(ಸಂಗ್ಯಾ ಬಾಳ್ಯಾ ನರ್ತಿಸುತ್ತ ಬರುವರು. ಈಗ ಬಾಳ್ಯಾನ ಉಡುಪು ಬದಲಾಗಿದೆ. ಅವನೂ ಸಂಗ್ಯಾನಂತೇ ಕಾಣಿಸುತ್ತಾನೆ.)

ಸಂಗ್ಯಾ : ಡೌಲಾದಿಯಲ್ಲೊ ಗೆಳೆಯಾ ನನ್ಹಾಂಗ
ಸಾವ್ಕಾರ ಮಗನ್ಹಂಗಾ
ಸಂಗ್ಯಾ ಬಾಳ್ಯಾ ಅನ್ನಬೇಕೊ ಊರೊಳಗ||

ಯಾತಕ್ಕೇನೂ ಕಡಿಮಿಲ್ಲ ಬಾಳ್ಯಾ ನನಗ
ರೊಕ್ಕ ರೂಪಾಯ್ದೊಳಗ
ಸಾಯೋತನಕ ಪ್ರೀತಿಯಿರಲಿ ನನ ಮ್ಯಾಗ||

ಗೆಳೆಯ ಬಾಳಾಣ್ಣಾ, ನನ್ನ ಹಾಂಗ ಡ್ರೆಸ್ ನಿಂದಾತು. ನಿನ್ಹಾಂಗ ಡ್ರೆಸ್ ನಂದಾತು. ಮನಿಗಂತೂ ಬಂದಿವು. ಯಾಕೋ ಹೊತ್ತ ಹೋಗವೊಲ್ದು, ಯಾವುದಾದರೂ ಆಟದ ಹಂಚಿಕೆ ತಗಿ ಅಂತಿದ್ದೇನನ್ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ನಾವು ಬಂದ ಒಂದ ಚಿಣಿಪಣಿ ಆಟ ಆಡೋಣ ತಗೋ ಅಂತಿದ್ದೇನ್ನೋಡು.

ಸಂಗ್ಯಾ : ಗೆಳೆಯಾ ಬಾಳಣ್ಣಾ, ಚಿಣಿಪಣಿ ಆಟ ಬಂದಯಾರ ಆಡತಾರು?

ಬಾಳ್ಯಾ : ಗೆಳೆಯಾ ಸಂಗಣ್ಣಾ ಯಾರ ಆಡತಾರು?

ಸಂಗ್ಯಾ : ದನಕಾಯೋ ಹುಡುಗರು ಆಡತಾರು, ಈ ಆಟ ನಮಗೆ ಬ್ಯಾಡಾ ಅಂತಿದ್ದೇನ್ನೋಡು.

ಬಾಳ್ಯಾ : ಹಂಗಾದರೆ ಗೆಳೆಯಾ ಸಂಗಣ್ಣಾ. ನಾವು ಬಂದ ಒಂದ ಚೆಂಡಿನಾಟ ಆಡೋಣ ತಗೊ ಅಂತಿದ್ದೇನ್ನೋಡು.

ಸಂಗ್ಯಾ : ಗೆಳೆಯಾ ಬಾಳಾಣ್ಣಾ, ಚೆಂಡಿನಾಟ ಬಂದ ಯಾರ ಆಡತಾರು?

ಬಾಳ್ಯಾ : ಗೆಳೆಯಾ ಸಂಗಣ್ಣಾ ಯಾರ ಆಡತಾರು?

ಸಂಗ್ಯಾ : ಸಣ್ಣ ಸಣ್ಣ ಸಾಲೀ ಹುಡಗೋರ ಆಡತಾರು. ಈ ಆಟ ಬಂದ ನಮಗ ಬ್ಯಾಡಂತಿದ್ದೇನ್ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ಚಿಣಿಪಣಿ ಆಟ ಬ್ಯಾಡ. ಚೆಂಡಿನಾಟ ಬ್ಯಾಡ. ನನ್ನ ಹಂತೇಲಿದ್ದ ಮಜಕೂರ ಎಲ್ಲಾ ಮುಗಿದುವು. ನಿನ್ನ ಹಂತೇಲಿದ್ದರ ತಗಿವಂಥವನಾಗು.

ಸಂಗ್ಯಾ : ಗೆಳೆಯಾ ಬಾಳಣ್ಣ, ನಾವು ಬಂದ ಒಂದ ಪಗಡಿ ಆಟ ಆಡೋಣಂತಿದ್ದೇನ್ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣ, ಪಗಡಿ ಆಟದ ಮಜಕೂರ ನಿನಗೆ ಗೊತ್ತಿಲ್ಲೇನೊ?

ಸಂಗ್ಯಾ : ಗೆಳೆಯಾ ಬಾಳಣ್ಣಾ, ಏನಾತು?

ಬಾಳ್ಯಾ : ಏನಾತಂದರ ― ಪಗಡಿ ಆಟ ಆಡಿ ಪಾಂಡವರು ಉಣಬಾರದ ಕಷ್ಟ ಉಂಡರು. ಪಡಬಾರದ ಪಾಡ ಪಟ್ಟರು. ಈ ಆಟ ಒಂದು ನಮಗ ಬ್ಯಾಡ ಅಂತಿದ್ದೇನ್ನೋಡು

ಸಂಗ್ಯಾ : ಗೆಳೆಯಾ ಬಾಳಣ್ಣಾ, ಅವರೇನೋ ಜಿದ್ದಿನಿಂದ ಆಡಿರಬೇಕು. ಹೊತ್ತ ಹೋಗಲಾರಕ ಒಂದ ಆಟ ಆಡೋಣಂತಿದ್ದೇನ್ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ಹಂಗಾದರ ಆಡೋಣ ಕುಂಡ್ರುವಂಥವನಾಗು.

ಸಂಗ್ಯಾ : ಆಡೋಣ ಬಾ ಬಾಳ್ಯಾ
ಜೋಡೀಲಿ ಗೆಳೆಯರಾ
ಕೂಡಿ ಪಗಡಿನಾಡೋಣ ||

ಹಾಸಂಗಿ ಹಾಸೋಣ
ಕವಡೀಯ ಚೆಲ್ಲೋಣ ||

ಹಸರು ಹಳದಿ ನಂದು
ಕರಿದು ಕೆಂಪವು ನಿಂದು
ದಶಾಪಾಶೇಕ ಹೊಡತಾ
ಚಕ್ಕಾತೀನಿಗೆ ಕಡತಾ ||

ಗೆಳೆಯಾ ಬಾಳಣ್ಣಾ, ದಶಾಪಾಶೇಕ ಹೊಡೆತ ನಂದಾಗಿರುವುದು ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ಚಕ್ಕಾತೀನಿಗೆ ಕಡತ ನಂದಾಗಿರುವುದು ನೋಡು.

ಸಂಗ್ಯಾ : ಗೆಳೆಯಾ ಬಾಳಣ್ಣ ನಂದಾಗಿರುವುದು ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣ ನಂದಾಗಿರುವುದು ನೋಡು.

ಸಂಗ್ಯಾ : ನಂದಾಗಿರುವುದು!

ಬಾಳ್ಯಾ : ನಂದಾಗಿರುವುದು!

ಸಂಗ್ಯಾ : ನಂದಾಗಿರುವುದು!

ಬಾಳ್ಯಾ : ಗೆಳೆಯಾ ಸಂಗಣ್ಣಾ, ಮೊದಲ ನಾ ನಿನಗ ಏನ ಹೇಳಿದ್ನಿ?

ಸಂಗ್ಯಾ : ಈಗೇನಾತು?

ಬಾಳ್ಯಾ : ಪಗಡಿ ಆಟದ ಸಲುವಾಗಿ ನನಗ ನಿನಗ ಜಗಳ ಬಂತ ನೋಡು.

ಸಂಗ್ಯಾ : ಜಗಳ ಬಂದರ ಬಿಟಕೊಟ್ಟ ಅಡ್ಯಾಡಕ ಹೋಗೋಣ ನಡಿವಂಥವನಾಗು.
(ಇಬ್ಬರೂ ಕೈ ಕೈ ಹಿಡಿದು ನರ್ತಿಸುತ್ತ ಹೋಗುವರು.)