ಕುಸ್ತಿ ಹುಡಗೋರ ಸುದ್ದಿ ಸಿಸ್ತಿಲೆ ಕುಂತಕೊಂಡ
ಚಿತ್ತವಿಟ್ಟ ಕೇಳರಿ ನೀವೆಲ್ಲಾ
ಈಗ ಪೈಲವಾನರು ಹೆಚ್ಚಾದಾರ ನಾಡ ಮ್ಯಾಲಾ ||
ಬೈಲಗಣದ ಕುಸ್ತಿ ಒಗದ ಬಲ್ಲಂಗ ತಿರಗತಾರ
ನವಲಗ್ಯಾಂವಿ ಟಾವೆಲ್ಲ ಹೆಗಲ ಮ್ಯಾಲಾ
ಅಂಗಿ ತೊಡತಾರ ಮೈಯಾಗ ಮಲಮಲಾ ||

ಗಂಜಿಪ್ರಾಕ ಜಾನಪಲ್ಲ ಪಡಕಿ ದುಡಕೀಲೆ
ಬದಾಮ ಬಣ್ಣದ ಪಟಗಾಸುತ್ತಿ ತಲಿಮ್ಯಾಲಾ
ಎರಡು ವ್ಯಾಳ್ಳೆ ಹೊಡಿತಾರ ಸಜ್ಜಕ ಹಾಲಾ ||
ಬೆಣ್ಣಿ ಬೇಕಂತಾರ ಎಮ್ಮಿ ಮೈ ತೊಳಿಯೋದಿಲ್ಲ
ಹಂಗಕುಂತ ಹೊಡಿತಾರ ಕುಬ್ಬಲ್ಲಾ
ಸಕ್ತಿ ಹಸಿಹಾಲಾ ||

ಮಸ್ತಿ ಬಂದ ಮ್ಯಾಲ ಇವರು ಸುಸ್ತ ಮಾಡೋದಿಲ್ಲ
ಮಾರಿ ನೋಡಿ ವಾರಿ ನೋಟ ಹೆಂಗಸರ ಮ್ಯಾಲಾ
ದಾರಿಯೊಳಗ ಮಾತು ಕತಿ ದರಜಿಲ್ಲಾ ||
ಬೇಚಾರಕ ಬಿದ್ದ ಒಂದ ಸವನ ಹುಚ್ಚಹತ್ತಿ
ರಾತ್ರಿ ಹಗಲ ತಿರಗತಾರ ಎಚ್ಚರಿಲ್ಲಾ
ಕಳ್ಳನಂತೆ ಮುಳ್ಳಬೇಲಿ ಕಾಯತಾರ ರಾತ್ರೆಲ್ಲಾ ||

ದುಡಿಯಾಕಂತೂ ಆಗೋದಿಲ್ಲ ಮನ್ಯಾಗಂತೂ ಸೇರೋದಿಲ್ಲ
ಕಣ್ಣ ಮೂಗ ಕಿಸದ ಅಣ್ಣ ತಮ್ಮರ ಮ್ಯಾಲಾ
ಎದ್ದ ಗುದ್ದೇನಂತ ಅಂತಾರ ಖಬರಿಲ್ಲಾ
ತಿನಸಕಮ್ಮಿ ಆಗಾನ ಮಾಡಬೇಕ ಇನ್ನೇನ
ಸಕ್ರಿ ಹಣ್ಣ ತಂದ ಆತ ಅಂಗಡಿ ಸಾಲಾ
ತುಡಗ ಮಾಡಿ ಕೊಡತಾನ ಮುನಿಯಾಂದೆಲ್ಲಾ ||

ಎರಡನೇ ಚಾಲ

ಚೈನಿ ಹೊಡದ ಗೆಣ್ಯಾ ಇಂವ ಸಣ್ಣ ಆಗಿರೋದಿಲ್ಲ ಜೀವ
ಕುಸ್ತಿ ನೇಮಿಸಿಕೊಂಡ ಥೇಟಿರಕ
ತಾಲೀಮ ಮಾಡತಾನ ಒಂದ ಹದಿನಾಲ್ಕ ||

ಕರಕೊಂಡ ಹ್ವಾದ ಮಂದಿನ್ನ ಅಣ್ಣ ತಮ್ಮರನ್ನ
ಕುಸ್ತಿ ನೋಡೋದಕ
ಕುಸ್ತಿ ಹಿಡಿದ ಸಿಕ್ಕೊಂಡಾನ ಬುಡಕ ||

ಎರಡನೇ ಚಾಲ

ಅಂವ ತುಂಬ್ಯಾನರಿ ಗುಮ್ಮ ಸವಾರಿ
ರಕ್ತ ಸೋರಿತ ವಡದ ಮಣಕಾಲ ಮಾರಿ ||
ಕಿಂವಿ ಬಾಯಿ ಮೂಗಿನ್ಯಾಗ ದೂಳ ಸೇರಿ
ಹೊಳ್ಳಿ ಬಿದ್ದೊ ಅಂಗಾಂತ ಕಸವ ಹಾರಿ ||

||ಏರ||

ಡೋಂಗ ಮಾಡೊ ಹುಡಗ ಇಂವ ದಿಂಗ ಬಡದ ಕೂತಾನ
ನೆಂಪ ಆತ ಹಿಂದ ತಾ ಮಾಡಿದ್ದೆಲ್ಲಾ
ಇನ್ನ ಎಂದೆಂದೂ ಕುಸ್ತಿ ನಾನು ಹಿಡಿಯೋದಿಲ್ಲಾ
ಇವನ್ನ ನೋಡಿ ನಗತಿದ್ರ ಕಣದಾನ ಮಂದೆಲ್ಲಾ ||

ಬೈಲಗಣದ ಕುಸ್ತಿ ಒಗದ ಬಲ್ಲಂಗ ತಿರಗತಾರ
ನವಲ ಗ್ಯಾಂವಿ ಟಾವೆಲ್ಲ ಹೆಗಲ ಮ್ಯಾಲಾ
ಅಂಗಿ ತೊಡತಾರ ಮೈಯಾಗ ಮಲಮಲಾ ||||೧||

ಕುಸ್ತಿ ಹಿಡಿದರ ಹಿಡೀಬೇಕ ಹುರಪಿನ ಬಾದ್ದೂರ
ಹುಣಶೀಕಟ್ಟಿ ಕಲ್ಲ ನಮ್ಮ ನಾಡಾಗ
ಅವನ ಜೋಡಿ ಇಲ್ಲ ಸದ್ದೆ ಕರ್ನಾಟಕದೊಳಗ ||
ಪೈಲವಾನ ಅನ್ನೊ ಗಮಜ ಎಳ್ಳಷ್ಟು ಇಲ್ಲ ಅವಗ
ದೇವರ ದಯಾ ಐತಿ ಕಲ್ಲನಮ್ಯಾಗ
ಹಿಂಗ ಹೆಸರಪಡದ ಸುತ್ತ ನಾಡಾಗ ||

ವಿಠಲಸೋನಾ ಪಂಜಾಬೀದು ಐಟಬಾಳ ಕಣದಾಗ
ಕಲ್ಲನಕೂಡ ನೇಮಿಸಿದ್ರ ಇಟಿಗ್ಯಾಗ
ಕಲ್ಲ ವಿಠಲನ್ನ ಒಗದ ಬಾಜೂ ಟಾಂಗಿನೊಳಗ ||
ಬೆಳಕ ಬಾಳ ಇತ್ತ ನೋಡ್ರಿ ಬಾಪೂ ಬೆಲದಾರನ್ನ
ಮುಗಲ ತೋರಿಸಿಬಿಟ್ಟ ಕಲ್ಲ ಬೆಳಗಾಂವಿಯೊಳಗೆ
ಕರ್ನಾಟಕದ ಸಿಂಹ ಅನಿಸಿಕೊಂಡ ಆವಾಗ ||

ಮೂರ್ತಿ ಸಣ್ಣದಿದ್ದರೇನು ಕೀರ್ತಿ ದೊಡ್ಡದೆಂಬುವಂತಾ
ಅಳವಾಡ ಅಪ್ಪಣ್ಣ ಅದಾನ ಬೆಳಗಾಂವಿ ನಾಡಾಗ
ಸರಳ ಸ್ವಭಾವದಿಂದ ಕುಸ್ತಿ ಆಟ ಕಣದಾಗ ||
ದ್ಯಾಸಗೊಟ್ಟ ನೋಡತಿದ್ರ ದುಸಗಿ ಜೈವಂತನ್ನ
ಮಿಸಕಗೊಡದ ಒಗದ ನೆಂದೆಳ್ಯಾಗ
ಅಕ್ಕಲಕೋಟಿ ನಿಂಬಾರಿನ್ನ ಡಾಕ ಹೊಡದ ಬೆಳಗಾಂವ್ಯಾಗ ||

ನೇಗಿನಾಳ ಬಸವಣ್ಣಿ ನಮ್ಮ ಬಾಗಿನ್ಯಾಗ ಮುಂದಬಂದ
ಕೊಲ್ಲಾಪುರ ಮಾರುತಿ ಸಿಕ್ಕಿದ್ದ ಅವನ ಕೈಯ್ಯಾಗ
ಗಜಪತಿಯೊಳಗ ||
ತಿಕ್ಕಿತಿಕ್ಕಿ ಮಾರುತಿನ್ನ ಗೋಳ ಮಾಡಿ ಒಗದಾನ
ಮಾಲಿ ಹಾಕಿದಾರ ಬಸವಣ್ಣಿ ಕೊರಳಾಗ
ಬನತಾನ ಕೂಡ ಬಿಡಿಸಿಕೊಂಡ ಬೀಡ್ಯಾಗ ||

ಒಂದನೇ ಚಾಲ

ಕುಸ್ತಿ ಆಟದಲ್ಲಿ ವಳೆ ಜಾಣ ಮಲ್ಲಾಪುರ ಚವ್ವಾಣ
ಬಸಪ್ಪನ ಹೆಸರಾ
ಕೇಳದವರು ಇಲ್ಲ ಯಾರ‍್ಯಾರಾ ||
ಅರಿವಿ ಕಳೆಯುವದಕ್ಕ ಅವಸರ ಕಿತ್ತೂರ ಕಿಲ್ಲೆದ್ದಂತೆ ಥೇಟರ
ಬಂದಿದ್ದ ನೂಲ್ವಿ ಮಾಸ್ತರಾ
ಬಸಪ್ಪ ಒಗದೊ ಮಾಡಿ ಅವಸರಾ ||

ಎರಡನೇ ಚಾಲ

ಕುಸ್ತಿ ನೇಮಿಸ್ಯಾರ ಜಾಗಾ ಗೆಜಪತಿ
ಕೆರೂರಿನ ಬಂದಿದ್ದರಿ ಜ್ಯೋತಿ ||
ಅಡ್ಡೆಕ ಕಟ್ಟಿದ ಹಗ್ಗ ಇತ್ತ ಕಾತಿ
ಜೋತಿನ್ನ ವಗದ ಬಸಪ್ಪ ಅದರ ಮ್ಯಾಲೆತ್ತಿ ||

|ಏರ||

ಕಿತ್ತೂರ ನಾಡ ಹುಲಿ ಅಂತ ಕೀರ್ತಿ ಪಡಕೊಂಡ
ಕುಸ್ತಿ ಆಡೋದಕ್ಕ ಕಣದಾಗ ಖಬರಿಲ್ಲಾ |
ಶಾಪೂರ ರಾಜಾರಾಮನ್ನ ಮಾಡಿ ಬಿಟ್ಟ ಗಾಲಮ್ಯಾಲಾ ||

ಬೈಲಗಣದ ಕುಸ್ತಿ ಒಗದ ಬಲ್ಲಂಗ ತಿರಗತಾರ
ನವಲ ಗ್ಯಾಂವಿ ಟಾವೆಲ್ಲ ಹೆಗಲ ಮ್ಯಾಲಾ
ಅಂಗಿ ತೊಡತಾರ ಮೈಯಾಗ ಮಲಮಲಾ ||||೨||

ಮುನವಳ್ಳಿ ನಾಗೂಗ ಶಮನೆವಾಡಿ ಕಲ್ಲೂಗ
ಕುಸ್ತಿ ಹತ್ತಿತ ಒಂದ ಗಳಿಗ್ಹೊತ್ತಾ |
ಕಲ್ಲೂಸೋತಾ ||
ತಿಗಡೊಳ್ಳಿ ಥೇಟರದಾಗ ತಿಕ್ಕ್ಯಾಟ ಇಬ್ಬರಿಗು
ಕಲ್ಲೂಂದ ಹಾರಿತ ತಾಕತ್ತಾ
ನಾಗೂ ಹಸನಕಟ್ಟಿ ಒಗದಾನ ಅಂಗಾತಾ ||

ಚವಾಟಗಲ್ಲಿ ಕೇದಾರಿ ಅಯಿಟ್‌ಲಿಂದ ಅರಿವಿಕಳದ
ಕುಸ್ತಿ ಆಟದಲ್ಲಿ ಯಾರಿಲ್ಲ ಅವನಂಗ ಚಮತಾ
ಕೇದಾರಿ ಮ್ಯಾಲ ಇರತೈತಿ ಎಲ್ಲಾರ ಚಿತ್ತಾ ||
ದೊಡವಾಡ ಗಂಗಪ್ಪನ್ನ ಎದಿಗಿ ಎದಿಗೆ ಹಚ್ಚಿ
ಹುಂಚಿಕಟ್ಟ್ಯಾಗ ಒಗದಾನ ಅಂಗಾತಾ
ಗಂಗಪ್ಪಗ ತಿಳಿಲಿಲ್ಲ ಕೇದಾರಿ ಬೇತಾ ||

ಪೀರ ಮಹಮ್ಮದ ಪಂಜಾಬೀದು ದೂರತನಕಾ ವಾಹಿನಿ
ಅವನ ಜೋಡಿ ಇಲ್ಲ ಹುಬ್ಬಳ್ಳಿ ಸುತ್ತಮುತ್ತಾ
ಅಂವಗ ಅಂತರಾ ಹುಬ್ಬಳ್ಳಿ ಹುಲಿ ಅಂತಾ ||
ಕಿತ್ತೂರಾಗ ಉಗರಖೋಡ ಮುಕ್ತುಮನ ಕೈಯಾಗಸಿಕ್ಕ
……………………. ಮಹಮ್ಮದನ ತಾಕತ್ತಾ |
ಮಕ್ತುಮ ಮಡಿಚಿ ಮಡಿಚಿ ಮಾಡಿಬಿಟ್ಟಾನ ಚಿತ್ತಾ ||

ಒಂದನೇ ಚಾಲ

ಕುಸ್ತಿ ಇತ್ತ ನೋಡ್ರಿ ಬೆಳಗಾಂವಿಗಿ ವೈತಾಕವಾಡಿಗಿ
ಹುಣಶಿಕಟ್ಟಿ ಸಿದ್ಧ ಅಲ್ಲಿ ಬಂದಾ
ತಡಿಲಿಲ್ಲ ಎಳ್ಳೂರ ಮುಕ್ಕುಂದಾ ||
ಮರುದಿವಸ ಮಕರ ಸಂಕ್ರಾಂತಿ ಇತ್ತ ಸಿದ್ಧನ ಕುಸ್ತಿ
ಹುಬ್ಬಳ್ಳಿಗೆ ಬಂದಾನ ಅಂದಾ
ನಸಲಾಪುರ ಬಂಡೂನ್ನ ಅಲ್ಲೆ ವಗದಾ ||

ಎರಡನೇ ಚಾಲ

ಹ್ಯಾಂವ ಬಿತ್ತ ಹಸನ ಪಾನಾರಿಗಿ
ನೇಮಿಸಿಕೊಂಡ ಇಟಗಿ ರೋಡಿಗಿ ||
ಆಕಾಶ ತೋರಿಸಿದ ಸಿದ್ಧ ಪಾನಾರಿಗಿ
ಸಿದ್ದ ಬೆಳದೋ ನಮ್ಮ ನಾಡಿಗಿ ||

||ಏರ||

ಗರಗದಾಗ ನೇಮಿಸಿದ್ರ ಅಷ್ಟೇಕಾರ ಶಿವೂನ್ನ
ಉಡಿಕೇರಿ ಸೋಮನ ಹಿಂಬಾಲಾ
ಶಿವೂ ಕಮ್ಮ ಆದ ಸೋಮಗ ಆಗ ತಡಿಲಿಲ್ಲ ||

ಬೈಲಗಣದ ಕುಸ್ತಿ ಒಗದ ಬಲ್ಲಂಗ ತಿರಗತಾರ
ನವಲ ಗ್ಯಾಂವಿ ಟಾವೆಲ್ಲ ಹೆಗಲ ಮ್ಯಾಲಾ
ಅಂಗಿ ತೊಡತಾರ ಮೈಯಾಗ ಮಲಮಲಾ ||||೩||

ತಡಾಕಿ ಮಲ್ಲನಂಗ ತಾಕತ್ತ ಇಲ್ಲಯಾರ
ತಿದ್ದಿ ಮಾಡಿದ್ಹಾಂಗ ಅವನ ಮೈಕಟ್ಟಾ
ಯಾತರಾಗೇನು ಕಸರಿಲ್ಲ ಬಲು ಗಾಟಾ ||

ಕುದ್ದ ಊರ ಬಡ್ಡ್ಯಾಗ ಬಾಹುನ ಸವದತ್ತಿ
ಕೊಲ್ಲಾಪುರ ಸದ್ದೆ ಅಂವ ಇರೋ ಮೆಟ್ಟಾ
ಎಲ್ಲ ಮಲ್ಲರೊಳಗ ಮೇಲಾದ ಬಂಟಾ ||

ಹೆಂಡರ ಮಕ್ಕಳೆಲ್ಲಾ ಸಂಗಾಟ ಸದ್ದೆ ಕೂಡಿ ಇದ್ದು
ಚಿಂತಿ ಹಚ್ಚಿಗೊಂಡಿಲ್ಲ ಅಂವ ಏಟೇಟಾ
ಮನಿಯೊಳಗ ಮಕ್ಕಳದಾವ ಒಂದ ಏಳೆಂಟಾ ||
ಇಲ್ಲಿವರಿಗೂ ಜೋಡಿ ಇಲ್ಲ ಅನಿಸಿಕೊಂಡ
ಬೋಲಾ ಪಂಜಾಬಿ ಬಂದಾನ ಹೊಂಟಾ
ಅಂವ ಕೊಲ್ಲಾಪುರಕ ಹಾಕ್ಯಾನ ಮೆಟ್ಟಾ ||

ಬೋಲಾ ಪಂಜಾಬಿ ಕೂಡ ತಡಾಕಿ ಮಲ್ಲನಕುಸ್ತಿ
ನೇಮಿಸ್ಯಾರ ಮಾಡಿ ಕಟಪಟಾ
ರೊಕ್ಕಾ ಕೊಟ್ಟರ ಇಬ್ರಿಗೂ ಬೇಡಿದಪ್ಪಾ ||
ಹ್ಯಾಂಡಬಿಲ್ ಅಲ್ಲದೆ ಎಲ್ಲಾ ಪೇಪರಿನ್ಯಾಗ
ಫೋಟೋ ತಗಸಿ ಕೊಟ್ಟಾರ ಅಯಿಟಾ
ದೊಡ್ಡ ಜೋಡಿ ಹೆಸರ ಒಂದ ಏಳೆಂಟಾ ||
ದೂರಿನ ಮಂದಿಗೆ ಗೋರ ಆದೀತಂತ
ರಿಜರ್ವ ಮಾಡಿಸಿದಾರ ತಿಕೀಟಾ
ಇನ್ನೂ ಎಂಟದಿನಕ ಮುಕ್ಕಟ್ಟಾ ||

ಒಂದ ರೂಪಾಯಿ ಎರಡಾಣೆ ನೆಲಕ್ಕ ಕುಂಡ್ರೋದಕ್ಕ
ಐದು ಹತ್ತು ಹದಿನೈದು ಕುರ್ಚಿಯ ಗಂಟಾ
ಹಿಂಗ ಮಾರಾಟ ಆದ್ವು ತಿಕೀಟಾ ||
ಬಂದುಬಸ್ತೀಲೆ ಒಳ್ಳೆ ಸಿಸ್ತೀಲಿ ಕಟ್ಟಿಸ್ಯಾರ
ಖಾಸಬಾಗದಲ್ಲಿ ಥೇಟರ ಮೆಟ್ಟಾ
ಮರಿ ಆಗೋದಿಲ್ಲ ಯಾರಿಗಿ ಏಟೇಟಾ ||
ಬಂದ ಹೊಕ್ಕಿತ ಮಂದಿ ಒಂದ ಬಾರಕ ತುಂಬಿ
ಜಾಗಾ ಇಲ್ಲ ನಿಂದ್ರೋದಕ ಒಂದೀಟಾ
ಹೊರಗ ನಿಂತಿದ್ರ ಹಿಡಕೊಂಡ ತಿಕೀಟಾ ||

ಯಾರಿಂದ ಬಂದೇವಂತ ಚೀರ‍್ಯಾಡತಿದ್ರ ಹೊರಗ ನಿಂತ
ಯಾರ ಕೇಳಬೇಕ ಇವರ ಬಬ್ಬಾಟಾ
ರೊಕ್ಕ ಆಗಿತ್ತಿ ಅಷ್ಟೊತ್ತಿಗೆ ಸಾಕಷ್ಟಾ ||
ಒಳಗ ಹೊಕ್ಕವರಲ್ಲಿ ಸತ್ತಾರ ಇಬ್ಬರಾ
ಎಷ್ಟೋ ಜೀವ ಆಗಿದ್ದುವ ಅರದೋಟಾ
ಹಿಂಗ ನಡದಿತ್ತ ಬಲ್ಲಂಗ ನುಗಸ್ಯಾಟಾ ||

ಕುದರಿ ಸ್ಟಾರಗಳು ಪೇರಿ ಹಾಕಿಕೊಂತ ಮಂದಿನ್ನ
ಖಬರಿಲ್ಲದ ಬಡಿತಿದ್ರ ಪಟಾಪಟಾ
ತಲಿ ಮೂಗು ಮಾರಿ ಒಡದ ರಕ್ತ ಸೋರ‍್ಯಾಟಾ ||
ಚಪ್ಪಲ್ಲ ಚತ್ತರಗಿ ಪಟಗಾ ಟೊಪ್ಪಿಗಿಗಳು
ಹರಿವ್ಯಾಡಿ ಹೋದುವರಿ ಸಾಕಷ್ಟಾ
ಪೋಲೀಸ ಪಾರ್ಟಿ ಬಂದೋಬಸ್ತಾ ಕಟಪಟಾ ||

ಕೂಡಿದ ಮಂದಿನ ತರಬೋ ಕೂವತ್ತಾಗಲಿಲ್ಲ
ಕುಸ್ತಿ ಎಬಿಸಿದಾರ ಲಗೂಜಟಾಪಟಾ
ಆಗ ಮಲ್ಲ ಬಂದ ಕಣದಾಗ ಹೊಂಟಾ ||
ಹಿಂದುಗಡೆ ಬಂದ ಬೋಲಾ ಸಿವಡಗಾಲಿಗೆ ಹೊಕ್ಕ
ನೆಲದ ಮ್ಯಾಲ ಕೆಡವಿ ಹೊಂಟಾ
ಆಗ ತಿಳಿಯಲಿಲ್ಲ ಕುಸ್ತಿಯ ಆಟಾ ||

ಒಂದನೇ ಚಾಲ

ಇನ್ನೊಮ್ಮೆ ಹಿಡಬೇಕಂತ ತಡಾಕಿಯ ಬೇತ
ಮುಂದ ಎರಡ ತಿಂಗಳಿಗಿ
ಮತ್ತ ನೇಮಿಸಿಕೊಂಡ ಬೇಡಿಕ್ಯಾಳಿಗಿ ||

ಬೋಲಾಂದು ಬಾಳ ತಯ್ಯಾರ ಮಲ್ಲಂದು ಇಳತಾರ
ಮಲ್ಲ ಕುಂತ ಕಾಲಾ ಜಂಗಿಗಿ
ಬುಡಕ ಸಿಕ್ಕ ಕಸುವ ಕಮ್ಮಾಗಿ ||

ತಡಾಕೀದು ನಾಟಲಿಲ್ಲ ಪೇಚ ಬೋಲಾ ಆದಾನ ಬಾಳಹೆಚ್ಚ
ಬುಡಕ ಕುಂತ ಹಿಡದ ಗುಟ್ಟ್ಯಾಗಿ
ಬೋಲಾ ಹೋದೆನಂತಾನ ತಟ್ಟಾಗಿ ||

ಎರಡನೇ ಚಾಲ

ಒಂದ ತಾಸ ಮಲ್ಲಪ್ಪ ಬುಡಕ ಕುಂತಾ
ಬೋಲಾನ ಭಾರಾ ಹಿಡದ ಬಾಳ ಸೋತಾ ||
ಬೋಲಾನ್ನ ಬೈತಿದ್ರ ಮಂದಿ ಆಗಿ ಅಂತಾ
ರೊಳ್ಳಿಗಂವದ ಹೊಳ್ಳಿದ ತಡಾಕಿ ಅಂಗಾತಾ ||
ಬೋಲಾ ಹೇಳಿದೊ ಆವಾಗ ಎದ್ದನಿಂತಾ
ಇವನ್ನ ವಗದರೂ ವಗದಂಗ ಅಲ್ಲಂತಾ ||

||ಏರ||

ಹೆಂಗಾರೆ ಆಗಲೆಂತ ಬಂದಾಂಗ ಹೊಂದಿಸಿ
ಪದಾ ಮಾಡಿದಾನ ತಿಗಡೊಳ್ಳಿ ಮರಿಕಲ್ಲಾ
ಬಲಭೀಮನ ದಯಾ ಐತಿ ಅವನ ಮ್ಯಾಲಾ ||

ಬೈಲಗಣದ ಕುಸ್ತಿ ಒಗದ ಬಲ್ಲಂಗ ತಿರಗತಾರ
ನವಲ ಗ್ಯಾಂವಿ ಟಾವೆಲ್ಲ ಹೆಗಲ ಮ್ಯಾಲಾ
ಅಂಗಿ ತೊಡತಾರ ಮೈಯಾಗ ಮಲಮಲಾ ||||೪||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು