(ಸಂಗ್ಯಾ, ಬಾಳ್ಯಾ ರಂಗದ ಒಂದೊಂದು ಮಗ್ಗುಲಿನಿಂದ ಹುಡುಕುತ್ತ ಬರುವರು. ಪರಸ್ಪರ ನೋಡಿ ಓಡಿಹೋಗಿ ತಬ್ಬಿಕೊಳ್ಳುವುರು. ಸಂಗ್ಯಾ ಉತ್ಸಾಹಿತನಾಗುತ್ತಾನೆ. ಬಾಳ್ಯಾ ಸಪ್ಪಗಿದ್ದಾನೆ)

ಸಂಗ್ಯಾ : ಗೆಳಿಯಾ ಬಾಳಣ್ಣಾ, ರಾಮೇರಾಮಪಾ ರಾಮೇರಾಮ್.

ಬಾಳ್ಯಾ : ಗೆಳಿಯಾ ಸಂಗಣ್ಣಾ, ರಾಮೇರಾಮಪಾ ರಾಮೇರಾಮ್.

ಸಂಗ್ಯಾ : ಗೆಳಿಯಾ ಬಾಳಣ್ಣಾ, ಮತ್ತಾದರು ಹೇಳತೇನ ಕೇಳು.

ಬಾಳ್ಯಾ : ಗೆಳಿಯಾ ಸಂಗಣ್ಣಾ, ಅದೇನು ಚಂದವಾಗಿ ಹೇಳುವಂಥವನಾಗು.

ಸಂಗ್ಯಾ : ನಿನ್ನ| ಮಾರಿ ನೋಡಿ ಆತೊ ಎಂಟ ದಿನಾ
ಹಾ ಮೈತ್ರಾ| ಬ್ಯಾಸರಾದಾವೊ ಗೆಳಿತಾನ ||||
ಕೂಳ| ನೀರವು ಸವಿಯ ಹತ್ತಲಿಲ್ಲೊ
ನಿನ್ನ| ಮಾರಿ ಮುಖಾ ಯಾಕ ಬಾಡ್ಯಾವೊ||
ಏನ| ಕಾರಣ ಹೇಳೊ ಎನ್ನ ಮುಂದ
ಹಾ ಮೈತ್ರಾ| ಬ್ಯಾಸರಾದಾವೊ ಗೆಳಿತಾನ||

ಎಲೋ ಗೆಳೆಯಾ ಬಾಳಣ್ಣಾ, ನಿನ್ನ ಮಾರೀ ನೋಡಿ ಏಳೆಂಟ ದಿನಾ ಆತು. ನಿನ್ನ ಭೇಟಿ ನನಗಿಲ್ಲಾ, ನನ್ನ ಭೇಟಿ ನಿನಗಿಲ್ಲಾ. ನೀನಾದರು ಇಷ್ಟ ದಿವಸ ಎಲ್ಲಿಗಿ ಹೋಗಿದ್ದಿ? ಹೇಳಬೇಕಾದೀತ ನೋಡು.

ಬಾಳ್ಯಾ : ಗೆಳೆಯಾ ಸಂಗಣ್ಣಾ, ನಾನಾದರು ಹ್ವಾರೇಕ ಹೋಗೀನ್ನೋಡು.

ಸಂಗ್ಯಾ : ಎಲೋ ಗೆಳೆಯಾ, ನಿನ್ನ ಮುಖ ಯಾಕ ಬಾಡೆತಿ?

ಬಾಳ್ಯಾ : ಗೆಳೆಯಾ ಸಂಗಣ್ಣಾ,ಬ್ಯಾಸಿಗಿ ಬಿಸಿಲಾಗ ಹತ್ತೀಕಟಿಗಿ ಜೋಡಿ ಗುದ್ಯಾಡಿ ನನ್ನ ಮಾರಿ ಬಾಡೇತಿ ನೋಡು.

ಸಂಗ್ಯಾ : ಏನೋ ಗೇಳೆಯಾ, ಇದೂ ಅಲ್ಲದ ನಿನ್ನ ಮೈಮ್ಯಾಗಿನ ಡ್ರೆಸ್ ಯಾಕ ಚಿಂದ್ಯಾಗ್ಯಾವು?

ಬಾಳ್ಯಾ : ಗೆಳೆಯಾ ಸಂಗಣ್ಣಾ, ನಿನ್ನ ಮುಂದ ಯಾ ಮಾತಂತ ಏನ ಹೇಳಲಿ? ಮನೀ ತುಂಬ ಮಕ್ಕಳು ಕೈಗೊಂದ ಕಾಲಿಗೊಂದ ತಡಕ್ಯಾಡತಾವು. ಮೈ ಮುಚ್ಚಾಕ ಅರಿವಿಲ್ಲ. ಬೀಸಾಕ ಜ್ವಾಳಿಲ್ಲ, ತಿನ್ನಾಕ ಕೂಳಿಲ್ಲ. ಸಾವ್ಕಾರ ಸಾಲಾ, ಶಂಬೋರಿ  ನೂರಾ, ಮನೀಗಿ ಬಂದ ಜಗ್ಯಾಡತಾರ. ಬಡವಪ್ಪಾ ಗೆಳೆಯಾ ನಾನು, ಇನ್ಹೆಂಗ ಇದ್ದೇನು?

ಸಂಗ್ಯಾ : ಗೆಳೆಯಾ ಬಾಳಣ್ಣಾ ನೀ ಹೀಂಗಿದ್ದರ ನನ್ನ ಶ್ರೀಮಂತಿಕೆ ಇದ್ದರೆಷ್ಟು, ಬಿಟ್ಟರೆಷ್ಟು? ನಿನ್ನ ನೋಡಿದರ ಊರಾಗಿನ ನಾಕಮಂದಿ ನನಗೇನಂದದಾರು?

ಬಾಳ್ಯಾ : ಸಂಗಣ್ಣಾ ಏನಂದಾರು?

ಸಂಗ್ಯಾ : ಊರಿಗೂರs ಕುಂತ ಉಂಡರೂ ಕರಗದಷ್ಟು ಮನ್ಯಾಗ ಐಸಿರಿ ತುಂಬೇತಿ. ತನ್ನ ಗೆಣಿಕಾರ ಬಾಳಣ್ಣಗ ಕೊಡಾಕ ಒಂದ ಪೈಸಾ ಹುಟ್ಟಲಿಲ್ಲೇನಂತ ಅನ್ನಾಕಿಲ್ಲಾ?

ಬಾಳ್ಯಾ : ಗೆಳೆಯಾ ಸಂಗಣ್ಣ, ನಾ ಅಂದರ ಒಂದ ಪೈಸಾ ಭಿಕ್ಷಾ ಬೇಡೋ ಭಿಕಾರೆಂತ ತಿಳಿದೇನೊ?

ಸಂಗ್ಯಾ : ಗೆಳೆಯಾ ಬಾಳಣ್ಣ. ನನ್ನ ಶ್ರೀಮಂತಿಕೆ ಅಂದರ ನಿನ್ನ ಶ್ರೀಮಂತಿಕೆ ಅಲ್ಲೇನೊ? ನಿನಗೆ ಬೇಕಾದ್ದ ಬ್ಯಾಡಾದ್ದ ಕೊಂಡಿಸಿ ಕೊಡತೇನು. ಕರವತಕಟಿ ದೋತರಾ, ಜರದ ರುಂಬಾಲಾ, ಕಡೆ ತೋಡೆ, ಉಂಗುರ ಉಡದಾರ ― ಇದೂ ಅಲ್ಲದ ಕಂಟಿಗೋಪಾ, ಕೊರಳಲ್ಲಿ ಚಂದ್ರಹಾರ ― ಇವನ್ನೆಲ್ಲಾ ಕೊಡಸ್ತೇನು. ನನ್ನ ಜೋಡಿ ನಡಿವಂಥವನಾಗು.

ಬಾಳ್ಯಾ : ಗೆಳಿಯಾ ಸಂಗಣ್ಣಾ, ಇಂದ ಕೊಟ್ಟೀ, ನಾಳಿ ಹಂಗೀಸೀ, ಕಡ ತಂದ ಸಡಗರ ಎಷ್ಟ ದಿನದ್ದಾ? ನನಗೇನ ಬ್ಯಾಡ ಅಂತಿದ್ದೇನ್ನೋಡು.

ಸಂಗ್ಯಾ : ಗೆಳೆಯಾ ಬಾಳಣ್ಣ. ‘ಗೆಳಿಯಾ ಸಂಗಣ್ಣ, ಗೆಳಿಯಾ ಸಂಗಣ್ಣ’ ಅಂತ ಬಾಯ್ಲೆ ಹೇಳತಿ. ಗೆಳೆಯಾ ಅಂತ ಕೊಟ್ಟ್ರ ಯಾಕ ಒಲ್ಲೆಂತಿ? ಸಂಗ್ಯಾ ಅಂದರ ಸುತ್ತ ಹದಿನಾಕ ಹಳ್ಳಿಗಿ ಪರಸಿದ್ಧ. ನನ್ಹಾಂಗ ನೀ ಇರಬೇಕು. ನಿನ್ಹಾಂಗ ನಾ ಇರಬೇಕು. ಅದನೇನ ಮನಸಿಗಿ ಹಚ್ಚಿಕೊಬ್ಯಾಡ. ಸುಮ್ಮನ ನಡಿವಂಥವನಾಗು.

ಬಾಳ್ಯಾ : ಏನೊ ಗೆಳೆಯಾ, ಮನ್ಯಾಗ ಹೇಂತಿ ಮಕ್ಕಳಿಗಿ ಹೊಟ್ಟಿಗಿಲ್ಲಾ  ಬಟ್ಟಿಗಿಲ್ಲಾ. ನೆತ್ತಿಗಿ ಎಣ್ಣಿಲ್ಲಾ. ನಿನ್ನ ಜೋಡಿ ಬಂದ ಹೌಸೀಲೆ ತಿರಗಂದರ ಹೆಂಗ ತಿರಗಾಕಾದೀತು?

ಸಂಗ್ಯಾ : ಮನಿಮಾರ ಚಿಂತಿ ನಿನಗ್ಯಾಕೊ ಗೆಳೆಯಾ? ಗಾಡಿ ತುಂಬ ಕಾಳ ಹಾಕಸ್ತೇನು ― ತಾನಗಟ್ಟಲೆ ಅರಿವಿ ಹಾಕಸ್ತೇನು. ಶಂಬೋರಿ ನೂರ ಸಾವ್ಕಾರ ಸಾಲಾ ಆದರೂ ತೀರಸ್ತೇನು. ಸುಮ್ಮನ ನಡಿವಂಥನಾಗು.

ಬಾಳ್ಯಾ : ಗೆಳಿಯಾ ಸಂಗಣ್ಣ ನಿನ್ನ ನೋಡಿದರೆ ― ಹುಡುಗಾ ಕೈಯಾಗ ಕಡೆ ತೋಡೆ ಇಟ್ಟೇದಿ. ಜರದ ರುಂಬಾಲ ಸುತ್ತೀದಿ, ಊರ ಧನಿ ಹಾಂಗ ಕಾಣತಿ. ನನ್ನ ಮೈಮ್ಯಾಲ ಒಂದ ಗಟ್ಟಿ ಅರಿವಿಲ್ಲ , ಮುಖದಾಗ ಒಂದ ಹೌಸಿ ಇಲ್ಲ. ಆದ್ದರಿಂದ ನಾ ಬರೋದಿಲ್ಲಂತಿದ್ದೇನ್ನೋಡು.

ಸಂಗ್ಯಾ : ಬಾಳಣ್ಣಾ, ಅದ್ಯಾವ ದೊಡ್ಡಮಾತೊ? ನನ್ನ ದಿರಿಸು ನೀ ಹಾಕ್ಕೊ, ನಿನ್ನ ದಿರಿಸು ನನಗ ಕೊಡು, ನಡಿವಂಥನಾಗು.

ಬಾಳ್ಯಾ : ಗೆಳಿಯಾ ಸಂಗಣ್ಣ, ಡ್ರೆಸ್ ಅದಲಿ ಬದಲಿ ಮಾಡಿದರೇನ ಭಾಗ್ಯ ಬಂಧಾಂಗಾಯ್ತು? ನೀ ಬಡವಾಗಲಿಲ್ಲ, ನಾ ಸಾವ್ಕಾರ ಆಗಲಿಲ್ಲ. ನಿನ್ನ ಡ್ರೆಸ್ ನಿನ್ನ ಮೈಮ್ಯಾಲs  ಇರಲಿ. ನನ್ನ ಡೆಸ್ ನನ್ನ ಮೈಮ್ಯಾಲs ಇರಲಿ. ನಾನಾದರು ಬರತೇನು ಹೋಗೋನ್ನಡೀವಂಥನಾಗು.

ಸಂಗ್ಯಾ : ನಡಿ ಬಾಳ್ಯಾ ಹೋಗೋಣು ಪ್ಯಾಟ್ಯಾಗ
ಮಾರವಾಡಿ ಅಂಗಡ್ಯಾಗ
ಹೊಸಾ ತರದ ಅರಿವಿ ಬಂದಾವೊ ಈಗ||
ಡೌಲಾಗಬೇಕೊ ಗೆಳಿಯಾ ನನ್ಹಾಂಗ
ಸಾವ್ಕಾರ ಮಗನ್ಹಾಂಗಾ
ಸಂಗ್ಯಾ ಬಾಳ್ಯಾ ಅನ್ನಬೇಕೊ ಊರಾಗ||
ಶೈನಶೋಕ ಕೊಂಡಕೊಡುವೆ ಬಾಳ್ಯಾ ನಿನಗ
ಇರಲೆಪ್ಪಾ ಮೈಯ ಮ್ಯಾಗ
ಸಾಯೋತನಕಾ ಪ್ರೀತಿಯಿರಲಿ ನನ್ನ ಮ್ಯಾಗ||
ಯಾತಕ್ಕೇನೂ ಕಡಿಮಿಲ್ಲೊ ಬಾಳ್ಯಾ ನನಗ
ಹಾಲ ಹೈನದ ಒಳಗ
ಶಿವಾ ಕೊಟ್ಟ ಮರತಾನಪ್ಪ ಭೂಮಿಮ್ಯಾಗ||
ಬೆಳ್ಳಿ ಬಂಗಾರ ಮಸ್ತ ಐತ್ಯೊ ಮನಿಯಾಗ
ರೊಕ್ಕ ರೂಪಾಯ್ದೊಳಗ
ತಾಯಿ ತಂದಿ ಭಾಳ ಪ್ರೀತ್ಯೊ ನನ್ನ ಮ್ಯಾಗ||
(ನರ್ತಿಸುತ್ತ ಹೋಗುವರು)