(ಬಾಳ್ಯಾನ ಬಳಿಗೆ ಇರಪಕ್ಷಿ ಬಸವಂತ ಬರುವರು)

ಬಸವಂತ; ಇರಪಕ್ಷಿ : ಮಾಡತೇವ್ರಿ ನಿಮಗ ಶರಣಾ
ಬಾಳಪ್ಪಣ್ಣಾ
ಮಾಡತೇವ್ರಿ, ನಿಮಗ ಶರಣಾ ||

ಸಣ್ಣ ಹುಡುಗರು ನಾವು
ಬಾಗಿ ಮಾಡೇವೊ ಶರಣಾ ||

ಬಾಳ್ಯಾ : ಏನೋ ಇರಪಕ್ಷಿ ಬಸವಂತಾ, ನನಗ ಶರಣ ಮಾಡೋವಂಥಾದ ನಿಮಗೇನಾಗೇತಿ? ಅದನ್ನಾದರು ಹೇಳುವಂಥವರಾಗಿರಿ.

ಇರಪಕ್ಷಿ : ಏನೋ ಬಾಳಣ್ಣಾ , ಸುಳ್ಳಸುಳ್ಳ ಹೆಚ್ಚ ಮಾತಾಡಿ ವ್ಯಾಳ್ಯಾ ಹಾಳ ಮಾಡೊದ್ಯಾಕ ? ಮೇಲ್ಮನಿ ಸಂಗ್ಯಾ ಮಾಡಿದ ಕಾರಭಾರ ನಿನಗೂ ಗೊತ್ತs ಐತಿ. ಆ ಸಂಗ್ಯಾನ ಹಿಡತಂದ ನಮ್ಮ ಕೈಯಾಗ ಕೊಡಬೇಕ ನೋಡು. ಹಾಂಗ ಕೊಟ್ಟಿದ್ದs ಆದರ ನಮ್ಮ ಪಾಲಿನ ಹೊಲಾ ಬರಕೊಡತೇವು. ಹದಿನಾರೆತ್ತ ಹಳಿವಿನ ಬಂಡೀ ಕೊಡತೇವು. ಮ್ಯಾಲ ನೂರಾರ ರೂಪಾಯಿನಾದರು ಮುಚ್ಚಿಕೊಡತೇವು. ಏನಂತಿ, ಅಗದಿ ತೀವ್ರದಿಂದ ಹೇಳುವಂಥವನಾಗು.

ಬಾಳ್ಯಾ : ಏನೋ ಇರಪಕ್ಷಿ ಇದೆಂಥಾ ಮಾತ? ಸಂಗ್ಯಾಂದು ನಂದು ಗೆಳೆತಾನಂದರ ಹಾಲ ಸಕ್ರಿ ಕೂಡಿಸಿಟ್ಹಾಂಗ. ದಿನಾ ನನ್ನ ಜಳಕಾಗೋದು ಅವನ ಮನ್ಯಾಗ. ಮಡೀ ದೋತರ ಮೈಮ್ಯಾಗಿಂದ ಅವಂದ. ದಿನಾ ನನ್ನ ಊಟ ಆಗೋದು ಸಂಗ್ಯಾನ ಮನ್ಯಾಗ ಹಾಲ ಹೈನದ ಓಳಗ. ಇಂಥಾ ಗೆಳೆಯಾನ ತಂದುಕೊಡಂದರ ಹೆಂಗ ತರಲಿ?

ಬಸವಂತ : ಎಲೋ ಎಣ್ಣಾ, ಈ ವಟ್ಟ ಬಾಳ್ಯಾ ಎಷ್ಟ ಹೇಳಿದರೂ ಕೇಳೋದಿಲ್ಲಾ, ಮೊದಲ ಇವನ್ನs ಮುಗಸೋಣ ತಗೊ ಅಂತಿದ್ದೇನ್ನೋಡು.

ಇರುಪಕ್ಷಿ : ತಗೊ ಹುಡುಗಾ
(ಇಬ್ಬರೂ ಗಪ್ಪನೆ ಬಾಳ್ಯಾನನ್ನು ಹಿಡಿಯುವರು.)

ಬಾಳ್ಯಾ : ಏನೋ ಇರಪಕ್ಷಿ ಬಸವಂತಾ, ನಾನಾದರು ನಿಮ್ಮ ಹೇಳಿಕಿ ಪ್ರಕಾರ ಸಂಗ್ಯಾನ ತಂದಕೊಡತೇನು. ನಾನೂ ನಿಮ್ಮ ಹೆಣ ಮಗಳ ಸಮ ಅಂತ ತಿಳಕೊಂಡ ಬಿಡುವಂಥವರಾಗಿರಿ. ಕೈಯಾಗ ನೂರಾರ ರೂಪಾಯಿ ಕೊಡರಿ. ಮನೀಹೊಲಾ ಎತ್ತಾ ಬಂಡಿ ಬರದಕೊಡರಿ.

ಬಸವಂತ : ತಗೋ ಕಾಗದ, ಹೇಳ ಎಂದ ತರತಿ? ಯಾವಾಗ ತರತಿ? ಎಲ್ಲಿ ತರತಿ?

ಬಾಳ್ಯಾ : ಏನೋ ಇರಪಕ್ಷಿ ಬಸವಂತಾ, ರಂಗಪಂಚಮಿ ದಿವಸ, ಹೊತ್ತ ಮುಳುಗೋ ವ್ಯಾಳ್ಯಾದಲ್ಲಿ, ಬಯಲವಾಡದ ಹಾದ್ಯಾಗ ಕರಕೊಂಬರತೇನು. ನೀವಾದರು ಕ್ಯಾದಿಗಿ ಮೆಳಿಯೊಳಗ ಅಡಗಿ ಕುಂತಿರ್ರಿ. ನಾ ಸಿಳ್ಳ ಹೊಡದೆ ಕೂಡಲೆ ನೀವಾದರು ಬರುವಂಥವರಾಗರಿ.

ಬಸವಂತ : ಅಪ್ಪಿ ತಪ್ಪಿ ಸಂಗ್ಯಾನ ತರದಿದ್ದರ…

ಇರಪಕ್ಷಿ : ಮಗನs ನಿನ್ನs ತೀರಿಸಿ ಬಿಡತೇವ, ಹುಷಾರ
(ಇಬ್ಬರೂ ಹೋಗುವರು)