(ಮಾರವಾಡಿ ಅವನ ಹಿಂದೊಬ್ಬ ಆಳು ನರ್ತಿಸುತ್ತ ಬರುತ್ತಾರೆ)

ಮಾರಾವಾಡಿ : ನಾವು  ಮಾರವಾಡೇರಾ
ಮುತ್ತು ಮಾಣಿಕದ ಯಾಪಾರ ಮಾಡಾವರಾ||
ಗುಜ್ಜರ ದೇಶದವರಾ
ಯಾಪಾರ ಮಾಡಾಕ ಬಂದವರಾ||
ಶಾರ ಮುಂಬೈದೊಳಗ ನಮ್ಮ ಯಾಪಾರರೇ
ಮುತ್ತ ಮಾರತೇವ್ರಿ ದಿನಕ ಒಂದ ಹಜಾರರೇ||
ಥರಾ ಥರಾ ನಮನಿ ಅರಿವಿ ತಂದೇವರಿ
ಮಕಮಲ್ಲ ಮಂಗ್ಯಾನ ಹೂವ ಮಾರೇವರಿ||

ಓಹೋ| ನಾವು ನಾಡಮ್ಯಾಲಿನ ಮಾರವಾಡಿಗಳು. ನಮ್ಮ ಹೇಂತಿ ಮಕ್ಕಳಿಗೆ  ಇರೋದು ಗುಜರಾತಿ, ನಾವಿಲ್ಲಿ ಮಾರತೇವ್ರಿ ತರತರ ಆರಿವಿ. ಶಾರ ಮುಂಬೈದಾಗ ನಮ್ಮದು ಬೇಪಾರ ನಡಿತಾವರಿ ಅಗ್ಗದೀ ಜೋರದಾರ. ಕರವತಟಿ ದೋತರ, ತರತರ ರುಂಬಾಲ, ಸಾಟೀ ನಂಬರ ಜರಾ ತಗದ ಪೈರಾಣ  ನಮ್ಮ ಅಂಗಡ್ಯಾಗ ಏನಿಲ್ಲಾ: ಅದು ದೇಶದಾಗs ಇಲ್ಲ. ದೇಶದಾಗ ಏನೇನ ಅದಾವ, ನಮ್ಮ ಅಂಗಡ್ಯಾಗ ಅದಾವ. ಯಾನಿದು? ಯಾರೋ ನಮ್ಮ ಅಂಗಡೀ ಕಡೆ ಓಡೋಡಿ ಬರತಾವ್? ಓಹೋ, ಸಾವ್ಕಾರ ಸೇಂಗಾಪಾ. ಬಡವ ಬಾಡ್ಯಾ ಬರತಾವ! ಬರ್ರಿ ಬರ್ರಿ ಸಾವ್ಕಾರ ಸೇಂಗಾಪಾ, ಬರ್ರಿ.

(ಸಂಗ್ಯಾ ಬಾಳ್ಯಾ ನರ್ತಿಸುತ್ತ ಬರುವರು.)

ಸಂಗ್ಯಾ : ಏನ್ರಿ, ಸೇಡಜಿ ಅಂಗಡ್ಯಾಗಿದ್ದೀರೇನು?

ಮಾರಾವಾಡಿ : ಯಾಕ, ನಾವ್ ಸತ್ಹಾಂಗ ಕಾಣತಾವೇನು?

ಬಾಳ್ಯಾ : ಗೆಳೆಯಾ ಸಂಗಣ್ಣ, ಸೇಡಜಿ ಸಿಕ್ಕಾನಂತ ಬಂದರ ಹೆಣಾ ಬಂತು, ಅಪಶಕುನಾತು. ಈ ಅಂಗಡ್ಯಾಗ ಯಾಪಾರ ಬ್ಯಾಡ. ನಡಿಯೋ ನಿನ.

ಸಂಗ್ಯಾ : ಗೆಳೆಯಾ ಬಾಳಣ್ಣ, ಈ ಸೇಡಜಿಗೂಳ ಮಾತs ಹಾಂಗ. ಅದನ್ಯಾಕ ಮನಸಿಗಿ ಹಚಿಕೋತಿ, ಬಾರೋ ನಿನ.

ಮಾರವಾಡಿ : ಸೇಂಗಾಪಾ, ಮಣೀ ಕೆಳಗ ತಳಾ ಊರತಾವ್ ?

ಸಂಗ್ಯಾ : ಏನ್ರೀ ಸೇಡಜಿ. ನಾವಾದರು ಮಣೀಮ್ಯಾಲ ಕುಂತೀವಿ ನೋಡ್ರಿ.

ಮಾರವಾಡಿ : ಸೇಂಗಾಪಾ ಏನೇನ ಬೇಡತಾವ್ ?

ಸಂಗ್ಯಾ : ಸೇಡಜಿ, ಕರವತಟಿ  ದೋತರ, ಗ್ವಾಡಂಬಿ ರುಂಬಾಲ, ಮಲ್ ಮಲ್ ಅಂಗಿ, ಜರದ ಶಲ್ಯೆ, ಕಂಟಿಗೋಪಾ, ಮುತ್ತಿನ ಹಾರ ― ಇಷ್ಟೂ ಎಲ್ಲಾ ತಗದ ಕೊಡುವಂಥವರಾಗಿರಿ.

ಮಾರವಾಡಿ : ಅರೇ ಹಾಲ ಮನಿಶ್ಯಾ, ಸೇಂಗಾಪಾ ಹೇಳಿದ್ದ ಕೇಳಿಸಿ ಬಂತೇನು?

ಆಳು : ಕೇಳಿಸ್ತು.

ಮಾರವಾಡಿ : ಅಷ್ಟು ಎಲ್ಲಾ ತಗಂಬಾ

ಆಳು : ಸೇಡಜಿ, ನಾನಾದರು ಕರವತಕಟಿ ದೋತರಾ, ಗ್ವಾಡಂಬಿ ರುಂಬಾಲ,  ಮಲ್ ಮಲ್ ಅಂಗಿ, ಜರದ ಶಲೈ, ಕಂಟೀ  ಗೋಪಾ, ಮುತಿನ ಹಾರ ಇಷ್ಟೂ ತಂದ ಇಟ್ಟಿದೇನ ನೋಡ್ರಿ.

ಮಾರವಾಡಿ : ಸೇಂಗಾಪಾ ಅಷ್ಟು ಎಲ್ಲಾ ತಗದ ಕೊಟ್ಟೀದೇವು.

ಸಂಗ್ಯಾ : ಇಷ್ಟಕ್ಕೆಲ್ಲಾ ಕಿಮ್ಮತ್ತ ಎಷ್ಟ ಆತರಿ?

ಮಾರವಾಡಿ : ಸೇಂಗಾಪಾ ತೀನಸೇ ರೂಪಾಯಿ, ತೀಸ ಪೈಸೆ ಆತ ನೋಡ್ರಿ.

ಸಂಗ್ಯಾ : ಏನ್ರೀ ಸೇಡಜಿ, ತೀನಸೇ ರೂಪಾಯಿ ತಗೊಳ್ರಿ. ಮ್ಯಾಲಿನ ತೀಸ ಪೈಸಾ ಬಿಡುವಂಥವರಾಗಿರಿ.

ಮಾರವಾಡಿ : ಅರೇ ಸೇಂಗಾಪಾ ತೀನಸೇ ರೂಪಾಯಿ ಬಿಡತೇನು. ಮ್ಯಾಲಿನ ತೀಸ ಪೈಸೆ ಬಿಡಾಕಿಲ್ಲ, ನೋಡು.

ಸಂಗ್ಯಾ : ಹಾಂಗs ಆಗವೊಲ್ದ ಯಾಕ, ಏನ್ರೀ ಸೇಡಜಿ, ರೊಕ್ಕದ ಕೋಟ ಕಳದ ಮನ್ಯಾಗಿಟ್ಟೀನಿ. ಆನಕರ್ಚಿಗೆ ಇರಲೆಂತ ಕಿಸೇದಾಗ ಹತ್ತಿಪ್ಪತ್ತ ರೂಪಾಯಿ ತಂದಿದ್ನಿ. ತೀನಸೇ ರೂಪಾಯಿ ಈಗ ನನ್ನ ಹಂತ್ಯಾಕಿಲ್ಲ. ಮನೀಗಿ ಹೋಗಿ ತಂದುಕೊಡತೇನು. ನಡದೀತೇನ್ರಿ?

ಮಾರವಾಡಿ : ಆರೇ ಸೇಂಗಾಪಾ, ನಮ್ಮ ಅಂಗಡೀ ವ್ಯವಹಾರ ನಿನಗ್ಗೊತ್ತಿಲೇನು? ಇಂದು ರೋಖ ನಾಳೆ ಉದ್ರಿ, ರೊಕ್ಕ ಇಡಬೇಕ್, ಮಾಲ ಒಯ್ಯಬೇಕ್! ನಮ್ಮ  ಮುಂದ ಪಂಟಗಿಂಟ ನಡಿಯಾಕಿಲ್ಲಾ ― ಹಾಗಂತ ನಮ್ಮ ಕಲದೇವರ ಅಪ್ಪಣೆ ಆಗ್ಯಾವ.

ಸಂಗ್ಯಾ : ಏನ್ರಿ ಸೇಡಜಿ, ಯಾಳೆ, ಹೊತ್ತಾ ಯಾರಿಗೇನ ಹೇಳಿ ಬರತಾವ? ಅಷ್ಟೂ ವಿಶ್ವಾಸ ಇಲ್ಲದಿದ್ದರೆ ನನ್ನ ಗೆಳೆಯಾ ಬಾಳಣ್ಣನ್ನ ಇಲ್ಲಿ ಕೂರಿಸಿರತೇನು. ಮನೀಗಿ  ಹೋಗಿ ರೊಕ್ಕ ತರತೇನು, ಆದೀತೇನ್ರಿ?

ಮಾರವಾಡಿ : ಅರೇ ಸೇಂಗಾಪಾ, ನಿನ್ನ ಮ್ಯಾಲ ಅಷ್ಟೂ ವಿಶ್ವಾಸ ಇಲ್ಲೇನು? ಬಾಡ್ಯಾ  ಇಲ್ಲೇ ಇರಲಿ, ನಿ ಹೋಗಿ ರೊಕ್ಕಾ ತಗೊಂಬರುವಂಥವನಾಗು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ನಾ ಬಡವಂತ ನಿನ್ನ ಬೆನ್ನ ಹತ್ತಿದರ ಸೇಡಜಿ ಅಂಗಡ್ಯಾಗ ಅಡವಿಟ್ಟ ಹೊಂಟೇನೊ?

ಸಂಗ್ಯಾ : ಗೆಳಿಯಾ ಬಾಳಣ್ಣಾ. ಅದನ್ಯಾಕಿಷ್ಟ ಮನಸಿಗಿ ಹಚ್ಚಿ ಕೊಳ್ತಿ? ನಾ ಕುಂತರೂ  ಒಂದs, ನೀ ಕುಂತರೂ ಒಂದs, ಹಾಂಗೇನೂ ಎರಡ ತಿಳಿಕೊಬ್ಯಾಡ. ಈಗಿಂದೀಗ ಹೋಗಿ ಹತ್ತ ಮಿನಿಟದಾಗ ಬರತೇನು ಕಾಳಜಿ ಮಾಡಬ್ಯಾಡ.

ಬಾಳ್ಯಾ : ಹಾಂಗಿದ್ದರ ಗೆಳೆಯಾ ಸಂಗಣ್ಣಾ, ನೀನಾದರು ಮನೀಗಿ ಹೋಗಿ ಲಗುs ಬರುವಂಥವನಾಗು.

ಸಂಗ್ಯಾ : ಆಗಲಿ, ಗೆಳೆಯಾ ಬಾಳಣ್ಣ , ನೀ ಹಾ ಅನೂದರಾಗs ಬರತೇನು, ಹಾ ಅನ್ನು.

ಬಾಳ್ಯಾ : ಹಾ…………………….. (ಸಂಗ್ಯಾ ನರ್ತಿಸುತ್ತ ಓಡುವನು.)

ಮಾರವಾಡಿ : ಅರೇ ಬಾಡಪ್ಪಾ, ನಾ ಉಟಾ ಮಾಡಿ ಬರತೇವು. ಅಲ್ಲೀತಂಕ ನೀ ಇಲ್ಲೇ ಕೂರವಂಥವನಾಗು. (ಆಳಿಗೆ) ಅರೇ ಹಾಲ ಮನಿಶ್ಯಾ, ಈ ಬಾಡ್ಯಾ ಭಾಳ ಬೆರಿಕಿ. ಯಾಳೇ ಸಿಕ್ಕರ ಸಿಗದ ಹಾಕೋ ಪೈಕಿ. ಅಂಗಡಿ ಬಿಟ್ಟ ಎಲ್ಲಿಗೂ ಹೋಗಬ್ಯಾಡ….

ಆಳು : ಸೇಡಜಿ ನಾನಾದರು ಇಲ್ಲೇ ಕುಂತಿರತೇನು. ನೀವಾದರು ಹೋಗಿ ಬರುವಂಥವರಾಗಿರಿ. (ಮಾರವಾಡಿ ಒಳಗೆ ಹೋಗುವನು.)

ಬಾಳ್ಯಾ : (ತನ್ನಲ್ಲಿ) ಅಡಡಡ! ಸಿಗಬಾರದ ಹಿಂತಾ ಯಾಳೆ ನನಗೆ ಇನ್ನೆಂದ ಸಿಕ್ಕೀತು? ಈ ಆಳ ಮನಿಶ್ಯಾನ ನೀರತರಾಕ ಕಳಸ ಬೇಕು. ಅವ ಬರೂದರೊಳಗs ಸಿಕ್ಕಷ್ಟ ಸಿಗಹಾಕ್ಕೊಂಡ ಓಡಿ ಹೋಗಬೇಕು. ಹೇಂತಿ, ಮಕ್ಕಳಾ ಉಡತೊಡಾಕ ಅರಿವಿಲ್ಲದs ಮನ್ನ್ಯಾಗs ಕುಂತಾರು. ಈಗ ದುಡಕೊಂಡರ ಹೇಂತಿ ಮಕ್ಕಳ ಹತ್ತವರ್ಷ ಜಟ್ಟಾದರು ಕಡದೀತು.

(ಆಳಿಗೆ)

ಹಾ ಏನಪಾ ಆಳಮನಿಶ್ಯಾ. ಬಾಯಾರಿಕಿ ಭಾಳ ಆಗೇತಿ; ಕುಡ್ಯಾಕೊಂದ ಚರಗಿ ನೀರ ತಂದೀಯೇನು?

ಆಳು : ಏನೋ ಬಾಳಣ್ಣಾ, ಕುಡ್ಯಾಕ ನೀರ ಬೇಕಾದರ ಅಷ್ಟ ಯಾಕ ತಲೀ ಕೆಡಿಸಿ ಕೊಂಡಿ? ಈಗಿಂದೀಗ ತರತೇನು. ಇಲ್ಲೇ ಇರುವಂಥವನಾಗು.

ಬಾಳ್ಯಾ : ಏನಪಾ, ನಾ ಇಲ್ಲೇ ಇರತೇನು, ನೀನಾದರು ಹೋಗಿ ನೀರು ತರುವಂಥವನಾಗು. (ಆಳು ಹೋಗುವನು. ಬಾಳ್ಯಾ ಬೇಗ ಬೇಗ ಕೈಗೆ ಸಿಕ್ಕ ಬಟ್ಟೆಗಳನ್ನೆಲ್ಲ ತೆಗೆದುಕೊಳ್ಳುವಂತೆ ಅಭಿನಯಿಸುತ)

ಇದು ನನ್ನ ಮಗನಿಗೆ, ಇದು ಹೇಂತಿಗೆ, ಇದು ಮಗಳಿಗೆ, ಇದು ಈ ವರ್ಷಕ್ಕೆ, ಇದು ಮುಂದಿನ ವರ್ಷಕ್ಕೆ. ಇದು ಹತ್ತ ವರ್ಷಕ್ಕೆ…. ಸಧ್ಯೇ ಸಾಕು ಈಗ ಓಡತೀನಿ.

(ಓಡಬೇಕೆನ್ನುವಷ್ಟರಲ್ಲಿ ಮಾರವಾಡಿ ಹೊಯ್ಕೊಳ್ಳುತ್ತ ಬರುವನು.)

ಮಾರವಾಡಿ : ಅಯ್ಯಯ್ಯೋ, ಬಡವ ಭಾಡ್ಯಾ ನನ್ನ ಅಂಗಡಿ ಲೂಟಿ ಮಾಡತಾನ; ಓಡಿ ಬರ್ಯ್ಯೋ, ಬರ್ಯೋ……….

(ಆಳು ಓಡಿಬಂದು ಓಡುತ್ತಿರುವ ಬಾಳ್ಯಾನನ್ನ ಹಿಡಿದು ಹೊಡೆಯುವನು. ಬಾಳ್ಯಾ ಸತ್ತ ಹಾಗೆ ಬೀಳುವನು. ಇಬ್ಬರೂ ಅತ್ತಿತ್ತ ಗಾಬರಿಯಾಗಿ ಓಡಾಡುವರು)  ಅರೇ ಹಾಳಾಮನಿಶ್ಯಾ, ಭಾಡ್ಯಾ ಸತ್ತs ಬಿಟ್ಟ ! ಏನ ಮಾಡೋಣು?

ಆಬ್ಬಬ್ಬ ಇದೇನ ಸೋಜಿಗ ಸುಡಲ್ಯೊ ಆರಿವಿ
ನಾಡಮ್ಯಾಲ ಹೆಂಡಿರು ಮಕ್ಕಳು ಇರೋದು ಗುಜರಾತಿ||

ಆಂದಿಲ್ಲ ಆಡಿಲ್ಲ ಬೇದಿಲ್ಲ ಬಡದಿಲ್ಲ
ಸತ್ತವರ್ಹಾಂಗ ಬಿದ್ದಾ||

ದೇಶದೊಳು ಗುಜರಾತ ನಾಡು
ಮಾರತಾವ್ರಿ ಮುತ್ತಾ||

ತೋಡ ಹೇಳಿ ಬಾಳ್ಯಾ ಓಡಿ ಹೋಗುವಾಗ
ಎಡವಿ ಬಿದ್ದಸತ್ತಾ||

ಅರೇ ಅರೆ ಪೋಳಿಸರ ಬಂದರ ನನ್ನ ಗತಿಯೇನ್? ನಮ್ಮ ಅಂಗಡಿ ಗತಿಯೇನ್? ಆರೇ ದಾರಿಕಾರಣ್ಣಾ, ದಾರಿಕಾರಣ್ಣಾ ಈ ಹೇಣಾ ಒಯ್ದ ಹೊಳ್ಯಾಗ ಒಗೀತಿ?

(ಬ್ಯಾಗಾರಿ ಬರುವನು.)

ಬ್ಯಾಗಾರಿ : ಏನ್ರಿ ಸೇಡಜಿ. ಈ ಹೆಣಾ ಒಯ್ದ ಹೊಳ್ಯಾಗ ಒಗದರ ನನಗೇನ ಕೊಡತೀರಿ ?

ಮಾರವಾಡಿ : ಅಪಾ ಶಂಬೋರಿ ರೂಪಾಯಿ ಕೊಡತೇವು.

ಬ್ಯಾಗಾರಿ : ಕೊಡರಿ ಹಾಂಗಾದರ.

(ಮಾರವಾಡಿ ಕೊಡುವನು. ಬ್ಯಾಗಾರಿ ನಗುತ್ತ ಬೆನ್ನು ತಟ್ಟುವನುಬಾಲ್ಯಾ ಎದ್ದು ಓಡುವನು ಬ್ಯಾಗಾರಿಯೂ ಓಡುವನು.)

ಮಾರವಾಡಿ : ಅರೇ ಅರೇ ರಂಡೆಗಂಡಾ, ನಿನ್ನ ಹೇಂತಿ ರಂಡಿ ಆಗಲಿ.

ಸಂಗ್ಯಾ : (ಬರುವನು.) ಯಾಕ್ರಿ ಸೇಡಜಿ, ಯಾರನ್ನ ಬೈತೀರಿ ?

ಮಾರವಾಡಿ : ಏನ್ರೀ ಸೇಂಗಾಪಾ, ರೊಕ್ಕಾ ತರಾಕ ನೀವು ಅತ್ತ ಹೋದಿರಿ. ನಾವಿತ್ತ ಊಟಕ ಒಳಗೆ ಹೋದಿವಿ. ನಿಮ್ಮ ಗೆಳೆಯಾ ಬಾಡ್ಯಾ ನಮ್ಮಂಗಡಿ ಮಾಲ ಕದ್ದ ತಗೊಂಡ ಓಡೊಡಿಹೋದ. ಹಿಂಗ ಮಾಡಿದರ ಸುಮ್ಮನ ಬಿಡುತೇವೇನ್? ಪೋಲೀಸ, ಪೋಜದಾರನ ಕರಸತೇವ್, ಸರಕಾರಕ್ಕ ಹೇಳತೇವ್, ಹಾಂಗs ಎಲ್ಲಿ ಬಿಡತೇವ್ ? ಭಾಡ್ಯಾ….

ಸಂಗ್ಯಾ : ಏನ್ರಿ ಸೇಡಜಿ, ಬಡವರ ಆಸೇ ಭಾಳ ಕೆಟ್ಟ. ನನ್ನ ಗೆಳೆಯಾ ಕದ್ದರೂ ಒಂದs ನಾ ಕದ್ದರೂ ಒಂದs. ಒಟ್ಟ ಅದೆಷ್ಟಿರುವುದು ಹೇಳುವಂಥವರಾಗಿರಿ.

ಮಾರವಾಡಿ : ಸೇಂಗಪಾ ನಿನ್ನ ಮೋತಿ ನೋಡಿ ಬೀಡತೇವ, ಇಲ್ಲದಿದ್ದರ ಈ ಭಾಡ್ಯಾಗ ಬುದ್ಧೀ ಕಲಿಸತಿದ್ದಿವಿ. ಒಟ್ಟ ನೋಡ್ರಿ , ಕದ್ದ ಮಾಲ, ಕೊಂಡ ಮಾಲ ― ಎರಡೂ ಕಿಮ್ಮತ್ ಕೂಡಿಸಿ ಪಾಚಸೇ ರೂಪಾಯಿ, ಪನ್ನಾಸ ಪೈಸೆ ಆತ ನೋಡ್ರಿ.

ಸಂಗ್ಯಾ : ಪಾಚಸೇ ರೂಪಾಯಿ ತಗಿಳ್ರಿ. ಪನ್ನಾಸ ಪೈಸೆ ಸೂಟು ಬಿಡಿರಿ.

ಮಾರವಾಡಿ : ಅರೇ ಸೇಂಗಾಪಾ, ಪಾಚಸೇ ರೂಪಾಯಿ ಬಿಡತಾವ, ಆದರ ಪನ್ನಾಸ ಪೈಸೆ ಬಿಡಾಕಿಲ್ಲ.

ಸಂಗ್ಯಾ : ಹಾಂಗಾದರ ಅಷ್ಟೂ ತಗೊಳ್ಳುವಂಥವರಾಗಿರಿ.

ಮಾರವಾಡಿ : ಕೊಡುವಂಥವರಾಗಿರಿ.

ಸಂಗ್ಯಾ : ಇನ್ನೇನ ಪೋಲೀಸರಿಗಿ ಹೇಳಬ್ಯಾಡ್ರಿ.

ಮಾರವಾಡಿ : ಇನ್ನ ಯಾಕ ಹೇಳೋಣ ? ಹೇಳೋದಿಲ್ಲ, ನಿಶ್ಚಿಂತ ಹೋಗುವಂಥವರಾಗಿರಿ.
(ಸಂಗ್ಯಾ ರ್ನತಿಸುತ್ತ ಹೋಗುವನು. ಮಾರವಾಡಿ ಹಿಂದೆ ಸರಿಯುವನು.)