(ಪರಮ್ಮ ಸಂಗ್ಯಾನ ರುಂಬಾಲು ಕೈಯಲ್ಲಿ ಹಿಡಿದುಕೊಂಡು ಬರುವಳು.)

ಪರಮ್ಮ : ತಂಗೀ ಗಂಗಾ, ಮನಿಯೊಳಗಿದ್ದರೆ ಇತ್ತಕಡೆ ಬರುವಂಥವಳಾಗು.

ಗಂಗಿ : (ಒಳಗಿನಿಂದಲೇ)
ಹೊರಗ ಬಂದ ಕರೆಯುವಂಥವರು ಯಾರವರು?

ಪರಮ್ಮ : (ರುಂಬಾಲು ಒಂದು ಕಡೆ ಬಚ್ಚಿಡುತ್ತ)
ನನ ಮಗಳs ಹೊರಗ ಬಂದ ಗುರುತಾ ಹಿಡಿ ಅಂತಿದ್ದೇನ್ನೋಡು.

ಗಂಗಿ : (ಹೊರಬಂದು)
ಯಾರು ಪರಮ್ಮೇನು?

ಪರಮ್ಮ : ಹೌಂದ ನೋಡs, ನನ್ನ ಮಗಳ

ಗಂಗಿ : ಎಮ್ಮಾ , ಇಂದ ಇಷ್ಟ ತಡಮಾಡಿ ಯಾಕ ಬಂದಿ?

ಪರಮ್ಮ : ನನ ಮುದುಕ ಬಿಡೋದಿಲ್ಲ ಎವ್ವಾ

ಗಂಗಿ : ಪರಮ್ಮಾ, ನೀ ಅಂದರ ನಿನ್ನ ಮುದುಕಗ ಅಷ್ಟೊಂದ ಪ್ರೀತೇನ?

ಪರಮ್ಮ : ಅದೇನ ಪರಿತ್ಯೊ! ದೆವ್ವೊ! ಒಂದೂ ತಿಳೀಧಾಂಗ ಆಗೇತೇ ನನ ಮಗಳ! ಬಿಟ್ಟ ಒಂದ ಗಳಿಗಿ ಹೊರಗ ಹೋದರ ತಂಡಿ ಹತ್ತತೈತೇ ಮುದಕೀ ಅಂತ ಹಲುಬತೈತೇ ಎವ್ವಾ.

ಗಂಗಿ : ಅಷ್ಟು ಪ್ರೀತಿ ಮಾಡಿದರೆ ನಿನಗ್ಯಾಕ ಕಸವಿಸಿ ಆಗಬೇಕೆ ಪರಮ್ಮಾ?

ಪರಮ್ಮ : ಪಿರಿತಿ ಅದ್ದೂರಿ ಏನ ಹೇಳ್ಲೆ ನನ ಮಗಳs! ಊರಾಗ ಜಾತ್ರಿ ಸಡಗರ, ಅದೆಂತಾದೋ ನಾಗಿನ ಸಿನೇಮಾ ಬಂದೈತಿ. ನೋಡಿ ಬರತೇನೊ ಮುದುಕಾ ಅಂದರ ಮನ್ಯಾಗs ಸಿನೇಮಾ ತೊರಸ್ತೇನ ಬಾ ಅಂತೈತೇ ಎವ್ವಾ.

ಗಂಗಿ : ಇಷ್ಟು ಬುದ್ಧಿ ನನ್ನ ಗಂಡಗ ಹೋಳೀಲಿಲ್ಲ ನೋಡ.

ಪರಮ್ಮ : ನಿನ ಗಂಡನ ಸುದ್ದೀ ಹೇಳಬ್ಯಾಡ ತಾಯೀ; ಬೇಕಾದರ ಇನ್ನsಟ ನನ್ನ ಮುದುಕನ ಸುದ್ದೀನs ಹೇಳತೇನ ಕೇಳ.

ಗಂಗಿ : ಪರಮ್ಮಾ ಅದೇನ ಹೇಳುವಂಥವಳಾಗು.

ಪರಮ್ಮ : ನನ್ನ ಮುದುಕನ ಕಣ್ಣ ತಪ್ಪಿಸಿ ದೇವರ ಜಾತ್ರಿಗಿ ಹೋಗಿದ್ದೆ. ನನ ಮಗಳು ಪಿರಿತ್ಯಾಕಿ ಅಂತ್ಹೇಳಿ ದೇವರ ಪರಸಾದ ತಂದೇನು ತಗೊಂಡು ತಿನ್ನುವಂಥವಳಾಗು.

ಗಂಗಿ : ಎಮ್ಮಾ ನಿನ್ನ ಪರಸಾದ ತಗೊಂಡ ಇರಪಕ್ಷಿ ಬಸವಂತಗ ಕೊಡತೇನು.

ಪರಮ್ಮ : ನನ್ನ ಮಗಳ ನಿನ್ನ ಸಲುವಾಗಿ ತಂದೇನಿ, ನೀ ತಿನ್ನು. ಆ ಬಸವಣ್ಣ ಅಂದರ ಸಾಮಾನ್ಯ ದೇವರಲ್ಲs ಎವ್ವಾ! ಗಂಡಸನ್ನ ಒಯ್ದ ಹೆಂಗಸನ್ನ ಮಾಡತಾನ, ಹೆಂಗಸನ್ನ ಒಯ್ದ ಗಂಡಸನ್ನ ಮಾಡತಾನ! ಅಂಥಾ ದೇವರಿಗಿ ನಿಂದೆ ಮಾಡಿಧಾಂಗ ಆಗತೈತಿ ಸುಮ್ಮನ ತಿನ್ನು.

ಗಂಗಿ : ಪರಮ್ಮಾ ತಿಂದೇನ್ನೋಡ.

ಪರಮ್ಮ : ಹಂಗಾದರ ಸಿಕ್ಕಿ ನೋಡ.

ಗಂಗಿ : ಪರಮ್ಮಾ ಯಾಕ?

ಪರಮ್ಮ : ಇದ ನಾ ತಂದದ್ದು ಉಂಡಿ ಅಲ್ಲ. ದೇವರ ಪರಸಾದು ಅಲ್ಲ. ಮೇಲ್ಮನಿ ಸಂಗ್ಯಾ ಕೊಟ್ಟ ಕಳಿಸಿದ್ದ. ಅವನ ಉಂಡಿ ತಿಂದೀ ಅಂದಮ್ಯಾಲ ನನ್ನ ಮಗಳು ಅನ್ನದs ಋಣಾ, ಅವ ಹೇಳಿಧಾಂಗ ಕೇಳಬೇಕ ನೋಡ.

ಗಂಗಿ : ಪರಮ್ಮಾ  ಈ ಮಾತ, ಇದs ಅಂದಿ, ಇನ್ನೊಮ್ಮಿ ಅಂದರ ಬಾಯಾಗಿನ ಹಲ್ಲ ಉದುರ್ಯಾವು. ಇರಪಕ್ಷಿ ಬಸವಂತಗ ಈ ಸುದ್ದಿ ಗೊತ್ತಾದರ ನಮ್ಮಿಬ್ಬರ ರುಂಡಾ ಚೆಂಡಾಡ್ಯಾರು. ಸುಮ್ಮನ ಬಂದ ಹಾದಿಂದ ಹಿಂದ ಹೋಗು.

ಪರಮ್ಮ : ಏನs ಗಂಗವ್ವಾ, ನಿಂದಾ, ಸಂಗ್ಯಾಂದಾ, ನನಗ ಗೊತ್ತಿಲ್ಲಂದಿ? ನೀರ ತರೋವಾಗ ಅವ ಹಳ್ಳ ಒಗದ ಬೆರಳ ತೋರಸ್ತಿದ್ದ. ನೀ ಸೆರಗವಾರಿ ಮಾಡಿ ಹುಬ್ಬ ಹಾರಸ್ತಿದ್ದಿ. ಇದೇನ ನನಗ ಗೊತ್ತಿಲ್ಲಂದಿ?.

ಗಂಗಿ : ಪರಮ್ಮಾ , ನಿನ್ನ ಮಾತ ಕೇಳಿದರ ಒಗತಾನ ಹರದ ಹೋದಾವು. ನಾ ಅತ್ತೀಮನಿ ಸೊಸಿ, ಇಂಥಾ ಅಪವಾದ ತಂದ ನನ್ನ ಕೊರಳಿಗಿ ಹಾಕಬ್ಯಾಡಾ. ಸುಮ್ಮನ ಹೋಗತೀಯೋ, ಇರಪಕ್ಷಿ ಬಸವಂತನ್ನ ಕರಿ ಅಂತೀಯೊ

ಪರಮ್ಮಾ : ಅಯ್ ನನ್ನ ಶಿವನ! ಇದ್ದ ಮಾತ ಹೇಳಿದರ ನಿನಗ ಸಿಟ್ಟ ಬಂತು? ಆಂ? ಇಕಾ, ಇಲ್ಲಿ ಸಂಗ್ಯಾನ ರುಂಬಾಲ ಹೆಂಗ ಬಂತ ಹಾಂಗಾದರ? ನನಗs ಪಂಟ ಹೊಡೀತಿ? ನೀ ಯಾಕ ಕರೀತಿ, ನಾನs ಕರೀತೇನ ತಡಿ, ಏ ಇರಪಕ್ಷಿ ಬಸವಂತಾ ಬರ್ಯೊ!

ಗಂಗಿ : ಏ ಪರಮ್ಮಾ ಹಂಗ್ಯಾಕೆ ಒದರತಿ? ರುಂಬಾಲ ನೀನs ತರಲಿಲ್ಲಾ? ಹಿಂಗಲ್ಲಾ ಬೋದಾ ಮಾಡಿ ನನ್ನ ಬಾಳ್ವೇಕ ಬಾಧಾ ಮಾಡೀ.

ಪರಮ್ಮಾ : ಸಂಗ್ಯಾನ ರುಂಬಾಲ ನಾ ಹೆಂಗ ತರಲಿ? ನಾ ಯಾಕ ತರಲಿ? ತಡಿ ಕರೀತೇನ ― ಏ ಇರಪಕ್ಷಿ ಬಸವಂತಾ ಬರ್ಯೋ

ಗಂಗಿ : ಏ ಪರಮ್ಮಾ, ಈರ್ಯಾ ಇರಪಕ್ಷಿ ಬಸವಂತಾ ಊರಾಗs ಕೆಟ್ಟ ಮಂದಿ. ಸುದ್ದಿ ಗೊತ್ತಾದರ ಏನ ಮಾಡ್ಯಾರು? ಯಾಕs ಜೀವಬಲಿ ಕೊಡಬೇಕಂತಿ?

ಪರಮ್ಮಾ : ಯಾಕ ಈರ್ಯಾ ಈರ್ಯಾ ಅಂತ ಬಾಯಿ ಬಾಯಿ ಬಿಡತೀಯ ಗಂಗಾ? ಅವನ ಅಲ್ಲೇನ ಯಾಡ ದುಡ್ಡ ಲಾಭಕ್ಕ ಆಸೇ ಮಾಡಿ ಹರೇದ ಹೇಂತೀನ ಬಿಟ್ಟ ವ್ಯಾಪಾರಕ್ಕ ಹೋದ? ನನ್ನಂಥಾ ಮುದಕಿಗಿ ಇನ್ನs ಹರೇದ ಕುಬೆ ಮೈತುಂಬ ಹರದಾಡತೈತಿ. ನಿನ್ನಂಥಾಕಿಗಿ ಹೆಂಗಂತ ತಿಳಕೋಬ್ಯಾಡ? ಕೇಳs ಗಂಗವ್ವಾ. ನನ ಮಗಳ, ನನ್ನ ಬಿಟ್ಟ ಈ ಸುದ್ದಿ ಇನ್ನೊಬ್ಬರಿಗಿ ಹತ್ತೀತ ಹೆಂಗ? ರೂಪದಾಗ, ನನ ಮಗಳ ಸಂಗ್ಯಾ ನಿವಳ, ನಿನ್ನ ವಾರಿಗಿ. ನಾಕ ಮಾತ ಮಾತಾಡಿ, ಎಲೀ ಅಡಿಕಿ ತಿಂದ ಅವನ ಜೋಡಿ ಕೂಡಿಬಿಡು. ಊರಾಗಿನ ಮಂದಿ ನಿನ್ನ ಮನೀ ಕಡೇನ ಕಣ್ಣಿಟ್ಟಕೊಂಡ ಕುಂತಿರತಾರು? ಕಾಣಬಾರದs ಎಳೀ ದೀಪದ ಕುಡಿಹಂತಾ ಮೈ ಒಣಗಿಸಿಕೋತ ಕುಂತೀದಿ. ಮುಂದ ಬೇಕಂದಾಗ ಸಿಗಾಣಿಲ್ಲ.

ಒಲ್ಲಿನೆನ ಬ್ಯಾಡ ಮಗಳs
ಗೆಣಿತನ ನಿವಳ
ಮೇಲ್ಮನಿ ಸಂಗ್ಯಾಗೋಳ ||

ರೂಪದಾಗ ಸಂಗ್ಯಾ ನಿವಳ
ಕೇಳ ಗಂಗಾ
ತೋಳದ ಮುತ್ತಿನ ಹವಳಾ ||

ಸೀರೀ ಕುಬಸ ಜರತಾರ
ಉಟಗೊಂಡ ಮೆರಿಯೆ
ಸರಗಿ ಬಂಗಾರ ಬಳಿಯೆ ||

ಗಂಗಿ : ಪರಮ್ಮಾ , ಹೋಗಿ ಸಂಗ್ಯಾನ ಕರಕೊಂಡ ಬರುವಂಥವಳಾಗು

ಪರಮ್ಮಾ : ಈ ಮಾತು ಖರೆ ಹೌಂದಲ್ಲ?

ಗಂಗಿ : ಖರೆ ನೋಡ

ಪರಮ್ಮಾ : ಕೈಯಾಗ ವಚನಾ ಕೊಡ ಹಾಂಗಾದರ. ವಚನಾ ತಪ್ಪಿಸೋದಿಲ್ಲ ಹೌಂದಲ್ಲ?

ಗಂಗಿ : ಕೊಟ್ಟ ವಚನ ತಪ್ಪವಳಲ್ಲ ನಾನಾ
ಕೇಳ ನೀನಾ |
ಮೂರೂ ಸಂಜೀಲೆ ಕರಕೊಂಡ ಬಾರs ನೀನಾ ||

ಲೇಪ ತಡಿಯಾ ಹಾಸಿ ಜಮಖಾನಾ
ಜಮಖಾನಾ |
ನಾಕು ದಿಕ್ಕೀಗೆ ಇಡುವೇನು ಸಮೇನಾ ||

ಊಂಚ ಗುಲಾಬಿ ಎಣ್ಣಿ ತರತೇನ
ತರತೇನ |
ಮೂರು ಸಂಜೀಲೆ ಕರತಾರ ಸಂಗ್ಯಾನ ||

(ಪರಮ್ಮ ಹೋಗುವಳು.)