(ಸಂಗ್ಯಾ, ಗಂಗಿ ಬರುವರು, ಅವರ ಹಿಂದೆ ದೂರದಲ್ಲಿ ಬಾಳ್ಯಾ ನಿಂತಿರುವನು.)

ಸಂಗ್ಯಾ : ಎಲೆ ಗಂಗ್ಯಾ, ನಾನಾದರು ಊರ ಬಿಟ್ಟ, ಮನೀ ಬಿಟ್ಟ ನಿನ್ನ ತವರ ಮನೀಗಿ ಬಂದ ಭಾಳ ದಿನಾ ಆತು. ಗೆಳೆಯಾ ಬಾಳಣ್ಣ ಒಬ್ಬನs ಇದ್ದ. ಬ್ಯಾಸರಾಗಿ ಇಂದ ಕರ್ಯಾಕ ಬಂದಾನು. ನಾನಾದರು ಹೋಗತೇನು ಕಳಸಿಕೊಡುವಂಥವಳಾಗು.

ಗಂಗಿ : ಸಂಗ್ಯಾ, ನಿನ್ನಿ ರಾತ್ರಿ ನನಗ ಭಾಳ ಕೆಟ್ಟ ಕನಸ ಬಿದ್ದಾವು. ಈರ್ಯಾ ಇರಪಕ್ಷಿ ಬಸವಂತಾ ಇನ್ನೂ ನಿನ್ನ ಹುಡುಕತಿರಬೇಕು.  ಇನ್ನಷ್ಟು ದಿನಾ ಇದ್ದ ಆಮ್ಯಾಲ ಹೋಗುವಂಥವರಾಗರಿ.

ಸಂಗ್ಯಾ : ಗಂಗಾ, ಅಂತಾವರಿಗೆಲ್ಲಾ ಅಂಜಿ ಎಷ್ಟ ದಿನಾ ಅಂತ ಊರ ಬಿಟ್ಟ ಇರಾಕ ಆಗತೈತಿ? ಮನಿಮಾರ ಏನೇನಾಗ್ಯಾವಂತ ಗೊತ್ತಿಲ್ಲಾ, ನಮ್ಮ ಸುದ್ದಿ ಮರತಾರಂತ ಇಂದs ಬಾಳಣ್ಣ ಹೇಳ್ಯಾನಂದಮ್ಯಾಲ ಹೆದರಿಕೇನು? ಸುಮ್ಮನ ಕಳಸಿ ಕೊಡುವಂಥವಳಾಗು.

ಗಂಗಿ : ಸಂಗ್ಯಾ, ಆ ಘಾತ ಬಾಳ್ಯಾ ಬೇತ ಮಾಡಿದ್ದಾನು. ನಂಬಬ್ಯಾಡಂತ ಎಷ್ಟ ಸಲ ಹೇಳೇನಿ. ನನ್ನ ಮಾತ ಕೇಳವೊಲ್ಲಿ; ಹೆಂಗ ಹೇಳಲಿ?

ಸಂಗ್ಯಾ : ನನ್ನ ಮಾರಿ ನೋಡಿ ಮತ್ಯಾಕಳತಿ
ಹೇಳಾಕ ನನ್ನ ಗೆಳತಿ?
ಹಿಂಗ ಮನಸಿನೊಳಗೆ ಯಾಕಳತಿ
ಚಿಂತೀಲೆ ಏನ ಭ್ರಾಂತಿ?
ಯಾರ ಬೈದರೇನ ಗಂಗಾ ನಿನ್ನ
ದುಕ್ಕ ಪಡತಾರೇನ?
ಹಿಂಗ ಭಾಸಿಕೊಟ್ಟ ಮ್ಯಾಲ ಗಂಗಾ
ಮೋಸ ಮಾಡುವರೇನಾ?
ಇಸವಾಸ ಗೆಳಿತಾನ
ಬಾಳ್ಯಾಂದು ಭಾಳೈತಿ.
ಇದು ಚಿಕ್ಕಂದಿರತ ಕೂಡಿದ ಮೈತ್ರಿ
ಎರಡ ಮಾಡೇನಂತಿ.

ಗಂಗಿ : ಸಿಟ್ಟ ಮಾಡಬ್ಯಾಡ್ರಿ ಸಂಗ್ಯಾ, ನನ್ನ ಕೊರಳ ಮುಟ್ಟಿ ಹೇಳತೇನು; ಇದರಾಗೇನೊ ಬೇತ ಐತಿ.

ಬಾಳ್ಯಾ : ಗೆಳೆಯಾ ಸಂಗಣ್ಣಾ, ಇನ್ನೂ ಮುಗೀಲಿಲ್ಲೇನೊ?

ಸಂಗ್ಯಾ : ಎಲೇ ಗಂಗಾ…

ಗಂಗಿ : ಸಂಗ್ಯಾ ಯಾಕೋ ನನ್ನ ಬಲಗಣ್ಣ ಹಾರಲಿಕ್ಕೆ ಹತ್ತಿರುವುದು. ಇಂದ ಇದ್ದ ನಾಳಿ ಹೋಗುವಂಥವರಾಗರಿ.

ಸಂಗ್ಯಾ : ಗೆಳೆಯಾ ಬಾಳಣ್ಣಾ, ಎಂದೂ ಇಲ್ಲದ ಗಂಗಾ ಇಂದಿಷ್ಟ ಕೇಳಿಕೊಳ್ಳುತಾಳು. ಇಷ್ಟು ದಿನ ಊರ ಬಿಟ್ಟಿದ್ದ ಮ್ಯಾಲ ಇನ್ನೊಂದ ದಿನಕ್ಕ ಯಾಕ? ನನಗೂ ಬಲೆ ಬಲೆ ಅಪಶಕುನ ಆಗ್ಯಾವು. ನಾ ನಾಳಿ ಬರತೇನು, ನೀ ಹೋಗುವಂಥವನಾಗು.

ಬಾಳ್ಯಾ : ಗೇಳೆಯಾ ಸಂಗಣ್ಣಾ , ನೀನs ಇಲ್ಲದ ಬೈಲಹೊಂಗಲ ಒಂದ ಊರೇನೊ? ನೀ ಇತ್ತ ಬಂದಾಗಿನಿಂದ ಹುಡುಗಾ, ನಾ ಏನ ಹಾ ಅಂತ ನಕ್ಕಿಲ್ಲಾ, ಚಪ್ಪಾಳಿ ತಟ್ಟಿಲ್ಲಾ. ಊರಂತೂರ ಬಣ ಬಣ ಅಂತೈತಿ. ಆ ಹುಚ್ಚುಚ್ಚ ಅಪಶಕುನ ಏನ ಮಾಡ್ಯಾವು? ಅಪಶಕುನ ನಂಬಿ ಎಷ್ಟ ದಿನ ಅಡಗಿಕೊಂಡಿರಾಕ ಆಗತೈತಿ? ಅಷ್ಟು ಮೀರಿ ಈರ್ಯ್ಯಾ ಏರಿ ಬಂದರ ಅವನ ತಾಕತ್ತ ನಮಗ ಮೀರಿದ್ದೇನ? ಅವನಷ್ಟs ತಾಯೀ ಹಾಲ ಕುಡದಿಲ್ಲಾ. ನಾವೇನೂ ನಾಯೀ ಹಾಲ  ಕುಡದ ಬೆಳೆದಿಲ್ಲಾ, ನಾವೊ ಒಂದು ಕೈ ತೋರಸೋಣಂತ, ಹೊರಟ ಬರುವಂಥವನಾಗು.

ಸಂಗ್ಯಾ : ಎಲೇ ಗಂಗಾ, ಬಾಳಾಣ್ಣ ಹೇಳಿದ ಮಾತ ಖರೇ ಇರುವುದು. ದಿನ ಬೆಳಗಾದರ ಮೋತಿಗಿ ಮೋತಿ ನೋಡವರಂದಮ್ಯಾಲ ಒಮ್ಮಿ ಖುಲಾಸ ಆಗೋದು ಚೆಲೋ ಐತಿ. ನಿನ್ನ ಗಂಡ ಈರ್ಯ್ಯಾನ ಸ್ವಭಾವ ನನಗ್ಗೊತ್ತಿಲ್ಲೇನ? ಒಂದ ಹೆಣ್ಣ ಖರ್ಚ ಮಾಡಿ ಮದಿವಿ ಮಾಡಿ ಕೊಡತೇನಂದರ ಸುಮ್ಮನಾಗತಾನು. ನಾನಾದರು ಆಗಾಗ ಬರತೇನು, ಕಳಿಸಿಕೊಡುವಂಥವಳಾಗು.

ಗಂಗಿ : ಆಗಲಿ ಸಂಗ್ಯಾ ಹೋಗುವಂಥವರಾಗರಿ.
(ಗಂಗಿ ಒಂದು ದಿಕ್ಕಿಗೆ, ಸಂಗ್ಯಾ ಬಾಳ್ಯಾ ಇನ್ನೊಂದು ದಿಕ್ಕಿಗೆ ಹೋಗುವರು.)