ರೊಕ್ಕದ ಆಸೆಕಾಗಿ ದಿಕ್ಕೆಟ್ಟ ತಿರಗೂತ
ಹಲ್ಕಾ ಪದ ಕಲತ ಹಾಡವರು ಬಾಳ |
ಗಂಡ ಹೆಣ್ಣಿನ ಭೇದ ಮಾಡಿಕೊಂತ |
ವಾದ ಹಾಕಿ ವ್ಯಾಳ್ಳೆ ಕಳ್ಯಾವರು ಬಾಳ ||

ತತ್ವದ ಪದಗಳ ಬಿಚ್ಚಿ ಹಾಡಿದರ
ರೊಚ್ಚಿಗೆದ್ದ ನನ್ನ ಬೈಯ್ಯಾವರು ಬಾಳ |
ಹಾದಿ ಬಿಡಿಸುವಂತಾ ಹದಗೇಡಿ ಪದಗಳನ
ಹಲ್ಲಕಿಸದ ಕುಂತ ಕೇಳಾವರು ಬಾಳ ||

ತತ್ವದ ವಿಚಿಯಾರ ಗೊತ್ತ ಇಲ್ಲದೆ
ಬೋಧಾಮೃತ ಸಾರ ಓದಾವರು ಬಾಳ |
ಆತ್ಮ ಜ್ಞಾನದ ಅನುಭವ ತಿಳಿಯದೆ
ಜಾತಿಭೇದ ಮಾಡಿ ನಡ್ಯಾವರು ಬಾಳ ||

ಹೇಸಿ ಗುಣಗಳನ್ನ ಹಿಂತೇಕ ಇಟಗೊಂಡ
ಮಡಿ ಹುಡಿ ಅಂತ ಅನ್ನವರು ಬಾಳ |
ಮನಸಿನ ಮೈಲಿಗಿ ಮರತ ಬಿಟ್ಟಿದಾರ
ಮೈಯ್ಯತೊಳದ ಮಡಿ ಮಾಡವರು ಬಾಳ |

ತಮ್ಮ ಬೆನ್ನ ಹಿಂದ ತಮಗ ಕಾಣಾನಿಲ್ಲ
ಅನ್ಯರಿಗೆ ನಿಂದ ಆಡವರು ಬಾಳ |
ತಮ್ಮ ಮನಿಯಾಗ ಮೊಳ ಉದ್ದ ಇಟಗೊಂಡ
ಓಣ್ಯಾಗ ಆಚಾರ ಹೇಳವರು ಬಾಳ ||

ಬಡವರ ತಪ್ಪಾ ಬೈಲಿಗಿ ತಂದು
ಬಲ್ಲಂಗ ಬೈದ ಬುದ್ಧಿ ಹೇಳವರು ಬಾಳ
ಕಂಡು ಕಾಣದಾಂಗ ಕದ್ದಿಲಿ ಮಾಡಿ
ಇದ್ದು ಇಲ್ಲದಾಂಗ ಇರಾವರು ಬಾಳ ||

ಖರೆ ಸುಳ್ಳು ಚಾಡಾ ಹೇಳವರು ಬಾಳ
ಜಗಳಾ ಬೆಳಸಿ ಮೋಜ ನೋಡವರು ಬಾಳ |
ವಿಶ್ವಾಸ ಇದ್ದಲ್ಲಿ ನಂಬಿ ನಡಿಯಾಣಿಲ್ಲ
ಕದ್ದಿಲಿ  ಕಾಯಕಾ ಮಾಡವರು ಬಾಳ ||

ಖಾಲಿ ಕುಂಡ್ರೋದೇನಂತ ಕೂಲಿ ಮಾಡಿದರ
ಹೊಟ್ಟಿಗಿಲ್ಲದ ಮೂಳ ಅನ್ನವರು ಬಾಳ |
ಉಂಡ ಉಟ್ಟ ಸುಖವಾಗಿ ಇದ್ದರ
ಅವರನ್ನ ನೋಡಿ ಉರ‍್ಯಾವರು ಬಾಳ ||

ಸಧ್ಯದ ಪರಿಸ್ಥಿತಿ ತಿದ್ದಿ ಹಾಡಿದರ
ಭಪ್ಪಾರೆ ಹಾಡಬಹುದನ್ನವರು ಬಾಳ |
ಪ್ರಾಸ ಹೊಂದಿಸಿ ಪದಾ ಮಾಡತಾನಂತ |
ವಾಲಿಶರಣರ ಪದಗೋಳ ಕೇಳಾವು ಬಾಳ ||

ರಚನೆ : ಶರಣಪ್ಪವಾಲಿ
ಕೃತಿ :
ಶರಣಸ್ಮೃತಿ