ಅರ್ಥ ತಿಳಿಯದ ಅನುಭಾವ ಕಲಿತ
ಅಳತಿಗೆಟ್ಟ ನಿಂತ ನಾಡಾಗ
ಮಂಗ್ಯಾನ ಕೈಯಾಗ ಮಾಣಿಕ ಕೊಟ್ಟರ
ಹಲ್ಲಾಗ ಹಾಕಿ ಕಡದ ಒಗದ್ಹಂಗ||ಪಲ್ಲ||

ಶ್ಯಾಣ್ಯಾ ಅಂತ ಇವಗ್ಯಾಂಗ ಅನ್ನಬೇಕ
ಏನ ಗುಣಾ ಕಂಡ ಇವರಲ್ಲಿ
ಗಾಯನದಲ್ಲಿ ನಾರದ ಅಂದೇನ
ಗಾರ್ದಭ ರಾಗ ಇವರ ಬಳಿಯಲ್ಲಿ
ವಿದ್ಯೆಯಲ್ಲಿ ಗಣಪತಿ ಅಂದೇನ
‘ಓಂ’ನಾಮ ಅಂಕಿ ಕಲತಿಲ್ಲ ಜಲ್ಮದಲ್ಲಿ
ನೀತಿಯಲ್ಲಿ ನಿನಗ ವಿದುರ ಅಂದೇನ
ಬೇಗಳ ತಪ್ಪಿಲ್ಲ ಬಾಯಲ್ಲಿ
ಪರಾಕ್ರಮದ ಪ್ರತಿ ಪಾರ್ಥ ಅಂದೇನ
ನಾಡ ಹೇಡಿ ನೀನು ಸರ್ವರಲ್ಲಿ
ದಾನದಲ್ಲಿ ಬಲಿ ಚಕ್ರಿ ಅಂದೇನ
ಹೆಣದ ಬೆಣ್ಣಿಯ ತಿನ್ನುವ ಚಾಲಿ
ಶಾಂತಿಯಲ್ಲಿ ವಸಿಷ್ಠ ಅಂದೇನ
ಜಗಳ ತಗೀತಿ ಕುಂತ ನಿಂತಲ್ಲಿ
ಸತ್ಯದಲಿ ಹರಿಶ್ಚಂದ್ರ ಅಂದೇನ
ಮಾತಿನೊಳಗ ಮಾತಿಲ್ಲ ಕ್ಷಣದಲಿ
ಕವಿತ್ವದಲಿ ಪ್ರತಿ ವ್ಯಾಸ ಅಂದೇನ
ದನಾ ಕಾಯವರಷ್ಟ ಇಲ್ಲ ಬೆಲಿ
ಸ್ವರದ ಒಳಗ ಕೋಕಿಲಾ ಅಂದೇನ
ಶ್ವಾನನ್ಹಂಗ ಬೊಗಳತಿ ಸಭೆಯಲಿ
ರೂಪದಲ್ಲಿ ಮನ್ಮಥಾ ಅಂದೇನ
ಮಾರಿ ಸುದ್ದ ಕ್ವಾಡಗನ್ಹಾಂಗ
ಮಂಗ್ಯಾನ ಕೈಯಾಗ ಮಾಣಿಕ ಕೊಟ್ಟರ
ಹಲ್ಲಾಗ ಹಾಕಿ ಕಡದ ಒಗದ್ಹಂಗ

೧ನೇ ಚೌಕ

ಸಂಪತ್ತಿಯಲ್ಲಿ ಕುಬೇರ ಅಂದೇನ
ಮಧ್ಯಾಹ್ನದಾಗ ಇಲ್ಲ ಬೀಸುದಕ
ಭಕ್ತಿಯಲ್ಲಿ ಪ್ರಹ್ಲಾದ ಅಂದೇನ
ಮನಸ ಸ್ಥಿರಾ ಇಲ್ಲ ಕ್ಷಣತನಕ
ಬಳಗದಲ್ಲಿ ರಾವಣ ಅಂದೇನ
ಗೂಗಿಯಂತಾಂವ ನಿನಗಿಲ್ಲ ದಿಕ್ಕ
ಬುದ್ಧಿಯಲಿ ಬೃಹಸ್ಪತಿ ಅಂದೇನ
ಪುಂಡ ಕೆಂಚ ನೀ ಲೋಕಕ್ಕ
ಭೋಗದಲ್ಲಿ ದೇವೇಂದ್ರ ಅಂದೇನ
ಹುಟ್ಟ ಷಂಡ ನೀ ನಪುಂಸಕ
ತೇಜದಲ್ಲಿ ನಿನಗ ಸೂರ್ಯ ಅಂದೇನ
ರೊಟ್ಟಿ ಹಂಚಿನ್ಹಾಂಗ ನಿನ್ನ ಮುಖಾ
ಪಂಥದಲಿ ಪ್ರತಿ ಭೀಷ್ಮ ಅಂದೇನ
ಮುಕಳಿ ತಿರವಿ ಹೋಗಾಂವ ಹಿಂದಕ
ಏಕ ಪತ್ನಿ ರಾಮಚಂದ್ರ ಅಂದೇನ
ನಾಡ ಕಸಬಿ ನೀ ರಾಜೇಕ
ಮುತ್ತ ತಿನ್ನುವ ರಾಜಹಂಸ ಅಂದೇನ
ಇಚ್ಛಾ ಭಕ್ಷಣ ಮಾಡುವ ಕಾಕ
ಕೋಪದಲ್ಲಿ ವಿಶ್ವಾಮಿತ್ರ ಅಂದೇನ
ಭಾಳ ಮಳ್ಳ ನೀ ಕೆಲಸಕ
ಶಕ್ತಿಯಲಿ ಮಾರುತಿ ಅಂದೇನ
ಕಾಣತಿ ಇಳಿತದ ಮುದಕನ್ಹಾಂಗ
ಮಂಗ್ಯಾನ ಕೈಯಾಗ ಮಾಣಿಕ ಕೊಟ್ಟರ
ಹಲ್ಲಾಗ ಹಾಕಿ ಕಡದ ಒಗದ್ಹಂಗ||೨ನೇ ಚೌಕ||

ಲಕ್ಷಣದಲ್ಲಿ ವಿಕ್ರಮ ಅಂದೇನ
ಹಂದಿ ಹಾಂಗ ನೀ ರೂಪದಲ್ಲಿ
ಗೌತಮ ಋಷಿ ಹಾಂಗ ಯೋಗಿ ಅಂದೇನ
ಕಾಗಿ ಹಾಂಗ ನೀ ಗುಣದಲ್ಲಿ
ಪಡದ ಒಳಗ ನೀ ಪಡಗಾರ ಅಂದೇನ
ಗಡಗಿ ತೋಳ್ಯಾವ ಅಡಗಿ ಮನಿಯಲ್ಲಿ
ಗುರುತ್ವದಲ್ಲಿ ದ್ರೋಣಾಚಾರಿ ಅಂದೇನ
ಮುಕಳಿ ತೊಕ್ಕೊಂಡಿಲ್ಲ ಜಲ್ಮದಲ್ಲಿ
ಉಗ್ರದಲ್ಲಿ ವೀರಭದ್ರ ಅಂದೇನ
ಹೆಣದ ಹಂಗ ನಿಂತಿದಿ ಸಭೆಯಲ್ಲಿ
ಧೈರ್ಯದಲ್ಲಿ ನಳರಾಜ ಅಂದೇನ
ಗಂಡಿಗ್ಯಾರಂಗ ಕೈಯ ತಿರವುತಲಿ
ಜಾತಿಯಲ್ಲಿ ನಿನಗ ಸುಜಾತ ಅಂದೇನ
ಮುಸರಿಗಂಜಿ ತಿನ್ನುವ ಚಾಲಿ
ಲಂಕಾ ಜಿಗಿಯುವ ಹನುಮ ಅಂದೇನ
ಉಚ್ಚಿ ಜಿಗ್ಯಾಂವ ನೀ ನಿಂತಲ್ಲಿ
ನಿನ್ನ ವಾಚಾ ಶುದ್ಧ ಅಂದೇನ
ಹೊಲೇರ ಹಂತಾ ಭಾಷೆ ನಿನ್ನಲ್ಲಿ
ಬಾಳ ಗೋಪಾಳನ ಜೋಡಿ ಆಗುದಕ
ಸತ್ತ ಹುಟ್ಟಿ ಬಾ ನೀ ಇನ್ನ ಮ್ಯಾಲಿ
ಮಂಗ್ಯಾನ ಕೈಯಾಗ ಮಾಣಿಕ ಕೊಟ್ಟರ
ಹಲ್ಲಾಗ ಹಾಕಿ ಕಡದ ಒಗದ್ಹಂಗ||೩ನೇ ಚೌಕ||

ರಚನೆ : ಬಾಳಗೋಪಾಳ
ಕೃತಿ :
ಬಾಳಗೋಪಾಳನ ಲಾವಣಿಗಳು