ಶ್ರದ್ಧೆಯಿಂದ ಹಿಂದೂಸ್ಥಾನಿ ಸಂಗೀತದಲ್ಲಿ ಸಾಧನೆ ಮಾಡಿ ಅನೇಕ ಶಿಷ್ಯರನ್ನು ತಯಾರಿಸಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮದರ ಖಂಡಿಯ ಶ್ರೀ ಸಂಗಮೇಶ್ವರ ಹಿರೇಮಠರು ಗ್ವಾಲಿಯರ್ ಘರಾಣೆಯ ಗಾಯಕರು. ೧೯೩೦ರಲ್ಲಿ ಸಂಗೀತ ಪರಂಪರೆ ಹೊಂದಿದ ಕುಟುಂಬದಲ್ಲಿಯೇ ಜನಿಸಿದ ಶ್ರೀ ಸಂಗಮೇಶ್ವರ ಹಿರೇಮಠ ಅವರು, ತಮ್ಮ ೧೨ನೇ ವಯಸ್ಸಿನಲ್ಲಿಯೇ ಹಿಂದೂಸ್ಥಾನಿ ಸಂಗೀತ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಜಮಖಂಡಿಯ ಶ್ರೀ ಗಣಪತಿರಾವ್‌ ಗುರುವ ಅವರಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿದರು. ತದನಂತರ ಬೆಳಗಾವಿಯ ಶ್ರೀ ಮೃತ್ಯುಂಜಯ ಪುರಾಣಿಕಮಠ, ಸೊಲ್ಲಾಪುರದ ಬಾರಮಣಿ ಹಾಗೂ ಪ್ರಭುದೇವ ಸರದಾರ, ಬ್ಯಾಡಗಿಯ ಗುರುಬಸವಾರ್ಯ ಅವರುಗಳಲ್ಲಿ ಸಂಗೀತ ಶಿಕ್ಷಣ ಪಡೆದು, ಪಂಡಿತ ಬಸವರಾಜ ರಾಜಗುರು ಅವರಲ್ಲಿ ೧೦ ವರ್ಷಗಳ ಕಾಲ ಸಂಗೀತ ಅಧ್ಯಯನ ಮಾಡಿ, ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದರು.

೧೯೬೬ರಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪ ಅವರುಗಳ ತುಲಾಭಾರ‍ದ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಶ್ರೀಯುತರದು. ದೆಹಲಿ, ಮುಂಬೈ, ಪೂನಾ, ಮೈಸೂರು, ಬೆಂಗಳೂರು, ಗೋವಾ ಮುಂತಾದ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿರುವ ಶ್ರೀ ಹಿರೇಮಠ ಅವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಹಲವಾರು ಬಾರಿ ಧಾರವಾಡ ಆಕಾಶವಾಣಿ ಕೇಂದ್ರದಿಂದಲೂ ಪ್ರಸಾರವಾಗಿದೆ.

ಸಂಗೀತ ಸಾಧಕ ಶ್ರೀ ಸಂಗಮೇಶ್ವರ ಹಿರೇಮಠ ಅವರಿಗೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ‘ಗಾನ ಗಂಧವ’ ಬಿರುದು ನೀಡಿ ಗೌರವಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ಸ್ವರ ಸುಧಾಕರ, ಸಂಗೀತ ಕೇಸರಿ ಎಂಬ ಬಿರುದು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.