ಸಂಗೀತ ಕಲೆಯ ಬೆಳವಣಿಗೆ ಹಾಗೂ ವಿಕಾಸಕ್ಕಾಗಿ ಹುಟ್ಟಿಕೊಂಡ ಹೈದ್ರಾಬಾದ್ ಕರ್ನಾಟಕದ ಹೆಮ್ಮೆಯ ಒಂದು ಸಂಗೀತ ಸಂಸ್ಥೆ ಬೀದರಿನ ಸಂಗೀತ ಕಲಾ ಮಂಡಳಿ.

ಹಿಂದುಳಿದ ಪ್ರದೇಶವೆಂಬ ಅಪಖ್ಯಾತಿಗೆ ಗುರಿಯಾಗಿರುವ ಹೈದ್ರಾಬಾದ್ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಸಂಗೀತ ಕಲೆಯ ಬೆಳವಣಿಗೆಗೆ ಟೊಂಕಕಟ್ಟಿ ನಿಂತು ಈ ಸಂಸ್ಥೆಯನ್ನು ಸ್ಥಾಪಿಸಿದವರು ಖ್ಯಾತ ಹಾರ್ಮೋನಿಯಂ ವಾದಕ ಹಾಗೂ ಉದ್ಯಮಿ ಶ್ರೀ ಜಗಪಾಲ್ ಸಿಂಗ್ ಪವಾರ.

ಖ್ಯಾತ ಸಂಗೀತಗಾರರೂ, ಉದ್ಯಮಿಗಳೂ ಆಗಿರುವ ರಾಜೇಂದ್ರ ಸಿಂಗ್ ಪವಾರ್ ಅವರ ತಂದೆ ಜಗಪಾಲ್ ಸಿಂಗ್ ಪವಾರ್ ಅವರು ಉತ್ತಮ ಹಾರ್ಮೋನಿಯಂ ವಾದಕರಾಗಿದ್ದು ೧೯೬೨ ರಲ್ಲಿ ತಮ್ಮದೇ ಆದ ಸಂಗೀತ ಕಲಾಮಂಡಲ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರೂಗಳನ್ನು ಕರೆಸಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿ ಈ ಮಮಡಲದ ಹೆಸರು ಚಿರಸ್ಥಾಯಿಯಾಗಿ ನಿಲ್ಲುವಂತೆ ಶ್ರಮಿಸಿದ್ದಾರೆ. ಜಗಪಾಲ್‌ಸಿಂಗ್ ಅವರ ಪುತ್ರ ರಾಜೇಂದ್ರಸಿಂಗ್ ಪವಾರ್ ಅವರು ತಂದೆ ನಡೆದ ಹಾದಿಯಲ್ಲೇ ಹೆಜ್ಜೆಯಿಟ್ಟು ತಾವೂ ಉತ್ತಮ ಸಂಗೀತ ವಿದ್ವಾಂಸರಾಗಿ ಈ ಸಂಸ್ಥೆಯನ್ನು ಉಜ್ಜೀವನಗೊಳಿಸಿದ್ದಾರೆ. ಇಲ್ಲಿ ಕೇವಲ ಗಾಯನವೇ ಅಲ್ಲದೆ ಕೊಳಲು, ಸಿತಾರ್, ಹಾರ್ಮೋನಿಯಂ, ತಬಲಾ ಹಾಗೂ ಕೀಬೋರ್ಡ್‌ವಾದನಗಳಲ್ಲೂ ಶಿಷ್ಯರನ್ನು ತಯಾರು ಮಾಡುತ್ತಿದ್ದಾರೆ.

೧೯೮೨-೮೩ ರಲ್ಲಿ ಹೈದ್ರಾಬಾದ್ – ಕರ್ನಾಟಕ ಪ್ರದೇಶದ ಒಂದು ಅದ್ದೂರಿ ಸಂಗೀತ ಸಮ್ಮೇಳನ ನಡೆಸಿದ್ದೇ ಅಲ್ಲದೆ ೧೯೮೫-೧೯೮೬ರಲ್ಲಿ ಐ.ಟಿ.ಸಿ. ಸಂಸ್ಥೆಯ ಸಹಭಾಗಿತ್ವದೊಂದಿಗೆ ಮತ್ತೊಂದು ಸಂಗೀತೋತ್ಸವವನ್ನು ನಡೆಸಿದ್ದು ಭಾರತದ ಸುಪ್ರಸಿದ್ಧ ವಿದ್ವಾಂಸರುಗಳಾದ ಪಂ. ಭೀಮಸೇನ ಜೋಷಿ, ಡಾ. ಬಸವರಾಜ ರಾಜಗುರು, ಪಂ. ವಿ. ಜಿ. ಜೋಗ್, ಪಂ. ಹರಿಪ್ರಸಾದ್ ಚೌರಾಸಿಯ, ಪಂ. ಶಿವಕುಮಾರ್ ಶರ್ಮಾ, ಬೇಗಂ ಪರ್ವಿನ್ ಸುಲ್ತಾನ, ಪಂ. ಜಾಕೀರ್ ಹುಸೇನ್ ಮುಂತಾದ ಕಲಾವಿದರು ಇದರಲ್ಲಿ ಪಾಲ್ಗೊಂಡಿದ್ದಾರೆ.

ಈ ಸಂಸ್ಥೆಯ ಮತ್ತೊಂದು ವೈಶಿಷ್ಟ್ಯವೆಂದರೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕವಿ ಡಾ. ಪಂ. ಪುಟ್ಟರಾಜ ಗವಾಯಿ ಅವರನ್ನು ಕರೆಸಿ ತುಲಭಾರ ಮಾಡಿ ಗೌರವಿಸಿರುವುದು. ಇದಲ್ಲದೆ ಸಂಸ್ಥೆಯ ಸಂಸ್ಥಾಪಕ ಪಂ. ಜಗಪಾಲ್ ಸಿಂಗ್ ಪವಾರ್ ಅವರ ಪುಣ್ಯತಿಥಿಯ ನಿಮಿತ್ತ ಪ್ರತಿ ವರ್ಷ ಜುಲೈ ೩೦ ರಂದು ಸಂಗೀತ ಸಮ್ಮೇಳನ ನಡೆಸುತ್ತಾ ಬರುತ್ತಿದೆ.

ಹೀಗೆ ಬೀದರ್‌ನಂತಹ ಹಿಂದುಳಿದ ಜಿಲ್ಲೆಯಲ್ಲಿ ಸಂಗೀತ ಏಳಿಗೆಗಾಗಿ, ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಗೀತ ಕಲಾಮಂಡಲದ ಬಹುಮುಖ ಸೇವೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨ ರ ಸಾಲಿನ ಸಂಗೀತ ಸಂಸ್ಥೆಗಳಿಗೆ ನೀಡುವ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.