ಇದು ಜೀವನದ ಸಂಗಮ.
ಯಾವ ಪರ‍್ವತ ಲಿಂಗದಿಚ್ಛೆ ಈ ತೆರದಿ
ಜಂಗಮವಾಗಿ ಬಂದಿಲ್ಲಿ ಸಂಗಮವಾಯ್ತೊ !
ಒಂದನೊಂದನು ಹುಡುಕಿ ಬಂದೆರಡು ಚೇತನಕೆ
ಇಲ್ಲಿ ಬಾಳೊಂದಾಯ್ತೊ
ಏನು ತೆರೆ ಏನು ನಿರ್ಘೋಷ !
ಆ ದಡದಿಂದ ಈ ದಡಕೆ
ಈ ದಡದಿಂದ ಆ ದಡಕ್ಕೆ
ತುಂಬಿ ಗಂಭೀರವಾಗಿದೆ ಹೊನಲಿನಾವೇಶ !

ಸೆಳೆತಕ್ಕೆ ಸಿಕ್ಕ ಮರಮೋಟು ಕಸಕಡ್ಡಿ
ಅದರ ಒಳಗೆ
ಚೇತನದ ಸುಳಿಯಲಿ ಸಿಕ್ಕ ಜಡಕೂ ಕೂಡ
ಚೈತನ್ಯ ಬಂದ ಹಾಗೆ
ಹೇಗೊ ಎಲ್ಲೋ ಬಿದ್ದು ಕೊಳೆವ ಬದುಕಿಗೆ ದೈವ-
ಕೃಪೆ ದೊರೆತ ಹಾಗೆ
ಸಾಗುತಿವೆ ಹೊನಲಿನೊಳಗೆ !
ಇದು ಕಡಲೆಡೆಗೆ ನಡೆವಂಥ ಹಿರಿ ಚೇತನ
ಹಿರಿದರೆಡೆ ನಡೆವವರು ಹಿರಿಯಪ್ಪರು ಕಾಣ !

ಓ ಹೊನಲ ರಾಜ
ಒಯ್ದು ಮುಟ್ಟಿಸು ನನ್ನ ಎದೆಯ ಹಂಬಲನು, ಆ
ಮೊರೆ ಮೊರೆವ ಮುನ್ನೀರಿಗೆ.
ನಾಲ್ಕು ಹನಿ ನೀರಾಗಿರುತಿದ್ದೆನೇ ನಾನು.
ಸಂಗಮಿಸಿ ಬರುತಿದ್ದೆ ನಿನ್ನ ಜೊತೆಗೆ.
ನಾವು ಮನುಜರು ನೋಡು
ನೂರು ಕನಸನು ತುಂಬಿ ಸುಯ್ವುದೆಮ್ಮಯ ಪಾಡು !