ಈ ಲೇಖನದಲ್ಲಿ ಎಲ್ಲಾ ಜೀವಿಗಳಿಗೂ ಅನ್ವಯವಾಗುವ ಸಂಕೇತ, ಮಾಹಿತಿ ಮತ್ತು ಸಂದೇಶಗಳ ಬಗ್ಗೆ ತಿಳಿಯೋಣ. ಸಂಕೇತದಿಂದ ಜೀವಿಗಳು ಪರಿಸರದಲ್ಲಿ ಆಗುವ ಘಟನೆಗಳನ್ನು ಗುರುತಿಸಿ ತಮ್ಮ ಉಳಿವನ್ನು ಕಂಡುಕೊಳ್ಳುತ್ತವೆ. ಉದಾಹರಣೆಗೆ: ಶಬ್ದ ಮತ್ತು ವಾಸನಾ ಶಕ್ತಿ ಕೆಲವು ಪ್ರಾಣಿಗಳಿಗೆ ಆಹಾರದ ಸಂಕೇತ; ನಾಯಿ ವಾಸನೆ ಗ್ರಹಣ ಶಕ್ತಿಗೆ, ಹದ್ದು ಕಣ್ಣು ದೃಷ್ಟಿಗೆ ಹೆಸರುವಾಸಿಯಾದದ್ದು. ಹೀಗೆ ಪ್ರಾಣಿಗಳು ವಿವಿಧ ರೀತಿಯ ಸಂಕೇತಗಳನ್ನು ಗುರುತಿಸಲು ಶಕ್ತಿ ಹೊಂದಿರುತ್ತವೆ. ಮೂಲತಃ ಸಂಕೇತ, ಅದು ನೀಡುವ ಮಾಹಿತಿ ಮತ್ತು ಸಂದೇಶದ ನೆರವಿನಿಂದ ಜೀವಿಗಳು ತಮ್ಮ ಉಳಿವನ್ನು ಕಂಡುಕೊಳ್ಳುತ್ತವೆ.

ಸಂದೇಶ ವಿನಿಮಯ ನಮ್ಮಲ್ಲಿ ಪಂಚೇಂದ್ರಿಯಗಳಿಂದ ಸಾಧ್ಯವಾಗಿದೆ. ಮುಖ್ಯವಾಗಿ ಮನುಷ್ಯರಲ್ಲಿ ದೃಷ್ಟಿ ಮತ್ತು ಶಬ್ದ ಗ್ರಹಣದ ಮೂಲಕ ಸಂದೇಶ ವಿನಿಮಯ ಆಗುತ್ತದೆ. ಹಾಗಾಗಿ ದ್ವನಿ ಮತ್ತು ದೃಶ್ಯ ಮಾಧ್ಯಮದ ಮೂಲಕ ಮಾಹಿತಿ ಸಂವಹನಕ್ಕೆ ರೇಡಿಯೋ, ದೂರದರ್ಶನದ ಮುಂತಾದುವುಗಳ ಆವಿಷ್ಕಾರ ಆಗಿದೆ. ಇದರ ನಂತರ ಆವಿಷ್ಕಾರಗೊಂಡ ದೂರವಾಣಿ ಮತ್ತು ಮೊಬೈಲ್ ಫೋನ್-ಗಳಂತೂ ಮಾಹಿತಿ ಸಂವಹನವನ್ನು ಸುಲಭವಾಗಿಸಿ ಎಲ್ಲರ ಕೈಗೆಟಕುವಂತೆ ಮಾಡಿದೆ. ಮಾತನಾಡುವುದು ಕೂಡ ಮಾಹಿತಿ ವಿನಿಮಯಕ್ಕೇ ಆಗಿದ್ದು ದೂರದರ್ಶನದಲ್ಲಿ ಮಾಹಿತಿ ಸಂವಹನೆ ದೃಷ್ಟಿ ಮತ್ತು ಧ್ವನಿ ಸಂಕೇತಗಳಿಂದ ಸಾಧ್ಯವಾದರೆ ಬಾನುಲಿ (radio) ಯಲ್ಲಿ ಕೇವಲ ಧ್ವನಿಯ ಸಹಾಯದಿಂದ ಮಾಹಿತಿ ಅರಿಯಬಹುದು. ಮಾನವನ ವಿಕಾಸದ ಹಂತದಿಂದ ಮಾಹಿತಿ ವಿನಿಮಯದ ಆಯಾಮಗಳನ್ನು ಅವಲೋಕಿಸಿದರೆ ಪ್ರಾಣಿಗಳು ಬಳಸುವ ಮಾಹಿತಿ ವಿನಿಮಯ ನೆನಪಿಗೆ ಬರುತ್ತದೆ. ಮಾನವನ ವಿಕಾಸ ಕಾಲದಲ್ಲಿ ಅವನು ಕಾಡಿನಲ್ಲಿ ವಾಸಿಸುತ್ತಿದ್ದರಿಂದ ಅಪಾಯಗಳ ಮುನ್ಸೂಚನೆ ನೀಡಲು ಶಬ್ದಗಳ ಸಹಾಯದಿಂದ ಸಂಕೇತಗಳನ್ನು ಸೃಷ್ಟಿಸುತ್ತಿದ್ದ. ಈಗಲೂ ಕೂಡ ಪ್ರಾಣಿಗಳು ಇದೇ ರೀತಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ.

ಮನುಷ್ಯನ ವಿಕಾಸವಾದಂತೆ ಸಂಕೇತ / ಮಾಹಿತಿಗಳ ಸಹಾಯದಿಂದ ಸಾಮಾಜಿಕ ಸ್ತರಗಳಲ್ಲಿ ಆಗಬಹುದಾದ ಅನುಕೂಲಗಳನ್ನು ಮನಗಂಡು ಅವುಗಳನ್ನು ತನ್ನ ಮತ್ತು ಇತರರ ಏಳ್ಗೆಗೆ ಉಪಯೋಗಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸಂಕೇತದಿಂದ ವಿವಿಧ ಸಾಧ್ಯತೆಗಳನ್ನು ಗುರುತಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ಸಂಕೇತ ಸಂದೇಶ, ಮತ್ತು ಮಾಹಿತಿಗಳ ಬಗ್ಗೆ ನಮಗೆ ತಿಳಿದಿದ್ದು ಇವುಗಳ ಸಂಸ್ಕರಣೆ, ಶೇಖರಣೆ, ಮತ್ತು ರವಾನೆಯ ದೃಷ್ಟಿಯಿಂದ ವೈಜ್ಞಾನಿಕ ದೃಷ್ಟಿಕೋನದಲ್ಲಿ ಅವಲೋಕಿಸೋಣ.

ಸಂಕೇತ (signal): ಸಂಕೇತವನ್ನು ಸಂದೇಶದ ರವಾನೆಗೆ ಬಳಸುವ ನಮೂನೆಗಳನ್ನು ಸಂದೇಶ ವಾಹಕಗಳು ಎನ್ನಬಹುದು. ಆದ್ದರಿಂದ ಸಂಕೇತವು ಒಂದು ಸಂದೇಶವಾಹಕ (medium of transmitting/conveying information). ಒಂದು ಉದಾಹರಣೆಯ ಮೂಲಕ ಸಂಕೇತದ ಬಗ್ಗೆ ಇನ್ನಷ್ಟು ತಿಳಿಯೋಣ. ನಾವು ಮಾತನಾಡುವಾಗ ಉತ್ಪತ್ತಿಯಾದ ತರಂಗಗಳು ಗಾಳಿಯ ಮೂಲಕ ಅಲೆಯಾಗಿ ಪಸರಿಸಿ ಮತ್ತೊಬ್ಬರಿಗೆ ತಲುಪುತ್ತದೆ. ಈ ತರಂಗಗಳ ಏರಿಳಿತವನ್ನು ಸಂಕೇತ ಎನ್ನಬಹುದು, ಏಕೆಂದರೆ ಈ ತರಂಗಗಳು ಮಾತು ಅಥವಾ ಸಂದೇಶದ ವಾಹನವಾಗಿ ಕಾರ್ಯ ನಿರ್ವಹಿಸುತ್ತದೆ. ಇದೆ ರೀತಿ ನಮಗೆ ಕಾಣುವ ದೃಶ್ಯವು ಕೂಡ ಬಣ್ಣ ಮತ್ತು ತೀವ್ರತೆಯ ಸಮಾಗಮದಿಂದ ಕೂಡಿದ್ದು ನಮ್ಮ ಕಣ್ಣುಗಳು ಈ ಸಂಕೇತಗಳನ್ನು ಗ್ರಹಿಸಿ ನೋಟಕ್ಕೆ ಸಹಾಯ ಮಾಡುತ್ತದೆ.

ಮಾಹಿತಿ (Information): ಈಗ ಮಾಹಿತಿಯ ಬಗ್ಗೆ ತಿಳಿಯೋಣ; ಮಾಹಿತಿ ಎಂಬುದು ಒಂದು ನಿಗದಿತ ಕಾರ್ಯ ಸೂಚಕ, ಅಂದರೆ ಮಾಹಿತಿ ಎಂಬುದು ಒಂದು ಕ್ರಿಯೆಯನ್ನು ತಿಳಿಸುವ ಸಂಕೇತಗಳ ಗುಚ್ಛ. ಉದಾಹರಣೆಗೆ, ಒಂದು ಸಾರಿಗೆ ಬಸ್ಸಿನಲ್ಲಿರುವ ಸೂಚನಾ ಫಲಕ (ಬೋರ್ಡ್) ಅದು ಇಂತಹ ಸ್ಥಳದಿಂದ ಮತ್ತೊಂದೆಡೆಗೆ ಹೋಗುತ್ತದೆ ಎಂಬ ಮಾಹಿತಿ ತಿಳಿಸುತ್ತದೆ. ಅಂದರೆ ಮಾಹಿತಿ ಎಂಬುದು ನಿರ್ದಿಷ್ಟ ಕಾರ್ಯ ಸೂಚಕವಾಗಿದ್ದು, ಈ ಮಾಹಿತಿಯನ್ನು ನೀಡುವುದು ಫಲಕದಲ್ಲಿರುವ ಅಕ್ಷರಗಳು. ಅಂದರೆ ಅಕ್ಷರಗಳು ನಮಗೆ ಬಸ್ಸಿನ ಪ್ರಯಾಣದ ಕುರಿತು ಮಾಹಿತಿ ನೀಡುವ ಸಂಕೇತದಂತೆ ಕೆಲಸ ಮಾಡುತ್ತವೆ. ಹೀಗೆ ಸಂಕೇತದಿಂದ ಮಾಹಿತಿಯನ್ನು ತಿಳಿಯಬಹುದು.

ಯಾವುದೇ ಒಂದು ಸಂಕೇತಗಳ ಗುಚ್ಛ ಮಾಹಿತಿ ಆಗಬೇಕಾದರೆ ಅವು ಸರಿಯಾದ ಕ್ರಮದಲ್ಲಿ ಜೋಡಣೆಗೊಂಡಿರಬೇಕು. ಮೇಲಿನ ಉದಾಹರಣೆಯಲ್ಲಿ ಅಕ್ಷರಗಳು ಸಂಕೇತವಾಗಿ ಅವುಗಳ ಕ್ರಮವಾದ ಜೋಡಣೆಯಿಂದ ಮಾತ್ರ ನಮಗೆ ಮಾಹಿತಿ ತಿಳಿಯುತ್ತದೆ. ಆದರೆ ಅದೇ ಅಕ್ಷರಗಳನ್ನು ಬೇರೆ ರೀತಿಯಲ್ಲಿ ಜೋಡಿಸಿದರೆ ಬಸ್ಸಿನ ಪ್ರಯಾಣದ ಮಾಹಿತಿ ತಪ್ಪಾಗಬಹುದು. ಮಾಹಿತಿಯನ್ನು ಸಂಕೇತಗಳ ವ್ಯವಸ್ಥಿತ ನಿರೂಪಣೆ ಎನ್ನಬಹುದಾಗಿದ್ದು ಈ ವ್ಯವಸ್ಥಿತ ಜೋಡಣೆ ತಪ್ಪಿದರೆ ಮಾಹಿತಿಗೆ ಚ್ಯುತಿಯಾಗುತ್ತದೆ.

ಸಂದೇಶ: ಸಂದೇಶ ಎಂಬುದು ಮಾಹಿತಿಯಿಂದ ಅರ್ಥವಾಗುವ ವಿಷಯ. ಆದ್ದರಿಂದ ಸಂದೇಶ ಎಂಬುದು ವ್ಯಕ್ತಿನಿಷ್ಠ. ಉದಾಹರಣೆಗೆ, ಒಂದು ಚಲನಚಿತ್ರ ನೋಡಿದಾಗ ಬೇರೆ ಬೇರೆ ಬೇರೆ ವೀಕ್ಷಕರು ಅದನ್ನು ಬೇರೆ ಬೇರೆ ಆಯಾಮಗಳಲ್ಲಿ ಅದನ್ನು ಅರ್ಥೈಸಿಕೊಳ್ಳುವುದು ಸಾಧ್ಯ. ವ್ಯಕ್ತಿಗೆ ಆಗುವ ಈ ಅರ್ಥ / ಸಾಕ್ಷಾತ್ಕಾರವೇ ಸಂದೇಶ. ಎಲ್ಲಾ ವ್ಯಕ್ತಿಗಳೂ ಒಂದೇ ಚಿತ್ರವನ್ನು ನೋಡಿದ್ದರೂ (ಮಾಹಿತಿ ಒಂದೇ ಆದರೂ) ಅವರಿಗೆ  ಬೇರೆ ಬೇರೆ ದೃಷ್ಟಿಕೋನದಲ್ಲಿ ಅರ್ಥವಾಗಿರುತ್ತದೆ. ಹೀಗೆ ಒಂದೇ ಮಾಹಿತಿ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ರೀತಿಯಲ್ಲಿ ಅರ್ಥವಾಗಬಹುದು. ಒಂದೇ ಮಾಹಿತಿಗೆ ಬೇರೆ ಬೇರೆ ವಿವರಣೆಗಳನ್ನು/ಅರ್ಥಗಳನ್ನು ನೀಡುವುದರ ಹಿನ್ನೆಲೆಯಲ್ಲಿ ವ್ಯಕ್ತಿಗಳ ಹಿಂದಿನ ಅನುಭವ ಕಾರ್ಯಪ್ರವೃತ್ತವಾಗಿರುತ್ತದೆ. ಪ್ರತಿಯೊಂದು ಜೀವಿಗೂ ಅದರದ್ದೇ ಆದ ಅನುಭವ ಇರುವುದರಿಂದ ಸಂದೇಶ ಎಂಬುದಕ್ಕೆ ನಿಖರವಾದ ವ್ಯಾಖ್ಯಾನ ನೀಡುವುದು ಕಷ್ಟ. ರಸ್ತೆಯಲ್ಲಿ ಚಲಿಸುವಾಗ ವಾಹನದ ಸದ್ದು ನಮಗೆ ಸಂಕೇತವಾಗಿ ಸುರಕ್ಷಿತ ಸ್ಥಳದಲ್ಲಿ ಚಲಿಸಲು ಸಹಾಯ ಮಾಡುತ್ತದೆ. ಆದರೆ ಅದೇ ವಾಹನದ ಸದ್ದು ಅಂಗಡಿಯಲ್ಲಿ ಕುಳಿತ ಒಬ್ಬ ವ್ಯಕ್ತಿಗೆ ಏನನ್ನೂ ತಿಳಿಸದೆ ಬರಿಯ ಗಲಾಟೆಯಾಗಿ ಕೇಳಬಹುದು.

ಸಂಕೇತ ಮಾಹಿತಿ ಮತ್ತು ಸಂದೇಶಗಳ ಅನುಬಂಧ ಕೆಳಗಿನ ಚಿತ್ರದ ಮೂಲಕ ತಿಳಿಯಬಹುದು. ಸಂಕೇತವು ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತದೆ. ಮಾಹಿತಿಯಿಂದ ನಮಗೆ ಸಂದೇಶ ಅರ್ಥವಾಗುತ್ತದೆ. ಹಾಗಾಗಿ, ಸಂದೇಶದ ಅಥವಾ ಮಾಹಿತಿಯ ರವಾನೆಗೆ ಆಧಾರ ಸಂಕೇತವೇ ಆಗಿರುತ್ತದೆ.

ಸಂಕೇತಗಳ ಅಗತ್ಯ ಪರಿಶೀಲನೆ ಮತ್ತು ತಿಳುವಳಿಕೆ ಯಾವುದೇ ಉದ್ಯಮದ ಕಾರ್ಯವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ವಿವಿಧ ರೀತಿಯ ಸಂಕೇತಗಳು ಮತ್ತು ಮಾಹಿತಿ ಹೊಮ್ಮುವುದರಿಂದ ಅವುಗಳ ವಿಶ್ಲೇಷಣೆ ಅಗತ್ಯವಾಗಿದ್ದು ಮಾಹಿತಿ ತಂತ್ರಜ್ಞಾನ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಮಾಹಿತಿ ಸಂಸ್ಕರಣೆಯ ಪರಿಕಲ್ಪನೆ ಎಲ್ಲಾ ಕ್ಷೇತ್ರಗಳಲ್ಲೂ ಅನ್ವಯವಾಗುತ್ತದೆ.

ನೈಜವಾಗಿ ಸಂಭವಿಸುವ ಸಂಕೇತ ವಿಭಿನ್ನ ರೂಪಗಳಲ್ಲಿ ಪ್ರಕಟವಾಗುತ್ತದೆ. ಉದಾಹರಣೆಗೆ ಧ್ವನಿಯು ಅಲೆಗಳ ರೀತಿಯಲ್ಲಿ ವಾಯುವಿನ ಒತ್ತಡದ ಬದಲಾವಣೆಯ ಸಹಾಯದಿಂದ ಪ್ರವಹಿಸುತ್ತವೆ, ಹಾಗೂ ಕಣ್ಣಿಗೆ ತೋರುವ ದೃಶ್ಯ, ಬೆಳಕಿನ ಪ್ರತಿಫಲನ, ಬಣ್ಣ ಹಾಗೂ ಅದರ ತೀವ್ರತೆಯನ್ನು ಅವಲಂಬಿಸಿರುತ್ತದೆ. ಅಂದರೆ, ಶಬ್ದ ಎನ್ನುವುದು ಗಾಳಿಯಲ್ಲಿ ಆಗುವ ಒತ್ತಡದ ಏರು ಪೇರು ಎನ್ನಬಹುದು. ಇದೇ ರೀತಿ ದೃಶ್ಯವೆಂದರೆ ಬಣ್ಣ ಹಾಗೂ ಅದರ ತೀವ್ರತೆಯ ವೈವಿಧ್ಯತೆ ಎನ್ನಬಹುದು. ಹಾಗಾಗಿ ಬೇರೆ ಬೇರೆ ಸಂಕೇತಗಳು ತಮ್ಮನ್ನು ವ್ಯಕ್ತಪಡಿಸುವ ಮಾಧ್ಯಮ ವಿವಿಧ ರೂಪಗಳಲ್ಲಿ ಇರುತ್ತವೆ. ಆದರೆ ಸಂಕೇತಗಳ ಸಂಸ್ಕರಣೆಗೆ ಬಳಸುವ ಕಂಪ್ಯೂಟರ್-ಗೆ ಸಂಕೇತಗಳ ನೈಜ ರೂಪ ಅರ್ಥವಾಗುವುದಿಲ್ಲ. ಹಾಗಾಗಿ ಕಂಪ್ಯೂಟರ್-ಗೆ ಅರ್ಥವಾಗುವಂತೆ ಸಂಕೇತಗಳ ರೂಪವನ್ನು ಮಾರ್ಪಡಿಸಬೇಕಾಗುವುದು ಅನಿವಾರ್ಯ.

ಡಿಜಿಟಲ್ ಕಂಪ್ಯೂಟರ್-ನಲ್ಲಿ ಸಂಸ್ಕರಿಸಲು ಸಂಕೇತಗಳನ್ನು ಏಕರೂಪದ ಮಾಧ್ಯಮದಲ್ಲಿ ನಿರೂಪಿಸುವುದು ಅಥವಾ ವರ್ಣಿಸುವುದು ಅವಶ್ಯಕವಾಗುತ್ತದೆ. ಸಂಕೇತಗಳನ್ನು ವಿದ್ಯುತ್ ರೂಪಕ್ಕೆ ಪರಿವರ್ತಿಸಿದಾಗ ಅದರ ನಿರೂಪಣೆ ಕಂಪ್ಯೂಟರ್ ಅರ್ಥವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯುನ್ಮಾನ ಪರಿಭಾಷೆಯಲ್ಲಿ ಸಂಕೇತಗಳನ್ನು ನಿರೂಪಿಸಿದ್ದಲ್ಲಿ ಅದರ ಸಂಸ್ಕರಣೆಗೆ ಮತ್ತು ಪ್ರಸರಣಕ್ಕೆ ಸುಲಭವಾಗುತ್ತದೆ. ಸಂಕೇತದ ವಿದ್ಯುನ್ಮಾನದ ವರ್ಣನೆಗೆ ಮಹತ್ವವಿರುವ ಕಾರಣ ಅದರ ವರ್ಣನೆ ಹಾಗೂ ಮಾಪನವನ್ನು ಮುಂದಿನ ಲೇಖನದಲ್ಲಿ ತಿಳಿಯೋಣ.

-ವಿಕ್ರಮ್