(ಸಂಗ್ಯಾ ಬಾಳ್ಯಾ ಒಂದೊಂದು ದಿಕ್ಕಿನಿಂದ ಬರುವರು.)

ಸಂಗ್ಯಾ : ಗೆಳೆಯಾ ಬಾಳಾಣ್ಣಾ, ಹೋದ ಕೆಲಸಾ ಗಂಡ ಮಾಡಿಕೊಂಡ ಬಂದ್ಯೊ? ಹೆಣ್ಣ ಮಾಡಿಕೊಂಡ ಬಂದ್ಯೊ?

ಬಾಳ್ಯಾ : ಆಲಲಲಲ! ಗೆಳೆಯಾ ಸಂಗಣ್ಣಾ, ನಿನ್ನ ದಯದಿಂದ ನನಗಿಂದೇನ ಸುಖಾ! ಏನ ಸುಖಾ!

ಸಂಗ್ಯಾ : ಬಾಳಣ್ಣಾ, ಗಂಗಿ ಏನಂದಳೋ!

ಬಾಳ್ಯಾ : ಸಮಾಧಾನ ಮಾಡಿಕೊಂಡ ಉಸರ ತಗೊ ಗೆಳೆಯಾ ಸಂಗಣ್ಣಾ. ನೀ ಹೇಳಿದ ಠಿಕಾಣಕ್ಕ ಹೋದ್ನಿ, ಯಾರೂ ಇರಲಿಲ್ಲ. ಅಂಜಿಕೊಂಡ ಬಾಗಲಾ ಬಡದ್ನಿ. ಗಂಗಾ ಬಂದ ಕದ ತಗದ್ಲು “ಯಾರು? ಸಂಗಣ್ಣನ ಗೆಳೆಯಾ ಬಾಳಣ್ಣ ಏನು?” ― ಅಂದ್ಲು.

ಸಂಗ್ಯಾ : ಗೆಳೆಯಾ ಬಾಳಣ್ಣಾ, ನನ್ನ ಹೆಸರ ಆಕಿಗಿ ಹೆಂಗ ತಿಳೀತೊ?

ಬಾಳ್ಯಾ : ಹರೇದ ಹುಡಿಗೇರಿಗಿ ನಿನ್ನ ಹೆಸರ ತಿಳಿಸಿಕೊಡಬೇಕೇನೊ?

ಸಂಗ್ಯಾ : ಗೆಳೆಯಾ ಬಾಳಣ್ಣಾ, ಮುಂದೇನಾತೊ?

ಬಾಳ್ಯಾ : “ಒಳಗೆ ಬಾ ಬಾಳಪ್ಪಣ್ಣಾ ” ― ಅಂದ್ಲು: ಕಾಲಿಗಿ ನೀರ ಕೊಟ್ಟಳು. ಕಂಬಲಿ ಹಾಸಿದ್ಲು. ಕೂತಕೊಂಡೆ. ಏನ ಪರಿಪರಿ ಮಾನಾಮಾಡಿದ್ಲೊ!

ಸಂಗ್ಯಾ : ಗೆಳೆಯಾ ಬಾಳಣ್ಣಾ. ಇಂಥಾ ಮಾನ ನೀ ಯಾರಿಂದ ಕಂಡಿ?

ಬಾಳ್ಯಾ : ನಿನ್ನಿಂದs ಕಂಡಿನಪ, ಮುಂದಿಂದ ಕೇಳು. ಸಂಗಣ್ಣನು ಗೆಣೆಕಾರ ಅಂದಮ್ಯಾಲ ಊಟಮಾಡಾಕsಬೇಕಂದಳು. ಇಷ್ಷಿಷ್ಟುದ್ದ ಕಡಬ ಮಾಡಿದ್ದಳಪಾ! ಮ್ಯಾಲ ಒಂದ ಗಡಿಗಿ ತುಪ್ಪಾ ನೀಡಿದಳು! ಉಟಾತೋ ಗೆಳೆಯಾ ಪಸಂದ, ನಿನ್ನ ದಶಿಂದಾ!

ಸಂಗ್ಯಾ : ಗೆಳಯಾ ಬಾಳಣ್ಣಾ, ನನ್ನಿಂದ ನಿನಗ ಅಲ್ಲಿ ಊಟ ಸಿಕ್ಕಿತು. ನನಗೊಂದ ಕಡಬ ತರಬಾರದೇನೊ?

ಬಾಳ್ಯಾ : ಗೆಳೆಯಾ ಸಂಗಣ್ಣ, ಕೇಳದs ಇದ್ದೀನೇನೊ? ತಂಗಿ ಕೊಡವಾ ಅವಗೊಂದು ಕಡಬ; ಬಾಯಿ ತಕ್ಕೊಂಡs ನಿಂತಿರಾತಾನ ― ಅಂದೆ.

ಸಂಗ್ಯಾ : ಗೆಳಯಾ ಬಾಳಣ್ಣಾ ಏನಂದಳೊ?

ಬಾಳ್ಯಾ : ಕಡಬೇನ ಮಾಡತಿ? ಗುರತಿಗಿ ಅವನ ಕಿವ್ಯಾಗಿ ಇಡಸಂತ ಹೇಳಿ ಒಂದ ಮುತ್ತಿನ ವಾಲೀ ಕೊಟ್ಟಾಳ ನೋಡೊ!

ಸಂಗ್ಯಾ : ಬಾಳಣ್ಣಾ, ವಾಲಿ ಎಲ್ಲೇತಿ, ಲಗು ಕೊಡೊ.

ಬಾಳ್ಯಾ : ಗೆಳೆಯಾ ಸಂಗಣ್ಣ, ಅಷ್ಟ ಯಾಕ ಅವಸರಾ ಮಾಡತಿ? ತಡಿಯೊ

ಸಂಗ್ಯಾ : ಏ ಬಾಳ್ಯಾ ಲಗು ತೆಗೀಯೊ

ಬಾಳ್ಯಾ : ಏ ಸಂಗ್ಯಾ ತಡೀಯೊ

ಸಂಗ್ಯಾ : ಏ ಬಾಳ್ಯಾ

ಬಾಳ್ಯಾ : ಏ ಸಂಗ್ಯಾ

ಸಂಗ್ಯಾ : ಏ ಬಾಳ್ಯಾ ―

ಬಾಳ್ಯಾ : ಗೆಳೆಯಾ ಸಂಗಣ್ಣ, ನಾನs ಮುದ್ದಾಂ ನಿನ್ನ ಕಿವ್ಯಾಗ ಇಡಸಬೇಕಂತ ಹೇಳ್ಯಾಳ. ಸುಮ್ಮನೆ ಕುಂತಕಾ ಬಾ.
(ಸಂಗ್ಯಾ ಕೂಡ್ರುವನು. ಬಾಳ್ಯಾ ಅವನ ಕಿವಿ ಹಿಡಿದು ಎತ್ತಿ ಕೂರಿಸಿ, ಎತ್ತಿ ಕೂರಿಸಿಬಿಡುವನು.)

ಬಾಳ್ಯಾ : ಹೆಂಗೈತಿ ವಾಲಿ?

ಸಂಗ್ಯಾ : ಗೆಳಯಾ ಬಾಳಣ್ಣಾ, ಗಂಗಿ ನಿನಗ ಈ ಪರಿ ಮಾನ ಮಾಡಿದಳೇನೊ?

ಬಾಳ್ಯಾ : ಇಷ್ಟs ಯಾಕ ಹುಡುಗಾ, ಆಗಸರ ಬಟ್ಟೀ ಮಾಡಿ ಕಲ್ಲಮ್ಯಾಗ ಒಗದ್ಲು. ಉರವಲ ಮಾಡಿ ಒಲ್ಯಾಗ ಹಾಕಿ ತುರುಕಿದ್ಲು. ಹುಲ್ಲ ಮಾಡಿ ದನೀಗಿ ಹಾಕಿದಳು. ಅಂದಾಕರಾ ಕೆಟ್ಟ ಹೆಣ್ಣ, ಗೆಳೆಯಾ ಸಂಗಣ್ಣಾ, ಆಕೆ ಹಿಂಡಿ ಹಣ್ಣ ಮಾಡೋತನಕ ನನಗೆ ಕಿವೀ ಇದ್ದದ್ದs ಗೊತ್ತಿದ್ದಿಲ್ಲ ನೋಡು.

ಸಂಗ್ಯಾ : ಗೆಳಯಾ ಬಾಳಣ್ಣಾ, ನಿನ್ನ ಅಪಮಾನ ಮಾಡಿದರೂ ಒಂದs. ನನ್ನ ಅಪಮಾನ ಮಾಡಿದರೂ ಒಂದs. ಈ ಸೇಡ ನಾ ಏನ ಮರೆಯೋದಿಲ್ಲಾ. ನಾನs ಮುದ್ದಾಂ ಹೋಗಿ, ಹೊಂಚ ಹಾಕಿ ಭೇಟಿ ಆಗಿ ಕೇಳ್ತೇನು. ನೀ ಚಿಂತೀ ಬಿಟ್ಟ ಹಿಂದ ಸರಿವಂಥವನಾಗು.

ಬಾಳ್ಯಾ : ಗೆಳೆಯಾ ಸಂಗಣ್ಣ, ನಾನದರೂ ಹಿಂದ ಸರೀತೇನ್ನೋಡು.
(ಒಂದೊಂದು ದಿಕ್ಕಿಗೆ ಮರೆಯಾಗುವರು)