(ಸಂಗ್ಯಾ ಬಾಳ್ಯಾ ಬರುವುರು)

ಸಂಗ್ಯಾ : ಗೆಳಯಾ ಬಾಳಣ್ಣ. ಈ ಊರಾಗ ಮರಡೀ ಬಸವಣ್ಣನ ಜಾತ್ರಿ ಅಗದಿ ಸಡಗರದಿಂದ ನಡದೈತಿ. ನಾವಾದರೂ ನೋಡಾಕ ಹೋಗೋಣು, ನಡಿವಂಥವನಾಗು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ನನ್ನ ಹಂತೇಲಂತೂ ಒಂದs ಕೆಂಪಾನ ಪೈಸಾ ಇಲ್ಲ. ಜಾತ್ರಿಗಿ ನಾ ಬರಾಣಿಲ್ಲ. ನೀನs ಹೋಗುವಂಥವನಾಗು.

ಸಂಗ್ಯಾ : ಗೆಳೆಯಾ ಬಾಳಣ್ಣ, ರೊಕ್ಕ ರೂಪಾಯಿ ಚಿಂತೀ ನೀ ಯಾಕ ಮಾಡತಿ? ನಿನ್ನ ಸಲುವಾಗಿ ರೋಖ ರೂಪಾಯಿ ಮುನ್ನೂರ ತಗೊಂಡಿದೇನು. ನೀನಾದರು ಜಾತ್ರಿಗಿ ಬರುವಂಥವನಾಗು.

ಬಾಳ್ಯಾ : ಹಾಂಗಿದ್ದರೆ ಗೆಳೆಯಾ ಸಂಗಣ್ಣಾ ನಡಿವಂಥವನಾಗು.

ಸಂಗ್ಯಾ : ನಡಿ ನಡಿಯೊ ಗೆಳೆಯಾ ಬಾಳಣ್ಣ
ಮರಡಿ ಬಸವಣ್ಣ
ಮಾಡ್ಯಾರೊ ಜಾತರಿ ಮಾಡ್ಯಾರೊ ಜಾತರಿ
ಹೂಡಿಕೊಂಡ ಬಂಡಿ ಕೊಲ್ಲಾರಿ
ಕೂಡೇತೊ ಜಾತರಿ ||

ಸಾಲ ಮೇಲ ಅಂಗಡಿ ಗೂಡಾರ
ತೂಗು ತೊಟ್ಟಿಲ
ಕುಂಡ್ರೋಣು ಬೇತವಾರಿ| ಕುಂಡ್ರೋಣು ಉಮೇದ್ವಾರಿ
ಒಡಿಸಿಕೊಂಡು ಬರೋಣು ಕಾಯಿಕಪ್ಪರ
ಹಚ್ಚಿ ದುಂದಕಾರ ||

ರೋಖ ರೂಪಾಯಿ ತಗೊಳ್ಳೊ ಮುನ್ನೂರಾ
ಅಂತಾರೊ ಸಾವ್ಕಾರ
ಜೋಡೀಲಿ ಗೆಳೆಯರ| ಜೋಡೀಲಿ ಗೆಳೆಯರ
ಕೇಳ ಗೆಳೆಯಾ ಜಾತ್ರಿ ಸಡಗರ
ಎಳಿಯತಾವ ತೇರ ||

(ಹಾಡುತ್ತ ಇಬ್ಬರೂ ಜಾತ್ರೆಯಲ್ಲಿ ಹೊಕ್ಕಂತೆ ಅಭಿನಯಿಸುತ್ತ ಕುಣಿಯುವರು. ಬಾಳ್ಯಾ ಜಾತ್ರೆ ನೋಡುತ್ತ ಒಂದು ದಿಕ್ಕಿನಲ್ಲಿ ಮರೆಯಾಗುವನು. ಅಷ್ಟರಲ್ಲಿ ಗಂಗಿ ಪೂಜಾಸಾಮಗ್ರಿಯೊಂದಿಗೆ ಬರುವಳು. ಗಂಗಿಯನ್ನು ನೋಡಿದೊಡನೆ ಸಂಗ್ಯಾ ಅವಳ ಸೌಂದರ್ಯಕ್ಕೆ ಚಕಿತನಾಗಿ ಅವಳ ಬೆನ್ನು ಹತ್ತುವನು. ಬರಬರುತ್ತ ಬಸವಣ್ಣನ ಮೂರ್ತಿ ಮೂಡುವುದು. ಗಂಗಿ ಬಾಗಿ ನಮಸ್ಕರಿಸುತ್ತಿದ್ದಾಗ ಸಂಗ್ಯಾ ಅವಳ ಕತ್ತಿನಲ್ಲಿ ಸರಗಿ ಹರಿದುಕೊಂಡು ಪರಾರಿಯಾಗುವನು. ಅವಸರದಿಂದ ಪರಮ್ಮ ಬರುವಳು. ಗಂಗಿ ಕತ್ತು ಮುಟ್ಟಿ ನೋಡಿಕೊಳ್ಳುತ್ತ ಸರಗಿ ಹುಡಕುತ್ತಿರುವಳು)

ಪರಮ್ಮ : ಏನ ಮಂದಿ ಏನ ಮಂದಿ ಏನ ಮಂದಿ ಕೂಡೇತಿ! ಯಾಕs ನನ ಮಗಳ ಹಾಂಗ ಹುಡಕತಿ? ಏನ ಕಳಕೊಂಡಿ?

ಗಂಗಿ : ಪರಮ್ಮಾ ಯಾ ಮಾತಂತ ಏನ ಹೇಳಲಿ?

ಪರಮ್ಮ : ಯಾಕ ಅಂಥಾದೇನ ಆತು?

ಗಂಗಿ : ಘಾತ ಆತು.
ಏನೊ ಘಾತವನಾದೀತ
ಪರಮ್ಮ ಕೇಳ
ಕೊರಳಾಗಿನ ಸರಗಿ ಹೋದೀತ ||

ಅಂತಿಂಥಾ ಸರಿಗ್ಯಲ್ಲ
ಸೇರ ಬಂಗಾರ ಸರಗಿ ||

ಗಂಡ ಈರ್ಯಾನ ಮುಂದೆ
ಏನ ಹೇಳಲೆ ಪಂಟಾ ||

ಪರಮ : ಏನ ಹುಚ್ಚೀ, ಮನ್ಯಾಗ ಬಿಟ್ಟ ಮರತು ಬಂದಿರಬೇಕ ಬಾ, ನೋಡೊಣ.

ಗಂಗಿ : ಹಾಂಗಾರ ನಡಿವಂತಳಾಗು
(ಗಂಗಾ ಮುಂದೆ ಹೋಗುವಳು ಸಂಗ್ಯಾ ಥಟ್ಟನೆ ಹಾರಿಬಂದು ಪರಮ್ಮನನ್ನು ತರುಬಿ ಗಂಗಿಯ ಬಗ್ಗೆ ಮಾಹಿತಿ ಕೇಳುವಂತೆ, ಅವಳು ಹೇಳುವಂತೆ ಅಭಿನಯಿಸುವರು. ತಡವಾಯಿತೆಂದ ಪರಮ್ಮ ಓಡುವಳು. ಸಂಗ್ಯಾ ಮರೆಯಾಗುವನು.)