(ಸಂಗ್ಯಾ ಹಾರಿ ಬಂದು ಅವಳ ದಾರಿ ಕಟ್ಟುವನು)

ಸಂಗ್ಯಾ : ಎನಕ ಬಗಿ ಬಯಲಕ ಬಿದ್ದೆ ಬಾಳ ದಿನಕಾ
ಹುಣಿವೀ ಚಂದ್ರ ಮೂಡಿಧಾಂಗ ಮರತೇಕಾ
ಕಣ್ಣೀಗಿ ದೀಪಾ ಹಚ್ಚೀಧಾಂಗ ನಿನ್ನ ಬೆಳಕಾ ||

ಜರದ ಶಲ್ಮೆ ಹಾಸಲೇನ ಪಾದ ಬುಡಕಾ
ಇದನೇನ ಸುದಬೇಕ
ಹುಡುಗಿ ನೀ ಮಾತನಾಡ ಜರಾ ಸೋಕ ||

ಬಾಳೆ ಬದುಕು ಜಿಂದಗಾನಿ ಯಾತಕ ಬೇಕ
ಅವನೇನ ಹುಗೀಬೇಕ
ಮಾನ ಅವಮಾನಾ ಎಲ್ಲಾ ಒಂದ ಸಮಕ ||

ಗಂಗಿ : ಯಾಕೋ ಪೋರ ಬಂದ ನಿಂತಿ ನಮ್ಮಿದಿರಾ,
ಸುಮ್ಮನ ಹೋಗೋ ಸುಂದರಾ.
ಹೆಂತಾ ಮಾತಾಡ್ತಿ ಹಾರಪ್ಪಾ ನೀನಾ
ಹತ್ತವಲ್ಲದೊ ಕೂನಾ,
ನನ್ನ ಮುಂದ ಹೇಳಪ್ಪಾ ಯಾರೋ ನೀನಾ?

ಸಂಗ್ಯಾ : ಮೇಲ್ಮನಿ ಸಂಗಣ್ಣಂತ ಕೇಳಿಲ್ಲೇನಾ?
ಮಾಡಬ್ಯಾಡ ಹಗಣಾ
ಯಾಕಲಾ ಗಂಗಿ, ಏನಂತಿ?
ನಿನ್ನ ಮ್ಯಾಲ ನನ್ನ ಮನಸಾಗೇತಿ
ಬಾಯಿ ತೆರೆದ ಕೇಳಿದರ ಮುಗ ಮುರೀತಿ
ಈ ಜನಮದಾಗ ಐನೈತಿ?
ಮೂರ ದಿನದ ಸಂತಿ.
ಮನೀ ಹೊಲಾ ಮರತ ಹತ್ತೇತಿ ನಿನ್ನ ಭ್ರಾಂತಿ
ಹರಲಿ ರಾತ್ರಿ ಬೀಳತಾವ ನಿನ ಕನಸಾ!
ಆಗ ಕೈವಾಸ.
ನೀ ಬಂದರ ಹರಕೊಂಡ ಬಿದ್ದಾಂಗ ಕೈಲಾಸ!
ದಾಟಿ ಹೋಗ ಹೆಂಗ ಹೋಗತಿ

ಗಂಗಿ : ಬಿಡೊ ದಾರಿ! ಹುಡುಗಾಟ ತರವಲ್ಲ
ಹೊತ್ತ ಏರಿ| ಬಂದೀತೊ ನೆತ್ತೀ ಮ್ಯಾಲ ||

ನಿಮ್ಮ ಕೂನಾ| ಗುರುತ ನಮಗೇನಾ
ಕಾಡಬ್ಯಾಡೊ| ಬೀಳುವೆ ನಿಮ್ಮ ಕಾಲಾ ||

ದೊರಿ ಈರ್ಯಾ| ಅವ ನನ್ನ ಪ್ರಾಣಕಾಂತಾ
ಮೈದುನರ| ಇರಪಕ್ಷಿ ಬಸವಂತಾ ||

ತಲಿ ಕಾಲ| ಕಡೆದಾರೊ ನಿನ್ನ ಕ್ವಾಣಾ
ಸಣ್ಣಪೋರ| ಈಗಾರೆ ಅಗೊ ಜಾಣಾ ||

ಹಟಹಿಡದು| ನಿಂತೀಯೋ ನಮ್ಮ ಇದರಾ
ಕೇಳ್ಯಾರೇನೊ| ಗಂಡುಳ್ಳ ಬಾಲ್ಯಾರನಾ ||

ಸಂಗ್ಯಾ : ಏ ಗಂಗಿ.
ಇರಪಕ್ಷಿ ಬಸವಂತಾ, ಕೂಸಿನಂಥಾ ಹುಡುಗರು
ಹಾವಗಾರ ಆಟ ತೋರಿಸಿದರ ಮೈ ಮರೆಯೋರು.
ಈರ್ಯಾ ನಿನ್ನ ಪ್ರಾಣಕಾಂತಾ,
ಗೊತ್ತೈತಿ ಅವನ ಕುವ್ವತ್ತಾ
ತೋರಿಸಿದರ ಮುರ ದುಡ್ಡಾ, ತಿಕ್ಕತಾನ ಮೂಗಾ!
ಕಣ್ಣಿಗಿ ಕಾಣತಿ ದೀಪಾ ಹಚ್ಚಿದಂಗಾ
ನೆವ ಹೇಳಿದರ ಕೇಳಾವಲ್ಲ, ಬಾರs ಗಂಗಾ!

ಗಂಗಿ : ಸಂಗ್ಯಾ
ಅಲ್ಲೇನೊ ನಿನ್ನ ರೀತಿ.
ಪತಂಗಧಾಂಗ ಹಾರ್ಯಾಡ್ತಿ;
ಮಾಯಕ ಬಿದ್ದ ಸುಡತಿ.
ಬೆಲಿಗೇಡಿ, ತಿಳಕೊಳ್ಳೊ ರೀತಿ, ನಡತಿ.
ದಶಮುಖದ ರಾವಣ ಒಯ್ದಾನೊ ಸೀತಾನ,
ಆಯ್ತೇನೊ ಅವನ ಗತಿ??
ದ್ರೌಪದಿಯನೆಳದೊಯ್ದಾ, ದುಶ್ಯಾಸನೇನಾದ?
ಚಾಲಿವರದ ಹೇಳತೇನು; ಹುಚ್ಚಾ ತಿಳಿ.
ಪರಿ ಪರಿ ನಗಿ ಮಾಡಿ ಪಿರಿ ಪಿರಿ ಓಡಿ ಬಂದಿ.
ಸರಿ ದೂರ ಮೂಢಾ, ಮಾನ ಕಳಕೊಂಡಿ.

ಸಂಗ್ಯಾ : ಗಂಗಾ,
ಪುರಾಣದ ಮಾತ ಹೇಳಿ ಓಡಿಹೋದೇನಂತಿ ―
ನನಗೆ ಹತ್ತೇತಿ ನಿನ್ನ ಭ್ರಾಂತಿ.
ಕೂಳ ನೀರ ಬಿಟ್ಟ ಹತ್ತೇನ ಬೆನ್ನಾ
ಹೆಂಗ ಮರೀಲಿ, ದುಂಡಮೋತಿ, ತುಟಿ ತೊಂಡೀ ಹೆಣ್ಣಾ!
ಬಟ್ಟಮಲಿಯ ಹಾಲನಗಿ ಹೆಣ್ಣಾ.
ಕೈ ಮುಗೀತೇನ ಮಾಡ ಗೆಣಿತಾನ
ನಂಬಿ ಹಂಬಲಸ್ತೇನು.
ತೋರಿಸ ದಯಾ ಕರುಣಾ.

ಗಂಗಿ : ನನಗ ಏನ ಗಂಟ ಬಿದ್ದ್ಯೊ ಸಂಗ್ಯಾ
ಹರಲಿ ಹೊರಲಾರ್ಯೊ ನಾನಾ |
ಸಂಗ್ಯಾ ಬಾಳ ದಿನಾ | ನಡಿಯಾಕಿಲ್ಲೊ
ಕೆಟ್ಟ ಹೋದೀಯೋ ನೀನಾ ||

ನಾ ಅತ್ತಿಮನಿ ಸೊಸಿ ಸಂಗ್ಯಾ
ಹರಸೀಯೊ ಒಗತಾನ |
ಕಪ್ಪತಗುಡ್ಡ | ಕಣ್ಣಿಗಿ ಛಾಯಾ
ಹೊದೇನಂತೀಯೋ ನೀನಾ ||

ನಾಳಿ ಸುಣ್ಣಾ ತಿಂದ ಮಂಗ್ಯಾನ್ಹಂಗ
ಹಲ್ಲ ಕಿಸದೀಯೋ ನೀನಾ |
ಇದು ಹುಲ್ಲ ಜೀವಾ | ಅಲ್ಲೋ ಮತ್ತ
ಹುಟ್ಟಾಕ ಕೇಳೊ ಕ್ವಾಣಾ |
ಈರ್ಯಾ ಇದ್ದಾನೊ ಊರ ದೋರಿ
ಬಿಡುವುದು ಹುಲಿ ದಾರಿ |
ಕಡದ ಒಗದಾನೊ | ಹಾಡಾಹಗಲಿ
ಕೊಡಬ್ಯಾಡೊ ಜೀವಬಲಿ ||

ಸಂಗ್ಯಾ, ನಾ ಹೇಳಿದ್ದಾದರು ತಿಳಿದ ಬಂತೇನು?

ಸಂಗ್ಯಾ : ಇಲ್ಲಂಬೊ ಮಾತ ಬಿಟ್ಟ ಬೇಕಾದ್ದ ಹೇಳ, ಕೇಳೇನು. ಏ ಹುಡೀಗಿ
ಕೋಲಮಿಂಚ ಹೊಡೆಧಾಂಗ ಏಕಾ ಎಕಿ.
ಎದೀ ಬಾಗಲಾ ದೂಡಿ ಒಳಗ ಹೊಕ್ಕಿ
ಹೂ ಅನ್ನs ಒಂದ ಸರತಿ
ತೆಕ್ಕೆ ಹಾಯೋಹಾಂಗ ಆಗೇತಿ.
ಕಡೀ ಮಾತ ಕೇಳು,
ಆದ್ದಾಗಲಿ, ನಿನ್ನ ಬಿಡೋದಿಲ್ಲ ನೋಡು.

ಗಂಗಿ : ನಿನ್ನಂಥಾ ಎಚ್ಚರಗೇಡಿ ಹುಚ್ಚುಚ್ಚಾಗಿ ಬೊಗಳಿದರ ನನ್ನಂಥಾ ಅಚ್ಚ ಪತಿವ್ರತೆಯರು ಮೆಚ್ಚಲಾರರು ನೋಡು.

ಸಂಗ್ಯಾ : ಬಿಡೋದಿಲ್ಲ ಗಂಗೀ ನಿನ್ನ.
ಬಾಳೇ ಮಾಡ ಊರಾಗಿನ್ನ
ನಿನ್ನ ಮ್ಯಾಲ ಹೋಗಲೆ ನನ್ನ ಪ್ರಾಣ. ನಿನ್ನ ಬಿಟ್ಟರ ನಾ ಬಾಳ್ಯಾನ ಹಳೀ ದೋತರಕ್ಕ ಸಮ ಅಂತಿ ತಿಳಿ.

ಗಂಗಿ : ನಿನಗೆ ಒಳಗಾದರ ನಾ ಪರಮ್ಮನ ಹರಕ ಸೀರಿಗಿ ಸಮ ಅಂತ ತಿಳಿ.
(ಎಂದ ಹೇಳಿ ಓಡುವಳು. ಅವಳು ತಪ್ಪಿಸಿಗೊಂಡತೆ ಇವನು ಬೆನ್ನಟ್ಟಿದಂತೆ ನರ್ತಿಸುತ್ತ ಅಭಿನಯಿಸುವರು. ಕೊನೆಗೆ ಗಂಗಿ ತಪ್ಪಿಸಿಕೊಂಡು ಓಡುವಳು. ಸಂಗ್ಯಾ ಅವಳು ಹೋದುದನ್ನೇ ನೋಡುತ್ತ ನಿಲ್ಲುವನು. ಬಾಳ್ಯಾ ಪ್ರವೇಶಿಸುವನು.)

ಸಂಗ್ಯಾ : ಗೆಳೆಯಾ ಬಾಳಣ್ಣ, ಗೊತ್ತಾತ ಬಾರೊ

ಬಾಳ್ಯಾ : ಏನ ಗೊತ್ತಾತು?

ಸಂಗ್ಯಾ : ಪರಮ್ಮನಿಂದ ಈ ಕೆಲಸ ಆಗತೈತಿ, ಬರುವಂಥವನಾಗು.
(ಇಬ್ಬರೂ ಹೋಗುವರು)