ಅನಿವಾರ ಭೂಮಿ ಮ್ಯಾಲ ಭಕ್ತ
ಕಬೀರ ಕಮಾಲನಂಗ
ವಿಷ್ಣು ಭಕ್ತಿ ಸತ್ವದಲಿ ಶೀಲಾ
ಲೀಲಾ ಮಾಡಿ ತೋರಿಸ್ಯಾರ ಪ್ರಬಲಾ
ಸಾಧು ಜನರ ದೆಸೆಯಿಂದ ವಧಾ ಮಾ
ಡಿದ ಮಗನ ಶಿರಕಮಲ ಮಗನ ಶಿರಕಮಲಾ||ಪಲ್ಲ||

ಪತಿವ್ರತಾ ಸತಿಸುತ ಜ್ಞಾತಿಕಮಲಾ
ಅತಿ ಭಕ್ತ ಕಬೀರ ನೀತಿ ಶಾಸ್ತ್ರ ಸಕಲ ಬಲ್ಲವರಾ
ಅತಿಥಿಗಳಿಗೆ ಅನ್ನಾ ಹಾಕುವರಾ
ಗತಿಯಿಲ್ಲ ಮನಿಯಾಗ ಬಡತನ ಪೂರಾ
ಅವರ ನಡಸತಿದ್ರ ಜನ್ಮ ಸಸಾರಾ
ಒಂದು ದಿವಸ ರಾತ್ರಿಲೆ ಅವರ ಮನಿಗೆ
ಬಂದಾರ ಅನೇಕ ಮಂದಿ ಸಾಧುರಾ
ಕಬೀರ ಹಾಕ್ಯಾನ ಅವರಿಗೆ ನಮಸ್ಕಾರಾ
ಅಡ್ಡ ಬಿದ್ದಾರ ಸತಿ ಸುತರಾ
ಹಾಸಿದಂತ ಹರಕ ಚಾಲಿ ಮ್ಯಾಲಾ
ಸಾಧುರರು ಕುಂತಾರು ಎಲ್ಲರಾ

||ಚಾಲ||

ಆನಂದಕಂದ ಆದ ಕಬೀರಾ
ಚಂದ್ರಗ ಚಕೋರ ಬಾಯಿ ತೆರದಂಗ
ಹನುಮಂತನ ನೋಡಿ ಸೀತಾಗ
ಅಶೋಕವನದಾಗ ಹರುಷಾದಾಂಗ
ಕುರುಡಗ ಬಂದ್ಹಾಂಗ ನಯನಾ
ಯಾಚಕಗ ದೊರೆತಂಗ ಧನಾ
ನೋಡಿದಂಗ ಕಮಲ ಸೂರ್ಯನಾ
ಈ ಪರಿ ಹರುಷ ಆದ ಭಕ್ತಾ
ಹೆಣತಿನ ಕರದ ಕೇಳ್ಯಾನ ಅನಕೂಲಾ
ಊಟಕ ಹಾಕಬೇಕ ನಿರ್ವಾ ಇಲ್ಲಾ
ಸಂತ ಮಹಿಮಾ ಯಾರಿಗೂ ತಿಳಿದಿಲ್ಲಾ
ಕೇಳಿ ಪತಿವ್ರತಾ ಅಂತಾಳ ಪ್ರಾಣನಾಥಾ
ಈಗಿನ ವ್ಯಾಳೇಕ-ಸೇರ ಕಾಳಿಲ್ಲ ನಮ್ಮಲಿ ಶಿಲ್ಕಾ
ಯಾರ ಮನಿಗಿ ಹೋಗಲಿ ಬೇಡುದಕಾ
ಕೊಂಡ ತಂದೇವಿ ಅಂದರ ನಮ್ಮ ಕೈಯಾಗಾ
ಇಲ್ಲರಿ ರೊಕ್ಕಾ
ಒಂದ ಯುಕ್ತಿ ಹೇಳತಿನ ಕೇಳರಿ
“ತಕ್ಕೊಂಡ ಹೋಗರಿ ನಿಮ್ಮ ಮಗನ ಬಾಜಾರಕಾ
ಸಾಮಗ್ರಿ ತುಡುಗ ಮಾಡುವದಕಾ
ಪಾಪಿಲ್ಲ ಪರೋಪಕಾರಕಾ
ಇದರ ಹೊರತ ಮುಕ್ತಿ ಕಾಂಬುದಿಲ್ಲ
ಊಟ ಹಾಕಿ ಇವರ ಮಣಿಸುವದಕಾ”

||ಏರು||

ಅನಿವಾರ ಭೂಮಿ ಮ್ಯಾಲ ಭಕ್ತ ಕಬೀರ
ಕಮಾಲನಂಗ ಯಾರಿಲ್ಲಾ
ಸಾಧು ಜನರ ದಸಿಯಿಂದ ವಧಾ ಮಾಡಿದ
ಮಗನ ಶಿರಕಮಲಾ…..||೧ನೆಯ ಚೌಕ||

ಸತಿ ಮಾತ ಕೇಳಿ ಅತಿ ಹರುಷಾದ
ಕಬೀರದಾಸ ತನ್ನ ಮನಕಾ
ಕಮಾಲನ ಕರದಾನ ಆ ಕ್ಷಣಕಾ
ನಡಿ ಮಗನೆ ಹೋಗುನು ತಡಾಯಾಕಾ
ಕನ್ನಗತ್ತಿ ಹಾರಿ ತಕ್ಕೊಂಡ ಹೊಂಟಾರ
ಮನಿಯೊಡೆಯುದಕಾ ಮನಿಯೊಡೆಯುದಕಾ
ಹೋದಾರ ಸರ್ವ ರಾತ್ರ್ಯಾಗ ನಡು ಪ್ಯಾಟ್ಯಾಗ

ನಿಂತಾರ ಇಬ್ಬರು ನಿಂತಾರಾ ಇಬ್ಬರಾ
ನೋಡಿ ಸುತ್ತಲು ಎಚ್ಚರಿಲ್ಲ ಯಾರದ್ಯರಾ
ದೊಡ್ಡ ಸವಕಾರನ ಅಂಗಡಿ ನೋಡಿದರಾ
ಗಚ್ಚಿನ ಗ್ವಾಡಿ ಒಡೆದರಾ
ಒಳಹೊಕ್ಕು ತಾವು ನೋಡ್ಯಾರು
ಸುತ್ತೆಲ್ಲ ಎಚ್ಚರಿಲ್ಲ ಯಾರು

||ಚಾಲ||

ಧನ ದ್ರವ್ಯ ನೋಡಿ ಮನದಾಗ
ಬಿಟ್ಟ ನಡದ ನೋಡಿ ನೋಡದಂಗ
ಹಂಸ ನೀರ ಬಿಟ್ಟ ಹಾಲ ಕುಡದಂಗ
ಹಿಟ್ಟಕ್ಕಿ  ಬ್ಯಾಳಿ ತುಪ್ಪಾ ಬೆಲ್ಲಾ
ಸಾಧುರ ಪುರ್ತೆಕ ತಗೊಂಡ ಹೆಚ್ಚಿಲ್ಲಾ
ಕಬೀರದಾಸ ಮಾಡತಾನ ಕಾವಲಾ
ಅವನ ಕೈಯಾಗ ಕೊಟ್ಟಾನು ಎಲ್ಲಾ
ಹೊರಬಿದ್ದ ಹೋಗು ವೇಳೆದಲ್ಲಿ ನೆಪ್ಪಾತ ಒಂದಾ
ಸಾವಕಾರ ಮಲಿಗ್ಯಾನ ಎಚ್ಚರಿಲ್ಲದಾ
ಧನದ್ರವ್ಯ ಬಿದ್ದಿದೆ ಆನಂದಾ
ನನ್ನಂತ ತುಡುಗ ಒಯ್ದಾನ ಮತ್ತೊಬ್ಬ ಬಂದಾ
ಆತ ತಿಳದ ಮಾಡ್ಯಾನ ವಿಚಾರಾ
ಏಳೋ ಸಾವಕಾರಾ ಸಾವದಾಂಗ ಜಲದಾ
ಜ್ವಾಕಿ ಮಾಡಿಕೊಳ್ಳೊ ಬಾಕಿ ಉಳದದ್ದಾ
ನಾವು ತುಡುಗರಾ ಹೋಗತೇವ
ನೋಡೋ ಜೋಡಿ ಇಲ್ಲಿಂದಾ
ಇಷ್ಟ ನುಡದ ಕಮಾಲ ಆಗ ಕಿಂಡ್ಯಾಗ
ತಲಿ ಹಾಕಿ ಹೋಗತಿದ್ದಾ
ಇತ್ತ ಸಾವಕಾರ ಕಾಲ ಹಿಡದೆಳದಾ
ಅರ್ಧಾ ಒಳಗ ಅರ್ಧಾ ಹೊರಗಾದಾ
ಕಬೀರಗಂತಾನ ಆದೀತ ಘಾತಾ
ನಮ್ಮ ಮ್ಯಾಲ ಮುನಿದ ಭಗವಂತಾ

||ಏರು||

ಮೃಗರಾಜ ಸಿಕ್ಕಾಂಗ ಬಲಿಯೊಳಗಾ
ಕಮಾಲ ಸಿಕ್ಕಾನ ಅವನ ಕೈಯಾಗಾ
ಕಮಾಲ ಅಂತಾನ ಕಬೀರಾ
ಅಯ್ಯೋ ಎನ್ನ ಶಿರಾ ಒಯ್ಯೋ ಲಗುಬ್ಯಾಗ
ಅನಿವಾರ ಭೂಮಿ ಮ್ಯಾಲ ಭಕ್ತ ಕಬೀರ
ಕಮಾಲನಂಗ ಯಾರಿಲ್ಲಾ
ಸಾಧು ಜನರ ದಸಿಯಿಂದ ವಧಾ ಮಾಡಿದ
ಮಗನ ಶಿರಕಮಲಾ….||೩ನೆಯ ಚೌಕ||

ಎಲೋ ತರಬ್ಯಾಡೋ ಅನುಮನಾ
ಮಾಯಾ ಮಮತಾ ಒಗದ ಬಿಡೋ ನೀನಾ
ಎಂದಿದ್ರ ಹೋಗೋದು ಒಂದೀನಾ
ಹತ್ತು ಮಂದಿ ಕೂಡಿದರ ಖೂನ ಹಿಡಿದರ
ಮಾನ ಉಳಿಯುವದಿಲ್ಲ ಮಾನ ಉಳಿಯುವದಿಲ್ಲಾ
ಸುದ್ದಿ ಹತ್ತೀತ ಸಾಧುರಿಗೆಲ್ಲಾ
ಮಾಡಿದ್ದೆಲ್ಲಾ ಆದೀತ ನಿಷ್ಫಲಾ
ಕಬೀರದಾಸ ಮನಸಿನಲಿ ತಿಳದಾ
ಮೋಹಪಾಸೆ ಹರದಾ
ಹಿರದ ಕತ್ತಿ ತೈಯಾರಾ
ಮಾಡಲಿಲ್ಲ ಮತ್ತೊಂದು ವಿಚಾರಾ
ಏ ಭಕ್ತರಾಜ ಸುಕುಮಾರಾ
ಆಸೆವಂತ ಖರೇ ಶಾಹೀರಾ

||ಚಾಲ||

ಪ್ರಾಣಕೊಟ್ಟ ಪರೋಪಕಾರಕ
ಮಗನೆ ಆದಿಯೋ ಪಾರಾ
ರಾಮನಾಮ ಸ್ಮರಣೆ ಮಾಡಿಕೋತಾ
ಕುತ್ತಗಿ ಮ್ಯಾಲ ಖಡ್ಗ ಮುಟ್ಟಲಾಧೀರಾ
ಮಗನೆ ಮಾಡೋ ರಾಮನಾಮ ಉಚ್ಚಾರಾ
ರಾಮನಾಮ ಎರಡು ಅಕ್ಷರಾ
ಕ್ಷೀರಾಬ್ಧಿ ಶೇಷಶಾಯಿ ಹಂತೇಲಿ
ಇರೋ ನೀನು ಸ್ಥಿರಾ ಇರೋ ನೀನು ಸ್ಥಿರಾ
ಇಷ್ಟ ನುಡದ ಕಬೀರಾ
ಕಡದಾನ ತಲಿ ತಡ ಮಾಡಲಿಲ್ಲ
ಮತ್ತೊಂದು ವಿಚಾರಾ
ರುಂಡ ಬಗಲಾಗ ಹಿಡಕೊಂಡಾ
ಹೊಂಟಾನ ಧೀರಾ ಧೀರಾ
ಸಾಮಗ್ರಿ ಸಹಿತ ಕಬೀರಾ
ಆನಂದದಿಂದ ಹೊಕ್ಕಾನು ಮಂದಿಯ
ತನ್ನ ಮಡದಿಗೆ ಹೇಳ್ಯಾನ ಏಕಾಂತಾ
ಆದ ವೃತ್ತಾಂತ ಹೋದ ನಿನ್ನ ಮಗಾ
ಕೇಳಿ ಕಬೀರನ ಸತಿ ಬಿದ್ದಾಳ
ಬಡದ್ಹಂಗ ಭ್ರಾಂತಿ ಜಗಮುಳಗಿದ್ಹಂಗಾ
ನನ್ನ ಮಗನಿಗೆ ಬಂತೋ ಮರಣಾ ಶ್ರೀಹರಿ
ಹಿಂಗಾಯಿತೇನೋ ಧೀರಾ ಉದ್ಧಾರಾ

||ಏರು||

ಶ್ರೀಯಾಳ ಚಿಲ್ಲಾಳನ ಪರಿ
ಸಾಧುರ ದಸಿಯಿಂದ ಶಿರಾ ಕೊಟ್ಟ
ಹಾಕಿದಿ ಊಟಾ ಸತ್ವ ಬಿಡಲಿಲ್ಲಾ
ದುಃಖ ಒಗೆದು ಆದಾಳ ಖುಸಿಯಾಲಾ
ಅಡಗಿ ಮಾಡ್ಯಾಳ ತಾತ್ಕಾಲಾ
ಅನಿವಾರ ಭೂಮಿ ಮ್ಯಾಲ ಭಕ್ತ ಕಬೀರ
ಕಮಾಲನಂಗ ಯಾರಿಲ್ಲಾ
ಸಾಧು ಜನರ ದಸಿಯಿಂದ ವಧಾ ಮಾಡಿದ
ಮಗನ ಶಿರಕಮಲಾ……||೩ನೆಯ ಚೌಕ||

ಕೂತೀತ ಸಾಧುರ ಪಂಕ್ತಿ
ಹಿಡಿಸದೊ ಕಬೀರನಕ್ಕರತಿ
ಇತ್ತ ಸಾವಕಾರ ಎದ್ದ ರಾತ್ರಿಯಲಿ
ಶಂಕದನಿ ಮಾಡಿದ ಪ್ಯಾಟಿಯಲಿ
ಕೂಡ್ಯಾರ ಜನರು ನೋಡ್ಯಾರ ಕಣ್ಣೀಲಿ
ತುಡಗನ ತುಡಗ ನಿಂತ ಕಡದ ಖೂನಾಗಿ
ದಡದ ಗುರ‍್ತ ಹತ್ತವಲ್ತ ಎಲ್ಲಿ
ಆಶ್ಚರ್ಯವಾದೀತ ಲೋಕದಲಿ
ಸಾವಕಾರಗ ಅಂತಾರ ದೈವಶಾಲಿ
ಧನದ್ರವ್ಯನಿಂತ ಭಗವಂತ ಕಾಯೂತ ಇಲ್ಲಿ
ರಾಜನ ಮುಂದ ಈ ಸುದ್ದಿ ಹೇಳತರಿ
ಮಂದಿ ಹೋಗಿ ತೀವ್ರದಲಿ
ಏ ದೊರೆಯೆ ನಿನ್ನ ಊರಲ್ಲಿ
ಕಡದೊಯ್ದಾರ ತುಡಗನ ತೆಲಿ
ಇಂತವರದಂತ ಖೂನ ಹತ್ತವಲ್ತಲ್ಲಿ
ದಡದ ಮ್ಯಾಲಿಂದಾ ಮ್ಯಾಲಿಂದಾ
ಆಗ ರಾಜಗ ಬಂದೀತ ಸಿಟ್ಟಾ
ಅಪ್ಪಣೀ ಆಗ ಅಂವ ಕೊಟ್ಟಾ
ಹಾಕೀರಿ ಅದನ ಫಾಸೇಕಾ
ಸೂಲಗಂಬ ತಂದ ನಿಲಿಶ್ಯಾರ ಅದಕ
ಹಾಕ್ಯಾರ ಸತ್ತ ಹೆಣಕಾ
ಆಗ ರಾಜ ಆಗಿ ಅಜ್ಞಾನ ತಗೊಂಡಾ
ಮೂರ್ಖತನ ತನ್ನ ಪಾಲಕಾ

||ಚಾಲ||

ಮುಂಜಾನೆ ಎದ್ದ ಸಾಧುರಾ
ಮುಂದ ಹೋಗುದುಕ ಆಗ್ಯಾರ ತೈಯಾರಾ
ಅಂತಾರ ಕಬೀರ ಉದಾರಾ
ಇಷ್ಟ ಹೇಳಿ ಹೊಂಟಾರ ಹೊರಬಿದ್ದಾ
ಕಬೀರ ಕೈಮುಗದ ಹಿಡಿತಾನ್ರಿ ಕಾಲಾ
ದಯಾ ಇರಲಿ ಕಿಂಕರನ ಮ್ಯಾಲಾ
ಕಳಿಸುತ ಹೋದಾನ ಹಿಂಬಾಲಾ
ತಾಳ ವೀಣಾ ಮೃದಂಗ ಘೋಷಾ
ಮಾಡುತ ಹರಿಧ್ಯಾನದಲಿ ಹರಿಧ್ಯಾನದಲಿ
ಕಮಾಲನ ಶೂಲಕ ಹಾಕಿದಲ್ಲಿ
ಕೂಡ್ಯಾರ ಸಾಧೂರಾ ನೋಡ್ಯಾರ
ಧಡಾ ದೃಷ್ಟಿಯಲಿ ತಮ್ಮ ದೃಷ್ಟಿಯಲಿ
ಎತ್ತೆತ್ತ ಹೋದತ್ತರತ್ತತ್ತ ಮುಗಿತದ
ಕೈಯಾ ಬಿದ್ದು ಫಾಸಿಯಲಿ
ಲಕ್ಷ ಇಟ್ಟ ಸಾಧುರ ಚರಣದಲಿ
ತಾಳ ಇಲ್ಲದ ಶರೀರ ಶರೀರ
ಕುಣಿತದ ಮ್ಯಾಲೆ ಅಂತ್ರದಲಿ
ನೋಡಿ ಸಾಧುರ ಅಲ್ಲಿ ನಿಂತಾರ

||ಏರು||

ಕಬೀರಗಂತಾರ ಏನು ಇದರ ಲೀಲಿ
ರುಂಡವಿಲ್ಲಿದ ಜೀವ ಇದಕೆಲ್ಲಿ
ನಾವೆಂದ ಕಂಡಿಲ್ಲ ಪೃಥ್ವಿಯಲಿ
ಕೈಯ ಮುಗಿತದ ಹೆಂಗ ನೀ ಹೇಳವಲ್ಲಿ
ಅನಿವಾರ ಭೂಮಿ ಮ್ಯಾಲ ಭಕ್ತ ಕಬೀರ
ಕಮಾಲನಂಗ ಯಾರಿಲ್ಲಾ
ಸಾಧುರ ಜನರ ದಸಿಯಿಂದ ವಧಾ ಮಾಡಿದ
ಮಗನ ಶಿರಕಮಲಾ….||೪ನೆಯ ಚೌಕ||
ತಂತಿ ಹರದ ಮ್ಯಾಲ ವೀಣಾ
ನುಡಿಯೋದು ಕಠಿಣಾ ಕಠಿಣಾ
ಬಲ್ಲ ಭಗವಂತ ಪಕ್ಷಿಗಳ
ಪಂಖ ಹೋದ ಮ್ಯಾಲೆ ಹಾರತಾವ ಹೆಂಗಾ
ಭಾಳ ವಿಪರೀತಾ ವಿಪರೀತಾ
ಕಬೀರ ಅಂತನ ಕೇಳರಿ
ಹೇಳುವೆ ಈ ದಡದ ಪುರಾಣ “ಈ ಪರಿ
ರಣದಾಗ ಬಿದ್ದ ಭೀಷ್ಮಾಚಾರಿ
ಪ್ರಾಣಾ ಬಿಡಲಿಲ್ಲ ಉತ್ತರಾಯಣ ತನಕಾ
ಶರಪಂಜರದ ದುಃಖವನಿಗಾಗಲಿಲ್ಲಾ
ಹಾಂಗ ತುಡುಗ ನಿಮ್ಮ ಪದಕಮಲ
ನೋಡ ಬೇಕೆನ್ನೊ ಹಂಬಲ್ಯಾ”
ಕೇಳಿ ಕಬೀರದಾಸನ ಶಬ್ದಾ
ಸಾಧೂರ ಆಗಿ ಸ್ತಬ್ಧಾ
ಕೇಳತಾರ ಅವನ –
‘ಅಂತಹ ತುಡುಗ ಯಾಂವ
ಹೇಳೊ ನೀ ಪೂರ್ಣಾ
ತೀರಿಸೋಣ ಅವನ ಮನೋರಥಾ’
ಅಂದ ಮಾತಿಗೆ ಕಬೀರ ಮೊದಲಿಂದಾ
ಹೇಳ್ಯಾನ ವೃತ್ತಾಂತಾ ವೃತ್ತಾಂತಾ
ತಂದಿ ಮುಂದ ಸುದ್ದಿ ಹೇಳುದುಕ
ಕಂದ ಅಭಿಮನ್ಯು ಬಿದ್ದ ಮೂರ್ಛಿತ
ಅರ್ಜುನಗ ವರದಿ ಹೇಳಿ ಸತ್ತಾಂಗ
ತುಡುಗ ನಿಮ್ಮನು ನೋಡುತಾ
ನಿಮ್ಮ ದರ್ಶನ ಮಾಡಿ ಹಿಡಿಬೇಕಂತಾನ
ಸ್ವರ್ಗದ ಪಂಥಾ ಸ್ವರ್ಗದ ಪಂಥಾ
ವನವಾಸಕ ಹೋದ ರಘುವೀರಾ
ಪಕ್ಕ ಕಳಕೊಂಡ ಬಿದ್ದ ಜಟಾಯು
ರಾಮನಾಮ ಸ್ಮರಣಿ ಮಾಡಿಕೊಂತಾ
ಅವನ ಚರಣ ಕಂಡ ಚರಣ ಕಂಡಾ
ಪ್ರಾಣ ಬಿಟ್ಟಾನು ಜಟಾಯು ಭಕ್ತಾ
ಹಿಂಗ ಫಾಸೇಕ ಹಾಕಿ ನಿನ್ನ ಮಗನಾ
ಹ್ಯಾಂಗ ಹೋಗೋಣ ಅಲ್ಲ ಧರ್ಮಾ
ಇಲ್ಲಿ ತಾರೋ ಕಮಾಲನ ಶಿರಾ
ಧಡಕ ಹಚ್ಚಿ ತ್ವರಾ
ಮಾಡೋ ಹರಿನಾಮಾ
ಶಿರಾ ತಂದ ಧಡಕ ಹಚ್ಚ್ಯಾರ
ಟಾಳಿ ಹೊಡಿತಾರ ಆಗಿ ಸುಪ್ರೇಮಾ

||ಏರು||

ಸಾಧುರ ನಿಂತಾರ ಸುತ್ತಮುತ್ತಾ
ಅಲ್ಲಿ ಬಂದಾನ ಪಂಢರಿನಾಥಾ
ಕಮಾಲ ಎದ್ದಾನ ನಕ್ಕೋತಾ
ಪುಷ್ಪ ಮಳೀ ಸುರದರ ಇಲ್ಲ ಸೀಮಾ
ಸಂತ ಮಹಿಮಾ ನೋಡಿ ಸರ್ವರೆಲ್ಲಾ
ದಯಾ ಇಟ್ಟ ಅಣ್ಣಾರಾವಜಿ ಮ್ಯಾಲಾ
ಬಾಳಗೋಪಾಳ ಹರಿಧ್ಯಾನದಲಿ ಲೋಲಾ
ಅನಿವಾರ ಭೂಮಿ ಮ್ಯಾಲ ಭಕ್ತ ಕಬೀರ
ಕಮಾಲನಂಗ ಯಾರಿಲ್ಲಾ
ಸಾಧು ಜನರ ದಸಿಯಿಂದ ವಧಾ ಮಾಡಿದ
ಮಗನ ಶಿರಕಮಲಾ…..||೫ನೆಯ ಚೌಕ||

ರಚನೆ : ಬಾಳಗೋಪಾಳ
ಕೃತಿ :
ಬಾಳಗೋಪಾಲನ ಲಾವಣಿಗಳು