(ಪೋಸ್ಟಮನ್ನರ್ತಿಸುತ್ತ ಬರುವನು)

ಪೋಸ್ಟಮನ್ : ಒತ್ತರ ಮಾಡಿ ಪತ್ತರ ತಂದೇನಾ ಈರಣ್ಣಗಾ
ಈರಣ್ಣನ ಮನಿ ದಾವಲ್ಲಿ ಹೇಳರಿ ನಮಗಾ ||

ಕೇಳಬೇಕಂದ್ರ ಓಣ್ಯಾಗ ಯಾರೂ ಇಲ್ಲಾ
ಲಗಳೇರ ಮನಿ ಗುರುತ ನಮಗಿಲ್ಲಾ ||

ಪೋಸ್ಟ್ಮನ ನೌಕರಿ ಪಗಾರ ನೂರಾ
ನಾಡಿಗಿ ದೊಡ್ಡದು ಇಂಗರೇಜಿ ಸರಕಾರ ||

ಒಹೋ! ಪೋಸ್ಟಮನ್ ನೌಕರಿ ಅಂದರ ನಾಡಿಗೇ ಘನವಾದ್ದು. ಶಂಬೋರಿ ನೂರಾ, ಕೈತುಂಬ ಪಗಾರ, ಜಗತಿಗೇ ದೇವರ; ಇಂಗರೇಜಿ ಸರಕಾರ. ಓಹೋ! ಬಳ್ಳಾರಿ ದೇಶದಿಂದ ಪತ್ರ ಬಂದೇತಿ, ಲಗಳೇರ ಈರ್ಯಾನ ಮನಿ ದಾವಲ್ಲಿದ್ದೀತು?
(ಈರ್ಯಾ ಬರುವನು)
ಎನಪಾ ಸಜ್ಜನಾ, ಈರ್ಯಾ ಲಗಳೇರ ಮುಕ್ಕಾಂ ಬೈಲಹೊಂಗಲ ಅವನ ಮನಿ ಎಲ್ಲೇತಿ?

ಈರ್ಯಾ : ಏನ್ರೀ ಪೋಸ್ಟಮನ್ ಸಾಹೇಬರ, ಈರ್ಯಾ ಲಗಳೇರ ನಾನs ನೋಡ್ರೀ.

ಪೋಸ್ಟಮನ್ : ಏನಪಾ ಈರ್ಯಾ, ನಿನ್ನ ಪತ್ರ ಬಂದಿರುವುದು, ತಗೊಳ್ಳುವಂಥವನಾಗು.

ಈರ್ಯಾ : ಕೊಡುವಂಥವರಾಗಿರಿ.
(ಪೋಸ್ಟಮನ್ಕೊಟ್ಟು ನರ್ತಿಸುತ್ತ ಹೋಗುವನು.)
ಒಹೋ ಬಳ್ಳಾರಿ ಸಾವ್ಕಾರಾ ಪತ್ರ ಬರೆದಿರುವನು ―
(ಓದುತ್ತ)
ಹತ್ತು ವ್ಯಾಪಾರಿಗಳಲ್ಲಿ ಮುತ್ತಿನಂತೆ ಹೋಳೆಯುವ ರಾಜಮಾನ್ಯಾ ರಾಜೇಶ್ರೀ ಈರಾ, ಲಗಳೇರ, ಮುಕ್ಕಾಂ ಬೈಲಹೊಂಗಲ ಇವರಿಗೆ, ಅಪ್ಪಾ ಈರ್ಯಾ ಈ ಕಡೆ ಮುತ್ತಿನ ವ್ಯಾಪಾರ ಅಗ್ಗದೀ ಜೋರ್ ಐತಿ. ಜಲ್ದೀ ರೊಕ್ಕ ರೂಪಾಯಿ ತಗರೊಂಡ ಬರುವಂಥವನಾಗು, ಇಂತೀ ನಿಮ್ಮ ಇಂದು ರೋಖ ನಾಳೆ ಉದ್ರಿ ….. ಎಲೋ ತಮ್ಮಗೊಳ್ರಾ ಇರಪಕ್ಷಿ ಬಸವಂತಾ ಇತ್ತ ಕಡೆ ಬರುವಂಥವರಾಗಿರಿ.
(ಇರಪಕ್ಷಿ ಬಸವಂತ ಎಡಬಲ ಬದಿಯಿಂದ ಹಾರಿ ಬರುವರು.)
ಇರಪಕ್ಷಿ,

ಬಸವಂತ : ಯಾಕೊ ಎಣ್ಣಾ ನೀ| ನಮ್ಮನ್ನು ಕರಸೀದಿ
ಕೇಳಿಸಿ ಬರಲಿಲ್ಲಾ ||

ಊರಾಗ ಮರಡಿಯ| ಜಾತರಿ ಸಡಗರ
ಹೋಗಿವೊ ನೋಡಲಾಕ ||

ರೊಟ್ಟಿ ಬುತ್ತಿ ಕಟ್ಟಿಕೊಂಡು| ಜಾತರಿ ಮಂದಿ ಬಂದೈತಿ
ಕುಸ್ತಿಯ ಹಿಡಿವುದಕ ||

ಎಲೊ ಎಣ್ಣಾ, ನಮ್ಮನ್ನಾದರು ಏನಕಾರಣ ಕರಸಿದಿ, ಬೇಗನೇ ಹೇಳುವಂಥವನಾಗು.

ಈರ್ಯಾ : ಎಲೊ ತಮ್ಮಗೊಳ್ರಾ, ಮನೀ ಕೆಲಸಾ ಬಿಟ್ಟ ನೀವಿಬ್ಬರೂ ಎಲ್ಲಿಗಿ ಹೋಗಿದ್ದಿರಿ?

ಇರಪಕ್ಷಿ : ಎಲೊ ಎಣ್ಣಾ, ಊರಾಗ ದೇವರ ಜಾತ್ರಿ ಆಗದಿ ಸಡಗರದಿಂದ ನಡೆದೈತಿ. ನಾನಾದರೂ ಜಾತ್ರಿ ನೋಡಾಕ ಹೋಗಿನ್ನೋಡು.

ಬಸಂತ : ಎಲೋ ಎಣ್ಣಾ, ರೊಟ್ಟೀಬುತ್ತಿ ಕಟ್ಟಿಕೊಂಡ ಬಲೆಬಲೆ ಮಂದಿ ಕುಸ್ತಿ ಹಿಡ್ಯಾಕ ಬಂದಾರು. ನಾನಾದರು ಕುಸ್ತಿ ಹಿಡ್ಯಾಕ ಹೋಗೀನ್ನೋಡು.

ಈರ್ಯಾ : ಎಲೋ ಇರಪಕ್ಷಿ, ನೀ ಜಾತ್ರಿ ಮಾಡಿಕೋತ ಹೊಂಟಿ. ಎಲೋ ಬಸವಂತಾ ನೀ ಕುಸ್ತಿ ಹಿಡಕೋತ ಹೊಂಟಿ. ಎಂಟೂ ಎತ್ತಾ ಎಮ್ಮಿ ಕಟ್ಟಿದಲ್ಲೇ ನಿಂತಾವು, ಇವಕ್ಕಾದರೂ ನೀರ ಯಾರು ಕುಡಸವರು? ಕೊರದ ಕನಿಕಿ ಮೂಲ್ಯಾಗ ಹಾಂಗs ಬಿದ್ದೈತಿ, ದನಿಗಿ ಮೇವ ಯಾರು ಹಾಕವರು?

ಇರಪಕ್ಷಿ : ಎಲೊ ಎಣ್ಣಾ, ನೀ ಊರಾಗ ಹಿರೇತನ ಮಾಡಿಕೋತ ಅಡ್ಡಾಡಿದರ ನಾ ಯಾಕಂತ ಕೇಳಿರಲಿಲ್ಲಾ. ಈಗ ಎರಡ ದಿನದಿಂದ ನಾ ಜಾತ್ರಿ ಮಾಡಿಕೊಂಡ ಅಡ್ಡಾಡಿದರ ನಿನ್ನ ಹೊಟ್ಟ್ಯಾಗ ಕಲಹ ಮೂಡಿತು. ಅಂದಮ್ಯಾಲ ನನ್ನ ಪಾಲ ನನಗ ಕೊಟ್ಟಬಿಡು.

ಬಸಂತ : ಎಲೋ ಎಣ್ಣಾ, ನೀ ವರ್ಷಾರ ತಿಂಗಳು ಊರಾಗ ಕಾರಬಾರ ಮಾಡಿಕೋತ ಅಡ್ಡಾಡಿದರ ನಾ ಯಾಕಂತ ಕೇಳಿರಲಿಲ್ಲಾ, ನಾ ಈಗ ಒಂದರೆಡ ದಿನಾ ಕುಸ್ತಿ ಹಿಡಿಕೊಂಡ ಅಡ್ಡಾಡಿದರ ನಿನ್ನ ಹೊಟ್ಟ್ಯಾಗ ಹುಳೀ ಮೂಡೇತಿ; ಅಂದಮ್ಯಾಲ ನನ್ನ ಪಾಲ ನನಗ ಕೊಟ್ಟಬಿಡು.

ಈರ್ಯಾ : ಎಲೋ ತಮ್ಮಗೋಳ್ರಾ, ಲಗಳೇರ ಮನಿತಾನಂದರ ಸುತ್ತ ನಾಕ ಹಳ್ಳಿಗಿ ಪ್ರಸಿದ್ಧ ಐತಿ, ನಾವು ಮೂರೂ ಮಂದಿ ಕೂಡಿದ್ದರ ನಮಗ ಹುಲಿ ಅಂಜಿ ಹಾದೀ ಬಿಡಬೌದು. ಇಂದs ನಾವು ಪಾಲಾ ಮಾಡಿಕೊಂಡ ಬ್ಯಾರ್ಯಾದರ ಇಲಿ ಅಂಜಾಕಿಲ್ಲಾ, ಎಚ್ಚರದಿಂದ ಮಾತಾಡುವಂಥವರಾಗಿರಿ.

ಇರಪಕ್ಷಿ : ಎಲೊ ಎಣ್ಣಾ, ನಾವಾದರೂ ಇನ್ನಮ್ಯಾಲ ನೀ ಹೇಳಿಧಾಂಗ ಇರತೇವು. ನಮಗೇನಾದರು ಉದ್ಯೋಗ ಹೇಳುವಂಥವನಾಗು.

ಈರ್ಯಾ : ಎಲೋ ತಮ್ಮಗೋಳ್ರಾ, ಬಳ್ಳಾರಿ ದೇಶದಿಂದ ಪತ್ರ ಬಂದೈತಿ. ನಾನಾದರು ಇಂದ ಮುತ್ತಿನ ವ್ಯಾಪಾರಕ್ಕ ಬಳ್ಳಾರಿ ದೇಶಕ್ಕ ಹೋಗತೇನು. ನೀವಿಬ್ಬರು ಹಿಂದ ಯಾವ ಪ್ರಕಾರ ದನೀನ ವ್ಯವಸ್ಥಾ, ಮನೀ ವ್ಯವಸ್ಥಾ ಮಾಡಿಕೊಂಡ ಬಂದಿದ್ದಿರಿ; ಅದs ಪ್ರಕಾರ ಮಾಡಿಕೊಂಡ ನಡೀರಿ.

ಬಸಂತ : ಎಲೋ ಎಣ್ಣಾ, ನಾವಾದರು ನೀ ಹೇಳಿಧಾಂಗ ನಡೀತೇವು. ನಿನ್ನ ಹೇಂತಿ ಗಂಗಿಗೆ ಏನ ಬುದ್ಧಿ ರೀತಿ ಹೇಳೋದ ಹೇಳಿ ಹೋಗುವಂಥವನಾಗು.

ಈರ್ಯಾ : ಆಕಿಗಿ ಹೇಳೋದ ಹೇಳೇನಂತ, ಎಲೋ ತಮ್ಮಾ ಇರಪಕ್ಷಿ, ನೀನಾದರು ಮೇಲ್ಮನಿ ಪರಮ್ಮನ್ನ ಕರಕೊಂಬರುವಂಥವನಾಗು. ಎಲೋ ತಮ್ಮಾ ಬಸವಂತಾ, ನೀನಾದರು ಹೋಗಿ ನನ್ನ ಜೋಡೀ ಒಂದ ಗಂಡಾಳ ಕರಕೊಂಬರುವಂಥವನಾಗು.

ಇರಪಕ್ಷಿ; ಬಸವಂತ : ಎಲೋ ಎಣ್ಣಾ ನೀ ಹೇಳಿಧಾಂಗs ಆಗಲಿ.

(ನಮಸ್ಕರಿಸಿ ಇಬ್ಬರೂ ಒಂದೊಂದು ದಿಕ್ಕಿಗೆ ಹೋಗುವರು)

ಈರ್ಯಾ : ಎಲೇ ಗಂಗಿ ಇತ್ತಕಡೆ ಬರುವಂಥವಳಾಗು.

ಗಂಗಿ : (ನರ್ತಿಸುತ್ತ ಬರುವಳು)
ಕರಸೀದ ಕಾರಣೇನೊ ಕಾಂತಾ
ಹರುಷದಿಂದಲಿ|
ಸರಸಿಜದೊಲು ನಯನಾ ||||

ಪ್ರಿಯಾ ನಿಮಗೆ
ಕೈಯಾ ಮುಗಿವೆ ||

ಎಳಿ ಬಾಳಿಯೊಲು
ಸುಳಿದಾಡುತ ||

ಗುಣವಂತಾ, ಏನ ಕಾರಣ ಕರಸಿದಿ? ಚಂದವಾಗಿ ಹೇಳುವಂಥವನಾಗು.

ಈರ್ಯಾ : ಎಲೇ ಗಂಗಿ : ಬಳ್ಳಾರಿ ದೇಶದಾಗ ವ್ಯಾಪಾರ ಭಾಳ ಜೋರ ಐತಿ. ನಾನಾದರು ವ್ಯಾಪಾರಕ್ಕೆ ಹೋಗುತೇನು. ಎಲ್ಲಾಕಡೆ ನೆದರಿಟ್ಟ ಚೆನ್ನಾಗಿರುವಂಥವಳಾಗು

ಗಂಗಿ : ಗುಣವಂತಾ, ಮದಿವ್ಯಾಗಿ ಇನ್ನs ಬಾಳ ದಿನಾ ಆಗಿಲ್ಲ. ಇನ್ನs ಒಂದ ಹಡೀಲಿಲ್ಲ. ಹಿಂಗಲಿಲ್ಲಾ. ನನ್ನ ಧ್ಯಾಯ ಕಂದಿಲ್ಲಾ. ಸಣ್ಣ ಬಾಲಿ ನಾ ಒಬ್ಬಾಕಿ ಹೆಂಗಿರಲಿ?

ಈರ್ಯಾ : ಎಲೇ ಗಂಗಿ, ವ್ಯಾಪಾರದ ಗಾಳಿ ಯಾವ ಕಾಲಕ್ಕ ಯಾವ ಕಡೆ ಬೀಸೀತಂತ ಹೆಂಗ ಹೇಳೋದಾ? ಹಂಗಾಮದ ಗಾಳಿ ಬೀಸಿದಾಗ ತೂರಿಕೊಂಡ ಕಡೀಕಾಗ ಬೇಕು. ಹಟ ಹಿಡೀಬ್ಯಾಡ ಅಂತೀದ್ದನ್ನೋಡು.

ಗಂಗಿ : ಗುಣವಂತಾ ಮೂರಂತಸ್ತಿನ ಈ ದೊಡ್ಡಮನ್ಯಾಗ ಚಿಕ್ಕ ಪ್ರಾಯದ ನನ್ನೊಬ್ಯಾಕೀನ ಬಿಟ್ಟ ಹೋದೇನಂತಿ, ಇದೆಂಥಾ ಮಾತ?

ಈರ್ಯಾ : ಎಲೇ ಗಂಗಿ ಯಾಕ ಚಿಂತಿ ಮಾಡತಿ? ಮೇಲ್ಮನಿ, ಪರಮ್ಮ ನಿನ್ನ ಜೋಡೀಗಿ ಇರತಾಳು. ಬಳ್ಳಾರಿಗಿ ಹೋಗಿ ಮುತ್ತಾರತ್ನ ತರತೇನು. ನಿನಗ ಯಾವುದರಾಗ ಏನ ಕಡಿಮ್ಯಾಗೇತಿ ಹೇಳುವಂಥವಳಾಗು.

ಗಂಗಿ : ಗುಣವಂತಾ, ಎಷ್ಟು ಮುತ್ತರತ್ನ ಇದ್ದರ ಗಂಡನ ಸಮ ಬಂದಾವೇನು?

ಈರ್ಯಾ : ಎಲೇ ಗಂಗಿ, ವ್ಯಾಪಾರಕ್ಕ ಹೊಂಟ ವ್ಯಾಳ್ಯಾದಲ್ಲಿ ಅಡ್ಡ ಮಾತ ಆಡಬ್ಯಾಡ. ಊರಾಗ ದೇವರ ಜಾತ್ರಿ ನಡದೈತಿ. ಮರಡಿ ಬಸವಣ್ಣಂದರ ನಮ್ಮ ಮನೀ ದೇವರು. ಕಾಯಿಕಪ್ಪರಾ, ಎಡಿ ಲೋಬಾನ ತಗೊಂಡು, ದೇವರಿಗ್ಹೋಗಿ ಗಂಡಫಲ ಬೇಡಿಕೊಂಡ ಬರವಂಥವಳಾಗು.

ಗಂಗಿ : ಗುಣವಂತಾ, ನಾ ಹೇಳಿದ ಮಾತ ನಿನಗ ತಿಳಿದ ಬರಲಿಲ್ಲಾ. ಹಿಡದ ಹಟ ನೀ ಏನು ಬಿಡಲಿಲ್ಲಾ.

ಈರ್ಯಾ : ಎಲೇ ಗಂಗಿ, ಮತ್ತಾದರು ಹೇಳುತ್ತೇನೆ ಕೇಳು.

ಗಂಗಿ : ಗುಣವಂತಾ, ಆಗದಿ ಚಂದವಾಗಿ ಹೇಳುವಂಥವರಾಗಿರಿ.

ಈರ್ಯಾ : ಬುತ್ತಿ ಕಟ್ಟ ಗಂಗಾ ನೀನಾ
ತಡ ಮಾಡೋದ್ಯಾಕ
ಹೋಗತೇನ ವ್ಯಾಪಾರಕ
ಕೇಳ ಗಂಗಾ ನೀನಾ ||

ಬಳ್ಳಾರಿ ಸಾವ್ಕಾರ
ಬರದಾನ ಪತ್ತರಾ
ಬರದಾನ ಪತ್ತರಾ
ತಿಳಿವಾತ ಮಜಕೂರಾ
ಪತ್ರ ಬಂದೀತ ನನಗಾ
ತಡ ಮಾಡೋದ್ಯಾಕ ||

ಗಂಟ ತೆಲಿಯ ಮ್ಯಾಲ
ವ್ಯಾಪಾರ ಭಾಳ ಜೋರಾ
ಇರಪಕ್ಷಿ ಬಸವಂತಾ
ಅವರು ಹೇಳಿದ ಮಾತಾ
ಕೇಳಿಕೊಂತ ಇರ ಸುಮನಾ
ತಡಮಾಡೋದ್ಯಾಕ ||
(ಇರಪಕ್ಷಿ ಬ್ಯಾಗಾರಿ ಬರುವನು)

ಇರಪಕ್ಷಿ : ಎಲೊ ಎಣ್ಣಾ, ನಿನ್ನ ಹೇಳಿಕಿ ಪ್ರಕಾರ ನಾನಾದರು ಗಂಡಾಳು ಬ್ಯಾಗಾರೀನ ಕರಕೊಂಬಂದೇನ್ನೋಡು.

ಈರ್ಯಾ : ಎಲೋ ತಮ್ಮಾ ಇರಪಕ್ಷಿ ಇವನ ಕೂಲಿ ಏನ ಠರಾವ ಮಾಡೀದಿ?

ಬ್ಯಾಗಾರಿ : ಏನ ಹೆಚ್ಚಿಗಿಲ್ಲ ಈರಪ್ಪಣ್ಣಾ, ದಿನಕ್ಕೆ ಮೂವತ್ತ ರೊಟ್ಟಿ ಮೂರಗಡಿಗಿ ಅನ್ನ, ಮ್ಯಾಲ ಮೂರ ಗಂಗಾಳ ಅಂಬಲಿ ಕೊಟ್ಟರ ಸಾಕ ನೋಡು.

ಈರ್ಯಾ : ಏಲೋ ಬ್ಯಾಗಾರಿ, ಇಷ್ಟೂ ತಿಂದ ಏನ ಮಾಡತಿ?

ಬ್ಯಾಗಾರಿ : ಈರಪ್ಪಣ್ಣಾ, ಇಷ್ಷ ತಿಂದ ನೀ ಎಷ್ಟ ದಿನ ಹೇಳತಿ, ಅಷ್ಟ ದಿನಾ ನಿದ್ದೀ ಮಾಡ್ತೀನ್ನೋಡು.

ಈರ್ಯಾ : ಎಲೇ ಗಂಗಿ, ಬುತ್ತೀ ಗಂಟ ಕೊಡುವಂಥವಳಾಗು

ಗಂಗಿ : ಗುಣವಂತಾ, ಬುತ್ತೀ ಗಂಟ ನಾನಾದರು ತಂದಿದ್ದೇನ್ನೋಡು.

ಈರ್ಯಾ : ಎಲೇ ಗಂಗಿ ನನ್ನ ಕುಡಗೋಲಾ, ಕೊಡ್ಲಿ ಕೊಡುವಂಥವಳಾಗು

ಗಂಗಿ : ಗುಣವಂತಾ, ಎಂದೂ ಇಲ್ಲದ ಇಂದ ಕೊಡ್ಲಿ, ಕುಡಗೋಲಾ ಬೇಡ್ತಿ. ಏನ ಕಾರಣ, ಹೇಳಬೇಕಾದೀತ ನೋಡು.

ಈರ್ಯಾ : ಎಲೇ ಗಂಗಿ, ಮೊದಲs ಮುತ್ತ ರತ್ನದ ವ್ಯಾಪಾರ, ಹಾದ್ಯಾಗ ಕಳ್ಳರ ಹಾವಳಿ ಹೆಚ್ಚಾಗೇತಿ. ಬೇಗನೇ ತರುವಂಥವಳಾಗು.

ಗಂಗಿ : ಹಂಗಾದರ ಕುಡಗೋಲಾ ಕೊಡ್ಲಿ ತಾ ಅಂದೇನ ಗುಣವಂತಾ?

ಈರ್ಯಾ : ಹೌದು, ಲಗು ತರುವಂಥವಳಾಗು.

ಗಂಗಿ : ಗುಣವಂತಾ, ನಾನಾದರು ಕೊಡ್ಲಿ, ಕುಡಗೋಲಾ ತಂದೇನ್ನೋಡು.

ಈರ್ಯಾ : ಇತ್ತ ಕಡೆ ಕೊಡುವಂಥವಳಾಗು

ಗಂಗಿ : ಗುಣವಂತಾ, ತಗೊಳ್ಳುವಂಥವರಾಗಿರಿ

ಬ್ಯಾಗಾರಿ : ಈರಪ್ಪಣ್ಣಾ, ನಾ ಬುತ್ತೀ ಗಂಟ ಹೊರತೇನು, ನೀ ಕೊಡ್ಲಿ, ಕುಡಗೋಲಾ ಹೊರುವಂಥವನಾಗು.

ಪರಮ್ಮ : (ಓಡಿಬಂದು.)
ದೇವರ ಜಾತ್ರ್ಯಾಗ ಅದ್ಯಾಕ ಕೊಡ್ಲಿ, ಕುಡಗೋಲಾ ಅಂತಿರೋ ನನ್ನ ಮಕ್ಕಳ್ರಾ?

ಬಸವಂತ : (ಬರುವನು)
ಎಲೋ ಎಣ್ಣಾ, ನಾನಾದರು ಪರಮ್ಮನ್ನ ಕರಕೊಂಬಂದೇನ್ನೋಡು.

ಈರ್ಯಾ : ಏನ್ಬೇ ಪರಮ್ಮಾ , ನಾ ಬಳ್ಳಾರಿ ದೇಶಕ ವ್ಯಾಪರಕ ಹೋಗುತೇನು ― ನೀನಾದರು ಗಂಗಾನ ಜೋಡಿ ನಮ್ಮ ಮನ್ಯಾಗಿರುವಂಥವಳಾಗು, ಬಂದಮ್ಯಾಲ ನಿನಗಾದರು ನಿನ್ನ ಕೂಲಿ ಕೊಡತೇನು.

ಪರಮ : ಗಂಗಾನ ಜೋಡಿ ನಿಮ್ಮ ಮನ್ಯಾಗಿರಲಿ? ಯಾಕ ನೀ ಇರೋದಿಲ್ಲಾ?

ಈರ್ಯಾ: ಎಲೇ ಎಮ್ಮಾ ಹೇಳಿದಷ್ಟು ಕೇಳು.
ಎಲೋ ತಮ್ಮಾ ಇರಪಕ್ಷಿ ಬಸವಂತಾ.
ಚಿತ್ತಗೊಟ್ಟ ಕೇಳ್ರೇನ್ನ ಮಾತಾ,
ಬಳ್ಳಾರಿ ದೇಶಕ್ಕ ನಾ ಹೋಗುತೇನ ಈ ಹೊತ್ತಾ.
ನಾ ಬರೋದು ಪಂಚಮೀ ಸುತ್ತಾ
ನೀವು ಮೂರೂ ಮಂದಿ ಇರಬೇಕ್ರೋ ನಕ್ಕೋತಾ
ಹೊಲಾಮನಿ ಮಾಡಿಕೊತಾ
ಗಂಗಾಗ ಬುದ್ಧೀ ಹೇಳಿಕೋತಾ.
ಎಲೇ ಗಂಗಿ
ಇರಪಕ್ಷಿ ಬಸವಂತಾ ಸಣ್ಣವರು
ಬಲ್ಹಾಂಗ ತಿರುಗುವರು. ಅವರಿಗೆ ಬುದ್ದೀ ರೀತಿ
ಹೇಳಿಕೊಂಡ ನಗನಗತಾ ಇರು.
ಎಲೋ ಬ್ಯಾಗಾರಿ
ನಡಿವಂಥವನಾಗು.

ಪರಮ್ಮ : ನನ್ನ ಮಗನs ಹೋಗವನs ಹೌಂದಲ್ಲ?

ಈರ್ಯಾ : ಹೌಂದೆಬೇ ಎಮ್ಮಾ,

ಪರಮ್ಮ : ಅಲ್ಲೋ ನನ್ನ ಮಗನ, ನನ್ನ ಮುದಕನಂಥಾ ಮುದುಕ ನನ್ನ ಬಿಟ್ಟ ಒಂದಗಳಿಗಿ ಇರಾಣಿಲ್ಲಾ, ನಿನ್ನಂಥಾವ ಹೇಂತೀನ ಬಿಟ್ಟ ಹೋಗತೇನಂತಿಯಲ್ಲೊ!

ಈರ್ಯಾ : ಎಲೇ ಮುದಕಿ, ಹೋಗೋ ವ್ಯಾಳ್ಯಾದಲ್ಲಿ ಅಡ್ಡ ಬಾಯಿ ಹಾಕಬ್ಯಾಡ. ಎಲೋ ಬ್ಯಾಗಾರಿ ನಡಿವಂಥವನಾಗು.

ಬ್ಯಾಗಾರಿ : ಈರಪ್ಪಣ್ಣಾ ನಡಿವಂಥವನಾಗು
(ಈರ್ಯಾ ಬ್ಯಾಗಾರಿ ಹೋಗುವರು. ಇರಪಕ್ಷಿ ಬಸವಂತ ಇನ್ನೊಂದು ಕಡೆ ಹೋಗುವರು.)

ಗಂಗಿ : ಏನೇ ಪರಮ್ಮ, ಗಂಡ ವ್ಯಾಪಾರಕ ಹೋದಾ, ಮೈದುನರು ಕುಸ್ತೀ ಹಿಡ್ಯಾಕ ಹೋದರು. ಮರಡಿ ಬಸವಣ್ಣ ಮನೀ ದೇವರಾ. ಜಾತ್ರಿ ನಡದೈತಿ ಅಗ್ಗದೀ ಸಡಗರಾ. ನಿನ್ನ ಕರಕೊಂಡ ದೇವರಿಗಿ ಹೋಗಿ ಕಾಯಿಕಪ್ಪರಾ ಒಡಿಸಿಕೊಂಡ ಬಾ ಅಂತ ಹೇಳ್ಯಾರ ನಮ್ಮವರಾ. ಸರಿಗಿ ಸರಾ ಹಾಕ್ಕೊಂಡ ಅದೇನ ಶಿಂಗಾರ. ಎಮ್ಮಾ ದೇವರಿಗಿ ಹೋಗೋಣು ನಡಿ ಬರಬರಾ.

ಪರಮ್ಮ : ಆಗಲಿ ನನಮಗಳ ಹೊಗೋಣು ನಡಿವಂಥವಳಾಗು
(ಹೊರಡುವರು.)