಕ್ಕೆ ಮನಿ
ಕಣಕಿ ಬಣವಿ ನಡದುವ ಹಿಡದ ಓಣಿ

||ಏರ||

ಸಂಗೊಳ್ಳಿ ಮಂದೆಲ್ಲಾ ಆಗ ದಿಂಗ ಬಡದ ಓಡ್ಯಾಡತಾರ
ಹೆಂಗ ದಾಟಬೇಕ ತಿಳಿವಲ್ತ ನಮಗ
ನೀರ ಹೊಕ್ಕೀತ ಜೋಳದ ಹಗೇದೊಳಗ
ಹೋಗಿ ಕುಂತಾರ ಮಂದಿ ಲೈನ ಹಾದಿ ಮ್ಯಾಗ ||

ಸನ್ನ ಹತ್ತೊಂಭತ್ತನೂರಾ ಐವತ್ತಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ||೬||

ಸಂಗೊಳ್ಳಿ ಊರಮಂದಿ ಸಣ್ಣ ದೊಡ್ಡವರಂತಾರ ಹಿಂಗ
ನೀರಾವರಿ ವಡ್ಡಿನಿಂದ ಉಳದ್ವು ಮನಿ ದೀಡನೂರಾ
ಬಾಳ ಸಿಸ್ತಿಲೆ ಕಟ್ಟಿದ್ರ ವಳೆ ಬಂಧುರಾ
ವಡ್ಡ ಕಟ್ಟಿ ಬರದಂಗ ಮಾಡಿದ್ರ ನೀರಾ ||
ಒದರಿತ ಒಮ್ಮಿಗಿಲೆ ಹೊಳಿ ಬೆದರಿತ ಮಂದೆಲ್ಲಾ
ಅದರೀತ ಕಟ್ಟಿದ ವಡ್ಡ ಒಂದ ಬಾರಾ
ಮಣ್ಣ ಉದರೀತ ಹೆಚ್ಚಾಗಿ ನೀರಿನ ಜೋರಾ ||

ಹತ್ತಿದ ಮಳಿ ಬಿಡವಲ್ತ ಊರ ಸುತ್ತು ಕಡಿನೀರ ಬಂದ್ರೂ
ಹಾಕಿದ ವಡ್ಡ ಕೀಳಲಿಲ್ಲ ಬಂಧುರಾ
ಕೇಡ ಆಗೋದ ನೋಡಿ ಅಳತಾರ ಎಲ್ಲಾ ಜನರಾ
ಇನ್ನ ಎತ್ತ ಹೋಗೋಣಂತಾರ ಹೆಂಗಸರಾ ||
ಅಡಗಿಮನಿ ಪಡಸಾಲಿ ತುಂಬಿ ಎಡಬಲಕ ಸುತ್ತೊರದ ನೀರ
ಮಲಗಿದ ಹುಡಗರ‍್ನ ತಗೊಳ್ಳೋದು ಅವಸರಾ
ಗಲಿಬಿಲಿಯಿಂದ ಓಡಿಹೋದ್ರ ಎಲ್ಲಾರಾ ||

ಪ್ಯಾಟಿ ಕೂಟಿನ್ಯಾಗ ದಾಟ್ಯಾಡದಂಗ ಹೊಳಿ ಬಂದ
ನೀರ ನಿಂತೀತ ಒಳೆ ಅಬ್ಬರಾ
ಕಟ್ಟಿಮ್ಯಾಲ ಚಿಮ್ಮಿ ಹೊಗತಿತ್ತ ವಳೆ ಜೋರಾ
ನೋಡಿ ಉಸರ ಹಾಕತಿದ್ರ ಎಲ್ಲಾ ಅಂಗಡೆವರಾ ||
ಮೂರ ಪೂಟ ಕಟ್ಟಿ ಏರಿ ಹೋಗಲಿಲ್ಲ ನೀರಾ
ದೀಡನೂರ ಮನಿ ಉಳದು ಊರೆಲ್ಲಾ ಸಂಹಾರಾ
ಅಂಗಡಿಕಾರರು ಅಂತಾರ ಕಾದ್ಯೋ ಪರಮೇಶ್ವರಾ ||
ಹೊಳ್ಳಿ ನೋಡೋದರೊಳಗ ಪೂಜೇರ ಮನಿಯೊಳಗ
ದಿಕ್ಕ ತಪ್ಪಿ ಹೊಕ್ಕ ನಿಂತಿತ ನೀರಾ
ಖಬರ ಹಾರಿ ಓಡತಿದ್ರ ಹೆಂಗಸರಾ
ಗೌಡರ ಮನಿಗಿ ಹೋಗಿ ನಿಂತಕೊಂಡ್ರ ಎಲ್ಲಾರಾ ||
ಮನಿಯಾಗ ಹೊಕ್ಕರ ಮಾಡೋದೇನ ದೇವರಾ ಎಲ್ಲಾ
ತಕ್ಕೋಬೇಕಂತ ಬುಟ್ಟಿ ತುಂಬಿದರ ಬಸಯ್ಯನವರಾ
ಗಂಟಿದೂಪಾರ್ತಿ ಮರತಬಂದ್ರ ಆತ ಅವಸರಾ ||

೧ನೇ ಚಾಲ

ನೀರ ಇತ್ತ ಊರ ಸುತ್ತೊರಗಿ ಹೊಕ್ಕಿತ ಹೊಲಗೇರಿಗಿ
ಮುಳಗಿದಾವ ಮನಿ
ಏರಿ ಬಂದಿತ್ತ ಚವಕಟ್ಟಿ ಸನೆ ಸನಿ ||

ತಾಲಿ ಗಿಂಡಿ ತಂಬಿಗಿ ತಾಬಾಣ ಹಂಡೆ ಕೊಡಪಾನ
ಬಂಗಾರ ಬೆಳ್ಳಿ ಹಮ್ಮಿಣಿ
ಎಲ್ಲಾ ಹೋತ ಮಾಡಿದ ಜಿಂದಗಾಣಿ ||

೨ನೇ ಚಾಲ

ಕಾಳಕಡಿ ಉಳಿಯಲಿಲ್ಲ ತುಸಾ
ಹೊಟ್ಟಿಗಿಲ್ಲದೆ ಕುಂತಾರ ಉಪವಾಸಾ ||

ನಾನಾ ತರದಿಂದ ಆಗತಾರ ನಾಶಾ
ಪಾಂಡವರಿಗೆ ಬಂದಾಂಗ ವನವಾಸಾ ||

||ಏರ||

ರೊಟ್ಟಿ ಹಂಚ ಬುಟ್ಟಿ ಮರಾ ಬಿಟ್ಟಬಂದ ಕುಂತೇವ
ಒಂದ ರೊಟ್ಟಿ ಸಹಿತ ತರಲಿಲ್ಲಾ ಮಕ್ಕಳಿಗಿ
ಅಟ್ಟ ತಿಂದೇವಂದ್ರ ಉಳಿಲಿಲ್ಲ ಒಂದೂ ಗಡಿಗಿ
ಹಿಟ್ಟ ನಾದಕ ಇರಲಿಲ್ಲ ಕೊಣಂಬಿಗಿ ||
ಸನ್ನ ಹತ್ತೊಂಭತ್ತನೂರಾ ಐವತ್ತಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳೆ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ ||||೭||

ಹಿರೇರ ಗಳಿಸಿದಂತಾ ಬದಕ ಬಂಗಾರಾ ಸ್ಥಿರವಾಗಿ ಇದ್ದಿತಂತ
ಅಣ್ಣತಮ್ಮಂದಿರ ಹೇಳಿದ್ದಿಲ್ಲ ತಮ್ಮೊಳಗ
ಹಿಂಗ ನರಕ ಮಾಡಿಕೊಂಡಿದ್ರ ಮೊದಲ ಬಡ್ಡ್ಯಾಗ
ಈಗ ಊರ ಊರ ತಿರಗೋದ ಬಂತ ನಮ್ಮ ದೈವದಾಗ ||
ಸಯಿಲ ಬಿಡವಲ್ಲ ಮಳೆ ಲೈನಹಾದಿ ಮ್ಯಾಗ ಅವರು
ಮೂರ ದಿವಸ ಕುಂತ್ರ ತಪ ತಂಡ್ಯಾಗ
ಸಣ್ಣ ದನಾಕರಾ ಸತ್ತಬಿದ್ದು ಹಾದಿ ಮ್ಯಾಗ ||

ಬಸರ ಹೆಂಗಸರೆಲ್ಲಾ ಕೆಸರಾಗ ಹೆಂಗ ಹೋಗೋಣಾಂತ
ಉಸರ ಹಾಕತಾರ ಕುಂತ ಹಾದಿಮ್ಯಾಗ
ಬಾಳ ಹುಶ್ಯಾರಕಿಲೆ ಒಯ್ಯತೇವ ನಿಮಗ
ಗಂಡಸೂರ ಗಡಬಡದಿಂದ ಕರಕೊಂಡಹೋದ್ರ ಊರಹೊರಗ ||
ಸುತ್ತುಕಡೆ ಹಳ್ಳಿ ಮಂದಿ ರೊಟ್ಟಿ ಓದಕೊಡತಾರ
ಪಟ್ಟ ಮಾಡೋಣಂದ್ರ ತಮ್ಮ ಊರೊಳಗ
ಹಿಂಗ ಏಳ ದಿನಾ ರೊಟ್ಟಿ ಕೊಟ್ರ ಕಿತ್ತೂರಾಗ ||

ಗತ್ತ ಹಿಡಿಸಿತ್ತ ಹೊಳಿ ಸುತ್ತ ಹಾಕಿತ್ತ ಊರ
ಸತ್ತಹ್ವಾದು ಇಲಿ ಹೆಗ್ಗಣಾ ಮನಿಯಾಗ
ಹರದ ತಿಂತಿದ್ದುವ ಹದ್ದುಕಾಗಿ ಬಲ್ಲಂಗ
ನಾಕನೂರ ಮನಿ ಬಿದ್ದುವ ಒಂದು ದಿನದಾಗ ||
ವಡ್ಡಿಗಿ ವದ್ದನಿಂತ ನೀರ ವಡದಗಿಡದ ಬಂದಿದ್ದರ
ಸದ್ದೆ ಇದ್ದ ಮನಿ ಎಲ್ಲಾ ಹೊಳಿಯಾಗ
ಊರ ಹೋಗತಿತ್ತ ಗುರ್ತಾ ಉಳಿದ್ಹಾಂಗ ||

ಸುತ್ತ ಹಾಕಿದ್ದನ್ನ ನೋಡಿ ಕಿತ್ತೂರವರು
ಸ್ವಂತ ಮೋಟಾರ ಗಾಡಿ ಇಟ್ರ ಹೋಗಿ ಬರುವ್ಹಂಗ
ತಾಬಡತೋಬಡ ತಾರ ಮಾಡಿದ್ರ ಪ್ರಾಂತ ಸಾಹೇಬಗ
ಅವರು ಬಂದ ನೋಡಿ ಬಡವ ನಿಂತಾರ ದಿಂಗ ||
ಏಳ ಊರ ತಂದೇನು ಇನ್ನು ಏಳ ನನ್ನ ಮುಳಕೂರ ಅಂತ
ಏಳ ಸಾರಿ ಕೂಗಿದಾಳ ಗಂಗವ್ವ ಆಗ
ಕೇಳಿ ಓಡಿಹೋಗಿ ಕುಂತಾರ ಹತ್ತಿ ಹೊಡೇದ ಮ್ಯಾಗ ||

೧ನೇ ಚಾಲ

ಜಾಗಾ ಇಲ್ಲ ಎಲ್ಲೆಲ್ಲಿ ಹೋದೆವಂದ್ರ
ಬಿಟಗೊಟ್ಟ ಎದ್ದಾ
ನೀರ ಬಂದಿತ್ತ ಸುತ್ತೊರದ ಸದ್ದಾಮುದ್ದಾ ||

ಮನಿಗಳು ಇದ್ದುವ ಮಾಳಿಗಿ ಬೀಳತಿದ್ದುವ
ಸಯಿಲಾಗಿ ಹೋದಾವ ಬಿದ್ದಾ
ಪದಾ ಆತ ಇಲ್ಲಿಗಿ ಎಂಟ ಸಂದಾ ||

೨ನೇ ಚಾಲ

ಮುಂದ ಸಾಗೇತಿ ಮಲಪ್ರಭಾ ಹೊಳಿ
ವಂದ ದಿನದಾಗ ಮಾಡೀತ್ ಹಾವಳಿ ||

ದೇವದೊಳಗ ಪಾಸ ತಿಗಡೊಳ್ಳಿ
ಬಲಭೀಮ ತನ್ನ ಶಿಷ್ಯಾಗ ತಿಳ ಹೇಳಿ ||

ಪದಾ ಮಾಡಿದ ಮರಿಕಲ್ಲ ಈ ರಗಳೆ
ತಪ್ಪ ಆಗಿದ್ರ ಕೇಳಬ್ಯಾಡ್ರಿ ಹೊಳ್ಳಿ ||

||ಏರ||

ಖಾನಾಉರದೊಳಗಿರುವ ಕಾರಖಾನೆ ಹಿಡದ
ನಾಲ್ಕು ಊರನಾದೂರಿ ಜೀಕನೂರಿಗಿ
ಇನ್ನ ಈರಾಪುರ ಹುಣಶಿಕಟ್ಟಿ ಸಂಗೊಳ್ಳಿಗಿ
ಹಿಂಗ ಏಳ ಊರ ಅದು ಅಂದ್ಲ ಮುಳಕೂರಿಗಿ ||

ಸನ್ನ ಹತ್ತೊಂಭತ್ತನೂರಾ ಐವತ್ತಮೂರನೇ ಇಸವಿಯಲ್ಲಿ
ದುಂದ ಎಬಿಸಿತ ಮಳಿ ನಾಡಾಗ
ಸಣ್ಣ ದೊಡ್ಡವರು ಕುಂತಾರ ಅಂಜಿ ಮನಿಯಾಗ||೮||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು