ಯಲ್ಲಾ ಜೀವನಕ್ಕೆ ಆಧಾರ | ಮುಖ್ಯವಾಗಿ ನೀರ
ಮಳೆಯು ಆದರ | ಬೆಳೆಯು ಬಂದ ದೇಶವೆಲ್ಲಾ ಸಡಗರ
ಹೊಳಿ ಹಳ್ಳ, ಕೆರಿಭಾಂವಿ ಭರಪೂರ
ತುಂಬಿದಾಗ ಉಲ್ಲಾಸದ ಉದ್ಗಾರ||ಪ||

ಮಳೆರಾಜ ಪೂರ್ಣ ತಡದರ | ಬಂದಿತ ಘೋರ
ಬರಗಾಲ ಅನ್ನುರ | ಹಾದಿ ಬೀದಿಯೋಳಗ ಬಿದ್ದ ಶರೀರ
ಪ್ರಾಣ ಕಳಕೊಂಡ ಹಾಕಿ ಉಸುರ
ಆಹಾರ ನೀರ ನೀರ ಅಂತ ಹಾಹಾಕಾರ||ಜ||

ಮಿತಿ ಮೀರಿ ಮಳೆ ಸುರಿದರ | ಹಿತ ಇಲ್ಲ ಚೂರ
ಅತಿವೃಷ್ಟಿ ಹೆಸರ | ಹಾಳಾಗಿ ಹೋಗುವದು ಸಂಸಾರ
ಬೀಳ ಭೂಮಿ ಏಟಿ ಬರುವುದಿಲ್ಲ ಪೈರ
ಹಿಂಗ ಇರುವದು ಮಳೆಯ ಚಮತ್ಕಾರ||ಜ||

ಹದಕ್ಕೆ ತಕ್ಕ ಹಸಿಯಾಗಿ | ಮುದದಿ ಬಿತ್ತಿಗಿ
ಚಂದ ರೈತರಿಗಿ ಕುಂದು ಕೊರತಿಲ್ಲ ಹರುಷವಾದಾರ
ಬಂಧು ಬಳಗಹೊಂದಿ ಸುಗ್ಗಿ ಮಾಡುರ
ತಂದ ಕಣಜ ತುಂಬಿ ಬಣವಿ ಒಟ್ಟೂರ||ಜ||

ಮೃಗ ಹಿಡಕೊಂಡ ಆಶ್ಲೇಸ ತನಕ | ಮೃಗಾ ಪಂಚಕ
ಮುಂಗಾರಿ ಬಿತ್ತುದಕ | ಕೆಂಜೋಳ ತೊಗರಿ ಅವರಿ
ಹೆಸರ | ಸಜ್ಜ ನವಣೆ ಮಡಿಕಿ ಹುರಳಿ ಬಿತ್ತಿಪೂರ
ಶೆಂಗಾ ಅಲಸಂದಿ ಔಡ್ಲಹಾಕುರ||ಜ||

ಮಲ್ಲಾಡದವರ ಬಿತ್ತಿಗಿ | ಮದಲಿಗೆ ಅಗಿ
ಭತ್ತದ ಅಗಿ | ಅಚ್ಚ ಹೆಸರಾಗಿ ಎಷ್ಟ ಸುಂದರ
ಗದ್ದಿಗಳು ತುಂಬಿ ತಳುಕುವವು ನೀರ
ಮೇಡ ಭೂಮಿ ಬರಗ ಸಾಂವಿಗೆ ತಯ್ಯಾರ||ಜ||

ಮಾನ್ಸೂನ ಹುಟ್ಟುತ | ಕಡಲ ದಾಟುತ
ಜಡಿ ಮಳಿ ಹತ್ತೀತೊಳೆದುರಂದರ
ಹೆಮ್ಮೋಡ ಹಾಕಿ ನಿರಂತರ | ಪಾಡಭೂಮಿ ನಾಡಿಗೆಲ್ಲ ಸುಖಕರ||ಜ||
ಮುಂಗಾರಿ ಬಿತ್ತುಣಗಿ ಮುಗಿದ | ಉಳ್ಳೀಬೀಜ ಒಗದ
ತಂಬಾಕ ಅಗಿ ಹುಗಿದ | ಮೆಣಸಿನ ಅಗಿ ಬದ್ನಿ ಹಚ್ಚುದ
ಹದಸೀರ | ನೌಲ ಕೋಲ ಕ್ಯಾಬೀಜ ಗಡ್ಡಿ ಹೊಸತರ
ಗೆಣಸ ಗಜ್ರ ಕಾಯಿಪಲ್ಲೆ ನಾನಾತರ||ಜ||

||ಚಾಲ||

ಹಿಂಗಾರಿಯ ಸಲುವಾಗಿ ಉರಿ ನೆಲಾ ಹರಗೂತ್ತಾ
ನೆಲಾ ಹರಗೂತ್ತಾ||ವ||

ತಂಗಾಳಿಯ ಹೊಡೆತಕ್ಕ ರೈತನ್ಹೊಟ್ಟಿ ಹಸಿಯುತಾ
ಹೊಟ್ಟಿ ಹಸಿಯುತಾ||ಜ||

ಹಂಗದೊರೆದು ದುಡಿಯಬೇಕ ಬಿತ್ತು ಹದಕ
ಬರಲೆಂತಾ||ಜೀಯ||ಜಿ||

ಹಿಂಗ ಇರುವುದು ಕಮತದ ಕೆಲಸ ಮಾಡು
ವೃತ್ತಾಂತಾ||ಜೀಯ||ಜೀಯ||

||೨ಚಾಲ||

ಗಡಬಡಸಿ ಎಡಿ ಹೊಡೆಯುತ್ತಾ |
ಎಡಬಿಡದೆ ಕಳಿ ತಗಿಸುತ್ತಾ ||

ಧಡಾ ಧಡಾ ಹಳ್ಳ ಹರಿಯುತ್ತಾ |
ಬಡ ನೆಲದ ಅಡವಿ ಚಿಗಿಯುತ್ತಾ ||

ಗುಡಗ್ಹೊಡದ ಸಿಡಿಲ ಬೀಳುತ್ತಾ |
ಅಡಬಡಿಸಿ ದನಾ ಬೆದರುತ್ತಾ ||

ಮಿಡಚಿಗಳು ಕುಡಿ ಕಡಿಯುತ್ತಾ |
ಹುಡಿ ಹೊಡೆದ ನಾಶ ಪಡಿಸುತ್ತಾ ||

ನಡ ನಡುವೆ ಘಾಳಿ ಬೀಸುತ್ತಾ |
ಹುಡುಕಿದರು ಸೂರ್ಯಸಿಗಂತಾ ||

ಎಡ ತೊಡರುಗಳನ ತಡೆಯುತ್ತಾ |
ಧೃಡ ಮನಸಿನಿಂದ ದುಡಿಯುತ್ತಾ ||

||ಏರು||

ರಾತ್ರಿ ಹಗಲು ಎನ್ನದೆ ಕೆಲಸ | ರೈತಗ ಹೌಸ
ಹೊಲದ ಮ್ಯಾಲ ಧ್ಯಾನ | ಕುಲುಕುಲು ನಗುತ ಗಂಡ ಹೆಂಡರ
ಹೆಲ ಕೆಲವು ಮನಸಿನಲ್ಲಿ ವಿಚಿಯಾರ
ಮಲಗಿದಾಗ ಹೊಲದ ಸುದ್ದಿ ಜೋರದಾರ||ಜಿ||೧||

ಹಿಂಗಾರಿ ಮಳಿಗಳು ಐದ | ಮಘಾ ಹಿಡದ ಮುಂದ
ಎಣಿಸಿ ನೋಡಂದ | ಪೂರ್ವ ದಿಕ್ಕಿನಿಂದ ಬಂದ ಹೊಡೆಯುತ
ಮೊದಲಿನ ಮಳೆಗೆ ಹೊತ್ತಿ ಹಾಕುತ
ಬೆಳವಲಕ ಇವುಗಳಿಂದ ಬಹಳ ಒಳಿತ||ಜೀಯ||ಜಿ||

ಉತ್ತರಿ ಹಸ್ತ ಎರಡ ಇವ | ಒಕ್ಕಲಿಗರ ಜೀವ
ಭಾಷೆ ಕೊಟ್ಟಿರುವ | ವೆಂದು ಹೇಳುವ ಗಾದಿ ಸಿದ್ಧಾಂತ
ಸರ್ಬಕಾದ ಆಗುವುವು ನಿಶ್ಚಿತ
ತಪ್ಪಿದರ ಏನ ಹೇಳುವುದು ಅನಾಹುತ||ಜೀಯ||ಜಿ||

ಉತ್ತರಿ ಮಳಿ ಹೋದರ | ಹೆತ್ತಮ್ಮ ಮುನಿದರ
ಉತ್ತಮರು ಸಟ ಬಿದ್ರ | ಪೃಥ್ವಿಯನ್ನೆತ್ತ ಬದಕುವದಂತ
ಸ್ವತಾ ಸರ‍್ವಜ್ಞ ಹೇಳಿದ ಕವಿತ
ಕೈಗೆ ಬರುವುದಿಲ್ಲ ಹಿಂದಿನ ಪೀಕ ಸಹಿತ||ಜೀಯ||ಜಿ||ಜಿ

ಜನದಾಶೆ ಇವೆ ಮಳಿತನಕ | ಆಗದಿದ್ರ ದಿಕ್ಕ
ತಪ್ಪಿ ಹೋತಲೆಕ್ಕ | ಬರಗಾಲಕ್ಕ ಮಾಡಿದಂತೆ ಸ್ವಾಗತ
……..ಮಾರಬೇಕ ನೋಡ ಎತ್ತ
…………………….. ಹಲ್ಲಕಿಸ್ತ||ಜಿ||ಜಿ||

ತಪ್ಪದೆ ಮಳಿ ಬಿದ್ರ ಹಸಿ | ವದಗಿದರ ಬೇಸಿ
ಬೆಳಿ ಪುರಮಾಸಿ | ಗೋದಿ ಕಡ್ಲಿ ಬೀಳಿಜೋಳ ಬರುವವು ಮಸ್ತ
ಕುಸಬೀ ಅಗಸಿ ರಾಶಿಗೆಲ್ಲ ಪುರಸೊತ್ತ
ಸರ್ವೆಲ್ಲಾ ಬಂದ್ರ ರಾಷ್ಟ್ರಕ ಸಿರಿ ಸಂಪತ್ತಾ||ಜೀಯ||ಜಿ||ಜಿ||

ದನಕರುಗಳು ಹಕ್ಕಿ ಪಕ್ಕಿಗನ್ನ ಸಮೃದ್ಧ ಜೀವನ
ಸಾಕಷ್ಟ ಹಾಲು ಹೈನ | ಚೈನಿ ಚಲ್ಲಾಟಗಳು ವಿಪರೀತ
ದೈನಂದಿನ ಅಡಚಣೆ ಇಲ್ಲದ ರೈತ
ಕ್ಷಣ ಕ್ಷಣಕ ದಾನ ಧರ್ಮ ಮಾಡುತ||ಜೀಯ||ಜಿ||

ಶೀಗಿ ಹುಣ್ಣಿವ್ಯಾಗ ಚಲ್ಲುವ ಚರಗ | ಉಳ್ಳಾಮಾಸಿಯೊಳಗ
ಕೂಡಿ ಬಂಧು ಬಳಗ | ಕಡಬ ವಡಿ ಗಾರಿಗೀಯ ಮಾಡಿಸುತ
ಕಡ್ಲಿ ಪಚಡಿ ಕಟ್ಟಿನಾಂಬ್ರ ಕಾಸೂತ
ಸಣ್ಣಕಿ ಅನ್ನ ಬೆಣ್ಣಿಯನ್ನು ಕರಗಿಸುತ||ಜೀಯ||ಜಿ||ಜಿ||

||ಚಾಲ||

ಕಡ್ಲಿ ಸುಲಗಾಯಿ ಗೋದಿಯ ಉಮ್ಮಿಗಿ ಒಳೆ ಗಮ್ಮತ್ತಾ||ಜಿ||ಜಿ||
ತಂಡಿ ಗಾಲದಿ ಬಿಳಿಜೋಳ ಎಳಿಯ ಬೆಳಸಿ ತಿನ್ನುತ್ತಾ||ಜಿ||ಜಿ||
ಕಂಡ ಕಂಡ ಜಮೀನುಗಳ ಪೀಕ ವರ್ಣನೆ ಮಾಡುತ್ತಾ||ಜಿ||ಜಿ||
ಉಂಡ ತಿಂದ ಸಂತೋಷಾಗಿ ಮನಿಯ ಕಡೆ ಹೊರಡುತ್ತಾ||ಜಿ||ಜಿ||

೨ನೇ ಚಾಲ

ಸುಗ್ಗಿ ಮಾಡುವರು ಸುಖದಿಂದಾ |
ಹಿಗ್ಗಿ ಹಿಗ್ಗಿ ಮನಸಿಗಾನಂದಾ ||

ಜಗ್ಗಿ ಜಗ್ಗಿ ರಾಶಿ ಯಳ ಯಳದಾ |
ಹುಗ್ಗಿ ಹೋಳಿಗಿ ರಾಶಿ ನೈವದ್ಯಾ ||

ಬಿಗಿ ಬಿಗಿದು ಚೀಲ ಹೊಲ ಹೊಲದಾ |
ತಗ ತಗದು ನಿಟ್ಟ ಹಚ್ಚುವದಾ ||

ಸೊಗಸಿಲೆ ಮನಿಗೆ ಹೊಡತಂದಾ |
ಹಗೆ ಹಾಕುವದು ಏನ ಚಂದಾ ||

ಮೇಘ ರಾಜನ ಉಪಕಾರದಿಂದಾ |
ಮೃಗ ಕೀಟಕವೆಲ್ಲ ಬದಕುವದಾ ||

||ಏರು||

ವಿಶ್ವದ ಮೂಲ ಆಧಾರ | ಪಂಚತತ್ವಸಾರ
ಮಳಿಯು ತಾಯಿಬೇರ | ಮಲಿನ ತೊಳದ ಸ್ವಚ್ಛ ಮಾಡುವ ಅಧಿಕಾರ
ಮಳಿಯಪ್ಪಗ ಕೊಟ್ವಾನ ಜಗದೀಶ್ವರ
ಹುಲಕುಂದ ಭೀಮಕವಿ ಹೇಳಿದ ಮಜಕೂರ||ಜೀಯ||ಜಿ||ಜಿ||  ||೨||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು