ಗರಡಿಯ ಮನೆಯಲ್ಲಿ ನಸುಗತ್ತಲು, ನಾಲ್ಕು ಅಡಿ ಉದ್ದದ ಪುಟ್ಟ ಬಾಗಿಲಿನಿಂದ ಬರುತ್ತಿದ್ದ ಬೆಳಕೆಷ್ಟೊ ಅಷ್ಟೆ. ೩೦-೩೫ರ ಒಳಗಿನ ಸಮವಯಸ್ಸಿನ ಯುವಕರಿಬ್ಬರು ಕುಸ್ತಿಯಾಡುತ್ತಿದ್ದರು. ಬೆಳಗಿನ ಸಮಯದಲ್ಲೂ ಅವರ ದೇಹಗಳಿಂದ ಬೆವರು ಧಾರೆಯಾಗಿ ಸುರಿಯುತ್ತಿತ್ತು. ಅವರಲ್ಲೊಬ್ಬನು ಸಾಕಷ್ಟು ಎತ್ತರದ, ಚಿರತೆಯಂತೆ ಚಪಲವಾದ ಶರೀರದ ತೇಜಸ್ವಿ. ಸುಂದರವಾದ ಗುಂಗುರು ಗೂದಲು. ಎಣ್ಣೆಗೆಂಪು ಬಣ್ಣದ ಮುಖ, ಹುರಿಗೊಳಿಸಿದ ಕಿರುಮೀಸೆ, ನೇರವಾದ ನಾಸಿಕ, ತೀಕ್ಷ್ಣವಾದ ದೃಷ್ಟಿ. ಸಾವಿರ ಜನರಲ್ಲೂ ಥಟ್ಟನೆ ಎದ್ದು ಕಾಣುವಂಥ ವ್ಯಕ್ತಿತ್ವ. ಆತನೇ ರಾಯಣ್ಣ: ಆ ಭಾಗದಲ್ಲೆಲ್ಲ ವೀರಾಗ್ರಣಿಯೆಂದು ಹೆಸರು ಪಡೆದಿದ್ದ ರಾಯಣ್ಣ: ಕಿತ್ತೂರು ಚೆನ್ನಮ್ಮರಾಣಿಯ ಮೃಗಾವಲುಪಡೆಯ ದಳವಾಯಿಯಾಗಿದ್ದು, ಇಂಗ್ಲಿಷರ ವಿರುದ್ಧ ನಡೆದ ಯುದ್ಧದಲ್ಲಿ ಹೋರಾಡಿ, ಸೆರೆಸಿಕ್ಕಿ, ಬಿಡುಗಡೆ ಹೊಂದಿ, ತನ್ನೂರಾದ ಸಂಗೊಳ್ಳಿಗೆ ಬಂದು, ಮನೆತನದ ಕೆಲಸವಾಗಿದ್ದ ಹಳಬಕಿ (ತಳವಾರಿಕೆ)ಯನ್ನು ಮಾಡುತ್ತಲೇ ಕಿತ್ತೂರು ರಾಜ್ಯವನ್ನು ಮತ್ತೆ ಸ್ಥಾಪಿಸಲು ಕನಸು ಕಾಣುತ್ತಿದ್ದ ರಾಯಣ್ಣ.

ಚೆನ್ನಮ್ಮ ರಾಣಿಯ ಬಂಟ

೧೪೫ ವರ್ಷಗಳಿಗೆ ಹಿಂದಿನ ಕಥೆ:

ವ್ಯಾಪಾರಿಗಳಾಗಿ ಭಾರತಕ್ಕೆ ಬಂದಿದ್ದ ಇಂಗ್ಲಿಷರು ಸಾಮ್ರಾಜ್ಯವಾದಿಗಳಾಗಿ, ಈ ದೇಶದ ಒಂದೊಂದೇ ರಾಜ್ಯವನ್ನು ಮೋಸದಿಂದ ವಶಪಡಿಸಿಕೊಳ್ಳುತ್ತಿದ್ದ ಕಾಲ. ಪುಣ್ಯಪಟ್ಟಣ (ಪೂನಾ)ದ ಪೇಶವೆಗಳ ರಾಜ್ಯವನ್ನೂ, ಉತ್ತರ ಕರ್ನಾಟಕದ ಚಿಕ್ಕಪುಟ್ಟ ಸಂಸ್ಥಾನಗಳನ್ನೂ ಅವರು ಆಗಲೇ ನುಂಗಿದ್ದರು. ಅವರ ಕೆಟ್ಟ ದೃಷ್ಟಿಗೆ ಸಿಕ್ಕಿದ ಸಂಸ್ಥಾನಗಳಲ್ಲಿ ಕಿತ್ತೂರಿನ ಸಂಸ್ಥಾನವನ್ನು ವಶಪಡಿಸಿಕೊಂಡು ಚೆನ್ನಮ್ಮ ರಾಣಿಯನ್ನೂ ಅವರ ಸೊಸೆಯರನ್ನೂ ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟಿದ್ದರು. ರಾಯಣ್ಣನೂ ಕೆಲವು ದಿನಗಳು ಸೆರೆಯಲ್ಲಿದ್ದು ಬಿಡುಗಡೆಯಾಗಿದ್ದ.

ದೇಶಾಭಿಮಾನಿಯೂ ಸ್ವಾತಂತ್ರ್ಯ ಪ್ರೇಮಿಯೂ ಆಗಿದ್ದ ಚೆನ್ನಮ್ಮರಾಣಿ ಕಿತ್ತೂರನ್ನು ಪುನಃ ಗೆದ್ದುಕೊಳ್ಳುವ ಆಕಾಂಕ್ಷೆ ತ್ಯಜಿಸಿರಲಿಲ್ಲ. ಸಂಗೊಳ್ಳಿರಾಯಣ್ಣನಂಥ ನೂರಾರು ಜನ ಬಂಟರು ಆಗಲೂ ಅವರಿಗೆ ನಿಷ್ಠರಾಗಿದ್ದುಕೊಂಡು, ಇಂಗ್ಲಿಷರ ವಿರುದ್ಧ ಯುದ್ದ ಹೂಡಲು ಗುಪ್ತವಾಗಿ ಸಿದ್ಧತೆ ನಡೆಸುತ್ತಿದ್ದರು. ಆ ಸಿದ್ಧತೆಯ ಅಂಗವಾಗಿಯೇ ಪ್ರತಿಯೊಂದು ಹಳ್ಳಿಯಲ್ಲೂ ಅಂಗಸಾಧನೆ, ಕತ್ತಿವರಸೆ, ಮುಷ್ಟಿಯುದ್ಧಗಳ ತಾಲೀಮು ನಡೆಯುತ್ತಿತ್ತು.

ಕುಲಕರ್ಣಿಯ ಕರೆ

ಬೆವರಿನಿಂದ ಒದ್ದೆಯಾಗಿದ್ದ ಮೈಗೆ ಮಣ್ಣು ಸವರಿಕೊಳ್ಳುತ್ತ ರಾಯಣ್ಣ ಪುನಃ ಕುಸ್ತಿಗೆ ಅಣಿಯಾಗುತ್ತಿದ್ದಂತೆಯೇ ಗರಡಿಮನೆಯ ಬಾಗಿಲಿನಾಚೆಯಿಂದ ಕೂಗು ಕೇಳಿಬಂದಿತು:

“ರಾಯಾ, ಏ ರಾಯಾ!”
“ಯಾರಪ್ಪಾ ಅವಾ? ಎಂದ ರಾಯಣ್ಣ”.
“ನಾನೋ ರಾಯಾ! ಫಕೀರ!”
“ಯಾಕೋ ಫಕೀರಾ!”
“ಯಾಕೋ ಫಕೀರಾ? ಇಲ್ಲೀತನಕ ಬಂದಿ?”

“ಬಾಳಣ್ಣ ಕರೀತಾನಪ್ಪಾ, ಲಗೂ ಬರಬೇಕಂತ!” ಎಂದು ಹಳಬ (ತಳವಾರ) ಫಕೀರ.

“ಈ ಕುಲಕರ್ಣಿ ಬಾಳಣ್ಣಂದೊಂದು ಬಲೇ ಕಾಟ ಸುರು ಆತು. ಹೊತ್ತಿಲ್ಲ ಗೊತ್ತಿಲ್ಲ. ತಾಲೀಂ ಮಾಡೂದಕ್ಕ ಕೂಡ ಬಿಡೂದಿಲ್ಲ. ಇವ ಕರೆದಾಗೆಲ್ಲಾ ಹೋಗಬೇಕಂತ! ನಾನೇನ ಇವನ ಮನಿ ಆಳೇ?” ಎಂದು ಗೊಣಗಿಕೊಳ್ಳುತ್ತ ರಾಯಣ್ಣ ಬಾಗಿಲಿನ ಬಳಿ ಹೋಗಿ, “ಇಂದೇನ ನನ್ನ ಪಾಳೀ ಇಲ್ಲ. ಯಾಕ ಕರೀತಾನ? ನಾನೇನು ಬರೂದಿಲ್ಲ ಹೋಗು” ಎಂದು ಹೇಳಿದ.

“ಪಾಳೀ ಇರದಿದ್ದರೇನಾತೋ ರಾಯಾ? ಹಳಬಕೀ ಚಾಕರಿ ಆಂದಮ್ಯಾಲ ಕುಲಕರ್ಣೇರು ಕರೆದಾಗ ಬರಾಕಾ ಬೇಕಾಗತೈತಿ. ಸರಕಾರದ್ದು ನೂರಾಯೆಂಟು ಕೆಲಸ ಇರ‍್ತಾವ” ಎಂದು ಫಕೀರ.

“ಕೆಲಸ ಇದ್ದರ ಹಳಬಕೀ ಪಾಳೀ ಇದ್ದವರು ಮಾಡಲಿ. ನಾನಂತೂ ಬರೂದಿಲ್ಲ. ಹೋಗಿ ಹೇಳು ನಿನ್ನ ಕುಲಕರ್ಣೀಗೆ!” ಎಂದು ಧ್ವನಿಯೇರಿಸಿ ನುಡಿದ ರಾಯಣ್ಣ.

ಮತ್ತೊಂದು ಮಾತನ್ನೂ ಆಡದೆ ಫಕೀರ ಹೊರಟುಹೋದ.

ಚೆನ್ನಮ್ಮರಾಣಿಯ ಭೇಟಿ

ಸಂಗೊಳ್ಳಿಯ ಪಕ್ಕದಲ್ಲಿಯೇ ಪ್ರವಹಿಸುತ್ತದೆ ಮಲಪ್ರಭಾ ನದಿ.

ಅಂಗಸಾಧನೆ ಮುಗಿಸಿ, ನದಿಗೆ ಹೋಗಿ ಮನದಣಿಯೆ ಈಜಾಡಿ, ಮನೆಗೆ ಬಂದು, ತಾಯಿ ಕೆಂಚವ್ವ ಕೊಟ್ಟ ಹಾಲು ಕುಡಿದು, ನಡುವಿಗೆ ಕತ್ತಿ ಬಿಗಿದುಕೊಂಡು ರಾಯಣ್ಣ ಹೊರಗೆ ಹೊರಡಲು ಅಣಿಯಾಗುತ್ತಿದ್ದಂತೆಯೇ ಅವನ ಪರಮಸ್ನೇಹಿತ ಚನ್ನಬಸಪ್ಪ ಬಂದ. ಸಂಗೊಳ್ಳಿಯ ಸನಿಯದಲ್ಲಿಯೆ ಇರುವ ಆಮಟೂರಿನವರು ಚನ್ನಬಸಪ್ಪ. ಕತ್ತಿಯನ್ನು ಒರೆಗೆ ಸೇರಿಸದೆ, ಯಾವಾಗಲೂ ನಡುವಿಗೆ ಕಟ್ಟಿಕೊಂಡೇ ಇರುವುದು ಚನ್ನಬಸಪ್ಪನ ಪದ್ಧತಿಯಾಗಿದ್ದುದರಿಂದ ಅವನಿಗೆ “ಬಿಚ್ಚುಗತ್ತಿ ಚನ್ನಬಸಪ್ಪ ಎಂದು ಹೆಸರಾಗಿತ್ತು. ರಾಯಣ್ಣನಂತೆಯೇ ಅವನೂ ಶೂರ, ಧೀರ, ವೀರ. ಕಿತ್ತೂರು ರಾಣಿ ಚೆನ್ನಮ್ಮನವರಿಗೆ ಇವರಿಬ್ಬರಲ್ಲೂ ತುಂಬ ವಿಶ್ವಾಸ.

“ಹೊಂಗಲಕ್ಕೆ ಹೋಗಿಬರೋಣೇನಪ್ಪಾ ರಾಯಣ್ಣಾ?” ಎಂದ ಚನ್ನಬಸಪ್ಪ. ಸಂಗೊಳ್ಳಿಯಿಂದ ಬೈಲಹೊಂಗಲಕ್ಕೆ ಬಹಳ ದೂರವೇನಿಲ್ಲ. ಬೆಳಗ್ಗೆ ಹೋಗಿ ಸಾಯಂಕಾಲ ಹಿಂದಿರುಗಿಬರಲು ಸಾಧ್ಯ. ಆದರೆ, ಇಂಗ್ಲಿಷರ ಬಂಧನದಲ್ಲಿದ್ದ ಚೆನ್ನಮ್ಮ ರಾಣಿಯವರನ್ನು ಭೇಟಿಯಾಗುವುದು ಸುಲಭವಾಗಿರಲಿಲ್ಲ. ಅಂತೆಯೇ, ರಾಯಣ್ಣನೂ ಚನ್ನಬಸಪ್ಪನೂ ಜಂಗಮರ ವೇಷ ಧರಿಸಿಕೊಂಡು ರಾಣಿಯವರನ್ನು ಭೇಟಿಯಾಗಿ ಬರುತ್ತಿದ್ದರು.
“ಯುದ್ದದ ತಯಾರಿ ಎಲ್ಲಿಯವರೆಗೆ ಬಂದಿದೆ ರಾಯಣ್ಣಾ?” ಎಂದು ರಾಣಿ ಕೇಳಿದರು.

“ಸ್ವಲ್ಪಸ್ವಲ್ಪ ನಡೆದೈತಿ ಅವ್ವನವರೆ. ಸರದಾರ್ ಅವರಾದಿ ವೀರಪ್ಪನವರೂ ತಯಾರಿ ಮಾಡುತ್ತಾ ಇದಾರೆ. ಕೊಲ್ಲಾಪುರದ ರಾಜರಿಂದಲೂ ಸಹಾಯ ಸಿಕ್ಕಬಹುದೊ ಏನೋ” ಎಂದ ರಾಯಣ್ಣ.

“ಸರದಾರ್ ವೀರಪ್ಪನವರೆ ಸ್ವತಃ ಕೊಲ್ಲಾಪುರಕ್ಕೆ ಹೋಗಿ ಪ್ರಯತ್ನಿಸಿದರೆ ಕೆಲಸವಾಗಬಹುದು. ಆದಷ್ಟು ಬೇಗ ಬಂದು ನನ್ನನ್ನು ಭೇಟಿಯಾಗಲು ತಿಳಿಸಪ್ಪ ಸರದಾರರಿಗೆ” ಎಂದರು ರಾಣಿ. ಅವರ ದೇಹಸ್ಥಿತಿಯೂ ಸರಿಯಾಗಿರಲಿಲ್ಲ. ರಾಜ್ಯ ಕಳೆದುಕೊಂಡ ಕೊರಗು ಅವರನ್ನು ದಿನೇದಿನೇ ಕೃಶವಾಗಿಸುತ್ತಿತ್ತು.

ಬಿಳಿಯ ರೇಶಿಮೆ ಸೀರೆಯುಟ್ಟು, ಹಣೆಗೆ ವಿಭೂತಿ ಧರಿಸಿ, ಕೊರಳಲ್ಲಿ ರುದ್ರಾಕ್ಷಿ ಸರವಿರಿಸಿಕೊಂಡು ತಪಸ್ವಿನಿಯಂತೆ ತೋರುತ್ತಿದ್ದ ರಾಣಿಗೆ ನಮಸ್ಕರಿಸಿ ಗೆಳೆಯರು ಹೊರಟು ಬಂದರು. ಆದಷ್ಟು ಬೇಗ ದಂಡು ಕೂಡಿಸಬೇಕು, ಪರದೇಶಿಯರಾದ ಇಂಗ್ಲಿಷರನ್ನು ಹೊಡೆದೋಡಿಸಬೇಕು, ಕಿತ್ತೂರು ರಾಜ್ಯ ಮತ್ತೆ ಕಟ್ಟಬೇಕು. ಚೆನ್ನಮ್ಮ ರಾಣಿಯವರಿಗೆ ಸಂತೋಷವಾಗುವಂತೆ ಮಾಡಬೇಕು-ಎಂದೆಲ್ಲ ಯೋಚಿಸುತ್ತ ಸಂಗೊಳ್ಳಿಗೆ ನಡೆದರು.

ಕುಲಕರ್ಣಿಯೊಡನೆ ಚಕಮಕಿ

ಮತ್ತೆ ಎರಡು ಎರಡೂವರೆ ತಿಂಗಳುಗಳವರೆಗೆ ಗೆಳೆಯರಿಬ್ಬರೂ ಅಲ್ಲಿ ಇಲ್ಲಿ ಸಂಚರಿಸುತ್ತ ದಂಡು ಕೂಡಿಸಲು ಪ್ರಯತ್ನಿಸುತ್ತಿದ್ದರು. ಕೊಲ್ಲಾಪುರದ ರಾಜರಿಂದ ಸಹಾಯ ಸಿಕ್ಕಲಿಲ್ಲ. ಅದರಿಂದ ರಾಯಣ್ಣನೇನೂ ನಿರಾಶನಾಗಲಿಲ್ಲ. ಸರದಾರ್ ವೀರಪ್ಪನವರೂ ಇನ್ನಿತರ ಬಂಟರೂ ಸೈನಿಕರನ್ನು ಶೇಖರಿಸುತ್ತಿದ್ದರು. ಇಂಥ ಚಟುವಟಿಕೆಗಳಲ್ಲಿ ತೊಡಗಿದ್ದ ರಾಯಣ್ಣನಿಗೆ ಹಳಬಕಿಯ ಚಾಕರಿಗೆ ಬಿಡುವೆಲ್ಲಿ? ಸಂಗೊಳ್ಳಿಯ ಕುಲಕರ್ಣಿ ಬಾಳಣ್ಣ ಸಿಟ್ಟು ಬೆಂಕಿಯಾಗಿದ್ದ.

ಈ ನಡುವೆ ರಾಯಣ್ಣ ಊರಿಗೆ ಬಂದ ಸಮಾಚಾರ ತಿಳಿದು ಕುಲಕರ್ಣಿ ಅವನನ್ನು ಕರೆಯಿಸಿದ.

“ಇಷ್ಟು ದಿವಸ ಎಲ್ಲಿ ತಿರುಗುತ್ತಿದ್ದೆಯೋ ರಾಯಾ? ಎಂದ ಕುಲಕರ್ಣಿ.

“ಊರಿಗೆ ಹೋಗಿದ್ದಿನಿ.”

“ಯಾರನ್ನ ಕೇಳಿ ಹೋಗಿದ್ದಿಯೋ?”

“ಯಾರನ್ನ ಕೇಳೂದರ ಅಗತ್ಯ ಏನು? ನನ್ನ ಬದಲು ನಮ್ಮಣ್ಣ ಹಳಬಕಿಯ ಕೆಲಸ ಮಾಡುತಾನ.”

“ಅವನಿಗೇನು ಬರುತೈತಿ ಕೆಲಸ? ನೀನು ಮಾಡಲಿಕ್ಕೆ ಬೇಕು. ಇಲ್ಲದಿದ್ದರ ವತನದ ಹೊಲಾ ಕಳಕೊಳ್ಳತೀಯೆ!” ಎಂದ ಕುಲಕರ್ಣಿ. “ಮಾಮಲೇದಾರರ ಅಪ್ಪಣೆ ಇಲ್ಲದೆ ಬೇರೆ ಊರಿಗೆ ಹೋಗುವಂತಿಲ್ಲ ಗೊತ್ತಾಯಿತೇ?”

“ಇದೇನೋ ಹೊಸಾ ಕಾಯಿದೆ ಬಂದಂಗ ಕಾಣತೈತಲ್ಲ?” ಎಂದ ರಾಯಣ್ಣ.

“ನಿಮ್ಮಂಥ ಕಳ್ಳರನ್ನು ಸರಿಹಾದಿಗೆ ತರಲಿಕ್ಕೆ ಹೊಸಾ ಹೊಸಾ ಹೊಸಾ ಕಾಯದೆ ಬೇಕಾಗುತಾವ” ಎಂದ ಕುಲಕರ್ಣಿ.

ರಾಯಣ್ಣ ಪರಮ ಸ್ವಾಭಿಮಾನಿ. ಆತ ತೀಕ್ಷ್ಣ ಸ್ವರದಲ್ಲಿ ಹೇಳಿದ. “ಕಳ್ಳತನ ಸುಳ್ಳತನ ಗೊತ್ತಿಲ್ಲ ಈ ರಾಯಣ್ಣಗ, ನಾಲಗೀ ಬಿಗಿಹಿಡಿದು ಮಾತಾಡ್ರಿ ಬಾಳಣ್ಣನವರೆ!” ಕತ್ತಿಯ ಮೇಲೆ ಅವನ ಕೈ ಆಡಿತು.

ಕುಲಕರ್ಣಿ ದರ್ಪದ ಸ್ವಭಾವದನಾದರೂ ಬಹಳ ಪುಕ್ಕ. ಒರೆಯಿಂದ ಹಿರಿದ ಕತ್ತಿಯನ್ನು ನೋಡಿದರೂ ಸಹ ಅವನ ಮೈಯಿಂದ ಬೆವರು ಸುರಿಯುತ್ತಿತ್ತು. ಎಂತಲೇ, ಆತ ಅಂದು ಅಷ್ಟಕ್ಕೇ ಸುಮ್ಮನಾದ.

ಅದರ, ಮತ್ತೊಂದು ವಾರ ಕಳೆಯುವುದರೊಳಗಾಗಿ ಮತ್ತೆ ಚಕಮಕಿಯ ಪ್ರಸಂಗ ಬಂದಿತು.

ಸೊಕ್ಕಿನ ಕುಲಕರ್ಣಿಗೆ ಶಾಸ್ತಿ

ರಾಯಣ್ಣನ ತಂದೆ ಭರಮಣ್ಣ ವಾಲಿಕಾರ; ಎಂದರೆ ಸರ್ಕಾರದ ಕಾಗದಪತ್ರಗಳನ್ನು ಗ್ರಾಮದಿಂದ ತಾಲ್ಲೂಕು ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದು, ತಾಲ್ಲೂಕು ಕೇಂದ್ರದಿಂದ ಗ್ರಾಮಕ್ಕೆ ತಲಪಿಸುವುದು ಅವನ ಕೆಲಸ. ಇದಕ್ಕೆ ಸರಕಾರ ಸಂಬಳ ಕೊಡುತ್ತಿರಲಿಲ್ಲ. ಒಂದಿಷ್ಟು ಭೂಮಿಯನ್ನು ಕೊಟ್ಟಿತ್ತು. ಇದೇ ವತನದ ಭೂಮಿ.

ಹಳಬರ ಭೂಮಿಗಳೆಲ್ಲವನ್ನೂ ಮತ್ತೊಮ್ಮೆ ಅಳೆದು ತಿಳಿಸಬೇಕೆಂದು ಕಂಪೆನಿ ಸರಕಾರ ಆಜ್ಞೆ ವಿಧಿಸಿದ್ದಿತಂತೆ. ಅದರಂತೆ ರಾಯಣ್ಣನ ವತನದ ಭೂಮಿಯನ್ನೂ ಅಳೆದು ನೋಡಲಾಯಿತು.

“ಪುಸ್ತಕದಲ್ಲಿರುವುದಕ್ಕಿಂತ ಮೂರು ಮಾರು ಭೂಮಿ ಹೆಚ್ಚಾಗಿದೆ ನಿಮಗೆ ರಾಯಾ. ಈ ಹೆಚ್ಚಿನ ಭೂಮಿಯ ಬಗ್ಗೆ ವರ್ಷಕ್ಕೆ ಮೂವತ್ತೆರಡು ರೂಪಾಯಿ ಕಂದಾಯ ಹೆಚ್ಚಿಗೆ ಕೊಡಬೇಕಾಗುತ್ತದೆ” ಎಂದ ಕುಲಕರ್ಣಿ.

ವರ್ಷಾ ವರ್ಷಾ ಕಂದಾಯ ಹೆಚ್ಚು ಮಾಡಿದರೆ ನಾವೆಲ್ಲಿಂದ ಕೊಡೋಣ?” ಎಂದ ರಾಯಣ್ಣ.

ಭೂಮಿಗಳನ್ನಳೆಯುವ ಕೆಲಸ ಮುಗಿಸಿ ಕುದುರೆ ಏರಿ ಊರಿಗೆ ಹೊರಟ ಕುಲಕರ್ಣಿ. ರಾಯಣ್ಣನ ಬಿರುಸು ಮಾತಿನಿಂದಾಗಿ ಅವನ ಪಿತ್ತ ಕೆರಳಿತ್ತು. ಮಟಮಟ ಮಧ್ಯಾಹ್ನ, ಬೆಳಗಿನಿಂದಲೂ ಬಿಸಿಲಲ್ಲಿ ಅಲೆದು ಕುಲಕರ್ಣಿಗೆ ಆಯಾಸವಾಗಿತ್ತು. ಸಮೀಪದಲ್ಲಿಯೇ ಹೊಳೆ. ಕುದುರೆಯ ಲಗಾಮನ್ನು ರಾಯಣ್ಣನ ಕೈಗೆ ಕೊಟ್ಟು ಕುಲಕರ್ಣಿ ಸ್ನಾನಕ್ಕಿಳಿದ. ಹತ್ತು ನಿಮಿಷಗಳಲ್ಲಿಯೇ ಸ್ನಾನದ ಶಾಸ್ತ್ರ ಮುಗಿಸಿ ಮಡಿ ದೋತರ ಉಟ್ಟುಕೊಂಡು ಮೇಲೆ ಬಂದು ಹೇಳಿದ” “ಕಲ್ಲಿನ ಮೇಲೆ ದೋತರ ಬಿಟ್ಟೀನಿ ರಾಯ. ಒಗೆದುಕೊಂಡು ಬಾ.”

ಕತ್ತಿಯ ಕಾಯಕದ ಬಂಟ ರಾಯಣ್ಣ ಮೈಲಿಗೆ ಪಂಚೆ ತೊಳೆಯುವುದು ಶಕ್ಯವೆ? ಆತ ಕಿಡಿಯಾಗಿ ಹೇಳಿದ:

“ನಿನ್ನ ದೋತರ ಒಗೆದುಕೊಡಲಿಕ್ಕೆ ನಾನೇನು ನಿನ್ನ ಅಗಸನಲ್ಲ, ಬೇಕಾದರೆ ಒಗೆದುಕೋ, ಸಾಕಾದರೆ ಬಿಡು.”

ಕುಲಕರ್ಣಿಯೂ ಸಿಟ್ಟಿನಿಂದಲೇ ಹೇಳಿದ: “ಏನು ಸೊಕ್ಕಿನ ಮನುಷ್ಯ ಹುಟ್ಟಿದೆಯೋ ಸಂಗೊಳ್ಳಿಯಲ್ಲಿ? ನಿನ್ನ ಹೊಲಾ ನಿನಗೆ ಉಳೀಬೇಕೋ ಬೇಡವೋ?”

ರಾಯಣ್ಣ ಸರಕ್ಕನೆ ಕಲ್ಲಿನ ಬಳಿ ಹೋಗಿ ಮೈಲಿಗೆ ಪಂಚೆಯನ್ನೆತ್ತಿ ಕುಲಕರ್ಣಿಯ ಮೈಮೇಲೆ ಬಿಸುಟು, ಆವೇಶದಲ್ಲಿ ಹೇಳಿದ: “ನನಗೆ ವತನದ ಹೊಲಾ ಇರೂದು ಸರಕಾರಿ ಚಾಕರಿಯ ಸಲುವಾಗಿ. ನಿನ್ನ ಅಂಗಿ-ಪಂಚೆ ಒಗೆದುಕೊಡಲಿಕ್ಕಾಗಿ ಇಲ್ಲ. ಇದೊಂದು ಸಲ ಬಿಟ್ಟುಬಿಡ್ತೀನಿ ನಿನ್ನ. ಇನ್ನೊಮ್ಮೆ ಇಂಥಾದ್ದೇನಾದರೂ ಹೇಳಿದಿಯೆಂದರೆ ನಿನ್ನ ಕಡಿದು ಹೊಳೆಯಲ್ಲಿ ಒಗೆದುಬಡ್ತೀನಿ ತಿಳೀತಾ?”

ಕುಲಕರ್ಣಿ ನಡುನಡುಗುತ್ತ ಕುದುರೆ, ಪಂಚೆ, ಸರಕಾರೀ ಕಾಗದಪತ್ರ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಬರಿಮೈಯಲ್ಲಿಯೆ ಓಡಿಹೋದ. ಅವನ ಕುದುರೆಯೂ ಅವನ ಹಿಂದೆಯೇ ಹೋಯಿತು. ರಾಯಣ್ಣ ಮಡುವಿಗಿಳಿದು ಮನದಣಿಯೆ ಈಜಾಡಿದ. ಅನಂತರ ಮನೆಗೆ ಬಂದು, ಊಟು ಮಾಡುತ್ತಿದ್ದಂತೆಯೇ, ತಾಯಿ ಕೆಂಚವ್ವನಿಗೆ ಎಲ್ಲವನ್ನೂ ತಿಳಿಸಿದ.

“ಚಲೋ ಬುದ್ಧೀ ಕಲಿಸಿದಿಯಪ್ಪ ಆ ಸೊಕ್ಕಿನ ಕುಲಕರ್ಣಿಗೆ!” ಎಂದಳು ಕೆಂಚವ್ವ.

ಇನ್ನೊಮ್ಮೆ ಇಂಥಾದ್ದೇನಾದರೂ ಹೇಳಿದರೆ ನಿನ್ನ ಕುಡಿದು ಹೊಳೆಯಲ್ಲಿ ಒಗಿದುಬಿಡ್ತೀನಿ.

ಇನ್ನೆಲ್ಲಿ ಬರ್ತಾನೆ ರಾಯ?”

ಸಂಜೆಯಲ್ಲಿ ಪುನಃ ಕರೆ ಬಂದಿತು. ಕುಲಕರ್ಣಿಯಿಂದ. ಮಧ್ಯಾಹ್ನದ ಚಕಮಕಿಯ ಬಗೆಗೆ ಏನನ್ನೂ ಆಡಲಿಲ್ಲ ಕುಲಕರ್ಣಿ. ಲಕೊಟೆಯೊಂದನ್ನು ರಾಯಣ್ಣನ ಕೈಗೆ ಕೊಟ್ಟು, ಅದನ್ನು ಸಂಪಗಾವಿಯ ಕಛೇರಿಗೆ ಮುಟ್ಟಿಸಿಬರಲು ತಿಳಿಸಿದ. ಅದು ಸರಕಾರೀ ಕೆಲಸವಾಗಿದ್ದುದರಿಂದ ರಾಯಣ್ಣ ಹೊರಡಲೇ ಬೇಕಾಯಿತು.

ಅವನು ಅತ್ತ ಸಂಪಗಾವಿಗೆ ಹೋಗುತ್ತಲೂ ಇತ್ತ ಕುಲಕರ್ಣಿ ಕೆಂಚವ್ವನನ್ನು ಕರೆಯಿಸಿದ; ಐದು ವರ್ಷಗಳ ಕಂದಾಯದ ಹಣ ತಂದುಕೊಡು” ಎಂದ.

“ನನ್ನ ಹತ್ತಿರ ಎಲ್ಲಿಂದ ಬಂದಾವು ರೂಪಾಯಿ? ರಾಯ ಬರಲಿ. ತಂದು ಕೊಡ್ತಾನ” ಎಂದಳು ಕೆಂಚವ್ವ.

ಇನ್ನೆಲ್ಲಿ ಬರ್ತಾನೆ ರಾಯಾ? ಅವನ್ನ ಸಂಪಗಾವಿ ಜೈಲಿಗೆ ಕಳಿಸೀನಿ ತಿಳೀತಾ?” ಎಂದು ಕುಲಕರ್ಣಿ, ಗಹಗಹಿಸಿ ನಗುತ್ತ.

ಆತ ಹೇಳಿದ್ದುದು ನಿಜವೇ ಆಗಿದ್ದಿತು. ರಾಯಣ್ಣ ತನ್ನನ್ನು ಕೊಲೆಮಾಡಲು ಬಂದಿದ್ದನೆಂದು ಮಾಮಲೇದಾರನಿಗೆ ದೂರು ಕೊಟ್ಟು ಅವನನ್ನು ಬಂಧನದಲ್ಲಿರಿಸುವಂತೆ ಬಿನ್ನವಿಸಿಕೊಂಡಿದ್ದ ಕುಲಕರ್ಣಿ.

ಮಾಮಲೇದಾರ ಕಾಗದ ಓದಿದ. ಕಂಪೆನಿ ಸರ್ಕಾರದ ಕುಲಕರ್ಣಿಯನ್ನು ಕೊಲೆಮಾಡುವ ಪ್ರಯತ್ನ! ಅವನ ಮೈ ಉರಿದುಹೋಯಿತು.

ಮಾಮಲೇದಾರ ರಾಯಣ್ಣನನ್ನು ಸುಟ್ಟುಬಿಡುವಂತೆ ನೋಡಿದ. “ಇಷ್ಟು ಸೊಕ್ಕು ಬಂತೇನು ನಿನಗೆ! ತಾಳು, ಸೊಕ್ಕು ಇಳಿಸ್ತೀನಿ” ಎಂದ. ಸಿಪಾಯಿಗಳನ್ನು ಕರೆದು, “ಜೈಲಿಗೆ ಸೇರಿಸ್ರಿ ಈ ಕೊಬ್ಬಿದ ಹುಡುಗನ್ನ” ಎಂದ. ಆ ಪ್ರಕಾರ ರಾಯಣ್ಣನನ್ನು ಕಬ್ಬಿಣದ ಕಟಾಂಜನದಲ್ಲಿ ಕೂಡಿ ಹಾಕಿದ್ದರು.

ಕುಲಕರ್ಣಿಯ ಮದ

“ನಿಮ್ಮಲ್ಲಿ ರೂಪಾಯಿಗೇನು ಕೊರತೆ ಕೆಂಚೀ? ಕಿತ್ತೂರ ಚೆನ್ನವ್ವ ಕೊಡ್ತಿರಬೇಕಲ್ಲ ಸಾಕಷ್ಟು? ಒಳ್ಳೇ ಮಾತಿಗೆ ತಂದುಕೊಡು. ಇಲ್ಲವಾದರೆ ನಿನ್ನ ಬಿಡುವುದಿಲ್ಲ” ಎಂದ ಕುಲಕರ್ಣಿ.

“ಹೆಂಗಸರನ್ನು ಕಾಡು ಅಂತ ಕಾಯದೆ ಹೇಳುತೈತೇನು? ನಿನ್ನ ಗತಿ ನೆಟ್ಟಗಾಗೂದಿಲ್ಲ. ನನ್ನ ಮಗ ಬರಲಿ. ನಿನ್ನ ರುಂಡ ಚಂಡಾಡುತಾನ” ಎಂದಳು ಕೆಂಚವ್ವ.

“ಎಲ ಎಲಾ! ನೀನೂ ಸೊಕ್ಕಿಗೇರಿದ್ದೀಯೆ!” ಎಂದು ಅಬ್ಬರಿಸಿ ಹಳಬರನ್ನು ಕರೆದು, ಕೆಂಚವ್ವನ ಬೆನ್ನಿನ ಮೇಲೆ ಕಲ್ಲು ಹೇರಿಸಿದ.

ರಾಯಣ್ಣನ ತಾಯಿಗೆ ಕುಲಕರ್ಣಿ ಅಪಮಾನ ಮಾಡುತ್ತಿದ್ದ ಸಮಾಚಾರ ಊರಿನಲ್ಲೆಲ್ಲ ಹರಡಿತು. ಆ ವೇಳೆಗೆ ಸಂಗೊಳ್ಳಿಗೆ ಬಂದಿದ್ದ ಬಿಚ್ಚುಗತ್ತಿ ಚೆನ್ನಬಸಪ್ಪ, ಕಂದಾಯದ ಹಣಕ್ಕೆ ತಾನು ಜಾಮೀನಾಗುವುದಾಗಿ ಬರೆದುಕೊಟ್ಟು, ಕೆಂಚವ್ವನ ಬೆನ್ನ ಮೇಲಿನ ಕಲ್ಲು ತೆಗೆಸಿದ.

ಬಂದೇ ಬಂದನಲ್ಲ ರಾಯ!

ಸಂಪಗಾವಿಯ ಸೆರೆಮನೆಯಲ್ಲಿ ಕುದಿಕುದಿ ಕುದಿಯುತ್ತಿದ್ದ ರಾಯಣ್ಣ.

ಅವರ ಅದೃಷ್ಟ, ಅವನ ಸ್ನೇಹಿತ ಮೇಲಗಿರಿ ರಂಗನಗೌಡ ಸಂಪಗಾವಿಗೆ ಬಂದ. ರಾಯಣ್ಣನಿಗೆ ತಾನು ಜಾಮೀನು ನಿಲ್ಲುತ್ತೇನೆ ಎಂದ.

ಸೆರೆಮನೆಯ ಬಾಗಿಲು ತೆರೆಯಿತು.

ಎರಡು ದಿನಗಳ ತರುವಾಯ ಸೆರೆಯಿಂದ ಬಿಡುಗಡೆ ಹೊಂದಿ ಊರಿಗೆ ಬಂದ ರಾಯಣ್ಣ. ಮಗನನ್ನು ಅಪ್ಪಿಕೊಂಡು ಕಣ್ಣೀರು ಸುರಿಸುತ್ತ ಎಲ್ಲವನ್ನೂ ವರದಿ ಮಾಡಿದಳು ಕೆಂಚವ್ವ.

ತಾಯಿಯನ್ನು ಸಂತೈಸಿ ನೇರವಾಗಿ ಚಾವಡಿಗೆ ಬಂದ ರಾಯಣ್ಣ. ಆತ ಬಂದುದು ಗೊತ್ತಾಗುತ್ತಲೂ ಮನೆಯ ಬಾಗಿಲುಗಳೆಲ್ಲವನ್ನೂ ಮುಚ್ಚಿ ಕುಲಕರ್ಣಿ ಅಡುಗೆಯ ಮನೆಯಲ್ಲಿ ಅವಿತಿದ್ದ. ರಾಯಣ್ಣ ಹಿತ್ತಲು ಗೋಡೆಯನ್ನೇರಿ ಟಣ್ಣನೆ ನೆಗೆದು ಒರೆಯಿಂದ ಕತ್ತಿ ಹಿರಿದು ನಿಂತು ಕೂಗಿ ಹೇಳಿದ? “ಕಂದಾಯದ ಬಾಕಿ ಕೊಡಲಿಕ್ಕೆ ಬಂದೀನ್ರೀ ಕುಲಕರ್ಣಿಯವರೇ! ಬರ್ರಿ ಹೊರಗೆ.”

ಕುಲಕರ್ಣಿಯ ಹೆಂಡತಿ ಬಂದು ರಾಯಣ್ಣನ ಕಾಲು ಹಿಡಿದುಕೊಂಡಳು. “ಇದೊಂದು ಸಲ ಕ್ಷಮಾ ಮಾಡು ರಾಯಣ್ಣ. ನನ್ನ ಮಂಗಳಸೂತ್ರ ಉಳಿಸು. ನಾನು ನಿನ್ನ ತಂಗಿ ಅಂತ ತಿಳಿ. ನನ್ನ ಕುಂಕುಮ ಉಳಿಸು.”

ಆ ಸಾಧ್ವಿಯ ಕಣ್ಣೀರು ತನ್ನ ಕಾಲು ತೋಯಿಸುತ್ತಿದ್ದಂತೆ ರಾಯಣ್ಣನ ರೊಚ್ಚು ಇಳಿಯಿತು. ಅಷ್ಟರಲ್ಲಿ ಅಲ್ಲಿಗೆ ಬಂದ ಕೆಂಚವ್ವನೂ ಮಗನನ್ನು ಸಮಾಧಾನಪಡಿಸಿದಳು. ಶರಣು ಬಂದವರನ್ನು ಬಿಟ್ಟುಬಿಡುವುದು ವೀರರ ಧರ್ಮ. ಕತ್ತಿಯನ್ನು ಒರೆಗೆ ಸೇರಿಸಿದ ರಾಯಣ್ಣ.

ದಂಡು ಕೂಡಿಸಿದ

ಕುಲಕರ್ಣಿ ಒಂದೆರಡು ವಾರ ಮನೆಯಲ್ಲಿಯೇ ಕುಳಿತಿದ್ದ. ಹೆಂಡತಿ ಬೇಡವೆಂದರೂ ಕೇಳದೆ. ರಾಯಣ್ಣನ ವಿರುದ್ಧವಾಗಿ ಮತ್ತೆ ಮಾಮಲೇದಾರರಿಗೆ ದೂರು ಕೊಟ್ಟ. ರಾಯಣ್ಣನನ್ನೂ ಚನ್ನಬಸಪ್ಪನನ್ನೂ ಬಂಧಿಸಲು ಸರಕಾರದ ಆಜ್ಞೆ ಹೊರಟಿತು. ಆ ವಿಚಾರ ತಿಳಿಯುತ್ತಲೂ ರಾಯಣ್ಣ ಕುಲಕರ್ಣಿಯ ಹೊಲಕ್ಕೆ ಹೋಗಿ, ಅಲ್ಲಿದ್ದ ಅವನ ಬಣವೆಯನ್ನು ಸುಟ್ಟುಹಾಕಿದ. ಕುಲಕರ್ಣಿಯ ಎತ್ತುಗಳನ್ನು ಹೊಂಗಲಕ್ಕೆ ಸಾಗಿಸಿ ಮಾರಾಟಮಾಡಿ, ಬಂದ ಹಣವನ್ನು ಕಂದಾಯ ಕಟ್ಟಲು ತಾಯಿಯ ಕೈಗೆ ಕೊಟ್ಟು ಊರು ತ್ಯಜಿಸಿದ.

ಆರು ಜನರೊಡನೆ ಹೋರಾಡಿದ ರಾಯಣ್ಣ.

ಬಿಚ್ಚುಗತ್ತಿ ಚೆನ್ನಬಸಪ್ಪ, ಬೆಳವಡಿಯ ಯಲ್ಲನಾಯಕ ಮೊದಲಾದ ಸ್ನೇಹಿತರ ಜೊತೆಗೆ ಬಾಳಗುಂದದ ಗುಡಕ್ಕೆ ಬಂದು ಅಲ್ಲಿದ್ದ ಹಬಸೀವೀರ ಗುಬ್ಬಾನನ್ನು ಕಂಡ ರಾಯಣ್ಣ.

“ಕೆಂಪು ಮಾರಿಯವರ ವಿರುದ್ಧ ಲಡಾಯಿ ಅಂದರೆ ಸಣ್ಣ ಮಾತಲ್ಲ ರಾಯಣ್ಣಾ, ಮೂರು ನಾಲ್ಕು ಸಾವಿರ ಜನರಾದರೂ ಬೇಕಲ್ಲ?” ಎಂದ ಗುಬ್ಜಾನ್‌.

“ಹೌದಪ್ಪಾ ಗಜವೀರ, ಅದಕ್ಕಾಗೇ ನಾವು ನಿನ್ನ ಹತ್ತಿರ ಬಂದೀವಿ.”

“ನನ್ನ ಹತ್ತರ ಇರೋದು ನೂರು ಮಂದಿಯ ದಂಡು. ನೀನು ಈಗೀಂದೀಗ ಶಿವಗುತ್ತಿ ರಾಜ್ಯಕ್ಕೆ ಹೋಗಿ ಅಲ್ಲಿಂದ ಸೈನಿಕರನ್ನು ಕರೆದುಕೊಂಡು ಬಾ. ಆಮೇಲೆ ಕೆಂಪುಮಾರಿಯವರನ್ನು ಹೊಡೆದೋಡಿಸೋಣ” ಎಂದ ಗಜವೀರ ಗುಬ್ಜಾನ್‌.

ಚೆನ್ನಮ್ಮರಾಣಿಯವರ ಹಿರಿಯ ಸೊಸೆ ವೀರಮ್ಮಾಜಿಯವರ ತಂದೆ ಶಿವಗುತ್ತಿಯ ರಾಜರಾಗಿದ್ದರು. ರಾಯಣ್ಣ ಅಲ್ಲಿಗೆ ಹೋಗಿ, ರಾಜರನ್ನು ಕಂಡ. ಮಗಳ ಮೇಲಿನ ಅಭಿಮಾನದಿಂದ ಪ್ರೇರಿತನಾದ ರಾಜರು ಇನ್ನೂರು ಜನ ಶೂರ ಸೈನಿಕರನ್ನೂ ಶಸ್ತ್ರಾಸ್ತ್ರಗಳನ್ನೂ ಸಾಕಷ್ಟು ಹಣವನ್ನೂ ಕೊಟ್ಟರು.

ಶಿವಗುತ್ತಿ ರಾಜ್ಯದಲ್ಲಿ ಒಕ್ಕಳ ಭರಮ ಎಂಬವನೊಬ್ಬ ಮಹಾಪುಂಡ. ರಾತ್ರಿಯ ಹೊತ್ತು ಊರುಗಳಿಗೆ ನುಗ್ಗುವನು. ಹಣ, ಧಾನ್ಯ-ಕೈಗೆ ಸಿಕ್ಕಿದ್ದನ್ನು ದೋಚುವನು. ಮನೆಗಳಿಗೆ ಬೆಂಕಿ ಹಚ್ಚುವನು. ರಾಜರಿಗೂ ಅವನನ್ನು ಅಂಕೆಯಲ್ಲಿ ಇಡುವುದು ಸಾಧ್ಯವಾಗಲಿಲ್ಲ.

ಅವನಿಗೆ ಬುದ್ಧಿ ಕಲಿಸುತ್ತೇನೆ ಎಂದು ರಾಯಣ್ಣ ಹೊರಟ.

ಕಾಡಿನ ಮಧ್ಯೆ ಒಂದು ಕಲ್ಲುಬಾವಿಯ ಹತ್ತಿರ ಭರಮನ ವಾಸ.

ತನ್ನ ಕಡೆಯವರನ್ನು ದೂರ ನಿಲ್ಲಿಸಿ ರಾಯಣ್ಣ ಒಬ್ಬನೇ ಹೋದ. ಭರಮ ಊಟ ಮಾಡುತ್ತಿದ್ದ. ಅವನ ಪಕ್ಕದಲ್ಲೆ ಬಂದೂಕು.

“ನಾನು ಸಂಗೊಳ್ಳಿ ರಾಯನಾಯಕ. ನಿನ್ನ ಕತೆ ಮುಗಿಸುತ್ತೇನೆ. ಊಟ ಮಾಡಿ ಬಾ” ಎಂದ.

ತಲೆಯೆತ್ತಿ ನೋಡಿದ ಭರಮ. ಸ್ವಲ್ಪವೂ ಆತಂಕ ಪಡಲಿಲ್ಲ.

“ಆಗಲೇಳು. ನೀನೂ ಊಟಮಾಡು ಬಾ” ಎಂದ ಭರಮ.

“ನೀನೇ ಊಟ ಮಾಡು. ಕಾದಿ‌ರ್ತೀನಿ ನಿ, ಬಾ” ಎಂದ ರಾಯಣ್ಣ.

ಊಟ ಮುಗಿಸಿ ಕತ್ತಿ ಹಿರಿದು ಹೊರಟ. ಎಲ್ಲರ ಎದೆ ನಡುಗಿಸುತ್ತಿದ್ದ ಭರಮ. ರಾಯಣ್ಣನೂ ಕತ್ತಿ ಹಿರಿದ.

ಕಾದಾಟದಲ್ಲಿ ಭರಮನೇ ಸೋತ. ರಾಯಣ್ಣ ಅವನ ತಲೆ ಕತ್ತಿರಿಸಿದ. ಅವನ ಶವವನ್ನು ಶಿವಗುತ್ತಿಯಲ್ಲಿ ಮರ್ಯಾದೆಯಿಂದ ಸಮಾಧಿಮಾಡಿದರು.

ಭರಮನ ಕಡೆಯವರೆಲ್ಲ ರಾಯಣ್ಣನ ಸೈನ್ಯ ಸೇರಿದರು.

ರಾಯಣ್ಣನೂ ಅವನ ಸೈನ್ಯದವರೂ ಇಂಗ್ಲಿಷರಿಗೆ ತಿಳಿಯದಂತೆ ಅರಣ್ಯದ ಹಾದಿ ಹಿಡಿದು ಗುಪ್ತ ರೀತಿಯಿಂದ ಪಯಣ ಮಾಡುತ್ತ ಕಿತ್ತೂರಿನತ್ತ ಬರುತ್ತಿದ್ದಂತೆ ಗುಳೇದಗುಡ್ಡ ಎಂಬ ಶ್ರೀಮಂತ ಪೇಟೆಯನ್ನು ಸುಲಿದು ಲಕ್ಷಾಂತರ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಬೆಳ್ಳಿ ಸಂಗ್ರಹಿಸಿದರು. ಬಸವಕ್ಕ ಎಂಬ ಶ್ರೀಮಂತ ವಿಧವೆಯೊಬ್ಬಳು ರಾಯಣ್ಣನನ್ನು ಮನೆಗೆ ಕರೆದೊಯ್ದು, ಹಾಲು ಹಣ್ಣು ಕೊಟ್ಟು ಆರತಿ ಬೆಳಗಿ ಸತ್ಕರಿಸಿ, ಅವನ ಕಾರ್ಯದಲ್ಲಿ ಜಯ ದೊರಕಲೆಂದು ಆಶೀರ್ವಾದ ಮಾಡಿದಳು.

ಚೆನ್ನಮ್ಮರಾಣಿ ಇನ್ನಿಲ್ಲ

ಒಂದು ತಿಂಗಳಿನ ದೀರ್ಘ ಪಯಣ ಮುಗಿಸಿ ರಾಯಣ್ಣನ ದಂಡು ಅವರ ಕೇಂದ್ರಸ್ಥಳವಾದ ಕೊಳ್ಳಕ್ಕೆ ಬಂದು ತಲುಪುತ್ತಿದ್ದಂತೆಯೇ ಬೈಲಹೊಂಗಲದಿಂದ ದುಃಖದ ಸಮಾಚಾರ ಬಂದಿತು. ಪಾರತಂತ್ರ್ಯದಲ್ಲಿ ಕೊರಗಿ ಸೊರಗಿ ಚೆನ್ನಮ್ಮರಾಣಿಯವರು ಕೊನೆಯುಸಿರು ಬಿಟ್ಟಿದ್ದರು. ತಕ್ಷಣವೇ ರಾಯಣ್ಣನೂ ಚನ್ನಬಸಪ್ಪನೂ ಕುದುರೆಗಳ ಮೇಲೆ ಹೊರಟು ವೇಷ ಮರೆಸಿಕೊಂಡು ರಾಣಿಯವರ ಅಂತ್ಯದರ್ಶನ ಪಡೆದರು. “ನಿಮ್ಮ ಆಶೀರ್ವಾದದಿಂದ ನಮ್ಮ ಕಾರ್ಯದಲ್ಲಿ ಯಶ ದೊರಕಲಿ ತಾಯಿ!” ಎಂದು ಮೌನವಾಗಿ ಬೇಡಿಕೊಂಡರು.

ಅವನ ಕೇಂದ್ರಸ್ಥಾನದಲ್ಲಿ ಆ ವೇಳೆಗಾಗಲೇ ಐನೂರು ಮಂದಿ ದಂಡಾಳುಗಳು ಸೇರಿದ್ದರು. ಅವರೆಲ್ಲರಿಗೂ ಒಂದೇ ಕಡೆಗೆ ಊಟ-ವಸತಿಗಳ ವ್ಯವಸ್ಥೆ ಮಾಡುವುದು ಸುಲಭವಾಗಿರಲಿಲ್ಲ. ಪ್ರತಿ ದಿನವೂ ಚೀಲಗಟ್ಟಲೆ ಅಕ್ಕಿ-ಜೋಳ ಬೇಕಾಗುತ್ತಿದ್ದಿತು. ಅಡವಿಯಲ್ಲಿದ್ದ ಕೊಳ್ಳಕ್ಕೆ ಅದನ್ನು ಸಾಗಿಸುವುದೂ ಒಂದು ಸಮಸ್ಯೆಯಾಗಿತ್ತು. ವೈರಿಗಳಿಗೆ ಅನುಮಾನ ಬಂದು ಕೆಲಸ ಕೆಟ್ಟೀತೆಂದು ಯೋಚಿಸಿ, ಐವತ್ತು ಜನ ಸೈನಿಕರ ಒಂದೊಂದು ಗುಂಪು ರಚಿಸಿ, ಅವರಿಗೆ ಒಬ್ಬೊಬ್ಬ ನಾಯಕನನ್ನು ನೇಮಿಸಿ, ಬೂರುಣಿಕಿ, ಹಳಿಯಾಳ, ಬಾಳಗುಂದ ಗುಡ್ಡಗಳಲ್ಲಿ ಅಡಗಿಸಿಡಬೇಕಾಯಿತು. ತನ್ನ ಜನರ ದಂಡಿಗೆ ಗಜವೀರನೇ ಅಧಿಪತಿಯಾದ. ಎಲ್ಲರೂ, ತಮ್ಮ ತಮ್ಮ ಧರ್ಮ-ದೇವತೆಗಳ ಆಣೆಮಾಡಿ, ರಾಯಣ್ಣನೊಡನೆ ಪೂರ್ಣ ನಿಷ್ಠೆಯಿಂದಿರುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಇಷ್ಟು ದೊಡ್ಡ ದಂಡನ್ನು ಕೆಲಸವಿಲ್ಲದೆ ಖಾಲಿ ಕೂಡಿಸುವ ಹಾಗೂ ಇರಲಿಲ್ಲ. ಎಂತಲೇ, ಮಾಸ್ತ ಮರಡಿಯಿಂದ ವೀರಮ್ಮಾಜಿಯ ದತ್ತುಪುತ್ರ ಶಿವಲಿಂಗಪ್ಪ ದೊರೆಯನ್ನು ಕರೆದುಕೊಂಡು ಬಂದು, ಅವನ ಹೆಸರಿನಲ್ಲಿ ಕಾಳಗಕ್ಕೆ ಅಣಿಯಾದರು. ಇಂಗ್ಲಿಷ್‌ಸೈನ್ಯದ ಚಲನವಲನಗಳನ್ನು ತಿಳಿದುಕೊಂಡು ಸುದ್ದಿಕೊಡಲು ಗೂಢಚಾರರ ಪಡೆಯೊಂದನ್ನು ನೇಮಿಸಲಾಗಿದ್ದಿತು.

ಚಳಿಗಾಲದ ಒಂದು ಸಂಜೆ, ರಾಯಣ್ಣ ತನ್ನ ಅನುಚರರೊಡನೆ ಕೊಳ್ಳದಲ್ಲಿ ಬೆಂಕಿ ಕಾಯಿಸುತ್ತ ಕುಳಿತಿದ್ದಾನೆ. ಗೂಢಚಾರರು ಬಂದು “ಬೀಡಿಯ ಖಜಾನೆಯಲ್ಲಿ ಸಾಕಷ್ಟು ಹಣ ಕೂಡಿದೆ” ಎಂದು ವರದಿ ಮಾಡಿದರು. ಆ ಖಜಾನೆಯನ್ನು ಲೂಟಿ ಮಾಡಲು ಅದೇ ಸುಸಮಯವೆಂದೂ ತಿಳಿಸಿದರು.

ಯುದ್ಧಕ್ಕಾರಂಭ

ಬೀಡಿಯ ಕಛೇರಿಯ ಮೇಲೆ ದಾಳಿ ನಡೆಸುವುದರ ಮೂಲಕ ಇಂಗ್ಲಿಷರ ವಿರುದ್ಧ ಯುದ್ಧಕ್ಕಾರಂಭವಾಯಿತು. ರಾಯಣ್ಣನ ಸೈನ್ಯ ನಸುಕಿನಲ್ಲಿಯೇ ಎದ್ದು, ಗಂಜಿ ಸೇವಿಸಿ, ಬೀಡಿಯತ್ತ ಧಾವಿಸಿತು. ಹಗಲಿನಲ್ಲಿಯೇ ನಿರ್ಭೀತವಾಗಿ ಊರಿನಲ್ಲಿ ಪ್ರವೇಶಿಸಿ ನೇರವಾಗಿ ಮಾಮಲೇದಾರರ ಕಛೇರಿಗೆ ಬಂದಿತು. ಈ ದಾಳಿಯ ಬಗೆಗೆ ಅಲ್ಲಿನ ಅಧಿಕಾರಿಗಳಿಗೆ ಯಾವ ತಿಳಿವಳಿಕೆಯೂ ಇರಲಿಲ್ಲ. ಎಂತಲೇ, ಅಲ್ಲಿ ಹೆಚ್ಚು ಜನ ಕಾವಲುಗಾರರೂ ಇರಲಿಲ್ಲ. ಖಜಾನೆಯನ್ನು ಕಾಯುತ್ತಿದ್ದ ಸಿಪಾಯಿಗಳನ್ನು ಹೊಡೆದೋಡಿಸಿ, ರಾಯಣ್ಣನ ಸೈನಿಕರು ಒಳನುಗ್ಗುತ್ತಿದ್ದಂತೆಯೇ ಬಂದೂಕು ದಾರಿಯೊಬ್ಬ ಅಡ್ಡ ಬಂದ. ಅವನನ್ನು ತಿವಿದು ಕೊಂದರು. ಮಾಮಲೇದಾದರೂ ಇನ್ನಿತರ ಅಧಿಕಾರಿಗಳೂ ಪಲಾಯನ ಹೇಳಿದ್ದರು. ಖಜಾನೆಯ ಕಬ್ಬಿಣದ ಪೆಟ್ಟಿಗೆ ಮುರಿದು ಅದರಲ್ಲಿದ್ದ ಹಣವೆಲ್ಲವನ್ನು ತೆಗೆದುಕೊಂಡು ಹೊರಟು, ಸಂಜೆಯೊಳಗಾಗಿ ಸಮಶೇರಗಡಕ್ಕೆ ಬಂದು ಆ ಹಾಳು ಕೋಟೆಯಲ್ಲಿ ಬಿಡಾರ ಹೂಡಿದರು.

ಅಂದು ೧೮೩೦ರ ಜನವರಿ ಒಂದನೆಯ ದಿನ, ಇಂಗ್ಲಿಷರಿಗೆ ಹೊಸ ವರ್ಷದ ಪ್ರಾರಂಭದ ದಿನ. ಹಬ್ಬದ ಸಂಭ್ರಮದ ದಿನ. ಸ್ವಾತಂತ್ರ್ಯ ವೀರ ರಾಯಣ್ಣ ಅವರಿಗೆ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದ. ಬೀಡಿಯ ಖಜಾನೆಯಲ್ಲಿ ಸಿಕ್ಕಿದುದು ಕೇವಲ ೧೯೦೦ ರೂಪಾಯಿ, ಸೈನಿಕರ ಊಟದ ಖರ್ಚಿಗಾಗಿ ವ್ಯಯವಾಯಿತು.

ದರೋಡೆಗಾರರಂತೆ ಲೂಟಿ-ಸುಲಿಗೆ ಮಾಡಲು ರಾಯಣ್ಣನಿಗೆ ಇಚ್ಛೆಯಿರಲಿಲ್ಲ. ಆದರೆ, ಅಂದಿನ ಪರಿಸ್ಥಿತಿಯಲ್ಲಿ ಬೇರೆ ಉಪಾಯವೂ ಇರಲಿಲ್ಲವಲ್ಲ? ಸೈನಿಕರ ಊಟ, ಉಡುಗೆ, ಶಸ್ತ್ರಾಸ್ತ್ರ, ಮದ್ದುಗುಂಡುಗಳ ಖರ್ಚು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು. ಶಿವಗುತ್ತಿ ರಾಜ್ಯದಿಂದ ಬಂದಿದ್ದ ದಂಡಾಳುಗಳಿಗಂತೂ ಕುರಿ-ಕೋಳಿಗಳ ಮಾಂಸವಿರದಿದ್ದರೆ ನಡೆಯುತ್ತಿರಲಿಲ್ಲ. ರಾಯಣ್ಣನೇನು ಶ್ರೀಮಂತನಲ್ಲ. ಸಹಾಯ ಮಾಡುವ ಧನಿಕ ಗೆಳೆಯರೂ ಅವನಿಗಿರಲಿಲ್ಲ. ಎಂತಲೇ, ತನ್ನ ಮನಸ್ಸಿನ ವಿರುದ್ಧವಾಗಿಯಾದರೂ ಆತ ಲೂಟಿ-ಸುಲಿಗೆ ಮಾಡಬೇಕಾಗಿ ಬಂದಿತು. ಹಳ್ಳಿಗಳಿಗೆ ಮುತ್ತಿಗೆ ಹಾಕಿ, ಅಲ್ಲಿಯ ಸೆಟ್ಟಿ ಸಾಹುಕಾರರನ್ನು ಕರೆಯಿಸಿ ಅವರಿಂದ ಐದಾರು ಸಾವಿರ ರೂಪಾಯಿ ವಸೂಲು ಮಾಡಬೇಕಾಯಿತು. ಸರಕಾರದ ಖಜಾನೆಗಳಿಗೆ ಕಟ್ಟಲು ರೈತರ ಕಂದಾಯದ ಹಣ ಸಾಗಿಸುತ್ತಿದ್ದವರನ್ನು ಹಿಡಿದು ಆ ಹಣವನ್ನೂ ವಶಪಡಿಸಿಕೊಳ್ಳಬೇಕಾಯಿತು.

“ಕಂದಾಯದ ಹಣವನ್ನು ರಾಯಣ್ಣ ಲೂಟಿ ಮಾಡುತ್ತಿದ್ದಾನೆ”-ಈ ಸಮಾಚಾರ ಇಂಗ್ಲಿಷರ ಕಂಪೆನಿಯ ಸರ್ಕಾರಕ್ಕೆ ತಿಳಿಯಿತು. ಅವನನ್ನು ಸೆದೆಬಡಿಯುವುದಕ್ಕಾಗಿ ಇಂಗ್ಲಿಷ್‌ಸೈನಿಕರ ಚಿಕ್ಕಚಿಕ್ಕ ತಂಡಗಳನ್ನು ಸರ್ಕಾರ ಕಳಿಸಿತು. ಆದರೆ, ರಾಯಣ್ಣನ ಸೈನ್ಯ ದಟ್ಟವಾದ ಅಡವಿಗಳಲ್ಲಿ ಅವಿತಿರುತ್ತಿದ್ದುದರಿಂದ ಇಂಗ್ಲಿಷರ ಆಟ ನಡೆಯದಂತಾಯಿತು. ಜನರಿಗೆ ರಾಯಣ್ಣ ಎಂದರೆ ಗೌರವ, ಪ್ರೀತಿ. ಅವರ ನೆರವೆಲ್ಲ ಅವನಿಗೆ. ಹಳ್ಳಿಗಳ ಹತ್ತಿರ ಇಂಗ್ಲಿಷರ ಸೈನ್ಯ ಹಾಯ್ದು ಹೋಗುವಾಗ ರೈತರಿಂದ ಅವರಿಗೆ ಕೊಂಚವೂ ಸಹಕಾರ ಸಿಕ್ಕುತ್ತಿರಲಿಲ್ಲ. ಎಷ್ಟೋ ಬಾರಿ ಕುಡಿಯುವ ನೀರು ಸಿಕ್ಕುವುದೂ ಕಠಿಣವಾಗುತ್ತಿತ್ತು. ರಾಯಣ್ಣ ತನ್ನ ಸೈನಿಕರೊಡನೆ ಇಂಗ್ಲಿಷ್ ಪಥಕಗಳ ಮೇಲೆ ಮಿಂಚಿನ ವೇಗದಿಂದ ಬಂದೆರಗಿ ಕೈಗೆ ಸಿಕ್ಕಿದ ಶಸ್ತ್ರಾಸ್ತ್ರಗಳನ್ನು ಅಪಹರಿಸಿಕೊಂಡು, ಬಂದ ಹಾಗೆಯೇ ತ್ವರೆಯಿಂದ ಮಾಯವಾಗುತ್ತಿದ್ದ.

ಗೋಧೊಳ್ಳಿ, ಸಂಪಗಾವಿ, ಖಾನಾಪುರ, ನಂದಗಡ, ಇಟಗಿ, ಅಂಕಲಗಿ, ಹಡಲಗಿ ಮೊದಲಾದ ಊರುಗಳ ಹತ್ತಿರ ಇಂಗ್ಲಿಷರ ದಂಡಿಗೂ ರಾಯಣ್ಣನ ದಂಡಿಗೂ ಚಿಕ್ಕಪುಟ್ಟ ಕಾಳಗಗಳು ನಡೆದವು. ಪ್ರತಿಯೊಂದು ಚಕಮಕಿಯಲ್ಲೂ ರಾಯಣ್ಣನ ಕೈಯೇ ಮೇಲಾಗುತ್ತಿದ್ದಿತು. ಇಂಗ್ಲಿಷ್ ಅಧಿಕಾರಿಗಳು ಚಿಂತೆಗೊಳಗಾದರು. ಸಂಗೊಳ್ಳಿಯ ಈ ಹಳಬನನ್ನು ಮಟ್ಟ ಹಾಕುವುದಾದರೂ ಹೇಗೆ?

ಸಂಪಗಾವಿ ಕಾಳಗ

ಕುಷ್ಣರಾವ್ ಎಂಬವನು ಆಗ ಸಂಪಗಾವಿಯ ಅಧಿಕಾರಿ ಆಗಿದ್ದ. ಕುಲಕರ್ಣಿ ಬಾಳಪ್ಪನ ಮಾತು ಕೇಳಿ, ರಾಯಣ್ಣನನ್ನು ಕಟಾಂಜನದಲ್ಲಿ ಬಂಧಿಸಿಟ್ಟಿದ್ದ ಅಧಿಕಾರಿ ಆತ. ತನ್ನ ಕೈಕೆಳಗಿನ ಹಳಬನೊಬ್ಬ ಇಷ್ಟು ದೊಡ್ಡ ಪುಂಡಾಟಿಕೆ ನಡೆಸುತ್ತಿದ್ದುದು ಕೃಷ್ಣರಾಯನಿಗೆ ಸವಾಲಿನಂತಾಗಿದ್ದಿತು. ಎಂತಲೇ, ರಾಯಣ್ಣನನ್ನು ತಾನೇ ಬಗ್ಗುಬಡಿಯುವುದಾಗಿ ವೀಳ್ಯ ಸ್ವೀಕರಿಸಿ, ಇಂಗ್ಲಿಷ್ ಮತ್ತು ದೇಶೀಯ ಸೈನಿಕರನ್ನು ಕೂಡಿಸಿಕೊಂಡು ಆತ ನಂದಗಡದ ಕಡೆಗೆ ಹೊರಟ. ಆ ಸಮಾಚಾರ ತಿಳಿಯುತ್ತಲೂ ರಾಯಣ್ಣ ನಂದಗಡ ತ್ಯಜಿಸಿ, ರಾತ್ರಿಯೆಲ್ಲ ಪಯಣ ಮಾಡಿ, ಬೆಳಗಾಗುವಷ್ಟರಲ್ಲಿ ಸಂಪಗಾವಿಗೆ ಬಂದುಮುಟ್ಟಿದ. ಆಗ ಆತನ ಜೊತೆಯಲ್ಲಿ ನಾಲ್ಕು ನೂರು ಜನ ಸೈನಿಕರಿದ್ದರು, ಆರು ಕುದುರೆಗಳಿದ್ದವು. ಕತ್ತಿ-ಕಠಾರಿ-ಈಟಿ-ಬಂದೂಕು ಯಾವುದರದೂ ಕೊರತೆಯಿರಲಿಲ್ಲ.

ಈ ಮಧ್ಯೆ ರಾಯಣ್ಣ ಕೆಲವರನ್ನು ಜಕ್ಕನಾಯಕನ ಕೊಪ್ಪ ಹಳ್ಳಿಗೆ ಕಳುಹಿಸಿದ. ಅವರು ಅಲ್ಲಿ ನುಗ್ಗಿ ಅಲ್ಲಿದ್ದ ಸರ್ಕಾರಿ ನೌಕರರನ್ನು ಹಿಡಿದು ಗಾಯಮಾಡಿದರು. ಸುದ್ದಿ ಕೃಷ್ಣರಾಯನಿಗೆ ತಲುಪಿತು. ನಂದಗಡದಲ್ಲಿ ರಾಯಣ್ಣ ಸಿಕ್ಕುತ್ತಾನೆ ಎಂದು ಹೊರಟ ಆತನಿಗೆ ಅಲ್ಲಿ ನಿರಾಸೆಯಾಗಿತ್ತು. ಜಕ್ಕನಾಯಕನಕೊಪ್ಪದಿಂದ “ರಾಯಣ್ಣನ ಕಡೆಯವರು ನುಗ್ಗಿದ್ದಾರೆ” ಎಂದು ಸುದ್ದಿ ಬರುತ್ತಲೇ, ರಾಯಣ್ಣ ಅಲ್ಲಿದ್ದಾನೆ ಎಂದು ಆ ಕಡೆ ಸಾಗಿದ. ರಾಯಣ್ಣನೇ ತನ್ನ ದಿಕ್ಕು ತಪ್ಪಿಸಲು ಹೀಗೆ ಮಾಡಿರಬಹುದು ಎಂದು ಆತನಿಗೆ ಹೊಳೆಯಲಿಲ್ಲ.

ಸಂಪಗಾವಿಯ ಅಗಸೆಯ ಬಾಗಲಿಗೆ ಕಾವಲು ಇಟ್ಟು ರಾಯಣ್ಣನ ಸೈನಿಕರು ತಾಲ್ಲೂಕು ಕಛೇರಿಯತ್ತ ನುಗ್ಗಿದರು. ಕಛೇರಿಯನ್ನು ಕಾಯುತ್ತಿದ್ದವರು ಈ ದಂಡು ಕಂಡು ಓಡಿ ಹೋದರು. ಕೆಲವು ತಿಂಗಳುಗಳ ಹಿಂದೆ ತಾನು ಸೆರೆಯಲ್ಲಿದ್ದ ಕಟಾಂಜನವನ್ನು ನೋಡುತ್ತಲೂ ರಾಯಣ್ಣನ ಕಣ್ಣಿನಲ್ಲಿ ನೀರಾಡಿತು. ಆ ಕಟಾಂಜನವನ್ನೇ ಮುರಿದು ಹಾಕಿ, ಕುರ್ಚಿ ಮೇಜುಗಳನ್ನು ಚೂರುಚೂರು ಮಾಡಿ, ಕಛೇರಿಯ ಕಾಗದಪತ್ರಗಳೆಲ್ಲವನ್ನೂ ನಾಶಗೊಳಿಸಿ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಮಸೀದಿಯ ಗುಮ್ಮಟದಲ್ಲಿ ಖಜಾನೆಯನ್ನು ಅಡಗಿಸಿಡಲಾಗಿದ್ದ ವಿಚಾರ ತಿಳಿಯುತ್ತಲೂ ದಂಡು ಅತ್ತ ಹೊರಳಿತು. ಜಕ್ಕನಾಯಕನಕೊಪ್ಪಕ್ಕೆ ಹೋದ ಕೃಷ್ಣರಾಯನಿಗೆ ರಾಯಣ್ಣ ಸಂಪಗಾವಿಗೆ ಬಂದಿದ್ದುದು ತಿಳಿಯಿತು. ಅವನು ಇತ್ತಕಡೆಗೇ ಧಾವಿಸಿಬರುತ್ತಿದ್ದ; ಈ ಸಮಾಚಾರ ರಾಯಣ್ಣನಿಗೆ ಗೊತ್ತಾಯಿತು.

ರಾಯಣ್ಣ ತನ್ನ ಸೈನ್ಯವನ್ನು ಶಿಸ್ತಿನಿಂದ ನಿಲ್ಲಿಸಿದ. ಸಂಪಗಾವಿಯ ಹೊರಭಾಗದಲ್ಲಿರುವ ದೊಡ್ಡ ಬಾವಿಯ ಹತ್ತಿರ ಉಭಯ ಸೈನ್ಯಗಳಿಗೂ ಯುದ್ಧ ನಡೆಯಿತು. ಕೃಷ್ಣರಾವ್ ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ರಾಯಣ್ಣ, ಚನ್ನಬಸಪ್ಪ, ಗಜವಿರ, ಯಲ್ಲನಾಯಕ ಮೊದಲಾದ ವೀರರ ಖಡ್ಗಗಳಿಗೆ ವೈರಿಗಳು ಆಹುತಿಯಾಗತೊಡಗಿದರು. ಅಷ್ಟರಲ್ಲಿಯೇ ಬೈಲಹೊಂಗಲದ ಕಡೆಯಿಂದ ಇಂಗ್ಲಿಷರ ಇನ್ನೊಂದು ಸೈನ್ಯ ಬರುತ್ತಿದ್ದ ವಾರ್ತೆ ಬಂದಿತು. ಎಂತಲೇ, ಅಂದಿನ ಯುದ್ಧ ನಿಲ್ಲಿಸಿ, ಸಂಪಗಾವಿ ತ್ಯಜಿಸಿ, ದೇಶನೂರ ಕೋಟೆಗೆ ಬಂದು ಬೀಡುಬಿಟ್ಟರು. ರಾಯಣ್ಣನ ಎಂಟು ಜನ ಸೈನಿಕರು ಕಾಳಗದಲ್ಲಿ ಮಡಿದು ವೀರಸ್ವರ್ಗ ಸೇರಿದರು.

ಸಂಗೊಳ್ಳಿ ರಾಯಣ್ಣನಿಗೆ ಜೈ

ದೇಶನೂರ ಕೋಟೆಯಲ್ಲಿ ಒಂದು ಇರುಳು ವಿರಮಿಸಿಕೊಂಡು, ಬೆಳಗ್ಗೆ ಹೊರಟು ಸಂಗೊಳ್ಳಿಗೆ ಬಂದರು. ಆರೇಳು ತಿಂಗಳುಗಳಿಂದೀಚೆಗೆ ರಾಯಣ್ಣ ತನ್ನ ಆ ಪ್ರೀತಿಯ ಊರಿಗೆ ಬಂದಿರಲಿಲ್ಲ. “ಕಿತ್ತೂರು ರಾಣಿಗೆ ಜೈ”, “ಸಂಗೊಳ್ಳಿ ರಾಯಣ್ಣಗೆ ಜೈ” ಎಂದು ಘೋಷಿಸುತ್ತ ಅವನ ದಂಡು ಸಂಗೊಳ್ಳಿಯಲ್ಲಿ ಪ್ರವೇಶಿಸುತ್ತಲೂ ಹಳ್ಳಿಯವರೆಲ್ಲರೂ ಹರ್ಷದಿಂದ ಬೀದಿಗಳಲ್ಲಿ ನೆರೆದು ಸ್ವಾಗತಿಸಿದರು. ಸುಮಂಗಲಿಯರು ಆರತಿ ಬೆಳಗಿ ಹರಿಸಿದರು. ಸೈನಿಕರೆಲ್ಲರಿಗೂ ಊಟ-ತಿಂಡಿ-ಹಾಲು-ಸಕ್ಕರೆ ಒದಗಿಸಿದರು. ಆನಂದಾಶ್ರುಗಳನ್ನುದುರಿಸುತ್ತಿದ್ದ ತಾಯಿ ಕೆಂಚವ್ವನ ಅಡಿಗಳಿಗೆರಗಿ, ಆಶೀರ್ವಾದ ಪಡೆದು ಚಾವಡಿಗೆ ಬಂದ ರಾಯಣ್ಣ. ಆ ಚಾವಡಿಗೂ ತನಗೂ ಇದ್ದ ಸಂಬಂಧವನ್ನು ನೆನೆದು ಅವನ ಕೊರಳು ಬಿಗಿದು ಕಣ್ಣಿನಲ್ಲಿ ನೀರಾಡಿತು. ಮತ್ತೆ ಆತ ತನ್ನನ್ನು ಸಂತೈಸಿಕೊಂಡು ಕುಲಕರ್ಣಿಯನ್ನು ಹಿಡಿಯಲೆಂದು ಅವನ ಮನೆಗೆ ಹೊರಟ. ಆದರೆ, ಕುಲಕರ್ಣಿ ಅಲ್ಲಿದ್ದರೆ ತಾನೆ? ಅವನ ಹೆಂಡಿರು ಮಕ್ಕಳು ಅಳುತ್ತ ಬಂದು ರಾಯಣ್ಣನ ಕಾಲು ಹಿಡಿದುಕೊಂಡರು. ಅವರಿಗೆ ಅಭಯವನ್ನಿತ್ತು ಹೊರಡುವುದರಲ್ಲಿದ್ದಾಗಲೇ ಇಂಗ್ಲಿಷರ ದಂಡು ಅತ್ತ ಬರುತ್ತಿದ್ದ ಸುದ್ದಿ ತಿಳಿಯಿತು. ರಾಯಣ್ಣ ಒಡನೆಯೇ ತನ್ನ ಸೈನ್ಯವನ್ನು ಕಿತ್ತೂರಿನತ್ತ ನಡೆಸಿದ. ಅಲ್ಲಿ ಗುರು ಸಿದ್ಧೇಶ್ವರನ ಗದ್ದುಗೆಗೆ ಕಾಯಿ ಒಡೆಯಿಸಿ, ಪೂಜೆ ಸಲ್ಲಿಸಿ, ಕಬ್ಬಿನ ಗಾಣಕ್ಕೆ ಹೋಗಿ ಹಾಲು ಕುಡಿದು, ಕಿತ್ತೂರಿನಲ್ಲಿ ಇಂಗ್ಲಿಷರ ಪ್ರಚಂಡ ಸೈನ್ಯವಿದ್ದುದರಿಂದ, ಇನ್ನಷ್ಟುಬಲವಾದ ಸಿದ್ಧತೆ ಮಾಡಿಕೊಂಡು ಅನಂತರವೇ ಕಿತ್ತೂರಿನ ಮೇಲೆ ದಾಳಿ ಮಾಡುವುದೆಂದು ನಿಶ್ಚಯಿಸಿ ಕೊಳ್ಳಕ್ಕೆ ಬಂದರು. ಅವರನ್ನು ಹಿಡಿಯಲು ಹೊರಟಿದ್ದ ಯಾವ ವೈರಿ ಸೈನ್ಯದ ಕೈಗೂ ಅವರು ಸಿಕ್ಕಲಿಲ್ಲ.

ಪಿತೂರಿ!

ಇಂಗ್ಲಿಷರು ಚಿಂತಾಕ್ರಾಂತರಾದರು. ರಾಯಣ್ಣನನ್ನು ಸದೆಬಡಿಯುವುದು ಸುಲಭವಲ್ಲವೆಂಬುದಂತೂ ಅವರಿಗೆ ಮನವರಿಕೆಯಾಗಿ ಹೋಗಿದ್ದಿತು. ಅವನು, ಅವನ ಸೈನ್ಯ ಎತ್ತ ಹೆಜ್ಜೆ ಹಾಕಬಹುದು ಎಂಬುದೇ ಅವರಿಗೆ ತಿಳಿಯುತ್ತಿರಲಿಲ್ಲ. ರಾಯಣ್ಣ ಬಹು ಬುದ್ಧಿವಂತ. ತನ್ನ ಸೈನ್ಯದ ಚಲನವಲನದ ವಿಷಯ ಸುಳ್ಳು ಸುದ್ದಿ ಹಬ್ಬಿಸುವನು. ಇದು ಇಂಗ್ಲಿಷ್ ಅಧಿಕಾರಿಗಳ ಕಿವಿಗೆ ಬೀಳುವುದು. ಇದೇ ನಿಜವೆಂದು ನಂಬಿ ಅವರ ಸೈನ್ಯ ತೆಗೆದುಕೊಂಡು ಹೋಗಿ ಬೆಪ್ಪಾಗಿ ಹಿಂದಿರುಗುವರು. ಅವರಿಗೆ ಅಲ್ಲಲ್ಲಿ ಶತ್ರು ಸೈನಿಕರು ಗುಂಪುಗುಂಪಾಗಿ ಬಂದೂಕು ಹಿಡಿದು ನಿಂತಂತೆ ಕಾಣಿಸುವುದು. ಸರಿ, ಇಂಗ್ಲಿಷರು ಮದ್ದುಗುಂಡು ಕರೆಯುವರು. ನಿಂತ ಶತ್ರು ಸೈನಿಕರು ಹಾಗೆಯೇ ನಿಂತಿರುವರು. ಇಂಗ್ಲಿಷರು ಹತ್ತಿರ ಹೋಗಿ ನೋಡಿದರೆ, ಅವೆಲ್ಲ ನಿಜವಾದ ಸೈನಿಕರ ಹಾಗೆಯೇ ದೂರದಿಂದ ಕಾಣುವ ಬೊಂಬೆಗಳು, ಅವುಗಳ ಕೈಯ್ಯಲ್ಲಿ ನಕಲಿ ಬಂದೂಕುಗಳು. ಜನರ ಬೆಂಬಲ ಎಲ್ಲ ರಾಯಣ್ಣನಿಗೇ.

ಇನ್ನು ರಾಯಣ್ಣನನ್ನು ಹಿಡಿಯುವುದಾದರೆ ಪಿತೂರಿಯಿಂದಲೇ ಹಿಡಿಯಬೇಕು. ಅದನ್ನುಳಿದು ಬೇರೆ ಮಾರ್ಗವಿರಲಿಲ್ಲ. ಪಿತೂರಿ, ಮೋಸ, ವಿಶ್ವಾಸಘಾತಕಗಳಿಂದಲೇ ಈ ದೇಶವನ್ನು ಗೆದ್ದುಕೊಂಡಿದ್ದ ಇಂಗ್ಲಿಷರು ಈಗಲೂ ಅದೇ ಕ್ರಮಕೈಗೊಳ್ಳಲು ನಿಶ್ಚಯಿಸಿದರು. ಪಿತೂರಿಗೆ ಸೇರುವಂಥ, ರಾಯಣ್ಣನ ನಂಬುಗೆಯ ಜನ ಯಾರು ಎಂದು ಹುಡುಕತೊಡಗಿದರು.

ಕಿತ್ತೂರಿನ ಹತ್ತಿರಲ್ಲಿಯೇ ಖೊದಾನಪುರ ಮತ್ತು ನೇಗಿನಹಾಳ ಎಂಬ ಊರುಗಳು. ಅವುಗಳ ಗೌಡರುಗಳು ಕಿತ್ತೂರಿನ ದೊರೆಗಳಿಗೆ ದೂರದ ಬಂಧುಗಳು. ಕಿತ್ತೂರಿನ ಏಳಿಗೆಯನ್ನು ಕಂಡು ಅವರಿಗೆಂದೂ ಸಂತೋಷವಾಗಿರಲಿಲ್ಲ. ಆ ರಾಜ್ಯ ಮುಳುಗಿದಾಗ ಅವರಿಗೆ ಸಮಾಧಾನವೇ ಆಗಿದ್ದಿತು. ಈಗ. ರಾಯಣ್ಣನಂಥ ಯಃಕಶ್ಚಿತ್ ಹಳಬನೊಬ್ಬನು ಆ ರಾಜ್ಯವನ್ನು ಪುನಃ ಸ್ಥಾಪಿಸಲು ಹೊರಟುದುದು ಆ ಗೌಡರುಗಳಿಗೆ ಸರಿ ಬಂದಿರಲಿಲ್ಲ.

ಕಿತ್ತೂರು ಸೀಮೆಯಲ್ಲಿನ ಗೌಡರು, ದೇಸಾಯರು, ಇನಾಮದಾರರು, ದೇಶಪಾಂಡೆಗಳೇ ಮೊದಲಾದವರೆಲ್ಲರಿಗೂ ಕಾಗದ ಬರೆದು, ತನಗೆ ಸಹಾಯ ಮಾಡಬೇಕೆಂದು ಭಿನ್ನವಿಸಿಕೊಂಡಿದ್ದ ರಾಯಣ್ಣ. ಖೊದಾನಪುರದ ಲಿಂಗನಗೌಡರಿಗೂ ನೇಗಿನಹಾಳದ ವೆಂಕನಗೌಡರಿಗೂ ಸಹ ಆತ ಮನವಿ ಮಾಡಿಕೊಂಡಿದ್ದ. ಈ ವಿಷಯವು ಇಂಗ್ಲಿಷ್ ಗೂಢಚಾರರಿಗೆ ಗೊತ್ತಾಗಲು ತಡವಾಗಲಿಲ್ಲ.

ಸಂಪಗಾವಿಯ ಅಧಿಕಾರಿ ಕೃಷ್ಣರಾಯನಿಗೆ ಕಂಪೆನಿ ಸರಕಾರದ ಆಜ್ಞೆಯಾಯಿತು. ಅವನು ಒಡನೆಯೇ ಲಿಂಗನ ಗೌಡರನ್ನು ಕರೆಯಿಸಿಕೊಂಡನೊ.

“ರಾಯಣ್ಣನ ಜೊತೆಗೆ ನಿಮ್ಮದೂ ಏನೋ ಕಾರಸ್ಥಾನ ನಡೆದಿದೆಯಂತಲ್ಲ ಗೌಡರೆ?”

ಲಿಂಗನಗೌಡರು ಹೆದರಿ ಕೈಕಾಲು ಕಳೆದುಕೊಂಡರು. ರಾಯಣ್ಣನಿಂದ ಪತ್ರ ಬಂದುದು ಇವರಿಗೆ ಗೊತ್ತಾಗಿದೆ. ಹಾಗಾದರೆ?

“ಏನಿಲ್ಲ, ಏನಿಲ್ಲ ಸಾಹೇಬರೆ, ನಿಮ್ಮ ಮುಂದೆ ಸತ್ಯವನ್ನೇ ಹೇಳ್ತೀನಿ. ಸಹಾಯ ಮಾಡಬೇಕೆಂದು ರಾಯ ಚೀಟಿ ಕಳಿಸಿದ್ದ. ನಾನು ಅದಕ್ಕೆ ಉತ್ತರವನ್ನೇ ಕೊಡಲಿಲ್ಲ.”

“ಪತ್ರದ ಬಗೆಗೆ ನಮಗೆ ಆಗಲೇ ತಿಳಿಸಲಿಲ್ಲವೇಕೆ? ಧಾರವಾಡದ ಕಲೆಕ್ಟರ್ ಬಹದ್ದೂರರು ನಿಮ್ಮ ಮೇಲೆ ಸಿಟ್ಟಾಗಿದ್ದಾರೆ. ನೀವೂ ಮತ್ತು ನೇಗಿನಹಾಳದ ಗೌಡರೂ ರಾಯಾಗೆ ಒಳಗಿಂದೊಳಗೇ ಸಹಾಯ ಮಾಡುತ್ತಿರಬೇಕೆಂದು ಕಲೆಕ್ಟರ್ ಬಹುದ್ದೂರರಿಗೆ ಅನ್ನಿಸಿದೆ.”

“ಘಾತವಾಯಿತು!” ಎಂದು ಕೊಂಡರು ಲಿಂಗನಗೌಡರು. ಕಳವಳದಿಂದ ಕೂಡಿದ ಧ್ವನಿಯಲ್ಲಿ ಹೇಳಿದರು: “ನಿಜ ಹೇಳೋದೇ ಅದರ ಕಿತ್ತೂರ ದೊರೆಗಳಿಗೂ ನಮಗೂ ಎಂದೂ ಒಳ್ಳೆಯ ಸಂಬಂಧ ಇರಲಿಲ್ಲ. ಈಗ ಆ ಪುಂಡರಾಯಾ ಬಂಡಾಯ ಹೂಡಿದ್ದು ನಮಗೆ ಸರಿಯಾಗಿಲ್ಲ.”

“ನನಗೂ ಸ್ವಲ್ಪ ಗೊತ್ತು ಈ ವಿಚಾರ. ಕಿತ್ತೂರ ದೇಸಾಯಿ ಬಾಪೂ ಸಾಹೇಬರು ನಿಮ್ಮ ಹುಡುಗನನ್ನು ದತ್ತು ತೆಗೆದುಕೊಳ್ಳದೆ ಮಾಸ್ತಮರಡಿಯ ಗೌಡರ ಮಗನನ್ನು ತೆಗೆದುಕೊಂಡರು ಅಲ್ಲವೆ?”

“ಹೌದ್ರಿ ಸಾಹೇಬರೆ”.

“ಅನ್ಯಾಯ, ಅನ್ಯಾಯ! ಕಿತ್ತೂರು ರಾಜ್ಯ ಮುಳುಗಿತೂ ಅಂತ ನಿಮಗೇನು ದುಃಖವಾಗಿಲ್ಲ, ಅಲ್ಲವೇ?”

“ಯಾಕೆ ದುಃಖ ಆಗಬೇಕು? ಅದು ಇದ್ದರೆಷ್ಟು? ಹೋದರೆಷ್ಟು ಚೆನ್ನಮ್ಮನವರು ದುಡುಕಿ ಲಡಾಯಿ ಮಾಡಿ ಥ್ಯಾಕರೆ ದೊರೆಗಳನ್ನು ಕೊಂದು ತಾವಾಗಿಯೇ ರಾಜ್ಯ ಕಳೆದುಕೊಂಡರು.”

“ನಿಮ್ಮ ಅಭಿಪ್ರಾಯ ಕಲೆಕ್ಟರ್ ಬಹದ್ದೂರರಿಗೆ ಗೊತ್ತಾಗಬೇಕಲ್ಲ ಗೌಡರೆ? ನಾಳೆ ಬರ‍್ರಿ ಧಾರವಾಡಕ್ಕೆ. ವೆಂಕನಗೌಡರಿಗೂ ಹೇಳಿಕಳಿಸ್ತೀನಿ” ಎಂದ ಕೃಷ್ಣರಾವ್.

ಕಲೆಕ್ಟರ್ ನಿಸ್ಬತ್ ಹೆಚ್ಚು ಮಾತನ್ನೇ ಆಡಲಿಲ್ಲ. ನೂರಿನ್ನೂರು ಜನ ಹಳಬರನ್ನು ಕರೆದುಕೊಂಡು ರಾಯಣ್ಣನನ್ನು ಕೂಡಿಕೊಂಡು, ಅವನಿಗೆ ನಂಬುಗೆ ಹುಟ್ಟುವಂತೆ ನಡೆದುಕೊಂಡು, ಅನಂತರ ಸಂಧಿ ಸಾಧಿಸಿ ಅವನನ್ನು ಹಿಡಿದುಕೊಡಬೇಕೆಂದು ಗೊತ್ತಾಯಿತು. ಗೌಡರಿಬ್ಬರೂ ಅದಕ್ಕೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಒಪ್ಪಿಕೊಳ್ಳದಿದ್ದರೆ ಅವರನ್ನೇ ಬಂಧಿಸಿ ಸೆರೆಯಲ್ಲಿಡುತ್ತಿದ್ದ ಕಲೆಕ್ಟರ್; ಅವರ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿದ್ದ. ನಂಬಿಸಿ ದ್ರೋಹ ಮಾಡುವುದು ಹೇಸಿ ಕೃತ್ಯವೆಂದು ಮನಸ್ಸು ಹಿಂಜರಿದರೂ ಗೌಡರಿಗೆ ಬೇರೆ ದಾರಿಯೇ ಇರಲಿಲ್ಲ.

ಹುಲಿಯನ್ನು ಹಿಡಿದರು

ಮರುದಿವಸ ತಳವಾರನೊಬ್ಬನನ್ನು ಕಳುಸಿ, ತಾವಿಬ್ಬರೂ ದಂಡು ತೆಗೆದುಕೊಂಡು ಬರುವುದಾಗಿ ತಿಳಿಸಿದರು. ರಾಯಣ್ಣ ತೆಗೆದುಕೊಂಡು ಬರುವುದಾಗಿ ತಿಳಿಸಿದರು. ರಾಯಣ್ಣ ಸರಳ ಸ್ವಭಾವದವನು. ಈ ಗೌಡರುಗಳು ತನಗೆ ಮೋಸಮಾಡಬಹುದೆಂಬ ಕಲ್ಪನೆಯೂ ಅವನ ಹತ್ತಿರ ಸುಳಿಯಲಿಲ್ಲ.

ಸೈನ್ಯವನ್ನು ಶೇಖರಿಸಲು ಗೌಡರುಗಳು ಕಷ್ಟಪಡಬೇಕಾಗಿರಲಿಲ್ಲ. ಕಂಪೆನಿ ಸರಕಾರದ ದೇಶೀಯ ಸೈನ್ಯದ ಒಂದು ತುಕುಡಿಯನ್ನೇ ಅವರ ವಶಕ್ಕೆ ಕೊಡಲಾಯಿತು. ಕಿತ್ತೂರಿನ ಸೈನಿಕರ ಸಮವೇಷ ಧರಿಸಿ ಸಿದ್ಧವಾಯಿತು. ಆ ಬಾಡಿಗೆಯ ದಂಡು. ಅಪರಿಚಿತರಿಗೆ ಪ್ರವೇಶಿಸಲು ಅಶಕ್ಯವಾದಂಥ ದಟ್ಟಡವಿಯ ನಡುವೆ ಇದ್ದ ರಾಯಣ್ಣನ ಗುಪ್ತಸ್ಥಳಕ್ಕೆ ಗೌಡರನ್ನೂ ಅವರ ದಂಡನ್ನೂ ಕರೆದೊಯ್ದ ಒಬ್ಬ ದೂತ. ಕೊಳ್ಳದಲ್ಲಿದ್ದ ಚಿಕ್ಕ ಚಿಕ್ಕ ಗುಹೆಗಳಲ್ಲಿ ರಾಯಣ್ಣನೂ ಅವನ ಸೈನಿಕರೂ ಬಿಡಾರ ಹೂಡಿದ್ದರು. ರಾಯಣ್ಣನ ಗುಹೆಯ ಸುತ್ತಲೂ ಹಬಸೀ ಸೈನಿಕರ ಬಲವಾದ ಪಹರೆಯಿತ್ತು. ಹೊಸದಾಗಿ ಬಂದ ಈ ಗೌಡರುಗಳನ್ನು ಅವರಾರೂ ಪೂರ್ತಿಯಾಗಿ ನಂಬಲಿಲ್ಲ. ರಾಯಣ್ಣ ಮಾತ್ರ ಅವರನ್ನು ಅಕೃತ್ರಿಮವಾಗಿ ವಿಶ್ವಾಸದಿಂದಲೇ ಬರಮಾಡಿಕೊಂಡ. ಹಣ್ಣು-ಹಾಲು-ವೀಳ್ಯ ತರಿಸಿಕೊಟ್ಟು ಉಪಚರಿಸಿದ.

ಒಂದೆರಡು ವಾರಗಳ ಕಾಲ ರಾಯಣ್ಣನೂ ಗೌಡರುಗಳೂ ಒಟ್ಟಾಗಿಯೇ ಹೊರಟು ಹಲವು ಲೂಟಿಯ ಪ್ರಕರಣಗಳಲ್ಲಿ ಭಾಗವಹಿಸಿದರು. ಗಿಡದಹುಬ್ಬಳ್ಳಿಯ ಲೂಟಿಯಿಂದ ಹಿಂತಿರುಗಿ ಬಂದಾಗ ನಡುಹಗಲಿನ ಸಮಯವಾಗಿತ್ತು. ಸೈನಿಕರೆಲ್ಲರಿಗೂ ಹಸಿವಾಗಿದ್ದುದರಿಂದ ಅವರು ಊಟಕ್ಕೆ ಕುಳಿತರು. ರಾಯಣ್ಣ ಮಾತ್ರ ಸಮೀಪದಲ್ಲಿದ್ದ ಡೋರಿಯ ಹಳ್ಳಕ್ಕೆ ಹೋಗಿ ಸ್ನಾನ ಮಾಡಿ ಬರುವುದಾಗಿ ಹೇಳಿ, ಕೈಯಲ್ಲಿ ಕತ್ತಿ ಹಿಡಿದುಕೊಂಡು ಹೊರಟ.

“ನಾನೂ ಬರ್ತೀನಿ ರಾಯಣ್ಣಾ” ಎಂದ ಲಕ್ಕಣ್ಣ. ಅವನು ನೇಗಿನಹಾಳದ ಗೌಡರ ಹಳಬ. ರಾಯಣ್ಣನಿಗೂ ಅವನಿಗೂ ಗೆಳತನ. ಲಕ್ಕನನ್ನೇ ಉಪಯೋಗ ಮಾಡಿಕೊಂಡು ರಾಯಣ್ಣನನ್ನು ಹಿಡಿಯಲು ಹೊಂಚುಹಾಕಿದ್ದರು ಗೌಡರು.

ಬಿಡಾರದ ಗುಹೆಗಳಿಂದ ನೂರಿನ್ನೂರು ಮಾರು ದೂರದಲ್ಲಿತ್ತು ಹಳ್ಳ. ಸುತ್ತಲೂ ಗಿಡಗಂಟೆಗಳಿದ್ದುದರಿಂದ ಅಲ್ಲಿ ಏನಾದರೂ ಆಕಸ್ಮಿಕ ನಡೆದರೆ ಗುಹೆಗಳಲ್ಲಿದ್ದವರಿಗೆ ಗೊತ್ತಾಗುವಂತಿರಲಿಲ್ಲ.

ರಾಯಣ್ಣ ಅಂಥ ದಡ್ಡನೇನೂ ಆಗಿರಲಿಲ್ಲ. ಖಡ್ಗವನ್ನು ಬಾಯಲ್ಲಿ ಹಿಡಿದುಕೊಂಡೇ ಆತ ಈಜಾಡುತ್ತಿದ್ದ. ಈಜು ಮುಗಿಯುತ್ತಲೂ ಮೇಲೆ ಬಂದು ಅಂಗಿ ಹಾಕಿಕೊಂಡು, ಗುಳಿಗೀ ಚಲ್ಲಣ ಧರಿಸಿಕೊಳ್ಳಲು ಬಾಗಬೇಕಾಗಿ ಬಂದಾಗ ಮಾತ್ರ ಖಡ್ಗವನ್ನು ಲಕ್ಕನ ಕೈಗೆ ಕೊಟ್ಟ. ಲಕ್ಕ ಅತ್ತಿತ್ತ ನೋಡಿದಂತೆ ನಟಿಸಿ, “ಅಯ್ಯೋ ರಾಯಣ್ಣಾ, ಘಾತವಾಯಿತೋ! ನಿನ್ನ ಹಿಡೀಲಿಕ್ಕೆ ಗೌಡರ ಸಿಪಾಯಿಗಳು ಬಂದರಪೊ!” ಎಂದವನೇ ಖಡ್ಗ ಹಿಡಿದುಕೊಂಡು ಓಡಿಹೋದ. ತಾನು ಮೋಸಹೋದುದು ಆಗ ಗೊತ್ತಾಯಿತು ರಾಯಣ್ಣನಿಗೆ. ಗೌಡರುಗಳ ಸೂಚನೆಯಂತೆ ಮೊದಲೇ ಗಿಡಗಂಟೆಗಳಲ್ಲಿ ಅವಿತಿದ್ದ ಸಿಪಾಯಿಗಳು ಧಾವಿಸಿ ಬಂದು ರಾಯಣ್ಣನನ್ನು ಹಿಡಿದರು. ಅವನೊಬ್ಬ, ಅವರು ಆರು ಜನರು. ಅವನ ಕೈಯಲ್ಲಿ ಯಾವ ಶಸ್ತ್ರವೂ ಇರಲಿಲ್ಲ, ಅವರು ಮಾತ್ರ ಕತ್ತಿ-ಕಠಾರಿ-ಬಂದೂಕುಗಳಿಂದ ಸಜ್ಜಿತರಾಗಿದ್ದರು. ಅಂಥ ಸ್ಥಿತಿಯಲ್ಲೂ ಎದೆಗೆಡದೆ ಸಾಕಷ್ಟು ಪ್ರತಿಭಟಿಸಿದ ರಾಯಣ್ಣ. ಆದರೆ, ಆರು ಜನ ಶಸ್ತ್ರದಾರಿಗಳೆದುರು ಒಬ್ಬನ ಆಟ ಎಷ್ಟು ಹೊತ್ತು ನಡಯಬೇಕು? ರಾಯಣ್ಣನ ಕೈಕಾಲು ಕಟ್ಟಿ ಹೆಡೆಮುರಿಗೆ ಬಿಗಿದು, ಬಾಯಿಗೂ ಬಟ್ಟೆ ತುರುಕಿ ಕೂಗಿಕೊಳ್ಳದಂತೆ ಮಾಡಿದರು.

ಕಿತ್ತೂರು ನಾಡಿನ ಹುಲಿ ಮೋಸಕ್ಕೆ ಬಲಿಯಾಯಿತು.

ಅವನ ಸೈನಿಕರು ಅಲ್ಲಲ್ಲಿ ಚದುರಿಹೋದರು. ಅವರಲ್ಲಿ ಪ್ರಮುಖರಾಗಿದ್ದವರನ್ನು ಸರಕಾರ ಬಂಧಿಸಿತು. ಧಾರವಾಡದ ಕೋಟೆಯಲ್ಲಿ ವಿಚಾರಣೆ ನಡೆದು, ರಾಯಣ್ಣನಿಗೂ ಅವನ ಆರು ಜನ ಸಂಗಡಿಗರಿಗೂ ಗಲ್ಲಿನ ಶಿಕ್ಷೆ ವಿಧಿಸಲಾಯಿತು. ಬಿಚ್ಚುಗತ್ತಿಯ ಚನ್ನಬಸಪ್ಪ ಮಾತ್ರ ಕಡೆಯವರೆಗೂ ವೈರಿಗಳ ಕೈಗೆ ಸಿಕ್ಕಲಿಲ್ಲ.

ಹುತಾತ್ಮ ರಾಯಣ್ಣ

ಒಂದು ಬೆಳಗ್ಗೆ ನಂದಗಡದಲ್ಲಿ ರಾಯಣ್ಣನನ್ನೂ ಅವನ ಸಂಗಡಿಗರನ್ನೂ ಗಲ್ಲಿಗೇರಿಸಲಾಯಿತು. ಅಂತ್ಯದರ್ಶನ ಪಡೆಯಲು ನಂದಗಡಕ್ಕೆ ಬಂದಿದ್ದ ತಾಯಿ ಕೆಂಚವ್ವನಿಗೆ ಅಡ್ಡಬಿದ್ದು, ಹರಕೆ ಪಡೆದು, ನಗುನಗುತ್ತಲೇ ಗಲ್ಲುಗಂಬ ಏರಿದ ರಾಯಣ್ಣ. ಬಾಳನಾಯಕ, ಬಸಲಿಂಗಪ್ಪ, ಕರಿಬಸಪ್ಪ, ಭೀಮಪ್ಪ, ಕೆಂಚಪ್ಪ ಮತ್ತು ಅಪ್ಪಾಜಿ ಇವರೂ ಗಲ್ಲಿಗೇರಿ ಹುತಾತ್ಮರಾದರು.

ಅವರೆಲ್ಲರನ್ನೂ ಅಲ್ಲಿಯೇ ಸಮಾಧಿ ಮಾಡಲಾಯಿತು. ರಾಯಣ್ಣನ ಸಮಾಧಿಯ ಮೇಲೆ ಆಲದ ಸಸಿಯೊಂದನ್ನು ಹಚ್ಚಿದ ಚನ್ನಬಸಪ್ಪ, ಎಷ್ಟೋ ವರ್ಷಗಳ ಕಾಲ ಆತ ಬೈರಾಗಿಯಾಗಿ ಅಲ್ಲಿಯೇ ಇದ್ದನಂತೆ.

ರಾಯಣ್ಣನ ಸ್ಮಾರಕವಾಗಿ ಈಗಲೂ ಅಲ್ಲಿಯೇ ಇದೆ ಆಲದ ಮರ; ಆತನ ಕೀರ್ತಿಯಂತೆಯೇ ವಿಶಾಲವಾಗಿ ಬೆಳೆದಿದೆ.