ಮೇಳ : ಕುಂತೀರೊ ಜನ ಕಲ್ ಕಲ್
ಮಾಡಬ್ಯಾಡ್ರಿ ಗುಲ್ಲಾ
ನಿಮ್ಮನ ನೋಡಿ | ನಾಚಿ ನಿಂತೇವೆಲ್ಲಾರಾ||

ಹೆಣ್ಣಗಂಡ ಸಭಾ ಕೂಡೇತಿ
ಸಭಾ ಒಳ್ಳೆ ಭರತಿ
ನಮ್ಮ ಮ್ಯಾಲಿ! ಇರಲೆಪ್ಪಾ ನಿಮ್ಮ ಪ್ರೀತಿ||
ಸಂಗ್ಯಾಬಾಳ್ಯಾ ಆದಂಥಾ ಮಜುಕೂರ
ಆದಂಥಾ ಮಜಕೂರ
ಕುಂತ ಕೇಳಿರಿ | ಬಲ್ಲಂಥಾ ಹಿರಿಯರ||

ಗಂಡಮೆಟ್ಟ ಗದಗೀನ ಶಾಪೂರ
ಬಸವಣ್ಣ ದೇವರ
ಅದಕ್ಹೋಗಿ ಮಾಡುವೆ ನಮಸ್ಕಾರ||

ಮೇಟಿತಾಳ : ಕುಂತಿರೊ ಅಣ್ಣಗೊಳಾ, ನಿಂತಿರೊ ತಮ್ಮಗೋಳ್ರಾ, ಸಾಲೀ ಹುಡುಗರು  ಸಾಲೀ ಬಿಟ್ಟಕೂಡಲೆ ಹಾಂಗs ಬಂದ ಸ್ಟೇಜ್ ಹತ್ತೀದೇವು. ಸಂಗ್ಯಾ ಬಾಳ್ಯಾ ಆದಂಥಾ ಮಜಕೂರು. ಆಡಾವರು ಸಣ್ಣವರು. ಚಿಕ್ಕ ಹುಡುಗರ ಕವನದಲ್ಲಿ ಏನಾದರು ತಪ್ಪು ತಡೆಗಳಾದರೆ ಬುದ್ಧಿವಂತರು ಹೊಟ್ಯಾಗ ಹಾಕೋಬೇಕಂತ ಶರಣ ಮಾಡತೇನು. ಹೆದರ ಬ್ಯಾಡೋ ಹುಡುಗಾ ಅಂತ ಹರಸುವಂಥವರಾಗಿರಿ.

(ತೆಂಗಿನಕಾಯಿ ಒಡೆದು ರಂಗದ ಎರಡೂ ಬದಿಗೆ ಎಸೆದು ನಮಸ್ಕರಿಸಿ ಹಿಂದೆ ಸರಿಯುವನು.)