ಪರಮ್ಮ : ಈ ಮಾತು ಖರೆ ಹೌಂದಲ್ಲ?

ಗಂಗಿ : ಖರೆ ನೋಡ
(ಸಂಗ್ಯಾ ಬಾಳ್ಯಾ ಬರುವರು. ಸಂಗ್ಯಾ ವಿಶೇಷ ಶಿಂಗಾರಾಗಿದ್ದಾನೆ.)

ಬಾಳ್ಯಾ : ಗೆಳೆಯಾ ಸಂಗಣ್ಣಾ, ಲಗಳೇರ ಮನೀತನಕ ಅಂತೂ ಬಂದಿವಿ, ಶಿವಪೂಜೆ ಒಳಗ ಕರಡಿ ಬಿಟ್ಟಾಂಗ ನಾ ಯಾಕ ಬರಲಿ? ನಾ ಹೋಗತೇನು. ನೀ ಒಳಗ ಹೋಗುವಂಥವನಾಗು.

ಸಂಗ್ಯಾ : ಗೆಳೆಯಾ ಬಾಳಣ್ಣಾ, ಜೀವಕ್ಕೆ ಯಾಕೋ ಸ್ಥಿರಾರ ಇಲ್ಲಧಾಂಗ ಆಗೇತಿ. ನಾ ಒಬ್ಬs ಅವರ ಮನಿ ಹೊಕ್ಕರ ಮಂದಿಗೆ ಸಂಶೆ ಬರತೈತಿ. ನೀ ಇದ್ದರ ನನಗೂ ಧೈರ್ಯ ಇರತೈತಿ. ಒಳಗ ಬಂದ ಎಲಿ ಅಡಿಕಿ ಸುಣ್ಣ ತಿಂದ ಹೋಗೀಯಂತ. ಬರುವಂಥವನಾಗು.

ಬಾಳ್ಯಾ : ಹಂಗಾದರ ನಡಿ ಗೆಳೆಯಾ ಹೋಗೋಣು.
(ನಡೆಯುವರು. ಬಾಳ್ಯಾ ಪ್ರೇಕ್ಷಕರ ಕಡೆ ಮುಖಮಾಡಿ ಯಾರಾದರೂ ಗಮನಿಸುತ್ತಿದ್ದಾರಯೇ ಎಂದು ನೋಡುತ್ತಿರುವನು. ಗಂಗಿ ಬಂದು ಇಬ್ಬರನ್ನೂ ಎದುರ್ಗೊಳ್ಳುವಳು)

ಗಂಗಿ : ಸೂರ್ಯ ಚಂದ್ರನ ಸರಿ ಸಿಕ್ಕಿಯೊ ದೋರಿ! ಸಂಗ್ಯಾ ಒಳಗ ಬರುವಂಥವರಾಗರಿ. ಬಡವ ಬಾಳ್ಯಾ ನೀನೂ ಬಂದೇನು? ಒಳಗ ಬರುವಂಥವನಾಗು.

ಸಂಗ್ಯಾ : ಗಂಗಾ ನಾನಾದರು ಒಳಗೆ ಬಂದೇನ್ನೋಡು.

ಬಾಳ್ಯಾ : ಏನವಾ ತಂಗಿ, ನಾನಾದರು ಒಳಗೆ ಬಂದೇನ್ನೋಡು.

ಗಂಗಿ : ಸಂಗ್ಯಾ, ನೀರ ಕಾದಾವ, ಗಂಧದ ಸಾಬಾನ, ನಾರೋ ಎಣ್ಣಿ ಹಚ್ಚಿ ಜಳಕಾ ಮಾಡುವಂಥವರಾಗರಿ. ಬಡವ ಬಾಳ್ಯಾ, ದನದ ಹಕ್ಕಿಗಿ ಹೋಗಿ ಕೈ ತೊಳ ಕೊಂಬರುವಂಥವನಾಗು.

ಸಂಗ್ಯಾ : ಗಂಗಾ ನಾನಾದರು ಜಳಕಾ ಮಾಡೇನ್ನೋಡು.

ಬಾಳ್ಯಾ : ಏನವಾ ತಂಗಿ, ನಾನಾದರು ದನದ ಹಕ್ಯಾಗ ಕೈ ತೊಳಕೊಂಡೇನ್ನೋಡು.

ಗಂಗಿ : ಸಂಗ್ಯಾ ನಡುಮನ್ಯಾಗ ಬಣ್ಣದ ಮಣೆ ಹಾಕೇನಿ; ಮುಂದ ಅಡ್ಡಣಗಿ ಇಟ್ಟೇನಿ. ಊಟಕ್ಕ ಕೂರುವಂಥವರಾಗಿರಿ. ಬಾಳ್ಯಾ, ಅಲ್ಲೇ ಹೊರಗ ಮೇವಿನ ಕಟ್ಟೀ ಹಂತ್ಯಾಕ ಕೂರುವಂಥವನಾಗು.

ಸಂಗ್ಯಾ : ಎಲೇ ಗಂಗಾ, ನಾನಾದರು ಬಣ್ಣದ ಮಣೆಮ್ಯಾಗ ಕುಂತಿದ್ದೇನ್ನೋಡು.

ಬಾಳ್ಯಾ : ಏನವಾ ತಂಗಿ, ನಾನಾದರು ಮೇವಿನ ಕಟ್ಟೀ ಹಂತ್ಯಾಕ ಕುಂತಿದ್ದೇನ್ನೋಡು.

ಗಂಗಿ : ಸಂಗ್ಯಾ, ಎಳಿ ಎಳಿ ಶಾವಿಗಿ, ಚೆನ್ನೀ ಸಕ್ಕರಿ, ಮ್ಯಾಲ ಸಣ್ಣಕ್ಕಿ ಅನ್ನ, ಕರಚೀಕಾಯಿ ಐದಾರಾ, ಅದರಾಗ ತುಪ್ಪ ಒಂದ ಸೇರಾ ― ಚೆನ್ನಾಗಿ ಊಟಾ ಮಾಡರಿ. ಬಡವ ಬಾಳ್ಯಾ. ಪುಂಡೀಪಲ್ಲೆ, ರಾಗೀರೊಟ್ಟಿ, ತಂಗಳನ್ನ ನೀರಾಸಾರಾ ― ಚೆನ್ನಾಗಿ ತಿನ್ನುವಂಥವನಾಗು.
(ಏನೊ ನೆನಪಾಗಿ ಸಡಗರದಿಂದ ಒಳಗೆ ಓಡುವಳು.)

ಬಾಳ್ಯಾ : ಏನೊ ಸಂಗಣ್ಣಾ, ಸಾವಕಾರನ ಗೆಣಿಕಾರಂತ ನಿನ್ನ ಬೆನ್ನ ಹತ್ತಿ ಬಂದರ ನಿನಗ ಬಹುಮಾನ; ನನಗ ಅವಮಾನ. ಎಳಿ ಎಳಿ ಶಾವಿಗಿ, ಚಿನ್ನೀ ಸಕ್ಕರಿ, ಸಣ್ಣಕ್ಕಿ ಅನ್ನ, ಕರಚೀಕಾಯಿ ಸೇರ ತುಪ್ಪ ನಿನಗ! ಪುಂಡಿಪಲ್ಲೆ, ರಾಗೀರೊಟ್ಟಿ, ತಂಗಳನ್ನ, ನೀರಸಾರಾ ನನ್ನ ಪಾಲಿಗಿ! ಏನ ಸುಖಾ ಏನ ಸುಖಾ!

ಸಂಗ್ಯಾ : ಗೆಳೆಯಾ ಬಾಳಣ್ಣಾ, ಅದನ್ಯಾಕಷ್ಟ ಮನಸಿಗಿ ಹಚಿಕೊಳ್ತಿ? ನನ್ನ ಎಡೀ ನೀ ಉಣ್ಣು. ನಿಂದ ನನಗ ಕೊಡು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ನಿಂದ ಉಂಡರ ನಾ ಶ್ರೀಮಂತ ಆಗೋದಿಲ್ಲ. ಎಷ್ಟಂದರೂ ಬಡವ ಬಡವs. ಶ್ರೀಮಂತ ಶ್ರೀಮಂತs. ನಿನ್ನ ಎಡ್ಯಾಗಿಂದ ನೀ ಉಂಡ ಬಾ; ನಾ ಹೊರಗ ನಿಂತಿರತೇನ.
(ಥಟ್ಟನೆ ಎದ್ದು ಹೋಗುವನು. ಸಂಗ್ಯಾ ನೊಂದುಕೊಳ್ಳುವನು. ಅಷ್ಟರಲ್ಲಿ ಗಂಗಿ ಓಡಿಬಂದು ಬಾಗಿಲು ಹಾಕಿಕೊಳ್ಳುವಳು.)

ಸಂಗ್ಯಾ : ಗಂಗಾ, ನಾನಾದರೂ ಊಟಾ ಮಾಡಿದ್ದೇನ್ನೋಡು.

ಗಂಗಿ : ಸಂಗ್ಯಾ, ಲೇಪಡಿ ಜಮುಖಾನ ಹಾಸೇನಿ. ಅದರ ಮ್ಯಾಲ ಕೂತು ಎಲೆ ಅಡಿಕಿ, ಪಾನಸುಪಾರಿ, ವೀಳ್ಯಾ ತಗೊಳ್ಳುವಂಥವರಾಗರಿ.

ಸಂಗ್ಯಾ : ಗಂಗಾ, ನಾನಾದರೂ ವೀಳ್ಯಾ ತಗೊಂಡಿದ್ದೇನ್ನೋಡು.

ಗಂಗಿ : ಸಂಗ್ಯಾ, ಮತ್ತಾದರು ಹೇಳತೇನ ಕೇಳುವಂಥವರಾಗರಿ.

ಸಂಗ್ಯಾ : ಗಂಗಾ, ಅದೇನಿರುವುದು ತೀವ್ರವಾಗಿ ಹೇಳುವಂಥವಳಾಗು.

ಗಂಗಿ : ರಂಗ ಮಂಚಕ ಹೋಗೋನ ನಡಿ
ಅಲ್ಲಿ ವಿಲಾಸ ಮಾಡೋಣ ಕೂಡಿ ||

ಹಾಲಿಗಿ ಹಾಕಿಧಾಂಗ ಹೆಪ್ಪಾ
ಕಣ್ಣಿಗಿ ಹತ್ತಿಧಾಂಗ ಜಂಪಾ
ಸೈನ ಮಾಡೋಣ ಇಬ್ಬರು ಕೂಡಿ
ರಂಗ ಮಂಚಕ ಹೋಗೋಣು ನಡಿ ||

ನಿನ್ನ ಮ್ಯಾಲ ಹೊಚ್ಚೇನು ಶಾಲ ಜೋಡಿ
ಪ್ರಿಯಾ ಅಂತೇನು ಘಾಸಿ ಮಾಡಬ್ಯಾಡಿ
ಹವಳ ಮುತ್ತ ಜೋಡೀಲೆ ಕೂಡಿಸಿಧಾಂಗ
ಪುರಮಾಸೆ ಬಗವಾನ ಕೂಡಿಸಿದಾನ ||

(ಕೈ ಕೈ ಹಿಡಿದು ನರ್ತಿಸುತ್ತ ರಂಗದ ಹಿಂಭಾಗಕ್ಕೆ ಹೋಗುವರು. ಮುಂಭಾಗದಲ್ಲಿ ಈರ್ಯಾ ಮತ್ತು ಬ್ಯಾಗರಿ ಬರುವರು.)

ಈರ್ಯಾ : ಎಲೋ ಬ್ಯಾಗರಿ, ಕೆಟ್ಟ ಕನಸ ಬಿದ್ದ ಬಳ್ಳಾರಿ ವ್ಯಾಪಾರ ಸುಳ್ಳಮಾಡಿ ಊರಿಗಿ ಬಂದರ, ಯಾಕೋ ಮೂರೂ ಸಂಜೀಲೆ ಬಾಗಲ ಹಾಕೇತಿ. ಸುತ್ತ ಮುತ್ತ ಇದ್ದವರೆಲ್ಲಾ ನಮ್ಮನ್ನೋಡಿ ಚಪ್ಪಾಳಿ ಹೊಡದ ನಗತಾರು. ಏನ ಸಮಾಚಾರಂತ ಕೇಳಿಕೊಂಬಾ ಹೋಗು.

ಬ್ಯಾಗರಿ : ಈರಪ್ಪಣ್ಣಾ ನಾನಾದರು ಹೋಗಿ ಕೇಳಿಕೊಂಬರತೇನು. ನೀ ಇಲ್ಲೇ ಇರುವಂಥವನಾಗು.
(ಮೇಳದವರೆಗೆ ಹೋಗಿ ಅವರನ್ನು ಕೇಳಿ ತಿಳಿದುಕೊಂಡು ಬರುವನು.)
ಈರಪ್ಪಣ್ಣಾ ಯಾ ಮಾತಂತ ಏನ ಹೇಳ್ಲಿ? ನಿನ್ನ ಹೇಂತಿ ಗಂಗಿ, ಇದs ಈಗ ಮೇಲ್ಮನಿ ಸಂಗ್ಯಾನ ಕರಕೊಂಡು ಬಾಗಲಾ ಹಾಕಿಕೊಂಡಳಂತ.

ಈರ್ಯಾ : ಎಲೋ ಬ್ಯಾಗಾರಿ, ಈ ಮಾತ ಖರೆ ಇರುವದೇನು?

ಬ್ಯಾಗಾರಿ : ಎಲೋ ಈರಪ್ಪಣ್ಣಾ, ಮರಡಿ ಬಸವಣ್ಣನ ಆಣಿ ಆಗದಿ ಖರೆ ಇರುವುದು.

ಈರ್ಯಾ : ಖರೆ ಸುಳ್ಳ ಹೆಂಗೊ ತಿಳಿದs ತಿಳೀತೈತಿ, ಎಲೋ ಬ್ಯಾಗಾರಿ, ನೀ ಅಲ್ಲಿ ನಿಲ್ಲು, ನಾ ಇಲ್ಲಿ ನಿಂತಿರುತೇನು. ನಾ ಈಗಿಂದೀಗ ಬಾಗಲಾ ತಗಸ್ತೇನು. ಯಾವ ಮಗಾ ಹೊರಗ ಬಂದರೂ ಕಡದ ತುಂಡ ಮಾಡೋಣ. ಎಲೇ ಗಂಗೀ, ಆಗದಿ ತೀವ್ರದಿಂದ ಬಾಗಲಾ ತಗಿವಂಥವಳಾಗು

ಎನ ಮಾಡತಿದ್ದಾಳಪ್ಪಾ ಗಂಗಿ ಒಳಗ
ಕದ ತಗಿವಾಳೊ ಎನಗ
ಬಂದ ನಿಂತ ಬಾಳ್ಹೊತ್ತಾತೊ ಬಾಗಿಲ ಹೊರಗ ||

ಮಾಳಿಗಿ ಹತ್ತಿ ನೋಡಲೇನೊ ಕಿಡಿಕ್ಯಾಗ
ಸಂಶೆ ಬಂದೀತೋ ಎನಗ
ಸಂಗ್ಯಾನ ಸುದ್ದಿ ಮಾತಾಡತಾರೊ ಊರವೊಳಗ ||

ಕಾಕೋತ ಕುಂಡ್ರತೇನೊ ಬಾಗಿಲದಾಗ
ಸಂಗ್ಯಾ ಬರಲ್ಯೊ ಹೊರಗ
ಕಡದ ಚೂರ ಮಾಡುವೆ ಜನದಾಗ ||

ಮೂರೂ ಮಂದಿ ಅಣ್ಣ ತಮ್ಮರಿದ್ದೂ ಇಲ್ಲದ್ಹಾಂಗ
ಹೇಡಿತನ ಬಂತೋ ನಮಗ
ಸಂಗ್ಯಾನ ಕಡದ ಹೋಗುವೆ ಪಾಶೇಕ ||

ಎಲೋ ಬ್ಯಾಗಾರಿ ಎಚ್ಚರದಿಂದ ಇರುವಂಥವನಾಗು.

ಬ್ಯಾಗಾರಿ : ಈರಪ್ಪಣ್ಣಾ, ಅಗದಿ ಎಚ್ಚರದಿಂದ ಇದ್ದೇನ್ನೋಡು.

ಗಂಗಿ : ಸಂಗ್ಯಾ, ಘಾತವಾಯಿತು, ಭಾರೀ ಘಾತವಾಯ್ತು, ಈರ್ಯಾ ಹೊರಗ ಬಂದ ನಮ್ಮಿಬ್ಬರ ಹೆಸರ ತಗೊಂಡ ಬೋರ್ಯಾಡಕ ಹತ್ತಿದ. ಇನ್ಹೆಂಗ ಮಾಡೋಣು?

ಅಯ್ಯೋ ಸಂಗ್ಯಾ ಮಾಡಲ್ಹೆಂಗಾ
ಮಾಡಲ್ಹೆಂಗಾ
ಈರ್ಯಾ ಬಂದಾನ ಹೊರಗ ||

ಆರ ಮೂರ ಬಾಗಿಲದೊಳಗ
ಈರ್ಯಾ ಬೋರ್ಯಾಡತಾನ ||

ಹೆಸರಗೊಂಡ ಕರೀತಾನ
ಅಂತಾನ ಕಡೀತೇನ ||

ಈರ್ಯಾ ಆದಾನ ವೈರಿ
ಕೈಯಾಗ ಹಿಡದಾನ ಚೂರಿ ||

ಸಂಗ್ಯಾ : ಗಂಗಾ, ಹೆಂಗಾದರು ಮಾಡಿ ನನ್ನ ಜೀವ ಉಳಿಸುವಂಥವಳಾಗು. ಹಿಂದೆ ಹಿತ್ತಲ ವಾಡಿ, ಮುಂದ ಈರ್ಯಾ ನಿಂತಾನು, ಹೆಂಗ ಪಾರಾಗಲಿ?

ಗಂಗಿ : ಸಂಗ್ಯಾ ಗಚ್ಚಿನ ಬಚ್ಚಲಾಗ ಇಲ್ಲಾ ಚಾಪೀ ಸುರಳ್ಯಾಗ ಮುಚ್ಚಿಡತೇನು, ಹೆದರಬ್ಯಾಡ್ರಿ.

ಸಂಗ್ಯಾ :ಗಂಗಾ, ಇಡೀ ಹೊಂಗಲದೋರಾಗ ಬೇಳೆದ ಮಗಾ ನಾನು. ಈಗ  ಚಾಪೀ ಸುರುಳಾಗ ಗಚ್ಚಿನ ಬಚ್ಚಲಾಗ ಹೆಂಗ ಡೊಗ್ಗಲಿ? ಎ ಗಂಗಾ, ಅವನಷ್ಟs ತಾಯೀ ಹಾಲ ಕುಡದ ಭೆಳದಿಲ್ಲಾ: ನಾ ಏನೂ ನಾಯೀ ಹಾಲ ಕುಡದಿಲ್ಲಾ. ಬಾಗಲಾ ತಗದಬಿಡು. ಆದದ್ದಾಗಲಿ ನಾ ಹೋಗುವಂಥನಾಗುತ್ತೇನೆ.

ಗಂಗಿ : ಸಂಗ್ಯಾ, ನಾ ಬಾಗಲಾ ತಗದ ಹುರುಪಲೆ ದೀಪಾ ಕಳೀತೇನು. ನೀವಾದರೂಕತ್ತಲಾಗ ಜಪ್ಪಿಸಿ ಕುಂತ ಪಾರಾಗುವಂಥವರಾಗರಿ.

ಈರ್ಯಾ : ಎಲೋ ಬ್ಯಾಗರಿ, ಬಾಗಲ ಸಪ್ಪಳಾಗಾಕಹತ್ತೇತಿ, ಹುಷಾರದಿಂದ ಇರುವಂಥವನಾಗು.

ಬ್ಯಾಗರಿ : ಈರಪ್ಪಣ್ಣಾ, ನಾ ಅಗದಿ ಹುಷಾರದಿಂದ ಇದ್ದೇನ್ನೋಡು.

(ಇವರಿಬ್ಬರೂ ಹೊಂಚಿಕೊಂಡಿರುವಾಗ ಸಂಗ್ಯಾ ಗಂಗಿಯ ಹಿಂದಿನಿಂದ ಮುಂದೆ ಮುಂದೆ ಬರುವನು. ಗಂಗಿ ಬಾಗಿಲು ತೆಗೆದಂತೆ ಆಭಿನಯಿಸಿ ದೀಪ ಊದಿದಂತೆ ಮಾಡುವಳು, ತತ್ ಕ್ಷಣ ಸಂಗ್ಯಾ ಪ್ರೇಕ್ಷಕರಲ್ಲಿ ಜಿಗಿದು ಪಾರಾಗುವನು. ಹೋಗುವ ಅವಸರದಲ್ಲಿ ಅವನ ರುಂಬಾಲು ರಂಗದ ಮೇಲೇಯೇ ಬೀಳುವದು. ಈರ್ಯಾ, ಬ್ಯಾಗಾರಿ ಇಬ್ಬರೂ ಗುರಿ ತಪ್ಪಿ, ಪರಸ್ಪರ ತಬ್ಬಿಕೊಳ್ಳುವರು)

ಬ್ಯಾಗಾರಿ : ಒಂದೀಟ್ರಾಗ ತಪ್ಪಿತೋ ಈರಪ್ಪಣ್ಣಾ!

ಇರ್ಯಾ : ಏ ಗಂಗಿ, ಈ ಜರತಾರಿ ರುಂಬಾಲ ಯಾವ ಚೋದೀ ಮಗಂದಾ? ಅವನ ತಾಯೀ ಹೊಟ್ಟಿ ತಣ್ಣಗಿತ್ತು, ತಪ್ಪಿಕೊಂಡಾ.

ಗಂಗಿ : ಗುಣವಂತಾ, ಯಾವುದಾದರು ದನಾ ಕಾಯೋ ಹುಡುಗ ಮರತ ಹೋಗಿರಬೇಕು.

ಈರ್ಯಾ : ಏ ಗಂಗೀ, ಕಾಣಾ ಕಾಣಾ ಓಡಿ ಹೋದಾ. ಮತ್ತ ನನ್ನ ಮುಂದ ಪಂಟ ಹೋಡೀಬ್ಯಾಡ. ಇಂಥಾ ರುಂಬಾಲ ಇಡೀ ಊರಾಗ ನದೊಂದೈತಿ, ಮೇಲ್ಮನಿ ಸಂಗ್ಯಾಂದ ಒಂದ ಐತಿ, ಸುಮ್ಮನ ಅದೇನ ನಿನ್ನ ವ್ಯವಹಾರ ಐತಿ, ಬೇಗನೇ ಬೊಗಳುವಂಥವಳಾಗು.

ಗಂಗಿ : ಗುಣವಂತಾ, ಯಾರಾದರೂ ಹುಲ್ಲ ಹೋರಿಯವರು ಮರತ ಹೋಗಿರಬೇಕು.

ಈರ್ಯಾ : ಕಾಣಾ ಕಾಣಾ ನನ್ನ ಮುಂದ ಸುಳ್ಳ ಹೇಳತೀಯೇನ? ಬೇಕಾದ್ದ ಬ್ಯಾಡಾದ್ದ ತಿನಿಸಿದ್ನಿ. ಪಂಜರದಾಗಿನ ಗಿಣೀ ಹಾಂಗ ಸಾಕಿದ್ನಿ. ನನಗs ಮೋಸಾ ಮಾಡೀದಿ  ಅಂದಮ್ಯಾಲ ನನ್ನ ಮಾರಿ ನಿನಗ ಬ್ಯಾಡ, ನಿನ್ನ ಮಾರಿ ನನಗ ಬ್ಯಾಡ. ಎಲೋ ಬ್ಯಾಗಾರಿ, ಇರಪಕ್ಷಿ ಬಸವಂತನ್ನಾದರು ಕರಕೊಂಬರುವಂಥವನಾಗು. (ಬ್ಯಾಗಾರಿ ಹೋಗುವನು.)

ಗಂಗಿ : ಗುಣವಂತಾ, ಇಂಥಾ ಅಪವಾದ ನನ್ನಂಥಾ ಪತಿವ್ರತಾ ಹೆಂಗಸಿನ ಕೊರಳಾಗ ಕಟ್ಟಿ ಮೋಜಾ ನೋಡಬ್ಯಾಡ. ನೀ ಸ್ವಥಾ ಕಣ್ಣಿನಿಂದ ಅನ್ನೋ ಮಾತ ಅನ್ನುವಂಥವನಾಗು.

ಈರ್ಯಾ : ಬಿಡ ಬಿಡ ಬಡಿವಾರ; ಬಲ್ಲಿನಿ ನಿನ್ನ ಬಡ್ಡಿ ಬೇರಾ. ಮನ್ಯಾಗ ಹಿರೇಲ್ಲಂತ ಮಾಡೀದಿ ಕಾರಭಾರ, ಛೀ ರಂಡೆ ಕಳದೆ ನನ್ನ ಮಾನ!
(ಇರಪಕ್ಷಿ ಬಸವಂತ ಬ್ಯಾಗರಿ ಬರುವರು.)
ಏ ತಮ್ಮಗೋಳ್ರಾ,

ಇರಪಕ್ಷಿ ಬಸವಂತಾ ಬರ್ರೊ ಬೇಗ
ಕುಂದ ಬಂದೀತೋ ನಮಗ
ಸಂಗ್ಯಾನ ಸಂಗ ಮಾಡ್ಯಾಳೊ ಗಂಗಿ ಒಳಗ ||

ಯಾಳೇ ಹೊತ್ತಿಗಿ ಆದೀರಂತ ಕುಸ್ತಿ ಮೇಸಿ
ಬೆಳಸೀನೋ ಪುರಮಾಸಿ
ಕುಸ್ತಿ ಬಿಟ್ಟ ಹೋಗುದ ನಿವಳ ದೇಶದೇಶಿ ||

ಮೂರೂ ಮಂದಿ ಅಣ್ಣ ತಮ್ಮರಿದ್ದೂ ಇಲ್ಲದಾಂಗ
ಸೀರೀ ಬಳಿ ಉಟ್ಹಾಂಗ
ಜನsದಾಗ ಮಾರೀ ಎತ್ತಿ ತಿರುಗೋದಿನ್ಹೆಂಗಾ ||

ಇರಪಕ್ಷಿ; ಬಸವಂತ : ಎಲೋ ಎಣ್ಣಾ, ಈ ಮಾತ ಖರೆ ಇರುವದೇನು?

ಈರ್ಯಾ : ತಮ್ಮಗೊಳ್ರಾ ಕಣ್ಣಿಂದ ನೋಡಿ ಈ ಮಾತ ಹೇಳಿದ್ದೇನ್ನೋಡು.

ಇರಪಕ್ಷಿ : ಎಲೋ ಎಣ್ಣಾ, ಈ ಮಾತ ಖರೆ ಇದ್ದರ ಈಗಿಂದೀಗ ಗಂಗಾನ ಕಡದ ಚೂರ ಮಾಡೋಣ!

ಬಸವಂತ : ಎಲೋ ಎಣ್ಣಾ, ಹೆಂಗಸಿನ ಕಡಿಯೋದಾ, ಅಡಕಲ ಗಡಿಗಿ ಒಡೆಯೋದಾ ಸಮ ಐತಿ. ಈ ಗಂಗಾನ ವಸ್ತಾವಡಿವಿ  ಕಳಚಿಕೊಂಡ ತವರ ಮನೀಗಿ ಕಳಸಿ, ಆ ಮೇಲ್ಮನಿ ಸಂಗ್ಯಾನ ಕಡದ ಬಿಡೋಣಂತೀನ್ನೋಡು.

ಗಂಗಿ :ಇರಪಕ್ಷಿ ಬುದ್ಯುಳ್ಳ ಮೈದುನಾ, ಬಸವಂತಾ ಬುದ್ಧಿವಂತಾ, ಸೇರಲಾರದ ಗಂಡ ಹಾದರದ ಅಪವಾದ ಹೊರಿಸಿದಾ. ಪಾಪ ಪುಣ್ಯ ಎರಡೂ ನೀವs  ತೂಕ ಮಾಡರಿ.

ಈರ್ಯಾ : ಮತ್ತ ಬಣ್ಣದ ಮಾತಾಡತಾಳಲ್ಲೊ. ತಮ್ಮಗೊಳ್ರಾ ಕೈ ಬಿಡರ್ಯ್ಯೋ, ಈ ರಂಡಿ ಚರ್ಮಾ ಸುಲೀತೇನು ― ಕಾಲ ಮೇಲಮಾಡಿ ಗಿಡಕ್ಕ ತೂಗ ಹಾಕತೇನು.

ಇರಪಕ್ಷಿ : ಎಲೊ ಎಣ್ಣಾ, ಜರಾ ಹಿಂದ ಸರಿ. ಇಂಥಾ ಹೇಸಿ ಹೆಣ್ಣ ಕೊಲ್ಲೋದ ಕಲ್ಯಾಣಲ್ಲ. ತಮ್ಮಾ ಬಸವಂತಾ ಬಾ ―
(ಇಬ್ಬರೂ ನರ್ತಿಸುತ್ತ ಗಂಗಿಯ ಆಭರಣ ಕಸಿದಂತೆ ಅಭಿನಯಿಸುವರು.)

ಗಂಗಿ : ಪಾಪ ಪುಣ್ಯ ಅಂಬೋದ ಇರಲೇಳೋ ನಿನ್ನ ಸುತ್ತಾ! ನನ್ನಂಥ ಹೆಣ್ಣ ಮರಗಿಸಿದ ಪಾಪ ಕಟ್ಟಿಕೊಳ್ಳೋ ಪದರಾಗ! ನಿನಗ ಯೋಳ್ಯೋಳ ಜನ್ಮಕ್ಕೆ  ನನ್ನಂಥಾ ಹೆಣ್ಣಿನ ಮಾರಿ ಕಾಣಧಾಂಗ ಆಗಲಿ! ನಿನ್ನ ವಂಶ ನಿರ್ವಂಶ ಆಗಲಿ!

ಈರ್ಯಾ : ಎಂಥಾ ಮಾತ ಬೊಗಳಿದೆಯೇ ರಂಡೇ, ಎಲೋ ಬ್ಯಾಗಾರಿ, ಈಕೀನ ಒದ್ದ ಹೊರಗ್ಹಾಕು. ನೀರಿದ್ದಲ್ಲಿ ಕುಡುದು ಹುಲ್ಲಿದ್ದಲ್ಲಿ ಮೇದುಕೊಂಡ ಅಡ್ಡಾಡಲಿ.
(ಗಂಗಿ, ಬ್ಯಾಗಾರಿ ಹೋಗುವರು.)
ಎಲೋ ತಮ್ಮಗೋಳ್ರಾ, ಈಗಿಂದೀಗ ನಾವೆಲ್ಲಾ ಹೋಗಿ ಆ ಮೇಲ್ಮನಿ ಸಂಗ್ಯಾನ ಕಡದ ಬರೋಣು; ನಡಿವಂಥವರಾಗರಿ.

ಇರಪಕ್ಷಿ; ಬಸವಂತ : ಎಲೋ ಎಣ್ಣಾ, ತೀವ್ರದಿಂದ ನಡಿವಂಥವನಾಗು

ಮೂವರೂ : ಹುಡುಕಲಿನೆಲ್ಲಿ, ನೋಡಲಿನೆಲ್ಲಿ
ಮೇಲ್ಮನಿ ಸಂಗ್ಯಾನ
ಹಾದರದವನ ಚೋದೀಮಗನ
ಹೊಲ್ಯಾಗ ಹುಟ್ಟಿದವನ||

(ಕಾಡು ನೃತ್ಯ ಕುಣಿಯುತ್ತ ಮೂವರೂ ರಂಗದ ತುಂಬ ಹುಡುಕುವರು.)

ಈರ್ಯಾ : ಎಲೋ ತಮ್ಮಗೊಳ್ರಾ, ಹಿಂಗ ಹುಡುಕಿದರ ಆ ಸಂಗ್ಯಾ ಸಿಗಾಣಿಲ್ಲಾ, ಅವನ ಗೆಳೆಯಾ ಬಾಳ್ಯಾನ ಮನೀಗಿ ಹೋಗಿ ಸಂಗ್ಯಾನ ಹಿಡಿದ ಕೊಡಬೇಕಂತ ಹೇಳ್ರಿ. ರೊಕ್ಕ ರೂಪಾಯಿ ಆಸೇ ತೋರಸರಿ. ಬೇಕಾದರ ಕಗದ ಪತ್ರ ಬರದ ಕೊಡರಿ, ಲಗು ಹೊರಡುವಂಥವರಾಗಿರಿ.

ಇರಪಕ್ಷಿ; ಬಸವಂತ : ಎಲೋ ಎಣ್ಣಾ, ನಾವಾದರು ಈಗಿಂದೀಗ ಹೋಗತೇವ ನೋಡು.