“ಸಂಗ್ಯಾಬಾಳ್ಯಾ”, ನಡೆದ ಘಟನೆಯನ್ನು ಬಯಲಾಟವಾಗಿಸಿದ ಜಾನಪದ ರೂಪಕ. ಹಾಡುಗಳ ಜನಪ್ರಿಯ ಧಾಟಿಗಳು ಹಾಗೂ ನಡೆದ ಘಟನೆಯ ಆಧಾರದ ಬಯಲಾಟವೆಂಬುದರಿಂದಾಗಿ ಇದು ಮಿಂಚಿನ ವೇಗದಲ್ಲಿ ಜನಪ್ರಿಯವಾಯಿತು. ಬೆಳಗಾವಿ ಬಳಿಯ ಅಲತಗಿ ಎಂಬ ಹಳ್ಳಿಯಲ್ಲಿ ಇದರಲ್ಲಿ ಬರುವ ವೃತ್ತಿಪರ ‘ಗಂಗಾ’ನ ಪಾತ್ರಧಾರಿ ಸ್ತ್ರೀಯರು ಸಿಗುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಚಾರದಲ್ಲಿದ್ದ ಈ ಬಯಲಾಟ ಅಂದಿನ ಸರಕಾರದ ಅವಕೃಪೆಗೂ ಪಾತ್ರವಾಯಿತು. ಆದರೆ ಕದ್ದಾಡುವುದನ್ನು ನಿಲ್ಲಿಸಲಾಗಲಿಲ್ಲ. ಆಟ ಇನ್ನಷ್ಟು ಪ್ರಚಾರವಾಯಿತು.

ಬಹುಶಃ ಆಟವನ್ನು ನಿಷೇಧಿಸಲು ಕೊಲೆಯೊಂದೇ ಕಾರಾಣವಾಗಿರಲಾರದು. ಸಂಗ್ಯಾನನ್ನು ಆರಾಧನೆಯೆಂತೆ ಭಯಂಕರವಾಗಿ ಆಭಿನಯಿಸುವುದೇನೋ ಸರಿಯೆ, ಆದರೆ ಸಂಗ್ಯಾನನ್ನು ಕೊಂದ ಮೇಲೆ ಈರ್ಯನ ಪಾತ್ರಧಾರಿ ಸರಕಾರವನ್ನು ಟೀಕಿಸುವ ಸಂಭಾಷಣೆಯನ್ನು ಹೇಳುತ್ತಿದ್ದನಂತೆ. ಅದರಿಂದಾಗಿ ಈ ಬಯಲಾಟ ನಿಷೇಧಕ್ಕೊಳಗಾಯಿತೆಂದೂ ಹೇಳುವವರಿದ್ದರು. “ಸಂಗ್ಯಾ ಊರೊಳಗ ಕಾಳಗ ಆಗಿದ್ದ; ಕೊಂದಿವಿ. ಆದರ ಕೆಟ್ಟ ಇಂಗರೇಜಿ ಸರಕಾರಕ್ಕೆ ತಿಳಿಸಿ ಹೇಳೋದ ಹೆಂಗಾ?” ಎಂಬರ್ಥ ಬರುವ ಮಾತು ಅದು. ಈರ್ಯಾ ಅಂದನೋ ಬಿಟ್ಟನೋ ಆಡುವವರು  ಮಾತ್ರ ಈ ಮೂಲಕ ಬ್ರಿಟಿಷ್ ಸರಕಾರಕ್ಕೆ ಜಾನಪದರ ಪ್ರತಿಭಟನೆಯಾಗಿಯೇ ಆಡುತ್ತಿದ್ದರು. ಬರಬರುತ್ತ ಆಟದ ಕೊನೆ ಇಂಥ ಪ್ರತಿಭಟನೆಯಿಂದ ದೀರ್ಘವಾಗಿರುತ್ತಿತ್ತೆಂದೂ ಜನ ನನಗೆ ಹೇಳಿದರು. ಈ ಬಯಲಾಟವನ್ನು ನಿಷೇಧಿಸಿದ ಸರಾಕಾರೀ ಆಜ್ಞೆ ಸಿಕ್ಕುವುದೇ ಎಂದು ಪ್ರಯತ್ನಿಸಿದೆ; ಅದೂ ಸಿಕ್ಕಲಿಲ್ಲ.

ಇದು ಮೂಲ ಶ್ರೀ ಪತ್ತಾರ ಕವಿ ಹಾಡುಗಳಲ್ಲಿ ರಚಿಸಿದ ಸಂಗ್ಯಾ ಬಾಳ್ಯಾ ಬಯಲಾಟಕ್ಕೆ ಸಂಭಾಷಣೆ ಸೇರಿಸಿ ಆಧುನಿಕ ರಂಗಭೂಮಿಗೆ ಪರಿವರ್ತಿಸಿಕೊಂಡ ಅಳವಡಿಕೆ. ಹೀಗೆ ಮಾಡಲು ನನ್ನನ್ನು ಕೇಳಿಕೊಂಡವರು ಮತ್ತು ತಮ್ಮ ಪ್ರತಿಮಾ ರಂಗದಿಂದ ಪ್ರಯೋಗಿಸಲು ಅವಕಾಶ  ಕಲ್ಪಿಸಿಕೊಟ್ಟವರು ಶ್ರೀ ಲಂಕೇಶ್ ಮತ್ತು ಮರಳಸಿದ್ಧಪ್ಪ ಅವರು. ಇವರಿಬ್ಬರ ಒತ್ತಾಸೆ ಇಲ್ಲದಿದ್ದಲ್ಲಿ  ಈ ಆಳವಡಿಕೆಯ ಕಲ್ಪನೆಯೇ ನನಗೆ ಬರುತ್ತಿರಲಿಲ್ಲ. ಅವರಿಗೂ ಹಾಗೂ ಇದನ್ನು ಪ್ರಕಾಶಪಡಿಸುತ್ತಿರುವ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರಿಗೂ ವಂದನೆಗಳು.

ಚಂದ್ರಶೇಖರ ಕಂಬಾರ