ಕಿರಾಣಾ ಘರಾಣೆಯ ಅದ್ವಿತೀಯ ಗಾಯಕ ಪಂ. ಸಂಗಮೇಶ್ವರ ಗುರವ ಅಖಿಲ ಭಾರತ ಖ್ಯಾತಿಯ ಹಿಂದೂಸ್ಥಾನಿ ಗಾಯಕರು. ಕರ್ನಾಟಕದಲ್ಲಿ ಕಿರಾಣಾ ಘರಾಣೆಗೆ ಉನ್ನತ ಸ್ಥಾನ ಕಲ್ಪಿಸಿದವರಲ್ಲಿ ಅಗ್ರಗಣ್ಯರು. ಕಿರಾಣಾ ಘರಾಣೆಗೆ ಹೇಳಿ ಮಾಡಿಸಿದಂತಹ ಕೋಮಲ ಕಂಠ. ಆರಂಭದ ದಿನಗಳಲ್ಲಿ ಬಿಳೆ ಆರು, ನಂತರ ಬಿಳೆ ನಾಲ್ಕನೇ ಪಟ್ಟಿಗೆ ಮೂರು ಸಪ್ತಕಗಳಲ್ಲಿ ಅವರ ಕಂಠ ಲೀಲಾಜಾಲ, ಅವರಿಗೆ ಸಂಗೀತವೇ ಸರ್ವಸ್ವ ಸ್ವರವೇ ಈಶ್ವರ.

‘ಸುರೀಲಿ ಗಾಯಕ’ ಎಂದೇ ಜನಜನಿತರಾದ ಪಂ. ಸಂಗಮೇಶ್ವರರು ಜನಿಸಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ; ೧೯೩೧ರ ಡಿಸೆಂಬರ ೭ ರಂದು. ಅವರದು ಸಂಗೀತ ಪರಂಪರೆಯ ಮನೆತನ. ಅಜ್ಜ ಸಂಗಪ್ಪ ಜಮಖಂಡಿ ಸಂಸ್ಥಾನದ ಆಸ್ಥಾನ ಗಾಯಕ. ತಂದೆ ಗಣಪತರಾವರೂ ಜಮಖಂಡಿ ಸಂಸ್ಥಾನದ ದರ್ಬಾರಿ ಗಾಯಕರು ಹಾಗೂ ಉಸ್ತಾದ್‌ ಅಬ್ದುಲ್‌ ಕರೀಮ್‌ಖಾನರ ಪ್ರಥಮ ಶಿಷ್ಯರಲ್ಲೊಬ್ಬರು. ಮತ್ತೊಬ್ಬ ಅಜ್ಜ (ತಾಯಿಯ ತಂದೆ) ರಾಮಚಂದ್ರಪ್ಪ ರಂಗನಟ. ಜಮಖಂಡಿ ಮಹಾರಾಜರ ನಾಟಕ ಕಂಪನಿಯ ಪ್ರಮುಖ ನಟ. ತಂದೆಯ ಸೋದರಮಾವ ಬಾಳಪ್ಪ ಸಾರಂಗಿ ವಾದಕ. ಇಂತಹ ಸ್ವರ ಪರಿವಾರದಲ್ಲಿ ಹುಟ್ಟಿ ಬೆಳೆದ ಸಂಗಮೇಶ್ವರರಿಗೆ ಹುಟ್ಟಿನೊಂದಿಗೆ ಸಂಗೀತ ರಕ್ತಗತವಾಯಿತು. ೧೯೪೮ರಲ್ಲಿ ಜಮಖಂಡಿ ಸಂಸ್ಥಾನ ವಿಲೀನವಾದ ನಂತರ ರಾಜಾಶ್ರಯ ಕಳೆದುಕೊಂಡ ಗಣಪತರಾವರು ಜಮಖಂಡಿ ಬಿಟ್ಟು ಬೆಳಗಾವಿಗೆ ಬಂದು ನೆಲೆಸಿದರು.

ಸಂಗೀತವನ್ನವಲಂಬಿಸಿ ತಾನು ಕಷ್ಟಪಟ್ಟದ್ದು ಸಾಕೆಂದು ತಂದೆ ಗಣಪತರಾವರು ಮಗನಿಗೆ ಸಂಗೀತ ಕಲಿಸಬಾರದೆಂದು ನಿರ್ಧರಿಸಿದರು. ಆದರೆ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಪಾಠ, ಅಬ್ದುಲ್‌ ಕರೀಮ್‌ಖಾನರ ಧ್ವನಿಮುದ್ರಿಕೆಯ ಬಾಲಕ ಸಂಗಮೇಶ್ವರರ ಮೇಲೆ ಅಪಾರ ಪ್ರಭಾವ ಬೀರಿದವು. ಶಾಲೆಯ ವಿದ್ಯೆ ತಲೆಗೆ ಹತ್ತಲೇ ಇಲ್ಲ. ಸಂಗೀತದತ್ತ ಮನಸ್ಸು ಹರಿಸಿದ್ದ ಸಂಗಮೇಶ್ವರ ಕಂಚಿನ ಕಂಠದ ‘ಆವಾಜ್‌’ (ಧ್ವನಿ) ಕೇಳಿ ತಂದೆ ಮಗನಿಗೆ ಗುರುವಾಗಿ ಸಂಗೀತ ವಿದ್ಯೆ ನೀಡಿದರು. ತಂದೆಯ ಗರಡಿಯಲ್ಲಿ ಸಂಗಮೇಶ್ವರರು ಸಂಗೀತದ ಸುದೀರ್ಘ ತಾಲೀಮ ಪಡೆದು ದೇಶದ ಮಹಾನ್‌  ಹಿಂದೂಸ್ಥಾನಿ ಗಾಯಕರಲ್ಲೊಬ್ಬರೆನಿಸಿದರು.

೧೯೫೦ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಸಂಗಮೇಶ್ವರ ಹಾಡುಗಾರಿಕೆ ಆರಂಭವಾಯಿತು. ೧೯೫೨ರಲ್ಲಿ ಅವರು ಕೆಲವು ವರ್ಷ ಮುಂಬೈಯಲ್ಲಿ ನೆಲೆಸಿದರು. ಮುಂಬೈ ಆಕಾಶವಾಣಿಯಿಂದ ಅವರ ಗಾಯನ ಪ್ರಸಾರಗೊಳ್ಳ ಹತ್ತಿತು. ದೇಶದ ವಿವಿಧ ಸಂಗೀತ ಸಮ್ಮೇಳನ, ರೇಡಿಯೋ ಸಂಗೀತ ಸಮ್ಮೇಳನ- ಹೀಗೆ ಅನೇಕ ಸಂಗೀತ ಸಮಾರಂಭಗಳಲ್ಲಿ ಅವರ ಗಾನವಾಹಿನಿ ದೇಶದ ತುಂಬೆಲ್ಲ ಹರಡಿತು. ೧೯೮೦ರಲ್ಲಿ ಮುಂಬೈಯಿಂದ ಮರಳಿ ಬೆಳಗಾವಿಗೆ ಬಂದರು. ೧೯೭೯ರಲ್ಲಿ ಪಂ. ಮಲ್ಲಿಕಾರ್ಜುನ ಮನಸೂರ ಅವರ ನಿರ್ದೇಶನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡ ಸಂಗೀತ ಅಧ್ಯಯನ ಪೀಠದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೧ರಲ್ಲಿ ನಿವೃತ್ತಿ ಹೊಂದಿ ಈಗ ಧಾರವಾಡದ ಕಲ್ಯಾಣ ನಗರದ ತಮ್ಮ ಸ್ವಗೃಹ ‘ಸ್ವರ ಸಂಗಮ’ದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿರುವ ಪಂ. ಸಂಗಮೇಶ್ವರ ಅವರಿಗೆ ದೊರೆತ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಅಂಥವುಗಳಲ್ಲಿ ಪುಣೆಯ ಶ್ರೀ ಪಂತನಾಥ ಮಹಾರಾಜರ ‘ಸೂರಸೇನ್‌’, ಮುಂಬೈಯ ಉಸ್ತಾದ್‌ ಫೈಯಾಜ್ ಅಹ್ಮದ್ ಖಾನ್‌ ಸ್ಮಾರಕ ಟ್ರಸ್ಟಿನ ‘ಕಿರಾಣಾ ಘರಾಣಾ’ ಪ್ರಶಸ್ತಿ (೧೯೯೭), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ವಾರ್ಷಿಕ ಸಂಗೀತ ಪ್ರಶಸ್ತಿ’[ (೧೯೮೨-೮೩), ಕರ್ನಾಟಕ ಸರ್ಕಾರದ ‘ರಾಜ್ಯ ಸಂಗೀತ ವಿದ್ವಾನ್‌’ ಪ್ರಶಸ್ತಿ (೧೯೯೭), ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’ (೨೦೦೧), ಧಾರವಾಡದ ಪಂ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ‘ಪಂ. ಪುಟ್ಟರಾಜ ಸಮ್ಮಾನ’ ರಾಷ್ಟ್ರೀಯ ಪ್ರಶಸ್ತಿ (೨೦೦೫) ಮುಂತದ ಪ್ರಶಸ್ತಿಗಳು ಉಲ್ಲೇಖನೀಯ. ರುದ್ರ, ಸಂಗಮ, ಗೌರಿಧರ ಹಾಗೂ ಗರಗಜ – ಈ ರಾಗಗಳನ್ನು ಸೃಷ್ಟಿಸಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪಂ. ಸಂಗಮೇಶ್ವರ ಅವರ ಶಿಷ್ಯ ಸಂಪತ್ತು ಅಪಾರ. ಅವರ ಶಿಷ್ಯರಲ್ಲಿ ಕೈವಲ್ಯ ಕುಮಾರ ಗುರುವ (ಮಗ), ಶ್ರೀಮತಿ ಸಗುಣಾಬಾಯಿ ಚಂದಾವರಕರ, ರಾಜಪ್ರಭು  ಧೋತ್ರೆ, ಪ್ರೊ. ಅಶೋಕ ಹುಗ್ಗಣ್ಣವರ, ಪ್ರೊ. ಮೃತ್ಯುಂಜಯ ಶೆಟ್ಟರ, ಕೆ.ಜಿ. ಉಪಾಧ್ಯ, ಗೀತಾ ಮೆಂಡಿಗೇರಿ, ಯೋಗಿತಾ ಗುರವ ಹಾಗೂ ಶಶಿಕಲಾ ಕುಲ್ಹಳ್ಳಿ (ಇಬ್ಬರೂ ಹೆಣ್ಣುಮಕ್ಕಳು) ಮುಂತಾದವರು ಸಂಗೀತ ಲೋಕದಲ್ಲಿ ಹೆಸರು ಮಾಡುತ್ತಿದ್ದಾರೆ – ಪಂ. ಸಂಗಮೇಶ್ವರ ಗುರವ ಅವರ ಹಿರಿಯ ಮಗ ಶ್ರೀ ನಂದಿಕೇಶ್ವರ ಗುರವ ಪಂ. ಬಸವರಾಜ ಬೆಂಡಿಗೇರಿಯವರ ಶಿಷ್ಯರಾಗಿದ್ದು, ತಬಲಾದಲ್ಲಿ ವಿಶೇಷ ಸಾಧನೆಗೈದು ಈಗ ಧಾರವಾಡದ ಕ.ವಿ.ವಿ. ಸಂಗೀತ ವಿಭಾಗದಲ್ಲಿ ತಬಲಾ ಸಾಥಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಿರಿಯಮಗ ಶ್ರೀ ಕೈವಲ್ಯಕುಮಾರ ಗುರವ ಆಕಾಶವಾಣಿ ‘ಎ’ ಶ್ರೇಣಿ ಕಲಾವಿದ. ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದ ಹಿಂದೂಸ್ಥಾನಿ ಗಾಯಕ.