ನೀವು ಪಂಚಮುಖದ ಪರಮಾತ್ಮ ದೈವ ದೇವರ |
ಕುಂತಿರಿ ಹಿರಿಯರ |
ನನ್ನ ಮಾತ ಲಾಲಿಸಿ ಒರಿಗಿ ಹಚ್ಚರೀ ಪೂರಾ ||
ಗಾಯನ ಮಾಡೂದು ಸುಲಭ ಅಲ್ಲ ಶಾಹೀರಾ | ಕೇಳ್ರಿ ಬಲ್ಲವರಾ |

ಈ ಉದ್ಯೋಗದೊಳಗ ಸೋತೀದಾರ ಬಹು ಜನರಾ ||
ಬರೇ ಮೊಟ್ಟಿ ಕವಿ ನೀವು ಕಟ್ಟಿ |
ಒಯ್ದೇನು ಒಲಿಯಾಗ ಸುಟ್ಟಿ |
ಮುಂಚೆ ತಾಳಸ್ವರ ಇಲ್ಲ ಗಟ್ಟಿ |
ಅಪಸ್ವರ ಗಾಯನ ಮಾಡಿ ಹಾಡಿ ಹಸಗೆಟ್ಟಿ ||
ಕವಿ ಸುಳ್ಳ ಮಾಡಿಲ್ಲ ನಾ ಹುಟ್ಟಿ |
ಖರೇ ಖರೇ ಶಾಸ್ತ್ರಕ ಮುಟ್ಟಿ |
ಬಲ್ಲವರಿಗಿ ತಿಳಿದಿತ ತಿಗಟಿ |

 ಹುಸಿ ಹಾಡಂವ ಅಲ್ಲ ಗುರಿ ಒಗ್ಯಾಂವ ನಿರತಿಟ್ಟು ಸೂಟಿ ||
ನಿಮಗ ತಿಳಿಯದಿದ್ದರ ತಿಳಿಸಿ ಹೇಳ್ತಿನಿ ವಿಚಾರ | ಆಗಿರಿ ಹುಸಿಯಾರ |
ನನ್ನ ಮಾತ ಲಾಲಿಸಿ ಒರಿಗಿ ಹಚ್ಚಿರಿ ಪೂರಾ||೧ ಚೌಕ||

ಸುಳ್ಳಂದ್ರ ಇದಕ ನಿಮಗ ಹೇಳತೀನಿ ದೃಷ್ಟಾಂತ | ಸಭಾದಾಕ ನಿಂತ
ನಿಮ್ಮಂಥ ಪ್ರಾಣಿ ಒಬ್ಬ ಅಪಸ್ವರ ಗಾಯನ ಕಲಿತ ||
ಒಂದು ತುಂತುನಿ ಮಾಡಿ ಹಗಲಿರುಳ ಹಾಡಂವ ಯಾವತ್ತ |
ಸ್ವರಯಿತ್ತ ಗೊತ್ತ |
ನಾ ಶಾಣ್ಯಾ ಅಂತ ತನ ಮನಸಿನೊಳಗ ಮದ ಮಸ್ತ ||
ಸೊಲ್ಲಾಪುರಕ ಹೋಗಿ ಗಾಯನ ಮಾಡಬೇಕಂತ | ತೆಗೆದ ಒಂದು ಬೇತ |
ತುಂತುನೀ ತಗೊಂಡು ಬಿಸಲಾಗ ಹೊಂಟ ನಡಕೋತ |
ಆತ ಹೋಗುವ ದಾರಿಮ್ಯಾಲ ಕಂಚಾಳ ಮರ ಒಂದಿತ್ತ | ತಂಪು ಭಾಳ ಶಿಸ್ತ |
ಆ ಗಿಡದ ಕೆಳಗ ಕುಳಿತಿದ್ದ ಸ್ವಲ್ಪ ವಿಶ್ರಾಂತಿ ||
ಶಿವ ಶಿವ ಮಾಡಿದಾನ ಸ್ಮರಣಿ |
ಗಾಯನ ಮಾಡುವ ಯೋಚನಿ |
ತಂಬೂರಿಯಂತೆ ತುಂತೂನಿ |
ಅಪಸ್ವರ ತಾಳ ಬಿಟ್ಟು ಸುರವ ಮಾಡಿದ ಗಾಯನೀ ||
ಅಲ್ಲಿ ಬ್ರಹ್ಮರಾಕ್ಷಸದ ಮನಿ |
ಗಿಡದಲ್ಲಿ ಅದರ ಸಂಪಾದನಿ |
ಕೇಳಿ ಒದರಿ ಮಾಡಿತೋ ಧನಿ |
ನಿನ್ನ ಗಾಯನ ಕೇಳಿ ನನಗೆದ್ದಾದ ತಲಿಬ್ಯಾನೀ ||
ಬ್ಯಾಡಂದ್ರ ಕೇಳವೊಲ್ಲಿ ಕರುಣಿ |
ಹಟಬಿದ್ದು ಒದರತಾನ ಧರಣಿ |
ರಾಕ್ಷಿ ತಿಳಿದ ಕಾಳ ಬಂತು ಸನೀ |
ಬೇಡಿದ್ದು ಕೊಡತಿನೀ ಬಂದ್ ಮಾಡೊ ಗಾಯನೀ ||
ನನ್ನ ಹತ್ತರಿಲ್ಲ ಈಗ ತ್ರಾಣಿ |
ಕೊಡಲಾಕ ದುಡ್ಡ ದುಗ್ಗಾಣಿ |
ಸಾವುಕಾರನ ಹೇಣ್ತಿ ಭವಾನಿ |
ಹೋಗಿ ಬಡಕೋತೀನಿ ಬಂದು ಬಿಡಿಸೊ ಆಗಿ ಸುಜ್ಞಾನೀ ||

ಬಲ್ಲವರು ಬರಲಿ ಸುಜ್ಞಾನೀ |
ಅವರೀಗಿ ಹೋಗೂದಿಲ್ಲ ಆಣಿ |
ನೀ ಬಿಡಿಸು ಬಂದು ಬಡ ಪ್ರಾಣಿ |
ನಾ ಹೋದ ಬಳಿಕ ನೂರಾರು ಪಡಕೊ ನೀ ಸುಗುಣಿ ||
ಇನ್ನು ಸಾಕು ಮಾಡೊ ಮಹಾರಾಯ ಕೇಳೋ ಕವೀಸೂರ |
ಆಯಿತೋ ಬ್ಯಾಸರ   ||೨ ಚೌಕ||

ನನ್ನ ಮಾತ ಕೇಳಿ ಗಾಯನ ಮಾಡೂದು ಮರತಾ | ಋಷಿ ಆಗಿ ಕುಂತಾ |
ಕಾಳ ರಾಕ್ಷಿ ಹೋಯಿತು ಸಾವುಕಾರನ ಮನಿ ಹುಡುಕುತ ||
ಸಾವುಕಾರನ ಹೇಣತಿಗಿ ದೆವ್ವ ಆಗಿ ಬಡಕೋತ | ವಚನಕಾಗಿ ಶರತ |

ಕೂದಲ ಬಿಡಿಸಿ ಕಂಡಂಗ ಕುಣಿಸುತ್ತ ನಿಂತಿತ್ತ ||
ಸಾವುಕಾರ ನೋಡಿ ಅಂದ ಅಬುರು ಹೋಗೂದು ಬಂತ | ಚಿಂತಿ ಹೆಚ್ಚಿತ್ತ |
ಗುಮಾಸ್ತರಿಗಿ ಹೇಳಿದಾನ ಪಂಡಿತರು ಬಂದು ನೆರ್ದಾರ ಸುತ್ತ ||
ಬಲ್ಲವರು ಬಂದು ಆ ದೆವ್ವ ಬಿಡಿಸಬೇಕಂತ | ಯತ್ನ ಯಾವತ್ತ |
ಬಗಿಹರಿಯವಲ್ಲದೆ ಕುಂತಿದಾರ ಬ್ಯಾಸತ್ತ ||
ಮಂತ್ರ ಹಾಕಿ ಬೇಗು ಬೇಳಗಾನಾ |

ಶಾಣ್ಯಾರು ಆಗ್ಯಾರ ಹೈರಾಣಾ |
ಅದೆ ವಿದ್ಯದಲ್ಲಿ ಅವರು ಪೂರ್ಣಾ |
ಕುಣಿಸ್ಯಾಡಿದ್ಹಂಗ ಕುಣಿತಿತ್ತು ಕಲ್ಗಿಯವರ ಹೆಣ್ಣ ||
ಶ್ಯಾಣ್ಯಾರದು ನಿಂತಿತೋ ಯತನ |
ಹೇಳಲಾರದೆ ಹೋದರು ಪುನ್ಹ

ಗಾನವಗ ಮುಟ್ಟಿತೊ ವರ್ತಮಾನ |
ನಾ ಬಿಡಿಸತೇನಂತ ಬಂದಿದಾನ ||
ಆ ದೆವ್ವ ಹಿಡಿದಿತೋ ಅವನ ಖೂನಾ ||
ನೋಡಿ ಅಂದಿತು ನಾ ಹೋಗತೇನ |
ದೆವ್ವ ಬಿಡಿಸಿದಾನ ಗಾವನ್ನ |
ಸಾವುಕಾರ ಖುಷಿ ಆಗಿ ನೂರು ರೂಪಾಯಿ ಕೊಟ್ಟಿದಾನ ||

ಆ ರಾಕ್ಷಿ ಅಂತದ ನಿನ್ನ ವಚನದಂದು ಆದೆ ಪಾರ |
ಹೋಗೋ ಇನ್ನ ದೂರ |||೩ ಚೌಕ||

ನನ್ನ ಮಾತ ಲಾಲಿಸಿ ಒರಿಗೆ ಹಚ್ಚಿರಿ ಪೂರಾ
ಸಾವುಕಾರನ ಹೇಣತಿಗೆ ದೆವ್ವ ಸವಿಯ ಗಂಡಿತ್ತ ಮೈಯ ಉಂಡಿತ |
ಒಂದು ಎಂಟು ದಿನಾ ಬಿಟ್ಟು ಮತ್ತ ತಿರುಗಿ ಬಂದಿತ್ತ ||
ಸಾವುಕಾರ ತಿರುಗಿ ಶಾಣ್ಯಾರಿಗಿ ಕರಿಸಿದನು ಕುಂತ | ಇಟ್ಟಿದಾನ ಪಂಥ |
ಈ ದೆವ್ವ ಬಿಡಿಸಿದವರಿಗೆ ಬೇಡಿದ್ದು ಕೊಡತೇನಂತ ||
ಬಲ್ಲಂಥ ಮಾಂತ್ರಿಕರು ವಿದ್ಯೆ ಮಾಡಿದರು ಮಸ್ತ ಕುಂತರು ಹಲ್ ಕಿಸ್ತ |

ಬಗಿ ಹರಿಯಲಾರದೆ ಬರಿಗೈಲೆ ಹೋಗಿದಾರ ಪರತ ||
ಗಾಯನ ಮಾಡಂವ ಬಂದಿದ |
ಮಂತ್ರ ಹಾಕಿದ್ಹಂಗ ಮಾಡಿದ |
ಬಗಿಹರಿಯಲಿಲ್ಲ ಅದರಿಂದ |
ತುಂತುನೀ ತಗೊಂಡು ಗಾಯನ ಸುರು ಮಾಡಿದ ||

ದೆವ್ವ ಕುಣಿಯುತಿತ್ತರಿ ಮುಂದ |
ಮತ್ಯಾಕ ಕಾಳ ಬಂತಂದ |
ತಲಿಬ್ಯಾನಿ ಎದ್ದಿತ ಹೆಚ್ಚಿಂದ |
ನಿನ್ನ ದರ್ಶನ ಬ್ಯಾಡೋ ಹೋಗತೀನಿ ಇಲ್ಲಿಂದ ||
ಅಪಸ್ವರ ಗಾಯನದಿಂದ
ದೆವ್ವಾದರು ನಿಂದ್ರುದಿಲ್ಲ ಮುಂದ |
ಸಧ್ಯಾ ಹ್ಯಾಂಗ ಕೇಳಬೇಕೊ ಚಂದ |
ತಾಳಬಿಟ್ಟು ಹಾಡಿದರ ದೋಷ ಆದ ಅದರಿಂದ ||
ಹಲಸಂಗಿ ಗ್ರಾಮ ಹೆಚ್ಚಿಂದ
ಕವಿ ಹುಟ್ಟತಾವ ಚಂದಚಂದ |
ಸ್ವರ ಸಂಪ ತಾಳದಲ್ಲಿ ಶುದ್ಧ |
ಖಾಜಾs ಕವಿತಾ ಚಿಂತಾಲ ಹಚ್ಚಿ ತೂಗಿದ್ದ ||

ಒಳೆ ಶಿಸ್ತ ಹಾಡತಾರ ಮೌಲ ರಾಮಚಂದರಾ | ಗುರುವ ಪುತ್ತರಾ |
ನನ್ನ ಮಾತ ಲಾಲಿಸಿ ಒರಿಗಿ ಹಚ್ಚಿರಿ ಪೂರಾ||೪ ಚೌಕ||

ರಚನೆ : ಖಾಜಾಬಾಯಿ
ಕೃತಿ :
ಜೀವನ ಸಂಗೀತ