(ಸಂಗ್ಯಾ , ಬಾಳ್ಯಾ ಕೈಕೈ ಹಿಡಿದು ಕಾಡಿನಲ್ಲಿ ಬರುತ್ತಿದ್ದಾರೆ. ಸಂಗ್ಯಾ ಉತ್ಸಾಹವಿಲ್ಲದೆ ಯಾಂತ್ರಿಕವಾಗಿ ಹೆಜ್ಜೆ ಹಾಕುತ್ತಿದ್ದಾನೆ.)
ಸಂಗ್ಯಾ : ಗೆಳೆಯಾ ಬಾಳಣ್ಣಾ, ಇಂದ ಊರಿಗಿ ಬರೋದಕ್ಕ ನನಗ್ಯಾಕೋ ಮನಸಿಗಿ ಹಳಹಳಿ ಆಧಾಂಗ ಅನಸತೈತಿ. ನೀನs ಹೋಗಂತಿದ್ದೇನ್ನೋಡು.
ಬಾಳ್ಯಾ : ಗೆಳೆಯಾ ಸಂಗಣ್ಣಾ, ಹುಲಿಯಂಥಾ ಎದೀ ನಿಂದಾ, ಹಳಹಳಿ ಆಗಾಕ ಕಾರಣೇನೋ ?
ಸಂಗ್ಯಾ : ಗೆಳೆಯಾ ಬಾಳಣ್ಣಾ, ನಿನ್ನ ಮುಂದ ಹೇಳದs ಇನ್ನ ಯಾರ ಮುಂದ ಹೇಳಲಿ? ಹುಡುಗಾ, ನಿನ್ನಿ ರಾತ್ರಿ ಭಾಳ ಕೆಟ್ಟ ಕನಸ ಬಿದ್ದಿತ್ತು.
ಬಾಳ್ಯಾ : ಗೆಳೆಯಾ ಸಂಗಣ್ಣಾ, ಕನಸಿನೊಳಗ ಏನೇನ ಕಂಡಿ?
ಸಂಗ್ಯಾ : ಮನೀಮುಂದ ಹಂದರಾ ಹಾಕಿತ್ತು. ನಿಬ್ಬಣ ಬಂದಿತ್ತು. ಲಗ್ನ ಆಗತಿತ್ತೋ ಗೇಳೆಯಾ, ನನ್ನ ಕೈಯಾಗ ಕಂಕಣ ಇತ್ತು. ಗಂಗಾ ಆರತಿ ಬೆಳೆಗೋವಾಗ ಆರತ್ಯಾಗಿನ ಕಳಸ ಮುರದ ಬಿತ್ತು. ನಾ ಇಂದ ಬರಾಕ ಒಲ್ಲೆಂತಿದ್ದೇನ ನೋಡು.
ಬಾಳ್ಯಾ : ಗೆಳೆಯಾ ಸಂಗಣ್ಣಾ , ಇಂಥಾ ಕನಸ ಎಂದಾದರೂ ಖರೆ ಬಂದಾವೇನೊ? ಹೆಂಗಸರ್ಹಾಂಗ ತಿರುಗಿ ಯಾಕ ಹೋಗೋದಾ ? ಸುಮ್ಮನ ಹೋಗೋಣ, ನಡಿವಂಥವನಾಗು.
ಸಂಗ್ಯಾ : ಗೆಳೆಯಾ ಬಾಳಣ್ಣ ಇದೂ ಅಲ್ಲದ ನನಗ್ಯಾಕೋ ಈ ಹೊತ್ತ ಭಾಳ ಅಪಶಕುನ ಆಗ್ಯಾವು.
ಬಾಳ್ಯಾ : ಗೆಳೆಯಾ ಸಂಗಣ್ಣಾ , ಏನೇನ ಅಪಶಕುನ ಕಂಡಿ?
ಸಂಗ್ಯಾ : ಗೆಳೆಯಾ ಬಾಳಣ್ಣಾ, ಗಂಗಾನ ಮನಿಂದ ಹೊರಬರೋವಾಗ ತಲೀಗಿ ಬಾಗಲ ತೋಳ ಬಡದ ತಲೀ ಮ್ಯಾಲಿನ ರುಂಬಾಲ ಕೆಳಗ ಬಿತ್ತು. ಎದರ ದಾರ್ಯಾಗ ಸಣಿಕೆ, ಗುದ್ದಿ ಎದುರಾದವು. ಬೆಕ್ಕಾದರು ಅಡ್ಡ ಬಂತು, ಬರಾಣಿಲ್ಲೋ ಗೆಳೆಯಾ ಬಾಳಣ್ಣಾ ನಾ ಇಂದಾ, ನೀ ಹೋಗೋ ಮುಂದಾ.
ಬಾಳ್ಯಾ : ಛೇ ಛೇ ಸಂಗಣ್ಣಾ, ಏನ ಮಾತಂತ ಅಡತಿ? ಆಡತ ಆಡತ ಅರ್ಧಾ ಹಾದೀ ಬಂದಿವಿ. ಇನ್ನೇನ ಆ ಕ್ಯಾದಿಗಿ ಮೆಳಿ ದಾಟಿದರ ಬೈಲಹೊಂಗಲ ಬಂತು. ನಡಿನಡಿಯೊ ನಿನ ಹುಚ್ಚಾ.
ಸಂಗ್ಯಾ : ಗೆಳೆಯಾ ಬಾಳಣ್ಣಾ , ಯಾಕೋ ಅಡ್ಡ ಹಾದೀ ಹಿಡಿದೀವಂತ ಅನಸತೈತಿ ― ಕ್ಯಾದಿಗಿ ಮೆಳೀ ಕಡೆ ಯಾಕ ಕರಕೊಂಬಂದಿ?
ಬಾಳ್ಯಾ : ಗೆಳೆಯಾ ಸಂಗಣ್ಣಾ, ಹೊತ್ತ ಮುಣುಗಿ ಕತ್ತಲಾಗಾಕ ಹತ್ತೇತಿ. ಲಗು ಅಡ್ಡ ಹಾದೀ ಹಿಡಿದ ಹೋಗೋಣ ನಡಿವಂಥವನಾಗು.
ಸಂಗ್ಯಾ : ಗೆಳೆಯಾ ಬಾಳಣ್ಣಾ, ಯಾಕೋ ನನ್ನ ಎದ್ಯಾಗ ಕಸವಿಸಿ ಆದ್ಹಾಂಗ ಆಗತೈತಿ, ಕಣ್ಣಿಗೆ ಚಕ್ರ ಬರತೈತಿ, ನಡದೇನಂದರ ಕಾಲಾಗ ಶಕ್ತಿಯಿಲ್ಲಧಾಂಗ ಆಗೇತಿ. ಇಲ್ಲೆಲ್ಲಾದರು ಒಂದ ಹನಿ ನೀರಿದ್ದರ ತಂದ ಕೊಡವಂಥನಾಗು.
ಬಾಳ್ಯಾ : ಗೆಳೆಯಾ ಸಂಗಣ್ಣಾ , ಇನ್ನೇನ ನಾಕ ಹೆಜ್ಜ್ಯಾಗ ಹಳ್ಳ ಬರತೈತಿ, ಅಲ್ಲೀತನಕ ಹೋಗೋಣು, ನಡಿವಂಥವನಾಗು.
ಸಂಗ್ಯಾ : ಗೆಳೆಯಾ ಬಾಳಣ್ಣಾ, ನನಗಂತೂ ಅಷ್ಟ ದೂರ ನಡಿಯೋದಕ್ಕ ಆಗಾಣಿಲ್ಲ. ನೀನs ಒಂದೆರಡ ಹನಿ ತಂದ ಬಾಯಿಗೆ ಹಾಕುವಂಥವನಾಗು.
ಬಾಳ್ಯಾ : ಗೆಳೆಯಾ ಸಂಗಣ್ಣಾ, ಯಾಕೋ ನೀ ಇಂದ ಭಾಳ ಬೇಚಿತ್ತ ಮಾಡಾಕ ಹತ್ತೀದಿ. ನಿನ್ನ ಕೊರಳಾಗ ವಸ್ತಾವಡಿವಿ ಭಾಳ ಅದಾವು. ಮೊದಲs ಇಲ್ಲಿ ತುಡುಗರು ಭಾಳ, ಅವನ್ನ ಕಳಚಿ ನನ್ನ ಕೈಯಾಗ ಕೊಡುವಂಥವನಾಗು.
ಸಂಗ್ಯಾ : ಗೆಳೆಯಾ ಬಾಳಣ್ಣಾ , ನಾನs ಬಿಚ್ಚಿಕೊಡುವಷ್ಟು ಶಕ್ತಿ ನನ್ನಲ್ಲಿಲ್ಲಾ. ನೀನs ಬಿಚ್ಚಿಕೊಳ್ಳುವಂಥವನಾಗು.
ಬಾಳ್ಯಾ : ಗೆಳೆಯಾ ಸಂಗಣ್ಣಾ , ನಾನಾದರು ವಸ್ತಾವಡಿವಿ ಬಿಚ್ಚಿಕೊಂಡಿದೇನು. ಈಗಿಂದೀಗ ನೀರ ತರತೇನು, ನೀ ಇಲ್ಲೇ ಇರುವಂಥವನಾಗು.
(ಸಿಳ್ಳು ಹೊಡೆದು ಓಡುವನು, ತತ್ ಕ್ಷಣವೆ ಈರ್ಯ್ಯಾ, ಇರಪಕ್ಷಿ, ಬಸವಂತ ಮೂವರೂ ಕುಡಗೋಲು, ಕೊಡ್ಲಿ, ಪಂಜುಗಳೊಂದಿಗೆ ಪ್ರೇಕ್ಷಕರ ಮಧ್ಯೆ ಕಾಣಿಸಿ ಕೊಂಡು ಕಿರುಚುವರು. ಸಂಗ್ಯಾ ಗಾಬರಿಯಾಗುವನು.)
ಸಂಗ್ಯಾ : ಘಾತ ಮಾಡಿದೆಯಾ ಬಾಳ್ಯಾ ! ಎಲೋ ಈರಪ್ಪಣ್ಣಾ.
ಕೇಳೊ ಈರಣ್ಣಾ ಮಾತಾ
ಹೋದರೆಲ್ಲಾರು ಸತ್ತಾ
ಕೈಯಾರೆ ಮುಗಿವೆನು, ಕಾಲಾರೆ ಬೇಳುವೆನು
ಕೊಲ್ಲಬ್ಯಾಡಿರೊ ವ್ಯರ್ಥಾ ||
ಒಂದ ಹೆಣ್ಣಿಗೆ ನಾನು
ಎರಡ ಹೆಣ್ಣ ಮಾಡುವೆನು
ಹೊಂಗಲದೂರಾಗ
ಬೇಡಿದ್ದ ಕೊಡುವೆನು ||
ನಿಮ್ಮ ಮೂವರೊಳಗೆ
ನಾ ಒಬ್ಬ ಸಣ್ಣ ತಮ್ಮ
ನಿಮ್ಮ ಹೆಣ್ಣಿನ ಸಮ
ಹೆಣ್ಣ ದಾಸಿಯ ಸಮ
ಕೈಮುಗದ ಬದಿಕೇನೋ ||
ಎಲೋ ಈರಪ್ಪಣ್ಣಾ, ಇರಪಕ್ಷಿ , ಬಸವಂತಾ , ನನ್ನ ಮಾತಾದರು ಕೇಳುವಂಥವರಾಗಿರಿ.
ಈರ್ಯ್ಯಾ : ಏನ ಕೇಳತೀರಿ, ಹಿಡೀರಲೆ ―
(ಮೂವರೂ ರಂಗದ ಕಡೆಗೆ ಕಿರುಚುತ್ತ ಓಡಿ ಬರುವರು. ರಂಗಕ್ಕೆ ಬಂದ ತತ್ ಕ್ಷಣ ಇಬ್ಬರು ಮೇಳದವರು ಓಡಿಹೋಗಿ, ತೆಂಗಿನ ಕಾಯಿ ಒಡೆದು ಪಂಜುಗಳನ್ನು ಇಸಿದುಕೊಂಡು ರಂಗದ ಮೇಲೆ ಒಂದೊಂದೊ ಮೂಲೆಯಲಿ ನಿಲ್ಲುವರು. ಈರ್ಯ್ಯಾ ಇರಪಕ್ಷಿ ಬಸವಂತ ಆಯುಧಧಾರಿಗಳಾಗಿ ಓಡುತ್ತ ಸಂಗ್ಯಾನ ಬೆನ್ನು ಹತ್ತುವರು.)
ಮೂವರು : ಗಡಾಣ ಬರ್ಯ್ಯೊ ಮೇಲ್ಮನಿ ಸಂಗ್ಯಾನ
ಚೆಂಡ ಕೊಯ್ಯೋಣ
ಸೊಕ್ಕಿಗಿ ಬಂದ ಕೈಯಾಗ ಸಿಕ್ಕಾನ
ಸೀಳಿ ಒಗೆಯೋಣ ||
ಕಲ್ಲ ಹೇರಿ ಕಾಲ ಮುರೀರ್ಯೊ
ಕಡಿಯೊ ನೆತ್ತಿ ಮ್ಯಾಲ
ಕೋಲೀ ಹೊಲದಾಗ ದರದರ ಎಳಿಯೊ
ಮೀಟೊ ಅವನ ಕಾಲಾ||
(ಮೇಲೆ ವರ್ಣಿಸಿದಂತೆ ಸಂಗ್ಯಾನನ್ನು ಹಿಂಸಿಸಿ ಕೊಲ್ಲುವರು. ಜೀವ ಹೋಯಿತೆಂದಾಗ ಮೇಳದವನೊಬ್ಬ ಆರ್ತನಾಗಿ ಕಿರುಚುವನು, ಒಂದೆರಡು ಕ್ಷಣ ರಂಗ ಸ್ತಬ್ಧವಾಗಿರುವುದು. ಈರ್ಯ್ಯಾ ಉತ್ಸಾಹರಹಿತನಾಗುವನು.)
ಈರ್ಯ್ಯಾ : ಎಲೋ ತಮ್ಮಗೊಳ್ರಾ. ಕಡಿಯೋತನಕ ಒಂದು ಧೈರ್ಯ ಇತ್ತು. ಕಡದ ಮ್ಯಾಲ್ಯಾಕೊ ನನ್ನ ಕಣ್ಣಿಗೆ ಚಕ್ರ ಬರತೈತಿ, ಮುಂದಿನ ದಾರಿ ಕಾಣವೊಲ್ಲದು. ಕೆಟ್ಟ ಇಂಗರೇಜಿ ಸರಕಾರ, ಯಾಕಾದರೂ ಕೊಂದಿವೋ ಅಂತ ಆನಸತೈತಿ.
ಇರಪಕ್ಷಿ : ಎಲೋ ಎಣ್ಣಾ , ಒಳಕಲ್ಲದಾಗ ತಲೀ ಹಾಕಿದ ಮ್ಯಾಲ ಒಣಿಕೀ ಪೆಟ್ಟಿಗ್ಯಾಕ ಅಂಜೋದಾ? ನಾವಾದರು ಕಚೇರಿಗಿ ಹೋಗಿ ಜಜ್ ಸಾಹೇಬರ ಮುಂದ ಕಬೂಲೀ ಜವಾಬ ಹೇಳೋಣ, ನಡಿವಂಥನಾಗು.
ಬಸವಂತ : ಎಲೋ, ಎಣ್ಣಾ, ನೀ ಎಂದೂ ರಕ್ತ ನೋಡದವ ಅಲ್ಲ. ಅದಕ್ಕ ಹಿಂಗಾಗತೈತಿ. ನಾವಿಬ್ಬರೂ ರಟ್ಯಾಗ ಕೈಹಾಕಿ ಹಿಡಕೊಂಡ ಬರತೇವು, ಕಚೇರಿಗೆ ಹೋಗಿ ಹಾಜರಾಗೋಣ, ನಡಿವಂಥವನಾಗು.
ಈರ್ಯ್ಯಾ : ಎಲೋ ತಮ್ಮಗೊಳ್ರಾ, ಹಂಗಾದರ ನಡಿವಂಥರಾಗಿರಿ.
(ಮೆಲ್ಲಗೆ ಮುಂದೆ ಬರುವರು. ದಾರಿಯ ಹುಲ್ಲು ಹರಿದು ಕೈಯಲ್ಲಿ ಹಿಡಿದು ಪ್ರೇಕ್ಷಕರ ಹತ್ತಿರ ಬಂದು ಅವರೇ ನ್ಯಾಯಾಧೀಶ ಎಂಬಂತೆ ಮಾತಾಡುವರು.)
ಬಸವಂತ : ಎಲೋ ಎಣ್ಣಾ , ಇಲ್ಲೇ ಕಚೇರಿ ಕೂಡೇತಿ, ಜಜ್ ಸಾಹಾಬರು ಕುಂತಾರು, ಹೇಳೋನ ತಗೊವಂಥವನಾಗು.
ಮೂವರು : ರಾವಸಾಹೇಬರ ಕೇಳಿರಿ ಎನ್ನ ಮಾತಾ
ಎನ್ನ ಮಾತಾ
ಸಂಗ್ಯಾನ ಕೊಂದೇವರಿ ಬೇಕಂತಾ ||
ಊರವೊಳಗ ಕಾಳಗ ಆದಾನಾವಾ
ಆದಾನಾವಾ
ಆದರ ದಶಿಂದ ಸಂಗ್ಯಾನ ಕೊಂದೇವ ನಾವಾ ||
(ಪ್ರೇಕ್ಷಕರಿಗೆ ಕೈಮುಗಿಯುತ್ತಿರುವಂತೆ)
ತೆರೆ
Leave A Comment