ಸಧ್ಯದ ಸಭೆ ಅಧ್ಯಕ್ಷ ವಿದ್ವನ್ಮಣಿ ಜೀ ನಾರಾಯಣರಿಗೆ |
ಮೇಧಾವಿ ಹಿರಿಯ ಮಾನ್ಯರಿಗೆ     ||ಪ||

ಜನತೆಯ ಪ್ರೀತಿಗೆ ಪಾತ್ರರಾಗಿ ಸ್ವತಃ ನಿಂತು |
ತನುಮನದಿ ಕನ್ನಡ ಸಾಹಿತ್ಯ ಭಾರವ ಹೊತ್ತು |
ಘನ ಅಧ್ಯಕ್ಷತೆ ನಾಡ ಸಾಹಿತ್ಯ ಪರಿಷತ್ತು | ದಿನದಿನಕೆ |
ದಿನದಿನಕೆ ಬೆಳೆಸಿ ಮನೆಮನೆಗೆ ಸಾಹಿತ್ಯವ ತಂದುಕೊಟ್ಟ ಮಾನ್ಯರಿಗೆ |
ಸುಸ್ವಾಗತ ಸಂಭ್ರಮವೀಗೆ   ||೧||

ಗೀಗೀ ಗಾಯನ ಸ್ಪರ್ಧೆ ಉದ್ಘಾಟಕ ಬಿ.ಡಿ. ಜತ್ತಿಯವರಿಗೆ |
ಭಾರತದ ಮುಕುಟಮಣಿಯರಿಗೆ ||
ವಿದ್ಯೆಯಿಂದ ವಿಶ್ವರಾಜಕೀಯ ರಂಗವನೆ ತಿಳಿದು |
ಚಪಲ ಚಾಣಾಕ್ಷತೆ ದಕ್ಷಧೋರಣೆ ಪಡೆದು |
ಜನಸೇವೆಯಲಿ ಅನುರಾಗದಿ ಅನುದಿನ ದುಡಿದು | ಅಧಿಕಾರ |
ಅಧಿಕಾರ ಪದವಿ ಪಡೆದಂಥ ಭಾರತ ಉಪರಾಷ್ಟ್ರಪತಿಯವರಿಗೆ |
ಸ್ವಾಗತಿಪೆವು ಮಾನ್ಯರಿಗೆ ||೨||

ಈಗ ಬಂದ ಸೌಭಾಗ್ಯ ಸಾಹಿತ್ಯ ಮಾನ್ಯ ಅತಿಥಿದ್ವಯರಿಗೆ |
ಸುಸ್ವಾಗತ ತಮಗೆಲ್ಲರಿಗೆ ||
ಮೈಸೂರು ವಿಶ್ವವಿದ್ಯಾಲಯ ಉಪಕುಲಪತಿ |
ಭಾಷಾ ಸಾಹಿತ್ಯ ಬೆಳೆಸುವಲ್ಲಿ ಆಸಕ್ತಿ |
ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರತಿಭಾ ಶಕ್ತಿ | ತೋರಿಸಿ |
ತೋರಿಸಿ ಕನ್ನಡ ಭಾಷೆ ಬೆಳೆಸಿ ಮಾಧ್ಯಮವ ಮಾಡಿದವರಿಗೆ |
ಸನ್ಮಾನ್ಯ ಜವರೇಗೌಡರಿಗೆ  ||೩||

ಪರಿಶ್ರಮಿಸಿ ಕನ್ನಡ ಸಾಹಿತ್ಯ-ಸಂಸ್ಕೃತಿ ಉಳಿಸಲು ದುಡಿಯುವ ನಿಮಗೆ |
ಸುಸ್ವಾಗತ ಸಂಭ್ರಮವೀಗೆ ||
ಡಿವಿಜನಲ್ ಕಮೀಶನರರಾಗಿ ಸತತ ದುಡಿದವರು |
ನಿವೃತ್ತರಾಗಿ ಸಾಹಿತಿ ಖ್ಯಾತಿ ಪಡೆದವರು |
ಬಹುಜನತೆಯ ಪ್ರೀತಿಗೆ ಪಾತ್ರರಾಗಿ ಬಂದವರು | ಆಡಳಿತ |
ಆಡಳಿತ ಕನ್ನಡ ಭಾಷೆ ಬೆಳೆಸಿದ ಲೋಕಸೇವಾ ಆಯೋಗದ |
ಸನ್ಮಾನ್ಯ ನಾಗೇಗೌಡರಿಗೆ  ||೪||

ಭಾಗವಹಿಸಿ ಆಗಮಿಸಿದ ಪ್ರಖ್ಯಾತ ಮಾನ್ಯ ತೀರ್ಪುಗಾರರಿಗೆ |
ಸಾದರದ ಸ್ವಾಗತವು ನಿಮಗೆ ||
ಪರರಾಳಿಕೆಯಲಿ ಮರೆಯಾದ ಪೂರ್ವ ಸಂಸ್ಕೃತಿ |
ಹೊರತೆಗೆದು ತೋರಿಸುವ ಕನ್ನಡ ನಾಡಿನ ಸ್ಥಿತಿ |
ಸರಳ ಶೈಲಿಯಲ್ಲಿ ಸರ್ವರಿಗೆ ತಿಳಿಸುವ ಕೃತಿ | ಗೀಗೀ ಲಾವಣಿ |
ಗೀಗೀ ಲಾವಣಿ ಪುನರುತ್ಥಾನ ಸಮಿತಿಯ ಮಾನ್ಯ ಸದಸ್ಯರ ಕರೆಗೆ |
ಓಗೊಟ್ಟು ಬಂದ ಮಾನ್ಯರಿಗೆ   ||೫||

ಗೀಗೀ ಮೇಳದ ವಾಲಿ ಶರಣರು ಸ್ವಾಗತಿಪರು ಸರ್ವರಿಗೆ |
ಸುಸ್ವಾಗತ ಸಂಭ್ರಮಮಿಗೆ ||

(ಇದು ಗೀಗೀ ಲಾವಣಿ ಪುನರುತ್ಥಾನ ಸಮಿತಿ ಯಾದಗಿರಿ ಅವರು ಏರ್ಪಡಿಸಿದ ಸ್ಪರ್ಧೆಯಲ್ಲಿ ಹಾಡಿದ ಹಾಡು)

ರಚನೆ : ಶರಣಪ್ಪವಾಲಿ
ಕೃತಿ :
ಶರಣಸ್ಮೃತಿ