ಸಂವಹನಕ್ಕಾಗಿ ಎಲ್ಲರೂ ಭಾಷೆಯನ್ನು ಬಳಸುತ್ತೇವೆ. ಆದರೆ ಶ್ರವಣ ದೋಷವಿರುವವರಿಗೆ ಭಾಷೆಯ ಬಳಕೆ ಸಾಧ್ಯವಾಗುವುದಿಲ್ಲ. ಅವರು ಭಾಷೆಗೆ ಬದಲಾಗಿ ಸಂಕೇತಗಳನ್ನು ಬಳಸುತ್ತಾರೆ. ಅಂದರೆ ಅವರ ಅನಿಸಿಕೆಗಳೆಲ್ಲವೂ ಸಂಕೇತಗಳ ಮೂಲಕವೇ ವ್ಯಕ್ತವಾಗಬೇಕಾಗಬಹುದು. ಆದರೆ ಇವು ಕೇವಲ ಭಾವಾಭಿನಯ (ಜೆಸ್ಚರ್) ಮಾತ್ರ ಅಲ್ಲ. ಭಾಷೆ ಯಾವ ರೀತಿ ವ್ಯಾಕರಣ ಬದ್ಧವಾಗಿರುತ್ತದೋ ಅದೇ ರೀತಿಯಲ್ಲಿ ಈ ಸಂಕೇತಗಳ ಬಳಕೆಗೂ ನಿಯಮ ಗಳಿರುತ್ತವೆ. ಆದ್ದರಿಂದಲೇ ಇವುಗಳನ್ನು ‘ಸಂಕೇತಭಾಷೆ’ ಎಂದು ಕರೆಯುತ್ತೇವೆ.

ಸಂವಹನದ ಉದ್ದೇಶಕ್ಕಾಗಿ ಭಾಷೆಗೆ ಬದಲಾಗಿ ಶರೀರದ ಅಂಗಗಳನ್ನು ಬಳಸಿ ಮಾಡಲಾಗುವ ಭಾವಾಭಿನಯವೇ ಸಂಕೇತ ಭಾಷೆ. ಹಲವಾರು ಸಂದರ್ಭಗಳಲ್ಲಿ ಭಾಷೆಗೆ ಬದಲಾಗಿ ಸಂಕೇತಗಳನ್ನು ಮಾಹಿತಿ ಸಂವಹನಕ್ಕಾಗಿ ಬಳಸುತ್ತೇವೆ. ಎಲ್ಲೆಲ್ಲಿ ಸಂವಹನಕ್ಕಾಗಿ ಭಾಷೆಯ ಬಳಕೆ ಸಾಧ್ಯವಿಲ್ಲವೋ, ಬೇರೆ ಭಾಷೆಯನ್ನು ಬಳಸುತ್ತಾರೋ, ಎಲ್ಲೆಲ್ಲಿ ಮಾತಿನ ಮೂಲಕ ನಿರ್ದೇಶನ ನೀಡಲು ಸಾಧ್ಯವಿಲ್ಲವೋ ಅಲ್ಲೆಲ್ಲ ಸಂಕೇತ ಭಾಷೆಯ ಬಳಕೆ ಯಾಗುವುದು. ಇಷ್ಟೇ ಅಲ್ಲದೆ ಶ್ರವಣದೋಷವುಳ್ಳವರು, ಕೆಲವೊಂದು ಧಾರ್ಮಿಕಾಚರಣೆಗಳಲ್ಲಿ (ಸಿಸ್ಟೆರ್ಶನ್ ಸನ್ಯಾಸಿಗಳು) ಮ್ತು ಕೆಲವೊಂದು ಬುಡಕಟ್ಟು ಜನರು ಈ ಸಂಕೇತ ವ್ಯವಸ್ಥೆಯನ್ನು ಬಳಸುತ್ತಾರೆ. ಆದರೆ ಶ್ರವಣ ದೋಷವುಳ್ಳವರು ಬಳಸುವ ಸಂಕೇತ ವ್ಯವಸ್ಥೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಪಾಶ್ಚಿಮಾತ್ಯರಲ್ಲಿ ಕ್ರಿಸ್ತಶಕದ ಆರಂಭದಿಂದಲೇ ಸಂಕೇತ ಭಾಷೆಯ ಬಳಕೆಯಿತ್ತೆಂದು ತಿಳಿದು ಬರುತ್ತದೆ. ಎರಡನೆಯ ಶತಮಾನದ ಉತ್ತರಾರ್ಧ ‘ಮಿಶ್ನಾ’ (ಮಿಶ್ನಾಹ್) ಎಂದು ಕರೆಯಲಾಗುವ ಯಹೂದಿಗಳ ವಿಧಿಗಳು ಆಗಲೇ ಕಿವುಡರು ಕಾನೂನಿನ ಉದ್ದೇಶಗಳಿಗಾಗಿ ಸಂಕೇತಗಳನ್ನು ಬಳಸುತ್ತಿದ್ದು ದನ್ನು ತಿಳಿಸುತ್ತವೆ. ಒಬ್ಬ ಕಿವುಡ – ಮೂಕ ಸಂಕೇತಗಳ ಮೂಲಕ ವ್ಯವಹರಿಸ ಬಹುದು ಮತ್ತು ಅಂತಹ ಸಂಕೇತಗಳ ಮೂಲಕವೇ ಇತರರು ಅವರೊಡನೆ ವ್ಯವಹರಿಸಬಹುದು ಎಂದು ಅದರಲ್ಲಿ ತಿಳಿಸಲಾಗಿದೆ.

ಮೂಗರು ತಮ್ಮ ದೇಹದ ಅಂಗಗಳ ಮೂಲಕ ಮಾಡುತ್ತಿದ್ದ ಕೆಲವು ಚಲನೆಗಳ ಬಗ್ಗೆ ಪ್ಲೇಟೋ ತನ್ನ ಕೃತಿ ಕ್ರೆಟಿಲಸ್‌ನಲ್ಲಿ ಉಲ್ಲೇಖಿಸಿದ್ದಾನೆ.

ಆದರೂ ಇದರ ಒಂದು ವ್ಯವಸ್ಥಿತವಾದ ಅಧ್ಯಯನ 1960 ರವರೆಗೂ ಬಂದಿರಲಿಲ್ಲ. ವೆಸ್ಟ್ ಅಮೆರಿಕನ್ ಪ್ಲೈನ್ ಇಂಡಿಯನ್ ಸಂಕೇತ ಭಾಷೆಯ ಬಗ್ಗೆ 1960 ರಲ್ಲಿ ಅಧ್ಯಯನವನ್ನು ನಡೆಸಿದ್ದು ತಿಳಿದುಬರುತ್ತದೆ. ಸ್ಟೋಕೋ (1960) ಅಮೆರಿಕನ್ ಸಂಕೇತ ಭಾಷೆಯ ಬಗ್ಗೆ ಒಂದು ಪುಸ್ತಕವನ್ನು ಹೊರತಂದನು. ಅವನು, ಪ್ರಯತ್ನಪೂರ್ವಕವಾಗಿ ಮಾಡುವ ಎಲ್ಲಾ ಸಂಕೇತಗಳಿಗೂ ಒಂದು ಗೊತ್ತಾದ ಚಲನೆ, ಸ್ಥಳ, ಕೈ ಆಕೃತಿ ಇರುತ್ತದೆಂದೂ, ಇದು ಭಾಷೆಯಲ್ಲಿನ ವ್ಯಾಕರಣದ ಉಪಘಟಕಗಳಂತೆ ಕೆಲಸ ಮಾಡುತ್ತವೆಂದೂ ತಿಳಿಸಿದ. ಅನಂತರದ ಎಲ್ಲಾ ಅಧ್ಯಯನಗಳಿಗೂ ಇದು ಮಾದರಿಯಾಯಿತು.

ಪ್ರಾರಂಭದಲ್ಲಿ ಸಂಕೇತಭಾಷೆಗೆ ಭಾಷೆಯ ನಂತರದ ಸ್ಥಾನವನ್ನು ನೀಡಲಾಗಿತ್ತು. ಟೈಲರ್ (1878) ಎಂಬುವವರು ಸಂಕೇತ ಭಾಷೆಯ ರಚನೆ ಹಾಗೂ ಕಿವುಡರ ಶಿಕ್ಷಣದಲ್ಲಿ ಅದರ ಪಾತ್ರದ ಬಗ್ಗೆ ಅಧ್ಯಯನ ನಡೆಸಿದರು. ಕಿವುಡರನ್ನು ಸಾಕಷ್ಟು ಅಧ್ಯಯನ ಮಾಡಿದ ಸ್ಟೌಟ್ (1899) ಎಂಬುವವರು ಸಂಕೇತದ ಮೂಲಕವೇ ಭಾಷೆ ಹುಟ್ಟಿರಬಹುದೆಂಬ ತಮ್ಮ ಸಿದ್ಧಾಂತವನ್ನು ಮಂಡಿಸಿದರು.

ಅನಂತರದ ಕೆಲವು ಸಿದ್ಧಾಂತಗಳು (ಸಸ್ಸೂರ್) ಸಂವಹನದಲ್ಲಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯ ನೀಡಿದ್ದರಿಂದ ಈ ಸಂಕೇತಭಾಷೆಯ ಅಧ್ಯಯನಕ್ಕೆ ಸ್ವಲ್ಪ ಹಿನ್ನಡೆಯುಂಟಾಯಿತು. ಅದೂ ಅಲ್ಲದೆ ಶಿಕ್ಷಣತಜ್ಞರು ಮತ್ತು ಇದನ್ನು ಉಪಯೋಗಿಸುವವರು ಸಂಕೇತ ಭಾಷೆಗೆ ಭಾಷೆಯ ಸ್ಥಾನಮಾನ ಸಾಧ್ಯವಿಲ್ಲವೆಂಬ ದೃಷ್ಟಿ ತಾಳಿದುದೂ ಇದರ ಹಿನ್ನೆಡೆಗೆ ಕಾರಣವಾಯಿತು. ಇತ್ತೀಚೆಗೆ ಅಂದರೆ ಸುಮಾರು ಮೂವತ್ತು ವರ್ಷಗಳಿಂದೀಚೆಗೆ, ಪುನಃ ಅಧ್ಯಯನಗಳು ನಡೆಯುತ್ತಿದ್ದು ಅನೇಕರು ಈ ಬಗ್ಗೆ ಕಾರ್ಯಪ್ರವೃತ್ತ ರಾಗಿದ್ದಾರೆ.

ಎಷ್ಟೋ ಜನರಲ್ಲಿ ಸಂಕೇತಭಾಷೆ ಮತ್ತು ಭಾವಾಭಿನಯ ಎರಡೂ ಒಂದೇ ಎಂಬ ತಪ್ಪು ಅಭಿಪಾ್ರಯವಿದೆ. ಅಂದರೆ ಸಂಕೇತಭಾಷೆ ಎಂದರೆ ಒಂದು ಭಾಷೆಯಲ್ಲಿ ಕೇವಲ ಉನ್ನತೀಕರಿಸಿದ ಭಾವಾಭಿನಯ ಎಂಬುದಾಗಿ ಭಾವಿಸಲಾಗಿದೆ. ಆದರೆ ಇದು ತಪ್ಪು ಎಂಬುದು ಇತ್ತೀಚಿನ ಅಧ್ಯಯನಗಳಿಂದ ತಿಳಿದು ಬಂದಿದೆ. ಭಾಷೆಯಲ್ಲಿ ಯಾವ ರೀತಿ ಅಭಿವ್ಯಕ್ತಗೊಳಿಸಲು ಸಾಧ್ಯವೋ ಅದೇ ರೀತಿಯಲ್ಲಿ ಪ್ರಜ್ಞಾಪೂರ್ವಕವಾಗಿ ಸಂಕೇತಗಳನ್ನು ಹೊರ ಹೊಮ್ಮಿಸಿ ಸಂವಹನ ಮಾಡಲಾಗುತ್ತದೆ. ಭಾವಾಭಿನಯ ವ್ಯವಸ್ಥಿತವಾದುದಲ್ಲ. ಮತ್ತು ಭಾಷೆಯಲ್ಲಿ ದೊರಕುವ ಅರ್ಧದಷ್ಟೂ ಗ್ರಹಿಕೆ ಸಾಧ್ಯವಾಗುವುದಿಲ್ಲ. ಆದರೆ ಸಂಕೇತಭಾಷೆಯಲ್ಲಿ ಇದು ಸಾಧ್ಯ.

ಭಾವಾಭಿನಯವನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಸಂಕೇತಭಾಷೆಯನ್ನು ಸಂವಹನಕ್ಕಾಗಿ ಬಳಸುವವರು ಅದನ್ನು ವಿಶೇಷವಾಗಿ ಕಲಿಯಬೇಕಾಗುತ್ತದೆ.

ಕೆಲವೊಂದು ಪ್ರತಿಮಾತ್ಮಕ (ಐಕಾನಿಕ್) ಸಂಕೇತಗಳನ್ನು ಮಾತ್ರ ಇದನ್ನು ಕಲಿಯದವರೂ ಮಾಡಬಹುದು. ಆದರೆ ಎಲ್ಲಾ ಸಂಕೇತಗಳನ್ನೂ ಬಳಸುವುದು ಸಾಧ್ಯವಿಲ್ಲ.

ಭಾವಾಭಿನಯದಲ್ಲಿ ಇಡೀ ಶರೀರವನ್ನು ಬೇಕಾದ ಹಾಗೆ ಬಳಸಲು ಸಾಧ್ಯವಿದೆ. ಆದರೆ ಸಂಕೇತ ಭಾಷೆಯ ಪರಿಧಿ ಕೇವಲ ತಲೆಯಿಂದ ಸೊಂಟದವರೆಗಿನ ಪ್ರದೇಶ ಮಾತ್ರ. ಶರೀರದಿಂದ ಕೆಲವು ಅಡಿ ದೂರದವರೆಗೆ ಮಾತ್ರ ಇದರ ಸ್ಥಳಾವಲಂಬನೆ. ಸಂಕೇತಭಾಷೆ ಒಂದೇ ಕಡೆ ಕುಳಿತು ನಿಂತು ಮಾಡಬಹುದಾದರೆ ಭಾವಾಭಿನಯದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಚಲನೆ ಸಾಧ್ಯ.

ಭಾವಾಭಿನಯದಲ್ಲಿ ಸಂದೇಶ ಪ್ರಸಾರ ಪ್ರಜ್ಞಾಪೂರ್ವಕ / ಅಪ್ರಜ್ಞಾಪೂರ್ವಕ ವಾದರೆ ಸಂಕೇತಭಾಷೆಯಲ್ಲಿ ಕೇವಲ ಪ್ರಜ್ಞಾಪೂರ್ವಕವಾಗಿ ಇರುತ್ತದೆ.

ಈ ಸಂಕೇತಭಾಷೆಗಳು ಸಾರ್ವತ್ರಿಕವೇ ಎಂಬ ವಿಚಾರದಲ್ಲಿ ಅಧ್ಯಯನಗಳು ಸಾಕಷ್ಟು ನಡೆದಿದ್ದು ಅದರ ಫಲಿತಾಂಶವೆಂಬಂತೆ ಭಿನ್ನ ರೀತಿಯ ಸಂಕೇತ ಭಾಷೆಗಳಿರುವುದು ಅವುಗಳ ರಚನೆಯಲ್ಲಿನ ವ್ಯತ್ಯಾಸದಿಂದ ಗೋಚರವಾಗಿವೆ. ಕಿವುಡರು ಬಳಸುವ ಸಂಕೇತ ಭಾಷೆಗಳಲ್ಲಿ ಅಮೆರಿಕನ್, ಫ್ರೆಂಚ್, ಚೈನೀಸ್, ಡೇನಿಷ್ ಹೀಗೆ ಭಿನ್ನ ರೀತಿಯ ಸಂಕೇತಗಳಿದ್ದು ತಮ್ಮದೇ ಆದ ನಿಯಮಗಳನ್ನು ಹೊಂದಿವೆ.

ಸಂಕೇತಭಾಷೆಗಳು ಮೂರು ರೀತಿಯದೆಂದು ಬೇರನ್ (1981) ಹೇಳುತ್ತಾರೆ. ಒಂದು, ಶ್ರವಣದೋಷವುಳ್ಳವರು ಸಂವಹನದ ಮುಖ್ಯ ಮಾಧ್ಯಮವಾಗಿ ಬಳಸುವ ವ್ಯವಸ್ಥೆ ಮತ್ತು ಶ್ರವಣ ದೋಷವುಳ್ಳವರ ಮತ್ತು ಸಾಮಾನ್ಯರ (ಅವರ ತಂದೆ ತಾಯಿಗಳು, ಸ್ನೇಹಿತರು) ನಡುವಿನ ಸಂವಹನಕ್ಕಾಗಿ ಇರುವ ಸಂಕೇತ ವ್ಯವಸ್ಥೆ; ಎರಡನೆಯದು, ಒಂದೇ ಭಾಷೆಯನ್ನು ಪರಸ್ಪರ ಹಂಚಿಕೊಂಡರೂ ಕೆಲವೊಂದು ಕಾರ್ಯಗಳಿಂದಾಗಿ ಭಾಷೆ ಮೂಲಕ ಸಂವಹನ ನಡೆಸಲು ಸಾಧ್ಯವಾಗದ ಸಂದರ್ಭದಲ್ಲಿ ಬಳಸಲಾಗುವ ಸಂಕೇತ ವ್ಯವಸ್ಥೆ. ಮೂರನೆಯದಾಗಿ, ಭಿನ್ನ ಭಾಷೆಯನ್ನು ಮಾತನಾಡುವ ಜನರು ಸಂವಹನಕ್ಕಾಗಿ ಬಳಸುವ ಸಂಕೇತ ವ್ಯವಸ್ಥೆ. ಮೊದಲನೆಯ ಗುಂಪಿಗೆ ಅಮೆರಿಕನ್ ಸಂಕೇತ ಭಾಷೆ (ಅಮೆರಿಕನ್ ಸೈನ್ ಲ್ಯಾಂಗ್ವೆಜ್), ಫ್ರೆಂಚ್ ಸಂಕೇತ ಭಾಷೆ (ಫ್ರೆಂಚ್ ಸೈನ್ ಲಾಂಗ್ವೆಜ್); ಚೈನೀಸ್ ಸಂಕೇತ ಭಾಷೆ (ಚೈನಿಸ್ ಸೈನ್ ಲ್ಯಾಂಗ್ವೆಜ್), ಬ್ರಿಟಿಷ್ ಸಂಕೇತ ಭಾಷೆ (ಬ್ರಿಟಿಷ್ ಸೈನ್ ಲಾಂಗ್ವೆಜ್) ಸೇರಿದರೆ, ಎರಡನೆಯ ಗುಂಪಿಗೆ ಸಿಸ್ಟೆರ್ಶನ್ ಸನ್ಯಾಸಿಗಳು ಬಳಸುವ ಸಂಕೇತ ಭಾಷೆ ಸೇರುತ್ತದೆ. ಅಮೆರಿಕನ್ ಪ್ಲೈನ್ ಸಂಕೇತ ಭಾಷೆ ಮೂರನೆಯದಕ್ಕೆ ಉದಾಹರಣೆಯಾಗಿದೆ.

ಮೊದಲನೆಯದನ್ನು, ಅಂದರೆ, ಶ್ರವಣ ದೋಷವುಳ್ಳವರು ಮುಖ್ಯ ವಾಗಿಯೂ, ಸಾಮಾನ್ಯರು ಶ್ರವಣದೋಷವುಳ್ಳವರ ಜೊತೆ ಸಂವಹನ ಕ್ಕಾಗಿ ಉಪಯೋಗಿಸುವ ಸಂಕೇತ ಭಾಷೆಯನ್ನು ಪ್ರಾಥಮಿಕ ಸಂಕೇತ ಭಾಷೆ ಎಂದು ಕರೆದರೆ, ಎರಡನೆಯ ಮತ್ತು ಮೂರನೆಯ ಅಂದರೆ, ಭಾಷೆ ತಿಳಿದಿರುವ ಸಾಮಾನ್ಯ ಜನ ಕೆಲವೊಂದು ಸನ್ನಿವೇಶಗಳಲ್ಲಿ ಉಪಯೋಗಿಸು ವಂಥದನ್ನು ಪರ್ಯಾಯ ಸಂಕೇತ ಭಾಷೆ ಎಂದೂ ಕರೆಯಲಾಗುತ್ತದೆ.

ಭಾಷೆಯನ್ನು ಅಧ್ಯಯನ ಮಾಡುವ ಒಂದು ವಿಭಾಗ ಧ್ವನಿಮಾಶಾಸ್ತ್ರ. ಇದಕ್ಕೆ ಸಂವಾದಿಯಾಗಿ ಸಂಕೇತಗಳ ಅಧ್ಯಯನವನ್ನು ಚಿರಾಲಜಿ ಎಂದು ಕರೆಯಲಾಗಿದೆ.

[ಚೀರ್ ಎಂದರೆ ಗ್ರೀಕ್ ಭಾಷೆಯಲ್ಲಿ ಕೈ ಎಂದರ್ಥ.] ಇದನ್ನು 1960 ರಲ್ಲಿ ಸ್ಟೋಕೋ ಎಂಬುವವರು ಮೊದಲ ಬಾರಿಗೆ ಮಂಡಿಸಿದರು. ಅದಕ್ಕೂ ಹಿಂದೆ ಸಂಕೇತಗಳು ಏಕೀಕೃತವೆಂದೂ ಬಿಡಿಬಿಡಿಯಾಗಿ ನೋಡಲು ಸಾಧ್ಯವಿಲ್ಲವೆಂದೂ ಅಂದರೆ, ಸಂಕೇತಗಳ ವಿಶ್ಲೇಷಣೆ ಸಾಧ್ಯವಿಲ್ಲವೆಂದು ಭಾವಿಸಲಾಗಿತ್ತು. ಅಮೆರಿಕನ್ ಸಂಕೇತ ಭಾಷೆಯನ್ನು ಅಧ್ಯಯನ ಮಾಡಿದ ಸ್ಟೋಕೋ, ಭಾಷೆಯ ಉಪಘಟಕಗಳಂತೆಯೇ  ಅಮೆರಿಕನ್ ಸಂಕೇತ ಭಾಷೆಯನ್ನೂ ಸಹಾ ಉಪಘಟಕಗಳಾಗಿ ವಿಶ್ಲೇಷಿಸಬಹು ದೆಂದು ತಿಳಿಸಿದ್ದೇ ಅಲ್ಲದೆ ಪ್ರತಿಯೊಂದು ಸಂಕೇತವೂ ನಿರ್ದಿಷ್ಟ  ಆಕೃತಿಯನ್ನೂ ನಿರ್ದಿಷ್ಟವಾದ ಚಲನೆಯನ್ನೂ ಹೊಂದಿದ್ದು, ಸಂಕೇತ ಮಾಡುವವನ ದೇಹದ ಒಂದು ಗೊತ್ತಾದ ಸ್ಥಳದಲ್ಲೇ ರೂಪುಗೊಳ್ಳುತ್ತದೆ ಎಂದು ತಿಳಿಸಿದನು.

ಬಗೆಗಳು

ಈಗಾಗಲೇ ಸಂಕೇತ ಭಾಷೆಗಳು ಮೂರು ರೀತಿಯದೆಂದು ಹಿಂದೆ ತಿಳಿಸಲಾಗಿದೆ. ಅಂದರೆ, ಕಿವುಡರು ಮತ್ತು ಕಿವುಡರ ಜೊತೆ ಸಂವಹನಕ್ಕಾಗಿ ಸಾಮಾನ್ಯರು ಉಪಯೋಗಿಸುವ ಸಂಕೇತ ಭಾಷೆ; ಭಾಷೆ ತಿಳಿದಿದ್ದರೂ ಕೆಲವೊಂದು ಧಾರ್ಮಿಕ ಸಂಸ್ಥೆಗಳು ಶಿಸ್ತನ್ನು ಕಾಪಾಡುವ ಸಲುವಾಗಿ ಭಾಷಾ ಬಳಕೆಯನ್ನು ಕೆಲವು ಸಂದರ್ಭಗಳಲ್ಲಿ ನಿಷೇಧಿಸಿದ ಸಂದರ್ಭದಲ್ಲಿ ಬಳಸುವ ಸಂಕೇತ ಭಾಷೆ; ಹಲವಾರು ಭಾಷೆಗಳು ಅಥವಾ ಭಿನ್ನ ಭಾಷಾ ಸಂದರ್ಭದಲ್ಲಿ ಬಳಸುವ ಸಂಕೇತ ಭಾಷೆ. ಹೀಗೆ ಮೂರು ಗುಂಪುಗಳನ್ನು ಕಾಣುತ್ತೇವೆ.

ಇಷ್ಟೇ ಅಲ್ಲದೆ ಶ್ರವಣ ದೋಷವುಳ್ಳವರ ಶಿಕ್ಷಣದ ಸಲುವಾಗಿ ಅನೇಕ ರೀತಿಯ ಸಂಕೇತ ಭಾಷೆಗಳನ್ನು ಅಭಿವೃದ್ದಿಪಡಿಸಲಾಗಿದೆ. ಉದಾಹರಣೆಗೆ ಬೆರಳಕ್ಷರ, ಸಂಕೇತಾಂಗ್ಲ ಪೇಜೆಟ್-ಗಾರ್ಮನ್ ಸಂಕೇತ ವ್ಯವಸ್ಥೆ ಇತ್ಯಾದಿ. ಇವೆಲ್ಲದರ ಉದ್ದೇಶ ಸಂಕೇತ ವ್ಯವಸ್ಥೆಗಳನ್ನು ಆಂಗ್ಲ ಆಡು ಭಾಷೆಯ ಸಮೀಪಕ್ಕೆ ತರುವುದಾಗಿದೆ. ಇವುಗಳನ್ನು ಅಮೆರಿಕನ್ ಅಥವಾ ಬ್ರಿಟಿಷ್ ಸಂಕೇತ ಭಾಷೆಯ ಕೆಲ ಬದಲಾವಣೆಗಳೊಂದಿಗೆ ರೂಪಿಸಲಾಗಿದೆ. ಇದರ ಮೂಲ ಉದ್ದೇಶ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿದೆ. ಇವೆಲ್ಲವೂ ಹೆಚ್ಚಾಗಿ ಆಂಗ್ಲ ಭಾಷೆಯ ಪದಕ್ರಮವನ್ನು ಆಧಾರವಾಗಿ ಇಟ್ಟುಕೊಂಡಿದೆ.

ಅಮೆರಿಕನ್ ಸಂಕೇತ ಭಾಷೆ (ASL), ಬ್ರಿಟಿಷ್ ಸಂಕೇತ ಭಾಷೆ (BSL), ಚೈನೀಸ್ ಸಂಕೇತ ಭಾಷೆ (CSL), ಡೇನಿಶ್ ಸಂಕೇತ ಭಾಷೆ (DSL), ಇತ್ಯಾದಿಗಳು ಶ್ರವಣ ದೋಷವುಳ್ಳವರ ಬಳಕೆಗಾಗಿಯೇ ಹುಟ್ಟಿಕೊಂಡಂತಹವು.

ಅಮೆರಿಕಾದಲ್ಲಿ ASL ಅನ್ನು ಶ್ರವಣದೋಷವುಳ್ಳ ಸುಮಾರು ಅರ್ಧಕ್ಕಿಂತಲೂ ಹೆಚ್ಚು ಜನರು ಬಳಸುತ್ತಾರೆ. ಅಂದರೆ, ಇಂಗ್ಲಿಶ್, ಸ್ಪಾನಿಶ್, ಇಟಾಲಿಯನ್ ಭಾಷೆ ಬಿಟ್ಟರೆ ಇದೇ ನಾಲ್ಕನೆಯ ಅತಿದೊಡ್ಡ ಭಾಷಾ ವ್ಯವಸ್ಥೆಯಾಗಿದೆ ಎಂದು ಬೇರನ್ ಹೇಳುತ್ತಾರೆ. BSL ಬ್ರಿಟನ್ನಿನಲ್ಲಿ ಶ್ರವಣದೋಷವುಳ್ಳವರು ಉಪಯೋಗಿಸುವ ಸಂಕೇತ ಭಾಷೆ. ಇವೆಲ್ಲವೂ ಸಹ ಅಲ್ಪಸ್ವಲ್ಪ ಬದಲಾವಣೆ ಗಳನ್ನು ಹೊಂದಿರುತ್ತವೆ.

ಅಮೆರಿಕಾದ ಬಯಲು ಪ್ರದೇಶದಲ್ಲಿದ್ದ ಅಮೆರಿಕನ್ ಇಂಡಿಯನ್ಸ್ ಎನ್ನುವ ಜನಸಮುದಾಯ ಸಂವಹನಕ್ಕಾಗಿ ಬಳಸುವ ಸಂಕೇತ ಭಾಷಾ ವ್ಯವಸ್ಥೆಯನ್ನು ‘ಪ್ಲೈನ್ ಇಂಡಿಯನ್ಸ್ ಸಂಕೇತ ಭಾಷೆ’ (PSL) ಎಂದು ಕರೆಯಲಾಗಿದೆ. ಮುಖ್ಯವಾಗಿ ಬುಡಕಟ್ಟಿನ ಒಳಗೆ ಮತ್ತು ಬುಟಕಟ್ಟುಗಳ ನಡುವೆ ಉಪಯೋಗಿಸಲಾಗುತ್ತಿದ್ದ ಈ ವ್ಯವಸ್ಥೆಯ ಉಗಮಕ್ಕೆ ನಾಲ್ಕು ಕಾರಣಗಳಿವೆ ಎಂದು ಬೇರನ್ (1981) ಹೇಳುತ್ತಾರೆ.

ಒಂದು, ಬುಡಕಟ್ಟುಗಳ ನಡುವಿನ ಸಂವಹನ: ಒಂದೇ ಭಾಷೆಯನ್ನು ಮಾತನಾಡದ ಸಾಮಾನ್ಯ ಜನರು (ಶ್ರವಣದೋಷವಿಲ್ಲದವರು) ಉಪಯೋಗಿ ಸುವ ಈ ಸಂಕೇತ ಭಾಷೆಯ ಉಗಮಕ್ಕೆ ಕಾರಣ ಸಂವಹನಕ್ಕಾಗಿ ಒಂದು ಸಾಮಾನ್ಯ ಸಂಕೇತ ವ್ಯವಸ್ಥೆಯನ್ನು ಹೊಂದುವುದೇ ಆಗಿದೆ. ಅಂದರೆ, ಭಿನ್ನ ಭಾಷಾ ಸಂದರ್ಭದಲ್ಲಿ ಸಂವಹನಕ್ಕಾಗಿ ಒಂದು ಸಂಕೇತ ವ್ಯವಸ್ಥೆಯನ್ನು ಕಂಡುಕೊಳ್ಳುವುದು ಅನಿವಾರ್ಯವಾಯಿತು. ಇದನ್ನು  ಬಹುತೇಕ ವಿದ್ವಾಂಸರು ಒಪ್ಪುತ್ತಾರೆ. ಕಾರಣವೇನೆಂದರೆ, ಬಯಲು ಸೀಮೆಯಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚಾರ ಸುಲಭವಾಗಿದ್ದುದರಿಂದ ಸಂವಹನಕ್ಕಾಗಿ ಇಂತಹ ಒಂದು ವ್ಯವಸ್ಥೆ ರೂಪುಗೊಳ್ಳಲು ಸಹಾಯಕವಾಯಿತು. ಟೈಲರ್ (1976) ಎಂಬುವವರು, ಬುಡಕಟ್ಟು ಜನರ ನಡುವಿನ ವ್ಯಾಪಾರ-ವ್ಯವಹಾರ ಇಂತಹ ಒಂದು ವ್ಯವಸ್ಥೆ ಪ್ರಸಾರಗೊಳ್ಳಲು ಮುಖ್ಯ ಕಾರಣ ಎನ್ನುತ್ತಾರೆ.

ಎರಡನೆಯದು, ಸಂದರ್ಭ-ಸನ್ನಿವೇಶಗಳು: ಕೆಲವೊಂದು ಸಂದರ್ಭಗಳಲ್ಲಿ ಭಾಷೆಯ ಬಳಕೆ ಸಾಧ್ಯವಾಗದೇ ಹೋಗಬಹುದು. ಉದಾಹರಣೆಗೆ ಬೇಟೆಯ ಸಮಯದಲ್ಲಿ ಭಾಷೆ ಬಳಸಿದರೆ, ಪ್ರಾಣಿಗಳು ತಪ್ಪಿಸಿಕೊಳ್ಳಬಹುದು. ಹಾಗಾಗಿ ತಮ್ಮ ಸಹೋದ್ಯೋಗಿಗಳೊಡನೆ ಸಂವಹನಕ್ಕಾಗಿ ಸಂಕೇತವೇ ಯೋಗ್ಯವೆಂಬುದಾಗಿ ವೆಬ್ (1941) ಎನ್ನುವವರು ಹೇಳುತ್ತಾರೆ. ಅದೂ ಅಲ್ಲದೆ, ಬಯಲು ಪ್ರದೇಶದಲ್ಲಿ ಮಾತಿಗಿಂತ ದೃಷ್ಟಿ ಹೆಚ್ಚು ದೂರ ಹೋಗಬಲ್ಲುದಾದ್ದರಿಂದ ಇದು ಅನುಕೂಲಕರವಾಗಿ ಪರಿಣಮಿಸಿರಬೇಕು.

ಮೂರನೆಯದು, ಶ್ರವಣ ದೋಷವುಳ್ಳವರು ಬಳಸುತ್ತಿದ್ದ ಸಂಕೇತ ಭಾಷಾ ವ್ಯವಸ್ಥೆಯೂ ಕಾರಣವಿರಬಹುದೆಂದು ಅಭಿಪ್ರಾಯಪಡಲಾಗಿದೆ.

ನಾಲ್ಕನೆಯದು, ಧರ್ಮಾಚರಣೆಯ ಸಂದರ್ಭದಲ್ಲಿ ಮಾತಿಗೆ ಅವಕಾಶ ವಿಲ್ಲದಾಗ ಸಂಕೇತದ ಮೂಲಕ ಮಾತ್ರ ಸಂವಹನ ಮಾಡುತ್ತಿದ್ದುದೂ ಸಹಾ PSLನ ಹುಟ್ಟುವಿಕೆಗೆ ಕಾರಣವಿರಬಹುದು ಎನ್ನುತ್ತಾರೆ.

ಸಿಸ್ಟೆರ್ಶನ್ ಸಂಕೇತ ಭಾಷೆ ಎಂಬುದು ಭಾಷೆ ತಿಳಿದಿರುವ ಸಾಮಾನ್ಯ ಜನರು ಬಳಸುವ ಭಾಷಾವ್ಯವಸ್ಥೆ. ಇದು ಧಾರ್ಮಿಕ ಸಂಸ್ಥೆಗಳಲ್ಲಿ, ಮಠಗಳಲ್ಲಿ ಕಂಡು ಬರುವಂತಹದು. ಅಂದರೆ ಕ್ರಿಶ್ಚಿಯನ್ ಧರ್ಮ ಸಭೆಗಳು ತಮ್ಮ ಅನುಯಾಯಿಗಳಲ್ಲಿ ಮೌನಾಚರಣೆಗೆ ಹೆಚ್ಚು ಮಹತ್ವವನ್ನು ನೀಡಿದ್ದವು. ಅಲ್ಲದೆ ಒಂದು ವೇಳೆ ಸಂವಹನ ನಡೆಸಬೇಕಾದರೆ ಸಂಕೇತಗಳ ಮೂಲಕ ನಡೆಸಲು ಅವಕಾಶವಿತ್ತು. ಇಂತಹ ಮಠಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಈ ಸಂಕೇತಗಳ ಪ್ರಸಾರವೂ ಅಧಿಕವಾಯಿತು. ಪ್ರತಿಯೊಂದು ಮಠವೂ ತನ್ನದೇ ಆದ ಸಂಕೇತ ವ್ಯವಸ್ಥೆಯನ್ನು ಹೊಂದಿತ್ತು ಎಂಬುದಾಗಿ ತಿಳಿದುಬರುತ್ತದೆ.

ಹೊಸದಾಗಿ ಅಭಿವೃದ್ದಿಪಡಿಸಿದ ಸಂಕೇತ ವ್ಯವಸ್ಥೆಗಳಲ್ಲಿ ಪೇಜೆಟ್ ಗಾರ್ಮನ್ ಸಂಕೇತ ವ್ಯವಸ್ಥೆ ಎಂಬುದೂ ಒಂದು. ರಿಚರ್ಡ್ ಪೇಜೆಟ್ ಎಂಬುವವರು 1951 ರಲ್ಲಿ ನಿರ್ಮಿಸಿದ “ಎ ಸಿಸ್ಟಮ್ ಆಫ್ ಸೈನ್ ಲ್ಯಾಂಗ್ವೆಜ್” ಎಂಬ ವ್ಯವಸ್ಥೆಯ ಆಧಾರದ ಮೇಲೆ ಗ್ರೇಸ್ ಪೇಜೆಟ್ ಮತ್ತು ಪಿರ‌್ರೆ ಗಾರ್ಮನ್ ಎಂಬುವವರು ಅಭಿವೃದ್ದಿ ಪಡಿಸಿದ ಈ ವ್ಯವಸ್ಥೆಯಲ್ಲಿ ಸುಮಾರು 3000 ಸಂಕೇತಗಳಿವೆ. ಇವನ್ನು ಆಂಗ್ಲ ಭಾಷೆಯ ಪದಕ್ರಮಕ್ಕೆ ಅನುಗುಣವಾಗಿ ಬಳಸಲಾಗುತ್ತದೆ. ಅವುಗಳಲ್ಲಿ ಆರು ಮೂಲ ಸಂಕೇತಗಳನ್ನು ಬಳಸಲಾಗಿದ್ದು ಅವುಗಳು ಕ್ರಿಯೆ, ಪ್ರಾಣಿ, ಬಣ್ಣ, ವಸ್ತುಗಳು, ಮನಸ್ಸಿಗೆ ಸಂಬಂಧಿಸಿದಂತೆ, ಯೋಚನೆ-ಚಿಂತನೆ ಮತ್ತು ಪಾತ್ರೆ-ಪೆಟ್ಟಿಗೆ ಇತ್ಯಾದಿಗಳನ್ನು ತೋರಿಸುವ ಸಂಕೇತಗಳು. ಬಣ್ಣಗಳನ್ನು ಸೂಚಿಸಲು ಮೂಲ ಸಂಕೇತಗಳ ಜೊತೆಗೆ ಇನ್ನೊಂದು ಸಂಕೇತವನ್ನು ಬಳಸಲಾಗುವುದು. ಒಂದು ಕೈ ಬಣ್ಣ ಎಂಬ ಮೂಲ ಸಂಕೇತವನ್ನು ಸೂಚಿಸಿದರೆ, ಇನ್ನೊಂದು ಕೈ ನಿರ್ದಿಷ್ಟ ಬಣ್ಣವನ್ನು ಸಂಕೇತಿಸುತ್ತದೆ.

ಬೆರಳಕ್ಷರ ಎಂಬುದು ವರ್ಣಮಾಲೆಯ ಅಕ್ಷರಗಳಿಗೆ ಒಂದೊಂದು ಸಂಕೇತಗಳನ್ನು ನೀಡಲಾಗಿರುವ ವ್ಯವಸ್ಥೆ. ಆಂಗ್ಲ ವರ್ಣಮಾಲೆಯ ಪ್ರತಿಯೊಂದು ಅಕ್ಷರವೂ ಒಂದೊಂದು ಧ್ವನಿಗೆ ಸಂಕೇತವಾಗಿರುವಂತೆ ಇವುಗಳೂ ಸಹಾ ಒಂದೊಂದು ಅಕ್ಷರವನ್ನು ಸಂಕೇತಿಸುತ್ತದೆ. ಬ್ರಿಟನ್ನಿನಲ್ಲಿ ಎರಡು ಕೈಗಳನ್ನು ಬಳಸಿದರೆ, ಅಮೆರಿಕದವರು ಒಂದು ಕೈ ಮಾತ್ರ ಬಳಸಿ ಇದನ್ನು ರಚಿಸುತ್ತಾರೆ. ಎರಡು ದೇಶಗಳಲ್ಲಿ ಉಪಯೋಗಿಸುವ ಸಂಕೇತಗಳ ಆಕೃತಿಯೂ ಸಹ ಭಿನ್ನವಾಗಿಯೇ ಇದೆ. ಇದನ್ನು ಕಲಿಯುವುದು ಸುಲಭವೆಂದೂ ನಿಮಿಷಕ್ಕೆ ಸುಮಾರು 60 ಪದಗಳನ್ನು ಇದರಲ್ಲಿ ರಚಿಸಬಹುದು ಎಂದೂ ಹೇಳಲಾಗಿದೆ. ಆದರೆ ದೂರದಲ್ಲಿದ್ದಾಗ ಈ ಸಂಕೇತಗಳನ್ನು ಗ್ರಹಿಸುವುದು ಕಷ್ಟವಾಗುತ್ತದೆ.

ಸಂಕೇತಗಳ ರಚನೆ

ಸಂಕೇತ ಭಾಷೆಯ ರಚನೆಯನ್ನು ಕುರಿತಂತೆ ಹೇಳುವುದಾದರೆ ಕೈಗಳನ್ನು ಬಳಸಿ ಅನೇಕ ಆಕೃತಿಗಳನ್ನು ರಚಿಸುವುದರ ಮೂಲಕ ಸಂಕೇತ ಭಾಷೆಯಲ್ಲಿ ಸಂವಹನ ನಡೆಯುತ್ತದೆ. ಸಾಮಾನ್ಯವಾಗಿ ತಲೆಯಿಂದ ಎದೆಯವರೆಗಿನ ಭಾಗವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸಂಕೇತಗಳನ್ನು ರಚಿಸುವಾಗ ಒಂದು ಗೊತ್ತಾದ ಜಾಗದಲ್ಲಿ ರಚಿಸಲಾಗುತ್ತದೆ. ಮತ್ತು ಕೈ ಒಂದು ಗೊತ್ತಾದ ಆಕೃತಿಯನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಕೈಗಳಿಗೆ ಒಂದು ಗೊತ್ತಾದ ರೀತಿಯ ಚಲನೆಯಿರುತ್ತದೆ. ಇವುಗಳನ್ನು ಕ್ರಮವಾಗಿ ಟ್ಯಾಬ್, ಡೆಜ್ ಮತ್ತು ಸಿಗ್ ಎಂದು ಕರೆಯಲಾಗಿದೆ. ಸಂಕೇತವನ್ನು ಮಾಡುವ ಜಾಗ ಟ್ಯಾಬ್ ಅದು ಕತ್ತು, ಕೈಗಳು, ಮೊಣಕೈ, ಮುಂಗೈ, ಮಣಿಕಟ್ಟು ಸೊಂಟದವರೆಗಿನ ಪ್ರದೇಶ ವಾಗಿರಬಹುದು. ಡೆಜ್ ಎನ್ನುವುದು ಸಂಕೇತಿಸುವಾಗ ಇರುವ ಕೈ ಆಕೃತಿ. ಹರಡಿದ ಕೈಬೆರಳು ತೋರುಬೆರಳು ಮುಂದೆ ಚಾಚಿರುವ ಮುಷ್ಟಿ, ‘V’ ಆಕೃತಿಯ ಬೆರಳು ಇತ್ಯಾದಿ. ಸಂಕೇತವನ್ನುಂಟು ಮಾಡುವಾಗ ಮಾಡುವ ಕೈಗಳ ಚಲನೆಯನ್ನು ಸಿಗ್ (ಸಿಗೇಶನ್) ಎಂದು ಕರೆಯಲಾಗಿದೆ. ಕೈಗಳನ್ನು ಮೇಲಕ್ಕೆ, ಕೆಳಕ್ಕೆ ಚಲಿಸುವುದು, ಹಸ್ತದ ಸುತ್ತುವಿಕೆ ವೃತ್ತಾಕಾರದ ಚಲನೆ ಇತ್ಯಾದಿ. ಎರಡೂ ಕೈಗಳನ್ನು ಬಳಸಿದಾಗ ಬಲಗೈ ಡೆಜ್ ಆಗಿಯೂ ಎಡಗೈ ಟ್ಯಾಬ್ ಆಗಿಯೂ ಇರುತ್ತದೆ. ಕೆಲವು ಸಾರಿ ಎಡಗೈಯನ್ನು ಪ್ರಧಾನವಾಗಿ ಬಳಸುವವರಲ್ಲಿ ಎಡಗೈಯನ್ನು ಡೆಜ್‌ಗಾಗಿ ಬಳಸುತ್ತಾರೆ. ಬಲಗೈ ಟ್ಯಾಬ್ ಸೂಚಿಸುತ್ತದೆ. ಈ ಮೂರೂ ಚೆರೀಮ್‌ಗಳ, ಟ್ಯಾಬ್, ಡೆಜ್ ಮತ್ತು ಸಿಗ್, ಒಂದುಗೂಡುವಿಕೆ ಯಿಂದ ಸಂಕೇತಗಳು ನಿರ್ಮಾಣವಾಗುತ್ತವೆ. ಟ್ಯಾಬ್, ಡೆಜ್, ಸಿಗ್‌ಗಳನ್ನು ಬರೆಹದಲ್ಲಿ ….. ಸೂಚಿಸಲು ಸಂಕೇತಗಳನ್ನು ಬಳಸಲಾಗುತ್ತದೆ. TT ಕತ್ತು, [ ] ಮುಂಡ ಇತ್ಯಾದಿಗಳು ಟ್ಯಾಬ್ ಸೂಚಿಸಿದರೆ, OVOK ಇತ್ಯಾದಿಗಳು ಡೆಜ್ ಸೂಚಿಸುತ್ತವೆ. ^ V .. # ಇತ್ಯಾದಿಗಳು ಸಿಗ್‌ಗಳನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಎರಡು ಸಿಗ್‌ಗಳು ಸಮಾನಾಂತರವಾಗಿ ಬರೆದಿದ್ದರೆ, ಅವುಗಳನ್ನು ಒಂದರ ನಂತರ ಇನ್ನೊಂದು ಲಂಬವಾಗಿದ್ದರೆ ಅವೆರಡೂ ಒಟ್ಟಿಗೇ ಬರುವುದೆಂದೂ ತಿಳಿಯಬೇಕು.

ಈಗಾಗಲೇ ಸೂಚಿಸಿದಂತೆ, ಸಂಕೇತಗಳನ್ನು ಸೊಂಟದ ಭಾಗದಿಂದ ತಲೆಯವರೆಗಿನ ಜಾಗದಲ್ಲಿ ಮತ್ತು ಶರೀರದಿಂದ ಒಂದು ಅಡಿ ಮುಂದಕ್ಕೆ ಮಾತ್ರ ಬಳಸಿ ಸೂಚಿಸಲಾಗುತ್ತದೆ. ಇಷ್ಟು ಜಾಗದಲ್ಲೆ ಅತಿ ಹೆಚ್ಚಿನ ಸಂಕೇತಗಳನ್ನು ಮಾಡಲು ಸಾಧ್ಯವಿದೆ.

ಕಿವಿಯ ಸಮೀಪದಿಂದ ಕೆನ್ನೆ ಮತ್ತು ಗಲ್ಲದವರೆಗಿನ ಪ್ರದೇಶ ಕಾಲ ಸಂಬಂಧಿ ಸಂಕೇತಗಳನ್ನು ಸೂಚಿಸಲು ಬಳಕೆಯಾಗುತ್ತವೆ. ಕಿವಿಯ ಸಮೀಪದಿಂದ ಹಿಂದಿನ ಪ್ರದೇಶ ಭೂತಕಾಲವನ್ನೂ, ಕಿವಿಯ ಸಮೀಪದಿಂದ ಮುಂದಿನ ಪ್ರದೇಶ ವರ್ತಮಾನ ಕಾಲವನ್ನೂ, ಇನ್ನೂ ಮುಂದಿನ ಪ್ರದೇಶ ಭವಿಷ್ಯತ್ ಕಾಲವನ್ನೂ ಸೂಚಿಸುತ್ತದೆ. ಇವು ಕಾಲವನ್ನಷ್ಟೇ ಅಲ್ಲದೆ ಕ್ರಿಯಾ ವಿಶೇಷಣಗಳನ್ನು ಸೂಚಿಸಲು, ಈಗ, ನಂತರ ಮುಂದಿನ ಇತ್ಯಾದಿ, ಬಳಕೆಯಾಗುತ್ತವೆ.

ಸರ್ವನಾಮಗಳನ್ನು, ಮುಂದಿನ, ಅಕ್ಕಪಕ್ಕದ ಸ್ಥಳಗಳನ್ನು ತೋರಿಸುವುದರ ಮೂಲಕ ಸೂಚಿಸಲಾಗುವುದು. ಮಧ್ಯಮ ಪುರುಷ (ನೀನು, ನೀವು) ಸರ್ವನಾಮವನ್ನು ಎದೆಯ ಮಟ್ಟದಲ್ಲಿ ಮುಂದಿನ ಸ್ಥಳ, ಪ್ರಥಮ ಪುರುಷಕ್ಕೆ (ಅದು, ಇದು, ಅವರು, ಇವರು ಇತ್ಯಾದಿ) ಒಂದು ಬಲಗಡೆಗೆ, ಇನ್ನೊಂದು ಎಡಗಡೆ. ಸಾಮಾನ್ಯವಾಗಿ ಒಮ್ಮೆ ಉಪಯೋಗಿಸಿದ ಸ್ಥಳವನ್ನು ಕೊನೆಯ ವರೆಗೂ ಯಾರನ್ನು ಸೂಚಿಸಲು ಉಪಯೋಗಿಸಲಾಗಿತ್ತೋ ಅದನ್ನು ಸೂಚಿಸಲು ಉಳಿಸಿಕೊಳ್ಳಲಾಗುವುದು.

ಪ್ರಶ್ನೆಗಳಿಗೆ ಸಂಕೇತವನ್ನು ಉಪಯೋಗಿಸುವಾಗ, ಸಂಕೇತಗಳ ಜೊತೆಗೆ ಹುಬ್ಬೇರಿಸುವುದು ಅಥವಾ ತಲೆಯನ್ನು ಹಿಂದಕ್ಕೆ ಒದರುವುದು ಇತ್ಯಾದಿಗಳನ್ನು ಉಪಯೋಗಿಸಲಾಗುವುದು.

ಬಹುವಚನವನ್ನು ಸಂಕೇತಿಸಲು, ಒಂದೇ ರೀತಿಯ ಚಲನೆಯನ್ನು ಪುನರಾವರ್ತಿಸುವುದು ಒಂದೇ ಆಕೃತಿಯನ್ನು ಎರಡು ಕೈಯಿಂದಲೂ ಮಾಡುವುದೂ ಉಂಟು. ಕೆಲವೊಂದು ಸಂಕೇತಗಳನ್ನು ಮೇಲಿನ ಎರಡು ರೀತಿಯಿಂದಲೂ ಮಾಡಲು ಸಾಧ್ಯವಿಲ್ಲ. ಅಂತಹ ಸನ್ನಿವೇಶಗಳಲ್ಲಿ ಸಂಖ್ಯೆಗಳನ್ನು ಬಳಸಿ ಮಾಡಿ ತೋರಿಸಲಾಗುವುದು. ಪುನರಾವರ್ತನೆ ಒತ್ತು ನೀಡುವುದಕ್ಕೂ ಆಗಬಹುದು.

ಸಂಖ್ಯಾವಾಚಕಗಳಿಗೆ, ವರ್ಷ, ತಿಂಗಳು, ವಾರ, ದಿನಗಳ ಹಿಂದೆ ಮುಂದೆ ಇತ್ಯಾದಿ ಹೇಳುವಾಗ ಸಂಖ್ಯೆಗಳನ್ನು ಮೊದಲು ಸೂಚಿಸಿ ಅನಂತರ ಸಂಬಂಧಿಸಿದ ಸಂಕೇತಗಳನ್ನು ಬಳಸಿ ಹಿಂದೆ ಮುಂದೆ ಎಂದು ಸೂಚಿಸಲಾಗುವುದು.

ಭಿನ್ನತೆ

ವಿವಿಧ ಸಂಕೇತ ಭಾಷೆಗಳನ್ನು ಪರಿಶೀಲಿಸಿದಾಗ ಪರಸ್ಪರ ರಚನಾತ್ಮಕ ಭಿನ್ನತೆ ಗೋಚರವಾಗುತ್ತದೆ. ಅಮೆರಿಕನ್ ಮತ್ತು ಚೈನೀಸ್ ಸಂಕೇತ ಭಾಷೆಗಳಲ್ಲಿ ಕೈ ಆಕೃತಿ ಮತ್ತು ಚಲನೆಯಲ್ಲಿ ಭಿನ್ನತೆ ಗೋಚರಿಸುತ್ತದೆ. ಕೈ ಆಕೃತಿ ಒಂದೇ ಇದ್ದರೂ ಎರಡರಲ್ಲೂ ಅರ್ಥ ಮಾತ್ರ ಬೇರೆಯಾಗಿರುತ್ತದೆ. ಚೈನೀಸ್ ಸಂಕೇತ ಭಾಷೆಯಲ್ಲಿನ ತಂದೆ ಅಮೆರಿಕನ್ ಸಂಕೇತ ಭಾಷೆಯಲ್ಲಿ ‘ಗುಟ್ಟು’ ಎಂದಾಗುತ್ತದೆ. ಚೈನೀಸ್‌ನಲ್ಲಿ ‘ಸಹಾಯ’ ಎಂಬುದು ಅಮೆರಿಕನ್ ನಲ್ಲಿ ‘ತಳ್ಳು’ ಎನ್ನಲು ಸಂಕೇತವಾಗಿದೆ.

ಹೊಸ ಸಂಕೇತಗಳ ಸೇರ್ಪಡೆ

ಸ್ವಾಭಾವಿಕವಾದ ಮಾನವನ ಭಾವಾಭಿನಯದಿಂದ ಸಂಕೇತ ಭಾಷೆ ಬೆಳೆಯುತ್ತದೆ. ನಟನೆ ಭಾವಾಭಿನಯದಿಂದ ಹುಟ್ಟುವ ಹೊಸ  ಸಂಕೇತಗಳನ್ನೂ ಸಹಾ ಸಂಕೇತ ಭಾಷೆಯ ಒಳಗೆ ಸೇರಿಸಿಕೊಳ್ಳುವುದುಂಟು. ಆದರೆ ಇದನ್ನು ಆಯಾ ಸಂಕೇತ ಭಾಷೆಯ ರಚನಾ ನಿಯಮದ ಅನ್ವಯ ಅಳವಡಿಸಿ ಕೊಳ್ಳಲಾಗುವುದು; ಒಗ್ಗುವಂತೆ ರೂಪಿಸಿಕೊಳ್ಳಲಾಗುವುದು. ಇದನ್ನು ಭಾಷೆಯ ಬೆಳವಣಿಗೆಗೆ ಇತರ ಭಾಷೆಗಳಿಂದ ಬರುವ ಎರವಲು ಪದಗಳಿಗೆ ಹೋಲಿಸ ಬಹುದು. ಭಾಷೆ ಹೇಗೆ ಬೆಳೆಯುವುದೋ ಹಾಗೆಯೇ ಸಂಕೇತ ಭಾಷೆಯೂ ಬೆಳಯುತ್ತದೆ. ಎರವಲು ಪಡೆದ ಪದವನ್ನು ಪಡೆದುಕೊಳ್ಳುವ ಭಾಷೆ ಯಾವ ರೀತಿ ತನ್ನ ಭಾಷಾ ಚೌಕಟ್ಟಿಗೆ ಹೊಂದಿಕೊಳ್ಳುವುದೋ ಅದೇ ರೀತಿಯಲ್ಲಿ ಸಂಕೇತ ಭಾಷೆಯ ರಚನೆಗೆ ತಕ್ಕಂತೆ ಹೊಂದಿಸಿಕೊಳ್ಳಲಾಗುವುದು.

ಸಿರಿಭೂವಲಯ: ಒಂದು ಅಂಕಾಕ್ಷರ ಗ್ರಂಥ

ಯಾವುದಾದರೂ ಒಂದು ಮಾಹಿತಿಯನ್ನು ದಾಖಲಿಸುವಾಗ ಯಾವುದಾದ ರೊಂದು ಭಾಷೆಯನ್ನು ಬಳಸಲಾಗುತ್ತದೆ. ಆಯಾ ಭಾಷೆಯ ಅಕ್ಷರ, ಪದ, ವಾಕ್ಯಗಳ ರೂಪದಲ್ಲಿ ಮಾಹಿತಿಯನ್ನು ದಾಖಲಿಸಿರುವುದು ನಡೆದುಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಅಂಕಿಗಳ ರೂಪದಲ್ಲಿರುವ ಗ್ರಂಥ ವೊಂದಿದೆ ಎಂದರೆ ಆಶ್ಚರ್ಯವಾಗಬಹುದು. ಆ ಗ್ರಂಥವೇ ‘ಸಿರಿಭೂವಲಯ’ ಎಂಬ ಗ್ರಂಥ. ಸುಮಾರು ಕ್ರಿ.ಶ. 783ರ ಸುಮಾರಿನಲ್ಲಿದ್ದ ಜೈನಮುನಿ ಶ್ರೀ ಕುಮುದೇಂದು ವಿನಿಂದ ಈ ಕೃತಿ ರಚಿತವಾಯಿತೆಂದು ಹೇಳಲಾಗಿದೆ. ಸಾಮಾನ್ಯವಾಗಿ ಕಾಣುವ ಅಕ್ಷರಗಳನ್ನು ಬಳಸದೆ ಅಂಕಲಿಪಿಯನ್ನು ಅಂದರೆ, ಅಂಕಿಗಳನ್ನು ಮಾತ್ರ ಬಳಸಿ ರಚಿಸಿದ ಮಹಾನ್ ಗ್ರಂಥ. ಮೊದಲು ಅಕ್ಷರಗಳಲ್ಲಿ ಸಾಹಿತ್ಯವನ್ನು ಸೃಷ್ಟಿಸಿ ಆ ನಂತರ ಗಣಿತಶಾಸ್ತ್ರದ ವಿವಿಧ ಗತಿಯ ಸಂಯೋಗಗಳ ಆಧಾರದ ಮೇಲೆ ಅಂಕಿಗಳಿಗೆ ಪರಿವರ್ತಿಸಿರಬಹುದು. ಇದು 64 ಅಕ್ಷರಗಳ 9 ಅಂಕಿಗಳ ಒಡನಾಟವಿರುವ ತನ್ನೊಳಗೆ ಅನೇಕ ವಿಷಯಗಳನ್ನು ಒಳಗೊಂಡಿರುವ ಅನರ್ಘ್ಯ ಕೃತಿಯೆಂದು ಹೇಳಲಾಗಿದೆ.

ಸುಮಾರು ಕ್ರಿ.ಶ. 783ರ ಸುಮಾರಿನಲ್ಲಿದ್ದನೆಂದು ಹೇಳಲಾದ ಕುಮು ದೇಂದುವು ಈ ಭೂವಲಯವನ್ನು ಆ ಕಾಲದಲ್ಲಿದ್ದ ರಾಷ್ಟ್ರಕೂಟ ರಾಜ ಅಮೋಘವರ್ಷನಿಗೆ ಹೇಳಿದನೆಂದು ಹೇಳುತ್ತಾನೆ. ಇದರ ರಚನೆಗೆ ಸಂಬಂಧಿಸಿದಂತೆ ಇರುವ ಕತೆ ಹೀಗಿದೆ. ಆದಿ ತೀರ್ಥಂಕರನಾದ ವೃಷಭದೇವನು ತಾನು ಮೋಕ್ಷಕ್ಕೆ ಹೋಗುವ ಮೊದಲು ಸಕಲ ಸಾಮ್ರಾಜ್ಯವನ್ನು ತನ್ನ ಇಬ್ಬರು ಗಂಡುಮಕ್ಕಳಿಗೆ ಇತ್ತು ತನ್ನ ಹೆಣ್ಣುಮಕ್ಕಳಾದ ಬ್ರಾಹ್ಮಿ ಹಾಗೂ ಸೌಂದರಿಗೆ ಶಾಶ್ವತವಾದ ಬಳುವಳಿಯನ್ನು ನೀಡುತ್ತಾನೆ. ಅಂದರಂತೆ ಬ್ರಾಹ್ಮೀ ದೇವಿಯನ್ನು ಎಡತೊಡೆಯ ಮೇಲೆ ಕೂರಿಸಿಕೊಂಡು ಅವಳ ಎಡಗೈ ಅಂಗಳದಲ್ಲಿ ತನ್ನ ಬಲಗೈ ಹೆಬ್ಬೆಟ್ಟಿನಿಂದ ಸಮಸ್ತ ಭಾಷೆಗಳಿಗೂ ಸಾಕಾಗುವಂತೆ ಹ್ರಸ್ವ, ದೀರ್ಘ, ಪ್ಲುತಗಳೆಂಬ ಇಪ್ಪತ್ತೇಳು ಸ್ವರಗಳನ್ನು, ಇಪ್ಪತ್ತೆಂಟು ವರ್ಗೀಯ ಎಂಟು ಅವರ್ಗೀಯ ವ್ಯಂಜನಗಳನ್ನು, ನಾಲ್ಕು ಯೋಗವಾಹಗಳನ್ನೂ ಕೂಡಿಸಿ ಒಟ್ಟು 64 ಅಕ್ಷರಗಳ ಮಾಲೆಯನ್ನು ಸೃಷ್ಟಿಸಿ ಅದನ್ನು ಅವಳ ಹೆಸರಿನಲ್ಲಿ ಶಾಶ್ವತಗೊಳಿಸಿದನು.

ಮತ್ತೊಬ್ಬಳಾದ ಸೌಂದರಿಯನ್ನು ಬಲತೊಡೆಯ ಮೇಲೆ ಕೂರಿಸಿಕೊಂಡು ಅವಳ ಬಲಗೈ ಅಂಗಳದಲ್ಲಿ ತನ್ನ ಎಡಗೈ ಹೆಬ್ಬೆಟ್ಟಿನಿಂದು ಒಂದು ಬಿಂದುವನ್ನು (0) ಬರೆದು ಅದನ್ನು ಕತ್ತರಿಸಿ ಅದರಿಂದ 1 ರಿಂದ 9 ಅಂಕಿಗಳನ್ನು ಗುರುತಿಸಿ ಈ ಅಂಕಗಳನ್ನು ವರ್ಗಪದ್ಧತಿಯಂತೆ ಸೇರಿಸುತ್ತಾ ವಿಶ್ವದ ಸಕಲ ಅಣುಪರಮಾಣುಗಳ ಎಣಿಕೆ ಸಾಧ್ಯವೆಂದು ಹೇಳಿದನಂತೆ. ಈ ಗಣಿತದ ಭಾಷೆಗೆ ವಿಶ್ವದ 718 ಭಾಷೆಗಳನ್ನು, ಹಿಡಿದಿಟ್ಟುಕೊಳ್ಳುವ ಶಕ್ತಿಯುಂಟೆಂದು ಹೇಳುತ್ತ ತನ್ನ ಈ ಭೂವಲಯ ಕಾವ್ಯದಲ್ಲಿ ಸಂಸ್ಕೃತ, ಪ್ರಾಕೃತ, ಕನ್ನಡವೆಂಬ ಮೂರೂ ಬೆಸೆದ ಸರಪಣಿಯಿಂದ ಉಳಿದ ಭಾಷೆಗಳನ್ನು ಕಟ್ಟಿಡಬಹುದೆಂದು ತಿಳಿಸುತ್ತಾನೆ. ವಿಶ್ವದ ಎಲ್ಲ ಭಾಷೆಗಳ ಉಚ್ಚಾರಣಾ ಧ್ವನಿಗಳೂ ಕನ್ನಡದ 64 ಅಕ್ಷರಗಳಲ್ಲೇ ಅಡಗಿದ್ದು ಅವುಗಳನ್ನು ಅಂಕ ಸಂಕೇತಕ್ಕೆ ಪರಿವರ್ತಿಸಿ ಚಕ್ರಬಂಧಗಳಲ್ಲಿರಿಸಲಾಗಿದೆ. ಸುಮಾರು 1270 ಚಕ್ರಬಂಧಗಳಿರುವ ಈ ಅಂಕಗಳ ಅಕ್ಷರಗಳನ್ನು ನಾನಾ ಬಂಧಗಳಲ್ಲಿ ಓದಿದರೆ ಕನ್ನಡದ ಪದ್ಯಕಾವ್ಯ ಸಿಕ್ಕರೆ, ಈ ಸಾಲುಗಳ ಮೊದಲ ಅಕ್ಷರಗಳು ಕಂಬ ಸಾಲಿನಲ್ಲಿ ಪ್ರಾಕೃತವನ್ನೂ 27ನೇ ಸ್ಥಾನಗಳು ಸಂಸ್ಕೃತ ಶ್ಲೋಕವನ್ನು ಹೇಳುತ್ತವೆ. ಒಂದನೇ ಅಧ್ಯಾಯದ ಕೊನೆಯಲ್ಲಿ ಇರುವ ಪದ್ಯದ ಒಂದನೇ ಕಂಬ ಸಾಲಿನ ಅಕ್ಷರಗಳು ಮೇಲಿಂದ ಕೆಳಕ್ಕೆ ಹೋದಂತೆ ಪ್ರಾಕೃತವನ್ನೂ ಒಂಬತ್ತನೇ ಸಾಲಿನಲ್ಲಿ ಸಂಸ್ಕೃತವನ್ನು 27ನೇ ಸಾಲಿನಲ್ಲಿ ತೆಲುಗನ್ನು ಕೊನೆಯ ಸಾಲಿನಲ್ಲಿ ತಮಿಳನ್ನು ಹೊಂದಿವೆ. ಹೀಗೆ ವಿವಿಧ ಬಂಧಗಳಲ್ಲಿರುವ ಇವುಗಳಿಂದ ವಿಶ್ವದ 718 ಭಾಷೆಗಳನ್ನು 363 ಮತಗಳ ಅನ್ವಯ ಮತ್ತು ವಿಚಾರಗಳನ್ನು, ವೈದ್ಯ ವಿಜ್ಞಾನದ ವಿಷಯಗಳನ್ನು ತಿಳಿಯಬಹುದೆಂದು ಹೇಳಲಾಗಿದೆ.

‘ಸಿರಿಭೂವಲಯ’ದ ಬಗ್ಗೆ ಅಧ್ಯಯನಗಳು ನಡೆದ ಹಾಗಿಲ್ಲ. ಅಧ್ಯಯನ ಗಳು ನಡೆದರೆ ಹೆಚ್ಚಿನ ವಿವರಗಳು ಲಭ್ಯವಾಗಬಹುದು. ಅಲ್ಲದೆ ಇದೊಂದು ಜಗತ್ತಿನ ವಿಸ್ಮಯಗಳಲ್ಲಿ ಒಂದೆಂಬುದು ಮತ್ತೂ ಸ್ಪಷ್ಟವಾಗುತ್ತದೆ.