ಚಿತ್ತಗೊಟ್ಟು ಕೇಳಿರಿಂದು | ಮುತ್ತಿನಂಥ ಮಾತಿದು
ಬುತ್ತಿಗಂಟು ಸ್ವರ್ಗದ್ದು | ಸುರಿದಂಗ ಮುತ್ತಿನ ಮಳಿಯೆ |
ಕನಸಿನ ಕತೆಯಲ್ಲ | ತನುವಿನ ನುಡಿಸೊಲ್ಲ
ಜನಕಿದು ಸವಿಬೆಲ್ಲ | ಹರಿದಂಗ ಹಾಲಿನ ಹೊಳಿಯೆ |
ಗೋವಿನ ಮೈಮೆಯೆ | ನಾವೇನು ಬಲ್ಲೆವು |
ಸಾವಿಗದು ಅಮೃತ ಕಳೆಯೆ |

ಹಸಿ ಹಾಲು ಕರೆವುದು | ಬಸವನ ಹೆರೆವುದು
ಕಸುವನು ತರುವುದು | ಹುಸಿಯಲ್ಲ ಗೋವಿನ ತಳಿಯೆ ||
ಧಾನ್ಯಕಾಳು ಬೆಳೆಯಲು | ತನ್ನ ಹೋರಿ ಕುಡುವುದು
ಘನ್ನ ರೋಗ ಕಳೆವುದು | ಅಣ್ಣ ಕೇಳ್ರಿ ಗೋವಿಗೆ ಬೆಲೆಯೆ |
ಮಕ್ಕಳಂತೆ ಸಲುಹಲು | ಚಿಕ್ಕ ಕೂಸಿನಂತೆ ಅದು
ತಕ್ಕಂತೆ ಕಾಯುವ ನೆಲೆಯೆ ||

ಸಾವಕಾರಿದ್ದ ನೀತಿವಂತ | ಜಾತಿಲೆಂವ ಲಿಂಗಾಯತ
ಯಾತರದೇನು ಕೊರತಿ ಮತ್ತ | ದಾನ ಧರ್ಮ ಕರ್ಣಗ ಸರಿಯೆ |
ಜಾಣನಾದ ಸತ್ಯವಂತ | ಪ್ರಾಣ ಉಳಿಸು ಪುಣ್ಯವಂತ
ಖೂಳರಿಗೆ ಕಾಳಮತ್ತ | ಅನಿಸಿದ ಜನರಿಗೆ ದೊರಿಯೆ |
ಓಣಿ ಹಿಡಿದು ಹೋಗುವಾಗ | ದನಿ ಬಂತು ಅಂಬಾ ಎಂದು
ಮನಸಿಗೆ ತಾಕಿತು ಉರಿಯೆ ||

||ಇಳುವು||

ಹಣಕಿ ಹಾಕಿ ನೋಡ್ತಾನ ಹಸುವಿನ ದನಿ ಅದು
ಕಟುಕನ ಮನೆ ನೆನಿಸಿ
ಹಸುವಿನ ಬಿಗಿದು ನಿಲ್ಲಿಸಿ
ಮಸಿತಿದ್ದ ಚೂರಿ ಹದನಿಸಿ |
ಕಟುಕನ ಎದಿ ಕೆಟ್ಟ ಕರಗದು ಬಾಳ ಕಟ್ಟ
ಸಾವಕಾರ ಬಂದ ಧಾವಿಸಿ ||

||ಏರು||

ಹೊಡಿಬ್ಯಾಡ ನಿಂದರಂದು | ಬಿಡಿಸತೀನು ಆಕಳಿಂದು
ಕುಡುವೆನು ಹಣ ತಂದು | ಹೇಳದು ಹಸುವಿನ ಬೆಲೆಯೆ |
ಕಣ್ಣಿಗದು ಕಾಮಧೇನು | ಬಣ್ಣ ಆದ ಬಿಳಿಯ ಭಾನು
ಚಿನ್ನೊ ರನ್ನೊ ಬೆಲೆ | ತಿಳಿಯಲಿ ಮನಸಿನ ನೆಲೆಯೆ |
ಗೋವಿನ ಮೈಮೆಯ | ನಾವೇನು ಬಲ್ಲೆವು
ಸಾವಿಗದು ಅಮೃತ ಕಳೆಯೆ||೧ ಚೌಕ||

ಎತ್ತ ಬಂದಾನಿವ ಮತ್ತ | ಕತ್ತನೆತ್ತಿ ಸುತ್ತ ಮುತ್ತ
ಎತ್ತಿದಂಥ ಕೈ ಕುತ್ತ | ಇಳಿಸಿದಾ ಮಾತನು ಕೇಳ
ಚಿನ್ನರನ್ನ ಬೇಕಾಗಿಲ್ಲ | ಪುಣ್ಯ ಪಾಪ ನೋಡಾವಲ್ಲ
ಎನ್ನ ಕುಲ ಕಸಬಲ್ಲ | ತಿಳಿಸಿದ ನುಡಿಯನು ತಾಳಿ |
ಪ್ರಾಣಹತ್ಯಾ ಬಿಡಿಸೋದು | ನನ್ನ ಧರ್ಮ ಎನಿಸೂದೂ
ನಿಂತಾನ ಉತ್ತರ ಹೇಳಿ ||

ಆಕಳ ನೋಡಿ ದಯಾ ಬಂತು | ಸಾಕಲೇಕೆ ಜೀವನಿಂತು
ಮೂಕ ಪ್ರಾಣಿ ಉಳಿಸೂ ಹೊತ್ತು | ಸುತ್ತಿದ ನಡುವಿಗೆ ಸೆಲ್ಲಿ |
ಹಾದಿಗ್ಹೋಗೂ ಮುಂದಿನ ಕರೆದು | ನಡೆದ ಸುದ್ದಿ ಹೇಳಿ ನುಡಿದು
ಕಂಠಿ ತೆಗೆದು ಮುಂದೆ ಹಿಡಿದು | ಕಟುಕಗೆ ಬುದ್ಧಿಯ ಹೇಳಿ |
ನಾಕು ಮಂದಿ ನೆರದಾರ | ಕಟಕಗೆ ಹೇಳ್ಯಾರ
ಕೇಳಲಿಲ್ಲ ಬ್ಯಾಡಂದ್ರ ವಾಳಿ ||

ಕೊರಳಿನ ಹಗ್ಗ ಉಚ್ಚಿ | ಹೊರಟಾರ ಆಕಳ ಬಿಚ್ಚಿ
ತರುಬೆಂದ್ರು ಕಟುಕಗೆ | ನೆರೆದ ಮಂದಿ ಸಿಟ್ಟಿಲೆ ಕೆರಳಿ |
ಹಿಡಿದಾರ ಗಟ್ಟುಳ್ಳವರು | ನಡೆದಾರ ಮನಿಗವರು
ತಡಿಯಲಿಲ್ಲ ಅವರಿಗ್ಯಾರು | ಆಕಳದು ಜೀವದಿಂದ ಬಾಳಿ |
ದೈವಕ ಮೀರ‍್ಯಾನ | ಹೇವೇನು ತೋರ‍್ಯಾನ
ಕಟುಕಗೆ ತಿಳಿಲಿಲ್ಲ ವ್ಯಾಳಿ ||

ತುಂಬಿ ಪಾಪದ ಕೊಡ | ಬಂದಿತು ಕಟುಕಗೆ ಜಡ
ದರವಡೆಗೆ ಬಂದ್ರು ಕಳ್ಳರು |
ಮನಿವರ ಎಲ್ಲ ಸುಲಿದರು
ಚಿನ್ನ ರನ್ನ ಹಣವ ಸೆಳೆದರು |
ಮಾರಿ ಖೂನ ಹಿಡಿದಾನ | ನಾಳೆ ಘಾಸೀಗೊಯ್ತಾನ
ಎಂದು ಅವನ ಕಳ್ರು ಕೊಂದರು||೪ ಚೌಕ||

||ಏರು||

ಕಂಡಕೊಂಡು ಕೊಳ್ಳುವಂಥ | ಹಿಂಡಾನ್ಹಿಂಡ ಜನ ಬಂತ
ತುಂಡ ಹೆಣ ನೋಡಿ ನಿಂತ | ಜನರಿಗಿ ತಿಳಿಯದು ನೆಲೆಯೆ |
ಒಬ್ಬರಿಗೊಬ್ಬರು ಸುದ್ದಿ ಸಾರಿ | ಬೊಬ್ಬಿ ಹೊಡೆದು ನೆರಸ್ಯಾರ್ರಿ
ಹಬ್ಬ ಬಂತು ಕಟ್ಲೆ ಬರ್ರಿ | ಕೂಡಿದ ಜನಕದು ಎಣೆಯೆ |
ಗೋವಿನ ಮೈಮೆಯ ನಾವೇನು ಬಲ್ಲೆವು
ಸಾವಿಗದು ಅಮೃತ ಕಳೆಯೆ||೨ ಚೌಕ||

ಸಾವಕಾರ್ನ ಖಂಗಿನವರು | ಕಟುಕನ ಹಂಗಿನವರು
ಸರಕಾರ್ಕ ಹೋದರು | ಹೊಡೆದದ್ದು ನಿಜ ಸಾವಕಾರ
ಖಂಗ ಇತ್ತ ಮೊದಲಿಂದು | ಹ್ಯಾಂಗ ಮಾಡಲೆಂದು ಇಂದು
ಜಂಗಿ ಟೋಳಿ ತಂದು ಬಂದು | ಸುಲಿದಾನ ಕೊಂದಾನ ಚೋರಾ |
ಕೊಟ್ಟು ಸೂರಿ ಮಾಡಿ ಹೊನ್ನ ಕಟ್ಟಿಕೊಂಡ್ರು ಸರಕಾರ್ನ
ಸಿಟ್ಟಿನಿಂದ ಬಂದಾ ಅಮಲದಾರ ||

ಒಮ್ಮಿಂದೊಮ್ಮೆ ಪೋಲೀಸ ಬಂದು | ಹಮ್ಮ ಎಷ್ಟು ನಿನಗೆಂದು
ಸುಮ್ಮ ನಡಿ ಎಂದು ತಂದು | ಕೈಯಾಗ ಬೇಡಿ ಹಾಕ್ಯಾರ |
ಮಂದಿ ಮಕ್ಕಳು ಮುಕರ‍್ಯಾರ | ನೆರಿ ಹೊರಿ ನೆರದಾರ
ತಗೀರೆಂದು ಕೈಯ ಬೇಡಿ | ಹವಳ ಮುತ್ತುಗಳ ಸುರವ್ಯಾರ |
ಲಂಚಗಿಂಚ ತಿನ್ನುದಿಲ್ಲ | ಮ್ಯಾಲಿನ್ಹುಕುಮ ಮುರುದಿಲ್ಲ
ಮುಂದ ದೂಡಿ ಅವ್ನ ಎಳದಾರ||೨|

ಬಂದದ್ದು ಬರಲೆಂದ | ನಂದು ಪುಣ್ಯ ಜೋರೆಂದ
ಮುಂದ ತಾಯಿ ಸಲಹೆಂದ | ನಡೆದಾನ ಎದೆಗಾರ ಚದುರ |
ಕಾಳು ಮೇಳು ಗಂಟು ಬಿದ್ದು | ಮೇಳಾಯ್ತು ಇಂದಿದು
ಶೀಲವೆನ್ನ ಸಲಹುದು | ಅಂದಾನ ಮನದಾನ ಮಧುರ |
ಪುಣ್ಯ ಪಾಪ ಯುದ್ಧದಲ್ಲಿ | ನನಗಿನ್ನು ಸೋಲೆಲ್ಲಿ
ಧೈರ್ಯ ಹೇಳಿ ಹೊಂಟಾನ ಧೀರ ||

||ಇಳುವು||

ಸಾಹೇಬ ಬಂದಾನ | ತಪ್ಪು ಮ್ಯಾಲ ಹೊರಿಸ್ಯಾನ
ಬಂದದ್ದು ಬರಲಿ ಅಂದನು |
ಕೊಟ್ಟ ಶಿಕ್ಷೆ ನಾನು ಕೊಂಬೆನು |
ಕೈಮುಗಿದು ಮುಂದ ನಿಂದನು |
ಇದು ಆದ ದೊಡ್ಡ ತಪ್ಪ | ಘಾಸೀ ಶಿಕ್ಷೆ ಕೊಟ್ಟಿತಪ್ಪ |
ಬೇಡೂದೆಲ್ಲ ಬೇಡಪ್ಪ ನೀನು ||

||ಏರು||

ಸಾಯಬನ ನುಡಿ ಕೇಳಿ | ಸಾಯ್ವುದು ಬಂತು ಪಾಳಿ
ಮೂರ್ತಿಂಗಳ ಮುದ್ದತ ಕೇಳಿ | ನಿಂತಾನ ಧೈರ್ಯದ ಬೆಳೆಯೆ |
ಕೊಟ್ಟುಬಿಟ್ರು ಮುದ್ದತ | ಜಾಮೀನು ತಂದು ಕೊಟ್ಟ
ಖುಷಿಯಿಂದ ಜಾಗ ಬಿಟ್ಟ | ನಡೆದಾನ ಧರ್ಮದ ಹೊಳೆಯೆ |
ಗೋವಿನ ಮೈಮೆಯೆ ನಾವೇನು ಬಲ್ಲೆವು
ಸಾವಿಗದು ಅಮೃತ ಕಳೆಯೆ||೩ ಚೌಕ||

ಬಾಯಾಂತಗದು ಬಾಯಾಗ ಹಾಕೀ ತಾಯಿ ಗೋವನು ಸಾಕಿ
ಮೆಯಿಸಿದ ಹುಲ್ಲ ಕಣಕಿ | ಕಡಿಮಿಲ್ಲ ಕೊರತೇನೇನ |
ತಾನು ಉಂಡಾ ಹಾಲ್ಮೊಸರ | ಏನು ಸವಿ ಉಸಳಿ ಪೂರಾ
ತಾಲೀಮಿಟ್ಟ ಎರಡೂ ಹೊತ್ತ | ಉಂಡು ದೂದಖೀರ ತುಪ್ಪ ಬೋನ |
ಮೈತುಂಬ ಸೊಕ್ಕ ಬಂತು | ಮೋತೀ ಮ್ಯಾಲ ಕಳೆ ಬಂತು
ಭೀತಿಯಿಲ್ಲ ಸಾವಿನ ಖೂನ ||
ಆಕಳಿಗಿ ಬಿಳಿಯ ಬಣ್ಣ | ಜೋಕಾದ ಕಾಡಿಗಿ ಕಣ್ಣ |
ದಿಟ್ಟಿಯಾಗೂ ಮಾತಿದು | ಕುಕ್ಕಬೇಕು ಕಂಡವರ ಕಣ್ಣ |
ತಾಯಿ ಕೂಸುಗಳ ಪ್ರೀತಿ | ನಡೆದರ ಹಾದೀ ಹತ್ತಿ
ಅದರ ಮನ ಕೂಡಿ ಅತಿ | ಹತ್ತಿತ್ತು ಸಾವಕಾರ್ನ ಬೆನ್ನ |
ಮೂರು ಮಾಸ ಕಳೆಯಿತು | ಮರಣ ಕಾಲ ಬಂದಿತು
ಜಾಮಿನದಾರ್ಗ ನಡಿಯಂದ ಇನ್ನ ||

ಗಲ್ಲೀಗ್ಹಾಕು ವೇಳೆ ಬಂತು | ಅಲ್ಲಿ ಮಾಡಿ ಜಾಗಾ ಗೊತ್ತು
ಎಲ್ಲರಿಗೆ ಭೆಟ್ಟಿ ಕೊಟ್ಟು | ಮೆರೆಸುತ ತಂದರು ಘನ್ನ |
ಇತ್ತ ಹಿಂದ ಆಕಳಿತ್ತು | ಸುತ್ತಿ ಸುತ್ತಿ ಬರುತಿತ್ತು
ಹೊಡೆದರೆ ಮತ್ತು ಮತ್ತು | ಬಿಡಲಿಲ್ಲ ಧನಿಯ ಬೆನ್ನ

||ಇಳುವು||

ಜನ ನೆರೆದು ಸಾವಿರಾರು | ಕಂಡಂಗೆ ನುಡಿದರು
ಗಲ್ಲಿನ ಕಂಬಕೆ ನಿಲ್ಲಿಸಿ |
ಕೊರಳೀಗಿ ಉರಲ ಸಿಗಸಿ |
ಒದ್ದಾರ ಜೋರಿಲೆ ಸರಿಸಿ |
ಒಮ್ಮೆ ಒದ್ರು ಬೀಳಲಿಲ್ಲ | ತಮ್ಮ ನಿನ್ನ ಬಿಡೂದಿಲ್ಲ
ಉಳಿದಿಲ್ಲ ಏನೂ ನಿನ್ನ ಆಶಿ ||

||ಏರು||

ಹತ್ತುಸಾರೆ ಹಾಕಿದಾರ | ಮತ್ತು ಮತ್ತು ಒದಿತಾರ
ಸುತ್ತಿ ಸುತ್ತಿ ಬರುತ್ತಿತ್ತು | ತಿಳಿಲಿಲ್ಲ ಆಕಳ ಬಗೆಯೆ |
ನೆರೆದ ಮಂದಿ ದಂಗು ಆಗಿ | ಗೋವೀಗಿ ಸರಿಸಿ ಕೂಗಿ
ಇದು ಏನು ಸೋಜಾಗಿ | ನಡೆದಿರುವುದು ಹೊಸ ಪರಿಯೆ |
ಗೋವಿನ ಮೈಮೆಯ | ನಾವೇನು ಬಲ್ಲೆವು
ಸಾವಿಗದು ಅಮೃತ ಕಳೆಯೇ||೪ ಚೌಕ||

ಯಾತಕಿದು ಕಟ್ಟ ಹತ್ತು | ಪಾತಕೇನು ನಮಗಿತ್ತು
ಘಾತಕಿದು ಆಕಳ ಬಂತು | ಸಾವುಕಾರ ತಿಳಿಯದು ಪರಿಯೆ |
ಕೊಂದರ ಸಾಯಲೊಲ್ಲಿ | ತಂದಿ-ಯಮಗ ಕೇಳಲೊಲ್ಲಿ
ಮಂದ್ಯಾಗ ಮಂತ್ರ ಚೆಲ್ಲಿ | ಏನಿದು ಧರ್ಮದ ತೆರಿಯೆ |
ಓಡಿ ಬಂದು ಅಡಿಗೆರಗಿ | ಕಾಡುವದು ಅಡ್ಡ ಬಂದು
ದೈವಕ ತೆರೆದಿಡು ಮರೆಯೆ ||

ಸಾವಕಾರ್ನ ಶೂಲಕಿಂತು | ವಾಸರಾಗಿ ಮುಂದೆ ನಿಂತು
ಜನಕೆಲ್ಲ ಬೆರಗು ಬಂತು | ಉಳಿಸಿತು ಚಿಂತಾಮಣಿಯೆ ||
ಆಕಳ ಕೃಪೆಯಿಂದ | ಸಾಯಬಗೆ ಕರುಣೆ ಬಂದ
ಸಾವುಕಾರ್ನ ಮರಣಬಂದ | ತಪ್ಪಿತು ಪುಣ್ಯದ ಕಣಿಯೆ |
ಅರಿದರಿದೆಂದರು | ಕರಚಪ್ಪಳಿಕ್ಕಿದರು
ಸುರಿದರು ಹೂವಿನ ಗೊನಿಯೇ ||

ತಾಯಿ ತಾಯಿ ಗೋತಾಯಿ | ನನಗಾಗಿ ಆದೆ ಗಾಯಿ
ಕಾಯ್ದೆಯೆನ್ನ ಪಡೆದಾಯಿ | ಹೊಡಿ ಬಿಚ್ಚಿ ಕ್ಯಾದಿಗಿ ತೆನಿಯೆ |
ಕಾಲ ಕೆಳಗೆ ಆಸರಿತ್ತು | ಬಾಲನೆತ್ತಿ ಬೆನ್ನಕೊಟ್ಟು
ಶೂಲದಲ್ಲಿ ದಯವಿಟ್ಟು | ಉಣಿಸಿದ ಹಾಲಿನ ಕೆನಿಯೆ |
ಸತ್ಯಧರ್ಮ ರೂಪತೋರಿ | ಕುತ್ತ ಹರಿದಿ ನನ್ನ ಗೌರಿ
ನಿತ್ಯ ನೀಡು ಅಮೃತ ಹನಿಯೆ ||

||ಇಳುವು||

ಪುಣ್ಯಕ ಎಣಿಯಲ್ಲ | ಕಣ್ಣಿಗಿ ಕಾಣೂದಿಲ್ಲ
ಗಲ್ಲದಿಂದ ಅವನ ಇಳ್ಸಿದರು
ನೆರೆದವರು ಹೌದು ಅಂದರು
ತಾಯಿಯ ಕೃಪೆಯ ಕಂಡರು |
ಇದು ಎಂಥ ಅಚ್ಚರಿ | ಅರಿತಪ್ಪದಳ್ಳುರಿ
ಹರಿಯಿತು ಪುಣ್ಯದ ಸಾರು ||

||ಏರು||

ತಾಯಿಯಂತೆ ಹಾಲನುಣಿಸಿ | ಕಾಯುವದು ಕರುಣೆಯಿರಿಸಿ
ಸಾಯುವನ ಎದುರಿಸಿ | ತಾರಿಪುದುಪಕೃತಿ ಸಿರಿಯೆ |
ಮುಪ್ಪಿನ ತಾಯಿಯನು | ಅಪ್ಪಾ ನೀವು ಸಲಹುವಂತೆ
ತಪ್ಪದೆ ಸಲುಹಿರಿ | ಕಟುಕಗೆ ಮಾರೂದು ಸರಿಯೆ |
ಗೋವಿನ ಮೈಮೆಯ ನಾವೇನು ಬಲ್ಲೆವು
ಲಿಂಗನ ಹಾಡಿದು ಸವಿಯೆ||೫ ಚೌಕ||

ರಚನೆ : ಲಿಂಗಕವಿ
ಕೃತಿ :
ಜೀವನ ಸಂಗೀv