(ಸಂಗ್ಯಾ ಬಾಳ್ಯಾ ಒಂದೊಂದು ದಿಕ್ಕಿನಿಂದ ಬರುವರು)

ಸಂಗ್ಯಾ : ಏನ ಜಾತ್ರಿ, ಏನ ಜಾತ್ರಿ ಸಡಗರ!

ಬಾಳ್ಯಾ : ಏನ ಮಂದಿ ಏನ ಮಂದಿ ಏನ ಮಂದೆಪಾ!

ಸಂಗ್ಯಾ : ಗೆಳೆಯಾ ಬಾಳಣ್ಣ, ಜಾತ್ರಾಗ ಬಂದ ನೀನಾದರು ಏನೇನ ಕಂಡಿ? ಅದನಾದರು ಹೇಳಬೇಕಾದೀತ ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ಮೊಂಡ ಬಾಲ, ಉದ್ದ ಕೊಂಬ ಹಂಡ ಹಣಚಿಕ್ಕ ಹೋರಿ ಓಡೋಡಿ ಬಂದರ ಜಾತ್ರಿ ಚೆದರಿ ಭಾಗಾನ ಭಾಗ ಆತಲೇ ಹುಡಗಾ.

ಸಂಗ್ಯಾ : ಗೆಳೆಯಾ ಬಾಳಣ್ಣ, ಮತ್ತಾದರೂ ಏನ ಕಂಡಿ?

ಬಾಳ್ಯಾ : ಗೆಳೆಯಾ ಸಂಗಣ್ಣಾ, ಜಾತ್ರೀ ಹಂತ್ಯಾಕೊಂದ ಒಡ್ಡ ಇತ್ತು. ಒಡ್ಡಿನ ಮ್ಯಾಲೊಂದ ಹೆಣ ಬಿದ್ದಿತ್ತು. ಹೆಣದ ಮ್ಯಾಲ ಹಿಂಡ ಹದ್ದ ಕುಂಡ್ರತಿದ್ದವು. ಹಿಂಡ ಹದ್ದ ಏಳುತಿದ್ದವು!

ಸಂಗ್ಯಾ : ಗೆಳೆಯಾ ಬಾಳಣ್ಣ, ಬರೇ ಹೇಣಾ ದನಾ ಇವನ್ನs ಕಂಡ್ಯೋ? ಇನ್ನೇನಾದರೂ ಕಂಡ್ಯೊ?

ಬಾಳ್ಯಾ : ಗೆಳೆಯಾ ಸಂಗಣ್ಣಾ, ನನ್ನ ಕಣ್ಣಿಗಂತೂ ಇವs ಕಂಡವು. ನೀ ಇನ್ನೇನಾದರು ಮಜಕೂರ ಕಂಡಿದ್ದರ ಹೇಳಬೇಕಾದೀತ ನೋಡು.

ಸಂಗ್ಯಾ : ಗೆಳೆಯಾ ಬಾಳಣ್ಣ, ನಾ ಕಂಡದ್ದ ಹೇಳಲೇನೋ?

ಬಾಳ್ಯಾ : ಅಗದಿ ಚಂದವಾಗಿ ಹೇಳುವಂಥವನಾಗು.

ಸಂಗ್ಯಾ : ಒಂದು ಹೆಣ್ಣ!
ಒಂದು ಹೆಣ್ಣ ಕಂಡೀನೊ ಬಾಳಣ್ಣ ||

ಊರವೊಳಗ|
ಊರವೊಳಗ ಇದ್ದಾಂಗ ರತಿದೇವೀನ ||

ನಾಗರಹಾವ|
ನಾಗರಹಾವಿನ್ಹಾಂಗ ನಡ ಸಣ್ಣ ||

ನಡಿನಾಗ|
ನಡಿನಾಗ ಇಟ್ಟಾಳೊ ವಡ್ಹ್ಯಾಣ ||

ಹೂವಿನ ಕುಬಸ|
ಹೂವಿನ ಕುಬಸ ಇತ್ತಪ್ಪಾ ಎದೀಮ್ಯಾಲ ||

ದಾಳಂಬರಿ|
ದಾಳಂಬರಿ ಹಲ್ಲ ಕನ್ನಡಿಗಲ್ಲ ||

ಗೆಳೆಯಾ ಬಾಳಣ್ಣಾ ಏನ ಹೇಳ್ಲಿ ಏನ ಹೇಳ್ಲಿ? ಹುಡುಗಾ ಸಾಲಂಗಡಿ ದಾಟಿ ಗುಡೀಗಿ ನಡದರ, ಹಾದ್ಯಾಗ ಕಡಾನ್ ಕೋಲ್ಮಿಂಚ ಹೊಡಧಾಂಗಾಗಿ ದಡಾನ ಕೆಳಗೆ ಬಿದ್ನಿ. ಎರಡೂ ಮಣಕೈಯಾ ಮಣಕಾಲ ಒಡದ ಹೋದವು. ಇದೇನಂತ ನೋಡಿದರ ಹುಡುಗಾ ― ಲಿಂಬೀ ಹಣ್ಣಿನ್ಹಾಂಗ ಮೈಬಣ್ಣ, ನಡ ಸಣ್ಣ, ಕಾಡಿಗಿ ಕಣ್ಣ, ನಡಿನ್ಯಾಗ ವಡ್ಯಾಣ, ಕಾಲಾಗ ಪೈಜಾಣ ― ಎದೀಮ್ಯಾಲ ಹೂವಿನ ಕುಬಸದ ಹೆಣ್ಣ ನೋಡಿ ಬಾಳ್ಯಾ ಮುಚ್ಚ್ಯಾವೋ ಕಣ್ಣಾ!

ಬಾಳ್ಯಾ : ಗೆಳೆಯಾ ಸಂಗಣ್ಣಾ, ಇನ್ನೂ ಹೆಂಗಿದ್ದಳು ಹೇಳುವಂಥವನಾಗು

ಸಂಗ್ಯಾ : ಹಣೀಮ್ಯಾಲ ಕುಂಕುಮ ರೇಖಾ, ಹಿಕ್ಕಿದ ಬೈತಲಿ, ಹೂ ಮುಡಕೊಂಡ ಬಾಳ್ಯಾ ನವಿಲಿನ್ಹಾಗ ಕುಣಕೋತ ಬಂದ್ಲು ….

ಬಾಳ್ಯಾ : ಗೆಳೆಯಾ ಸಂಗಣ್ಣಾ ಅಕೀ ಜೋಡಿ ಯಾರಿದ್ದರೋ?

ಸಂಗ್ಯಾ : ನಮ್ಮತ್ತಿ ಪರಮ್ಮ ಇದ್ಲು. ಈಕಿ ವಸ್ತಾವಡಿವಿ ಅಲಂಕಾರ ತಲೀತನಕ ಶಿಂಗಾರಾಗಿ ಸರಾಸರಾ ಕೈಬೀಸಿ ದರಕಾರಿಲ್ದs ಹೋದಳು ನೋಡೋ.

ಬಾಳ್ಯಾ : ಗೆಳೆಯಾ ಸಂಗಣ್ಣಾ. ಇದಕ್ಕ ಬಂದ ನನಗೇನ ಮಾಡಂದಿ?

ಸಂಗ್ಯಾ : ಸಾಹಸ ಮಾಡಿ ಒಡಸೋ ಬಾಳ್ಯಾ ಆಕಿ ಮನಸಾ
ಆಗತಾಳೊ ಕೈವಾಸ
ಹಂಗಾದರ ಕುಸಿ ಆತೋ ನನ್ನ ಮನಸಾ ||

ರಾತ್ರಿ ಹಗಲಿ ಬೀಳತಾವು ಆಕಿ ಕನಸಾ
ಅದರ ಕೈವಾಸ
ಕಡಕೊಂಡ ಬಿದ್ಧಾಂಗಪಾ ಕೈಲಾಸ ||

ಮರಮರ ಮರಗತೇನೊ ಮನದಾಗ
ಅರಿವಿಲ್ಲೊ ಶಂಕರಗ
ಮರಬಿಟ್ಟ ಮರತಾನಪ್ಪ ಭೂಮೀಮ್ಯಾಗ ||

ಮನೀಕಡೆ ಇಲ್ಲೊ ಬಾಳ್ಯಾ ನನ್ನ ಧ್ಯಾಸ
ಸಾಯತೇನೊ ಉಪವಾಸ
ಗಂಗಾನ ಮ್ಯಾಲಿ ಆಗೇತೊ ನನ್ನ ಮನಸಾ ||

ಗೆಳಯಾ ಬಾಳಣ್ಣಾ ನಾ ಹೇಳಿದ್ದಾದರೂ ತಿಳಿದ ಬಂತೇನು?

ಬಾಳ್ಯಾ : ಗೆಳೆಯಾ ಸಂಗಣ್ಣಾ, ಅದೇನು ಚಂದವಾಗಿ ಹೇಳುವಂಥವನಾಗು.

ಸಂಗ್ಯಾ : ಗೆಳೆಯಾ ಬಾಳಣ್ಣ, ಆಕಿ ಯಾರು ಏನು ಅಂತ ನಮ್ಮತ್ತಿ ಪರಮ್ಮನಿಂದ ಎಲ್ಲಾ ತಿಳಕೊಂದಿದೇನು, ಲಗಳೇರ ಗಂಗಾ ಅಂತ ಆಕಿ ಹೆಸರು. ದೇವರ ಪೂಜಿ ಮಾಡೋವಾಗ ಆಕೀ ಕೊರಳಾಗಿನ ಸರಿಗಿ ಬಿಚ್ಚಿ ಕೊಂಡಿದೇನು. ಈ ಸರಿಗಿ ಕೊಡೋ ನೆವ ಮಾಡಿಕೊಂಡು ಹೋಗು. ನನ್ನ ಹಂತ್ಯಾಕ ಬಂದ ಎಲಿ ಅಡಕಿ ತಿಂದ ನಾಕ ಮಾತ ಮಾತಾಡಿ ಹೋಗನ್ನು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ನನಗೇನು ಕುಂಟಲತನ ಮಾಡಂದಿಯೇನೊ?

ಸಂಗ್ಯಾ : ಗೆಳಯಾ ಬಾಳಣ್ಣಾ, ಇದು ಕುಂಟಲತನ ಹೆಂಗಾಯ್ತು?

ಸಂಗ್ಯಾ : ಹೆಂಗಸ ಮಾಡಿದರs ಕುಂಟಲತನ. ಗಂಡಸ ಮಾಡಿದರ ಅದಕ್ಕಿಂತ ಹೆಚ್ಚಲ್ಲೇನೋ? ಮೊದಲs ಲಗಳೇರಂದರ ಕೆಟ್ಟಮಂದಿ ಖೊಟ್ಟಿ ಸೂಳೀಮಕ್ಕಳು, ಗೊತ್ತಾದರ ನನ್ನಂಥಾ ಬಡವನ್ನ ಕಡದ ಹಾಕಾಕಿಲ್ಲೇನೊ? ಹೊಂಗಲದೂರಾಗ ಬೆಳಕೊಂಡ ಹುಡುಗ ನಾನಾ, ಇಂಥಾ ಕೆಲಸ ಹೆಂಗ ಮಾಡಲಿ?

ಸಂಗ್ಯಾ : ಗೆಳಯಾ ಬಾಳಣ್ಣಾ ಜೀವಜೀವದ ಗೆಳಿತಾನಂದರ ಏನೊ?

ಬಾಳ್ಯಾ : ಗೆಳೆಯಾ ಸಂಗಣ್ಣಾ, ಏನೊ?

ಸಂಗ್ಯಾ : ನನ್ನ ಕೆಲಸಾ ನೀ ಮಾಡಬೇಕು; ನಿನ್ನ ಕೆಲಸ ನಾ ಮಾಡಬೇಕು.

ಬಾಳ್ಯಾ : ಹಂಗಾದರ ಈ ಕೆಲಸ ನಾ ಮಾಡಬೇಕಾಯ್ತುನ್ನು.

ಸಂಗ್ಯಾ : ಹೌಂದ ನೋಡು.

ಬಾಳ್ಯಾ : ಹಂಗಾದರ ಆಕಿ ಇರೂ ಠಿಕಾಣ ಹೇಳಿದರ ನಾನಾದರು ಹೋಗಿ ಬರತೇನ್ನೋಡು.

ಸಂಗ್ಯಾ : ಗೆಳಯಾ ಬಾಳಣ್ಣಾ, ಕೆಳಗಿನ ಪ್ಯಾಟೀ ಹಿಡಿದ ಹೋದರ, ಕೂಟಿನಾಗ ಗೊಂಬೀ ಗುಡಿ ಸಿಗತೈತಿ. ಗೊಂಬಿ ಗುಡೀ ಮುಂದ ಒಂದ ಟೆಂಗಿನ ಗಿಡ ಐತಿ. ಗಿಡದ ಮ್ಯಾಲೊಂದು ಪಾರಿವಾಳ ಕುಂತಿರುತೈತಿ. ಆ ತೆಂಗಿನ ಗಿಡದ ಮನೀನs ಆಕೀ ಮನಿ ನೋಡ ಹುಡುಗಾ.

ಬಾಳ್ಯಾ : ಪಾರಿವಾಳ ಹಾರಿ ಹೋಗಿದ್ದರ?

ಸಂಗ್ಯಾ : ನಾ ಕಣ್ಣಿಟ್ಟ ಪಾರಿವಾಳ ಅದೆಲ್ಲಿ ಹೋದೀತೊ?

ಬಾಳ್ಯಾ : ಗೆಳೆಯಾ ಸಂಗಣ್ಣಾ, ನಾ ಅವರ ಮನೀಗಿ ಹೋಗೋದ ಯಾರಾದರು ನೋಡಿದರ ಹೆಂಗೊ?

ಸಂಗ್ಯಾ : ಅದೇನ ದೊಡ್ಡ ಮಾತೊ? ತಂಬಾಕ ಸೇದೋ ನೆವ ಮಾಡಿ, “ತಂಗೀ ಒಂದ ಬೆಂಕೀ ಕೆಂಡಾ ಕೊಡಬೇ” ― ಅಂತ ಹೋಗು. ಬಾಗಲಾ ತಗೀತಾಳ. ಒಳಗ ಹೋಗು. ಗಪ್ಪನ ನೆಲಾ ಹಿಡದ ಕೂತಬಿಡು. “ತಂಗೀ, ನಿಮ್ಮುವೇನರೆ ವಡಿವಿ ಆಭರಣ ಹೋಗ್ಯಾವೇನಂತ ಸಣ್ಣಾಗಿ ಮಾತಿನೆಳಿ ತಗಿ. ಮಾತಿಗಿ ಮಾತ ಬಂದ ನನ್ನ ಹೆಸರ ಹೇಳು. ನನ್ನ ರೂಪಾ, ಶ್ರೀಮಂತಿಕೆ ಬೆಳಿಬೆಳಿಸಿ ಹೇಳು. ಕೂಳಾ ನೀರಾ ಬಿಟ್ಟ ನಿನಗಾಗಿ ಉಪವಾಸ ಸಾಯ್ತಾನಂತ ಹೇಳು. ಒಂದs ದಿನ ತಡಮಾಡಿದರ ಹೆಣಾ ಆಗತಾನಂತ ಹೇಳು. ಹೇಳಿ ಕರಕೊಂಬಾ ಹೋಗು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ನಾನಾದರು ಹೋಗತೇನು, ನೀ ಆದರೂ ಹಿಂದ ಸರಿವಂಥವನಾಗು.

(ಸಂಗ್ಯಾ ಹಿಂದೆ ಸರಿಯುವನು. ಬಾಳ್ಯಾ ಒಂದು ದಿಕ್ಕಿನಲ್ಲಿ ಮರೆಯಾಗುವನು.)