(ಸಂಗ್ಯಾ ರಂಗದ ಇನ್ನೊಂದು ಬದಿಯಿಂದ ಬಾಳ್ಯಾನ ಶೋಧನೆಯನ್ನ ನೃತ್ಯದಲ್ಲಿ  ಅಭಿನಯಿಸುತ್ತ ಬರುವನು)

ಸಂಗ್ಯಾ : ಬಾಳ್ಯಾ ಹೋಗಿದಾನೋ ಎನ್ನಗಲಿ
ಎಲ್ಲೆಂತ ಹುಡುಕಲಿ
ದಿನಾ ಬಂದ | ಕುಂಡ್ರಾವೊ ಎನ್ನ ಬದಿಯಲ್ಲಿ||
ನೋಡಿದರ ಹೋಗಿ ನೆಟ್ಟಗ
ಇದ್ದಿಲ್ಲೊ ಮನಿಯಾಗ
ಸಿಟ್ಟ ಆದನಪ್ಪಾ | ಗೆಳೆಯಾ ತನ್ನ ಮನದಾಗ||
ಎನ್ನ ಬಿಟ್ಟ ಹೋಗ
ತಿದ್ದಿಲ್ಲೋ ಹೋದಲ್ಲಿ ಬಂದಲ್ಲಿ
ಎತ್ತ ಹೋದನಪ್ಪಾ | ಜೀವನದ ಗೆಳೆಯಾ ಬಾಳಣ್ಣಾ||

ಓಹೋ! ನನ್ನ ಗೆಳೆಯಾ ಬಾಳಣ್ಣಾ ಹೋಗಿ ಏಳೆಂಟ ದಿನಾ ಆಯ್ತು. ಅವನ ಭೇಟಿ ನನಗಿಲ್ಲಾ, ನನ್ನ ಭೇಟಿ ಅವನಿಗಿಲ್ಲಾ. ಹಿಂಗs ಹುಡುಕುತ್ತಾ ಹೋದರ ಅವನೆಂದಿಗೂ ಸಿಗಾಕಿಲ್ಲ. ಇಲ್ಲೊಬ್ಬ ಹಿರ್ಯಾ ಕಾಣತಾನು. ಅವನ್ನಾದರು ಕೇಳಿ ನೋಡೋಣ. ಏನಪಾ ಹಿರ್ಯಾ, ಇತ್ತ ಕಡೆಗೆ ಬರುವಂಥವನಾಗು.

ಮೇಟಿತಾಳ : ಏನಪಾ ಯಾಕ್ಕರದಿ?

ಸಂಗ್ಯಾ : ನನ್ನ ಗುರುತ ಸಿಗಲಿಲ್ಲೇನ?

ಮೇಟಿತಾಳ : ನಿನ್ನ ಗುರುತ ನನಗೇನೂ ಸಿಗಲಿಲ್ಲಾ, ಕುಂತ ಮಂದಿ ಹೌಂದನ್ನೋ ಹಾಂಗ ಗುರುತಾ ಹೇಳುವಂಥವನಾಗು.

ಸಂಗ್ಯಾ : ನನಗೆ ಬಂದ ಸಾವ್ಕಾರ ಸಂಗ್ಯಾ ಅಂತಾರ ನೋಡು.

ಮೇಟಿತಾಳ : ಸಂಗಣ್ಣಾ. ನೀ ಯಾರಂತ ನನಗಾದರೂ ತಿಳೀತು, ಕುಂತ ಮಂದಿಗಾದರು ತಿಳೀತು. ನನ್ನ ಕರದ ಕಾರಣೇನು?

ಸಂಗ್ಯಾ : ಏನಪಾ ಹಿರ್ಯಾ, ನನ್ನ ಗೆಳೆಯಾ ಬಡವ ಬಾಳ್ಯಾನ್ನ ನೋಡಿದ್ದರ ಹೇಳಬೇಕು ನೋಡು.

ಮೇಟಿತಾಳ : ಅಲ್ಲಪಾ, ನೀ ನೋಡಿದರ ಸಾವ್ಕಾರ ಸಂಗ್ಯಾ, ಅವನ್ನ ನೋಡಿದರ ಬಡವ ಬಾಳ್ಯಾ. ಹಾಲಿಗೆ, ನೀರಿಗೆ ಇಂಥಾ ಗಟ್ಟಿಮುಟ್ಟ ಗೆಳಿತಾನ ಐತೆಂದ ಮ್ಯಾಲ ಇದರಾಗೇನೋ ಗುಟ್ಟು ಇರಾಕ ಬೇಕ. ಅದೇನ ಹೇಳಬೇಕ ನೋಡು.

ಸಂಗ್ಯಾ : ಸಂಗ್ಯಾ ಬಾಳ್ಯಾ ಜೋಡಿ ಅಂದರ ಸುತ್ತ ಹದಿನಾಲ್ಕು ಹಳ್ಳೀ ಒಳಗ ಪರಸಿದ್ಧ. ಚಿಕ್ಕಂದಿರತ ಇಬ್ಬರೂ ಕೂಡಿ ಸಾಲಿ ಬರದವರು. ನಾಕೂ ಬೆರಳಿಗಿ ನಾಕ ಉಂಗುರಾ ಇಟ್ಟುಕೊಂಡು ಚಪ್ಪಾಳೆ ಹೊಡೆದು ನಕ್ಕವರು ಹೆಂಗಸರು ನೀರ ತರೋ ಹಾದ್ಯಾಗ ನಿಂತ ದಿಗರ ಮಾತಾಡಿ ಹುಬ್ಬ ಹಾರಿಸಿದವರು. ಅವ ಬಡವಾದರೇನು? ನಾ ಶ್ರೀಮಂತ ಆದರೇನು? ಗೇಳಿತಾನಂದರ ಗೆಳಿತಾನಪಾ.

ಮೇಟಿತಾಳ : ಹಂಗಾದರ ನಿನ್ನ ಗೆಳಿಯಾ ಬಾಳಣ್ಣ ನಿನ್ನ ಹುಡಿಕ್ಕೊಂಡ ಕೆಳಗಿನ ಪ್ಯಾಟಿಗೆ ಹೋಗಿದಾನು. ನೀನಾದರು ಅಲ್ಲಿಗೆ ಹೋಗುವಂಥವನಾಗು.

ಸಂಗ್ಯಾ : ಕೆಳಗಿನ ಪ್ಯಾಟಿಗಿ ಹೋದರ ಸಿಕ್ಕಾನ, ಹೌಂದಲ್ಲ?

ಮೇಟಿತಾಳ : ಅದದೀ ಅದತ್ಯವಾಗಿ ಸಿಗತಾನ ಹೋಗು.

(ಮೇಟಿತಾಳ ಹಿಂದೆ ಸರಿಯುವನು. ಸಂಗ್ಯಾ ಮತ್ತೆ ಹುಡುಕುವುದನ್ನಭಿನಯಿಸುತ್ತ ಹೋಗುವನು.)