ನನ್ನ ಪಾಡಿಗೆ ನಾನು ಹೇಗೋ ಇದ್ದೆ
ಹೊತ್ತು ಹೊತ್ತಿಗೆ ಊಟ, ಆಮೇಲೆ ನಿದ್ದೆ.
ನಡು ನಡುವೆ ಧೂಳೊರಸಿ, ರೇಡಿಯೋ ಹಚ್ಚಿ
ಒಂದಿಷ್ಟು ಸಂಗೀತಕ್ಕೆ ತಲೆದೂಗಿ
ಬೌ ಎಂದು ಬೊಗಳುವ ನಾಯಿಗೊಂದಿಷ್ಟು ರೊಟ್ಟಿಯ ತುರುಕಿ
ಅನಂತರ ಸರಪಳಿ ಬಿಚ್ಚಿ ಕಾಪೋಂಡು ತುಂಬಾ ಬಿಟ್ಟು
ಯಾರೂ ಬಾರದ ಹಾಗೆ ಘೂರ್ಕನಿಗೆ ತಾಕೀತು ಕೊಟ್ಟು
ಒಳಗೆ ದಿನ ದಿನದ ಗಿರಣಿ ಯಥಾ ಪ್ರಕಾರ
ಪಂಜರದ ಅರಗಿಣಿಗೆ ಸಾತ್ವಿಕಾಹಾರ
*    *    *    *
ನೀ ಬಂದೆ ; ಎಲ್ಲಿಂದ ಬಂದೆಯೋ ಹೇಗೆ ಬಂದೆಯೋ ಕಾಣೆ.
ನಾಯಿ ಬೊಗಳಿದ ಸದ್ದು ಕೂಡ ಕೇಳಿಸಲಿಲ್ಲ
ಒಳಗಿನ ಚಿಲಕ ಯಾವ ಮೋಡಿಗೆ ಹೇಗೆ ತೆರೆಯಿತೊ ಗೊತ್ತಾಗಲಿಲ್ಲ
ಎಲ್ಲೋ ಗಾಳಿ ಬೀಸಿದ ಸದ್ದು; ಸುತ್ತ ಹತ್ತಾರು ಮರ
ಝಗ್ಗನೆ ಚಿಗುರಿ ನುಗ್ಗಿತ್ತಕಾಲ ವಸಂತಸೇನೆ
ಎದ್ದು ಕುಳಿತದ್ದಾಯ್ತು, ಇನ್ನು ನಿದ್ದೆ ಬಂದರೆ ತಾನೆ ?
*    *    *    *
ನಾನು ಹೇಗೋ ಇದ್ದೆ
ಈ ಇದರೊಳಕ್ಕೆ ನೀನೇಕೆ ನುಗ್ಗಿದೆ ?
ನನ್ನೊಳಗಿನರಕೆಗಳಿಗೆಲ್ಲ ಸರ್ಚ್‌ಲೈಟ್ ಬಿಟ್ಟು ತೋರಿಸಿದೆ
ಮಲಗಿದಾಸೆಯ ಕಿವಿಗೆ ಪುಂಗಿಯನ್ನೂದಿ ಹೆಡೆಬಿಡಿಸಿದೆ
ಮುಚ್ಚಿದಂಗಡಿಯ ಬಾಗಿಲು ತೆರೆದು ಜವಳಿಯ
ಥಾನು ಥಾನನ್ನೆಲ್ಲ ಬಿಚ್ಚಿ ಹರಡಿದೆ
ಬಿರುಗಾಳಿ-ಮಿಂಚು-ಮೋಡಗಳನ್ನೆ ತಂದು ಜಡಿ ಮಳೆ ಸುರಿಸಿ
ನಾ ನಿಂತ ನೆಲೆಯೆಲ್ಲವನು ಕರಗಿಸಿದೆ
ದೇವರ ಕೋಣೆಗೂ ನೀರು ನುಗ್ಗಿಸಿ ನಾನಿದುವರೆಗು ಪೂಜಿಸಿದ
ಪಟವನ್ನೇ ಕೊಚ್ಚಿದೆ
ಈ ಮುಂಗಾರು ಸಂಜೆಯ ಕೆಳಗೆ ಗಾಯಗೊಂಡುರುಳಿ-
ದಿರುಳಿನ ಮೇಲೆ ಸದ್ದಿರದೆ ಬೆಳದಿಂಗಳನ್ನೆ ಹೊಚ್ಚಿದೆ.