(ಬಾಳ್ಯಾ ಬರುವನು)
ಬಾಳ್ಯಾ : ತಂಗೀ ಗಂಗವ್ವಾ, ಮನೆಯಲ್ಲಿದ್ದರ ಇತ್ತ ಕಡೆ ಬರುವಂಥವಳಾಗು.
ಗಂಗಿ : (ಒಳಗಿಂದಲೇ)
ಏನಪಾ, ಅಗಸರವನಾಗಿದ್ದರ ಅರಿವಿ ನಡುಮನ್ಯಾಗ ಇಟ್ಟ ಹೋಗು.
ಬಾಳ್ಯಾ : ಅಗಸ ― ನಿಮ್ಮಣ್ಣ ಆಗಿದ್ದಾನು. ಹೊರಗ ಬಂದ ಸ್ವಲ್ಪ ಗುರುತಾ ಹಿಡಿ ಅಂತಿದ್ದೇನ್ನೋಡು.
ಗಂಗಿ : ಏನಪಾ, ಕಟಗಿ ಹೊರಿ ತಂದಿದ್ದರ ನೀರೊಲಿ ಮುಂದ ಚೆಲ್ಲಿ ಹೋಗು.
ಬಾಳ್ಯಾ : ಏನವಾ ತಂಗಿ, ಅವ ನಿನ್ನ ತಮ್ಮ ಆಗಿದ್ದಾನು. ಹೊರಗೆ ಬಂದ ಗುರುತಾ ಹಿಡಿ ಅಂತಿದ್ದೇನ್ನೋಡು.
ಗಂಗಿ : ಏನಪಾ, ಹಲ್ಲು ಹೊರಿ ತಂದಿದ್ದರ ಅಲ್ಲೇ ಇಟ್ಟ ಹೋಗು.
ಬಾಳ್ಯಾ : ಏನವಾ ತಂಗಿ, ಹುಲ್ಲ ಹೊರಿ ಮಾರೋವಂಥಾವ ನಿಮ್ಮಪ್ಪ ಆಗಿದ್ದಾನು. ಹೊರಗ ಬಂದ ಸ್ವಲ್ಪ ಗುರುತಾ ಹಿಡಿ ಅಂತದ್ದೇನ್ನೋಡು.
ಗಂಗಿ : (ಹೊರಬಂದು)
ಯಾರು ಬಡವ ಬಾಳಣ್ಣೇನು?
ಬಾಳ್ಯಾ : ತಂಗಿ, ಹೌಂದು ನೋಡುವಾ.
ಗಂಗಿ : ಎಣ್ಣಾ, ಕಂಬಳಿ ಹಾಸಿದೇನು, ಮ್ಯಾಲ ಕೂರವಂಥವರಾಗರಿ.
ಬಾಳ್ಯಾ : ತಂಗೀ ನಾನಾದರು ಕುಂತಿದ್ದೇನ್ನೋಡು.
ಗಂಗಿ : ಎಣ್ಣಾ, ಬೆಲ್ಲ ತಿಂದ ನೀರ ಕುಡಿವಂಥವರಾಗರಿ.
ಬಾಳ್ಯಾ : ತಂಗೀ, ನಾನಾದರು ಬೆಲ್ಲ ತಿಂದ ನೀರ ಕುಡದ್ದೇನ್ನೋಡು.
ಗಂಗಿ : ಎಣ್ಣಾ, ಎಲಿ ಅಡಿಕೆ ಹಾಕುವಂಥವರಾಗರಿ.
ಬಾಳ್ಯಾ : ತಂಗೀ, ನಾನಾದರು ಎಲಿ ಅಡಿಕೆ ಹಾಕಿದ್ದೇನ್ನೋಡು.
ಗಂಗಿ : ಎಣ್ಣಾ, ಭಾಳ ದಿನಕ ಈ ತಂಗೀ ಮನಿಗಿ ಬಂದ ಕಾರಣೇನು? ಚೆಂದದಿಂದ ಹೇಳುವಂಥವರಾಗಿರಿ.
ಬಾಳ್ಯಾ : ತಂಗೀ ನಾ ಮೊನ್ನಿ, ಬೆಳಗಾವಿಗೆ ಹೋಗಿ ನನ್ನ ಹೇಂತಿಗೊಂದ ಬಂಗಾರ ಸರಿಗಿ ತಂದೇನು. ಆ ಸರಿಗಿ ಚೆಲೋ ಐತ್ಯೋ ಇಲ್ಲೊ ― ನೋಡಿ ತಿಳಿಸುವಂಥವಳಾಗು.
(ಕೊಡುವನು).
ಗಂಗಿ : ಎಣ್ಣಾ ಈ ಸರಗಿ ನಂದಿದು.
ಬಾಳ್ಯಾ : ಏನಪಾ ತಂಗಿ, ಈ ಸರಗಿ ನಿಂದs ಅಂತ ಹೆಂಗ ಗುರುತಾ ಹಿಡಿದಿ?
ಗಂಗಿ : ಈ ಸರಗಿ ಮ್ಯಾಲ ನನ್ನ ಗಂಡನ ವಿಳಾಸ ಐತಿ.
ಬಾಳ್ಯಾ : ತಂಗೀ ಸರಿಗಿ ನಿಂದs ಇದ್ದರ ಇರಬೌದು. ಇದು ನನಗೇನೂ ಸಿಕ್ಕಿಲ್ಲ. ಮೇಲ್ಮನಿ ಸಂಗ್ಯಾಗ ಸಿಕ್ಕೇತಿ…. ಇರಪಕ್ಷಿ ಬಸವಂತಾ ಮನ್ಯಾಗಿಲ್ಲೇನು?
ಗಂಗಿ : ಎಣ್ಣಾ ಇದ್ದಕಿದ್ದಾಂಗ ಮಾತ ಬದಲಿಸಿ ಬೆವರತಿ, ಯಾಕ? ಅದೇನಿರುವುದು ಮುಚ್ಚಿಡದೇ ಹೇಳಿ ಬಿಡು.
ಬಾಳ್ಯಾ : ಏನಪಾ ತಂಗೀ ಗಂಗವ್ವಾ ― ಹೇಳಲೇ?
ಗಂಗಿ : ಎಣ್ಣಾ, ಅದೇನ ಹೇಳು, ಗಂಟಲದಾಗ ಯಾಕ ಮಾತ ಮುಚ್ಚಿಡತಿ?
ಬಾಳ್ಯಾ : ತಂಗೀ ಯಾರರೆ ಅದಾರೇನ ಒಳಿಯಾಕ
ನನಗ ಅಂಜಕಿ ಬರತೈತಿ ಕೇಳುದಕ ||
ನನ್ನ ಜೀವನದ ಗೆಳೆಯಾ ಸಂಗಣ್ಣಾ
ಮನ್ನಿ ಜಾತ್ರ್ಯಾಗ ಅವ ನಿನ್ನ ಕಂಡಾನ ||
ನಿನ ಮ್ಯಾಲ ಇಟ್ಟಿದಾನ ಮನಾ
ಹೋಗಿ ಕೇಳಂತ ಹೇಳ್ಯಾನ ನಿನ್ನಾ ||
ನೀ ಲೆಕ್ಕಲೆ ಆಗತಿ ನನತ್ತೀಗಿ
ಹೇಳ ಗುಣವಂತಿ ನಿನ್ನ ಸನಮತಿ ||
ತಂಗೀ ನಾ ಹೇಳಿದ್ದಾದರೂ ತಿಳಿದ ಬಂತೇನು?
ಗಂಗಿ : (ತತ್ಕ್ಷಣ ಗಂಗಿ ಅವನ ಕಿವಿ ಹಿಡಿದು ಮುಂದಿನ ಹಾಡು ಮುಗಿಯ್ಯುವ ತನಕ ಅವನ್ನು ಕೂರಿಸಿ, ಎಬ್ಬಿಸಿ ಅವಮಾನಿಸುವಳು.)
ಯಾವ ತಾಯಿ |
ಯಾವ ತಾಯಿ ಹಡದಾಳೊ ಬಾಳ್ಯಾ ನಿನ್ನಾ
ಮೀಸಿ ಹೊತ್ತ |
ಗಂಡಸಾಗಿ ಮಾಡತಿ ಕುಂಟಲತಾನ ||
ಕೇಳುವರೇನೊ |
ಕೇಳುವರೇನೊ ಗಂಡುಳ್ಳ ಬಾಲೇರನಾ
ಹರಿಸಿಬಿಟ್ಟೀ |
ಹರಿಸಿ ಬಿಟ್ಟಿ ಹೋಗೊ ಒಗತಾನ ||
ಹೆಂತಾ ಕೆಲಸ |
ಹೆಂತಾ ಕೆಲಸ ಕಲತ್ಯೊ ಬಾಳ್ಯಾ ನೀನಾ
ಕುಂಟಲತನ |
ಕುಂಟಲತನ ಮಾಡೋದು ಬಲು ಹೀನಾ ||
ಬಾಳ್ಯಾ : ಏನಪಾ ತಂಗಿ , ಒಲ್ಲೆಂದರ ಮಾತ ಬಗೀಹರೀತು. ಅಷ್ಟ ಯಾಕ ನನ್ನ ಕಿಮೀ ಹಿಂಡತಿ ? ಬಿಟ್ಟ ಬಿಡುವಂಥವಳಾಗು.
(ನೂಕುವಳು. ಹೋಗುವನು)
Leave A Comment